ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಮಹುವಾ ಅವರ ಪ್ರಶ್ನೆಗಾಗಿ ಕಾಸು ಪ್ರಕರಣ- ಶಿಫಾರಸು ಇದ್ದರೂ ತನಿಖೆ ಇಲ್ಲ

ಟಿಎಂಸಿ ಸಂಸದೆಯಾಗಿದ್ದ ಮಹುವಾ ಮೊಯಿತ್ರಾ ಅವರನ್ನು ಲೋಕಸಭಾ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ
Published 10 ಡಿಸೆಂಬರ್ 2023, 23:57 IST
Last Updated 10 ಡಿಸೆಂಬರ್ 2023, 23:57 IST
ಅಕ್ಷರ ಗಾತ್ರ

ಲೋಕಸಭೆಯ ‘ಸದಸ್ಯರ ಪೋರ್ಟಲ್‌’ಗೆ ಲಾಗಿನ್ ಆಗಲು ಬಳಸುವ ಐ.ಡಿ. ಮತ್ತು ಪಾಸ್‌ವರ್ಡ್‌ ಅನ್ನು ಅನಧಿಕೃತ ವ್ಯಕ್ತಿಯೊಂದಿಗೆ ಹಂಚಿಕೊಂಡಿದ್ದಾರೆ ಎಂದು ಟಿಎಂಸಿ ಸಂಸದೆಯಾಗಿದ್ದ ಮಹುವಾ ಮೊಯಿತ್ರಾ ಅವರನ್ನು ಲೋಕಸಭಾ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ. ಮಹುವಾ ಅವರ ವಿರುದ್ಧ ಇದ್ದ ಆರೋಪಗಳ ಪರಿಶೀಲನೆಗೆ ನೇಮಿಸಿದ್ದ ನೀತಿ ಸಮಿತಿಯು, ಉಚ್ಚಾಟನೆಯೂ ಸೇರಿ ಇನ್ನೂ ಮೂರು ಶಿಫಾರಸುಗಳನ್ನು ಮಾಡಿತ್ತು. ಆದರೆ ಸರ್ಕಾರವು ಈಗ ಉಚ್ಚಾಟನೆಯನ್ನಷ್ಟೇ ಮಾಡಿದೆ. ಈ ಆರೋಪಗಳಿಗೆ ಸಂಬಂಧಿಸಿದಂತೆ ಕಾಲಮಿತಿಯಲ್ಲಿ ತನಿಖೆ ನಡೆಸಬೇಕು ಎಂದೂ ಸಮಿತಿ ಶಿಫಾರಸು ಮಾಡಿತ್ತು. ತನಿಖೆಗೆ ಆದೇಶಿಸುವ ಬಗ್ಗೆ ಸರ್ಕಾರವು ಮಾತೇ ಆಡಿಲ್ಲ.

––––

ಬಿಜೆಪಿಯ ನಿಶಿಕಾಂತ್ ದುಬೆ ಅವರು ಮಹುವಾ ಮೊಯಿತ್ರಾ ಮೇಲೆ ನೀಡಿದ್ದ ದೂರಿನಲ್ಲಿ, ‘ತಮ್ಮ ಉದ್ಯಮಿ ಗೆಳೆಯ ದರ್ಶನ್ ಹಿರಾನಂದಾನಿ ಅವರಿಗೆ ಅನುಕೂಲ ಮಾಡಿಕೊಡಲು ಮಹುವಾ ಅವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ದರ್ಶನ್ ಅವರಿಗೆ ಅನುಕೂಲವಾಗುವಂತೆ ಪ್ರಶ್ನೆ ಕೇಳಲು ಹಣ ಪಡೆದಿದ್ದಾರೆ ಎಂಬ ಆರೋಪವಿದೆ. ಇದನ್ನು ಮರೆಮಾಚಲು ಅವರು ಉದ್ಯಮಿ ಗೌತಮ್ ಅದಾನಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಮೇಲೆ ವಾಗ್ದಾಳಿ ನಡೆಸುತ್ತಿದ್ದರು’ ಎಂದು ವಿವರಿಸಿದ್ದರು. 

ಮಹುವಾ ಅವರು ಹಣಕ್ಕಾಗಿ ಪ್ರಶ್ನೆ ಕೇಳಿದ್ದಾರೆ ಮತ್ತು ಅದಾನಿ, ಮೋದಿ ಮತ್ತು ಅಮಿತ್ ಶಾ ವಿರುದ್ಧ ಉದ್ದೇಶಪೂರ್ವಕವಾಗಿ ಲೋಕಸಭೆಯಲ್ಲಿ ವಾಗ್ದಾಳಿ ನಡೆಸಿದ್ದಾರೆ ಎಂದು ಸುಪ್ರೀಂ ಕೋರ್ಟ್‌ ವಕೀಲ ಜೈ ಅನಂತ್ ದೇಹದ್ರಾಯ್‌ ಅವರು ಇದೇ ಅಕ್ಟೋಬರ್‌ನಲ್ಲಿ ಸಿಬಿಐಗೆ ಸಲ್ಲಿಸಿದ್ದ ದೂರಿನ ಪ್ರತಿಯನ್ನೂ ದುಬೆ ಅವರು, ಲೋಕಸಭಾ ಸ್ಪೀಕರ್‌ಗೆ ಬರೆದಿದ್ದ ಪತ್ರದೊಂದಿಗೆ ಲಗತ್ತಿಸಿದ್ದರು.

ಈ ದೂರುಗಳ ಅನ್ವಯ ಪರಿಶೀಲನೆಗೆ ಮುಂದಾದ ನೀತಿ ಸಮಿತಿಯು, ತನ್ನ ಮುಂದೆ ಎರಡು ಪ್ರಮುಖ ಪ್ರಶ್ನೆಗಳನ್ನು ಇರಿಸಿಕೊಂಡಿತ್ತು. ಅದರಲ್ಲಿ ಮೊದಲನೆಯದು: ‘ಮಹುವಾ ಅವರು ಸಂಸದರ ಪೋರ್ಟಲ್‌ನ ತಮ್ಮ ಲಾಗಿನ್ ಐ.ಡಿ ಮತ್ತು ಪಾಸ್‌ವರ್ಡ್‌ ಹಾಗೂ ಸಂಸದರ ಇ–ಮೇಲ್ ಐ.ಡಿ ಮತ್ತು ಪಾಸ್‌ವರ್ಡ್‌ಗಳನ್ನು ಅನಧಿಕೃತ ವ್ಯಕ್ತಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇದು ಸಂಸತ್ತಿನ ನಡಾವಳಿಗೆ ವಿರುದ್ಧವೇ?’ ಎಂಬುದಾಗಿತ್ತು.

ಎರಡನೆಯದು: ‘ಮಹುವಾ ಅವರು ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ನಗದು, ಉಡುಗೊರೆಗಳು ಮತ್ತು ಇತರ ಸವಲತ್ತುಗಳನ್ನು ಪಡೆದುಕೊಳ್ಳುವ ಮೂಲಕ ಸಂಸತ್ತಿನ ನಡಾವಳಿಗಳನ್ನು ಉಲ್ಲಂಘಿಸಿದ್ದಾರೆಯೇ?’ ಎಂಬುದಾಗಿತ್ತು.

ಈ ಎರಡೂ ಪ್ರಶ್ನೆಗಳನ್ನು ಪರಿಶೀಲಿಸಲು ಸಮಿತಿಯು ವಕೀಲ ಜೈ ಅನಂತ್ ದೇಹದ್ರಾಯ್, ದರ್ಶನ್ ಹಿರಾನಂದಾನಿ ಮತ್ತು ಮಹುವಾ ಮೊಯಿತ್ರಾ ಅವರಿಂದ ವಿವರಣೆಗಳನ್ನು ಕೇಳಿತ್ತು. ದೇಹದ್ರಾಯ್ ಅವರು ಸಮಿತಿ ಮುಂದೆ ಹಾಜರಾಗಿ ಉತ್ತರ ನೀಡಿದ್ದರು. ಹಿರಾನಂದಾನಿ ಅವರು ದುಬೈನಿಂದಲೇ ತಮ್ಮ ಉತ್ತರದ ದೃಢೀಕೃತ ಪ್ರತಿಯನ್ನು ಕಳುಹಿಸಿದ್ದರು. ಮಹುವಾ ಅವರು ಸಮಿತಿ ಮುಂದೆ ಹಾಜರಾಗಿ ವಿವರಣೆ ನೀಡಿದ್ದರು. ಜತೆಗೆ ಗೃಹ ಸಚಿವಾಲಯ, ಮಾಹಿತಿ ತಂತ್ರಜ್ಞಾನ ಸಚಿವಾಲಯದಿಂದಲೂ ಹಲವು ಮಾಹಿತಿಗಳನ್ನು ಸಮಿತಿ ಕೇಳಿತ್ತು. ಆ ಎಲ್ಲಾ ಮಾಹಿತಿಗಳು ಮತ್ತು ವಿವರಣೆಗಳನ್ನು ಪರಿಶೀಲಿಸಿದ ಸಮಿತಿಯು, ವರದಿಯನ್ನು ಸಿದ್ದಪಡಿಸಿತ್ತು.

‘ಮಹುವಾ ಅವರು ಈವರೆಗೆ 61 ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಲ್ಲಿ 47 ಬಾರಿ ಸಂಸದರ ಪೋರ್ಟಲ್‌ನ ಅವರ ಖಾತೆಗೆ ದುಬೈನಿಂದ ಲಾಗಿನ್ ಆಗಲಾಗಿದೆ. ಅವರು ಈ ಅವಧಿಯಲ್ಲಿ (2019–2023) ಹಲವು ಬಾರಿ ದುಬೈಗೆ ಹೋಗಿದ್ದರೂ, ಅವರು ಅಲ್ಲಿದ್ದ ಒಂದು ವೇಳೆಯೂ ಸಂಸದರ ಪೋರ್ಟಲ್‌ನ ಅವರ ಖಾತೆಗೆ ಲಾಗಿನ್ ಆಗಿಲ್ಲ. ಅವರ ಖಾತೆಯನ್ನು ಬೇರೆ ಯಾರೋ ಅನಧಿಕೃತ ವ್ಯಕ್ತಿ ಬಳಸುತ್ತಿದ್ದರು. ಅದು ದರ್ಶನ್ ಹಿರಾನಂದಾನಿಯೇ ಆಗಿದ್ದರು ಮತ್ತು ಅವರೇ ಆ ಪ್ರಶ್ನೆಗಳನ್ನು ಪೋರ್ಟಲ್‌ಗೆ ಅಪ್‌ಲೋಡ್‌ ಮಾಡಿದ್ದಾಗಿ ಹೇಳಿದ್ದಾರೆ. ಇದು ಸಂಸತ್ತಿನ ನಡಾವಳಿಯ ಉಲ್ಲಂಘನೆ. ಹೀಗಾಗಿ ಮಹುವಾ ಅವರಿಗೆ ಶಿಕ್ಷೆ ನೀಡಬೇಕು. ಅದು ಸಂಸತ್ತಿನಿಂದ ಉಚ್ಚಾಟನೆ ಮಾಡುವುದಕ್ಕಿಂತ ಕಡಿಮೆ ಆಗಿರಬಾರದು’ ಎಂದು ಸಮಿತಿಯು ಶಿಫಾರಸು ಮಾಡಿತ್ತು. ಇದನ್ನು ಸರ್ಕಾರ ಈಗಾಗಲೇ ಮಾಡಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಮಿತಿಯು ಇನ್ನೊಂದು ಶಿಫಾರಸನ್ನೂ ಮಾಡಿತ್ತು. ‘ಸಂಸದರ ಪೋರ್ಟಲ್‌ ಖಾತೆಯ ಲಾಗಿನ್‌ ವಿವರಗಳನ್ನು ಅನಧಿಕೃತ ವ್ಯಕ್ತಿಯೊಂದಿಗೆ ಹಂಚಿಕೊಂಡಿದ್ದು, ಇದು ಹೀನ ಮತ್ತು ಅಪರಾಧ ಕೃತ್ಯವಾಗಿದೆ. ಈ ಬಗ್ಗೆ ಸರ್ಕಾರವು ತಕ್ಷಣವೇ ಮತ್ತು ಕಾಲಮಿತಿಯಲ್ಲಿ ತನಿಖೆಗೆ ಆದೇಶಿಸಬೇಕು’ ಎಂದು ಸಮಿತಿ ಹೇಳಿತ್ತು. ಆದರೆ, ಈ ಶಿಫಾರಸನ್ನು ಸರ್ಕಾರ ಈವರೆಗೆ ಪರಿಗಣಿಸಿಲ್ಲ ಮತ್ತು ತನಿಖೆಗೆ ಆದೇಶಿಸಿಲ್ಲ.

ಎರಡನೇ ಪ್ರಶ್ನೆಗೆ ಸಂಬಂಧಿಸಿದಂತೆ ಸಮಿತಿಯು, ‘ದರ್ಶನ ಹಿರಾನಂದಾನಿ ಅವರಿಂದ ರುಮಾಲು, ಲಿಪ್‌ಸ್ಟಿಕ್‌ ಮತ್ತು ಮೇಕಪ್‌ ಕಿಟ್‌ ಅನ್ನು  ಉಡುಗೊರೆಯಾಗಿ ಪಡೆದಿರುವುದಾಗಿ, ಟ್ಯಾಕ್ಸಿ ಸೇವೆ ಪಡೆದಿರುವುದಾಗಿ ಸ್ವತಃ ಮಹುವಾ ಅವರೇ ಒಪ್ಪಿಕೊಂಡಿದ್ದಾರೆ. ಈ ಮೂಲಕ ಅವರು ತಪ್ಪೆಸಗಿದ್ದಾರೆ. ಅಲ್ಲದೆ ಅವರು ದರ್ಶನ್ ಅವರಿಗೆ ಅನುಕೂಲ ಮಾಡಿಕೊಡಲೆಂದೇ ಹೀಗೆ ಮಾಡಿದ್ದಾರೆ’ ಎಂದು ವಿವರಿಸಿದೆ.

‘ಆದರೆ ದರ್ಶನ್ ಮತ್ತು ಮಹುವಾ ಮಧ್ಯೆ ಹಣಕಾಸು ವ್ಯವಹಾರ ನಡೆಸಿದ್ದರ ಬಗ್ಗೆ ತನಿಖೆ ನಡೆಸಲು ಸಮಿತಿಯು ಶಕ್ತವೂ ಅಲ್ಲ, ನಮ್ಮ ಕೆಲಸವೂ ಅದಲ್ಲ. ಹೀಗಾಗಿ ಈ ಬಗ್ಗೆ ಸರ್ಕಾರವು ತಕ್ಷಣವೇ ಮತ್ತು ಕಾಲಮಿತಿಯಲ್ಲಿ ತನಿಖೆ ನಡೆಸಬೇಕು’ ಎಂದು ಸಮಿತಿಯು ಶಿಫಾರಸು ಮಾಡಿತ್ತು. ಈ ಶಿಫಾರಸನ್ನೂ ಸರ್ಕಾರ ಪರಿಗಣಿಸಿಲ್ಲ ಮತ್ತು ಈ ಬಗ್ಗೆ ತನಿಖೆಗೆ ಆದೇಶಿಸಿಲ್ಲ.

ದೂರಿನ ಬಹುಮುಖ್ಯ ಭಾಗವನ್ನೇ ಕೈ ಬಿಟ್ಟ ಸಮಿತಿ

ಜೈ ಅನಂತ್ ದೇಹದ್ರಾಯ್ ಅವರು ಸಿಬಿಐಗೆ ಸಲ್ಲಿಸಿದ್ದ ದೂರು ಮತ್ತು ನಿಶಿಕಾಂತ್ ದುಬೆ ಅವರು ಸ್ಪೀಕರ್‌ಗೆ ಬರೆದಿದ್ದ ಪತ್ರದಲ್ಲಿ ಮಹುವಾ ಅವರು ಈವರೆಗೆ ಲೋಕಸಭೆಯಲ್ಲಿ ಕೇಳಿದ್ದ ಪ್ರಶ್ನೆಗಳ ಸಂಖ್ಯೆಯ ಬಗ್ಗೆ ಉಲ್ಲೇಖಿಸಿದ್ದರು. ಆ ಪ್ರಕಾರ ಮಹುವಾ ಅವರು ಲೋಕಸಭೆಯಲ್ಲಿ 2019ರಿಂದ ಈವರೆಗೆ ಒಟ್ಟು 61 ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಲ್ಲಿ 50 ಪ್ರಶ್ನೆಗಳು ಅದಾನಿ ಗುಂಪಿಗೆ ಸಂಬಂಧಿಸಿದಂತೆ ಮತ್ತು ದರ್ಶನ್ ಹಿರಾನಂದಾನಿ ಕಂಪನಿಗೆ ಸಂಬಂಧಿಸಿದ್ದಾಗಿವೆ. ಈ ಬಗ್ಗೆ ವಿಸ್ತೃತ ತನಿಖೆ ನಡೆಸಬೇಕು ಎಂದು ದೇಹದ್ರಾಯ್ ಅವರು ಸಿಬಿಐಗೆ ಸಲ್ಲಿಸಿದ್ದ ದೂರಿನಲ್ಲಿ ಕೋರಿದ್ದರು. ದುಬೆ ಅವರೂ ಇದನ್ನೇ ಆಗ್ರಹಿಸಿದ್ದರು.

ಮಹುವಾ ಅವರು ಕೇಳಿದ್ದ ಎಲ್ಲಾ ದೂರುಗಳು, ಆ ದೂರುಗಳು ದರ್ಶನ್‌ ಅವರಿಗೆ ಹೇಗೆ ಅನುಕೂಲ ಮಾಡಿಕೊಟ್ಟಿವೆ ಮತ್ತು ಅದಾನಿ ವಿರುದ್ಧ ಯಾವ ಪ್ರಶ್ನೆ ಕೇಳಿದ್ದಾರೆ ಎಂಬ ವಿವರಗಳನ್ನು ದೇಹದ್ರಾಯ್ ತಮ್ಮ ದೂರಿನಲ್ಲಿ ದಾಖಲೆ ಸಮೇತ ವಿವರಿಸಿದ್ದರು. ಈ ಎಲ್ಲಾ ಪ್ರಶ್ನೆಗಳಿಗೆ ಸಂಬಂಧಿತ ಸಚಿವಾಲಯವು ನೀಡಿರುವ ಉತ್ತರಗಳನ್ನೂ ದೇಹದ್ರಾಯ್ ತಮ್ಮ ದೂರಿನ ಪ್ರತಿಯಲ್ಲಿ ಲಗತ್ತಿಸಿದ್ದಾರೆ.

2019ರ ಜುಲೈ 8ರಂದು ಮಹುವಾ ಅವರು, ‘ಸರ್ಕಾರಿ ಕಂಪನಿಯಾದ ಗೇಲ್‌ (ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್‌) ಒಡಿಶಾದ ಪಾರಾದೀಪ್‌ ಬಂದರು ಟ್ರಸ್ಟ್‌ ಜೊತೆಗೆ ತೇಲುವ ಅನಿಲ ಸಂಗ್ರಹಾಗಾರ ನಿರ್ಮಿಸುವ ಸಂಬಂಧ 2013ರಲ್ಲಿ ₹2,485 ಕೋಟಿ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿತ್ತು. 2015ರಲ್ಲಿ ಗೇಲ್‌ ಈ ಒಪ್ಪಂದವನ್ನು ಏಕಾಏಕಿ ಕೈಬಿಟ್ಟಿತ್ತು. ನಂತರ ಗೇಲ್‌ ಮತ್ತು ಐಒಸಿಎಲ್‌ ಜಂಟಿಯಾಗಿ ಧರ್ಮಾ ಪೋರ್ಟ್‌ ಕಂಪನಿಯ ಸಂಗ್ರಹಾಗಾರಗಳನ್ನು ಬಾಡಿಗೆಗೆ ಬಳಸಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿದ್ದವು. ಮೂಲ ಯೋಜನೆ ₹2,485 ಕೋಟಿ ಮೊತ್ತದ್ದಾಗಿತ್ತು. ಆದರೆ ಆನಂತರ ಎರಡೂ ಕಂಪನಿಗಳು ಮಾಡಿಕೊಂಡಿರುವ ಬಾಡಿಗೆ ಒಪ್ಪಂದದ ಒಟ್ಟು ಮೊತ್ತ ₹34,500 ಕೋಟಿಯಾಗುತ್ತದೆ. ಮೂಲ ಯೋಜನೆಯನ್ನು ಕೈಬಿಟ್ಟಿದ್ದು ಏಕೆ’ ಎಂದು ಲೋಕಸಭೆಯಲ್ಲಿ ಪ್ರಶ್ನೆ ಕೇಳಿದ್ದರು. 

ಜತೆಗೆ, ‘ಈ ಯೋಜನೆಯ ವೆಚ್ಚವಾದ ₹34,500 ಕೋಟಿಯನ್ನು ಗ್ರಾಹಕರಿಂದಲೇ ಸಂಗ್ರಹಿಸಲು ಯೋಜಿಸಲಾಗಿದೆ ಎಂಬುದು ನಿಜವೇ’ ಎಂದೂ ಪ್ರಶ್ನಿಸಿದ್ದರು. 

ಇದೇ ಯೋಜನೆಗೆ ಸಂಬಂಧಿಸಿದಂತೆ ಮಹುವಾ ಅವರು ಲೋಕಸಭೆಯಲ್ಲಿ ಮತ್ತಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ‘ಯಾವುದೇ ಟೆಂಡರ್‌ ಕರೆಯದೆಯೇ ಧರ್ಮಾ ಪೋರ್ಟ್‌ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆಯೇ? ಟೆಂಡರ್ ಕರೆದಿದ್ದರೆ ಅದರ ವಿವರಗಳನ್ನು ನೀಡಿ. ವಾರ್ಷಿಕ ಬಾಡಿಗೆ ವಿವರಗಳನ್ನು ನೀಡಿ’ ಎಂದು ಮಹುವಾ ಕೋರಿದ್ದರು.

ಮಹುವಾ ಅವರ ಪ್ರಶ್ನೆಯಲ್ಲಿ ಉಲ್ಲೇಖಿಸಲಾದ ‘ಧರ್ಮಾ ಪೋರ್ಟ್‌’ ಕಂಪನಿಯ ಒಡೆತನವು ಅದಾನಿ ಸಮೂಹದ್ದೇ ಆಗಿದೆ. ದೇಹದ್ರಾಯ್ ಅವರು ಸಿಬಿಐಗೆ ನೀಡಿರುವ ದೂರಿನಲ್ಲಿ ಇದನ್ನು ಉಲ್ಲೇಖಿಸಿದ್ದಾರೆ. ಈ ಎಲ್ಲಾ ಪ್ರಶ್ನೆಗಳು ಅದಾನಿ ಅವರ ಕುರಿತಾದದ್ದು ಎಂದೂ ಅವರು ಆರೋಪಿಸಿದ್ದಾರೆ. ಈ ಬಗ್ಗೆ ವಿಸ್ತೃತ ತನಿಖೆ ನಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಆದರೆ ಅದಾನಿ ಕುರಿತಾದ ಪ್ರಶ್ನೆಗಳ ಬಗ್ಗೆ ಸಮಿತಿಯು ದೇಹದ್ರಾಯ್, ಹಿರಾನಂದಾನಿ ಮತ್ತು ಮಹುವಾ ಅವರ ಬಳಿ ಯಾವ ಪ್ರಶ್ನೆಯನ್ನೂ ಕೇಳಿಲ್ಲ. ತನ್ನ ವರದಿಯಲ್ಲಿಯೂ ಈ ಆರೋಪದ ಬಗ್ಗೆ ಏನನ್ನೂ ಹೇಳಿಲ್ಲ. ಸರ್ಕಾರವೂ ಈ ಬಗ್ಗೆ ಯಾವ ಪ್ರತಿಕ್ರಿಯೆ ನೀಡಿಲ್ಲ. ದೇಹದ್ರಾಯ್ ಅವರು ನೀಡಿದ್ದ ದೂರನ್ನು ಸಿಬಿಐ ಪರಿಗಣಿಸಿದೆಯೇ ಎಂಬುದರ ಬಗ್ಗೆ ಮಾಹಿತಿ ಇಲ್ಲ. ‘ಅದಾನಿಗೆ ಸರ್ಕಾರವು ನೆರವಾಗಿರುವುದು ಬಹಿರಂಗವಾಗುತ್ತದೆ ಎಂದೇ ಸಮಿತಿಯು ಈ ಅಂಶಗಳನ್ನು ಪರಿಶೀಲನೆ ವೇಳೆ ಕಡೆಗಣಿಸಿದೆ’ ಎಂದು ಮಹುವಾ ಮೊಯಿತ್ರಾ ಆರೋಪಿಸಿದ್ದರು.

‘ಸಂಸದರು ಲಾಗಿನ್‌ ವಿವರ ಹಂಚಿಕೊಳ್ಳುತ್ತಾರೆ’

ಸಂಸದರ ಪೋರ್ಟಲ್‌ನಲ್ಲಿ ತಮ್ಮ ಖಾತೆಯ ಲಾಗಿನ್ ವಿವರಗಳನ್ನು ಹಂಚಿಕೊಂಡ ಒಂದೇ ಕಾರಣಕ್ಕೇ ಮಹುವಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಬೇಕು ಎಂದು ನೀತಿ ಸಮಿತಿಯು ತನ್ನ ವರದಿಯಲ್ಲಿ ಹೇಳಿತ್ತು. ಆದರೆ ಅದೇ ವರದಿಯಲ್ಲಿ, ‘ಬಹುತೇಕ ಸಂಸದರು ತಮ್ಮ ಖಾತೆಯ ಲಾಗಿನ್‌ ವಿವರಗಳನ್ನು ಸಹಾಯಕರೊಂದಿಗೆ ಹಂಚಿಕೊಳ್ಳುತ್ತಾರೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ’ ಎಂದೂ ಹೇಳಿದೆ.

‘ಹೀಗೆ ಲಾಗಿನ್ ವಿವರಗಳನ್ನು ಹಂಚಿಕೊಂಡಾಗ, ಪ್ರತಿ ಮೂರು ತಿಂಗಳಿಗೆ ಒಮ್ಮೆ ಪಾಸ್‌ವರ್ಡ್‌ ಬದಲಿಸಬೇಕು ಎಂದು ನಿಯಮಗಳು ಹೇಳುತ್ತವೆ. ಹೀಗಾಗಿ ಮೂರು ತಿಂಗಳಿಗೆ ಒಮ್ಮೆ ಪಾಸ್‌ವರ್ಡ್‌ ಬದಲಿಸಬೇಕು. ಹಾಗೆ ಮಾಡದಿದ್ದರೆ, ಹ್ಯಾಕರ್‌ಗಳು ಕನ್ನ ಹಾಕುವ ಸಂಭವವಿರುತ್ತದೆ’ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಒಂದೆಡೆ ಬಹುತೇಕ ಸಂಸದರು ಲಾಗಿನ್‌ ವಿವರ ಹಂಚಿಕೊಳ್ಳುತ್ತಾರೆ ಎಂಬುದನ್ನು ಒಪ್ಪಿಕೊಂಡಿರುವ ಸಮಿತಿಯು, ಇನ್ನೊಂದೆಡೆ ಲಾಗಿನ್ ವಿವರ ಹಂಚಿಕೊಂಡ ಕಾರಣಕ್ಕೇ ಮಹುವಾ ಅವರ ಉಚ್ಚಾಟನೆಗೆ ಶಿಫಾರಸು ಮಾಡಿದೆ.

******

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT