ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ಆಳ –ಅಗಲ: ಸುಳ್ಳುಸುದ್ದಿಗಳಿಗೆ ನಾಲ್ಕಾರು ಆಯಾಮ
ಆಳ –ಅಗಲ: ಸುಳ್ಳುಸುದ್ದಿಗಳಿಗೆ ನಾಲ್ಕಾರು ಆಯಾಮ
Published 6 ಜುಲೈ 2023, 23:30 IST
Last Updated 6 ಜುಲೈ 2023, 23:30 IST
ಅಕ್ಷರ ಗಾತ್ರ

ದೇಶದಲ್ಲಿ ಒಂದು ಧರ್ಮ, ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡ ಸುಳ್ಳುಸುದ್ದಿಗಳು ಮತ್ತು ಪ್ರಚೋದನಾಕಾರಿ ಸುದ್ದಿಗಳು ಒಂದು ದೊಡ್ಡ ಪಿಡುಗಿನಂತಾಗಿದೆ. ಸಾಮರಸ್ಯಕ್ಕೆ, ಕೋಮುಸೌಹಾರ್ದಕ್ಕೆ ಧಕ್ಕೆ ತರುವ ಅಂತಹ ಸುಳ್ಳುಸುದ್ದಿಗಳ ನಿಯಂತ್ರಣಕ್ಕೆ ಕೇಂದ್ರ ಸರ್ಕಾರವು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡೇ ಇಲ್ಲ. ಬದಲಿಗೆ ತನ್ನ ವಿರುದ್ಧದ, ತನ್ನ ಯೋಜನೆಗಳ ವಿರುದ್ಧದ ಸುಳ್ಳುಸುದ್ದಿಗಳ ನಿಯಂತ್ರಣಕ್ಕಷ್ಟೇ ಸರ್ಕಾರ ಗಮನ ನೀಡುತ್ತಿದೆ

‘ಉಗ್ರನನ್ನು ಬಂಧಿಸಿ ಕರೆದೊಯ್ಯುತ್ತಿದ್ದ ಸೇನಾ ವಾಹನಗಳಿಗೆ ಮುಸ್ಲಿಮರ ತಡೆ’

‘ನಿಮ್ಮ ಅಬ್ದುಲ್ಲಾನೂ ಅವನಂತೆಯೇ’

‘ಬಾಲೇಶ್ವರ ರೈಲು ದುರಂತದಲ್ಲಿ ಅಮೀರ್ ಖಾನ್‌ ಎಂಬ ಅಧಿಕಾರಿಯ ಕೈವಾಡ’

‘ಕಾಶ್ಮೀರದಿಂದ ಪಂಡಿತರು ಓಡಿಹೋದಂತೆ, ಕರ್ನಾಟಕದಿಂದ ಹಿಂದೂಗಳು ಓಡಬೇಕಾಗುತ್ತದೆ’

ಈಚೆಗೆ ಹೆಚ್ಚು ಪ್ರಚಲಿತದಲ್ಲಿರುವ ಸುಳ್ಳು ಸುದ್ದಿಗಳು ಮತ್ತು ಪ್ರಚೋದನಕಾರಿ ಪೋಸ್ಟ್‌ಗಳ ಒಕ್ಕಣೆ ಇವು. ವದಂತಿಗಳು ಭಾರತಕ್ಕೆ ಹೊಸತಲ್ಲವಾದರೂ, ಸುಳ್ಳು ಸುದ್ದಿಗಳು ತೀರಾ ಈಚಿನ ವರ್ಷಗಳ ವಿದ್ಯಮಾನ. ಭಾರತದಲ್ಲಿ ಮೊಬೈಲ್‌ ಇಂಟರ್ನೆಟ್‌ನ ಬಳಕೆ ತೀವ್ರವಾದುದು ಮತ್ತು ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾದುದರ ಜೊತೆಗೇ ಸುಳ್ಳು ಸುದ್ದಿಗಳೂ ಮುನ್ನೆಲೆಗೆ ಬಂದಿದ್ದನ್ನು ಗುರುತಿಸಬಹುದು.

2014ರ ನಂತರ ಭಾರತದಲ್ಲಿ ಅಗ್ಗದ ದರದ ಮೊಬೈಲ್‌ ಇಂಟರ್ನೆಟ್‌ ಬಳಕೆಗೆ ಬಂದಿತು. ಜತೆಗೆ ಫೇಸ್‌ಬುಕ್‌, ಟ್ವಿಟರ್‌ನಂತಹ ಸಾಮಾಜಿಕ ಜಾಲತಾಣಗಳ ಬಳಕೆಯೂ ಹೆಚ್ಚಾಯಿತು. ನಂತರದ ವರ್ಷಗಳಲ್ಲಿ ವಾಟ್ಸ್‌ಆ್ಯಪ್‌ ಸಹ ಕೋಟ್ಯಂತರ ಬಳಕೆದಾರರನ್ನು ಸೆಳೆದುಕೊಂಡಿತು. ಆರಂಭದಲ್ಲಿ ಚಿತ್ರಗಳು, ವಿಡಿಯೊಗಳನ್ನು ಹಂಚಿಕೊಳ್ಳಲ್ಲಷ್ಟೇ ಇವು ಬಳಕೆಯಾಗುತ್ತಿದ್ದವು. ಆದರೆ, ಕ್ರಮೇಣ ಸಾಮಾಜಿಕ ಜಾಲತಾಣಗಳು ಸುದ್ದಿಗಳನ್ನು ಹಂಚಿಕೊಳ್ಳುವ ವೇದಿಕೆಯೂ ಆಯಿತು. ಇವು ಸುದ್ದಿಗಳನ್ನು ಜನಸಾಮಾನ್ಯರ ಬಳಿಗೆ ಸುಲಭವಾಗಿ ತಲುಪಿಸುವುದರ ಜತೆಗೆ, ಸುಳ್ಳು ಸುದ್ದಿಗಳಿಗೂ ಅವಕಾಶ ಮಾಡಿಕೊಟ್ಟವು. ಸುಳ್ಳು ಸುದ್ದಿ ತಡೆಯಲು ಸರ್ಕಾರವು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳದೇ ಇರುವ ಕಾರಣ, ಈಗ ಭಾರತದಲ್ಲಿ ಸುಳ್ಳು ಸುದ್ದಿ ಒಂದು ದೊಡ್ಡ ಪಿಡುಗಾಗಿ ಬೆಳೆದಿದೆ.

ಸುಳ್ಳು ಸುದ್ದಿಗಳ ಬಗ್ಗೆ ದೇಶದಲ್ಲಿ ಹಲವು ಅಧ್ಯಯನಗಳು ನಡೆದಿವೆ. ಐಐಎಂ ಇಂಧೋರ್‌ನ ಗಂಧರ್ವ ಧ್ರುವ ಮದನ್‌ ಅವರು ನಡೆಸಿದ್ದ ಅಧ್ಯಯನ ವರದಿಯು ಈ ಬಗ್ಗೆ ಹೆಚ್ಚು ಬೆಳಕು ಚೆಲ್ಲುತ್ತದೆ. ಸುಳ್ಳು ಸುದ್ದಿ ಸೃಷ್ಟಿಸುವುದರ ಮತ್ತು ಅದನ್ನು ಪಸರಿಸುವುದರ ಹಿಂದೆ ಹಲವು ಕಾರಣಗಳನ್ನು ಈ ಅಧ್ಯಯನದಲ್ಲಿ ಗುರುತಿಸಲಾಗಿದೆ. ರಾಜಕೀಯ ಲಾಭ, ಆರ್ಥಿಕ ಲಾಭ ಅಂತಹ ಕಾರಣಗಳಲ್ಲಿ ಮುಖ್ಯವಾದವುಗಳು ಎಂದು ವಿಶ್ಲೇಷಿಸಲಾಗಿದೆ.

ಭಾರತದಲ್ಲಿ ಸೃಷ್ಟಿಯಾಗುವ ಸುಳ್ಳು ಸುದ್ದಿಗಳ ಹಿಂದೆ ರಾಜಕೀಯ ಹಿತಾಸಕ್ತಿ ಇರುತ್ತದೆ. ಯಾವುದೋ ಒಂದು ರಾಜಕೀಯ ಪಕ್ಷ ಮತ್ತು ರಾಜಕೀಯ ಸಿದ್ದಾಂತವನ್ನು ಓಲೈಸುವ ಹಾಗೂ ಬೇರೊಂದು ರಾಜಕೀಯ ಪಕ್ಷ ಮತ್ತು ಅದರ ರಾಜಕೀಯ ಸಿದ್ಧಾಂತವನ್ನು ಹೀಗಳೆಯುವ ಸ್ವರೂಪದ ಸುಳ್ಳುಸುದ್ದಿಗಳು ಇವಾಗಿರುತ್ತವೆ. ಇನ್ನು ಆರ್ಥಿಕ ಲಾಭದ ಸುಳ್ಳುಸುದ್ದಿಗಳೂ ಇದೇ ಸ್ವರೂಪದ್ದಾಗಿರುತ್ತವೆ. ಇಂತಹ ಸುಳ್ಳು ಸುದ್ದಿಗಳನ್ನು ತಡೆಯಲು ಸರ್ಕಾರವು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡೇ ಇಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳಿಗೆ ಹೆಚ್ಚು ವ್ಯೂಗಳು ಬಂದರೆ, ಹಣ ಗಳಿಸಲು ಸಾಧ್ಯವಿದೆ. ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಯುಟ್ಯೂಬ್‌ಗಳಲ್ಲಿ ಉತ್ತಮ ಮೊತ್ತವನ್ನು ಹೀಗೆ ಗಳಿಸಲು ಸಾಧ್ಯವಿದೆ. ಹೆಚ್ಚು ವ್ಯೂ ಸಾಧಿಸಲು ಪ್ರಚೋದನಕಾರಿ, ಉದ್ರೇಕಕಾರಿ, ದ್ವೇಷಪೂರಿತ ಪೋಸ್ಟ್‌ಗಳು ಮತ್ತು ವ್ಲಾಗ್‌ಗಳನ್ನು ಸೃಷ್ಟಿಸುವ ಪ್ರವೃತ್ತಿಯೂ ಹೆಚ್ಚಾಯಿತು. ಪೋಸ್ಟ್‌ಗಳು ಹೆಚ್ಚು ಪ್ರಚೋದನಕಾರಿಯಾಗಿದ್ದರೆ, ಹೆಚ್ಚು ಜನರು ಅವನ್ನು ನೋಡುತ್ತಾರೆ, ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಹಂಚಿಕೊಳ್ಳುತ್ತಾರೆ. ಒಂದೆಡೆ ಸುಳ್ಳುಸುದ್ದಿಗಳು ಹರಡುತ್ತಿದ್ದರೆ, ಇನ್ನೊಂದೆಡೆ ಅವನ್ನು ಸೃಷ್ಟಿಸಿದವರ ಜೇಬು ತುಂಬುತ್ತಿರುತ್ತದೆ. ಅವು ಸುಳ್ಳುಸುದ್ದಿ ಎಂದು ಗೊತ್ತಿರದವರು, ಅವನ್ನು ಹಂಚಿಕೊಳ್ಳುತ್ತಿರುತ್ತಾರೆ ಮತ್ತು ಆ ಸುಳ್ಳುಸುದ್ದಿಗಳನ್ನು ನಂಬುತ್ತಿರುತ್ತಾರೆ.

ಮಹಾರಾಷ್ಟ್ರದ ಸುದರ್ಶನ ಟಿ.ವಿ. ಅಂತಹ ಸುಳ್ಳುಸುದ್ದಿಗಳನ್ನು ಸೃಷ್ಟಿಸಿದ ಸಂಬಂಧ ಹಲವು ಪ್ರಕರಣಗಳನ್ನು ಎದುರಿಸುತ್ತಿದೆ. ಸುದರ್ಶನ ಟಿ.ವಿ.ಯ ಯುಟ್ಯೂಬ್‌ ವಾಹಿನಿಯಲ್ಲಿ ಮತ್ತು ಫೇಸ್‌ಬುಕ್‌ ಲೈವ್‌ನಲ್ಲಿ ಇಂತಹ ಸುಳ್ಳುಸುದ್ದಿಗಳು ಹೆಚ್ಚು ಪ್ರಸಾರ ಮಾಡಲಾಗುತ್ತದೆ. ಮುಸ್ಲಿಮರು ಲವ್‌ ಜಿಹಾದ್‌ ನಡೆಸುತ್ತಾರೆ, ಮುಸ್ಲಿಮರು ಯುಪಿಎಸ್‌ಸಿ ಜಿಹಾದ್‌ ನಡೆಸುತ್ತಾರೆ, ಹಿಂದೂ ಯುವತಿಯರನ್ನು ಕೊಲ್ಲುತ್ತಾರೆ ಎಂಬಂತಹ ಸಾವಿರರು ಪ್ರಚೋದನಕಾರಿ ಸುಳ್ಳುಸುದ್ದಿಗಳನ್ನು ಸುದರ್ಶನ ಟಿ.ವಿ. ಪ್ರಕಟಿಸಿದೆ. 

ಸುಳ್ಳುಸುದ್ದಿಗಳನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಒಂದು ಫ್ಯಾಕ್ಟ್‌ಚೆಕ್‌ ಘಟಕವನ್ನು ಆರಂಭಿಸಿದೆ. ಪ್ರೆಸ್‌ ಇನ್ಫರ್ಮೇಷನ್‌ ಬ್ಯೂರೊ (ಪಿಐಬಿ) ಅಡಿಯಲ್ಲಿ ಈ ಘಟಕ ಕೆಲಸ ಮಾಡುತ್ತದೆ. ಪಿಐಬಿ ಫ್ಯಾಕ್ಟ್‌ಚೆಕ್‌ ಘಟಕವು ಕೇಂದ್ರ ಸರ್ಕಾರದ ಯೋಜನೆಗಳ ಕುರಿತಾದ ಸುಳ್ಳುಸುದ್ದಿಗಳ ಕುರಿತಾದ ಫ್ಯಾಕ್ಟ್‌ಚೆಕ್‌ ಮಾತ್ರ ಪ್ರಕಟಿಸುತ್ತದೆ. ಕೇಂದ್ರ ಸರ್ಕಾರವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸುಳ್ಳು ಸುದ್ದಿ ಪ್ರಕಟವಾಗುವ ಜಾಲತಾಣಗಳು, ಸಾಮಾಜಿಕ ಜಾಲತಾಣಗಳ ನಿಷೇಧಕ್ಕೆ ನಿಯಮಗಳನ್ನು ಜಾರಿಗೆ ತಂದಿದೆ. ಆದರೆ ಧರ್ಮಾಧಾರಿತ, ದ್ವೇಷಪೂರಿತ, ಕೋಮುಭಾವನೆ ಪ್ರಚೋದಿಸುವಂತಹ ಸುಳ್ಳುಸುದ್ದಿಗಳ ನಿಯಂತ್ರಣಕ್ಕೆ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಸರ್ಕಾರದ ಈ ಸೀಮಿತವಾದ ಕ್ರಮಗಳ ಕಾರಣದಿಂದಲೇ ವಿಧ್ವಂಸಕ ಉದ್ದೇಶದ ಸುಳ್ಳುಸುದ್ದಿಗಳ ನಿಯಂತ್ರಣ ಸಾಧ್ಯವಾಗುತ್ತಿಲ್ಲ. 

ಧರ್ಮಾಧಾರಿತ ಸುಳ್ಳುಸುದ್ದಿಗಳು

ಭಾರತದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಸೃಷ್ಟಿಸುವ ಸುಳ್ಳುಸುದ್ದಿಗಳದ್ದೇ ಸಿಂಹಪಾಲು. ದೇಶದಲ್ಲಿ ಯಾವುದೋ ಒಂದು ಅವಘಡ ಸಂಭವಿಸಿದಾಗ ಅದಕ್ಕೆ ಕಾರಣ ಮುಸ್ಲಿಮರೇ ಎಂದು ತರಹೇವಾರಿ ಸುಳ್ಳುಸುದ್ದಿಗಳನ್ನು ಸೃಷ್ಟಿಸಲಾಗುತ್ತದೆ. ಈಚಿನ ಏಳೆಂಟು ವರ್ಷಗಳಲ್ಲಿ ಈ ಪ್ರವೃತ್ತಿ ಬೆಳೆದಿದೆ.

ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಓಲೈಸಿ ಪ್ರೀತಿಸುವ ನಾಟಕವಾಡುತ್ತಾರೆ. ನಂತರ ಅವರನ್ನು ಇಸ್ಲಾಂಗೆ ಮತಾಂತರ ಮಾಡುತ್ತಾರೆ ಎಂಬುದು ಆರಂಭದ ದಿನಗಳಲ್ಲಿ ಸೃಷ್ಟಿಸಲಾದ ಸುಳ್ಳುಸುದ್ದಿಗಳು. ಇದಕ್ಕೆ ‘ಲವ್‌ ಜಿಹಾದ್‌’ ಎಂದು ಹೆಸರಿಡಲಾಯಿತು. ಈಗಲೂ ಇಂತಹ ಸುಳ್ಳುಸುದ್ದಿಗಳು ಪ್ರತಿದಿನ ಹರಿದಾಡುತ್ತವೆ. ದೆಹಲಿಯ ಶ್ರದ್ಧಾ ವಾಲ್ಕರ್ ಅವರನ್ನು ಆಕೆಯ ಸಹಜೀವನ ಸಂಗಾತಿ ಅಫ್ತಾಬ್‌ ಪೂನಾವಾಲಾ ಹತ್ಯೆ ಮಾಡಿದ ನಂತರ ‘ಲವ್‌ ಜಿಹಾದ್‌’ಗೆ ಮತ್ತೊಂದು ಆಯಾಮವನ್ನು ಕೊಡಲಾಗಿದೆ.

ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಪ್ರೀತಿಸಿ ಮತಾಂತರ ಮಾಡುತ್ತಾರೆ ಮತ್ತು ಅವರನ್ನು ಕೊಂದು ತುಂಡುತುಂಡಾಗಿ ಕತ್ತರಿಸುತ್ತಾರೆ. ನಂತರ ಪ್ರಿಡ್ಜ್‌ನಲ್ಲಿ ಇಡುತ್ತಾರೆ ಎಂಬಂತಹ ಸುಳ್ಳುಸುದ್ದಿಗಳನ್ನು ಈಚಿನ ದಿನಗಳಲ್ಲಿ ಹೆಚ್ಚು ಹಂಚಿಕೊಳ್ಳಲಾಗುತ್ತಿದೆ.  ಶ್ರದ್ದಾ ವಾಲ್ಕರ್ ಪ್ರಕರಣದ ನಂತರ ದೇಶದಲ್ಲಿ ಇಂತಹ ಹಲವು ಪ್ರಕರಣಗಳು ನಡೆದಿವೆಯಾದರೂ ಹಿಂದೂ ಯುವಕ/ವ್ಯಕ್ತಿಗಳೇ ಆರೋಪಿಗಳಾಗಿರುವ ಪ್ರಕರಣಗಳನ್ನು ಕಡೆಗಣಿಸಲಾಗುತ್ತದೆ. ಮುಸ್ಲಿಮರು ಆರೋಪಿಗಳಾಗಿರುವ ಪ್ರಕರಣಗಳನ್ನು ವಿಜೃಂಭಿಸಲಾಗುತ್ತದೆ. ಬಿಜೆಪಿ ನಾಯಕಿಯಾಗಿದ್ದ ನೂಪುರ್ ಶರ್ಮಾ ಅವರು ಇಂತಹ ಸುಳ್ಳುಸುದ್ದಿಗಳಿಗೆ ಬೇರೊಂದು ಸ್ವರೂಪ ನೀಡಿದ್ದಾರೆ ‘ನಿಮ್ಮ ಅಬ್ದುಲ್ಲಾ ಅವನಂತೆಯೇ’ ಎಂದು ಅವರು ಟ್ವೀಟ್ ಮಾಡಿದ್ದರು. ಆನಂತರ ಲವ್‌ ಜಿಹಾದ್‌ ಆರೋಪದ ಎಲ್ಲಾ ಸುಳ್ಳುಸುದ್ದಿಗಳಿಗೆ ‘ನಿಮ್ಮ ಅಬ್ದುಲ್ಲಾ ಅವನಂತೆಯೇ’ ಎಂದು ಅಡಿಬರಹ ನೀಡಲಾಗುತ್ತಿದೆ. ಇದನ್ನೇ ಆಧರಿಸಿ ಸಾವಿರಾರು ವ್ಯಂಗ್ಯಚಿತ್ರಗಳು ವ್ಲಾಗ್‌ಗಳನ್ನು ಸೃಷ್ಟಿಸಲಾಗಿದೆ. ಅವೆಲ್ಲಾ ಸುಳ್ಳುಸುದ್ದಿಗಳು ಎಂಬುದನ್ನು ಹಲವು ಫ್ಯಾಕ್ಟ್‌ಚೆಕ್‌ ವೇದಿಕೆಗಳು ಸಾಬೀತುಮಾಡಿವೆ.

ಲವ್‌ಜಿಹಾದ್‌ ಕುರಿತು ಈಚೆಗೆ ಕನ್ನಡದಲ್ಲಿ ಹರಿಬಿಡಲಾಗಿದ್ದ ಸುಳ್ಳು ಸುದ್ದಿಯ ಪೋಸ್ಟರ್
ಲವ್‌ಜಿಹಾದ್‌ ಕುರಿತು ಈಚೆಗೆ ಕನ್ನಡದಲ್ಲಿ ಹರಿಬಿಡಲಾಗಿದ್ದ ಸುಳ್ಳು ಸುದ್ದಿಯ ಪೋಸ್ಟರ್

ದೇಶದಲ್ಲಿ ಕೋವಿಡ್‌ ಹರಡಿದಾಗ ಅದಕ್ಕೂ ಮುಸ್ಲಿಮರೇ ಕಾರಣ ಎಂಬ ಸುಳ್ಳುಸುದ್ದಿಗಳನ್ನು ಸೃಷ್ಟಿಸಲಾಗಿತ್ತು. ಈಚೆಗೆ ಒಡಿಶಾದ ಬಾಲೇಶ್ವರದಲ್ಲಿ ರೈಲು ಅಪಘಾತ ಸಂಭವಿಸಿದಾಗ ಅದಕ್ಕೂ ಮುಸ್ಲಿಮರೇ ಕಾರಣ ಎಂಬ ಹತ್ತಾರು ಸುಳ್ಳುಸುದ್ದಿಗಳನ್ನು ಸೃಷ್ಟಿಸಲಾಗಿತ್ತು. ಅಂತಹ ಸುಳ್ಳುಸುದ್ದಿ ಹರಡಿದವರ ವಿರುದ್ಧ ಒಡಿಶಾ ಸರ್ಕಾರವು ಪ್ರಕರಣಗಳನ್ನು ದಾಖಲಿಸಿದೆ. ಮುಸ್ಲಿಮರು ಅಡುಗೆ ತಿನಿಸು ಸಿದ್ಧಪಡಿಸುವಾಗ ಅದರಲ್ಲಿ ಉಗುಳುತ್ತಾರೆ. ಆ ಮೂಲಕ ಹಿಂದೂಗಳ ಧರ್ಮವನ್ನು ಕೆಡಿಸುತ್ತಾರೆ ಎಂಬಂತಹ ಸುಳ್ಳುಸುದ್ದಿಗಳಿಗೂ ಬರವಿಲ್ಲ. ಅವರು ನಮಾಜ್‌ಗಾಗಿ ರಸ್ತೆಗಳನ್ನು ಅತಿಕ್ರಮಿಸಿಕೊಳ್ಳುತ್ತಾರೆ ಎಂದು ಬೇರೆ ಬೇರೆ ದೇಶಗಳ ವಿಡಿಯೊವನ್ನು ಭಾರತದ್ದೆಂದು ಸುಳ್ಳುಸುದ್ದಿ ಸೃಷ್ಟಿಸಲಾಗುತ್ತಿದೆ. 

ರಾಜಕೀಯ ಸುಳ್ಳುಸುದ್ದಿಗಳು

ಭಾರತದಲ್ಲಿ ರಾಜಕೀಯ ಸುಳ್ಳುಸುದ್ದಿಗಳಿಗೂ ಬರವಿಲ್ಲ. ಕಾಂಗ್ರೆಸ್‌ ಸರ್ಕಾರ ಯಾವುದೇ ಕೆಲಸ ಮಾಡಿಲ್ಲ ಬಿಜೆಪಿ ಸರ್ಕಾರ ಹೆಚ್ಚು ಕೆಲಸ ಮಾಡಿದೆ. 70 ವರ್ಷಗಳಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ದೇಶದಲ್ಲಿ ಈಗಷ್ಟೇ ಅಭಿವೃದ್ಧಿ ಸಾಧ್ಯವಾಗುತ್ತಿದೆ ಎಂಬಂತಹ ಸುಳ್ಳುಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಿಗುತ್ತವೆ. ಬಿಜೆಪಿ ಐಟಿ ಘಟಕವು ಇಂತಹ ಹಲವು ಸುಳ್ಳುಸುದ್ದಿಗಳನ್ನು ಸೃಷ್ಟಿಸಿದೆ. ಕೇಂದ್ರ ಸರ್ಕಾರದ ಸಾಧನೆಗಳನ್ನು ಈ ಸುಳ್ಳುಸುದ್ದಿಗಳಲ್ಲಿ ತಪ್ಪಾಗಿ ಬಿಂಬಿಸಲಾಗಿದೆ.

2019ರಲ್ಲಿ ಭಾರತವನ್ನು ‘ಬಯಲು ಶೌಚ ಮುಕ್ತ ದೇಶ’ ಎಂದು ಘೋಷಿಸಲಾಗಿತ್ತು. ಆದರೆ ವಾಸ್ತವದಲ್ಲಿ ದೇಶದ ಎಲ್ಲಾ ರಾಜ್ಯಗಳು ಸಂಪೂರ್ಣವಾಗಿ ಬಯಲು ಶೌಚ ಮುಕ್ತ ಎಂಬುದನ್ನು ಕೇಂದ್ರ ಸರ್ಕಾರವೇ ಒಪ್ಪಿಕೊಂಡಿಲ್ಲ. ಈ ರೀತಿ ಸರ್ಕಾರದ ಪರವಾಗಿ ತಿರುಚಲಾದ ಸುದ್ದಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೃಷ್ಟಿಸಲಾಗುತ್ತಿದೆ. ಇನ್ನು ಎಲ್ಲಾ ವಿರೋಧ ಪಕ್ಷಗಳನ್ನು ಹೀಗಳೆಯುವಂತಹ ಸುಳ್ಳುಸುದ್ದಿಗಳನ್ನು ದಾರಿತಪ್ಪಿಸುವಂತಹ ಸುಳ್ಳುಸುದ್ದಿಗಳು ಸಾಮಾನ್ಯ ಎಂಬಂತಾಗಿವೆ. ಸರ್ಕಾರದ ವಿರುದ್ಧ ಸುಳ್ಳುಸುದ್ದಿ ಸೃಷ್ಟಿಸುವಲ್ಲಿ ವಿರೋಧ ಪಕ್ಷಗಳೂ ಹಿಂದೆ ಬಿದ್ದಿಲ್ಲ. ಪಶ್ಚಿಮ ಬಂಗಾಳ ಈಶಾನ್ಯ ಭಾರತದ ರಾಜ್ಯಗಳಲ್ಲಿನ ಕಾಂಗ್ರೆಸ್‌ ಮತ್ತು ಕೆಲವು ಪ್ರಾದೇಶಿಕ ಪಕ್ಷಗಳು ಸುಳ್ಳುಸುದ್ದಿ ಸೃಷ್ಟಿಸಿದ ಆರೋಪ ಎದುರಿಸುತ್ತಿವೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಸುಳ್ಳುಸುದ್ದಿ ಸೃಷ್ಟಿಸಿದ ಆರೋಪ ಎದುರಿಸುತ್ತಿದ್ದಾರೆ.

ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಟ್ವೀಟ್‌ ಮಾಡಿದ್ದ ಒಂದು ಸುಳ್ಳು ಸುದ್ದಿ. ‘ಇದು ತಿರುಚಲಾದ ಸುದ್ದಿ’ ಎಂದು ಟ್ವಿಟರ್‌ ವರ್ಗೀಕರಿಸಿತ್ತು
ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಟ್ವೀಟ್‌ ಮಾಡಿದ್ದ ಒಂದು ಸುಳ್ಳು ಸುದ್ದಿ. ‘ಇದು ತಿರುಚಲಾದ ಸುದ್ದಿ’ ಎಂದು ಟ್ವಿಟರ್‌ ವರ್ಗೀಕರಿಸಿತ್ತು

ಪತ್ರಿಕೆಗಳ ವರದಿಯ ವಿನ್ಯಾಸ ಬಳಕೆ

ಪತ್ರಿಕೆಗಳ ವರದಿಯ ರೀತಿಯಲ್ಲಿ ಪೋಸ್ಟರ್‌ಗಳನ್ನು ರಚಿಸಿ, ಅವುಗಳಲ್ಲಿ ಸುಳ್ಳುಸುದ್ದಿ ಸೃಷ್ಟಿಸುವ ಪ್ರವೃತ್ತಿ ಈಚೆಗೆ ಆರಂಭವಾಗಿದೆ. ಪ್ರಮುಖ ಪತ್ರಿಕೆಗಳ ವಿನ್ಯಾಸವನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿದೆ. ನ್ಯೂಯಾರ್ಕ್‌ ಟೈಮ್ಸ್‌, ವಾಷಿಂಗ್ಟನ್ ಪೋಸ್ಟ್‌, ಭಾರತದ ದೈನಿಕ್‌ ಬಾಸ್ಕರ್ ಪತ್ರಿಕೆಗಳ ವಿನ್ಯಾಸವನ್ನು ಈ ರೀತಿ ಬಳಸಿಕೊಳ್ಳಲಾಗಿದೆ.

‘ಕಾನೂನು ರದ್ದಾಗುವುದೇ ಸರಿ’: ಕೇಂದ್ರ ಸರ್ಕಾರದ ವಿರುದ್ಧದ ಸುಳ್ಳುಸುದ್ದಿಗಳನ್ನು ನಿಯಂತ್ರಿಸಲು ಜಾರಿಗೆ ತಂದಿರುವ ನಿಯಮಗಳು ಸಂವಿಧಾನಕ್ಕೆ ವಿರುದ್ಧವಾಗಿವೆ. ಅವು ಸರ್ಕಾರದ ವಿರುದ್ಧದ ಟೀಕೆಯನ್ನು ಹತ್ತಿಕ್ಕುವ ಸ್ವರೂಪದಲ್ಲಿವೆ ಎಂದು ಕಮಿಡಿಯನ್‌ ಕುನಾಲ್ ಕಮ್ರಾ ಸೇರಿದಂತೆ ಹಲವರು ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. 

ಅವರ ವಾದವನ್ನು ಆಲಿಸಿರುವ ಹೈಕೋರ್ಟ್‌, ‘ಕಾನೂನುಗಳು ಎಷ್ಟೇ ಸರಿಯಾಗಿದ್ದರೂ ಅವುಗಳ ಪರಿಣಾಮವು ಸಂವಿಧಾನಬಾಹಿರವಾಗಿದ್ದರೆ, ಅಂತಹ ಕಾನೂನುಗಳು ರದ್ದಾಗುವುದೇ ಸರಿ’ ಎಂದು ಗುರುವಾರವಷ್ಟೇ ಅಭಿಪ್ರಾಯಪಟ್ಟಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ದಿ ನ್ಯೂಯಾರ್ಕ್‌ ಟೈಮ್ಸ್‌ ವರದಿ ಪ್ರಕಟಿಸಿದೆ ಎಂದು ಸೃಷ್ಟಿಸಲಾಗಿರುವ ಸುಳ್ಳುಸುದ್ದಿ
ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ದಿ ನ್ಯೂಯಾರ್ಕ್‌ ಟೈಮ್ಸ್‌ ವರದಿ ಪ್ರಕಟಿಸಿದೆ ಎಂದು ಸೃಷ್ಟಿಸಲಾಗಿರುವ ಸುಳ್ಳುಸುದ್ದಿ

ಆಧಾರ: ಪಿಟಿಐ, ಪಿಟಿಐ ಫ್ಯಾಕ್ಟ್‌ಚೆಕ್‌, ಪಿಐಬಿ, ಪಿಐಬಿ ಫ್ಯಾಕ್ಟ್‌ಚೆಕ್‌, ಆಲ್ಟ್‌ನ್ಯೂಸ್‌, ದಿ ಲಾಜಿಕಲ್ ಇಂಡಿಯನ್‌ ಫ್ಯಾಕ್ಟ್‌ಚೆಕ್‌, ಬಿಬಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT