ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ –ಅಗಲ | ಮಧ್ಯಪ್ರದೇಶ: ‘ಕಮಲ’ದ ಮುಂದೆ ‘ಕೈ’ ಪೇಲವ
ಆಳ –ಅಗಲ | ಮಧ್ಯಪ್ರದೇಶ: ‘ಕಮಲ’ದ ಮುಂದೆ ‘ಕೈ’ ಪೇಲವ
Published 11 ಏಪ್ರಿಲ್ 2024, 23:30 IST
Last Updated 11 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ರಾಜ್ಯವನ್ನು ಹಲವು ದಶಕ ಕಾಂಗ್ರೆಸ್‌ ಆಳಿದೆ. ಹಲವು ವರ್ಷ ಬಿಜೆಪಿ ಆಳಿದೆ. ಕಳೆದ 10 ವರ್ಷಗಳಿಂದಲಂತೂ ಮಧ್ಯಪ್ರದೇಶದಲ್ಲಿ ‘ಡಬಲ್‌ ಎಂಜಿನ್‌’ ಸರ್ಕಾರವಿದೆ. ಆದರೂ, ರಾಜ್ಯಕ್ಕೆ ಅಂಟಿದ ‘ಬಿಮಾರು’ ಹಣೆಪಟ್ಟಿಯನ್ನು ತೆಗೆಯಲು ಸಾಧ್ಯವಾಗಿಲ್ಲ. ಕಾಂಗ್ರೆಸ್‌ನ ಹೀನಾಯ ಸೋಲುಗಳಿಗೆ, ಬಿಜೆಪಿಯ ಗೆಲುವಿಗೆ ಹಲವು ಕಾರಣಗಳಿವೆ.

***

ಮಧ್ಯ ಪ್ರದೇಶವು ದೇಶದ ಅತ್ಯಂತ ಹಿಂದುಳಿದ ರಾಜ್ಯಗಳಲ್ಲಿ ಒಂದು. ಕೇಂದ್ರ ಸರ್ಕಾರವೇ ಬಿಡುಗಡೆ ಮಾಡುವ ಎಲ್ಲ ಸೂಚ್ಯಂಕಗಳಲ್ಲೂ ಈ ರಾಜ್ಯದ್ದು ಕಳಪೆ ಪ್ರದರ್ಶನವೇ. ಆದರೆ, ಹಿಂದುತ್ವ ರಾಜಕಾರಣದ ಕೇಂದ್ರ ಬಿಂದು. ಬಿಜೆಪಿಯ ಭದ್ರನೆಲೆ. ಹಿಂದೆ, ಇದು ಕಾಂಗ್ರೆಸ್‌ನ ಕೋಟೆಯಾಗಿತ್ತು. ಆದರೆ, ಕಾಂಗ್ರೆಸ್‌ನ ದಿಗ್ವಿಜಯ ಸಿಂಗ್‌ ಅವರು ಮುಖ್ಯಮಂತ್ರಿಯಾಗಿ, ಅಧಿಕಾರಾವಧಿ ಮುಗಿದ ಬಳಿಕ, ಇಲ್ಲಿ ಮತ್ತೆ ಕಾಂಗ್ರೆಸ್‌ ಮೇಲೇಳಲೇ ಇಲ್ಲ. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಉತ್ತಮ ಫಲಿತಾಂಶ ಬಂತಾದರೂ, ಕೆಲವೇ ತಿಂಗಳಲ್ಲಿ ‘ಆಪರೇಷನ್‌ ಕಮಲ’ದ ಕಾರಣ ಸರ್ಕಾರ ಬಿದ್ದು ಹೋಯಿತು. ಕಾಂಗ್ರೆಸ್‌ ಬಳಿ ಇದ್ದ ಕೆಲವೇ ಯುವ ಮುಖಗಳಲ್ಲಿ ಒಬ್ಬರಾಗಿದ್ದ, ಜೋತಿರಾದಿತ್ಯ ಸಿಂಧಿಯಾ ಅವರು ಬಿಜೆಪಿ ಸೇರಿಕೊಂಡರು. ಅಲ್ಲಿಂದ ಮತ್ತೆ ಕಾಂಗ್ರೆಸ್‌ನದ್ದು ಹಿಂದಣ ಪಯಣವೇ ಆಗಿದೆ.

ಕಳೆದ ಕೆಲವು ಲೋಕಸಭೆ ಚುನಾವಣೆಯ ಫಲಿತಾಂಶಗಳನ್ನು ಗಮನಿಸಿದರೆ, ಯಾವ ಪಕ್ಷವೂ ಸರಿಸಾಟಿಯೇ ಇಲ್ಲ ಎನ್ನುವಂತೆ ಬಿಜೆಪಿ ಗೆಲ್ಲುತ್ತಲೇ ಬಂದಿದೆ. 2019ರ ಲೋಕಸಭಾ ಚುನಾವಣೆಯಲ್ಲಂತು ಬಿಜೆಪಿ ಶೇ 58.53ರಷ್ಟು ಮತಗಳನ್ನು ಪಡೆದುಕೊಂಡಿದೆ. 2009ರಲ್ಲಿ ಕಾಂಗ್ರೆಸ್‌ ಶೇ 40.14ರಷ್ಟು ಮತಗಳನ್ನು ಪಡೆದುಕೊಂಡಿತ್ತು. ನಂತರದ ಚುನಾವಣೆಗಳಲ್ಲಿ ಈ ಪ್ರಮಾಣವು ಇಳಿಮುಖವಾಗಿದೆ. ಮತಪ್ರಮಾಣವು ತೀರ ಕಳಪೆ ಆಗದಿದ್ದರೂ ಅವು ಕಾಂಗ್ರೆಸ್‌ಗೆ ಗೆಲುವು ತಂದುಕೊಡುವಲ್ಲಿ ಸಫಲವಾಗಿಲ್ಲ. 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಡೆದ ಮತಪ್ರಮಾಣವು ಶೇ 34.81ರಷ್ಟು. ಆದರೆ, ಗೆದ್ದ ಸ್ಥಾನ ಒಂದು ಮಾತ್ರ. ಅದೂ ಕಾಂಗ್ರೆಸ್‌ ನಾಯಕ ಕಮಲ್‌ನಾಥ್‌ ಅವರ ಭದ್ರಕೋಟೆ ಛಿಂದವಾಢದಲ್ಲಿ. ಗೆದ್ದದ್ದು, ಕಮಲ್‌ನಾಥ್ ಅವರ ಮಗ ನಕುಲ್ ನಾಥ್‌.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತನ್ನ 11 ಸಂಸದರನ್ನು ಕೈಬಿಟ್ಟು, ಹೊಸ ಮುಖಗಳಿಗೆ ಮಣೆಹಾಕಿದೆ. ಆಡಳಿತ ವಿರೋಧಿ ಅಲೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿಯೇ ಹೊಸಬರಿಗೆ ಈ ಬಾರಿಯ ಟಿಕೆಟ್‌ ನೀಡಲಾಗಿದೆ ಎನ್ನಲಾಗಿದೆ. ಜೊತೆಗೆ, ಕಾಂಗ್ರೆಸ್‌ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲೇ ಬೇಕು ಎನ್ನುವ ಕಾರಣಕ್ಕೆ, ಇತ್ತೀಚಿನ ವಿಧಾನಸಭೆಯಲ್ಲಿ ಚುನಾಯಿತರಾಗಿದ್ದ ತನ್ನ ಶಾಸಕರಲ್ಲಿ ಹಲವರನ್ನೇ ಲೋಕಸಭಾ ಚುನಾವಣೆಗೆ ನಿಲ್ಲಿಸಿದೆ. 

ರಾಜ್ಯವನ್ನು ಹಲವು ದಶಕ ಕಾಂಗ್ರೆಸ್‌ ಆಳಿದೆ. ಹಲವು ವರ್ಷ ಬಿಜೆಪಿ ಆಳಿದೆ. ಕಳೆದ 10 ವರ್ಷಗಳಿಂದಲಂತೂ ಮಧ್ಯಪ್ರದೇಶದಲ್ಲಿ ಡಬಲ್‌ ಎಂಜಿನ್‌ ಸರ್ಕಾರವಿದೆ. ಆದರೂ, ರಾಜ್ಯಕ್ಕೆ ಅಂಟಿದ ‘ಬಿಮಾರು’ ಹಣೆಪಟ್ಟಿಯನ್ನು ತೆಗೆಯಲು ಸಾಧ್ಯವಾಗಿಲ್ಲ. ಕಾಂಗ್ರೆಸ್‌ನ ಹೀನಾಯ ಸೋಲುಗಳಿಗೆ, ಬಿಜೆಪಿಯ ಭಾರಿ ಗೆಲುವಿಗೆ ಹಲವು ಕಾರಣಗಳಿವೆ. ಹಿಂದುತ್ವ ರಾಜಕಾರಣವೇ ಬಿಜೆಪಿ ಗೆಲುವಿನ ಮುಖ್ಯ ಕಾರಣ. ತನ್ನ ಹಿಂದುಳಿದ ವರ್ಗದ (ಒಬಿಸಿ) ಮತಬ್ಯಾಂಕ್‌ ಅನ್ನು ಕಳೆದುಕೊಂಡದ್ದು ಕಾಂಗ್ರೆಸ್‌ ಸೋಲಿನ ಮುಖ್ಯ ಕಾರಣ.

ರಾಜ್ಯದಲ್ಲಿ ಒಬಿಸಿ ಮತದಾರರ ಪ್ರಮಾಣ ಶೇ 48ರಷ್ಟಿದೆ. ಮಂಡಲ್‌ ಆಯೋಗ ರಚನೆಯಾಗುವುದಕ್ಕೂ ಮೊದಲೇ ಕಾಂಗ್ರೆಸ್‌ನ ಅರ್ಜುನ್‌ ಸಿಂಗ್‌ ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ರಾಜ್ಯದಲ್ಲಿ ಒಬಿಸಿಗಳ ಮೀಸಲಾತಿ (ಶೇ 25ರಷ್ಟು) ನೀಡಲಾಗಿತ್ತು. ದಿಗ್ವಿಜಯ ಸಿಂಗ್‌ ಅವರು ಯುಪಿಎ ಅವಧಿಯಲ್ಲಿ ಕೇಂದ್ರದ ಸಚಿವರಾಗಿದ್ದಾಗ ಈ ಪ್ರಮಾಣವನ್ನು ಶೇ 27ರಷ್ಟಕ್ಕೆ ಏರಿಸಿದರು. 2009ರ ಲೋಕಸಭಾ ಚುಮನಾವಣೆಯಲ್ಲಿ ಈ ಅಂಶವು ಕಾಂಗ್ರೆಸ್‌ಗೆ ನೆರವಾಯಿತಾದರೂ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಾಗಲಿಲ್ಲ.

‘ಬಿಜೆಪಿಯು ರಾಜ್ಯದಲ್ಲಿ ಉಗಮವಾಗುತ್ತಾ ಸಾಗಿದಂತೆ, ಅದರ ಹಿಂದುತ್ವ ರಾಜಕಾರಣವು ಬೆಳೆಯುತ್ತಾ ಸಾಗಿದಂತೆ, ಕಾಂಗ್ರೆಸ್‌ ಕೂಡ ಹಿಂದುತ್ವದ ಮೊರೆ ಹೋಯಿತು. ತಾವೂ ಹಿಂದೂ ಎನ್ನುವ ಸಂದೇಶ ರವಾನಿಸಲು ಆರಂಭಿಸಿತು. ಒಬಿಸಿಗಳಿಂದ ಕಳಚಿಕೊಂಡ ಕಾಂಗ್ರೆಸ್‌, ‘ಹಿಂದೂ’ ಅಡಿಯಲ್ಲಿ ಮತ ಪಡೆಯಲು ಮುಂದಾಯಿತು. ಒಬಿಸಿ ನಾಯಕರನ್ನೂ ಕಾಂಗ್ರೆಸ್‌ ಬೆಳೆಸಲಿಲ್ಲ. ಇದು ಕಾಂಗ್ರೆಸ್‌ನ ದೊಡ್ಡ ಹಿನ್ನಡೆ’ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಒಬಿಸಿ ಮತಬ್ಯಾಂಕ್‌ ಅನ್ನು ಕಳೆದುಕೊಂಡ ಅರಿವು ಕಾಂಗ್ರೆಸ್‌ಗೆ ಬಂದಿದ್ದು, 2023ರ ವಿಧಾನಸಭಾ ಚುನಾವಣೆಯಲ್ಲಿ. ಅದಾಗಲೇ ಜಾತಿ ಗಣತಿಯ ಕುರಿತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಹೇಳುತ್ತಲೇ ಬಂದಿದ್ದರು. ಚುನಾವಣೆ ವೇಳೆಯಲ್ಲೂ ಇದೇ ವಿಷಯವನ್ನು ಮುನ್ನೆಲೆಗೆ ತರಲಾಯಿತು. ಆದರೂ, ಮತಗಳನ್ನು ಪಡೆಯಲಾಗಲಿಲ್ಲ. ಸೋಲಿನ ನಂತರ, ಕಮಲ್‌ ನಾಥ್‌ ಅವರನ್ನು ಕೆಳಗಿಳಿಸಿ, ಒಬಿಸಿ ನಾಯಕ ಜಿತು ಪಟ್ವಾರಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು.

ಇತ್ತ, ಬಿಜೆಪಿಯು ಒಬಿಸಿ ಮತಗಳಿಕೆಯಲ್ಲಿ ಮೇಲುಗೈ ಸಾಧಿಸಿತು. ಒಬಿಸಿ ಸಮುದಾಯಕ್ಕೆ ಸೇರಿದವರಿಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ನೀಡಲಾಯಿತು. ಬಿಜೆಪಿಯ ರಾಜ್ಯದ ನಾಯಕರು ಕೇಂದ್ರ ಮಟ್ಟದಲ್ಲಿ ದೊಡ್ಡ ಹುದ್ದೆಗಳನ್ನು ಪಡೆದುಕೊಂಡರು. ಅಲ್ಲಿಂದೀಚೆಗೆ ಒಬಿಸಿ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೇ ಬೀಳುತ್ತಿದೆ. ಇದರೊಂದಿಗೆ ಬಿಜೆಪಿಯ ಹಿಂದುತ್ವ ರಾಜಕಾರಣವೂ ಮನ್ನಣೆ ಪಡೆದುಕೊಳ್ಳುತ್ತಲೇ ಇದೆ. 2024ರ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿಗೆ ಇದೇ ಕೈಹಿಡಿಯಲಿದೆ ಎನ್ನಲಾಗಿದೆ.

‘ಜಾತಿ ಗಣತಿ ವಿಚಾರಗಳನ್ನು ವೇದಿಕೆಗಳಲ್ಲಿ ಹೇಳಿದರೆ ಸಾಲದು. ಈ ಸಮುದಾಯದ ನಾಯಕರನ್ನು ಬೆಳೆಸಬೇಕು. ಜೊತೆಗೆ, ಜಾತಿ ಗಣತಿಯ ಲಾಭದ ಕುರಿತು ಜನರಿಗೆ ತಿಳಿಹೇಳದ ಹೊರತು ಕಾಂಗ್ರೆಸ್‌ನ ಜಾತಿ ಗಣತಿ ವಿಚಾರವು ಈ ಸಮುದಾಯದ ಜನರಿಗೆ ತಲುಪುವುದೇ ಇಲ್ಲ’ ಎನ್ನುತ್ತಾರೆ ವಿಶ್ಲೇಷಕರು.

ಆಧಾರ: ಪಿಟಿಐ

ಬಿಜೆಪಿ ಸೇರ್ಪಡೆಗೆ ರಾಜ್ಯದಾದ್ಯಂತ ಸಮಿತಿಗಳು

ಬಿಜೆಪಿಯು ತನ್ನತ್ತ ಇತರ ಪಕ್ಷದ ನಾಯಕರನ್ನು, ವಿವಿಧ ಸಂಘ ಸಂಸ್ಥೆಗಳ ಜನರನ್ನು ಸೇರಿಸಿಕೊಳ್ಳಲು ‘ಪಕ್ಷ ಸೇರ್ಪಡೆ ಸಮಿತಿ’ಯೊಂದನ್ನು ರಚಿಸಿಕೊಂಡಿದೆ. ‘ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿದ ಬಳಿಕದಿಂದ ಮಾರ್ಚ್‌ವರೆಗೂ ಪಕ್ಷಕ್ಕೆ ಸುಮಾರು 1.26 ಲಕ್ಷ ಮಂದಿ ಸೇರಿದ್ದಾರೆ. ಇದರಲ್ಲಿ ಶೇ 90ರಷ್ಟು ಜನರು ಕಾಂಗ್ರೆಸ್‌ ಪಕ್ಷದವರು’ ಎನ್ನತ್ತಾರೆ ಈ ಸಮಿತಿಯ ಮುಖ್ಯಸ್ಥ ನರೋತ್ತಮ ಮಿಶ್ರಾ.

‘ನಾನು ಪಕ್ಷ ಸೇರ್ಪಡೆ ಸಮಿತಿಯ ಸದಸ್ಯ. ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಕಾಂಗ್ರೆಸ್‌ ನಾಯಕರಲ್ಲಿ ಯಾರು ನಿಜವಾದ ‘ರಾಮ ಭಕ್ತರು’ ಎಂದು ನಿರ್ಧರಿಸುವುದು ನನ್ನ ಕೆಲಸ. ಪ್ರತಿ ಜಿಲ್ಲೆಯಲ್ಲಿಯೂ ಇಂಥ ಸಮಿತಿಗಳಿವೆ. ಸಣ್ಣ ಪುಟ್ಟ ಮುಖಂಡರ ಸೇರ್ಪಡೆಯನ್ನು ಸಮಿತಿಯೇ ಮಾಡುತ್ತದೆ. ಪ್ರಮುಖರ ಕುರಿತ ನಿರ್ಧಾರಗಳನ್ನು ರಾಜ್ಯದ ನಾಯಕರು, ಮುಖ್ಯಮಂತ್ರಿ ಮಾಡುತ್ತಾರೆ. ಇನ್ನೂ ದೊಡ್ಡ ನಾಯಕರ ಸೇರ್ಪಡೆ ವಿಚಾರವನ್ನು ಕೇಂದ್ರದ ನಾಯಕರು ಮಾಡುತ್ತಾರೆ’ ಎನ್ನುತ್ತಾರೆ ಬಿಜೆಪಿ ಮುಖಂಡ ಸಂಜಯ್‌ ವರ್ಮಾ, ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ.

ಸುಮಾರು 16 ಸಾವಿರ ಕಾಂಗ್ರೆಸ್‌ನವರು ಬಿಜೆಪಿ ಸೇರಿದ್ದಾರೆ ಎಂದು ಸಂಜಯ್‌ ಅವರು ಹೇಳುತ್ತಾರೆ. ಕಾಂಗ್ರೆಸ್‌ ಇದನ್ನು ಅಲ್ಲಗಳೆದಿದೆ. ಸುಮಾರು 600 ಮಂದಿ ಬಿಜೆಪಿಗೆ ಹೋಗಿದ್ದಾರೆ ಎನ್ನುತ್ತಿದೆ ಕಾಂಗ್ರೆಸ್‌. ಆದರೆ, ಇಷ್ಟೊಂದು ದೊಡ್ಡ ನೆಲೆಯಿದ್ದೂ, ಹೀಗೆ ಪ್ರತಿ ಜಿಲ್ಲೆಯಲ್ಲೂ ಸಮಿತಿ ರಚಿಸಿಕೊಂಡು ‘ರಾಮ ಭಕ್ತ’ರನ್ನು
ಸೆಳೆದುಕೊಳ್ಳುವುದು ಯಾಕಾಗಿ ಎನ್ನುವ ಕುತೂಹಲ ಸಹಜವೆ. ಕಾಂಗ್ರೆಸ್‌ ಅನ್ನು ಸಾಂಸ್ಥಿಕವಾಗಿಯೂ ಹೊಡೆದು ಹಾಕುವುದು ಬಿಜೆಪಿ ಲೆಕ್ಕಾಚಾರ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಸಿರಿವಂತ ಅಭ್ಯರ್ಥಿಗೆ ಹಲವು ಸವಾಲು

ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್ ಪುತ್ರ ನಕುಲ್‌ನಾಥ್ (₹719 ಕೋಟಿ) ಅತ್ಯಂತ ಸಿರಿವಂತ ಅಭ್ಯರ್ಥಿ.
ಮಧ್ಯಪ್ರದೇಶದ ಛಿಂದವಾಢ ಕ್ಷೇತ್ರವು ಕಮಲ್‌ನಾಥ್ ಕುಟುಂಬದ ಭದ್ರಕೋಟೆ. ಈ ಕ್ಷೇತ್ರದಿಂದ ಕಮಲನಾಥ್ ಒಂಬತ್ತು ಬಾರಿ ಗೆದ್ದಿದ್ದರೆ, ನಕುಲ್‌ ಒಮ್ಮೆ ಗೆದ್ದಿದ್ದಾರೆ. ಹೀಗಾಗಿ ನಕುಲ್‌ ಗೆಲುವು ಇಲ್ಲಿ ಸುಲಭ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ.

ಕಮಲ್‌ನಾಥ್ ಕುಟುಂಬದ ಭದ್ರಕೋಟೆಯೊಳಗೆ ಬಿಜೆಪಿ ತನ್ನ ನೆಲೆಯನ್ನು ಗಟ್ಟಿಗೊಳಿಸಿಕೊಂಡಿದೆ. 2014ರ ಚುನಾವಣೆಯಲ್ಲಿ ಕಮಲ್‌ನಾಥ್ ಶೇ 50ರಷ್ಟು ಮತಗಳನ್ನು ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ
ಶೇ 40ರಷ್ಟು ಮತಗಳನ್ನು ಪಡೆದುಕೊಂಡಿದ್ದರು. 2019ರ ಚುನಾವಣೆಯಲ್ಲಿ ಈ ಅಂತರ ತೀರಾ ಕಡಿಮೆ
ಎನ್ನುವಷ್ಟರಮಟ್ಟಿಗೆ ಕುಸಿದಿತ್ತು. ನಕುಲ್‌ ಶೇ 47ರಷ್ಟು ಮತಗಳನ್ನು ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ
ಶೇ 44ರಷ್ಟು ಮತಗಳನ್ನು ಪಡೆದುಕೊಂಡಿದ್ದರು. ಈ ಬಾರಿ ಈ ಅಂತರ ಅದಲುಬದಲಾಗುವ ಸಾಧ್ಯತೆ ಇದೆ. 

ಛಿಂದವಾಢ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಮಟ್ಟದ ಕಾಂಗ್ರೆಸ್‌ನ ಸುಮಾರು 2,000 ಮುಖಂಡರನ್ನು ಬಿಜೆಪಿ ತನ್ನಲ್ಲಿಗೆ ಸೇರಿಸಿಕೊಂಡಿದೆ. ಕಮಲ್‌ನಾಥ್ ಮತ್ತು ನಕುಲ್‌ನಾಥ್ ಬಿಜೆಪಿ ಸೇರುವ ಯತ್ನದ ಸಲುವಾಗಿಯೇ ಅಷ್ಟು ಮಂದಿ ಬಿಜೆಪಿ ಸೇರಿದ್ದಾರೆ ಎನ್ನಲಾಗಿದೆ. ಆದರೆ ಇಬ್ಬರೂ ನಾಯಕರು ಕಾಂಗ್ರೆಸ್‌ನಲ್ಲಿಯೇ ಉಳಿದರು. ಈಗ ನಕುಲ್‌ ಕಾಂಗ್ರೆಸ್‌ ಅಭ್ಯರ್ಥಿ ಯಾಗಿಯೇ ಕಣಕ್ಕೆ ಇಳಿದಿದ್ದಾರೆ. ಕಾರ್ಯಕರ್ತರ ಕೊರತೆ ಅವರಿಗೆ ಮತದಾನದಲ್ಲಿ ತೊಡಕಾಗಲಿದೆ ಎಂದು ಅಂದಾಜಿಸಲಾಗಿದೆ. ಶಿಕಾರ್‌ಪುರ ನಿವಾಸಿಯಾದ ನಕುಲ್‌ನಾಥ್ ಅವರು ಛಿಂದವಾಢಕ್ಕೆ ಹೊರಗಿನವರು ಎಂದು ಬಿಜೆಪಿ ಬಿಂಬಿಸುತ್ತಿದೆ. ಜತೆಗೆ ಸ್ಥಳೀಯ ವಿವೇಕ್‌ ಬಂಟಿಯನ್ನು ಕಣಕ್ಕೆ ಇಳಿಸಿದೆ. ಇದು ಸಹ ನಕುಲ್‌ ಅವರಿಗೆ ಹಿನ್ನಡೆ ತರಲಿದೆ ಎಂದು ಅಂದಾಜಿಸಲಾಗುತ್ತಿದೆ.

2019ರ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದಿದ್ದು ಈ ಒಂದು ಕ್ಷೇತ್ರದಲ್ಲಿ ಮಾತ್ರ. ಆ ಕ್ಷೇತ್ರವನ್ನು ಕಾಂಗ್ರೆಸ್‌ ಉಳಿಸಿಕೊಳ್ಳಲಿದೆಯೇ ಎಂಬುದನ್ನು ಫಲಿತಾಂಶದವರೆಗೆ ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT