ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ-ಅಗಲ | ನೂತನ ಸಂಸತ್‌ ಭವನ ಯಾರು ಉದ್ಘಾಟಿಸಬೇಕು?
ಆಳ-ಅಗಲ | ನೂತನ ಸಂಸತ್‌ ಭವನ ಯಾರು ಉದ್ಘಾಟಿಸಬೇಕು?
Published 24 ಮೇ 2023, 23:20 IST
Last Updated 24 ಮೇ 2023, 23:20 IST
ಅಕ್ಷರ ಗಾತ್ರ

ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಆದರೆ, ದೇಶದ ಮೊದಲ ಪ್ರಜೆಯಾದ ಮತ್ತು ಸಂಸತ್ತಿನ ಮುಖ್ಯಸ್ಥರಾದ ರಾಷ್ಟ್ರಪತಿ ಅವರು ನೂತನ ಸಂಸತ್ ಭವನವನ್ನು ಉದ್ಘಾಟಿಸಬೇಕಿತ್ತು. ರಾಷ್ಟ್ರಪತಿ ಅವರನ್ನು ಇದರಿಂದ ಹೊರಗೆ ಇಡುವ ಮೂಲಕ ಮೋದಿ ಸರ್ಕಾರವು ಸಂವಿಧಾನಕ್ಕೆ ಮತ್ತು ರಾಷ್ಟ್ರಪತಿಗೆ ಅವಮಾನ ಮಾಡುತ್ತಿದೆ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿವೆ. ಬಿಜೆಪಿ ಅಧಿಕೃತವಾಗಿ ಈ ಬಗ್ಗೆ ಏನೂ ಹೇಳುತ್ತಿಲ್ಲ. ಆದರೆ, ರಾಷ್ಟ್ರಪತಿಯೇ ಸಂಸತ್ತಿನ ನೂತನ ಕಟ್ಟಡವನ್ನು ಉದ್ಘಾಟಿಸಬೇಕು ಎಂಬುದು ಸಂವಿಧಾನ ತಜ್ಞರ ಅಭಿಪ್ರಾಯವೂ ಹೌದು

ನೂತನವಾಗಿ ನಿರ್ಮಿಸಲಾಗಿರುವ ಸಂಸತ್ ಭವನವನ್ನು ಇದೇ ಭಾನುವಾರ, ಮೇ 28ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ ಎಂದು ಸಂಸತ್ತಿನ ಕಾರ್ಯಾಯಲವು ಹೇಳಿದೆ. ಈ ಸಂಬಂಧ ಎಲ್ಲಾ ಎಲ್ಲಾ ಸಂಸದರಿಗೆ ವಾಟ್ಸ್‌ಆ್ಯಪ್‌ ಮೂಲಕ ಆಹ್ವಾನ ಪತ್ರಿಕೆಯನ್ನು ಕಳುಹಿಸಲಾಗಿದೆ. ಈ ಆಹ್ವಾನ ಪತ್ರಿಕೆಯಲ್ಲಿ ರಾಷ್ಟ್ರಪತಿಯ ಹೆಸರಿಲ್ಲ. ರಾಷ್ಟ್ರಪತಿಯ ಹೆಸರು ಇಲ್ಲದೇ ಇರುವುದಕ್ಕೆ ಮತ್ತು ರಾಷ್ಟ್ರಪತಿ ಅವರನ್ನು ಹೊರಗೆ ಇಟ್ಟು, ಪ್ರಧಾನಿಯೇ ನೂತನ ಸಂಸತ್ ಭವನವನ್ನು ಉದ್ಘಾಟಿಸುತ್ತಿರುವುದಕ್ಕೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ದಾಖಲಿಸಿವೆ.

ರಾಷ್ಟ್ರಪತಿಯವರು ಸಂಸತ್ತಿನ ಮುಖ್ಯಸ್ಥರು. ಆ ಪ್ರಕಾರವಾಗಿ ರಾಷ್ಟ್ರಪತಿಯೇ ನೂತನ ಸಂಸತ್ ಭವನವನ್ನು ಉದ್ಘಾಟಿಸಬೇಕು. ಆದರೆ, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುತ್ತಿದ್ದಾರೆ. ಈ ಮೂಲಕ ಅವರು ರಾಷ್ಟ್ರಪತಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಹೇಳಿವೆ. ಬಿಜೆಪಿ ಮತ್ತು ಮೋದಿ ಅವರು ಪದೇ ಪದೇ ರಾಷ್ಟ್ರಪತಿಯನ್ನು ಕಡೆಗಣಿಸುತ್ತಿದ್ದಾರೆ ಎಂದು ಎಲ್ಲಾ ವಿರೋಧ ಪಕ್ಷಗಳು ಆರೋಪಿಸಿವೆ. ರಾಷ್ಟ್ರಪತಿಯನ್ನು ಮೋದಿ ಸರ್ಕಾರವು ಕಡೆಗಣಿಸಿದ ಮತ್ತು ಅಪಮಾನಿಸಿದ ಹಲವು ಘಟನೆಗಳನ್ನು ವಿರೋಧ ಪಕ್ಷಗಳು ಪಟ್ಟಿ ಮಾಡಿವೆ.

ದೆಹಲಿಯಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಯುದ್ಧಸ್ಮಾರಕವನ್ನು ಪ್ರಧಾನಿ ಮೋದಿಯೇ 2019ರ ಫೆಬ್ರುವರಿ 25ರಂದು ಉದ್ಘಾಟಿಸಿದ್ದರು. ಸಂವಿಧಾನದ ಪ್ರಕಾರ, ದೇಶದ ಮೂರೂ ಸೇನಾಪಡೆಗಳ ಮುಖ್ಯಸ್ಥ ರಾಷ್ಟ್ರಪತಿಯೇ ಆಗಿರುತ್ತಾರೆ. ಸೈನಿಕರಿಗೆ ವಿವಿಧ ಪದಕಗಳನ್ನು ಪ್ರಧಾನ ಮಾಡುವುದು ರಾಷ್ಟ್ರಪತಿಯೇ. ಆದರೆ, ಆಗ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರನ್ನು ಹೊರಗೆ ಇಟ್ಟು, ಪ್ರಧಾನಿ ನರೇಂದ್ರ ಮೋದಿ ಅವರು ಯುದ್ಧ ಸ್ಮಾರಕವನ್ನು ಉದ್ಘಾಟಿಸಿದ್ದರು. ನೂತನ ಸಂಸತ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವಾಗಲೂ ರಾಷ್ಟ್ರಪತಿಯನ್ನು ಮೋದಿ ಸರ್ಕಾರ ಕಡೆಗಣಿಸಿತ್ತು. ಪ್ರಧಾನಿಯೇ ಶಂಕುಸ್ಥಾಪನೆ ನೆರವೇರಿಸಿದ್ದರು. ಆ ಮೂಲಕ ರಾಷ್ಟ್ರಪತಿಗೆ ಅಪಮಾನ ಮಾಡಿದ್ದರು ಎಂದು ವಿರೋಧ ಪಕ್ಷಗಳು ಟೀಕಿಸಿವೆ.

ಹಿಂದಿನ ರಾಷ್ಟ್ರಪತಿ ಕೋವಿಂದ್‌ ಮತ್ತು ಈಗಿನ ರಾಷ್ಟ್ರಪತಿ ಮುರ್ಮು ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದವರು. ದಲಿತ ಮತ್ತು ಬುಡಕಟ್ಟು ಸಮುದಾಯದವರನ್ನು ಮೋದಿ ಸರ್ಕಾರವು ಕೇವಲ ಮತಕ್ಕಾಗಿ ಬಳಸಿಕೊಳ್ಳುತ್ತಿದೆ. ಸಂವಿಧಾನಬದ್ಧವಾಗಿ ಅವರು ಉದ್ಘಾಟಿಸಬೇಕಿದ್ದ ನಿರ್ಮಾಣಗಳನ್ನು ಮೋದಿ ಅವರು ಉದ್ಘಾಟಿಸಿ, ಆ ಸಮುದಾಯಗಳಿಗೆ ಅಪಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಟೀಕಿಸಿದೆ.

ಆಧಾರ: ಭಾರತ ಸಂವಿಧಾನ, ಪಿಟಿಐ, ರಾಜಕೀಯ ಪಕ್ಷಗಳ ಅಧಿಕೃತ ಟ್ವೀಟ್‌ಗಳು

ಪ್ರಧಾನಿ ನರೇಂದ್ರ ಮೋದಿ ಅವರು 2020ರ ಡಿಸೆಂಬರ್ 10ರಂದು ನೂತನ ಸಂಸತ್ ಭವನ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ್ದರು
ಪ್ರಧಾನಿ ನರೇಂದ್ರ ಮೋದಿ ಅವರು 2020ರ ಡಿಸೆಂಬರ್ 10ರಂದು ನೂತನ ಸಂಸತ್ ಭವನ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ್ದರು

ರಾಷ್ಟ್ರಪತಿಯೇ ಕಾರ್ಯಾಂಗದ ಮುಖ್ಯಸ್ಥ

ರಾಷ್ಟ್ರಪತಿಯೇ ಕಾರ್ಯಾಂಗದ ಮುಖ್ಯಸ್ಥ. ಕಾರ್ಯಾಂಗವಾದ ಸಂಸತ್ತು ರಾಷ್ಟ್ರಪತಿ ಮತ್ತು ರಾಜ್ಯಸಭೆ ಹಾಗೂ ಲೋಕಸಭೆಗಳನ್ನು ಒಳಗೊಂಡಿರಬೇಕು ಎಂದು ಸಂವಿಧಾನವು ವಿವರಿಸಿದೆ. ರಾಷ್ಟ್ರಪತಿಯ ಅಧಿಕಾರ ಮತ್ತು ರಾಷ್ಟ್ರಪತಿಗೆ ಸಂಬಂಧಿಸಿದಂತೆ ಪ್ರಧಾನಿ ಹಾಗೂ ಮಂತ್ರಿಮಂಡಲದ ಕರ್ತವ್ಯಗಳನ್ನೂ ಸಂವಿಧಾನದ ವಿವಿಧ ವಿಧಿಗಳಲ್ಲಿ ವಿವರಿಸಲಾಗಿದೆ. ರಾಷ್ಟ್ರಪತಿಯೇ ಸಂಸತ್ತು/ಕಾರ್ಯಾಂಗದ ಮುಖ್ಯಸ್ಥ ಎಂದು ಈ ವಿಧಿಗಳು ವಿವರಿಸುತ್ತವೆ. 77ನೇ ವಿಧಿ ಭಾರತ ಸರ್ಕಾರದ ವ್ಯವಹಾರ ನಿರ್ವಹಣೆ: ‘ಭಾರತ ಸರ್ಕಾರದ ಎಲ್ಲ ಕಾರ್ಯಾಂಗದ ಸಮಸ್ತ ಕಾರ್ಯವು ರಾಷ್ಟ್ರಪತಿಯ ಹೆಸರಿನಲ್ಲಿ ನಡೆಯಬೇಕು’ ಎಂದು 77ನೇ (1) ವಿಧಿಯಲ್ಲಿ ವಿವರಿಸಲಾಗಿದೆ. 78ನೇ ವಿಧಿ ರಾಷ್ಟ್ರಪತಿಗೆ ಮಾಹಿತಿ ನೀಡುವ ಬಗ್ಗೆ ಪ್ರಧಾನಿ ಕರ್ತವ್ಯಗಳು: ಮಂತ್ರಿಮಂಡಲದ ತೀರ್ಮಾನಗಳು ಕಾನೂನು ರಚನೆ ಪ್ರಸ್ತಾವಗಳು ರಾಷ್ಟ್ರಪತಿ ಕೇಳುವ ಮಾಹಿತಿಗಳನ್ನು ಒದಗಿಸುವುದು ಮತ್ತು ರಾಷ್ಟ್ರಪತಿ ಸೂಚಿಸಿದ ವಿಷಯವನ್ನು ಪರಾಮರ್ಶಿಸುವಂತೆ ಮಂತ್ರಿಮಂಡಲಕ್ಕೆ ಸೂಚಿಸುವುದು ಪ್ರಧಾನಿಯ ಕರ್ತವ್ಯ ಎಂದು ಈ ವಿಧಿಯ ಮೂರು ಉಪವಿಧಿಗಳಲ್ಲಿ ವಿವರಿಸಲಾಗಿದೆ.

79ನೇ ವಿಧಿ ಸಂಸತ್ತಿನ ರಚನೆ: ‘ಭಾರತ ಒಕ್ಕೂಟವು ಒಂದು ಸಂಸತ್ತನ್ನು ಹೊಂದಿರಬೇಕು. ಸಂಸತ್ತು ರಾಷ್ಟ್ರಪತಿ ಮತ್ತು ಅನುಕ್ರಮವಾಗಿ ರಾಜ್ಯಸಭೆ ಲೋಕಸಭೆಯನ್ನು ಹೊಂದಿರಬೇಕು’ ಎಂದು ಈ ವಿಧಿಯ 1ನೇ ಉಪವಿಧಿಯಲ್ಲಿ ವಿವರಿಸಲಾಗಿದೆ. 86ನೇ ವಿಧಿ ಉಭಯ ಸದನಗಳಲ್ಲಿ ಭಾಷಣ ಮಾಡುವ ಮತ್ತು ಸಂದೇಶ ನೀಡುವುದು ರಾಷ್ಟ್ರಪತಿಯ ಹಕ್ಕು: ಸಂಸತ್ತಿನ ಯಾವುದೇ ಒಂದು ಸದನ ಅಥವಾ ಉಭಯ ಸದನಗಳ ಜಂಟಿ ಅಧಿವೇಶನ ಕರೆದು ಆ ಸದನವನ್ನು ಉದ್ದೇಶಿಸಿ ಭಾಷಣ ಮಾಡುವ ಹಕ್ಕು ರಾಷ್ಟ್ರಪತಿಯದ್ದು ಎಂದು ಈ ವಿಧಿಯ 1ನೇ ಉಪವಿಧಿ ಹೇಳುತ್ತದೆ.  ಸಂಸತ್ತಿನಲ್ಲಿ ಇತ್ಯರ್ಥವಾಗದೇ ಇರುವ ಮಸೂದೆಗಳಿಗೆ ಸಂಬಂಧಿಸಿದಂತೆ ಪರಾಮರ್ಶೆ ನಡೆಸುವಂತೆ ಯಾವುದೇ ಸದನಕ್ಕೂ ಸಂದೇಶ ಕಳುಹಿಸುವ ಹಕ್ಕು ರಾಷ್ಟ್ರಪತಿಗೆ ಇದೆ ಎಂದು ಈ ವಿಧಿಯ 2ನೇ ಉಪವಿಧಿಯಲ್ಲಿ ವಿವರಿಸಲಾಗಿದೆ.

87ನೇ ವಿಧಿ ವಿಶೇಷ ಭಾಷಣ: ನೂತನ ಲೋಕಸಭೆ ರಚನೆಯಾದ ನಂತರ ಮೊದಲ ಅಧಿವೇಶನದಲ್ಲಿ ಹಾಗೂ ಪ್ರತಿ ವರ್ಷದ ಮೊದಲ ಅಧಿವೇಶನದ ಸಂದರ್ಭದಲ್ಲಿ ಉಭಯ ಸದನಗಳನ್ನು ಒಳಗೊಂಡ ಜಂಟಿ ಅಧಿವೇಶನ ಕರೆಯುವ ಮತ್ತು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣಮಾಡುವ ಅಧಿಕಾರ ರಾಷ್ಟ್ರಪತಿಗೆ ಇದೆ ಎಂದು ಈ ವಿಧಿಯ 1ನೇ ಉಪವಿಧಿಯಲ್ಲಿ ವಿವರಿಸಲಾಗಿದೆ. 111ನೇ ವಿಧಿ ಮಸೂದೆಗಳಿಗೆ ಅಂಕಿತ ಹಾಕುವ ಅಧಿಕಾರ: ಸಂಸತ್ತಿನ ಉಭಯ ಸದನಗಳಲ್ಲಿ ಅನುಮೋದನೆ ಪಡೆದ ಮಸೂದೆಗಳಿಗೆ ಅಂಕಿತ ಹಾಕುವ ಅಥವಾ ಅದನ್ನು ತಡೆಹಿಡಿಯುವ ಮತ್ತು ಪರಾಮರ್ಶನೆಗೆ ಕಳುಹಿಸುವ ಅಧಿಕಾರ ರಾಷ್ಟ್ರಪತಿಗೆ ಇದೆ ಎಂದು ಈ ವಿಧಿಯಲ್ಲಿ ವಿವರಿಸಲಾಗಿದೆ.

ತರಹೇವಾರಿ ಮಾದರಿ

ಈಗಿನ ಸಂಸತ್ ಭವನವು ಬ್ರಿಟಿಷರ ಆಳ್ವಿಕೆಯಲ್ಲಿ ಉದ್ಘಾಟನೆಯಾಗಿತ್ತು. ಸ್ವತಂತ್ರ ಭಾರತದಲ್ಲಿ ಸಂಸತ್ ಭವನವನ್ನು ಉದ್ಘಾಟಿಸುವ ಪ್ರಮೇಯವೇ ಬಂದಿರಲಿಲ್ಲ. ಆದರೆ ದೇಶದ ವಿವಿಧ ರಾಜ್ಯಗಳ ವಿಧಾನಸಭೆಯ ಕಟ್ಟಡಗಳನ್ನು ಕೆಲವೊಮ್ಮೆ ರಾಷ್ಟ್ರಪತಿ ಪ್ರಧಾನಿ ಉದ್ಘಾಟಿಸಿದ ಹಲವು ಉದಾಹರಣೆಗಳು ಇವೆ.

ಅನೆಕ್ಸ್ ಉದ್ಘಾಟಿಸಿದ್ದ ಇಂದಿರಾ

ದೆಹಲಿಯಲ್ಲಿ ಸಂಸತ್ ಭವನಕ್ಕೆ ಹೊಂದಿಕೊಂಡಂತೆ ಅನೆಕ್ಸ್ ಕಟ್ಟಡ ನಿರ್ಮಿಸಬೇಕು ಎಂಬ ಉದ್ದೇಶದಿಂದ 1970ರ ಆಗಸ್ಟ್‌ 3ರಂದು ಅಡಿಗಲ್ಲು ಹಾಕಲಾಗಿತ್ತು. ಅಂದಿನ ರಾಷ್ಟ್ರಪತಿಯಾಗಿದ್ದ ವಿ.ವಿ. ಗಿರಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಇದಾಗಿ ಐದು ವರ್ಷಗಳ ಅವಧಿಯಲ್ಲಿ ಅನೆಕ್ಸ್ ಕಟ್ಟಡ ನಿರ್ಮಾಣ ಪೂರ್ಣಗೊಂಡಿತು. ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ಅನೆಕ್ಸ್ ಕಟ್ಟಡವನ್ನು 1975ರಲ್ಲಿ ಉದ್ಘಾಟಿಸಿದ್ದರು. ಈ ಸಮಯದಲ್ಲಿ ಫಕ್ರುದ್ದೀನ್ ಅಲಿ ಅಹ್ಮದ್ ಅವರು ರಾಷ್ಟ್ರಪತಿಯಾಗಿದ್ದರು. ರಾಷ್ಟ್ರಪತಿ ವಿ.ವಿ ಗಿರಿ ಅವರು ಶಂಕುಸ್ಥಾಪನೆ ಮಾಡಿದ್ದ ಕಟ್ಟಡವನ್ನು ಪ್ರಧಾನಿ ಇಂದಿರಾ ಅವರು ಉದ್ಘಾಟನೆ ಮಾಡಿ ಬಳಕೆಗೆ ಮುಕ್ತಗೊಳಿಸಿದ್ದರು. 

ಗ್ರಂಥಾಲಯಕ್ಕೆ ರಾಜೀವ್ ಅಡಿಗಲ್ಲು

ಇದೇ ಸಂಸತ್ ಭವನದ ಕಟ್ಟಡದಲ್ಲಿ ಗ್ರಂಥಾಲಯ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಯಿತು. ಪ್ರಧಾನಿ ರಾಜೀವ್ ಗಾಂಧಿ ಅವರು ಸಂಸತ್ ಭವನದಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ 1987ರಲ್ಲಿ ಚಾಲನೆ ನೀಡಿದ್ದರು. ಅವರು ಶಂಕುಸ್ಥಾಪನೆ ನೆರವೇರಿಸಿದ್ದ ಈ ಸಮಯದಲ್ಲಿ ಆರ್.ವೆಂಕಟರಾಮನ್ ಅವರು ಭಾರತದ ರಾಷ್ಟ್ರಪತಿ ಹುದ್ದೆಯಲ್ಲಿದ್ದರು. ಆದರೆ ಕಟ್ಟಡಕ್ಕೆ ಅಡಿಗಲ್ಲು ಹಾಕಿದ್ದು ಪ್ರಧಾನಿ ರಾಜೀವ್ ಗಾಂಧಿ. 

ಗ್ರಂಥಾಲಯ ಲೋಕಾರ್ಪಣೆ ಮಾಡಿದ್ದ ನಾರಾಯಣನ್

ಸಂಸತ್ ಭವನದಲ್ಲಿ ನೂತನವಾಗಿ ನಿರ್ಮಾಣವಾಗಿದ್ದ ಗ್ರಂಥಾಲಯವನ್ನು ಈಗ್ಗೆ 21 ವರ್ಷಗಳ ಹಿಂದೆ ಉದ್ಘಾಟಿಸಲಾಗಿತ್ತು. ಅಂದಿನ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರನ್ನು ಉದ್ಘಾಟನೆಗೆ ಆಹ್ವಾನಿಸಲಾಗಿತ್ತು. ಅವರು 2002ರ ಮೇ 7ರಂದು ಗ್ರಂಥಾಲಯ ಉದ್ಘಾಟಿಸಿದ್ದರು. ಪ್ರಧಾನಿ ರಾಜೀವ್ ಗಾಂಧಿ ಶಂಕುಸ್ಥಾಪನೆ ನೆರವೇರಿಸಿದ್ದ ಗ್ರಂಥಾಲಯವನನ್ನು ರಾಷ್ಟ್ರಪತಿ ಲೋಕಾರ್ಪಣೆ ಮಾಡಿದ್ದರು. 

ಸುವರ್ಣಸೌಧ ಉದ್ಘಾಟಿಸಿದ್ದ ಪ್ರಣವ್

ಕರ್ನಾಟಕದ ಬೆಳಗಾವಿಯಲ್ಲಿ ಹೊಸದಾಗಿ ಸುವರ್ಣ ವಿಧಾನಸೌಧ ಕಟ್ಟಡವನ್ನು ನಿರ್ಮಿಸಲಾಯಿತು. ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ರಾಷ್ಟ್ರಪತಿಯಾಗಿದ್ದ ಪ್ರಣವ್ ಮುಖರ್ಜಿ ಅವರನ್ನು ಕಟ್ಟಡ ಉದ್ಘಾಟನೆಗೆ ಆಹ್ವಾನಿಸಿದ್ದರು. 2012ರ ಅಕ್ಟೋಬರ್ 11ರಂದು ಕಟ್ಟಡ ಉದ್ಘಾಟಿಸಿದ್ದ ಅವರು ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಿದ್ದರು. 

ವಿಧಾನಸಭೆ ಕಟ್ಟಡ ಉದ್ಘಾಟಿಸಿದ್ದ ಮನಮೋಹನ್‌ ಸಿಂಗ್

2010ರಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರದಲ್ಲಿದ್ದ ಅವಧಿಯಲ್ಲಿ ವಿಧಾನಸಭೆಯ ಹೊಸ ಕಟ್ಟಡ ಉದ್ಘಾಟನೆಗೆ ಸಿದ್ಧವಾಗಿತ್ತು. ಅಂದು ಪ್ರಧಾನಿಯಾಗಿದ್ದ ಡಾ. ಮನಮೋಹನ್ ಸಿಂಗ್ ಅವರು ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಅವರ ಸಮ್ಮುಖದಲ್ಲಿ ತಮಿಳುನಾಡು ವಿಧಾನಸಭೆಯ ಹೊಸ ಕಟ್ಟಡ ಉದ್ಘಾಟಿಸಿದ್ದರು. ಆದರೆ ತೆಲಂಗಾಣದಲ್ಲಿ ನಿರ್ಮಾಣವಾದ ವಿಧಾನಸಭೆಯ ಹೊಸ ಕಟ್ಟಡ ಹಾಗೂ ಸಚಿವಾಲಯ ಕಟ್ಟಡಗಳನ್ನು ಅಲ್ಲಿನ ಮುಖ್ಯಮಂತ್ರಿ ಉದ್ಘಾಟಿಸಿದ್ದರು.

ವಿಧಾನಸೌಧ ಉದ್ಘಾಟನೆಯೇ ಆಗಿಲ್ಲ

ಕರ್ನಾಟಕದ ವಿಧಾನಸೌಧ ಉದ್ಘಾಟನೆಯೇ ಆಗಿಲ್ಲ ಎಂದು ಕನ್ನಡದ ದಿನಪತ್ರಿಕೆಯೊಂದರಲ್ಲಿ 2012ರ ಜೂನ್‌ 18ರಂದು ವಿಶೇಷ ವರದಿ ಪ್ರಕಟವಾಗಿತ್ತು. ವಿಧಾನಸೌಧ ನಿರ್ಮಾಣಕ್ಕೆ ಕೆಂಗಲ್‌ ಹನುಮಂತಯ್ಯನವರು ಅಡಿಗಲ್ಲು ಹಾಕಿದ್ದರೂ ಪೂರ್ಣಗೊಳ್ಳುವಷ್ಟರಲ್ಲಿ ಅಧಿಕಾರ ಕಳೆದುಕೊಂಡಿದ್ದರು. ನಂತರ ಮುಖ್ಯಮಂತ್ರಿ ಹುದ್ದೆಗೇರಿದ ಕಡಿದಾಳ್ ಮಂಜಪ್ಪ ಅವರು ಎರಡು ತಿಂಗಳು ಮತ್ತು 22 ದಿನ ಅಧಿಕಾರದಲ್ಲಿದ್ದರು. ಅಲ್ಪಾವಧಿಯಲ್ಲಿ ಆದ ಈ ಅಧಿಕಾರದ ಸ್ಥಿತ್ಯಂತರದ ಕಾರಣ ವಿಧಾನಸೌಧವನ್ನು ಅಧಿಕೃತವಾಗಿ ಉದ್ಘಾಟನೆ ಮಾಡಲೇ ಇಲ್ಲ. ವಿಧಾನಸೌಧ ಉದ್ಘಾಟನೆಗೆ ಸಂಬಂಧಿಸಿದಂತೆ ‘ಉದ್ಘಾಟನಾ ಶಿಲೆ’ ವಾರ್ತಾ ಇಲಾಖೆಯಲ್ಲಿ ವರದಿ ಮತ್ತು ಚಿತ್ರ ರಾಜ್ಯ ಪತ್ರಾಗಾರದಲ್ಲಿ ದಾಖಲೆಗಳು ಇಲ್ಲ.

‘ರಾಷ್ಟ್ರಪತಿಯೇ ಹೆಚ್ಚು ಅರ್ಹರು’

ನೂತನ ಸಂಸತ್ ಭವನ ಉದ್ಘಾಟಿಸಲು ಪ್ರಧಾನಿ ಸಜ್ಜಾಗಿದ್ದಾರೆ. ಆದರೆ ದೇಶದ ಸಂವಿಧಾನದ ಮುಖ್ಯಸ್ಥರಾಗಿರುವ ರಾಷ್ಟ್ರಪತಿಯವರು ಹೊಸ ಕಟ್ಟಡವನ್ನು ಉದ್ಘಾಟನೆ ಮಾಡುವುದು ಸೂಕ್ತ. ರಾಷ್ಟ್ರಪತಿ ಅವರು ಸಂಸತ್ತಿನ ಮುಖ್ಯಸ್ಥರು. ಲೋಕಸಭೆ ಹಾಗೂ ರಾಜ್ಯಸಭೆಗಳನ್ನು ಒಳಗೊಂಡಿರುವ ಸಂಸತ್ತು ರಾಷ್ಟ್ರಪತಿಯವರ ನೇತೃತ್ವದಲ್ಲೇ ಕೆಲಸ ಮಾಡುತ್ತದೆ. ಎರಡೂ ಸದನಗಳ ಕಾರ್ಯಕಲಾಪಗಳು ನಡೆಯುವ ಸಂಸತ್ ಭವನವು ರಾಷ್ಟ್ರಪತಿ ಅವರಿಂದ ಉದ್ಘಾಟನೆಗೊಂಡರೆ ಉತ್ತಮ.  ಸಂಸತ್ ಕಟ್ಟಡವನ್ನು ಯಾರು ಉದ್ಘಾಟನೆ ಮಾಡಬೇಕು ಎಂಬ ವಿಚಾರ ಸಂವಿಧಾನದಲ್ಲಿ ಪ್ರಸ್ತಾಪವಾಗಿಲ್ಲ.

ಈಗ ಕಾರ್ಯನಿರ್ವಹಿಸುತ್ತಿರುವ ಸಂಸತ್ ಕಟ್ಟಡವನ್ನು ಮೂವತ್ತರ ದಶಕದಲ್ಲಿ ಉದ್ಘಾಟನೆ ಮಾಡಲಾಗಿತ್ತು. ಆಗ ಭಾರತ ಇನ್ನೂ ಸ್ವತಂತ್ರಗೊಂಡಿರಲಿಲ್ಲ. ರಾಷ್ಟ್ರಪತಿ ಅಥವಾ ಪ್ರಧಾನಿ ಹೆಸರಿನ ಹುದ್ದೆಗಳೂ ಇರಲಿಲ್ಲ. ಬ್ರಿಟಿಷರ ಆಳ್ವಿಕೆ ಇದ್ದುದರಿಂದ ಯಾರು ಉದ್ಘಾಟನೆ ಮಾಡಬೇಕು ಎಂಬ ಪ್ರಶ್ನೆಯೇ ಆಗ ಉದ್ಭವಿಸಿರಲಿಲ್ಲ. ಈಗ ಈ ಚರ್ಚೆ ಶುರುವಾಗಿದೆ.  ಯಾರು ಉದ್ಘಾಟನೆ ಮಾಡಬೇಕು ಎಂಬ ವಿಚಾರವನ್ನು ಕಾನೂನಾತ್ಮಕವಾಗಿ ನೋಡುವುದಕ್ಕಿಂತ ಹೆಚ್ಚಾಗಿ ಅದನ್ನು ಒಂದು ತಾತ್ವಿಕ ವಿಚಾರ ಎಂಬ ದೃಷ್ಟಿಯಲ್ಲಿ ನೋಡಬೇಕು. ಹೊಸ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದ ಪ್ರಧಾನಿ ಅವರು ಹೊಸ ಕಟ್ಟಡ ನಿರ್ಮಾಣ ವಿಚಾರದಲ್ಲಿ ಅತ್ಯಂತ ಆಸಕ್ತಿ ತೋರಿಸಿದ್ದಾರೆ.

ಈ ದೃಷ್ಟಿಯಲ್ಲಿ ನೋಡಿದರೆ ಪ್ರಧಾನಿ ಅವರು ಉದ್ಘಾಟನೆ ಮಾಡಬೇಕು ಎಂಬ ವಾದ ಬಲಗೊಳ್ಳುತ್ತದೆ. ರಾಷ್ಟ್ರಪತಿ ಹಾಗೂ ಪ್ರಧಾನಿಯ ಪ್ರಾತಿನಿಧಿತ್ವ ವಿಚಾರದಲ್ಲೂ ಕೂಡಾ ಸಾಕಷ್ಟು ಭಿನ್ನತೆಯಿದೆ. ಲೋಕಸಭೆಯಲ್ಲಿ ಬಹುಮತ ಪಡೆದಿರುವ ಪಕ್ಷದ ನಾಯಕ ಪ್ರಧಾನಿಯಾಗಿ ಆಯ್ಕೆಯಾಗುತ್ತಾರೆ. ಆದರೆ ರಾಷ್ಟ್ರಪತಿಯವರು ರಾಜ್ಯ ಮತ್ತು ಕೇಂದ್ರದ ಎಲ್ಲ ಚುನಾಯಿತ ಸದಸ್ಯರಿಂದ ಆರಿಸಿಬರುತ್ತಾರೆ. ಈ ಅರ್ಥದಲ್ಲಿ ನೋಡಿದರೆ ರಾಷ್ಟ್ರಪತಿ ಅವರೇ ಇಡೀ ದೇಶದ ಪ್ರತಿನಿಧಿ.  ಪ್ರಧಾನಿ ಹುದ್ದೆಗಿಂತ ರಾಷ್ಟ್ರಪತಿ ಹುದ್ದೆ ಕಾಯಂ ಆದುದು. ಒಮ್ಮೆ ಚುನಾಯಿತರಾದ ಬಳಿಕ ಒಂದು ನಿರ್ದಿಷ್ಟ ಅವಧಿಯವರೆಗೆ ರಾಷ್ಟ್ರಪತಿ ನೇಮಕವಾಗುತ್ತಾರೆ. ಆದರೆ ನಮ್ಮ ಸಂಸದೀಯ ವ್ಯವಸ್ಥೆಯಲ್ಲಿ ಪ್ರಧಾನಿಯವರು ಲೋಕಸಭೆಯಲ್ಲಿ ಬಹುಮತ ಕಳೆದುಕೊಂಡರೆ ಅವರು ರಾಜೀನಾಮೆ ನೀಡಬೇಕಾಗುತ್ತದೆ. 

ರಾಷ್ಟಪತಿ ಅವರು ಸರ್ವೋಚ್ಚ ಹುದ್ದೆಯನ್ನು ಅಲಂಕರಿಸಿರುವ ಕಾರಣ ಉದ್ಘಾಟನೆಗೆ ಅವರೇ ಹೆಚ್ಚು ಅರ್ಹರು. ಉದ್ಘಾಟನೆಗೊಳ್ಳಲಿರುವ ನೂತನ ಕಟ್ಟಡವು ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಸ್ಮಾರಕವಾಗಿ ಗುರುತಿಸಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ರಾಷ್ಟ್ರದ ಪ್ರತಿನಿಧಿ ಎಂದು ಕರೆಯಲಾಗುವ ರಾಷ್ಟ್ರಪತಿ ಅವರೇ ಇದರ ಉದ್ಘಾಟನೆ ನೆರವೇರಿಸುವುದು ಸಾಂಕೇತಿಕವಾಗಿಯೂ ಸರಿ ಎನಿಸುತ್ತದೆ. 

–ವೆಲೇರಿಯನ್ ರೋಡ್ರಿಗಸ್ ಸಂವಿಧಾನ ತಜ್ಞ

ಪ್ರಧಾನಿಯಿಂದ ಉದ್ಘಾಟನೆ ವಿರೋಧಿಸಲಾಗದು

ಸಂಸತ್ತಿನ ಹೊಸ ಕಟ್ಟಡವನ್ನು ಉದ್ಘಾಟಿಸುವುದಕ್ಕೆ ಯಾರನ್ನು ಕರೆಯಬೇಕು ಎಂಬುದು ನನ್ನ ಪ್ರಕಾರ ಒಂದು ರಾಜಕೀಯ ತೀರ್ಮಾನ ಮಾತ್ರ. ಯಾವುದೇ ಕಾನೂನು ಅಥವಾ ಸಂವಿಧಾನವು ಯಾವುದೇ ಕಟ್ಟಡವು ಇಂಥ ವ್ಯಕ್ತಿಯಿಂದ ಉದ್ಘಾಟನೆ ಆಗಬೇಕು ಎಂದು ಹೇಳುವುದಿಲ್ಲ. ಸಂಸತ್ತಿನ ಹೊಸ ಕಟ್ಟಡವನ್ನು ಪ್ರಧಾನಿ ಉದ್ಘಾಟಿಸುವ ಪ್ರಕ್ರಿಯೆಯಲ್ಲಿ ಯಾವ ಕಾನೂನಿನ ಉಲ್ಲಂಘನೆಯೂ ಕಾಣುತ್ತಿಲ್ಲ. ಸಂಸತ್ ಭವನದ ಅನೆಕ್ಸ್ ಕಟ್ಟಡವನ್ನು ಇಂದಿರಾ ಗಾಂಧಿ, ‍‍ಪಂಡಿತ್ ಜವಾಹರಲಾಲ್ ನೆಹರೂ ಉದ್ಘಾಟಿಸಿದ ನಿದರ್ಶನಗಳು ಇವೆ.

ರಾಷ್ಟ್ರಪತಿಯವರು ಕೂಡ ಸಂಸತ್ತಿನ ಭಾಗ ಎಂಬುದು ಒಪ್ಪತಕ್ಕ ಮಾತು. ಆದರೆ, ಸಂಸತ್ತಿನ ಹೊಸ ಕಟ್ಟಡವನ್ನು ರಾಷ್ಟ್ರಪತಿಯವರೇ ಉದ್ಘಾಟಿಸಬೇಕು ಎಂಬುದೇನೂ ಇಲ್ಲ. ಪ್ರಧಾನಿ ಉದ್ಘಾಟಿಸುವುದನ್ನು ವಿರೋಧಿಸಲು ಕಾನೂನಿನ ಪ್ರಕಾರ ಅವಕಾಶ ಇಲ್ಲ.

ಸಂಸತ್ತು ಪ್ರಜೆಗಳ ಪ್ರತಿನಿಧಿಗಳ ಮನೆ. ಅಲ್ಲಿನ ನಾಯಕ ಪ್ರಧಾನಿ. ಆತ ಚುನಾಯಿತ ವ್ಯಕ್ತಿ. ‘ರಾಷ್ಟ್ರಪತಿ’ ಹುದ್ದೆ ಉನ್ನತ ಆಗಿರಬಹುದು. ಆದರೆ ರಾಷ್ಟ್ರಪತಿಯು ಜನರಿಂದ ನೇರವಾಗಿ ಚುನಾಯಿತ ಆಗುವುದಿಲ್ಲ. ಸಂಸತ್ತು ಇಡೀ ದೇಶದ ಪ್ರತಿನಿಧಿಗಳನ್ನು ಹೊಂದಿದೆ. ಸಂಸತ್ತಿನಲ್ಲಿ ಅತ್ಯುನ್ನತ ಸ್ಥಾನವು ಪ್ರಧಾನಿಗೆ ಸೇರುತ್ತದೆ. ಅವರು ಉದ್ಘಾಟನೆ ಮಾಡುವುದು ರಾಷ್ಟ್ರಪತಿಯನ್ನು ಅವಮಾನಿಸಿದಂತೆ ಅಲ್ಲ.

-ಬಿ.ವಿ. ಆಚಾರ್ಯ, ಹಿರಿಯ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT