ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ಆಳ-ಅಗಲ | ಐಐಎಂ ಕಾಯ್ದೆಗೆ ತಿದ್ದುಪಡಿ: ರಾಷ್ಟ್ರಪತಿಗೆ ಅಧಿಕಾರ
ಆಳ-ಅಗಲ | ಐಐಎಂ ಕಾಯ್ದೆಗೆ ತಿದ್ದುಪಡಿ: ರಾಷ್ಟ್ರಪತಿಗೆ ಅಧಿಕಾರ
Published 1 ಆಗಸ್ಟ್ 2023, 0:29 IST
Last Updated 1 ಆಗಸ್ಟ್ 2023, 0:29 IST
ಅಕ್ಷರ ಗಾತ್ರ

ದೇಶದ ಎಲ್ಲಾ ಐಐಎಂಗಳಿಗೆ ರಾಷ್ಟ್ರಪತಿಯನ್ನು ‘ಸಂದರ್ಶಕ ಮುಖ್ಯಸ್ಥ’ರನ್ನಾಗಿಸಲು ಅವಕಾಶ ನೀಡುವ ಮಸೂದೆಯನ್ನು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿದೆ. ಸಂಪೂರ್ಣ ಸ್ವಾಯತ್ತ ಸಂಸ್ಥೆಗಳಾದ ಐಐಎಂಗಳ ಎಲ್ಲಾ ಕಾರ್ಯನಿರ್ವಹಣೆಯಲ್ಲಿ ಸಂದರ್ಶಕ ಮುಖ್ಯಸ್ಥರಿಗೆ ಹೆಚ್ಚಿನ ಅಧಿಕಾರವನ್ನು ಈ ಮಸೂದೆ ನೀಡುತ್ತದೆ. ಸಂಸತ್ತಿನ ಹೊರಗೆ ಈ ಮಸೂದೆಯ ಪರ ಮತ್ತು ವಿರೋಧದ ಚರ್ಚೆ ನಡೆಯುತ್ತಿದೆ. ಸರ್ಕಾರಿ ಸಂಸ್ಥೆಗಳಾದ ಐಐಎಂಗಳು ಸಾರ್ವಜನಿಕರಿಗೆ ಉತ್ತರದಾಯಿಯಾಗಿರಬೇಕು ಎಂಬುದು ಈ ಮಸೂದೆ ಪರವಾದ ವಾದವಾದರೆ, ಐಐಎಂಗಳ ಮೇಲೆ ಬಿಗಿಹಿಡಿತ ಸಾಧಿಸಲು ಸರ್ಕಾರದ ಹುನ್ನಾರ ಎಂಬುದು ಇದನ್ನು ವಿರೋಧಿಸುವವರ ಪ್ರತಿಪಾದನೆಯಾಗಿದೆ

ಐಐಎಂಗಳು ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳು. 2015ರಲ್ಲಿ ಕೇಂದ್ರ ಸರ್ಕಾರವು ಈ ಸಂಸ್ಥೆಗಳ ನಿರ್ವಹಣೆಗೆ ಎಂದೇ ಪ್ರತ್ಯೇಕ ಕಾಯ್ದೆಯನ್ನು ರೂಪಿಸಲು ಮುಂದಾಗಿತ್ತು. ಆ ಸಲುವಾಗಿ 2015ರಲ್ಲಿ ರೂಪಿಸಿದ ಮಸೂದೆಯು, ಐಐಎಂಗಳ ಎಲ್ಲಾ ಕಾರ್ಯಕ್ಷೇತ್ರಗಳಲ್ಲಿ ಹಸ್ತಕ್ಷೇಪಕ್ಕೆ ಅವಕಾಶ ಮಾಡಿಕೊಡುತ್ತದೆ ಎಂದು ಐಐಎಂಗಳು ಸರ್ಕಾರಕ್ಕೆ ಸಲ್ಲಿಸಿದ್ದ ಆಕ್ಷೇಪಣೆಯಲ್ಲಿ ಉಲ್ಲೇಖಿಸಿದ್ದವು. ಹೀಗಾಗಿ ಆ ಮಸೂದೆಯನ್ನು ತಿದ್ದುಪಡಿ ಮಾಡಲಾಗಿತ್ತು. ಹೀಗೆ ತಿದ್ದುಪಡಿ ಮಾಡಲಾದ ಮಸೂದೆಯನ್ನು 2017ರಲ್ಲಿ ಮಂಡಿಸಿ, ಅನುಮೋದನೆ ಪಡೆಯಲಾಗಿತ್ತು. 2018ರ ಜನವರಿ ಒಂದರಿಂದ ಜಾರಿಗೆ ಬಂದಿದ್ದ ‘ಐಐಎಂ ಕಾಯ್ದೆ–2017’, ಐಐಎಂಗಳಿಗೆ ಹೆಚ್ಚಿನ ಅಧಿಕಾರ ನೀಡಿತ್ತು. ಈಗ ಈ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ.

ಈ ಸಂಬಂಧ ‘ಐಐಎಂ (ತಿದ್ದುಪಡಿ) ಮಸೂದೆ–2023 ಅನ್ನು ಕೇಂದ್ರ ಶಿಕ್ಷಣ ಸಚಿವಾಲಯವು ಜುಲೈ 28ರ ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿದೆ. ಐಐಎಂಗಳ ನಿರ್ದೇಶಕರ ನೇಮಕ, ಆಡಳಿತ ಮಂಡಳಿಗಳ ನೇಮಕ, ಆಡಳಿತ ಮಂಡಳಿ ಮುಖ್ಯಸ್ಥನ ಆಯ್ಕೆ, ಪರಿಶೀಲನಾ ಸಮಿತಿಯ ರಚನೆಯಲ್ಲಿ ರಾಷ್ಟ್ರಪತಿಗೆ ಹೆಚ್ಚಿನ ಅಧಿಕಾರವನ್ನು ನೀಡಲು ಈ ತಿದ್ದುಪಡಿ ಮಸೂದೆಯು ಅವಕಾಶ ಮಾಡಿಕೊಡುತ್ತದೆ.

ಮುಂಬೈನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಇಂಡಸ್ಟ್ರಿಯಲ್‌ ಎಂಜಿನಿಯರಿಂಗ್‌ ಅನ್ನು ‘ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌–ಮುಂಬೈ’ ಎಂದು ಮರುನಾಮಕರಣ ಮಾಡಲು ಮತ್ತು ಈ ಸಂಸ್ಥೆಗೆ ಐಐಎಂನ ಸ್ಥಾನ ನೀಡಲೂ ತಿದ್ದುಪಡಿ ಮಸೂದೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ.

ಜತೆಗೆ, ಐಐಎಂಗಳ ಎಲ್ಲಾ ಸ್ವರೂಪ ಕಾರ್ಯವೈಖರಿಗಳ ಬಗ್ಗೆ ಲೆಕ್ಕಪರಿಶೋಧನೆಗೆ ಆದೇಶಿಸುವ, ಲೆಕ್ಕಪರಿಶೋಧನೆಗಾಗಿ ಅಧಿಕಾರಿಗಳನ್ನು ನೇಮಕ ಮಾಡುವ, ಪರಿಶೋಧನಾ ವರದಿಯ ಆಧಾರದಲ್ಲಿ ಕ್ರಮಕ್ಕೆ ಆದೇಶಿಸುವ ಅಧಿಕಾರವನ್ನೂ ರಾಷ್ಟ್ರಪತಿಗೆ ಈ ಮಸೂದೆಯು ನೀಡುತ್ತದೆ. ರಾಷ್ಟ್ರಪತಿಯು ನೀಡುವ ನಿರ್ದೇಶನ ಅಥವಾ ಆದೇಶಕ್ಕೆ ಐಐಎಂಗಳು ಬದ್ಧವಾಗಿರಬೇಕು ಎಂದೂ ಈ ಮಸೂದೆ ಹೇಳುತ್ತದೆ. ಲೋಕಸಭೆಯಲ್ಲಿ ಈ ಮಸೂದೆ ಮಂಡನೆಯಾಗಿದೆಯಾದರೂ, ಅದರ ಮೇಲೆ ಚರ್ಚೆ ಇನ್ನೂ ನಡೆದಿಲ್ಲ. ಈ ವಾರದಲ್ಲಿ ಮಸೂದೆಯ ಮೇಲೆ ಚರ್ಚೆ ನಡೆಯುವ ಸಾಧ್ಯತೆಗಳು ಇವೆ.

ಆಡಳಿತ ಮಂಡಳಿ ಮುಖ್ಯಸ್ಥರ ನೇಮಕ

ಈ ಸಂಬಂಧ ಮೂಲ ಕಾಯ್ದೆಯ 10ನೇ ಸೆಕ್ಷನ್‌ಗೆ ಕೆಲವು ಬದಲಾವಣೆಗಳನ್ನು ಮಸೂದೆಯಲ್ಲಿ ಸೂಚಿಸಲಾಗಿದೆ.

ಪ್ರತಿ ಐಐಎಂನಲ್ಲಿ 19 ಸದಸ್ಯರು ಇರುವ ಆಡಳಿತ ಮಂಡಳಿಯನ್ನು ರಚಿಸಲು ಅವಕಾಶವಿದೆ. ಈ ಮಂಡಳಿಗೆ ಕೇಂದ್ರ ಸರ್ಕಾರವು ಒಬ್ಬ ಸದಸ್ಯರನ್ನು ನೇಮಕ ಮಾಡಿದರೆ, ರಾಜ್ಯ ಸರ್ಕಾರವು ಒಬ್ಬ ಸದಸ್ಯರನ್ನು ನೇಮಕ ಮಾಡುತ್ತದೆ. ಉಳಿದ ಸದಸ್ಯರನ್ನು ವಿವಿಧ ಕ್ಷೇತ್ರಗಳ ತಜ್ಞರು/ಗಣ್ಯರು, ಬೋಧನಾ ಸಿಬ್ಬಂದಿಯಿಂದ ಆಯ್ಕೆ ಮಾಡಿಕೊಳ್ಳಬಹುದು. ಆಡಳಿತ ಮಂಡಳಿ ಮುಖ್ಯಸ್ಥರನ್ನು ಮಂಡಳಿಯ ಸದಸ್ಯರೇ ಆಯ್ಕೆ ಮಾಡಬೇಕು ಎಂದು ಮೂಲ ಕಾಯ್ದೆ ಹೇಳುತ್ತದೆ.

*ಇದಕ್ಕೆ ಮಸೂದೆಯಲ್ಲಿ ತಿದ್ದುಪಡಿ ತರಲಾಗಿದೆ. ಸಂದರ್ಶಕ ಮುಖ್ಯಸ್ಥರು ಅಂದರೆ, ರಾಷ್ಟ್ರಪತಿಯು ಆಡಳಿತ ಮಂಡಳಿ ಮುಖ್ಯಸ್ಥರನ್ನು ನೇಮಕ ಮಾಡುತ್ತಾರೆ ಎಂದು ತಿದ್ದುಪಡಿ ಮಸೂದೆಯಲ್ಲಿ ವಿವರಿಸಲಾಗಿದೆ

*ಆಡಳಿತ ಮಂಡಳಿಯನ್ನು ಅಮಾನತಿನಲ್ಲಿ ಇಟ್ಟಾಗ ಅಥವಾ ಬರ್ಖಾಸ್ತು ಮಾಡಿದಾಗ ಮಧ್ಯಂತರ ಆಡಳಿತ ಮಂಡಳಿಯನ್ನು ರಚಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ. ಇದಕ್ಕಾಗಿ 1ನೇ ಸೆಕ್ಷನ್‌ಗೆ 6ನೇ ಉಪಸೆಕ್ಷನ್‌ ಅನ್ನು ಹೊಸದಾಗಿ ಸೇರಿಸಲಾಗಿದೆ

ಪರಿಶೀಲನೆ ಮತ್ತು ತನಿಖೆಗೆ ಆದೇಶ

ಐಐಎಂಗಳ ಕಾರ್ಯನಿರ್ವಹಣೆ ಸಂಬಂಧ ಪ್ರಗತಿ ಪರಿಶೀಲನೆ ಮತ್ತು ಲೆಕ್ಕಪರಿಶೋಧನೆ ಹಾಗೂ ತನಿಖೆಗೆ ಆದೇಶಿಸುವ ಅಧಿಕಾರವನ್ನು ಮೂಲ ಕಾಯ್ದೆಯ 17ನೇ ಸೆಕ್ಷನ್‌ ಆಡಳಿತ‌ ಮಂಡಳಿಗೆ ನೀಡುತ್ತದೆ. ಆದರೆ, ತಿದ್ದುಪಡಿ ಮಸೂದೆಯಲ್ಲಿ ಈ ಸೆಕ್ಷನ್‌ ಅನ್ನೇ ತೆಗೆದುಹಾಕಲಾಗಿದೆ. ಐಐಎಂಗಳ ಕಾರ್ಯನಿರ್ವಹಣೆ ಸಂಬಂಧ ಪ್ರಗತಿ ಪರಿಶೀಲನೆ ಮತ್ತು ಲೆಕ್ಕಪರಿಶೋಧನೆ ಹಾಗೂ ತನಿಖೆಗೆ ಆದೇಶಿಸುವ ಅಧಿಕಾರವನ್ನು ರಾಷ್ಟ್ರಪತಿಗೆ ನೀಡಲು ‘10ಎ’ ಎಂಬ ಹೊಸ ಸೆಕ್ಷನ್‌ ಅನ್ನು ತಿದ್ದುಪಡಿ ಮಸೂದೆಯಲ್ಲಿ ಸೇರಿಸಲಾಗಿದೆ. 

*ಐಐಎಂಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಪ್ರಗತಿ ಪರಶೀಲನೆಗೆ ಎಂದು ಒಬ್ಬ ಅಥವಾ ಅದಕ್ಕಿಂತಲೂ ಹೆಚ್ಚು ವ್ಯಕ್ತಿಗಳನ್ನು ಸಂದರ್ಶಕ ಮುಖ್ಯಸ್ಥರು ನೇಮಕ ಮಾಡಬಹುದು. ಐಐಎಂಗಳ ಕಾರ್ಯನಿರ್ವಹಣೆ ಸಂಬಂಧ ತನಿಖೆ ನಡೆಸಲೂ ಆದೇಶಿಸಬಹುದು

*ಆಡಳಿತ‌ ಮಂಡಳಿಯು, ಅಗತ್ಯ ಎನಿಸಿದ ವಿಚಾರಗಳಲ್ಲಿ ತನಿಖೆ ನಡೆಸಿ ಎಂದು ಸಂದರ್ಶಕ ಮುಖ್ಯಸ್ಥರಿಗೆ ಶಿಫಾರಸು ಮಾಡಬಹುದು

*ಪ್ರಗತಿ ಪರಿಶೀಲನಾ ವರದಿ ಮತ್ತು ತನಿಖಾ ವರದಿಗಳ ಆಧಾರದಲ್ಲಿ ರಾಷ್ಟ್ರಪತಿ ಕ್ರಮ ತೆಗೆದುಕೊಳ್ಳಬಹುದು. ಜತೆಗೆ ರಾಷ್ಟ್ರಪತಿಗೆ ಅಗತ್ಯ ಎನಿಸಿದ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಅವರು, ಐಐಎಂಗಳಿಗೆ ಆದೇಶಿಸಬಹುದು. ರಾಷ್ಟ್ರಪತಿಯು ನೀಡುವ ಇಂತಹ ಆದೇಶ/ನಿರ್ದೇಶನಗಳಿಗೆ ಐಐಎಂಗಳು ಬದ್ಧವಾಗಿರಲೇಬೇಕು

ನಿರ್ದೇಶಕರ ನೇಮಕ

ಐಐಎಂನ ನಿರ್ದೇಶಕರ ಅಧಿಕಾರ, ನೇಮಕ, ಕಾರ್ಯನಿರ್ವಹಣೆಯನ್ನು ಮೂಲ ಕಾಯ್ದೆಯ 16ನೇ ಸೆಕ್ಷನ್‌ನಲ್ಲಿ ವಿವರಿಸಲಾಗಿದೆ. ಈ ಸೆಕ್ಷನ್‌ಗೆ ವ್ಯಾಪಕ ತಿದ್ದುಪಡಿ ತರಲಾಗಿದೆ.

ಐಐಎಂನ ನಿರ್ದೇಶಕರನ್ನು ಆಯ್ಕೆ ಮಾಡಲು ‘ಪರಿಶೀಲನೆ ಮತ್ತು ಆಯ್ಕೆ ಸಮಿತಿ’ಯನ್ನು ರಚಿಸಬೇಕು ಎಂದು 16ನೇ ಸೆಕ್ಷನ್‌ ಹೇಳುತ್ತದೆ. ಮೂಲ ಕಾಯ್ದೆಯ ಪ್ರಕಾರ ಈ ಸಮಿತಿಯಲ್ಲಿ ಆಡಳಿತ ಮಂಡಳಿಯ ಮುಖ್ಯಸ್ಥರು, ಆಡಳಿತ/ಕೈಗಾರಿಕೆಕಾ/ಉದ್ಯಮ/ಶಿಕ್ಷಣ/ವಿಜ್ಞಾನ/ನಿರ್ವಹಣಾ ಕ್ಷೇತ್ರದ ಮೂವರು ಗಣ್ಯರು ಅಥವಾ ತಜ್ಞರನ್ನು ನೇಮಕ ಮಾಡಬೇಕು. ಈ ಸಮಿತಿಯು ಐಐಎಂನ ನಿರ್ದೇಶಕರನ್ನು ಆಯ್ಕೆ ಮಾಡುತ್ತದೆ ಎಂದು ಮೂಲ ಕಾಯ್ದೆಯ 16ನೇ ಸೆಕ್ಷನ್‌ನಲ್ಲಿ ವಿವರಿಸಲಾಗಿದೆ.

‘ಪರಿಶೀಲನೆ ಮತ್ತು ಆಯ್ಕೆ ಸಮಿತಿಗೆ ತಜ್ಞ ಅಥವಾ ಗಣ್ಯರು ಎಂದು ಇಬ್ಬರು ಸದಸ್ಯರನ್ನಷ್ಟೇ ನೇಮಕ ಮಾಡಬೇಕು. ಜತೆಗೆ, ಮತ್ತೊಬ್ಬ ಸದಸ್ಯರನ್ನು ರಾಷ್ಟ್ರಪತಿಯೇ ನಾಮನಿರ್ದೇಶನ ಮಾಡಬೇಕು’ ಎಂದು ತಿದ್ದುಪಡಿ ಮಸೂದೆ ಹೇಳುತ್ತದೆ. ಇದಲ್ಲದೆ, ಪರಿಶೀಲನೆ ಮತ್ತು ಆಯ್ಕೆ ಸಮಿತಿಯು ರಾಷ್ಟ್ರಪತಿಯ ಪೂರ್ವಾನುಮತಿ ಪಡೆದುಕೊಂಡೇ ಐಐಎಂ ನಿರ್ದೇಶಕರನ್ನು ನೇಮಕ ಮಾಡಬೇಕು ಎಂದು ತಿದ್ದುಪಡಿ ಮಸೂದೆ ಹೇಳುತ್ತದೆ.

*ಆಯ್ಕೆ ಸಮಿತಿಗೆ ರಾಷ್ಟ್ರಪತಿಯು ಒಬ್ಬ ಸದಸ್ಯರನ್ನು ನಾಮನಿರ್ದೇಶನ ಮಾಡುವ ಅಧಿಕಾರವನ್ನು ಹೊಸದಾಗಿ ಸೇರಿಸಲಾಗಿದೆ

*ನಿರ್ದೇಶಕರ ನೇಮಕಕ್ಕೂ ಮುನ್ನ ರಾಷ್ಟ್ರಪತಿಯ ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ

*ಐಐಎಂ ನಿರ್ದೇಶಕರನ್ನು ಆ ಹುದ್ದೆಯಿಂದ ತೆಗೆದುಹಾಕುವ ಅಧಿಕಾರವು ಆಡಳಿತ ಮಂಡಳಿಗೆ ಇತ್ತು. ಆದರೆ ಅದಕ್ಕೂ ಮುನ್ನ ಅಗತ್ಯ ತನಿಖೆ ನಡೆದು, ವರದಿ ಬಂದ ನಂತರವಷ್ಟೇ ಕ್ರಮ ತೆಗೆದುಕೊಳ್ಳಬೇಕಿತ್ತು. ಆದರೆ, ಈಗ ನಿರ್ದೇಶಕರನ್ನು ಆ ಹುದ್ದೆಯಿಂದ ತೆಗೆದುಹಾಕಲು, ಆಡಳಿತ ಮಂಡಳಿಯು ರಾಷ್ಟ್ರಪತಿಯ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ತಿದ್ದುಪಡಿ ಮಸೂದೆಯು ಹೇಳುತ್ತದೆ

ಐಐಎಂಗೆ ಮೂಗುದಾರ ಬೇಕು

ಐಐಎಂಗಳು ಸಾರ್ವಜನಿಕ ಸಂಸ್ಥೆಗಳು. ಈ ಸಂಸ್ಥೆಗಳು ಜನರಿಗೆ ಉತ್ತರದಾಯಿ ಆಗಿರಬೇಕು. ಇವು ಖಾಸಗಿ ಸ್ವತ್ತುಗಳಾಗಬಾರದು. ನಿರ್ದೇಶಕರು, ಆಡಳಿತ ಮಂಡಳಿ ಸದಸ್ಯರಿಗೆ ಮೂಗುದಾರ ಹಾಕುವ ಅಗತ್ಯ ಇದೆ

-ಅತುಲ್‌ ಕುಮಾರ್‌, ಕೌಶಲ ಅಭಿವೃದ್ಧಿ ಸಚಿವಾಲಯದಲ್ಲಿ ನೀತಿ ವಿಶ್ಲೇಷಕರು

ಸೈದ್ಧಾಂತಿಕ ‘ಪರಿಶುದ್ಧಿ’ ತೂರಿಸುವ ಯತ್ನ

2017ರ ಕಾನೂನಿನಲ್ಲಿ ಐಐಎಂಗಳಿಗೆ ಸ್ವಾಯತ್ತೆ ನೀಡಲಾಗಿತ್ತು. ಇದೇ ಕಾರಣಕ್ಕಾಗಿ ಈ ಕಾನೂನನ್ನು ಇಡೀ ಸಂಸತ್ತು ಒಪ್ಪಿಕೊಂಡಿತ್ತು. ಆದರೆ, ನರೇಂದ್ರ ಮೋದಿ ನೇತೃತ್ವದ ಸರ್ಕಾರವು ತಾನು ಆರು ವರ್ಷಗಳ ಹಿಂದೆ ಮಾಡಿದ್ದನ್ನು ಈಗ ಅಳಿಸಿ ಹಾಕಲು ಹೊರಟಿದೆ. ಸ್ವಾಯತ್ತೆ ಈ ಸರ್ಕಾರಕ್ಕೆ ಇಷ್ಟವಿಲ್ಲ ಎಂಬುದು ಈ ಮೂಲಕ ಸ್ಪಷ್ಟವಾಗುತ್ತಿದೆ. ಐಐಎಂಗಳ ಚಿಂತನಾ ಸ್ವಾತಂತ್ರ್ಯ, ಸುಲಲಿತವಾದ ಆಡಳಿತವನ್ನು ಕೆಡಿಸುವ ಹಾಗೂ ಈ ಸಂಸ್ಥೆಗಳಲ್ಲಿ ಸೈದ್ಧಾಂತಿಕ ‘ಪರಿಶುದ್ಧಿ’ಯನ್ನು ತೂರಿಸುವ ಕೆಲಸ ನಡೆಯುತ್ತಿದೆ. ಈ ಮೂಲಕ, ಪ್ರಧಾನಿ ಮೋದಿ ಐಐಎಂಗಳ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದ್ದಾರೆ

-ಜೈರಾಮ್‌ ರಮೇಶ್‌, ಕಾಂಗ್ರೆಸ್‌ ಸಂಸದ

ಸ್ವಾಯತ್ತೆ: ಜಗತ್ತಿನಲ್ಲೇ ಒಪ್ಪಿತ ಮಾದರಿ

ಐಐಎಂಗಳನ್ನು ಕೇಂದ್ರ ಸರ್ಕಾರ ತನ್ನ ನೇರ ಹಿಡಿತಕ್ಕೆ ತೆಗೆದುಕೊಳ್ಳಲು ಸಂದರ್ಶಕ ಮುಖ್ಯಸ್ಥ ಎನ್ನುವ ಹುದ್ದೆಯನ್ನು ಸೃಷ್ಟಿಸಲಾಗಿದೆ. ಸ್ವಾಯತ್ತೆಯ ಮೇಲಿನ ನೇರ ದಾಳಿ ಇದಾಗಿದೆ. ಜವಾಬ್ದಾರಿಯನ್ನು ಹೊರಿಸುವ ಅನ್ಯ ಹಲವು ಮಾರ್ಗಗಳು ಇದ್ದವು. ಸ್ವತಂತ್ರ ಮಂಡಳಿಯೊಂದು ಐಐಎಂಗಳನ್ನು ನಡೆಸುವುದು ಜಗತ್ತಿನಲ್ಲೇ ಒಪ್ಪಿತವಾದ ಮಾದರಿಯಾಗಿತ್ತು. ಜೊತೆಗೆ ಈ ಮಾದರಿಯು ಯಶಸ್ಸನ್ನು ಕಂಡಿದೆ. ಇದು ಭಾರತದಲ್ಲೂ ಸಾಧ್ಯವಿತ್ತು.

-ಐಐಎಂಗಳ ಕೆಲವು ನಿರ್ದೇಶಕರ ಅಭಿಪ್ರಾಯ 

ಆಧಾರ: ಐಐಎಂ ಕಾಯ್ದೆ–2017, ಐಐಎಂ ತಿದ್ದುಪಡಿ ಮಸೂದೆ–2023, ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT