ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ –ಅಗಲ: ರೈಟ್-ಆಫ್‌ ಆದ ₹14.56 ಲಕ್ಷ ಕೋಟಿ ಸಾಲ ಏನಾಯಿತು..?
ಆಳ –ಅಗಲ: ರೈಟ್-ಆಫ್‌ ಆದ ₹14.56 ಲಕ್ಷ ಕೋಟಿ ಸಾಲ ಏನಾಯಿತು..?
ಮೋದಿ ಆಡಳಿತದ ಒಂಬತ್ತು ವರ್ಷ
Published 21 ಡಿಸೆಂಬರ್ 2023, 23:30 IST
Last Updated 21 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರವು ಸಿರಿವಂತರ ಸಾಲಗಳನ್ನು ಮನ್ನಾ ಮಾಡುತ್ತಲೇ ಇದೆ. ಇದರಿಂದ ಬಡವರಿಗೆ ಹೊರೆಯಾಗುತ್ತಿದೆ ಎಂದು ವಿರೋಧ ಪಕ್ಷಗಳ ನಾಯಕರು ಆರೋಪಿಸುತ್ತಲೇ ಇದ್ದಾರೆ. ಈ ಆರೋಪವನ್ನು ಸರ್ಕಾರ ನಿರಾಕರಿಸುತ್ತಲೇ ಇದೆ. ‘ನಾವು ಸಾಲ ಮನ್ನಾ ಮಾಡಿಲ್ಲ. ಬದಲಿಗೆ ವಸೂಲಾಗದ ಸಾಲವನ್ನು ರೈಟ್‌ ಆಫ್‌ ಮಾಡಲಾಗಿದೆ. ಅವನ್ನು ವಸೂಲಿ ಮಾಡಲಾಗುತ್ತದೆ. ಈ ಕ್ರಮದಿಂದ ಬ್ಯಾಂಕ್‌ಗಳ ವಸೂಲಾಗದ ಸಾಲದ ಪ್ರಮಾಣ ಇಳಿಕೆಯಾಗುತ್ತಿದೆ’ ಎಂದು ಸರ್ಕಾರ ಹೇಳುತ್ತಿದೆ. ಆದರೆ, ರೈಟ್‌ ಆಫ್‌ ಮಾಡಲಾದ ಸಾಲಗಳು ನಿರೀಕ್ಷಿತ ಮಟ್ಟದಲ್ಲಿ ವಸೂಲಿ ಆಗುತ್ತಿಲ್ಲ

*****

ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಒಂಬತ್ತು ವರ್ಷಗಳಲ್ಲಿ ದೇಶದ ಎಲ್ಲಾ ಬ್ಯಾಂಕ್‌ಗಳು ಒಟ್ಟು ₹14.56 ಲಕ್ಷ ಕೋಟಿ ಮೊತ್ತದಷ್ಟು ಸಾಲವನ್ನು ರೈಟ್‌–ಆಫ್‌ ಮಾಡಿವೆ. ಅಂದರೆ ವಸೂಲಾಗದ ಸಾಲದಲ್ಲಿ ಇಷ್ಟು ಮೊತ್ತದಷ್ಟು ಸಾಲಗಳನ್ನು ತಮ್ಮ ಬ್ಯಾಲೆನ್ಸ್‌ಶೀಟ್‌ನಿಂದ ಹೊರಗಿಟ್ಟಿವೆ. 2014–15ಕ್ಕೆ ಹೋಲಿಸಿದರೆ ಹೀಗೆ ರೈಟ್‌–ಆಫ್‌ ಮಾಡಲಾದ ಸಾಲದ ಮೊತ್ತ ಪ್ರತಿ ವರ್ಷ ಏರಿಕೆಯಾಗುತ್ತಲೇ ಇದೆ. 

ವಿರೋಧ ಪಕ್ಷಗಳು ಇದನ್ನು ಸಾಲ ಮನ್ನಾ ಎಂದೇ ಕರೆಯುತ್ತಿವೆ. ಈ ಬಗ್ಗೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಸಂಸದರು ಹಲವು ಬಾರಿ ಪ್ರಶ್ನೆಗಳನ್ನು ಕೇಳಿದ್ದಾರೆ. ‘ಇದು ಸಾಲ ಮನ್ನಾ ಅಲ್ಲ. ಇದರಿಂದ ಸರ್ಕಾರಕ್ಕೆ ಯಾವುದೇ ಹೊರೆಯಾಗುವುದಿಲ್ಲ’ ಎಂದೇ ಹಣಕಾಸು ಸಚಿವಾಲಯವು ಈ ಪ್ರಶ್ನೆಗಳಿಗೆ ಉತ್ತರಿಸಿದೆ. ಹಾಗಿದ್ದಲ್ಲಿ ಇಷ್ಟು ದೊಡ್ಡ ಮೊತ್ತದ ವಸೂಲಾಗದ ಸಾಲಗಳು ಏನಾದವು ಎಂದು ಪ್ರಶ್ನಿಸಿದರೆ, ಅವುಗಳನ್ನು ವಸೂಲಿ ಮಾಡಲಾಗುತ್ತದೆ ಎಂದಷ್ಟೇ ಹಣಕಾಸು ಸಚಿವಾಲಯ ಹೇಳುತ್ತದೆ.

ರೈಟ್‌–ಆಫ್‌ ಮತ್ತು ಸಾಲ ಮನ್ನಾದ ಮಧ್ಯೆ ವ್ಯತ್ಯಾಸವಿದೆ. ಸಾಲ ಮನ್ನಾ ಎಂದರೆ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವುದು. ರೈಟ್‌–ಆಫ್‌ ಅಂದರೆ ಬ್ಯಾಂಕ್‌ಗಳು ತಮ್ಮ ಬ್ಯಾಲೆನ್ಸ್‌ಶೀಟ್‌ನಿಂದ ವಸೂಲಾಗದ ಸಾಲವನ್ನು ಹೊರಗೆ ಇಡುವುದು. ಹೀಗೆ ರೈಟ್‌–ಆಫ್‌ ಆದ ಸಾಲವನ್ನು ಬ್ಯಾಂಕ್‌ಗಳು ನಷ್ಟ ಎಂದು ನಮೂದಿಸಿಕೊಳ್ಳುತ್ತವೆ. ಬ್ಯಾಂಕ್‌ಗಳಿಗೆ ಆದ ನಷ್ಟವು ಗ್ರಾಹಕರಿಗೆ ಆದ ನಷ್ಟವೇ ಆಗಿದೆ. ಹೀಗೆ ವಸೂಲಾಗದ ಸಾಲಗಳನ್ನು ರೈಟ್‌–ಆಫ್‌ ಮಾಡಿದರೂ, ಅವುಗಳನ್ನು ಬ್ಯಾಂಕ್‌ಗಳು ವಸೂಲಿ ಮಾಡಬಹುದು. ಈ ರೀತಿ ವಸೂಲಿ ಮಾಡಲಾದ ರೈಟ್‌–ಆಫ್‌ ಸಾಲಗಳನ್ನು ಬ್ಯಾಂಕ್‌ನ ಆದಾಯಕ್ಕೆ ಸೇರಿಸಲಾಗುತ್ತದೆ. ಆ ಸಾಲ ವಸೂಲಿ ಆಗದೇ ಇದ್ದರೆ ಅದು ಅಂತಿಮವಾಗಿ ನಷ್ಟವೇ ಸರಿ. ಹೀಗಾಗಿಯೇ ವಿರೋಧ ಪಕ್ಷಗಳು ರೈಟ್‌–ಆಫ್‌ ಅನ್ನು ಸಾಲ ಮನ್ನಾ ಎಂದೇ ಕರೆಯುತ್ತಿವೆ.

ಆದರೆ ಕೇಂದ್ರ ಹಣಕಾಸು ಸಚಿವಾಲಯವು ನಾವು ಈ ಸಾಲಗಳನ್ನು ವಸೂಲಿ ಮಾಡದೇ ಬಿಡುವುದಿಲ್ಲ ಎಂದು ಹೇಳುತ್ತಲೇ ಇದೆ. ಆದರೆ ವಸೂಲಿ ಮಾಡಿದ ರೈಟ್‌–ಆಫ್‌ ಸಾಲದ ಮೊತ್ತ ಮತ್ತು ಪ್ರಮಾಣ ಮಾತ್ರ ಆಶಾದಾಯಕವಾಗಿ ಇಲ್ಲ. 2014–25ನೇ ಸಾಲಿನಿಂದ 2022–23ನೇ ಸಾಲಿನ ಅಂತ್ಯದವರೆಗೆ ಸರ್ಕಾರಿ ಸ್ವಾಮ್ಯದ ವಾಣಿಜ್ಯ ಬ್ಯಾಂಕ್‌ಗಳು ಒಟ್ಟು ₹10.42 ಲಕ್ಷ ಕೋಟಿ ಮೊತ್ತದಷ್ಟು ಸಾಲಗಳನ್ನು ರೈಟ್‌–ಆಫ್‌ ಮಾಡಿವೆ. ಆದರೆ ಇದೇ ಅವಧಿಯಲ್ಲಿ ಈ ಬ್ಯಾಂಕ್‌ಗಳು ವಸೂಲಿ ಮಾಡಿದ ರೈಟ್‌–ಆಫ್‌ ಸಾಲಗಳ ಮೊತ್ತ ₹1.61 ಲಕ್ಷ ಕೋಟಿ ಮಾತ್ರ. ಈ ಅವಧಿಯಲ್ಲಿ ಸರ್ಕಾರಿ ಬ್ಯಾಂಕುಗಳು ರೈಟ್‌–ಆಫ್‌ ಮಾಡಿದ ಒಟ್ಟು ಸಾಲದಲ್ಲಿ ವಸೂಲಾಗಿದ್ದು ಶೇ 15ರಷ್ಟು ಮಾತ್ರ. ಸರ್ಕಾರಿ ಬ್ಯಾಂಕ್‌ಗಳು ರೈಟ್‌–ಆಫ್‌ ಮಾಡಿದ ಸಾಲದಲ್ಲಿ ಇನ್ನೂ ₹8.81 ಲಕ್ಷ ಕೋಟಿಯಷ್ಟು ವಸೂಲಾಗದೇ ಉಳಿದಿದೆ. ಅದರ ಹೊರೆಯನ್ನು ಬ್ಯಾಂಕ್‌ಗಳು, ಅಂತಿಮವಾಗಿ ಸಾಮಾನ್ಯ ಗ್ರಾಹಕರು ಹೊರಬೇಕಾಗಿದೆ.

ದೊಡ್ಡ ಉದ್ಯಮ, ಉದ್ಯಮಿಗಳ ರೈಟ್‌–ಆಫ್‌ ಸಾಲದ ಮೊತ್ತ ₹7.49 ಲಕ್ಷ ಕೋಟಿ

ಈ ಒಂಬತ್ತು ವರ್ಷಗಳಲ್ಲಿ ರೈಟ್‌–ಆಫ್‌ ಮಾಡಲಾದ ಸಾಲಗಳ ಫಲಾನುಭವಿಗಳು ಯಾರು ಎಂದು ವಿರೋಧ ಪಕ್ಷಗಳ ಸಂಸದರು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಹಲವು ಬಾರಿ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದಾರೆ. ಆದರೆ ಸರ್ಕಾರ ಮಾತ್ರ ಆ ಪ್ರಶ್ನೆಗಳಿಗೆ ಉತ್ತರ ನೀಡುತ್ತಿಲ್ಲ. ಯಾರ ಸಾಲವನ್ನು ರೈಟ್‌–ಆಫ್‌ ಮಾಡಲಾಗಿದೆ ಎಂಬುದರ ದಾಖಲೆಯನ್ನು ನಿರ್ವಹಿಸುತ್ತಿಲ್ಲ ಎಂದೇ ಸರ್ಕಾರ ಹೇಳುತ್ತಿದೆ. ಆದರೆ ಅತಿಹೆಚ್ಚು ಸಾಲಗಳು ರೈಟ್‌–ಆಫ್‌ ಆದದ್ದು ದೊಡ್ಡ–ದೊಡ್ಡ ಉದ್ಯಮ ಸಂಸ್ಥೆಗಳದ್ದು ಎಂದು ಸರ್ಕಾರವೇ ಒಪ್ಪಿಕೊಂಡಿದೆ.

2014–15ರಿಂದ 2022–23ರ ನಡುವೆ ಎಲ್ಲಾ ವಾಣಿಜ್ಯ ಬ್ಯಾಂಕ್‌ಗಳು ರೈಟ್‌–ಆಫ್‌ ಮಾಡಿದ 
₹14.56 ಲಕ್ಷ ಕೋಟಿ ಮೊತ್ತದ ಸಾಲದಲ್ಲಿ ದೊಡ್ಡ–ದೊಡ್ಡ ಉದ್ಯಮ ಸಂಸ್ಥೆಗಳ ಸಾಲದ ಮೊತ್ತ
₹7.49 ಲಕ್ಷ ಕೋಟಿಯಷ್ಟಾಗುತ್ತದೆ.

ಯಾವ ಉದ್ಯಮ ಸಂಸ್ಥೆಗಳು ಮತ್ತು ಯಾವ ಉದ್ಯಮಿಯ ಸಾಲಗಳು ರೈಟ್‌–ಆಫ್‌ ಆಗಿವೆ ಎಂದು ಕೇಳಲಾದ ಪ್ರಶ್ನೆಗೂ ಹಣಕಾಸು ಸಚಿವಾಲಯವು ವಿವರಗಳನ್ನು ಒದಗಿಸಿಲ್ಲ. ಬದಲಿಗೆ ‘ಆರ್‌ಬಿಐನ ನಿಯಮಗಳ ಪ್ರಕಾರ ಸಾಲಗಾರರ ಮಾಹಿತಿಯನ್ನು ಬಹಿರಂಗಪಡಿಸುವಂತಿಲ್ಲ. ಹೀಗಾಗಿ ಈ ವಿವರಗಳನ್ನು ಒದಗಿಸಲು ಸಾಧ್ಯವಿಲ್ಲ’ ಎಂದೇ ಹಲವು ಬಾರಿ ಉತ್ತರಿಸಿದೆ.

ರೈಟ್‌–ಆಫ್‌ ಮಾಡಿದ ಸಾಲವನ್ನೂ ವಸೂಲಿ ಮಾಡುವುದರಿಂದ, ರೈಟ್‌–ಆಫ್‌ ಮೂಲಕ ಯಾರಿಗೂ ಲಾಭ ಮಾಡಿಕೊಟ್ಟಂತೆ ಆಗುವುದಿಲ್ಲ. ಇದರಿಂದ ಸರ್ಕಾರಕ್ಕೇನೂ ಹೊರೆಯಾಗುವುದಿಲ್ಲ ಎಂದು ಹಣಕಾಸು ಸಚಿವಾಲಯ ಹಲವು ಬಾರಿ ಉತ್ತರ ನೀಡಿದೆ. ಆದರೆ ರೈಟ್‌–ಆಫ್‌ ಮಾಡಿದ ಸಾಲಗಳು ವಸೂಲಿ ಆಗದೇ ಇರುವುದರಿಂದ ಅಂತಿಮವಾಗಿ ಸಾಲಗಾರರಿಗೆ ಅನುಕೂಲವೇ ಆಗಿದೆ. ಅದರಲ್ಲೂ ದೊಡ್ಡ ಉದ್ಯಮ ಸಂಸ್ಥೆಗಳಿಗೆ ಲಾಭವೇ ಆಗಿದೆ ಎಂಬುದು ವಿರೋಧ ಪಕ್ಷಗಳ ಆರೋಪ.

ಎನ್‌ಪಿಎ ನಿಜಕ್ಕೂ ಇಳಿಯುತ್ತಿದೆಯೇ?

ಬ್ಯಾಂಕ್‌ಗಳು ವಸೂಲಾಗದ ಸಾಲಗಳನ್ನು ಎನ್‌ಪಿಎ (ನಾನ್‌ ಪರ್ಫಾರ್ಮಿಂಗ್‌ ಅಸೆಟ್ಸ್‌) ಎಂದು ವರ್ಗೀಕರಿಸುತ್ತವೆ. ಈಚಿನ ಐದು ವರ್ಷಗಳಲ್ಲಿ ಬ್ಯಾಂಕ್‌ಗಳ ವಸೂಲಾಗದ ಸಾಲವು ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಹಣಕಾಸು ಸಚಿವಾಲಯವು ಸಂಸತ್ತಿನ ಇದೇ ಅಧಿವೇಶನದಲ್ಲಿ ಹೇಳಿದೆ. 2018–19ರಲ್ಲಿ ₹ 9.33 ಲಕ್ಷ ಕೋಟಿಯಷ್ಟಿದ್ದ ಎನ್‌ಪಿಎಯ ಮೊತ್ತ 2022–23ರಲ್ಲಿ ₹5.71 ಲಕ್ಷ ಕೋಟಿಗೆ ಇಳಿಕೆಯಾಗಿದೆ ಎಂದು ಸಚಿವಾಲಯವು ಇದೇ 19ರಂದು ರಾಜ್ಯಸಭೆಗೆ ನೀಡಿದ ಉತ್ತರದಲ್ಲಿ ವಿವರಿಸಿದೆ.

ಆದರೆ ಬ್ಯಾಂಕ್‌ಗಳ ಎನ್‌ಪಿಎ ನಿಜಕ್ಕೂ ಇಳಿಕೆಯಾಗಿದೆಯೇ ಎಂಬ ಪ್ರಶ್ನೆಗೆ ಸರಳ ಉತ್ತರ ದೊರೆಯುವುದಿಲ್ಲ. ಏಕೆಂದರೆ ಬ್ಯಾಂಕ್‌ಗಳು ವಸೂಲಾಗದ ಸಾಲಗಳನ್ನು (ಎನ್‌ಪಿಎ) ರೈಟ್‌–ಆಫ್‌ ಮಾಡುತ್ತಿವೆ. ಇದರಿಂದ ಒಂದೆಡೆ ಬ್ಯಾಂಕ್‌ಗಳ ಎನ್‌ಪಿಎ ಮೊತ್ತ ಇಳಿಕೆಯಾಗುತ್ತಿದ್ದರೆ, ಇನ್ನೊಂದೆಡೆ ಬ್ಯಾಂಕ್‌ಗಳ ರೈಟ್‌–ಆಫ್‌ ಸಾಲದ ಮೊತ್ತ ಏರಿಕೆಯಾಗುತ್ತಲೇ ಇದೆ. ಅಂದರೆ ವಾಸ್ತವದಲ್ಲಿ ಬ್ಯಾಂಕ್‌ಗಳ ಎನ್‌ಪಿಎಯನ್ನು ವಸೂಲಿ ಮಾಡಿದ್ದರಿಂದ ಅವುಗಳ ಪ್ರಮಾಣ ಕಡಿಮೆಯಾಗಿಲ್ಲ ಎಂಬುದನ್ನೇ ಈ ದತ್ತಾಂಶಗಳು ಹೇಳುತ್ತವೆ. ವಸೂಲಾಗದ ಸಾಲಗಳನ್ನು ನಿರ್ವಹಿಸಲು ‘ಬ್ಯಾಡ್‌ ಬ್ಯಾಂಕ್‌’ ಅನ್ನು ಸ್ಥಾಪಿಸುವುದಾಗಿ ಸರ್ಕಾರ ಹೇಳಿತ್ತು. ಅದರಂತೆ ಎನ್‌ಎಆರ್‌ಸಿಎಲ್‌ ಎಂಬ ಸಂಸ್ಥೆಯನ್ನು ಕೇಂದ್ರ ಸರ್ಕಾರ ಸ್ಥಾಪಿಸಿದೆ. ಬ್ಯಾಂಕ್‌ಗಳ ವಸೂಲಾಗದ ಸಾಲವನ್ನು ಎನ್‌ಎಆರ್‌ಸಿಎಲ್‌ ಖರೀದಿಸುತ್ತದೆ ಮತ್ತು ಅದನ್ನು ವಸೂಲಿ ಮಾಡಲು ಕ್ರಮ ತೆಗೆದುಕೊಳ್ಳುತ್ತದೆ. ಆದರೆ ಅಂತಹ ಸಾಲಗಳನ್ನು ಎನ್‌ಎಆರ್‌ಸಿಎಲ್‌ಗೆ ವರ್ಗಾಯಿಸುವಲ್ಲಿ ಹಲವು ತೊಡಕುಗಳು ಎದುರಾಗಿರುವ ಕಾರಣ ಬ್ಯಾಡ್‌ ಬ್ಯಾಂಕ್‌ ಸಹ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡುತ್ತಿಲ್ಲ.

ಒಟ್ಟಾರೆಯಾಗಿ ಈ ಒಂಬತ್ತು ವರ್ಷಗಳಲ್ಲಿ ಎಲ್ಲಾ ಬ್ಯಾಂಕ್‌ಗಳು ರೈಟ್‌–ಆಫ್‌ ಮಾಡಿದ ಸಾಲದ ಮೊತ್ತವನ್ನೂ ಪರಿಗಣಿಸಿದರೆ, ಒಟ್ಟು ಎನ್‌ಪಿಎಯ ಮೊತ್ತ ₹20.23 ಲಕ್ಷ ಕೋಟಿಯಷ್ಟಾಗುತ್ತದೆ. ಬ್ಯಾಡ್‌ ಬ್ಯಾಂಕ್‌ಗೆ ವರ್ಗಾಯಿಸಲಾದ ಎನ್‌ಪಿಎಗಳನ್ನೂ ಒಗ್ಗೂಡಿಸಿದರೆ ಈ ಮೊತ್ತ ಇನ್ನಷ್ಟು ಹೆಚ್ಚಾಗುತ್ತದೆ.

ಆಧಾರ: ಲೋಕಸಭೆ ಮತ್ತು ರಾಜ್ಯಸಭೆಗೆ ಹಣಕಾಸು ಸಚಿವಾಲಯವು ನೀಡಿದ ಉತ್ತರಗಳು, ಹಣಕಾಸು ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ 68ನೇ ವರದಿ, ಆರ್‌ಬಿಐನ ವಾರ್ಷಿಕ ವರದಿ, ಕೇಂದ್ರ ಸರ್ಕಾರದ ಓಪನ್‌ಡಾಟಾ.ಒಆರ್‌ಜಿ ದತ್ತಾಂಶಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT