ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ: ಹಮಾಸ್‌–ಇಸ್ರೇಲ್‌ ಯುದ್ಧ ಮುಂದುವರಿದರೆ ಭಾರತಕ್ಕೂ ಆಗಲಿದೆ ನಷ್ಟ
ಆಳ–ಅಗಲ: ಹಮಾಸ್‌–ಇಸ್ರೇಲ್‌ ಯುದ್ಧ ಮುಂದುವರಿದರೆ ಭಾರತಕ್ಕೂ ಆಗಲಿದೆ ನಷ್ಟ
ಇಸ್ರೇಲ್‌–ಹಮಾಸ್ ಬಂಡುಕೋರರ ನಡುವಣ ಯುದ್ಧವು ಭಾರತದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದು ಈ ಹೊತ್ತಿನ ಪ್ರಶ್ನೆಗಳಲ್ಲಿ ಒಂದು
Published 17 ಅಕ್ಟೋಬರ್ 2023, 0:37 IST
Last Updated 17 ಅಕ್ಟೋಬರ್ 2023, 0:37 IST
ಅಕ್ಷರ ಗಾತ್ರ

ಇಸ್ರೇಲ್‌–ಹಮಾಸ್ ಬಂಡುಕೋರರ ನಡುವಣ ಯುದ್ಧವು ಭಾರತದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದು ಈ ಹೊತ್ತಿನ ಪ್ರಶ್ನೆಗಳಲ್ಲಿ ಒಂದು. ಭಾರತವು ರಕ್ಷಣೆ, ತಂತ್ರಜ್ಞಾನ, ಕೃಷಿ ಸೇರಿ ಹಲವು ಕ್ಷೇತ್ರಗಳಲ್ಲಿ ಇಸ್ರೇಲ್‌ನೊಂದಿಗೆ ದೊಡ್ಡಮಟ್ಟದ ವಾಣಿಜ್ಯ ಸಂಬಂಧ ಹೊಂದಿದೆ. ಇಸ್ರೇಲ್‌ ಯುದ್ಧ ಘೋಷಿಸಿ 10 ದಿನಗಳಷ್ಟೇ ಕಳೆದಿರುವ ಕಾರಣ, ಜಗತ್ತಿನ ಯಾವ ದೇಶದ ಮೇಲೂ ಅದರ ಪರಿಣಾಮ ತಕ್ಷಣಕ್ಕೆ ಗೊತ್ತಾಗುತ್ತಿಲ್ಲ. ಭಾರತವೂ ಇದಕ್ಕೆ ಹೊರತಲ್ಲ. ಯುದ್ಧ ದೀರ್ಘಾವಧಿಯವರೆಗೆ ಮುಂದುವರಿದರೆ ಖಂಡಿತವಾಗಿಯೂ ಅದು ಭಾರತದ ಆರ್ಥಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅಂದಾಜಿಸಲಾಗಿದೆ.

––––––

ವ್ಯಾಪಾರ ವಹಿವಾಟಿನ ವಿಚಾರದಲ್ಲಿ ಭಾರತ ಮತ್ತು ಇಸ್ರೇಲ್‌ನ ಸಂಬಂಧ ತೀರಾ ಹಳತೇನೂ ಅಲ್ಲ. 90ರ ದಶಕದಲ್ಲಿ ಭಾರತವು ಉದಾರೀಕರಣ ಮತ್ತು ಜಾಗತೀಕರಣಕ್ಕೆ ತೆರೆದುಕೊಂಡಾಗಷ್ಟೇ ಇಸ್ರೇಲ್‌ನೊಂದಿಗೆ ಗಣನೀಯ ಮಟ್ಟದ ವಾಣಿಜ್ಯ ಸಂಬಂಧ ಬೆಳೆದದ್ದು. ನಂತರದ ವರ್ಷಗಳಲ್ಲಿ ಆ ಸಂಬಂಧ ಗಟ್ಟಿಯಾಗುತ್ತಲೇ ಹೋಗಿದೆ. ಈಗ ಭಾರತವು ಹತ್ತು ಹಲವು ಕ್ಷೇತ್ರಗಳಲ್ಲಿ ಇಸ್ರೇಲ್‌ನೊಟ್ಟಿಗೆ ವಾಣಿಜ್ಯ ಸಂಬಂಧವನ್ನು ಹೊಂದಿದೆ. ಭಾರತದ ಹಲವು ಐಟಿ ಕಂಪನಿಗಳು, ಭಾರತೀಯ ಸ್ಟೇಟ್‌ ಬ್ಯಾಂಕ್‌, ಕೈಗಾರಿಕೆಗಳು ಇಸ್ರೇಲ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ. ಭಾರತವು ಇಸ್ರೇಲ್‌ನಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೌಲ್ಯಕ್ಕಿಂತ, ಭಾರತವು ಇಸ್ರೇಲ್‌ಗೆ ರಫ್ತು ಮಾಡುವ ಸರಕು ಮತ್ತು ಸೇವೆಗಳ ಮೌಲ್ಯ ಹೆಚ್ಚು.

ಇಸ್ರೇಲ್‌ನಲ್ಲಿ ಭಾರತದ ಹಲವು ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಈ ಕಾರಣದಿಂದ ಸಾವಿರಾರು ಭಾರತೀಯರೂ ಇಸ್ರೇಲ್‌ನಲ್ಲಿ ನೆಲೆಸಿದ್ದಾರೆ. ಅಕ್ಟೋಬರ್‌ ಆರಂಭದ ವೇಳೆಗೆ ಇಸ್ರೇಲ್‌ನಲ್ಲಿದ್ದ ಭಾರತೀಯರ ಸಂಖ್ಯೆ ಅಂದಾಜು 20,000. ಅವರನ್ನು ಸುರಕ್ಷಿತವಾಗಿ ಕರೆ ತರಲು ಭಾರತ ಸರ್ಕಾರವು ‘ಆಪರೇಷನ್ ಅಜಯ್‌’ ಅನ್ನು ಆರಂಭಿಸಿದೆ. ಈ ಎಲ್ಲಾ ಭಾರತೀಯರು ಇಸ್ರೇಲ್‌ನಿಂದ ಹೊರಗೆ ಬಂದರೆ, ಅವರು ಮಾಡುತ್ತಿದ್ದ ಕೆಲಸ ಬಾಕಿಯಾಗುವ ಸಾಧ್ಯತೆ ಇರುತ್ತದೆ. ಕೆಲವು ಕಂಪನಿಗಳೇ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ. ಇವು ವೇತನ ಕಡಿತಕ್ಕೆ ಅಥವಾ ವೇತನ ನಷ್ಟಕ್ಕೆ ಕಾರಣವಾಗಬಹುದು. ಇಸ್ರೇಲ್‌ನ ಕೃಷಿ ತಂತ್ರಜ್ಞಾನ ಅಧ್ಯಯನಕ್ಕೆ ಭಾರತದಿಂದ ರೈತರು, ಅಧಿಕಾರಿಗಳನ್ನು ಕಳುಹಿಸಲಾಗುತ್ತದೆ. ಯುದ್ಧದ ಕಾರಣದಿಂದ ಈ ಅಧ್ಯಯನ ಪ್ರವಾಸಕ್ಕೆ ಹಿನ್ನಡೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಅತಿಅಗತ್ಯದ ಸರಕು ಮತ್ತು ಸೇವೆಗಳಿಗಾಗಿ ಭಾರತವು ಇಸ್ರೇಲ್‌ ಅನ್ನು ಅವಲಂಬಿಸಿರುವುದಕ್ಕಿಂತ, ಇಸ್ರೇಲ್‌ ಭಾರತವನ್ನು ಅವಲಂಬಿಸಿದೆ. ಭಾರತವು ಇಸ್ರೇಲ್‌ಗೆ ರಫ್ತು ಮಾಡುವ ಸರಕುಗಳಲ್ಲಿ, ಹಲವು ಸರಕುಗಳು ಗುಡಿ ಕೈಗಾರಿಕೆಗಳು ಮತ್ತು ಸಣ್ಣ ಕೈಗಾರಿಕೆಗಳಲ್ಲಿ ತಯಾರಾಗುತ್ತವೆ. ಯುದ್ಧ ಮುಂದುವರಿದು, ಅಂತಹ ಸರಕುಗಳಿಗೆ ಬೇಡಿಕೆ ಕುಸಿದರೆ ಈ ಕೈಗಾರಿಕೆಗಳ ವಹಿವಾಟು ಕುಸಿಯುತ್ತದೆ. ಅಂತಿಮವಾಗಿ ಇದು ಆ ಕೈಗಾರಿಕೆಗಳಲ್ಲಿ ಉದ್ಯೋಗಕ್ಕಿರುವ ಜನರ ಉದ್ಯೋಗವನ್ನು ಕಸಿದುಕೊಳ್ಳಬಹುದು. ಆದರೆ, ಅಂತಹ ಸಾಧ್ಯತೆ ತೀರಾ ಕಡಿಮೆ ಎಂದು ತಜ್ಞರು ಅಂದಾಜಿಸಿದ್ದಾರೆ. ಭಾರತದ ರಫ್ತು ಉದ್ಯಮದ ಮೇಲೆ ಈ ಯುದ್ಧವು ಈವರೆಗೆ ಯಾವುದೇ ಪರಿಣಾಮ ಬೀರಿಲ್ಲ.

ದಕ್ಷಿಣ ಭಾರತದ ಕೈಗಾರಿಕಾ ಕೇಂದ್ರಗಳಲ್ಲಿನ ಗಾರ್ಮೆಂಟ್‌ಗಳಲ್ಲಿ (ಸಿದ್ಧಉಡುಪು ಕಾರ್ಖಾನೆಗಳು) ತಯಾರಾಗುವ ಹತ್ತಿಯ ಬಟ್ಟೆಗಳಿಗೆ ಇಸ್ರೇಲ್‌ ದೊಡ್ಡ ಮಾರುಕಟ್ಟೆಗಳಲ್ಲಿ ಒಂದು. ಕಳೆದ ಕೆಲವು ವರ್ಷಗಳಿಂದ ಭಾರತದಿಂದ ಇಸ್ರೇಲ್‌ಗೆ ರಫ್ತಾಗುವ ಹತ್ತಿಯ ಬಟ್ಟೆಗಳ ಪ್ರಮಾಣ ಕಡಿಮೆಯಾಗಿದೆ. ಯುದ್ಧ ಮುಂದುವರಿದರೆ ಅದು ಇನ್ನಷ್ಟು ಕಡಿಮೆಯಾಗುವ ಅಪಾಯವಿದೆ. 2021–22ರಲ್ಲಿ ಭಾರತದಿಂದ ಇಸ್ರೇಲ್‌ಗೆ ₹250 ಕೋಟಿ ಮೌಲ್ಯದ ಹತ್ತಿಯ ಬಟ್ಟೆಗಳು ರಫ್ತಾಗಿದ್ದವು. 2022–23ರಲ್ಲಿ ಅದು ₹210 ಕೋಟಿಗೆ ಕುಸಿದಿತ್ತು. ಈಗ ಅದು ಇನ್ನಷ್ಟು ಕುಸಿಯುವ ಅಪಾಯವಿದೆ ಎಂದು ನಿರೀಕ್ಷಿಸಲಾಗಿದೆ.

ಭಾರತದ ಟಿಸಿಎಸ್‌, ವಿಪ್ರೊ, ಇನ್ಫೊಸಿಸ್‌ ಸೇರಿ ಹಲವು ಮಾಹಿತಿ ತಂತ್ರಜ್ಞಾನ ಕಂಪನಿಗಳು ಇಸ್ರೇಲ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೆರಿಕದ ಕೆಲವು ಕಂಪನಿಗಳು ಈಗಾಗಲೇ ತಮ್ಮ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಬೇರೆಡೆಗೆ ಸ್ಥಳಾಂತರಿಸಿವೆ. ಯುದ್ಧ ತೀವ್ರವಾದರೆ ಭಾರತದ ಕಂಪನಿಗಳೂ ಇದೇ ಹಾದಿ ಹಿಡಿಯಬೇಕಾಗಬಹುದು. ಹಾಗೆ ಆದರೂ ಅದು ಕಾರ್ಯಾಚರಣೆ ವೆಚ್ಚವನ್ನು ಹೆಚ್ಚಿಸಬಹುದೇ ಹೊರತು, ತೀವ್ರ ನಷ್ಟವಾಗುವ ಸಾಧ್ಯತೆ ಕಡಿಮೆ ಎಂದು ಅಂದಾಜಿಸಲಾಗಿದೆ.

ಡೀಸೆಲ್‌ ರಫ್ತಿಗೆ ಗ್ರಹಣ?

ಭಾರತದಿಂದ ಇಸ್ರೇಲ್‌ಗೆ ರಫ್ತಾಗುವ ಸರಕುಗಳಲ್ಲಿ ಸಿಂಹಪಾಲು ಡೀಸೆಲ್‌ ಮತ್ತು ಪೆಟ್ರೋಲಿಯಂ ಉತ್ಪನ್ನಗಳದ್ದು. 2022–23ರಲ್ಲಿ ಭಾರತದಿಂದ ಇಸ್ರೇಲ್‌ಗೆ ರಫ್ತಾದ ಸರಕುಗಳ ಮೌಲ್ಯ ₹68,277 ಕೋಟಿ. ಇದರಲ್ಲಿ ಡೀಸೆಲ್‌ ಮತ್ತು ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳ ಮೌಲ್ಯವೇ ₹44,620 ಕೋಟಿಯಷ್ಟಾಗುತ್ತದೆ. ಇದು ಇಸ್ರೇಲ್‌ಗೆ ಭಾರತವು ರಫ್ತು ಮಾಡಿದ ಒಟ್ಟು ಸರಕುಗಳ ಮೌಲ್ಯದ ಶೇ 65ರಷ್ಟಾಗುತ್ತದೆ. 2021–22ರಲ್ಲಿ ಇಸ್ರೇಲ್‌ ಭಾರತದಿಂದ ಆಮದು ಮಾಡಿಕೊಂಡ ಡೀಸೆಲ್‌ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೌಲ್ಯ ₹12,143 ಕೋಟಿ ಮಾತ್ರ.

ಭಾರತವು ಜಾಗತಿಕ ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ರಷ್ಯಾದಿಂದ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಭಾರತದ ಕೆಲವು ಖಾಸಗಿ ತೈಲ ಸಂಸ್ಕರಣ ಕಂಪನಿಗಳು ರಷ್ಯಾದಿಂದ ಕಚ್ಚಾತೈಲವನ್ನು ಕಡಿಮೆ ದರಕ್ಕೆ ಖರೀದಿಸಿ, ಮಧ್ಯಪ್ರಾಚ್ಯದ ಕೆಲವು ದೇಶಗಳಿಗೆ ಮತ್ತು ಐರೋಪ್ಯ ದೇಶಗಳಿಗೆ ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡುತ್ತವೆ. ಹೀಗಾಗಿಯೇ 2022–23ರಲ್ಲಿ ಮತ್ತು ಈ ಆರ್ಥಿಕ ವರ್ಷದಲ್ಲೂ ಇಸ್ರೇಲ್‌ಗೆ ಹೆಚ್ಚಿನ ಪ್ರಮಾಣದ ಡೀಸೆಲ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಭಾರತವು ರಫ್ತು ಮಾಡಲು ಸಾಧ್ಯವಾಗಿದೆ. 

ಈಗ ಯುದ್ಧದ ಕಾರಣದಿಂದ ಈ ಉತ್ಪನ್ನಗಳ ಪೂರೈಕೆಗೆ ತೊಡಕಾಗುವ ಸಂಭವವಿದೆ. ಭಾರತದಿಂದ ಇಸ್ರೇಲ್‌ಗೆ ಭೂಮಾರ್ಗದಲ್ಲಿ ಮತ್ತು ಸಮುದ್ರಮಾರ್ಗದಲ್ಲಿ ಈ ಉತ್ಪನ್ನಗಳನ್ನು ಸಾಗಿಸಲು ಹೆಚ್ಚಿನ ಮೊತ್ತದ ವಿಮೆಯನ್ನು ಮಾಡಿಸಬೇಕಾಗುತ್ತದೆ. ಇದರಿಂದ ಇಸ್ರೇಲ್‌ಗೆ ರಫ್ತಾಗುವ ತೈಲೋತ್ಪನ್ನಗಳ ಬೆಲೆ ಏರಿಕೆಯಾಗಲಿದೆ. ಆ ಕಾರಣದಿಂದ ಇಸ್ರೇಲ್‌ ಭಾರತದ ತೈಲೋತ್ಪನ್ನಗಳನ್ನು ಖರೀದಿಸಲು ಹಿಂದೇಟು ಹಾಕಬಹುದು. ಇದು ಭಾರತದ ರಫ್ತು ಪ್ರಮಾಣವು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಹರಳು, ವಜ್ರ ಹೊಳಪಿಗೆ ಕುಂದು?

ವಿಶ್ವದಲ್ಲಿ ಹರಳು ಮತ್ತು ವಜ್ರಗಳಿಗೆ ಹೊಳಪು ನೀಡುವ ಉದ್ಯಮವು ಕೇಂದ್ರಿತವಾಗಿರುವುದು ಗುಜರಾತ್‌ನ ಸೂರತ್‌ನಲ್ಲಿ. ವಿಶ್ವದ, ಹರಳು ಮತ್ತು ವಜ್ರಗಳಿಗೆ ಹೊಳಪು ನೀಡುವ ಶೇ 90ರಷ್ಟು ಕೆಲಸಗಳು ನಡೆಯುವುದು ಸೂರತ್‌ನಲ್ಲಿಯೇ. ಆದರೆ, ಸೂರತ್‌ನ ಈ ಉದ್ಯಮವು ಕಚ್ಚಾ ಹರಳು ಮತ್ತು ವಜ್ರಗಳಿಗಾಗಿ ಅವಲಂಬಿಸಿರುವುದು ಇಸ್ರೇಲ್‌ ಅನ್ನು. ಹೀಗೆ ಹೊಳಪು ನೀಡಲಾದ ಉತ್ಪನ್ನಗಳನ್ನೂ ಭಾರತವು ಇಸ್ರೇಲ್‌ಗೆ ರಫ್ತು ಮಾಡುತ್ತದೆ.

ಭಾರತದಿಂದ ಇಸ್ರೇಲ್‌ಗೆ ರಫ್ತಾಗುವ ಸರಕಿನ ಒಟ್ಟು ಮೌಲ್ಯದಲ್ಲಿ ಹೊಳಪು ನೀಡಲಾದ ಹರಳು ಮತ್ತು ವಜ್ರಗಳ ಮೌಲ್ಯದ ಪ್ರಮಾಣ ಶೇ 17ಕ್ಕಿಂತಲೂ ಹೆಚ್ಚು. ಯುದ್ಧದ ಕಾರಣದಿಂದ ಕಚ್ಚಾ ಹರಳು ಮತ್ತು ವಜ್ರಗಳ ಪೂರೈಕೆಯಲ್ಲಿ ತೊಡಕಾಗಬಹುದು ಮತ್ತು ಹೊಳಪು ನೀಡಲಾದ ಉತ್ಪನ್ನಗಳ ರಫ್ತಿಗೂ ತೊಡಕಾಬಹುದು ಎಂದು ನಿರೀಕ್ಷಿಸಲಾಗಿದೆ.

‘ಹೊಳಪು ನೀಡುವ ಉದ್ಯಮಕ್ಕೆ ಹಲವು ವಾರಗಳಿಗೆ ಬೇಕಾಗುವಷ್ಟು ಕಚ್ಚಾ ಹರಳು ಮತ್ತು ವಜ್ರಗಳ ದಾಸ್ತಾನು ಈಗಾಗಲೇ ಸೂರತ್‌ನಲ್ಲಿ ಇದೆ. ಹೀಗಾಗಿ ಯುದ್ಧವು ತಕ್ಷಣಕ್ಕೆ ದೊಡ್ಡ ಪ್ರಮಾಣದ ಹೊಡೆತವನ್ನೇನೂ ನೀಡಿಲ್ಲ. ಆದರೆ, ಯುದ್ಧ ಮುಂದುವರಿದರೆ ಪೂರೈಕೆ ಮತ್ತು ಬೇಡಿಕೆ ಎರಡಕ್ಕೂ ಧಕ್ಕೆಯಾಗಬಹುದು’ ಎಂದು ಸೂರತ್‌ನ ವಜ್ರ ಸಂಸ್ಕರಣ ಉದ್ಯಮಿಗಳ ಸಂಘಟನೆ ಹೇಳಿದೆ.

ಔಷಧ ಕ್ಷೇತ್ರ

ಔಷಧ ಕ್ಷೇತ್ರದಲ್ಲಿ ಭಾರತವು ಇಸ್ರೇಲ್‌ಗೆ ಅತ್ಯಂತ ದೊಡ್ಡ ರಫ್ತುದಾರ ದೇಶವೇನಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಭಾರತವು ಇಸ್ರೇಲ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಔಷಧಗಳನ್ನು ರಫ್ತು ಮಾಡುತ್ತಿದೆ. 2021–22ನೇ ಆರ್ಥಿಕ ವರ್ಷದಲ್ಲಿ ಭಾರತವು 60 ಮಿಲಿಯನ್‌ ಡಾಲರ್‌ (ಅಂದಾಜು ₹500 ಕೋಟಿ) ಮೌಲ್ಯದ ಔಷಧಗಳನ್ನು ರಫ್ತು ಮಾಡುತ್ತಿತ್ತು. 2022–23ರ ಹೊತ್ತಿಗೆ ಔಷಧಗಳ ರಫ್ತಿನಲ್ಲಿ ಶೇ 40ರಷ್ಟು ಏರಿಕೆ ಕಂಡಿತ್ತು. ಆಗ ಭಾರತವು 92 ಮಿಲಿಯನ್‌ ಡಾಲರ್‌ (ಅಂದಾಜು ₹765 ಕೋಟಿ) ಮೌಲ್ಯದ ಔಷಧಗಳನ್ನು ಇಸ್ರೇಲ್‌ಗೆ ರಫ್ತು ಮಾಡಿತ್ತು. ಇಸ್ರೇಲ್‌ನಲ್ಲಿರುವ ಹಲವು ಔಷಧ ಕಂಪನಿಗಳ ಜೊತೆಯಲ್ಲಿ ಭಾರತ ಔಷಧ ತಯಾರಕ ಕಂಪೆನಿಗಳು ಸಹಭಾಗಿತ್ವ ಹೊಂದಿವೆ. 

‘ಇಲ್ಲಿಯವರೆಗೆ ಭಾರತದ ಔಷಧ ಕ್ಷೇತ್ರಕ್ಕೆ ಯಾವುದೇ ತೊಡಕಾಗಿಲ್ಲ. ಪ್ಯಾಲೇಸ್ಟೇನ್‌ಗೆ ಭಾರತವು ಹೇಳಿಕೊಳ್ಳುವ ಮಟ್ಟಿಗೆ ಔಷಧಿಗಳನ್ನು ಮಾರಾಟ ಮಾಡುತ್ತಿಲ್ಲ. ಈ ಕಾರಣಕ್ಕಾಗಿ ಇಲ್ಲಿಯವರೆಗಿನ ಯುದ್ಧದಿಂದ ಯಾವುದೇ ತೊಂದರೆ ಆಗಿಲ್ಲ’ ಎಂದು ಭಾರತದ ಔಷಧೀಯ ಉತ್ಪನ್ನಗಳ ರಫ್ತು ಉತ್ತೇಜನ ಮಂಡಳಿಯ ಮಹಾನಿರ್ದೇಶಕ ಆರ್‌. ಉದಯ್‌ ಭಾಸ್ಕರ್‌ ಅವರು ಹಲವು ಪತ್ರಿಕೆಗಳಿಗೆ ಹೇಳಿಕೆ ನೀಡಿದ್ದಾರೆ.

ರಕ್ಷಣಾ ಕ್ಷೇತ್ರಕ್ಕೆ ತೊಡಕು?

ಭಾರತದ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಷ್ಯಾ ಹಾಗೂ ಇಸ್ರೇಲ್‌ ಎರಡು ಪ್ರಮುಖ ದೇಶಗಳಾಗಿವೆ. ಈ ದೇಶಗಳಿಂದಲೇ ಭಾರತವು ಹಲವು ಮುಖ್ಯ ರಕ್ಷಣಾ ಸಾಮಗ್ರಿಗಳನ್ನು ಖರೀದಿಸುತ್ತದೆ. ಆದರೆ, ಈಗ ಈ ಎರಡೂ ದೇಶಗಳು ಯುದ್ಧದಲ್ಲಿ ಮುಳುಗಿವೆ. ಈಗಾಗಲೇ ರಷ್ಯಾ–ಉಕ್ರೇನ್‌ ಯುದ್ಧದ ಕಾರಣ ರಷ್ಯಾದಿಂದ ಬರಬೇಕಿದ್ದ ರಕ್ಷಣಾ ಸಾಮಗ್ರಿಗಳ ಮೇಲೆ ಪರಿಣಾಮ ಬೀರಿದೆ. ಒಂದುವೇಳೆ ಇಸ್ರೇಲ್ ಹಾಗೂ ಹಮಾಸ್ ಯುದ್ಧವು ತಿಂಗಳುಗಳವರೆಗೆ ನಡೆದರೆ, ಇಸ್ರೇಲ್‌ದಿಂದ ಬರುವ ರಕ್ಷಣಾ ಸಾಮಗ್ರಿಗಳ ಮೇಲೂ ಪರಿಣಾಮ ಬೀರಬಹುದು ಎಂದು ರಕ್ಷಣಾ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಸ್ರೇಲ್‌–ಹಮಾಸ್‌ ಯುದ್ಧದ ಕಾರಣದಿಂದ ಭಾರತದಿಂದ ಇಸ್ರೇಲ್‌ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಖರೀದಿಸಬಹುದು. ಆದ್ದರಿಂದ, ಯುದ್ಧದಿಂದ ಭಾರತಕ್ಕೆ ಲಾಭವೇ ಇದೆ ಎಂದು ಕೆಲವು ಖಾಸಗಿ ರಕ್ಷಣಾ ಸಾಮಗ್ರಿ ತಯಾರಕ ಕಂಪನಿಗಳು ಅಭಿಪ್ರಾಯಪಟ್ಟಿವೆ. ಆದರೆ, ತಜ್ಞರ ಪ್ರಕಾರ ಹೆಚ್ಚು ದಿನ ಯುದ್ಧ ನಡೆಯುವುದರಿಂದ ಭಾರತದ ರಕ್ಷಣಾ ಕ್ಷೇತ್ರಕ್ಕೆ ತೊಂದರೆಯೇ ಉಂಟಾಗಲಿದೆ. ಹಮಾಸ್‌ ವಿರುದ್ಧದ ಯುದ್ಧಕ್ಕೆ ಇಸ್ರೇಲ್‌ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟುಕೊಳ್ಳಬಹುದು. ಆದ್ದರಿಂದ, ಭಾರತವು ಈಗಾಗಲೇ ಖರೀದಿಸಿದ ಕೆಲವು ಶಸ್ತ್ರಾಸ್ತ್ರಗಳ ಪೂರೈಕೆಯು ವಿಳಂಬವಾಗಬಹುದು ಎನ್ನುತ್ತಾರೆ ತಜ್ಞರು. ಇಸ್ರೇಲ್‌ನಿಂದ ಭಾರತದ ಆಮದು: ಡ್ರೋನ್‌, ಗುರಿ ನಿರ್ದೇಶಿತ ಕ್ಷಿಪಣಿ, ಗುರಿ ನಿರ್ದೇಶಿಕ ಏವಿಯಾನಿಕ್ಸ್‌ (ವಿಮಾನ ನಿಯಂತ್ರಣ) ವ್ಯವಸ್ಥೆ, ರೇಡಾರ್‌ಗಳು, ಸಂವೇದಕಗಳು ಮತ್ತು ಕಣ್ಗಾವಲು ಉಪಕರಣಗಳು

5ಜಿಗೆ ಅಡ್ಡಿ

ಭಾರತದ ಹಲವು ಟೆಲಿಕಾಂ ಕಂಪನಿಗಳು 5ಜಿ ಸಂಪರ್ಕ ಸೇವೆಯನ್ನು ಒದಗಿಸಲು ಮುಂದಾಗಿವೆ. ಇದಕ್ಕಾಗಿ ನೂರಾರು ಕೋಟಿ ಹೂಡಿಕೆಯನ್ನೂ ಮಾಡಿವೆ. ಜೊತೆಗೆ, ಭಾರತವು ಈ 5ಜಿ ಸಂಪರ್ಕ ಸೇವೆಗೆ ಅಗತ್ಯ ಇರುವ ಹಲವು ಉಪಕರಣಗಳನ್ನು ಇಸ್ರೇಲ್‌ ಸೇರಿದಂತೆ ಹಲವು ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಯುದ್ಧವು ಮುಂದುವರಿದರೆ ಭಾರತದ ಟೆಲಿಕಾಂ ಕಂಪನಿಗಳಿಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ.

ಇಸ್ರೇಲ್‌–ಹಮಾಸ್‌ ಯುದ್ಧದ ಕಾರಣದಿಂದ ಡಾಲರ್‌ ಎದುರು ಭಾರತದ ರೂಪಾಯಿ ಮೌಲ್ಯವು ಕುಸಿತ ಕಾಣುವ ಲಕ್ಷಣಗಳಿವೆ. ಇದರಿಂದಾಗಿ ಉಪಕರಣಗಳ ಆಮದಿನ ಮೌಲ್ಯವು ₹2,000 ಕೋಟಿಯಿಂದ ₹2,500 ಕೋಟಿವರೆಗೂ ಏರಿಕೆಯಾಗುವ ಸಾಧ್ಯತೆ ಇದೆ. ಹೀಗಾದರೆ ಭಾರತದ ಕಂಪೆನಿಗಳ ಮೇಲೆ ದೊಡ್ಡ ಮಟ್ಟದ ಪರಿಣಾಮವನ್ನೇ ಬೀರಬಹುದು ಎನ್ನುತ್ತಾರೆ ತಜ್ಞರು.

ಗಮನ ಸೆಳೆಯುವ ಅಂಶಗಳು
₹68,277 ಕೋಟಿ: 2022–23ರಲ್ಲಿ ಭಾರತದಿಂದ ಇಸ್ರೇಲ್‌ಗೆ ರಫ್ತಾದ ಸರಕುಗಳ ಒಟ್ಟು ಮೌಲ್ಯ, ₹44,620 ಕೋಟಿ: ಭಾರತದಿಂದ ಇಸ್ರೇಲ್‌ಗೆ ರಫ್ತಾದ ಡೀಸೆಲ್‌ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಒಟ್ಟು ಮೌಲ್ಯ, ₹12,143 ಕೋಟಿ: ಭಾರತದಿಂದ ಇಸ್ರೇಲ್‌ಗೆ ರಫ್ತಾದ ಹರಳು ಮತ್ತು ವಜ್ರದ ಒಟ್ಟು ಮೌಲ್ಯ

ಆಧಾರ: ಭಾರತದ ವಾಣಿಜ್ಯ ಸಚಿವಾಲಯದ ‘ಭಾರತ–ಇಸ್ರೇಲ್‌ ದ್ವಿಪಕ್ಷೀಯ ವಾಣಿಜ್ಯ ಸಂಬಂಧ ಟಿಪ್ಪಣಿ’, ವಾಣಿಜ್ಯ ಸಚಿವಾಲಯದ ರಫ್ತು ಮತ್ತು ಆಮದು ದತ್ತಾಂಶ ಬ್ಯಾಂಕ್‌, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT