ಶನಿವಾರ, ಜೂನ್ 6, 2020
27 °C
ನ್ಯೂಯಾರ್ಕ್‌ ಮೃಗಾಲಯದ ‘ನಾಡಿಯಾ’ ಹುಲಿ ಕೋವಿಡ್‌–19 ಪೀಡಿತ; ಜಗತ್ತಿನಾದ್ಯಂತ ಆತಂಕದ ಅಲೆ

Explainer | ಪ್ರಾಣಿಗಳ ಮೇಲೂ ಕೊರೊನಾ ದಾಳಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಮೆರಿಕದ ನ್ಯೂಯಾರ್ಕ್ ನಗರದ ಬ್ರಾಂಕ್ಸ್ ಮೃಗಾಲಯದಲ್ಲಿರುವ 4 ವರ್ಷದ ಮಲಯನ್ ಹುಲಿ ‘ನಾಡಿಯಾ’ಗೆ ಕೋವಿಡ್–19 ಕಾಯಿಲೆ ಇರುವುದು ದೃಢಪಟ್ಟಿದ್ದು, ಈ ಸುದ್ದಿ ಜಗತ್ತಿನಾದ್ಯಂತ ತಲ್ಲಣ ಉಂಟುಮಾಡಿದೆ. ಏಕೆಂದರೆ, ಮನುಷ್ಯನ ನಿಗಾವಣೆಯಲ್ಲಿರುವ ಕಾಡುಪ್ರಾಣಿಗೆ ಕೊರೊನಾವೈರಸ್‌ ತಗುಲಿದ ಮೊದಲ ಪ್ರಕರಣ ಇದಾಗಿದೆ. ‘ನಾಡಿಯಾ’ ಸನಿಹದಲ್ಲೇ ಇದ್ದ ಎರಡು ಸೈಬೀರಿಯಾ ಹುಲಿ ಹಾಗೂ ಆಫ್ರಿಕಾದ ಮೂರು ಸಿಂಹಗಳಲ್ಲಿಯೂ ಕೊರೊನಾವೈರಸ್‌ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ.

ಮನುಷ್ಯನಿಂದ–ಪ್ರಾಣಿಗೆ ಈ ಸೋಂಕು ಹರಡಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ನ್ಯೂಯಾರ್ಕ್ ಮೃಗಾಲಯದಲ್ಲಿ ಹುಲಿಗೆ ಸೋಂಕು ತಗುಲಿರುವ ರೀತಿ ಇನ್ನೂ ಹೆಚ್ಚಿನ ಆತಂಕವನ್ನು ಉಂಟುಮಾಡಿದೆ.

‘ಮೃಗಾಲಯಕ್ಕೆ ಮಾರ್ಚ್‌ 16ರಿಂದಿಲೇ ಸಾರ್ವಜನಿಕರ ಭೇಟಿಯನ್ನು ನಿರ್ಬಂಧಿಸಲಾಗಿದೆ. ಪ್ರಾಣಿಗಳನ್ನು ಆರೈಕೆ ಮಾಡುವ ಸಿಬ್ಬಂದಿಗೆ ಮಾತ್ರ ನಂತರದ ಅವಧಿಯಲ್ಲಿ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಕೊರೊನಾ ಸೋಂಕಿಗೆ ತುತ್ತಾದರೂ ಅದರ ಲಕ್ಷಣಗಳು ಗೋಚರವಾಗದ ಸಿಬ್ಬಂದಿಯಿಂದ ಹುಲಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ. ಬೇರೆ ಯಾವ ಸಾಧ್ಯತೆಯೂ ಕಾಣುತ್ತಿಲ್ಲ’ ಎನ್ನುತ್ತಾರೆ ಹುಲಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು.

‘ಸಾರ್ಸ್‌–ಕೋವ್–2 (ಕೊರೊನಾ) ವೈರಸ್‌ನಿಂದ ‘ನಾಡಿಯಾ’ ಹುಲಿ ಉಸಿರಾಟದ ತೊಂದರೆ ಅನುಭವಿಸುತ್ತಿದೆ. ಉಳಿದ ಹುಲಿ ಮತ್ತು ಸಿಂಹಗಳಲ್ಲಿ ಒಣಕೆಮ್ಮು ಕಾಣಿಸಿಕೊಂಡಿದೆ. ಕೆಲವು ರೀತಿಯ ಕೊರೊನಾವೈರಸ್‌ಗಳು ಬೆಕ್ಕಿನ ಪ್ರಭೇದದ ಪ್ರಾಣಿಗಳಲ್ಲಿ ಹರಡುತ್ತವೆ. ಆದರೆ, ಹುಲಿ, ಸಿಂಹವನ್ನು ಈ ವೈರಸ್‌ ಕಾಡಿದರೂ ಇದೇ ಮೃಗಾಲಯದ ಚಿರತೆಗಳಲ್ಲಿ ಸೋಂಕಿನ ಯಾವುದೇ ಲಕ್ಷಣಗಳು ಕಂಡಿಲ್ಲ. ಕೋವಿಡ್–19ಗೆ ಕಾರಣವಾಗಿರುವ ಈ ಕೊರೊನಾವೈರಸ್, ಕಾಡುಪ್ರಾಣಿಗಳಲ್ಲಿ ಹೇಗೆ ವರ್ತಿಸುತ್ತದೆ? ಕಾಡುಪ್ರಾಣಿಗಳಿಂದ ಮತ್ತೆ ಮನುಷ್ಯನಿಗೂ ಹರಡುತ್ತದೆಯೇ ಎಂಬ ಪ್ರಶ್ನೆಗಳಿಗೆ ಇನ್ನೂ ಸಾಕ್ಷ್ಯಾಧಾರಿತ ಉತ್ತರ ಸಿಕ್ಕಿಲ್ಲ’ ಎಂದು  ಅವರು ಹೇಳುತ್ತಾರೆ.

ವೈದ್ಯರು ಹೇಳಿರುವಂತೆಯೇ ಮನುಷ್ಯರಿಂದ ಕಾಡುಪ್ರಾಣಿಗಳಿಗೆ ಅಥವಾ ಮನುಷ್ಯರಿಂದ ಸಾಕುಪ್ರಾಣಿಗಳಿಗೆ ಸೋಂಕು ಹರಡುತ್ತಿರುವುದು ನಿಜವಾದರೆ, ಅದಕ್ಕಿಂತ ದೊಡ್ಡ ಅಪಾಯ ಮತ್ತೊಂದಿಲ್ಲ. ಆಗ, ಸೋಂಕಿತರ ಸಂಪರ್ಕದಲ್ಲಿದ್ದ ಸಾಕುಪ್ರಾಣಿಗಳನ್ನೂ ತಪಾಸಣೆಗೆ ಒಳಪಡಿಸುವ ಅನಿವಾರ್ಯ ಎದುರಾಗುತ್ತದೆ. ಸಾಕುಪ್ರಾಣಿ–ಕಾಡುಪ್ರಾಣಿಗಳಲ್ಲಿ ಈ ಸೋಂಕಿನ ಪರಿಣಾಮ ಏನು ಎಂಬುದನ್ನು ಇನ್ನಷ್ಟೇ ಪತ್ತೆಮಾಡಬೇಕಿದೆ. ಮನುಷ್ಯನಿಂದ ಸಾಕುಪ್ರಾಣಿಗೆ, ಸಾಕುಪ್ರಾಣಿಯಿಂದ ಮನುಷ್ಯನಿಗೆ ಸೋಂಕು ಹರಡುವುದು ಆರಂಭವಾದರೆ, ಸೋಂಕಿನ ನಿಯಂತ್ರಣ ಕಷ್ಟ.

‘ಈ ಸೋಂಕು ಸಹಜ ನೆಲೆಯಲ್ಲಿರುವ ಹುಲಿ–ಸಿಂಹಗಳಿಗೆ ದಾಟಿಕೊಂಡರೆ, ನಿಯಂತ್ರಣ ಕಷ್ಟ. ಈ ಪ್ರಭೇದದ ಪ್ರಾಣಿಗಳ ವಿನಾಶಕ್ಕೂ ಅದು ಕಾರಣವಾಗಬಹುದು’ ಎಂದು ಹುಲಿ ಸಿಂಹಗಳ ಜಾಗತಿಕ ಸಂರಕ್ಷಣಾ ಸಂಸ್ಥೆ ‘ಫ್ಯಾಂಥೆರಾ’ ಕಳವಳ ವ್ಯಕ್ತಪಡಿಸಿದೆ.

ರಾಜ್ಯದ ಎಲ್ಲ ಮೃಗಾಲಯಗಳಲ್ಲಿ ಮುನ್ನೆಚ್ಚರಿಕೆ
ನ್ಯೂಯಾರ್ಕ್‌ನಲ್ಲಿ ಹುಲಿಯೊಂದಕ್ಕೆ ಕೋವಿಡ್‌–19 ಇರುವುದು ದೃಢಪಟ್ಟ ಬೆನ್ನಲೇ, ರಾಜ್ಯದ ಪ್ರಮುಖ ಏಳು ಮೃಗಾಲಯಗಳಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಮೃಗಾಲಯ ಪ್ರವೇಶಿಸುವ ಅಧಿಕಾರಿಗಳು, ಸಿಬ್ಬಂದಿಯನ್ನು ಥರ್ಮಲ್‌ ಸ್ಕ್ಯಾನಿಂಗ್‌ಗೆ ಒಳಪಡಿಸಲಾಗುತ್ತಿದೆ. ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್‌ ಮ್ಯಾಟ್‌ ಹಾಕಲಾಗಿದೆ. ಮೃಗಾಲಯದ ಸಿಬ್ಬಂದಿಗೆ ಹ್ಯಾಂಡ್‌ ಸ್ಯಾನಿಟೈಸರ್‌ ಹಾಗೂ ಎನ್‌–95 ಮಾಸ್ಕ್‌ ನೀಡಲಾಗಿದೆ. ಪ್ರಾಣಿಗಳ ಮನೆಗಳ ಸುತ್ತಲೂ ದ್ರಾವಣ ಸಿಂಪಡಿಸಲಾಗುತ್ತಿದೆ.

ಎಲ್ಲಾ ಮೃಗಾಲಯಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಕೇಂದ್ರೀಯ ಮೃಗಾಲಯ ಪ್ರಾಧಿಕಾರ ಕೂಡ ಸೂಚನೆ ನೀಡಿದೆ. ಪ್ರಾಣಿಗಳ ವರ್ತನೆ, ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದರೆ ಅವುಗಳನ್ನು ಪ್ರತ್ಯೇಕವಾಗಿ ಇರಿಸಬೇಕು.ಪ್ರಾಣಿ ಪಾಲಕರ ಮೇಲೆ ನಿಗಾ ಇಡಬೇಕು ಎಂದು ಹೇಳಿದೆ. ಪರ್ಸನಲ್‌ ಪ್ರೊಟೆಕ್ಟಿವ್‌ ಇಕ್ವಿಪ್‌ಮೆಂಟ್‌ (ಪಿಪಿಇ) ಧರಿಸಿಯೇ ಪ್ರಾಣಿಗಳ ಮನೆ ಪ್ರವೇಶಿಸಬೇಕು ಎಂದು ತಾಕೀತು ಮಾಡಿದೆ.

‘ಎರಡು ವಾರಗಳ ಹಿಂದೆ ಹಾಂಗ್‌ಕಾಂಗ್‌ನಲ್ಲಿ ಸಾಕು ಬೆಕ್ಕಿಗೆ ಕೋವಿಡ್‌ ಕಾಣಿಸಿಕೊಂಡಿತ್ತು. ಅಲ್ಲದೇ, ಮೈಸೂರು ಸೇರಿದಂತೆ ಕೆಲವೆಡೆ ಹಕ್ಕಿಜ್ವರ ಪ್ರಕರಣ ಪತ್ತೆ ಆಗಿತ್ತು. ಹೀಗಾಗಿ, ನಾವು 20 ದಿನಗಳ ಮೊದಲೇ ಎಲ್ಲಾ ಮೃಗಾಲಯಗಳಲ್ಲಿ ಹಲವು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ಪ್ರಾಣಿಗಳ ಜೊತೆಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿದೆ’ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಹೇಳುತ್ತಾರೆ.

ಪ್ರಾಣಿ ಪಾಲಕರು, ಪಶು ವೈದ್ಯರು, ಆಹಾರ ಪೂರೈಕೆ ಮಾಡುವವರು ಸೇರಿದಂತೆ ಪ್ರಾಣಿಗಳ ಸಂಪರ್ಕಕ್ಕೆ ಬರುವ ಎಲ್ಲರನ್ನೂ ಪಟ್ಟಿ ಮಾಡಿ ಮುನ್ನೆಚ್ಚರಿಕೆ ಕ್ರಮ ವಹಿಸುವ ಬಗ್ಗೆ ತಿಳಿಹೇಳಲಾಗಿದೆ. ನಂಜನಗೂಡಿನಲ್ಲಿ ಕೋವಿಡ್‌ ಪ್ರಕರಣ ಹೆಚ್ಚಿರುವ ಕಾರಣ ಅಲ್ಲಿಂದ ಬರುವ ಸಿಬ್ಬಂದಿಯನ್ನು ನಿರ್ಬಂಧಿಸಲಾಗಿದೆ. ಜ್ವರ, ಕೆಮ್ಮು, ನೆಗಡಿ ಇದ್ದವರನ್ನು ಒಳಗೆ ಬಿಡುತ್ತಿಲ್ಲ ಎಂದು ವಿವರಿಸುತ್ತಾರೆ.

ವೈದ್ಯರು ಪ್ರತಿ ಪ್ರಾಣಿ ಮೇಲೂ ನಿಗಾ ಇಟ್ಟಿದ್ದಾರೆ. ಸಿ.ಸಿ.ಟಿ.ವಿ ಕ್ಯಾಮೆರಾದ ಮೂಲಕ ಪರಿಶೀಲನೆ ನಡೆಸಲಾಗುತ್ತಿದೆ. ವೈದ್ಯಾಧಿಕಾರಿಗಳಿಂದ ಪ್ರಾಣಿ ಪಾಲಕರಿಗೆ ತರಬೇತಿ ನೀಡಲಾಗಿದೆ.

‘ಮೈಸೂರು ಮೃಗಾಲಯವೊಂದರಲ್ಲೇ 1,450 ಪ್ರಾಣಿಗಳು ಇವೆ. ಪ್ರವಾಸಿಗರಿಗೆ ನಿರ್ಬಂಧ ಹೇರಿರುವುದರಿಂದ ಪ್ರಾಣಿಗಳು ಲವಲವಿಕೆಯಿಂದ ಓಡಾಡಿಕೊಂಡಿವೆ. ಎಲ್ಲವೂ ಆರೋಗ್ಯವಾಗಿವೆ’ ಎಂದು ಹೇಳುತ್ತಾರೆ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ.

ಬೆಕ್ಕಿನ ಜಾತಿಯ ಮೇಲೆ ಹೆಚ್ಚು ನಿಗಾ ಇಡುವಂತೆ ಕೇಂದ್ರೀಯ ಮೃಗಾಲಯ ಪ್ರಾಧಿಕಾರ ಸಲಹೆ ನೀಡಿದೆ. ಕೋವಿಡ್‌–19 ಪರೀಕ್ಷೆಗಾಗಿ ಶಂಕಿತ ಪ್ರಕರಣಗಳ ಮಾದರಿಯನ್ನು ಭೋಪಾಲ್‌, ಹರಿಯಾಣದ ಹಿಸ್ಸಾರ್‌, ಉತ್ತರ ಪ್ರದೇಶದ ಇಜತ್‌ನಗರದಲ್ಲಿರುವ ಸಂಸ್ಥೆಗಳಿಗೆ ಕಳಿಸುವಂತೆ ಹೇಳಿದೆ.

ಜಗತ್ತಿಗೆ ವೈರಾಣು ಹರಡಿದ್ದು ಹೇಗೆ?
‘ಕೋವಿಡ್–19’ಗೆ ಕಾರಣವಾಗುವ ‘ಸಾರ್ಸ್‌–ಕೋವ್‌–2’ ಎಂಬ ಕೊರೊನಾವೈರಸ್‌ (ದುಂಡಾಗಿರುವ ಮತ್ತು ದೇಹದ ಮೇಲೆ ಮುಳ್ಳುಮುಳ್ಳಿನಂತಹ ರಚನೆ ಇರುವ ವೈರಾಣುಗಳನ್ನು ಕೊರೊನಾವೈರಸ್‌ ಎನ್ನಲಾಗುತ್ತದೆ), ಬಾವಲಿಗಳಲ್ಲಿ ಕಂಡುಬರುವ ಕೊರೊನಾವೈರಸ್‌ ಅನ್ನೇ ಹೋಲುತ್ತದೆ. ಚೀನಾದ ವುಹಾನ್‌ನ ಸಾಕುಪ್ರಾಣಿ ಮಾರುಕಟ್ಟೆಯೊಂದರಲ್ಲಿ ಈ ವೈರಾಣು ಮಾನವನಿಗೆ ದಾಟಿಕೊಂಡಿದೆ. ಅಲ್ಲಿಂದ ಮನುಷ್ಯರಿಂದ ಮನುಷ್ಯರಿಗೆ ಹರಡಿದೆ. ಈಗಿನ ಸ್ವರೂಪವನ್ನು ಮನುಷ್ಯನ ದೇಹದಲ್ಲೇ ವಿಕಾಸ ಮಾಡಿಕೊಂಡಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಅಭಯಾರಣ್ಯಗಳಲ್ಲಿ ಸಂಚಾರ ನಿರ್ಬಂಧಕ್ಕೆ ಕೇಂದ್ರದ ಆದೇಶ
‘ನಾಡಿಯಾ’ ಹುಲಿಯು ಕೊರೊನಾ ಸೋಂಕಿಗೆ ಒಳಗಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರವು ದೇಶದಾದ್ಯಂತ ಕಟ್ಟೆಚ್ಚರ ವಹಿಸಲು ಮುಂದಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರಗಳಿಗೆ ಕೆಲವು ನಿರ್ದೇಶನಗಳನ್ನು ನೀಡಿದೆ.

ಮಾನವನಿಂದ ಪ್ರಾಣಿಗಳಿಗೆ ಅಥವಾ ಪ್ರಾಣಿಗಳಿಂದ ಮಾನವನಿಗೆ ಕೊರೊನಾ ಸೋಂಕು ತಗಲುವುದನ್ನು ತಡೆಯಲು, ರಾಷ್ಟ್ರೀಯ ಉದ್ಯಾನ ಹಾಗೂ ಅಭಯಾರಣ್ಯಗಳಲ್ಲಿ ಜನ ಸಂಚಾರವನ್ನು ನಿರ್ಬಂಧಿಸುವಂತೆ ರಾಜ್ಯಗಳಿಗೆ ಸೂಚಿಸಿದೆ.

ಸೋಂಕಿಗೊಳಗಾದ ಪ್ರಾಣಿಗಳಿಗೆ ತುರ್ತು ಚಿಕಿತ್ಸೆ ನೀಡಿ, ಬಳಿಕ ಅವುಗಳನ್ನು ತಮ್ಮ ನೈಸರ್ಗಿಕ ವಾಸಸ್ಥಳಕ್ಕೆ ಕಳುಹಿಸುವ ವ್ಯವಸ್ಥೆ ಮಾಡಬೇಕು. ಕಾಯಿಲೆಯ ಕಣ್ಗಾವಲು, ಮ್ಯಾಪಿಂಗ್‌ ಹಾಗೂ ಮೇಲ್ವಿಚಾರಣಾ ವ್ಯವಸ್ಥೆಯನ್ನು ಬಲಪಡಿಸಬೇಕು. ಈ ಕುರಿತು ಗರಿಷ್ಠ ಎಚ್ಚರ ವಹಿಸಬೇಕು ಎಂದು ಎಲ್ಲಾ ಮೃಗಾಲಯಗಳಿಗೆ ಸೂಚಿಸಿದೆ.

ನಾಯಿ–ಬೆಕ್ಕಿಗೂ ಹರಡಿದ ಸೋಂಕು
ಚೀನಾದಲ್ಲಿ ಸೋಂಕು ತಗುಲಿದ್ದ ವ್ಯಕ್ತಿಗಳಿಂದ ಒಂದು ಪೊಮೇರಿಯನ್, ಮತ್ತೊಂದು ಜರ್ಮನ್ ಷೆಫರ್ಡ್‌ ನಾಯಿಗೆ ಸೋಂಕು ತಗುಲಿದ ಪ್ರಕರಣಗಳು ದೃಢಪಟ್ಟಿವೆ. ಬೆಲ್ಜಿಯಂನಲ್ಲಿ ಮನೆಯ ಬೆಕ್ಕಿಗೂ ಈ ಸೋಂಕು ತಗುಲಿದ ಪ್ರಕರಣ ವರದಿಯಾಗಿದೆ.

ಕೋಳಿ, ಪಾರಿವಾಳ, ಬೆಕ್ಕು, ನಾಯಿ, ಮೇಕೆ, ಕುರಿ, ಹಂದಿ, ದನ, ಕುದುರೆ, ಸಿವೆಟ್‌, ಪ್ಯಾಂಗೋಲಿನ್‌ಗಳು ಈ ವೈರಸ್‌ನ ವಾಹಕಗಳಾಗುವ ಸಾಧ್ಯತೆ ಇದೆ. ಮನುಷ್ಯರಿಂದ ಇವುಗಳಿಗೆ ಈ ವೈರಸ್‌ ಸೇರಿ, ಆ ಪ್ರಾಣಿಗಳು ಟ್ರಾನ್ಸಿಟ್‌ ಪಾಯಿಂಟ್‌ನಂತೆ ಬಳಕೆಯಾಗುವ ಸಂಭವವಿದೆ ಎಂಬುದರತ್ತ ಇದುವರೆಗಿನ ಸಂಶೋಧನೆಗಳು ಬೊಟ್ಟುಮಾಡಿವೆ ಎನ್ನುತ್ತದೆ ನ್ಯಾಷನಲ್‌ ಜಿಯಾಗ್ರಫಿಕ್‌ ವರದಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು