ಸೋಮವಾರ, ಆಗಸ್ಟ್ 8, 2022
21 °C

Explainer | ಆನ್‌ಲೈನ್‌ ಶಿಕ್ಷಣ ಊಟದಲ್ಲಿ ಉಪ್ಪಿನಕಾಯಿಯಂತಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani


ಡಾ.ಶಶಿಧರ್‌ ಎಚ್‌.ಎನ್

ಆನ್‌ಲೈನ್‌ ಶಿಕ್ಷಣ ಬೇಕೆ, ಬೇಡವೇ ಎಂಬ ಚರ್ಚೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ವಿದೇಶಗಳಲ್ಲಿ ಈಗಾಗಲೇ ಆನ್‌ಲೈನ್ ಶಿಕ್ಷಣ ಬೇರೂರಲು ಆರಂಭಿಸಿದೆ. ಇಂಗ್ಲೆಂಡ್‌ನಲ್ಲಿ ಲಾಕ್‌ಡೌನ್‌ ಸಂದರ್ಭದಲ್ಲಿ ನರ್ಸರಿಯಿಂದ ಮೊದಲ್ಗೊಂಡು ಎಲ್ಲ ಹಂತದಲ್ಲೂ ಆನ್‌ಲೈನ್ ಶಿಕ್ಷಣ ನೀಡಲಾರಂಭಿಸಿದರು. ಅಮೆರಿಕದಲ್ಲಿ ಟ್ಯಾಬ್‌ ಮೂಲಕ ಕಲಿಕೆ ನಡೆಯುತ್ತಿದೆ. ಆ ದೇಶಗಳಲ್ಲಿ ಆನ್‌ಲೈನ್‌ ಶಿಕ್ಷಣ ಒಂದು ಸಂಸ್ಕೃತಿಯಾಗಿ ಬೆಳೆದಿದೆ. ನಮ್ಮಲ್ಲಿ ಆ ಸಂಸ್ಕೃತಿ ಆರಂಭವಾಗಿಲ್ಲ. ವಿದ್ಯಾರ್ಥಿಗಳಿಗೆ ಏಕಾಏಕಿ ಅದಕ್ಕೆ ಒಗ್ಗಿಕೊಳ್ಳುವುದು ಕಷ್ಟ.

ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ನೋಡೋಣ; ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳು ವಿಶೇಷವಾಗಿ ಟಿ.ವಿ ಪರದೆ, ಕಂಪ್ಯೂಟರ್‌ ಮತ್ತು ಮೊಬೈಲ್‌ ಫೋನ್‌ಗಳ ಪರದೆಗಳು ಪ್ರಚೋದಕಗಳೇ ಸರಿ. ಮಿದುಳಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಮಕ್ಕಳು ಬೇಗ ಪ್ರಭಾವಿತರಾಗುತ್ತಾರೆ. ಡಿಜಿಟಲ್‌ ಮಾಧ್ಯಮದ ಮೂಲಕ ಶಿಕ್ಷಣ ನೀಡುವ ವೃತ್ತಿಪರ ಸಂಸ್ಥೆಗಳೇ ಇವೆ. ಅವರು ನೀಡುವ ಆನ್‌ಲೈನ್ ಶಿಕ್ಷಣವು ವಿಭಿನ್ನವಾಗಿರುತ್ತದೆ. ಅವರು ಸಾಕಷ್ಟು  ಅನಿಮೇಷನ್‌ ಗ್ರಾಫಿಕ್ಸ್‌ಗಳನ್ನು ಬಳಸಿಕೊಳ್ಳುತ್ತಾರೆ. ಗ್ರಾಫಿಕ್ಸ್‌ಗಳು ವಿದ್ಯಾರ್ಥಿಗಳ ಮನಸ್ಸನ್ನು ಸೆಳೆಯುತ್ತವೆ. ಆ ಬಗ್ಗೆ ಕುತೂಹಲ ಮತ್ತು ತುಡಿತವೂ ಇರುತ್ತದೆ. ಇದರಿಂದ ಮಕ್ಕಳ ಗಮನ ಅನಿಮೇಷನ್‌ ಗ್ರಾಫಿಕ್ಸ್‌ ಕಡೆಗೆ ಹೋಗುತ್ತದೆಯೇ ಹೊರತು ತರಗತಿಗಳ ಕಡೆ ಹರಿಯುವುದಿಲ್ಲ. ಆ ರೀತಿ ಉನ್ನತ ಗುಣಮಟ್ಟದ ಗ್ರಾಫಿಕ್‌ಗಳನ್ನು ಎಲ್ಲರಿಗೂ ಕೊಡುವ ಸ್ಥಿತಿಯಲ್ಲಿ ದೇಶ ಅಥವಾ ರಾಜ್ಯ ಇಲ್ಲ. ಒಂದು ವೇಳೆ ನೀಡಿದರೂ ಶಾಲೆ ಅಥವಾ ಕಾಲೇಜುಗಳಲ್ಲಿ ಸಹಜವಾಗಿ ಕಲಿಯುವಂತೆ ಕಲಿತುಕೊಳ್ಳಲು ಆಗುವುದಿಲ್ಲ. ಶಾಲೆ ಎಂದರೆ ಪಾಠ ಅಥವಾ ತರಗತಿ ಮಾತ್ರ ಅಲ್ಲ. ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಪೂರಕ ವಾತಾವರಣವನ್ನು ಒಳಗೊಂಡಿರುತ್ತದೆ. ಆಟ, ಒಡನಾಟ, ಗುರು–ಶಿಷ್ಯರ ಬಾಂಧವ್ಯ ಇರುತ್ತದೆ. ಆನ್‌ಲೈನ್ ಕಲಿಕೆಯಿಂದ ಆ ಸರಪಳಿಯೇ ತುಂಡಾಗುತ್ತದೆ. ಮಾಹಿತಿಯನ್ನು ಬಲವಂತವಾಗಿ ತುರುಕುವುದನ್ನು ಬಿಟ್ಟರೆ ನೈಜ ಕಲಿಕೆ ಇರುವುದಿಲ್ಲ.

ಮಕ್ಕಳು ಗ್ರಾಫಿಕ್ಸ್‌ ಮೂಲಕ 15 ನಿಮಿಷ ಕಲಿಯುವ ಪ್ರಯತ್ನ ಮಾಡಿದರೆ, ಐದು ನಿಮಿಷದಷ್ಟು ಮಾಹಿತಿ ತಲೆಯೊಳಗೆ ಹೋಗುತ್ತದೆ. ಟಿ.ವಿ ಅಥವಾ ಇತರ ಎಲೆಕ್ಟ್ರಾನಿಕ್‌ ಮಾಧ್ಯಮಗಳ ಪರದೆಯಲ್ಲಿ ನೋಡಿದ್ದನ್ನು ಕಲಿಯುತ್ತಾರೆ. ಆದರೆ, ಬೇರೆ ಯಾವುದೇ ಶಿಕ್ಷಣ ಅವರಿಗೆ ಸಿಗುವುದಿಲ್ಲ. ಗುರು ಶಿಷ್ಯರ ಬಾಂಧವ್ಯ ಇರುವುದಿಲ್ಲ. ಬೇರೆ ಮಕ್ಕಳ ಜತೆ ಹೊಂದಿಕೊಂಡಿರುವುದಿಲ್ಲ. ದೇಶದ ಪುರಾತನ ಸಂಸ್ಕೃತಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿತ್ತು. ಅದಕ್ಕೊಂದು ಪ್ರಾಚೀನ ಸಂಸ್ಕೃತ ಶ್ಲೋಕವಿದೆ. ಅದರ ಪ್ರಕಾರ ಶಿಕ್ಷಣ ಎಂದರೆ; ಗುರುಗಳಿಂದ ಕಾಲು ಭಾಗ, ಸ್ವಂತ ಬುದ್ಧಿಮತ್ತೆಯಿಂದ ಕಾಲು ಭಾಗ, ಆಟ–ಪಾಠದಿಂದ ಕಾಲು ಭಾಗ ಮತ್ತು ಅನುಭವದಿಂದ ಕಾಲು ಭಾಗ. ಹೀಗೆ ವಿದ್ಯಾರ್ಥಿ ಪರಿಪೂರ್ಣ ಶಿಕ್ಷಣ ಪಡೆಯಬಹುದು ಎಂಬುದು ಅದರ ಸಾರಾಂಶ. ಆನ್‌ಲೈನ್‌ನಿಂದ ನಾವು ಕಾಲು ಭಾಗ ಮಾತ್ರ ಕಲಿಯಬಹುದು. ಆದರೆ ವಿದ್ಯಾರ್ಥಿಗಳ ವಿಚಾರ ಶಕ್ತಿಗೆ ಪ್ರೋತ್ಸಾಹ ಸಿಗುವುದಿಲ್ಲ. ಅನುಭವವೂ ಆಗುವುದಿಲ್ಲ.

ಒಟ್ಟಿನಲ್ಲಿ ಆನ್‌ಲೈನ್‌ ಶಿಕ್ಷಣ ಕೊಡ್ತೇವೆ ಎಂಬ ಡೋಂಗಿ ಆಟ ನಡೆಸುತ್ತಾ ಇದ್ದೇವೆ. ಇದರಿಂದ ಮಕ್ಕಳಿಗೆ ಬೇರೆ ರೀತಿಯ ಬೆಳವಣಿಗೆಗೆ ಅವಕಾಶ ಸಿಗುವುದಿಲ್ಲ. ಬರವಣಿಗೆಯ ಕಲೆಯೇ ನಾಶವಾಗುತ್ತದೆ. ಇತರ ಎಲ್ಲ ವಿಷಯಗಳ ಮೇಲಿನ ಆಸ್ತಕಿಯೂ ಹೋಗುತ್ತದೆ. ಹೀಗಾಗಿ ಪೂರ್ಣ ಪ್ರಮಾಣದ ಆನ್‌ಲೈನ್‌ ಶಿಕ್ಷಣ ಸೂಕ್ತವಲ್ಲ. ಪ್ರಚಲಿತ ಭಾರತದಲ್ಲಿ ತರಗತಿ ಎನ್ನುವುದು ಪ್ರಯೋಗಾಲಯ ಆಗಬಾರದು. ಹಳೆ ಪದ್ಧತಿಯ ಪ್ರಕಾರವೇ ಗುರು–ಶಿಷ್ಯರ ಸುಮಧುರ ಬಾಂಧವ್ಯದ ಮೂಲಕವೇ ಕಲಿಕೆ ಆಗಬೇಕು. ಕಲಿತದ್ದನ್ನು ಅನ್ವಯಗೊಳಿಸುವಂತಿರಬೇಕು.

ಕೊನೆಯಲ್ಲಿ ಒಂದು ಮಾತು, ಆನ್‌ಲೈನ್‌ ಶಿಕ್ಷಣ ಸಂಪೂರ್ಣ ವರ್ಜಿಸಬೇಕು ಎಂದು ಹೇಳುವುದೂ ಸರಿಯಲ್ಲ. ಇಂದಿನ ತಂತ್ರಜ್ಞಾನದ ಕಾಲಮಾನಕ್ಕೆ ಅನುಗುಣವಾಗಿ ವಾರದಲ್ಲಿ ಎರಡು ದಿನ ಆನ್‌ಲೈನ್‌ ತರಗತಿ ಇದ್ದರೆ ಸೂಕ್ತ. ಆಗ ಶಿಕ್ಷಣದಲ್ಲಿ ಸಮತೋಲನ ಸಾಧ್ಯ. ಸಂವಾದಿಯೂ ಆಗಿರಬೇಕು. ಊಟದ ಜತೆ ಉಪ್ಪಿನಕಾಯಿಯಂತೆ ಇರಬೇಕೇ ಹೊರತು ಉಪ್ಪಿನಕಾಯಿಯೇ ಊಟ ಆಗಬಾರದು.

- ಡಾ.ಶಶಿಧರ್‌ ಎಚ್‌.ಎನ್ (ಲೇಖಕ: ಕನ್ಸಲ್ಟಂಟ್‌ ಸೈಕಿಯಾಟ್ರಿಸ್ಟ್‌, ನಿಮ್ಹಾನ್ಸ್‌)

***

ಡಿಜಿಟಲ್ ವ್ಯವಸ್ಥೆ ಜತೆಗೆ ಹೆಜ್ಜೆ


ಡಾ.ಪಿ.ಶ್ಯಾಮರಾಜು

ರೇವಾ ವಿಶ್ವವಿದ್ಯಾಲಯ ಕಳೆದ ಐದು ವರ್ಷದಿಂದ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಡಿಜಿಟಲ್ ವ್ಯವಸ್ಥೆ ಜತೆಗೆ ಹೆಜ್ಜೆ ಹಾಕುತ್ತಿದೆ. ಇದರ ಉದ್ದೇಶ ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಸಮಕಾಲೀನ ಸಮಾಜಕ್ಕೆ ತಕ್ಕಂತೆ ರೂಪಿಸು ವುದು ಹಾಗೂ ವಿಶ್ವವಿದ್ಯಾಲಯ ಎಲ್ಲ ಸೌಲಭ್ಯ ವನ್ನು ಹೊಂದಿರಬೇಕು ಎಂಬ ದೂರದೃಷ್ಟಿ.

ಕೊರೊನಾ ಬಂದರೂ ಬೋಧನೆ ಹಾಗೂ ಕಲಿಕೆಗೆ ಯಾವುದೇ ಅಡಚಣೆ ಉಂಟಾಗಿಲ್ಲ. ಏಕೆಂದರೆ, ರೇವಾ ಶೈಕ್ಷಣಿಕ ಕಾರ್ಯಕ್ರಮಗಳ ಜತೆಗೇ ಆನ್‍ಲೈನ್ ತರಗತಿಗಳನ್ನು ಸಹ ನಾವು ಸಮೀಕರಿಸಿದ್ದೇವೆ. ಇದರ ಪರಿಣಾಮ ನಮ್ಮಲ್ಲಿರುವ ಎಲ್ಲ ಕೋರ್ಸ್‍ಗಳ ಪಠ್ಯಕ್ರಮವನ್ನು ನಾವು ಆನ್‍ಲೈನ್‍ನಲ್ಲೇ ಬೋಧನೆ ಮಾಡಿದ್ದೇವೆ. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗೆ ಕೌಶಲ ಅಭಿವೃದ್ಧಿ ಶಿಕ್ಷಣ ನೀಡಲು ನಾವು ಸಹಕರಿಸಿದ್ದೇವೆ.

‘ಕೋರ್ಸ್ ಎರಾ ಇನ್ ಕ್ಯಾಂಪಸ್’ ಎಂಬ ಪರಿಕಲ್ಪನೆಯನ್ನು ಹುಟ್ಟುಹಾಕಿದ್ದೇವೆ. ಇದನ್ನು 2020-21ನೇ ಸಾಲಿ ನಿಂದಲೇ ಪರಿಚಯಿಸುತ್ತಿದ್ದೇವೆ. ಮೊದಲ ಹಂತದಲ್ಲಿ ಕೊರೊನಾ ಪರಿಸ್ಥಿತಿಯನ್ನು ನೆನಪಿನಲ್ಲಿಟ್ಟುಕೊಂಡು ಸುಮಾರು ಐದು ಸಾವಿರ ಕೌಶಲ ಅಭಿವೃದ್ಧಿ ಕೋರ್ಸ್‌ಗಳ ಲೈಸೆನ್ಸ್ ಅನ್ನು ವಿಶ್ವವಿದ್ಯಾಲಯವು ಖರೀದಿಸಿ ಇದನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿದೆ. ಇದರಿಂದ ಅವರ ಕೋರ್ಸ್‌ಗಳಿಗೆ ಪೂರಕವಾದ ಕೌಶಲ ಕೋರ್ಸ್‌ಗಳನ್ನು ಕಲಿಯಲು ಸಾಧ್ಯವಾಗಿದೆ. ಆ ಮೂಲಕ ವಿಶ್ವವಿದ್ಯಾಲಯ ಉನ್ನತ ಗುಣಮಟ್ಟದ, ಉದ್ಯೋಗಾವಕಾಶಕ್ಕೆ ಅನುಕೂಲವಾದ ಇ-ಕಲಿಕೆಗೆ ಪ್ರಾಮುಖ್ಯ ನೀಡಿದೆ.

- ಡಾ.ಪಿ.ಶ್ಯಾಮರಾಜು (ಲೇಖಕ: ಕುಲಾಧಿಪತಿ, ರೇವಾ ವಿಶ್ವವಿದ್ಯಾಲಯ)

***

ಸೌಲಭ್ಯ ಕಲ್ಪಿಸಿ, ಬಳಿಕ ಕಲಿಸಿ 


ಪ್ರಭಾಕರ ಕೋರೆ

ದೇಶದಲ್ಲಿ ಕೊರೊನಾ ಸೋಂಕು ಸೃಷ್ಟಿಸಿರುವ ಪರಿಸ್ಥಿತಿಯಿಂದಾಗಿ ಬೋಧನಾ ವಿಧಾನಕ್ಕೂ ಪರ್ಯಾಯ ಬಂದಿದೆ. ವಿದ್ಯಾರ್ಥಿಗಳು ಹಾಗೂ ಬೋಧಕರು ಆನ್‌ಲೈನ್‌ ಪಾಠಕ್ಕೆ ಒಗ್ಗಿಕೊಳ್ಳಬೇಕು ಎನ್ನುವುದು ಸದ್ಯಕ್ಕೆ ಸಮಂಜಸದಂತೆ ಕಂಡರೂ ಹಲವು ಸಮಸ್ಯೆಗಳಿವೆ. ಅಂತರ ಕಾಯ್ದುಕೊಳ್ಳಬೇಕಿರುವುದು ಹಾಗೂ ಆರೋಗ್ಯದ ದೃಷ್ಟಿಯಿಂದಾಗಿ ಪರ್ಯಾಯವಿಲ್ಲದೆ ಇರುವುದರಿಂದ ಹೊಂದಾಣಿಕೆ ಮಾಡಿಕೊಳ್ಳಬಹುದು. ಇದಕ್ಕೆ ತಕ್ಕಂತೆ ಸೌಲಭ್ಯಗಳನ್ನು ಒದಗಿಸುವುದು ಕೂಡ ಮುಖ್ಯ.

ನಮ್ಮ ಸಂಸ್ಥೆಯ ಬಹಳಷ್ಟು ಶಾಲಾ–ಕಾಲೇಜುಗಳು ಗ್ರಾಮೀಣ ಪ್ರದೇಶದಲ್ಲಿವೆ. ಪ್ರಸ್ತುತ ನಾವೂ ಆನ್‌ಲೈನ್‌ನಲ್ಲಿ ತರಗತಿಗಳನ್ನು ನಡೆಸುತ್ತಿದ್ದೇವೆ. ಆದರೆ, ತಾಂತ್ರಿಕ ತೊಂದರೆಗಳಿಂದಾಗಿ ವಿದ್ಯಾರ್ಥಿಗಳ ಹಾಜರಾತಿ ಆಶಾದಾಯಕವಾಗಿಲ್ಲ. ಗ್ರಾಮೀಣ ವಿದ್ಯಾರ್ಥಿಗಳಿಂದ ಸ್ಪಂದನೆ ಕಡಿಮೆ ಇರುವುದನ್ನು ಗಮನಿಸಿದ್ದೇನೆ. ಥಿಯರಿಯನ್ನು ಆನ್‌ಲೈನ್‌ನಲ್ಲಿ ಹೇಳಿಕೊಡಬಹುದು. ಆದರೆ, ಪ್ರಾಯೋಗಿಕ ವಿಷಯಗಳನ್ನು ಹೇಗೆ ಕಲಿಸಬೇಕು ಎನ್ನುವುದು ಸಮಸ್ಯೆ. ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್ ತರಗತಿಗಳನ್ನು ಆನ್‌ಲೈನ್‌ನಲ್ಲಿ ಹೇಳಿಕೊಡಲು ಸಾಧ್ಯವಿಲ್ಲ.

ಎಲ್ಲ ಪ್ರದೇಶಗಳ ಮಕ್ಕಳಿಗೂ ಆನ್‌ಲೈನ್ ಬೋಧನೆ ಕಷ್ಟಸಾಧ್ಯವೆ. ಈ ನಿಟ್ಟಿನಲ್ಲಿ ಸರ್ಕಾರ ನೈಜ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು. ಆನ್‌ಲೈನ್ ಶಿಕ್ಷಣಕ್ಕೆ ಬೇಕಾಗುವ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು.

ಪೂರಕವಾದ ಎಲ್ಲ ವ್ಯವಸ್ಥೆಗಳನ್ನು ಮಾಡಿದ ನಂತರ ಆನ್‌ಲೈನ್‌ ಶಿಕ್ಷಣ ಆರಂಭಿಸಿದರೆ, ಪರಿಣಾಮಕಾರಿ ಕಲಿಕೆ ಸಾಧ್ಯವಾದೀತು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರ ಈ ನಿಟ್ಟಿನಲ್ಲಿ ಯೋಚಿಸಬೇಕು.

- ಪ್ರಭಾಕರ ಕೋರೆ (ಲೇಖಕ: ಕಾರ್ಯಾಧ್ಯಕ್ಷ, ಕೆಎಲ್‌ಇ ಸಂಸ್ಥೆ, ಬೆಳಗಾವಿ)

***

ಪ್ರಾಯೋಗಿಕ ಶಿಕ್ಷಣ ಕಷ್ಟಸಾಧ್ಯ 


ಸಂತೋಷ ಈ.ಚಿನಗುಡಿ

ಆನ್‌ಲೈನ್‌ ತರಗತಿಯಿಂದ ಪರಿಪೂರ್ಣ ಶಿಕ್ಷಣ ನೀಡುವುದು ಕಷ್ಟಸಾಧ್ಯ. ಎಲ್ಲಕ್ಕಿಂತ ಹೆಚ್ಚಾಗಿ ಎಂಜಿನಿಯರಿಂಗ್‌ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಇದು ಅನುಕೂಲಕರ ಅಲ್ಲ. ತಾಂತ್ರಿಕ ಕಸರತ್ತು ಮಾಡಿ ಪಾಠಗಳನ್ನು ಪರಿಣಾಮಕಾರಿ ಆಗಿ ಬೋಧಿಸಬಹುದೇ ಹೊರತು ಪ್ರಾಯೋಗಿಕ ತರಗತಿ ನಡೆಸುವುದು ಕಷ್ಟ.

ಪುಸ್ತಕ ಓದಿ ಈಜಲು ಕಲಿಯುವುದು ಸಾಧ್ಯವೇ? ಆನ್‌ಲೈನ್‌ನಲ್ಲಿ ಪ್ರಾಯೋಗಿಕ ತರಗತಿ ಕೂಡ ಹೀಗೆಯೇ. ಎಂಜಿನಿಯರಿಂಗ್‌ನವರು ಯಂತ್ರಗಳನ್ನು ಸ್ಪರ್ಶಿಸುವುದು, ವೈದ್ಯಕೀಯ ವಿದ್ಯಾರ್ಥಿಗಳು ರೋಗಿಗಳೊಂದಿಗೆ ಸಂವಹನ ನಡೆಸುವುದು ಬಹಳ ಮುಖ್ಯ.
ನಮ್ಮ ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮೂರು ಸಾವಿರ ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚಿನ ವರು ಗ್ರಾಮೀಣ ಪ್ರದೇಶದವರು. ಹಳ್ಳಿ ಗಳಲ್ಲಿ ಈಗಲೂ ಸರಿಯಾದ ಇಂಟರ್ನೆಟ್‌ ಸಂಪರ್ಕ ಇಲ್ಲ. ನಮ್ಮ ಸರ್ಕಾರ ಅಷ್ಟೊಂದು ತಾಂತ್ರಿಕ ಸಾಮರ್ಥ್ಯವನ್ನೂ ಸಾಧಿಸಿಲ್ಲ. ಹಳ್ಳಿಗಳನ್ನು ಬಿಡಿ; ನಗರದಲ್ಲೂ ಹಲವು ಕಡೆ ಸರಿಯಾದ ಸಂವಹನ ಸಾಧ್ಯವಾಗುವುದಿಲ್ಲ. ನೆಟ್‌ವರ್ಕ್‌ ಸಿಗದ ಕಾರಣ ಆನ್‌ಲೈನ್‌ ತರಗತಿಗೆ ಸೇರಿಕೊಳ್ಳುವುದು ಸಾಧ್ಯವಾಗುತ್ತಿಲ್ಲ ಎಂಬುದು ಬಹಳಷ್ಟು ವಿದ್ಯಾರ್ಥಿಗಳಿಂದ ಕೇಳಿಬರುತ್ತಿರುವ ಸಾಮಾನ್ಯ ದೂರು.

ಗುರು–ವಿದ್ಯಾರ್ಥಿ ಮುಖಾಮುಖಿ ಆದಾಗ ನಡೆಯುವಷ್ಟು ಗಮನಾರ್ಹ ಪಾಠ ಆನ್‌ಲೈನ್‌ನಲ್ಲಿ ಸಾಧ್ಯವೇ ಇಲ್ಲ. ಆದರೆ, ಪರಿಸ್ಥಿತಿ ಬದಲಾಗಿದೆ. ನಾವೂ ಬದಲಾಗಬೇಕು ನಿಜ; ಬದಲಾವಣೆಯ ಮಾರ್ಗ ಹಿಂದಿಗಿಂತಲೂ ಉತ್ತಮವಾಗಿರಬೇಕು. ತರಗತಿಯ ಏಕಾಗ್ರತೆ ಸಾಧಿಸುವುದು, ‘ಕಲಿಕಾ ಮನಸ್ಥಿತಿ ಸೃಷ್ಟಿ’ ಮಾಡುವುದು ಮತ್ತು ಸಂವಹನವನ್ನು ಸುಲಭವಾಗಿಸುವಷ್ಟು ತಾಂತ್ರಿಕ ಶಕ್ತಿ ನಮ್ಮಲ್ಲಿ ಬಂದಿಲ್ಲ.

- ಸಂತೋಷ ಈ.ಚಿನಗುಡಿ (ಲೇಖಕ: ಅಧ್ಯಕ್ಷ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ, ಕಲಬುರ್ಗಿ)

***

ಆನ್‌ಲೈನ್‌ ಶಿಕ್ಷಣವೂ ಬೇಕು; ಅದಕ್ಕೆ ಮಿತಿಯೂ ಇರಬೇಕು


ಎನ್‌.ಸಚ್ಚಿದಾನಂದಮೂರ್ತಿ

ಬದಲಾಗುತ್ತಿರುವ ಪರಿಸ್ಥಿತಿಗಳಿಗೆ ತಕ್ಕಂತೆ ಎಲ್ಲರೂ ಬದಲಾಗಲೇಬೇಕು. ಆ ನಿಟ್ಟಿನಲ್ಲಿ ಆನ್‌ಲೈನ್‌ ಶಿಕ್ಷಣಕ್ಕೂ ಒಗ್ಗಿಕೊಳ್ಳಬೇಕಿದೆ. ಆದರೆ, ಇದು ಮಿತಿಯಲ್ಲಿರಬೇಕು ಎಂಬುದನ್ನು ಮರೆಯಬಾರದು.

ಕೊರೊನಾ ಸಂಕಷ್ಟದ ಸಮಯದಲ್ಲಿ ಮಕ್ಕಳಿಗೆ ಓದು, ಬರವಣಿಗೆಯ ಅಭ್ಯಾಸ ತಪ್ಪದಂತೆ ಮಾಡಲು ಆನ್‌ಲೈನ್‌ ಮೂಲಕ ಶಿಕ್ಷಣ ನೀಡಿದರೆ ತಪ್ಪಿಲ್ಲ. ನಮ್ಮ ಶಾಲೆ ಮತ್ತು ಕಾಲೇಜಿ ನಲ್ಲಿ ಇದನ್ನು ಆರಂಭಿಸಲಾಗಿದೆ. ಸದ್ಯ, ಪ್ರೌಢಶಾಲೆ, ಪಿಯು ಹಂತದ ಮಕ್ಕಳಿಗಷ್ಟೇ ನಿತ್ಯ ಆನ್‌ಲೈನ್‌ನಲ್ಲಿ ಪಾಠ ಮಾಡಲಾಗುತ್ತಿದೆ.

ಮೊದಲು ಶಿಕ್ಷಕರು ಬೋಧಿಸಿದ್ದನ್ನು ರೆಕಾರ್ಡ್‌ ಮಾಡಿಕೊಂಡು ಅದರ ಲಿಂಕ್ ಅ‌ನ್ನು ವಿದ್ಯಾರ್ಥಿಗಳ ಪೋಷಕರ ಮೊಬೈಲ್‌ಗೆ ಕಳುಹಿಸುತ್ತೇವೆ. ಈ ಲಿಂಕ್‌ ಅನ್ನು ಅವರು ಬೇಕೆಂದಾಗಲೆಲ್ಲ ಎಷ್ಟು ಬಾರಿಯಾದರೂ ನೋಡಬಹುದು. ಅನುಮಾನಗಳು ಇದ್ದರೆ, ವಾಟ್ಸ್‌ಆ್ಯಪ್‌ ಗ್ರೂಪಿನಲ್ಲಿ ಪ್ರಶ್ನೆ ಕೇಳಬಹುದು. ಈ ಲಿಂಕ್‌ ಅನ್ನು ಪೋಷಕರ ಮಾರ್ಗದರ್ಶನದಲ್ಲಿಯೇ ನೋಡಬೇಕು. ಇದರಿಂದ ವಿದ್ಯಾರ್ಥಿಗಳ ಗಮನ ಬೇರೆಡೆ ಹರಿಯುವುದಿಲ್ಲ.

‘ನೋಟ್ಸ್‌’ ಸಹ ವಾಟ್ಸ್‌ಆ್ಯಪ್‌ನಲ್ಲಿ ಹಾಕುತ್ತಿದ್ದೇವೆ. ಅದನ್ನು ನೋಡಿಕೊಂಡು ಮಕ್ಕಳು ಮನೆಯಲ್ಲೇ ಟಿಪ್ಪಣಿ ಬರೆದುಕೊಳ್ಳು
ತ್ತಿದ್ದಾರೆ. ಸದ್ಯ, ಪ್ರೌಢಶಾಲೆಯಲ್ಲಿ 2 ವಿಷಯಗಳ ಬಗ್ಗೆ ಹಾಗೂ ಪಿಯು ಹಂತದಲ್ಲಿ ದಿನಕ್ಕೆ 3 ಗಂಟೆಗಳ ಕಾಲ ಈ ರೀತಿಯಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಇದಕ್ಕೆ ವಿದ್ಯಾರ್ಥಿಗಳಿಂದ ಹಾಗೂ ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದು ದಿನ ಆನ್‌ಲೈನ್‌ ತರಗತಿಯನ್ನು ನಡೆಸದೇ ಇದ್ದರೆ, ಇಂದು ಏಕೆ ನಡೆಸಿಲ್ಲ ಎಂದು ಕೇಳುವಷ್ಟರಮಟ್ಟಿಗೆ ಪ್ರತಿಕ್ರಿಯೆ ಇದೆ.

ನಾವು ಮಾಡುತ್ತಿರುವುದು ಕಡಿಮೆ ಸಮಯದ ಆನ್‌ಲೈನ್‌ ತರಗತಿ. ಇದು ನಿಜಕ್ಕೂ ವಿದ್ಯಾರ್ಥಿಗಳಿಗಾಗಲೀ, ಪೋಷಕರಿಗಾಗಲೀ ಹೊರೆ ಎನಿಸಿಲ್ಲ. ಮಕ್ಕಳು ತಮ್ಮ ಪೋಷಕರ ಮೊಬೈಲ್‌ನಲ್ಲಿ ತಮಗೆ ಬೇಕಾದ ಗೇಮ್‌ಗಳನ್ನು ಡೌನ್‌ಲೋಡ್‌ ಮಾಡಿಕೊಂಡು ಆಡುತ್ತಾರೆ. ಇವರಿಗೆ ಮೊಬೈಲ್‌ ಆಗಲಿ, ಆನ್‌ಲೈನ್‌ ಆಗಲಿ ಕಷ್ಟವಲ್ಲ. ಬಹಳಷ್ಟು ಮಕ್ಕಳಿಗೆ ಆನ್‌ಲೈನ್‌ ತರಗತಿ ಖುಷಿ ಎನಿಸಿದೆ. ಆದರೆ, ಇವೆಲ್ಲವೂ ಪೋಷಕರ ಮಾರ್ಗದರ್ಶನದಡಿಯಲ್ಲೇ ನಡೆಯಬೇಕು. ಆರಂಭದಲ್ಲಿ ಕೆಲವು ಮಕ್ಕಳಿಗೆ ಕಷ್ಟ ಎನಿಸಬಹುದು. ಆದರೆ, ಕ್ರಮೇಣ ಅವರು ಆನ್‌ಲೈನ್‌ ತರಗತಿಗಳಿಗೆ ಒಗ್ಗಿಕೊಳ್ಳುತ್ತಾರೆ.

ಕೊರೊನಾ ಸಂಕಷ್ಟದಿಂದ ಮಕ್ಕಳ ಓದು, ಬರಹದಲ್ಲಿ ಏರ್ಪಡುವ ದೊಡ್ಡದೊಂದು ‘ಗ್ಯಾಪ್‌’ ಅನ್ನು ಆನ್‌ಲೈನ್‌ ತರಗತಿಗಳ ಮೂಲಕ ಇಲ್ಲವಾಗಿಸಬಹುದು. ನೇರವಾಗಿ ತರಗತಿಗೆ ಬಂದಾಗ ಅವರಿಗೆ ಓದಿನ, ಬರವಣಿಗೆಯ, ಹೊಸ ಪಠ್ಯಕ್ರಮದ ಅರಿವು ಇರುತ್ತದೆ. ಕಲಿಕೆ ಸುಲಭವಾಗುತ್ತದೆ.

- ಎನ್‌.ಸಚ್ಚಿದಾನಂದಮೂರ್ತಿ (ಲೇಖಕ: ಅಧ್ಯಕ್ಷರು, ಡಿಎವಿ ಪಬ್ಲಿಕ್ ಶಾಲೆ ಹಾಗೂ ಶಾರದಾ ವಿದ್ಯಾಮಂದಿರ ಪಿಯು ಕಾಲೇಜು, ಮೈಸೂರು)

***

ಪರ್ಯಾಯ ಆಗದಿರಲಿ


ಡಾ.ಎಂ.ಮೋಹನ ಆಳ್ವ

ಆನ್‌ಲೈನ್ ಶಿಕ್ಷಣ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯೇ ಹೆಚ್ಚು. ಇದೊಂದು ತಾತ್ಕಾಲಿಕ ವ್ಯವಸ್ಥೆ ಆಗಬೇಕೆ ಹೊರತು, ಈಗಿರುವ ಶಿಕ್ಷಣಕ್ಕೆ ಪರ್ಯಾಯ ಆಗಬಾರದು. ಋಷಿ ಪರಂಪರೆಯೊಂದಿಗೆ ಬೆಳೆದು ಬಂದ ಭಾರತೀಯ ಶಿಕ್ಷಣ ಪದ್ಧತಿಗೆ ಸುಮಾರು 5 ಸಾವಿರ ವರ್ಷಗಳ ಇತಿಹಾಸ ಇದೆ. ಇಲ್ಲಿ ಗುರು–ಶಿಷ್ಯರ ಮಧ್ಯೆ ಭಾವನಾತ್ಮಕ ಸಂಬಂಧವೂ ಇದೆ. ಬ್ರಿಟಿಷರ ಕಾಲದಲ್ಲಿ ತರಗತಿಯಲ್ಲಿ ಕಲಿಯುವ ಪದ್ಧತಿ ಜಾರಿಗೆ ಬಂತು. ನಮ್ಮ ಶಿಕ್ಷಣವನ್ನು ಪಾಶ್ಚಾತ್ಯ ದೇಶಗಳೊಂದಿಗೆ ಹೋಲಿಕೆ ಮಾಡಬಾರದು.

ತರಗತಿಯೊಳಗಿನ ಶಿಕ್ಷಣವೆಂದರೆ ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಲ್ಲ. ಬೌದ್ಧಿಕ ಬೆಳವಣಿಗೆಯ ಜತೆಗೆ ಆಧ್ಯಾತ್ಮಿಕ, ಭಾವನಾತ್ಮಕ ಚಿಂತನೆ, ಸಾಮಾಜಿಕ ಪ್ರಜ್ಞೆ, ಸಾಮರಸ್ಯದ ಜೀವನ... ಹೀಗೆ ಬದುಕುವ ಕಲೆಯನ್ನು ಕಲಿಸಿಕೊಡುತ್ತದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಶೈಕ್ಷಣಿಕ ಶಿಸ್ತು ಇರುತ್ತದೆ. ಆದರೆ ಆನ್‌ಲೈನ್ ಶಿಕ್ಷಣ ಕೇವಲ ಬೌದ್ಧಿಕ ಬೆಳವಣಿಗೆಗೆ ಮಾತ್ರ ಸೀಮಿತವಾಗಿರುತ್ತದೆ. ಇಲ್ಲಿ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಮಧ್ಯೆ ಬದ್ಧತೆ ಇರುವುದಿಲ್ಲ. ಇದು ತೀರಾ ವ್ಯವಹಾರಿಕ ವ್ಯವಸ್ಥೆ. ನಮ್ಮಲ್ಲಿರುವ ಸಕಾರಾತ್ಮಕ ವಿಚಾರಗಳ ಬೆಳವಣಿಗೆಗೆ ಇದು ಸಹಕಾರಿಯಾಗುವುದಿಲ್ಲ.

ಮೊಬೈಲ್, ಕಂಪ್ಯೂಟರ್‌ನಲ್ಲಿ ದೀರ್ಘ ಸಮಯ ಕಳೆಯುವುದು ಆರೋಗ್ಯಕ್ಕೂ ಒಳ್ಳೆಯದಲ್ಲ. ಈ ವ್ಯವಸ್ಥೆಯಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಅಪಾಯ ಇದೆ. ನಮ್ಮ ಇಡೀ ದೇಶದ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡು ಹೇಳುವುದಾದರೆ ಆನ್‌ಲೈನ್ ಶಿಕ್ಷಣದಲ್ಲಿ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚು.

ಮನೆಯೇ ಪಾಠ ಶಾಲೆಯಾಗಲಿ: ಸದ್ಯದ ಮಟ್ಟಿಗೆ 1 ರಿಂದ 10ನೇ ತರಗತಿವರೆಗೆ ಆನ್‌ಲೈನ್ ಶಿಕ್ಷಣ ಬೇಡ. ಇವರಿಗೆ ಮನೆಯೇ ಪಾಠಶಾಲೆಯಾಗಲಿ. ಕೆಲವು ದಿನಗಳವರೆಗೆ ಪಾಲಕರು ತ್ಯಾಗ ಮಾಡಲಿ. ಇನ್ನು ಎಸ್‌ಎಸ್‌ಎಲ್‌ಸಿಗಿಂತ ಮೇಲಿನ ಮಕ್ಕಳಿಗೆ ಕಾಲೇಜಿನಲ್ಲಿ ತರಗತಿಗಳನ್ನು ನಡೆಸಲಿ. ಅಲ್ಲಿ ಸರ್ಕಾರದ ಮಾರ್ಗಸೂಚಿಗಳ ಪಾಲನೆಯಾಗಬೇಕು.

- ಡಾ.ಎಂ.ಮೋಹನ ಆಳ್ವ (ಲೇಖಕ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ)

***

ವಿರೋಧ ತಾತ್ವಿಕವಲ್ಲ, ತಾಂತ್ರಿಕ


ಡಾ. ಟಿ.ಎಂ. ಮಂಜುನಾಥ 

ಆನ್‌ಲೈನ್‌ ಶಿಕ್ಷಣದ ಬಗ್ಗೆ ತಾತ್ವಿಕ ವಿರೋಧವಿಲ್ಲ. ಆದರೆ, ತಾಂತ್ರಿಕವಾಗಿ ಈ ವ್ಯವಸ್ಥೆಯನ್ನು ನಾವು ವಿರೋಧಿಸುತ್ತಿದ್ದೇವೆ. ಸರ್ಕಾರಿ ಕಾಲೇಜುಗಳಲ್ಲಿ ಓದುತ್ತಿರುವ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರು. ನಗರದಲ್ಲಿ ಓದುತ್ತಿದ್ದ ಬಹಳಷ್ಟು ವಿದ್ಯಾರ್ಥಿಗಳು ಹಳ್ಳಿಗೆ ಹಿಂದಿರುಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ನೆಟ್‌ವರ್ಕ್‌ ಸಮಸ್ಯೆ ಇದೆ. ಅಲ್ಲದೆ, ಎಲ್ಲ ವಿದ್ಯಾರ್ಥಿಗಳ ಬಳಿ ಸ್ಮಾರ್ಟ್‌ಫೋನ್‌ ಇಲ್ಲ.

ಮಹಾರಾಣಿ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರ ಪೈಕಿ ಹಲವರು ಅರೆಕಾಲಿಕ ಕೆಲಸ ಮಾಡುತ್ತಲೇ ಓದುತ್ತಿದ್ದರು. ಈಗ ಅವರಿಗೆ ಕೆಲಸವೂ ಇಲ್ಲ. ಇಂಟರ್‌ನೆಟ್‌ ಸೌಲಭ್ಯ ಪಡೆಯಲು ಹಣವೂ ಇಲ್ಲದಂತಾಗಿದೆ. 

ಸರ್ಕಾರಿ ನೌಕರರಾಗಿ ನಾವು ಸರ್ಕಾರದ ಆದೇಶವನ್ನು ಪಾಲಿಸುತ್ತಿದ್ದೇವೆ. ಆದರೆ, ಶೇ 40ರಷ್ಟು ವಿದ್ಯಾರ್ಥಿಗಳಿಗೂ ನಾವು ಮಾಡುತ್ತಿರುವ ಪಾಠ ತಲುಪುತ್ತಿಲ್ಲ. ಈ ಸಂದರ್ಭದಲ್ಲಿ ಆನ್‌ಲೈನ್‌ ಶಿಕ್ಷಣ ಎನ್ನುವುದು ತಾತ್ಕಾಲಿಕ ವ್ಯವಸ್ಥೆಯಾಗಬೇಕೆ ವಿನಾ, ಶಾಶ್ವತ ಪರಿಹಾರ ಆಗಬಾರದು. ಅದರಲ್ಲಿಯೂ, ತಾಂತ್ರಿಕವಾಗಿ ಅಭಿವೃದ್ಧಿ ಹೊಂದಿದ ನಂತರವೇ ಆನ್‌ಲೈನ್‌ ಶಿಕ್ಷಣ ಕೊಡಬೇಕು.

- ಡಾ. ಟಿ.ಎಂ. ಮಂಜುನಾಥ (ಲೇಖಕ: ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು