ಸೋಮವಾರ, ಮೇ 23, 2022
28 °C

ಆಳ-ಅಗಲ: ಕ್ರಿಪ್ಟೋಕರೆನ್ಸಿ ನೆತ್ತಿ ಮೇಲೆ ತೂಗುಗತ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾರತದಲ್ಲಿ ಕ್ರಿಪ್ಟೋಕರೆನ್ಸಿಯನ್ನು ನಿಷೇಧಿಸಲು ಕೇಂದ್ರ ಸರ್ಕಾರವು ಸಿದ್ಧತೆ ನಡೆಸಿದೆ. ಈ ಸಂಬಂಧ ಈಗಾಗಲೇ ಕರಡು ಮಸೂದೆಯನ್ನು ಸಿದ್ಧಪಡಿಸಿದ್ದು, ಅದನ್ನು ಕೇಂದ್ರ ಸಚಿವ ಸಂಪುಟದ ಒಪ್ಪಿಗೆಗೆ ಕಳುಹಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ಮಾಹಿತಿ ನೀಡಿದೆ. ಈಗ ಭಾರತದಲ್ಲಿ ಚಾಲ್ತಿಯಲ್ಲಿರುವ ಎಲ್ಲಾ ಸ್ವರೂಪದ ಕ್ರಿಪ್ಟೋಕರೆನ್ಸಿ/ಡಿಜಿಟಲ್ ಹಣವನ್ನು ಈ ಮಸೂದೆಯು ಸಂಪೂರ್ಣವಾಗಿ ನಿಷೇಧಿಸುತ್ತದೆ. ಅಲ್ಲದೆ, ಭಾರತೀಯ ರಿಸರ್ವ್ ಬ್ಯಾಂಕ್ ತನ್ನದೇ ಆದ ಕ್ರಿಪ್ಟೋಕರೆನ್ಸಿಯನ್ನು ಜಾರಿಗೆ ತರಲು ಈ ಮಸೂದೆಯು ಅವಕಾಶ ಮಾಡಿಕೊಡುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಭಾರತದಲ್ಲಿ ಐದಾರು ವರ್ಷಗಳಿಂದ ಕ್ರಿಪ್ಟೋಕರೆನ್ಸಿ ಚಲಾವಣೆಯಲ್ಲಿ ಇದೆ. ಆದರೆ, 2017-2018ರ ಅವಧಿಯಲ್ಲಿ ಕ್ರಿಪ್ಟೋಕರೆನ್ಸಿಯ ಮೂಲಕ ನಡೆಯುವ ವಹಿವಾಟಿನ ಪ್ರಮಾಣ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು. 2018ರಲ್ಲಿ ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರು ಬಿಟ್‌ಕಾಯಿನ್‌ ಎಟಿಎಂ ಘಟಕವನ್ನು ಆರಂಭಿಸಿದ್ದರು. ಆದರೆ, ಮೂರೇ ದಿನಗಳಲ್ಲಿ ಆ ಎಟಿಎಂ ಘಟಕವನ್ನು ಮುಚ್ಚಿಸಲಾಯಿತು. 2018ರ ಏಪ್ರಿಲ್‌ನಲ್ಲಿ ಆರ್‌ಬಿಐ ಭಾರತದಲ್ಲಿ ಎಲ್ಲಾ ಸ್ವರೂಪದ ಕ್ರಿಪ್ಟೋಕರೆನ್ಸಿಯ ಮೂಲಕ ನಡೆಸುವ ವಹಿವಾಟನ್ನು ಮಾನ್ಯ ಮಾಡಬಾರದು ಎಂದು ಎಲ್ಲಾ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಸೂಚನೆ ನೀಡಿತು. ಆ ಮೂಲಕ ದೇಶದಲ್ಲಿ ಕ್ರಿಪ್ಟೋಕರೆನ್ಸಿಯನ್ನು ಸಂಪೂರ್ಣವಾಗಿ ನಿಷೇಧಿಸಿತು.

ಅಲ್ಲದೆ, 2018ರಲ್ಲೇ ಕ್ರಿಪ್ಟೋಕರೆನ್ಸಿಯ ಸಾಧಕ-ಬಾಧಕಗಳ ಬಗ್ಗೆ ವರದಿ ನೀಡಲು ತಜ್ಞರ ಸಮಿತಿಯನ್ನು ಕೇಂದ್ರ ಸರ್ಕಾರವು ರಚಿಸಿತ್ತು. ಈ ಸಮಿತಿಯು 2019ರ ಫೆಬ್ರುವರಿಯಲ್ಲಿ ವರದಿ ನೀಡಿತು. ವರದಿಯನ್ನು ಆಧರಿಸಿ ಕ್ರಿಪ್ಟೋಕರೆನ್ಸಿಯನ್ನು ನಿಷೇಧಿಸಲು ಮತ್ತು ಭಾರತದ್ದೇ ಸ್ವಂತ ಕ್ರಿಪ್ಟೋಕರೆನ್ಸಿಯನ್ನು ಜಾರಿಗೆ ತರುವ ಉದ್ದೇಶದಿಂದ ಮಸೂದೆ ರಚಿಸಲು ಸಿದ್ಧತೆ ನಡೆಸಲಾಗಿತ್ತು. ಈ ಎಲ್ಲವೂ ಕಾರ್ಯರೂಪಕ್ಕೆ ಬರುವ ಹೊತ್ತಿಗೆ ಕೋವಿಡ್‌ ಲಾಕ್‌ಡೌನ್ ಜಾರಿಗೆ ಬಂದಿತು. ಆದರೆ, ಇದೇ ಅವಧಿಯಲ್ಲಿ ಕ್ರಿಪ್ಟೋಕರೆನ್ಸಿ ನಿಷೇಧವನ್ನು ಪ್ರಶ್ನಿಸಿ ಕೆಲವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಇದನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿತು. ಜತೆಗೆ ನಿಷೇಧವನ್ನು ತೆಗೆದುಹಾಕಿತು. ಆ ನಂತರ ಕ್ರಿಪ್ಟೋಕರೆನ್ಸಿ ದೇಶದಲ್ಲಿ ಮತ್ತೆ ಚಲಾವಣೆಗೆ ಬಂದಿತು.

ಜಗತ್ತಿನ ಹಲವು ಪ್ರಮುಖ ಆರ್ಥಿಕತೆಗಳು ಕ್ರಿಪ್ಟೋಕರೆನ್ಸಿಯನ್ನು ಮಾನ್ಯ ಮಾಡಿವೆ. ಇಲಾನ್ ಮಸ್ಕ್ ಅವರಂತಹ ಉದ್ಯಮಿಗಳು ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದಾರೆ. ವಾಟ್ಸ್‌ಆ್ಯಪ್‌ ತನ್ನದೇ ಆದ ಕ್ರಿಪ್ಟೋಕರೆನ್ಸಿಯನ್ನು ಚಲಾವಣೆಗೆ ತರಲು ಸಿದ್ಧತೆ ನಡೆಸಿದೆ. ಭಾರತದಲ್ಲೂ ಕ್ರಿಪ್ಟೋಕರೆನ್ಸಿಯಲ್ಲಿ ವಹಿವಾಟು ನಡೆಯುತ್ತಿದೆ. ಆದರೆ, ಇಂತಹ ಸಂದರ್ಭದಲ್ಲಿ ಕ್ರಿಪ್ಟೋಕರೆನ್ಸಿಯನ್ನು ನಿಷೇಧಿಸುವ ನಡೆಯು ವಿಶ್ವದಾದ್ಯಂತ ಆಶ್ಚರ್ಯಕ್ಕೆ ಕಾರಣವಾಗಿದೆ.

ದೇಶದಲ್ಲಿ ಕ್ರಿಪ್ಟೋಕರೆನ್ಸಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಎಲ್ಲರೂ, ಈ ನಿಷೇಧ ಜಾರಿಗೆ ಬಂದ ನಂತರ ಕೆಲಸ ಕಳೆದುಕೊಳ್ಳಲಿದ್ದಾರೆ. ಭಾರತದಲ್ಲಿ ಕ್ರಿಪ್ಟೋಕರೆನ್ಸಿ ರೂಪದಲ್ಲಿ ಹೂಡಿಕೆ ಮಾಡಿರುವವರು, ಅವನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ನಿಷೇಧ ಹತ್ತಿರವಾಗುತ್ತಿದ್ದಂತೆ ಕ್ರಿಪ್ಟೋಕರೆನ್ಸಿಯ ಮೌಲ್ಯ ಕುಸಿಯುವ ಅಪಾಯವಿದೆ. ಹೀಗಾಗಿ ಹೂಡಿಕೆದಾರರು, ಬಂದಷ್ಟು ಹಣಕ್ಕೆ ಅವನ್ನು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಹೂಡಿಕೆದಾರರಿಗೆ ನಷ್ಟವಾಗಲಿದೆ. ಭಾರತದಲ್ಲಿ ನಿಷೇಧವಿದ್ದರೂ ವಿಶ್ವದ ಬೇರೆಡೆ ಚಲಾವಣೆಯಲ್ಲಿ ಇರುವ ಕಾರಣ, ಭಾರತೀಯರು ಕಾಳಸಂತೆಯಲ್ಲಿ ಕ್ರಿಪ್ಟೋಕರೆನ್ಸಿಯ ವಹಿವಾಟು ನಡೆಸುವ ಸಾಧ್ಯತೆ ಇದೆ.

ಭಾರತದಲ್ಲಿ ಕ್ರಿಪ್ಟೋಕರೆನ್ಸಿಯ ಭೂಗತ ಮಾರುಕಟ್ಟೆಯೇ ರೂಪುಗೊಳ್ಳುವ ಅಪಾಯವಿದೆ. ಕ್ರಿಪ್ಟೋಕರೆನ್ಸಿಯನ್ನು ನಿಷೇಧಿಸಬಾರದು ಎಂದು ಸರ್ಕಾರದ ಮೇಲೆ ಒತ್ತಡ ತರಲು ಸಿದ್ಧತೆ ನಡೆಸಲಾಗುತ್ತಿದೆ. ಈ ಕ್ಷೇತ್ರದಲ್ಲಿ ದುಡಿಯುವವರು ಈ ಸಂಬಂಧ ಒತ್ತಡ ತರಲು ಸಹಿಸಂಗ್ರಹ ಅಭಿಯಾನ ಆರಂಭಿಸಿದ್ದಾರೆ.

ಭಾರತವು ತನ್ನದೇ ಕ್ರಿಪ್ಟೋಕರೆನ್ಸಿಯನ್ನು ಚಲಾವಣೆಗೆ ತಂದರೆ, ಈ ಸ್ವರೂಪದಲ್ಲಿ ನಡೆಯುವ ವಹಿವಾಟು ಸರ್ಕಾರದ ನಿಯಂತ್ರಣಕ್ಕೆ ಬರುತ್ತದೆ. ಕ್ರಿಪ್ಟೋಕರೆನ್ಸಿಯ ಮೂಲಕ ನಡೆಯುವ ಎಲ್ಲಾ ವಹಿವಾಟುಗಳ ಮೇಲೆ ನಿಗಾ ಇರಿಸಲು ಅವಕಾಶವಾಗುತ್ತದೆ. ಈ ಕ್ಷೇತ್ರದಲ್ಲಿನ ಕಾಳದಂಧೆಯ ನಿಯಂತ್ರಣವೂ ಸಾಧ್ಯ ಎಂಬ ವಾದವೂ ಇದೆ. ಆದರೆ, ಸರ್ಕಾರವು ತರಲು ಹೊರಟಿರುವ ಮಸೂದೆಯು ಸಂಸತ್ತಿನಲ್ಲಿ ಮಂಡನೆಯಾದಾಗ ಇದು ಸ್ಪಷ್ಟವಾಗುತ್ತದೆ.

ಕ್ರಿಪ್ಟೊಕರೆನ್ಸಿ ಎಂಬ ಡಿಜಿಟಲ್ ದುಡ್ಡು
ಕ್ರಿಪ್ಟೊಕರೆನ್ಸಿ ಎಂಬುದು ಒಂದು ರೀತಿಯ ಖಾಸಗಿ ಡಿಜಿಟಲ್ ದುಡ್ಡು. ರೂಪಾಯಿ, ಡಾಲರ್ ಮೊದಲಾದ ಕರೆನ್ಸಿಗಳು ಭೌತಿಕವಾಗಿದ್ದರೆ, ಇದು ಅಂತರ್ಜಾಲದ ಮೂಲಕ ನಿರ್ವಹಣೆಯಾಗುವ, ವಿನಿಮಯವಾಗುವ ಹಣದ ವ್ಯವಸ್ಥೆ. ಯಾವುದೇ ದೇಶದ ಕೇಂದ್ರೀಯ ಬ್ಯಾಂಕ್‌ನೊಂದಿಗೆ ಈ ಕರೆನ್ಸಿ ಸಂಪರ್ಕ ಹೊಂದಿರುವುದಿಲ್ಲ. ಕ್ರಿಪ್ಟೊ ಕರೆನ್ಸಿಯಲ್ಲಿ ಬಿಟ್‌ಕಾಯಿನ್‌ ಹೆಚ್ಚು ಜನಪ್ರಿಯವಾಗಿದೆ.

ಸುಲಭವಾಗಿ ಅಂತರ್ಜಾಲದ ಮೂಲಕ ಹಣ ವರ್ಗಾವಣೆ ಮಾಡಲು ಇಂದು ಕ್ರಿಪ್ಟೊ ಕರೆನ್ಸಿಯನ್ನು ಹಲವು ದೇಶಗಳಲ್ಲಿ ಬಳಸಲಾಗುತ್ತಿದೆ. ಅಂತರ್ಜಾಲದಲ್ಲಿ ನಡೆಯುವ ಈ ಹಣಕಾಸು ವಹಿವಾಟಿಗೆ ಇರುವ ಶುಲ್ಕ ಕಡಿಮೆ. ಇದನ್ನು ಆನ್‌ಲೈನ್ ವ್ಯಾಲೆಟ್‌ನಲ್ಲಿ ಸಂಗ್ರಹಿಸಿಡಬಹುದು. ವಹಿವಾಟಿನ ಬಳಿಕ ಈ ಹಣವನ್ನು ರೂಪಾಯಿ, ಡಾಲರ್‌ಗೆ ವಿನಿಮಯ ಮಾಡಿಕೊಳ್ಳಬಹುದು. ಷೇರು ಮಾರುಕಟ್ಟೆಯ ರೀತಿಯಲ್ಲಿ ಇದರ ವಹಿವಾಟು ಸಹ ನಡೆಯುತ್ತದೆ.

ಸುರಕ್ಷಿತ: ಬಿಟ್‌ಕಾಯಿನ್‌ ಮೊದಲಾದ ಕ್ರಿಪ್ಟೊ ಕರೆನ್ಸಿಗಳಿಗೆ ಬಳಕೆದಾರರ ಜಾಲವಿರುತ್ತದೆ. ಇದು ಎನ್‌ಕ್ರಿಪ್ಷನ್ ಮೂಲಕ ಸುರಕ್ಷಿತವಾಗಿರುವ ಹಣ. ನೇರವಾಗಿ ತಲುಪಬೇಕಾದವರಿಗೆ ತಲುಪುವ ವ್ಯವಸ್ಥೆ. ಇದರ ಬಳಕೆದಾರ ಜಾಲದಲ್ಲಿರುವವರಿಗೆ ವ್ಯವಹಾರ ನಡೆಯುತ್ತಿರುವ ಮಾಹಿತಿ ರವಾನೆಯಾಗುತ್ತದೆ. ಈ ವಹಿವಾಟು ಪೂರ್ಣಗೊಂಡ ಬಳಿಕ ಅದನ್ನು ಬದಲಿಸಲು, ತಿದ್ದಲು, ನಕಲು ಮಾಡಲಾಗದು. ಈ ರೀತಿಯ ಪ್ರಕ್ರಿಯೆ ಸಾಧ್ಯವಾಗಿಸಿರುವುದು ‘ಬ್ಲಾಕ್‌ಚೈನ್’ ಎಂಬ ಸುರಕ್ಷಿತ ಅಂತರ್ಜಾಲ ತಂತ್ರಜ್ಞಾನ.

ಕ್ರಿಪ್ಟೊ ಕರೆನ್ಸಿ ವಿಧಗಳು
ನೂರಾರು ಕ್ರಿಪ್ಟೊ ಕರೆನ್ಸಿಗಳು ಅಸ್ತಿತ್ವದಲ್ಲಿವೆ. ಬಿಟ್‌ಕಾಯಿನ್‌, ರಿಪಲ್‌, ಕಾರ್ಡನ್‌, ಲಿಬ್ರಾ, ನೇಮ್‌ಕಾಯಿನ್, ಲೈಟ್‌ಕಾಯಿನ್, ಪೀರ್‌ಕಾಯಿನ್, ಡೋಜ್‌ಕಾಯಿನ್, ಗ್ರಿಡ್‌ಕಾಯಿನ್, ಇಟಿಎಚ್, ಕಾರ್ಡನೊ, ಸ್ಟೆಲ್ಲರ್, ಚೈನ್‌ಲಿಂಕ್, ಟೆದರ್, ಪ್ರೈಮ್‌ಕಾಯಿನ್, ಝಡ್‌ಕ್ಯಾಶ್ ಮೊದಲಾದವು ಚಲಾವಣೆಯಲ್ಲಿವೆ. ಜಗತ್ತಿನಾದ್ಯಂತ 4000ಕ್ಕೂ ಹೆಚ್ಚು ತರದ ಕ್ರಿಪ್ಟೊ ಕರೆನ್ಸಿಗಳು ಚಾಲ್ತಿಯಲ್ಲಿವೆ.

ಕ್ರಿಪ್ಟೊ ಮಾರುಕಟ್ಟೆ
ಕ್ರಿಪ್ಟೊ ಕರೆನ್ಸಿ ಮಾರುಕಟ್ಟೆ ಮೌಲ್ಯವು ಸುಮಾರು ₹72 ಲಕ್ಷ ಕೋಟಿಗಳಷ್ಟಿದೆ ಎಂದು ಅಂದಾಜಿಸಲಾಗಿದೆ. ಜನಪ್ರಿಯ ಕ್ರಿಪ್ಟೊ ಕರೆನ್ಸಿಯ ಒಂದು ಕಾಯಿನ್‌ನ ಈಗಿನ ಬೆಲೆ ಸುಮಾರು ₹5.50 ಲಕ್ಷ. ಬಿಟ್‌ಕಾಯಿನ್‌ನ ಮಾರುಕಟ್ಟೆ ಮೌಲ್ಯವೇ ಅಂದಾಜು ₹9 ಲಕ್ಷ ಕೋಟಿ ಆಗಿದೆ.

ಅಮೆರಿಕವು ಕ್ರಿಪ್ಟೊ ಕರೆನ್ಸಿ ಚಟುವಟಿಕೆಯ ಕೇಂದ್ರವಾಗಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯ ವಿನಿಮಯ ಕೇಂದ್ರಗಳು, ವ್ಯಾಪಾರ ವೇದಿಕೆಗಳು, ನಿಧಿಗಳು, ಕ್ರಿಪ್ಟೊ ಮೈನಿಂಗ್ ಸೌಲಭ್ಯಗಳು ಮತ್ತು ಬ್ಲಾಕ್‌ಚೈನ್ ಆಧಾರಿತ ಯೋಜನೆಗಳು ಚಾಲ್ತಿಯಲ್ಲಿವೆ. ಚೀನಾ, ರೊಮೇನಿಯಾ, ಸ್ಪೇನ್, ಜಪಾನ್, ಸ್ವಿಟ್ಜರ್ಲೆಂಡ್, ದಕ್ಷಿಣ ಕೊರಿಯಾಗಳೂ ಮುಂಚೂಣಿಯಲ್ಲಿವೆ. ಅಮೆರಿಕ, ಬ್ರಿಟನ್ ಮೊದಲಾದ ದೇಶಗಳಲ್ಲಿ ಇದಕ್ಕೆ ಮಾನ್ಯತೆಯಿದೆ. ನೇಪಾಳ, ಪಾಕಿಸ್ತಾನ, ವಿಯೆಟ್ನಾಂ ಸೇರಿದಂತೆ ಕೆಲವು ದೇಶಗಳು ಕ್ರಿಪ್ಟೊ ಕರೆನ್ಸಿಯನ್ನು ನಿಷೇಧಿಸಿವೆ.

ಇಲ್ಲಿಯವರೆಗೆ, ತಮ್ಮದೇ ಆದ ಕ್ರಿಪ್ಟೋಕರೆನ್ಸಿಗಳನ್ನು ಬಿಡುಗಡೆ ಮಾಡಿದ ದೇಶಗಳಲ್ಲಿ ಈಕ್ವೆಡಾರ್, ಚೀನಾ, ಸೆನೆಗಲ್, ಸಿಂಗಾಪುರ, ಟ್ಯುನಿಶಿಯಾ ಸೇರಿವೆ. ಎಸ್ಟೋನಿಯಾ, ಜಪಾನ್, ಪ್ಯಾಲೆಸ್ಟೀನ್, ರಷ್ಯಾ, ಸ್ವೀಡನ್‌ ಮೊದಲಾದ ದೇಶಗಳು ತಮ್ಮದೇ ಕ್ರಿಪ್ಟೊ ಕರೆನ್ಸಿ ಹೊಂದಲು ಯತ್ನಿಸುತ್ತಿವೆ.

ಅನುಕೂಲಗಳು
* ಹಣದುಬ್ಬರ ಕ್ರಿಪ್ಟೊ ಕರೆನ್ಸಿ ಮೇಲೆ ಪರಿಣಾಮ ಬೀರುವುದಿಲ್ಲ. ಇಂಥ ಕರೆನ್ಸಿಯನ್ನು ನಿಗದಿತ ಪ್ರಮಾಣದಲ್ಲಿ ಮಾತ್ರ ಬಿಡುಗಡೆ ಮಾಡುವುದರಿಂದ ಬೇಡಿಕೆ ಹೆಚ್ಚಾದಂತೆ ಮೌಲ್ಯವೂ ಹೆಚ್ಚುತ್ತದೆ.
* ಕ್ರಿಪ್ಟೊ ಕರೆನ್ಸಿ ವ್ಯವಹಾರ ವಿವರಗಳನ್ನು ಅದರ ನಿರ್ವಹಣೆ ಮಾಡುವವರು ಸಂಗ್ರಹಿಸಿ ಇಡುತ್ತಾರೆ. ಹಾಗೆ ಮಾಡಲು ಅವರು ವಹಿವಾಟು ಶುಲ್ಕವನ್ನು ಪಡೆಯುತ್ತಾರೆ. ಆದ್ದರಿಂದ ವ್ಯವಹಾರದ ನಿರ್ವಹಣೆಯು ಕ್ರಮಬದ್ಧವಾಗಿರುತ್ತದೆ. ಈ ದಾಖಲೆಗಳು ವಿಕೇಂದ್ರೀಕರಣಗೊಂಡಿರುವುದರಿಂದ ಹೆಚ್ಚು ವಿಶ್ವಾಸಾರ್ಹವೆನಿಸುತ್ತವೆ.
* ಕ್ರಿಪ್ಟೊ ಕರೆನ್ಸಿಗಳ ಬ್ಲಾಕ್‌ಚೇನ್‌ ಲೆಡ್ಜರ್‌ ಅನ್ನು ಅತ್ಯಂತ ಕ್ಲಿಷ್ಟಕರ ಕೋಡ್‌ಗಳನ್ನು ಬಳಸಿ ನಿರ್ವಹಿಸಲಾಗುತ್ತದೆ. ಇದನ್ನು ಡೀಕೋಡ್‌ ಮಾಡುವುದು ಸುಲಭವಲ್ಲ. ಇದರಿಂದಾಗಿ ಕ್ರಿಪ್ಟೊ ಕರೆನ್ಸಿಗಳು ಸಾಮಾನ್ಯ ಎಲೆಕ್ಟ್ರಾನಿಕ್‌ ವ್ಯವಹಾರಕ್ಕಿಂತ ಹೆಚ್ಚು ಸುರಕ್ಷಿತ ಮತ್ತು ಗೋಪ್ಯವೆನಿಸುತ್ತವೆ.
* ಡಾಲರ್‌, ಯೂರೊ, ಪೌಂಡ್‌, ರೂಪಾಯಿ, ಯೆನ್‌ ಹೀಗೆ ಯಾವ ಕರೆನ್ಸಿಯನ್ನು ಕೊಟ್ಟಾದರೂ ಕ್ರಿಪ್ಟೊ ಕರೆನ್ಸಿಯನ್ನು ಖರೀದಿಸಬಹುದು. ಇದರಲ್ಲಿ ವ್ಯವಹಾರ ನಡೆಸುವ ಮೂಲಕ ಒಂದು ಕರೆನ್ಸಿಯನ್ನು ಇನ್ನೊಂದು ಕರೆನ್ಸಿಗೆ ಸುಲಭವಾಗಿ ಪರಿವರ್ತಿಸಬಹುದು.
* ಕ್ರಿಪ್ಟೊ ಕರೆನ್ಸಿಯ ಬಹು ಮುಖ್ಯ ಬಳಕೆ ಎಂದರೆ ವಿದೇಶಗಳಿಗೆ ಹಣವನ್ನು ವರ್ಗಾವಣೆ ಮಾಡುವುದು. ಈ ವ್ಯವಸ್ಥೆಯ ಮೂಲಕ ಅತ್ಯಂತ ಕನಿಷ್ಠ ಅಥವಾ ಶೂನ್ಯ ವಹಿವಾಟು ಶುಲ್ಕದೊಂದಿಗೆ ಹಣದ ವರ್ಗಾವಣೆ ಸಾಧ್ಯವಾಗುತ್ತದೆ. ವರ್ಗಾವಣೆಗೆ ಮಧ್ಯವರ್ತಿ ಸಂಸ್ಥೆಯ ಅಗತ್ಯವೂ ಇರುವುದಿಲ್ಲ.

ಅನನುಕೂಲಗಳು
* ಡಾರ್ಕ್‌ ವೆಬ್‌ಗಳ ಮೂಲಕ ಮಾದಕವಸ್ತುಗಳ ಖರೀದಿಯಂತಹ ಕಾನೂನುಬಾಹಿರ ವ್ಯವಹಾರಗಳಲ್ಲಿ ಹಣ ಪಾವತಿಗಾಗಿ ಕ್ರಿಪ್ಟೊ ಕರೆನ್ಸಿಯನ್ನು ಬಳಸಿದ ಉದಾಹರಣೆಗಳಿವೆ. ಹಲವರು ತಮ್ಮ ಅಕ್ರಮ ಸಂಪಾದನೆಯನ್ನು ಈ ದಾರಿಯ ಮೂಲಕ ಸಕ್ರಮಗೊಳಿಸಿದ್ದಿದೆ.
* ಹ್ಯಾಕರ್‌ಗಳಿಂದ ರಕ್ಷಣೆ ಒದಗಿಸಲು ಈ ವ್ಯವಸ್ಥೆಯಲ್ಲಿ ವಾಸ್ತವಿಕವಾಗಿ ಗುರುತಿಸಲು ಸಾಧ್ಯವಾಗದಂಥ ಕೋಡ್‌ ಅನ್ನು ರಚಿಸಿರುತ್ತಾರೆ. ಬಳಕೆದಾರರು ತಮ್ಮ ವಾಲೆಟ್‌ನ ಕೋಡ್‌ ಅನ್ನು ಕಳೆದುಕೊಂಡರೆ ಅದನ್ನು ಮರಳಿ ಪಡೆಯಲು ಸಾಧ್ಯವೇ ಇಲ್ಲ. ಹೂಡಿದ ಹಣವನ್ನು ಪೂರ್ತಿಯಾಗಿ ಕಳೆದುಕೊಳ್ಳಬೇಕಾಗುತ್ತದೆ.
* ಕೆಲವು ಕರೆನ್ಸಿಗಳನ್ನು ಎಲ್ಲಾ ದೇಶಗಳ ಕರೆನ್ಸಿಯ ಜತೆಗೆ ಬದಲಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಮೊದಲು ಯಾವುದಾದರೊಂದು ಕರೆನ್ಸಿಗೆ ಬದಲಿಸಿ, ಅಲ್ಲಿಂದ ಮತ್ತೆ ಮಧ್ಯವರ್ತಿ ಸಂಸ್ಥೆಯ ಸಹಾಯದಿಂದ ತಮಗೆ ಬೇಕಾದ ಕರೆನ್ಸಿಗೆ ಬದಲಿಸಬೇಕಾಗುತ್ತದೆ. ಇದಕ್ಕೆ ಹೆಚ್ಚುವರಿ ಶುಲ್ಕ ತಗಲುತ್ತದೆ.
* ಕ್ರಿಪ್ಟೊ ಕರೆನ್ಸಿ ಸುಭದ್ರ ಎನ್ನಿಸಿಕೊಂಡಿದ್ದರೂ, ಅವುಗಳ ಹ್ಯಾಕಿಂಗ್‌ ಅಸಾಧ್ಯವೇನೂ ಅಲ್ಲ. ಪ್ರಮುಖ ಕ್ರಿಪ್ಟೊ ಕರೆನ್ಸಿಗಳನ್ನೂ ಹ್ಯಾಕರ್‌ಗಳು ಕಳ್ಳತನ ಮಾಡಿರುವ ಉದಾಹರಣೆಗಳು ಇವೆ.
* ಬಳಕೆದಾರ–ಸಂಸ್ಥೆಯ ಮಧ್ಯೆ ವಿವಾದ ಉಂಟಾದಲ್ಲಿ ಅಥವಾ ಬಳಕೆದಾರರು ತಪ್ಪಿ ಬೇರೆ ಯಾವುದಾದರೂ ಖಾತೆಗೆ ಹಣವನ್ನು ವರ್ಗಾಯಿಸಿದಲ್ಲಿ ಹಣವನ್ನು ಮರಳಿ ಪಡೆಯುವ ಅಕವಾಶವೇ ಈ ವ್ಯವಸ್ಥೆಯಲ್ಲಿ ಇಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು