ಶುಕ್ರವಾರ, ಜೂಲೈ 3, 2020
23 °C
ವ್ಯಾಪಾರ ಸಮರ

Explainer | ಆ್ಯಪ್‌ ನಿಷೇಧದ ಮೂಲಕ ಚೀನಾಕ್ಕೆ ಮಾರ್ಮಿಕ ಪೆಟ್ಟು ಕೊಟ್ಟ ಭಾರತ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಲಡಾಖ್‌ ಗಡಿಯಲ್ಲಿ ತುಡುಗು ಮಾಡಿದ ಚೀನಾಕ್ಕೆ ಚುರುಕು ಮುಟ್ಟಿಸಲೆಂಬಂತೆ ಭಾರತ ಸರ್ಕಾರ ಸೋಮವಾರ ರಾತ್ರಿ ಚೀನಾ ಮೂಲದ ಕಂಪನಿಗಳ 59 ಆ್ಯಪ್‌ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಭಾರತ ಸರ್ಕಾರದ ಈ ನಡೆಗೆ ಗಡಿ ತಂಟೆ ಒಂದೇ ಕಾರಣವಲ್ಲ. ತನ್ನನ್ನು ತಾನು ಜಾಗತಿಕ ಸೂಪರ್‌ ಪವರ್ ಎಂದುಕೊಂಡಿರುವ ಮತ್ತು ಅದೇ ಕಾರಣಕ್ಕೆ ವಿಶ್ವದ ಉಳಿದ ದೇಶಗಳೊಂದಿಗೆ ತಂಟೆ ಮಾಡುತ್ತಿರುವ ಚೀನಾಕ್ಕೆ ಭಾರತದ ಈ ನಡೆಯು ಹಲವು ಸಂದೇಶಗಳನ್ನು ಪರೋಕ್ಷವಾಗಿ ರವಾನಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

‘ಯಾವುದೇ ದೇಶದ ಮಿಲಿಟರಿ ಶಕ್ತಿಗೆ ತಲೆಬಾಗದೆ, ನಮ್ಮ ಅಗತ್ಯಕ್ಕೆ ತಕ್ಕ ದೃಢ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಭಾರತಕ್ಕೆ ಇದೆ’ ಎಂಬುದು ಈ ನಡೆಯ ಮೂಲಕ ಭಾರತ ತನ್ನ ಎದುರಾಳಿಗೆ ನೀಡಿರುವ ಸ್ಪಷ್ಟ ಸಂದೇಶ. ಭಾರತದ ಈ ನಡೆಯಿಂದ ದೇಶೀಯ ಆರ್ಥಿಕತೆಯ ಮೇಲೆ ಹೇಳಿಕೊಳ್ಳುವಂಥ ಪರಿಣಾಮವೇನೂ ಆಗುವುದಿಲ್ಲ. ಆದರೆ ಭಾರತದಲ್ಲಿ ವ್ಯಾಪಕವಾಗಿ ಹೂಡಿಕೆ ಮಾಡಿರುವ ಮತ್ತು ಭವಿಷ್ಯದ ಆರ್ಥಿಕ ಬೆಳವಣಿಗೆಯ ಲಾಭ ಬಾಚಿಕೊಳ್ಳುವ ಚೀನಾದ ಲೆಕ್ಕಾಚಾರ ಉಲ್ಟಾಪಲ್ಟಾ ಆಗಿದೆ.

ಇದನ್ನು ಓದಿ: 

ಮಹತ್ವದ ನಿರ್ಧಾರ

ಭಾರತದಲ್ಲಿ ಇಂಟರ್‌ನೆಟ್ ಸೇವೆಗೆ ವಿಧಿಸುವ ಶುಲ್ಕವು‌ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಸಾಕಷ್ಟು ಕಡಿಮೆಯಿದೆ. ಸ್ಮಾರ್ಟ್‌ಫೋನ್‌ಗಳ ಮೂಲಕ ಮೊಬೈಲ್‌ ಬಳಸುವ, ಇಂಟರ್ನೆಟ್‌ ಬ್ರೌಸ್ ಮಾಡುವ ಗ್ರಾಹಕರ ಸಂಖ್ಯೆ 80 ಕೋಟಿ ದಾಟಿದೆ. ಈ ಪೈಕಿ ಅರ್ಧದಷ್ಟು ಬಳಕೆದಾರರು 25 ವರ್ಷಗಳಿಗಿಂತ ಕಡಿಮೆ ವಯಸ್ಸಿನವರು ಮತ್ತು ಸ್ಮಾರ್ಟ್‌ಫೋನ್‌ಗಳಲ್ಲಿ ವಿಡಿಯೊ ಕಂಟೆಂಟ್‌ ನೋಡುವ ಉತ್ಸಾಹ ಉಳ್ಳವರು.

‘ಮಿಲಿಟರಿ ದಂಡನೆ ಮಾತ್ರವಲ್ಲ, ನಿಮ್ಮ ವ್ಯಾಪಾರಿ ಹಿತಾಸಕ್ತಿಗಳಿಗೂ ಹೊಡೆತ ಕೊಡಬಲ್ಲೆವು’ ಎಂದು ಭಾರತ ಸರ್ಕಾರ ಚೀನಾಕ್ಕೆ ತೋರಿಸಿಕೊಟ್ಟ ಎರಡನೇ ದಿಟ್ಟ ಕ್ರಮವಿದು.

ಈ ಹಿಂದೆ ಅಂದರೆ, ಕಳೆದ ಏಪ್ರಿಲ್‌ನಲ್ಲಿ ‘ಭಾರತದೊಂದಿಗೆ ಗಡಿ ಹಂಚಿಕೊಂಡಿರುವ ದೇಶಗಳು ಭಾರತದ ಕಂಪನಿಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಮಾಡುವ ಮೊದಲು ಸರ್ಕಾರದ ಪೂರ್ವಾನುಮತಿ ಪಡೆದುಕೊಳ್ಳಬೇಕು’ ಎಂಬ ಕಡ್ಡಾಯ ನಿಯಮ ಜಾರಿ ಮಾಡಿತ್ತು. ಇದು ಸಹ ಚೀನಾದ ಹಿತಾಸಕ್ತಿಗೆ ಮಾರ್ಮಿಕ ಹೊಡೆತ ನೀಡಿತ್ತು.

ಕೋವಿಡ್–19 ಪಿಡುಗಿನ ಕಾರಣಕ್ಕೆ ಭಾರತದ ಕಂಪನಿಗಳ ಷೇರು ಬೆಲೆ ಕುಸಿದಿದ್ದ ಹಿನ್ನೆಲೆಯಲ್ಲಿ ಇದು ಮಹತ್ವದ ನಿರ್ಧಾರವಾಗಿತ್ತು. ಪರಿಸ್ಥಿತಿಯ ಲಾಭ ಪಡೆದುಕೊಂಡು ದೇಶೀಯ ಕಂಪನಿಗಳಲ್ಲಿ ವಿದೇಶಿಯರು ಗಮನಾರ್ಹ ಪ್ರಮಾಣದಲ್ಲಿ ಬಂಡವಾಳ ತೊಡಗಿಸುವುದಕ್ಕೆ ಇದು ಕಡಿವಾಣ ಹಾಕಿತ್ತು.

ಇದನ್ನೂ ಓದಿ: 


ಚೀನಾ ವಿದೇಶಾಂಗ ಇಲಾಖೆಯ ವಕ್ತಾರ ಝ್ವಾ ಲಿಜಿಯಾನ್

ಟಿಕ್‌ಟಾಕ್ ಹೆಜ್ಜೆಗುರುತು

ಭಾರತದಲ್ಲಿ ಟಿಕ್‌ಟಾಕ್‌ ಅತಿಹೆಚ್ಚು ಡೌನ್‌ಲೋಡ್ ಆದ ಆ್ಯಪ್. 61 ಕೋಟಿಗೂ ಹೆಚ್ಚು ಮಂದಿ ಈ ಆ್ಯಪ್‌ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. 10 ಕೋಟಿಗೂ ಹೆಚ್ಚು ಮಂದಿ ಸಕ್ರಿಯ ಬಳಕೆದಾರರಿದ್ದಾರೆ. ದೇಶದ ಎರಡನೇ ಹಂತದ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಯುವ ಸಂಸ್ಕೃತಿ, ಮಾತುಕತೆಯ ಭಾಗವಾಗಿ ಟಿಕ್‌ಟಾಕ್‌ ಹೆಜ್ಜೆಗುರುತು ಮೂಡಿಸುತ್ತಿದೆ.

ಟೆಕ್‌ ದೈತ್ಯ ಕಂಪನಿ ಬೈಟ್‌ಡ್ಯಾನ್ಸ್‌ ನಿರ್ವಹಿಸುವ ಈ ಆ್ಯಪ್, ಬಳಕೆದಾರರು ಸಣ್ಣ ವಿಡಿಯೊಗಳನ್ನು ರೂಪಿಸಲು, ಬೇರೊಂದು ದನಿಗೆ ಇಷ್ಟದ ದೃಶ್ಯ ಅಥವಾ ಸಂಗೀತ ಅಳವಡಿಸಲು ಅವಕಾಶ ಮಾಡಿಕೊಡುತ್ತದೆ. ವಿಶ್ವದಲ್ಲಿ ಕಳೆದ ಏಪ್ರಿಲ್‌ವರೆಗೆ ಒಟ್ಟು 200 ಕೋಟಿ ಮಂದಿ ಟಿಕ್‌ಟಾಕ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಎಂದು ಸ್ಯಾನ್‌ಫ್ರಾನ್ಸಿಸ್ಕೊ ಮೂಲಕ ಮಾರುಕಟ್ಟೆ ನಿಗಾ ಸಂಸ್ಥೆ ಸೆನ್ಸಾರ್ ಟವರ್ ವಿಶ್ಲೇಷಿಸಿದೆ.

ಚೀನಾ ಮತ್ತು ಅಮೆರಿಕಗಳಿಂದ ಟಿಕ್‌ಟಾಕ್ ಗಳಿಸುತ್ತಿರುವ ಆದಾಯಕ್ಕೆ ಹೋಲಿಸಿದರೆ ಭಾರತದಿಂದ ಸಿಗುತ್ತಿರುವ ಆದಾಯ ಕಡಿಮೆ. ಆದರೆ ಬಳಕೆದಾರರ ಪ್ರಮಾಣ ಮಾತ್ರ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗುತ್ತಿತ್ತು.

ಟಿಕ್‌ಟಾಕ್‌ನ ಮಾತೃಸಂಸ್ಥೆ ಬೈಟ್‌ಡಾನ್ಸ್‌ ಪ್ರಕಟಿಸಿರುವ ವರದಿಗಳನ್ನು ಗಮನಿಸಿದಾಗ ಟಿಕ್‌ಟಾಕ್‌ಗೆ ಭಾರತ ಎಷ್ಟು ಮುಖ್ಯವಾಗಿತ್ತು ಎಂಬುದು ಅರ್ಥವಾಗುತ್ತದೆ. ತನ್ನ ಸಿಬ್ಬಂದಿ ಸಂಖ್ಯೆಯನ್ನು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಿಸಿದ್ದ ಟಿಕ್‌ಟಾಕ್, 15 ಭಾರತೀಯ ಭಾಷೆಗಳಿಗೆ ಆ್ಯಪ್ ಕಸ್ಟಮೈಸ್ ಮಾಡಿತ್ತು. ಪ್ರಾದೇಶಿಕ ಮಾರುಕಟ್ಟೆಗೆ ಹೆಚ್ಚು ಒತ್ತು ನೀಡಿತ್ತು.

2012ರಿಂದ 2018ರ ನಡುವಣ ಅವಧಿಯಲ್ಲಿ ಭಾರತೀಯರು ವಿಡಿಯೊ ನೋಡುವ ಪ್ರಮಾಣ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದೆ. 2012ರಲ್ಲಿ ಭಾರತೀಯರು ಒಂದು ದಿನಕ್ಕೆ ಸರಾಸರಿ 2 ನಿಮಿಷ ವಿಡಿಯೊ ನೋಡುತ್ತಿದ್ದರು. 2018ರ ಹೊತ್ತಿಗೆ ಈ ಪ್ರಮಾಣವು 50 ನಿಮಿಷಕ್ಕೆ ಏರಿತ್ತು ಎಂದು ಝೆನಿತ್ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.

ಗೂಗಲ್ ಮಾಲೀಕತ್ವದ ಯುಟ್ಯೂಬ್‌ಗೆ ಭಾರತದಲ್ಲಿ ಟಿಕ್‌ಟಾಕ್‌ಗಿಂತಲೂ ಹೆಚ್ಚು ಬಳಕೆದಾರರಿದ್ದಾರೆ. ಆದರೆ ಭವಿಷ್ಯದಲ್ಲಿ ಟಿಕ್‌ಟಾಕ್‌ ಲಾಭ ಗಳಿಸುವ ಮತ್ತು ಪ್ರಭಾವ ಹೆಚ್ಚಿಸಿಕೊಳ್ಳುವ ಸಾಧ್ಯತೆ ಯುಟ್ಯೂಬ್‌ಗಿಂತಲೂ ಹೆಚ್ಚಾಗಿತ್ತು ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಮೇ 2019ರಲ್ಲಿಯೂ ಭಾರತದಲ್ಲಿ ಟಿಕ್‌ಟಾಕ್ ನಿಷೇಧಿಸಲಾಗಿತ್ತು. ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಅನುವು ಮಾಡಿಕೊಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದ ಮದ್ರಾಸ್ ಹೈಕೋರ್ಟ್‌ ಟಿಕ್‌ಟಾಕ್ ನಿಷೇಧಿಸುವಂತೆ ಆದೇಶ ಹೊರಡಿಸಿತ್ತು.

ನ್ಯಾಯಾಲಯಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದ ಟಿಕ್‌ಟಾಕ್ ನಿಷೇಧ ತೆರವುಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದರೆ ಈ ಬಾರಿಯ ನಿಷೇಧ ಸಾಕಷ್ಟು ಸಮಯ ಊರ್ಜಿತದಲ್ಲಿ ಇರಲಿದೆ.

ಇದನ್ನೂ ಓದಿ: 

ಜಾಣ ನಡೆ

ಚೀನಾದಿಂದ ಬರುವ ಉತ್ಪನ್ನಗಳನ್ನು ನಿಷೇಧಿಸಿದರೆ ಭಾರತದ ನಿರ್ಧಾರವನ್ನು ಚೀನಾ ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ (ವರ್ಲ್ಡ್‌ ಟ್ರೇಡ್ ಆರ್ಗನೈಸೇಷನ್) ಪ್ರಶ್ನಿಸಬಹುದಿತ್ತು. ಅಷ್ಟೇ ಅಲ್ಲ, ಭಾರತದ ವ್ಯಾಪಾರ ಮತ್ತು ಆರ್ಥಿಕತೆಗೂ ಅದರಿಂದ ಹಾನಿಯಾಗುತ್ತಿತ್ತು. ಚೀನಾದ ಒಟ್ಟಾರೆ ರಫ್ತು ಪ್ರಮಾಣ ಗಮನಿಸಿದರೆ, ಇಂಥ ನಿರ್ಬಂಧಗಳಿಂದ ಚೀನಾಗೆ ಹೇಳಿಕೊಳ್ಳುವಂಥ ಹಾನಿಯೂ ಆಗುತ್ತಿರಲಿಲ್ಲ.

ಆದರೆ ತಂತ್ರಜ್ಞಾನದ ಕ್ಷೇತ್ರದತ್ತ ಗಮನ ಹೊರಳಿಸಿರುವ ಭಾರತ, ಚೀನಾದ ಆ್ಯಪ್‌ಗಳನ್ನು ನಿಷೇಧಿಸುವ ಮೂಲಕ ಚೀನಾದಿಂದ ಬರುವ ಸರಕುಗಳನ್ನು ನಿಷೇಧಿಸುವುದಕ್ಕೂ ಮೀರಿದ ಹೊಡೆತಕೊಟ್ಟಿದೆ. ಮುಂದಿನ ದಿನಗಳಲ್ಲಿ ಭಾರತ ಸರ್ಕಾರವು ಇಂಥ ಇನ್ನಷ್ಟು ಕ್ರಮಗಳನ್ನು ತೆಗೆದುಕೊಳ್ಳಬಹುದು ಎನ್ನುವುದರ ಮುನ್ಸೂಚನೆಯಿದು.

ಇದು ಸಾಕಷ್ಟು ಚಿಂತನಮಂಥನದ ನಂತರ ಹೊರಬಿದ್ದ ತೀರ್ಮಾನವೂ ಹೌದು. ಕೇವಲ 10 ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪ್ರೆಸ್ ಇನ್‌ಫರ್ಮೇಷನ್ ಬ್ಯೂರೊ, ಭಾರತವು ಕೆಲ ಆ್ಯಪ್‌ಗಳನ್ನು ನಿಷೇಧಿಸಿದೆ ಎಂಬ ಗಾಳಿಸುದ್ದಿಯನ್ನು ಅಲ್ಲಗಳೆದಿತ್ತು. ಈ ಹಿನ್ನೆಲೆಯಲ್ಲಿ ನಿಷೇಧದ ವಿಚಾರವನ್ನು ಮರುಪರಿಶೀಲಿಸಿದರೆ ಸಾಕಷ್ಟು ಅರ್ಥಗಳು ಹೊಳೆಯುತ್ತವೆ.

ಅಬ್ಬಬ್ಬಾ ಅದೆಷ್ಟು ಬಂಡವಾಳ

ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಬಂಡವಾಳ ಪಡೆಯುವುದಕ್ಕೆ ಈ ಹಿಂದೆ ಇದ್ದ ನಿಯಮಗಳನ್ನು ಬಿಗಿಗೊಳಿಸುವ ಮೂಲಕ ದೇಶದ ಐಟಿ ಕಂಪನಿಗಳು ಚೀನಾದ ಆಲಿಬಾಬಾ ಮತ್ತು ಟೆನ್ಸೆಂಟ್‌ನಂಥ ದೊಡ್ಡ ಕಂಪನಿಗಳ ತೆಕ್ಕೆಗೆ ಜಾರುವ ಸಾಧ್ಯತೆಯನ್ನು ಕಡಿಮೆ ಮಾಡಿದಂತೆ ಆಗಿದೆ. 

ಭಾರತದ ಸ್ಟಾರ್ಟ್‌ಅಪ್ ಕಂಪನಿಗಳಲ್ಲಿ 2015ರಿಂದ 2019ರ ಅವಧಿಯಲ್ಲಿ ಚೀನಾದ ಆಲಿಬಾಬಾ, ಟೆನ್ಸೆಂಟ್, ಟಿಆರ್ ಕ್ಯಾಪಿಟಲ್, ಹಿಲ್‌ಹೌಸ್ ಕ್ಯಾಪಿಟಲ್ ಸೇರಿದಂತೆ ಹಲವು ಚೀನೀ ಹೂಡಿಕೆದಾರರು 5.5 ಲಕ್ಷ ಕೋಟಿ ಡಾಲರ್‌ಗೂ ಹೆಚ್ಚು ಬಂಡವಾಳ ಹೂಡಿಕೆ ಮಾಡಿದ್ದಾರೆ. ಈ ಮಾಹಿತಿಯನ್ನು ವೆಂಚುರ್ ಇಂಟೆಲಿಜೆನ್ಸ್ (ಆರಂಭಿಕ ಹೂಡಿಕೆಗಳನ್ನು ಗಮನಿಸುವ ಸಂಸ್ಥೆ) ದೃಢಪಡಿಸಿದೆ ಎಂದು 'ಇಂಡಿಯನ್ ಎಕ್ಸ್‌ಪ್ರೆಸ್' ಜಾಲತಾಣ ವರದಿ ಮಾಡಿದೆ. ದೇಶದ 29 ಯೂನಿಕಾರ್ನ್‌ಗಳ (1 ಲಕ್ಷ ಕೋಟಿ ಡಾಲರ್‌ಗೂ ಹೆಚ್ಚು ಬಂಡವಾಳ ಇರುವ ಸ್ಟಾರ್ಟ್‌ಅಪ್) ಪೈಕಿ 16 ಕಂಪನಿಗಳಲ್ಲಿ ಕನಿಷ್ಠ ಒಂದಾದರೂ ಚೀನೀ ಕಂಪನಿ ಹಣ ಹೂಡಿದೆ.

ಇದನ್ನೂ ಓದಿ: 

ಚೀನಾ ನೀತಿ ಇರಲಿಲ್ಲ

1990ರ ದಶಕದಿಂದಲೇ ಭಾರತವು ಜಾಗತೀಕರಣಕ್ಕೆ ತೆರೆದುಕೊಂಡಿತಾದರೂ ಚೀನಾ ಕೇಂದ್ರಿತ ವ್ಯಾಪಾರಿ ನೀತಿಗಳನ್ನು ರೂಪಿಸಲಿಲ್ಲ. ವಿದೇಶಿ ಕಂಪನಿಗಳು ಭಾರತವನ್ನು ತಮ್ಮ ಉತ್ಪನ್ನಗಳಿಗೆ ಸುರಿಹೊಂಡ ಮಾಡಿಕೊಳ್ಳುವುದನ್ನು ತಡೆಯುವ ದೃಷ್ಟಿಯಿಂದ ಆ್ಯಂಟಿ ಡಂಪಿಂಗ್ ಡ್ಯೂಟಿ, ವ್ಯಾಪಾರಿ ತಡೆಗಳು ಮತ್ತು ರಕ್ಷಣಾ ಕ್ರಮಗಳನ್ನು ರೂಪಿಸಲಾಗಿತ್ತು. ಆದರೆ ಭಾರತದಲ್ಲಿ ಚೀನಾದ ಪ್ರಭಾವ ತಗ್ಗಿಸುವ ಯತ್ನಗಳು ಕ್ರಮಬದ್ಧವಾಗಿ ರೂಪುಗೊಂಡಿರಲಿಲ್ಲ.

ಆದರೆ ಇದೀಗ ಸರ್ಕಾರವು ಮೊಬೈಲ್ ತಯಾರಿಕೆ, ಔಷಧಿ ತಯಾರಿಕೆಗೆ ಬಳಸುವ ಕಚ್ಚಾವಸ್ತುಗಳು ಮತ್ತು ವೈದ್ಯಕೀಯ ಉಪಕರಣಗಳ ಕ್ಷೇತ್ರದಲ್ಲಿಯೂ ನೀತಿಗಳನ್ನು ರೂಪಿಸಲು ಮುಂದಾಗಿದೆ.

ಭಾರತದಲ್ಲಿಯೂ ಚೀನಾದ ಹುವಾಯಿ ಕಂಪನಿಯೇ 5ಜಿ ತಂತ್ರಜ್ಞಾನವನ್ನು ಅನುಷ್ಠಾನಕ್ಕೆ ತರಬೇಕಿತ್ತು. ಈಗ ಭಾರತ ಸರ್ಕಾರವು ಹುವಾಯಿ ಕಂಪನಿಯನ್ನು ದೂರ ಇಡಲು ನಿರ್ಧರಿಸಿದೆ. ಬಿಎಸ್‌ಎನ್‌ಎನ್‌ ಸಹ ದೇಶದಲ್ಲಿ 4ಜಿ ಸೇವೆ ಒದಗಿಸಲು ಟೆಂಡರ್‌ ಕರೆದಿತ್ತು. ಇದೀಗ ಅದನ್ನೂ ತಡೆಹಿಡಿದಿರುವ ಭಾರತ ಸರ್ಕಾರ, 'ಮೇಕ್‌ ಇನ್ ಇಂಡಿಯಾ' ಆಶಯದಂತೆ ಈ ಕೆಲಸ ಆಗಬೇಕು ಎಂದು ಸೂಚಿಸಿದೆ. ಚೀನಾ ಮೂಲದ ಕಂಪನಿಗಳನ್ನು ಈ ಕಾಮಗಾರಿಯಲ್ಲಿಯೂ ಭಾರತ ದೂರವಿಟ್ಟಿದೆ.

ಇದನ್ನೂ ಓದಿ: 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು