ಸೋಮವಾರ, ಅಕ್ಟೋಬರ್ 3, 2022
24 °C

Explainer| ಭಾರತ ಧ್ವಜದ ಇತಿಹಾಸ: ಈಗಿನ ತಿರಂಗಾದ ವರೆಗಿನ ವಿಕಾಸದ ವಿವರಣೆ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಭಾರತದ ಹೆಗ್ಗುರುತಾಗಿರುವ ತ್ರಿವರ್ಣ ಧ್ವಜವು, ಭಾರತೀಯರ ಆತ್ಮಾಭಿಮಾನದ ಸಂಕೇತವೂ ಹೌದು. ಬಾವುಟವು ಕಾಲಾನುಕ್ರಮಣಿಕೆಯಲ್ಲಿ ಬದಲಾವಣೆ ಕಾಣುತ್ತಾ, ವಿಕಾಸ ಹೊಂದುತ್ತ ಇಂದಿನ ತಿರಂಗಾವಾಗಿ ಮಾರ್ಪಾಟು ಹೊಂದಿದೆ. ರಾಷ್ಟ್ರದ ಧ್ವಜ ವಿಕಾಸವು ಭಾರತದ ಕಥೆಯನ್ನು ಮಾತ್ರವಲ್ಲದೆ, ಸ್ವಾತಂತ್ರ್ಯ ಹೋರಾಟದ ಗಾಥೆಯನ್ನೂ ಸಾರಿ ಹೇಳುತ್ತದೆ. ಧ್ವಜ ವಿಕಸನದ ಮಜಲುಗಳನ್ನು ಇಲ್ಲಿ ವಿವರಿಸಲಾಗಿದೆ.

1906ರಲ್ಲಿ ಸ್ವಾತಂತ್ರ್ಯ ಹೋರಾಟದ ವೇಳೆ ಮೊಟ್ಟ ಮೊದಲ ಬಾರಿಗೆ ರಾಷ್ಟ್ರಧ್ವಜದ ಮಾದರಿಯೊಂದು ರೂಪುಗೊಂಡಿತ್ತು. ಹಲವಾರು ರಾಜಕೀಯ, ರಾಷ್ಟ್ರೀಯ ಬೆಳವಣಿಗೆಗಳು ಮತ್ತು ಸಮಯಕ್ಕೆ ತಕ್ಕಂತೆ ಆದ ಬದಲಾವಣೆಯೊಂದಿಗೆ ರಾಷ್ಟ್ರಧ್ವಜವು ಇಂದು ನಮಗೆ ತಿಳಿದಿರುವ ತ್ರಿವರ್ಣ ಅಥವಾ ತಿರಂಗಾವಾಗಿ ವಿಕಸನಗೊಂಡಿದೆ.

ಮೊದಲ ಬಾವುಟ

ಭಾರತದಲ್ಲಿ ರಾಷ್ಟ್ರಧ್ವಜವನ್ನು 1906ರ ಆಗಸ್ಟ್ 7 ರಂದು ಕೋಲ್ಕತ್ತದಲ್ಲಿ ಮೊಟ್ಟ ಮೊದಲ ಬಾರಿಗೆ ಹಾರಿಸಲಾಗಿತ್ತು. ಆಗ ಕೆಂಪು, ಹಳದಿ ಮತ್ತು ಹಸಿರು ಬಣ್ಣದ ಮೂರು ಅಡ್ಡ ಪಟ್ಟಿಗಳನ್ನು ಮಾತ್ರ ದ್ವಜ ಹೊಂದಿತ್ತು. ಮಧ್ಯದಲ್ಲಿ ವಂದೇ ಮಾತರಂ ಎಂದು ಬರೆಯಲಾಗಿತ್ತು. ಅದನ್ನು, ಸ್ವಾತಂತ್ರ್ಯ ಹೋರಾಟಗಾರರಾದ ಸಚೀಂದ್ರ ಪ್ರಸಾದ್ ಬೋಸ್ ಮತ್ತು ಹೇಮಚಂದ್ರ ಕನುಂಗೋ ವಿನ್ಯಾಸಗೊಳಿಸಿದ್ದಾರೆಂದು ನಂಬಲಾಗಿದೆ. ಧ್ವಜದ ಮೇಲಿನ ಕೆಂಪು ಪಟ್ಟಿ ಸೂರ್ಯ ಮತ್ತು ಅರ್ಧಚಂದ್ರನನ್ನು ಒಳಗೊಂಡಿತ್ತು. ಹಸಿರು ಪಟ್ಟಿಯಲ್ಲಿ ಅರ್ಧ ಅರಳಿದ ಎಂಟು ಕಮಲಗಳಿದ್ದವು.

ಎರಡನೇ ಬಾವುಟ

ಎರಡನೇ ಧ್ವಜವನ್ನು 1907ರಲ್ಲಿ ಮೇಡಮ್ ಕಾಮಾ ಮತ್ತು ಗಡಿಪಾರುಗೊಂಡಿದ್ದ ಕ್ರಾಂತಿಕಾರಿಗಳ ತಂಡವು ಪ್ಯಾರಿಸ್‌ನಲ್ಲಿ ಹಾರಿಸಿತ್ತು. ಮೊದಲ ಧ್ವಜದಂತೆಯೇ ಇದ್ದ ಈ ಧ್ವಜದಲ್ಲಿ ಮೇಲಿನ ಪಟ್ಟಿಯು ಸಪ್ತಋಷಿಗಳನ್ನು ಸೂಚಿಸುವ ಏಳು ನಕ್ಷತ್ರಗಳನ್ನು ಹೊಂದಿತ್ತು. ಈ ಧ್ವಜವನ್ನು ಬರ್ಲಿನ್‌ನ ಸಮಾಜವಾದಿ ಸಮ್ಮೇಳನದಲ್ಲೂ ಪ್ರದರ್ಶಿಸಲಾಗಿತ್ತು.

ಮೂರನೇ ಧ್ವಜ

ಆನಿ ಬೆಸೆಂಟ್ ಮತ್ತು ಲೋಕಮಾನ್ಯ ತಿಲಕ್ ಅವರು ‘ಹೋಮ್ ರೂಲ್’ ಚಳವಳಿಯ ಸಂದರ್ಭದಲ್ಲಿ ಮೂರನೇ ಧ್ವಜವನ್ನು ಹಾರಿಸಿದ್ದರು. ಈ ಧ್ವಜವು ಐದು ಕೆಂಪು ಮತ್ತು ನಾಲ್ಕು ಹಸಿರು ಪಟ್ಟಿಗಳನ್ನು ಹೊಂದಿತ್ತು. ಒಂದೊಂದು ಬಣ್ಣದ ಪಟ್ಟಿಯನ್ನೂ ಪರ್ಯಾಯವಾಗಿ ಹೊಂದಿಸಲಾಗಿತ್ತು. ಹಿಂದಿನ ಬಾವುಟದಲ್ಲಿದ್ದಂತೆ ಏಳು ನಕ್ಷತ್ರಗಳು ಇದರಲ್ಲಿಯೂ ಇದ್ದವು. ಧ್ವಜವು ಅರ್ಧಚಂದ್ರಾಕಾರವನ್ನೂ ಹೊಂದಿತ್ತು. ಅದನ್ನು ಧ್ವಜದ ಒಂದು ಮೂಲೆಯಲ್ಲಿ ಹೊಂದಿಸಲಾಗಿತ್ತು. ಮತ್ತೊಂದು ಮೂಲೆಯಲ್ಲಿ ಬ್ರಿಟನ್‌ ಧ್ವಜವನ್ನು ಹೊಂದಿಸಲಾಗಿತ್ತು.

ಗಾಂಧಿ ಕಲ್ಪನೆಯಂತೆ ಮೂಡಿ ಬಂದ ಧ್ವಜ

ಇದೆಲ್ಲದರ ನಡುವೆ ಭಾರತಕ್ಕೆ ಹೊಂದುವ ರಾಷ್ಟ್ರಧ್ವಜವೊಂದರ ಅಗತ್ಯವನ್ನು ಮನಗಂಡ ಮಹಾತ್ಮಾ ಗಾಂಧೀಜಿ ಅವರು, 1921 ರಲ್ಲಿ ಪೆಂಗಾಲಿ ವೆಂಕಯ್ಯ ಎಂಬುವವರಿಗೆ ರಾಷ್ಟ್ರ ಧ್ವಜ ವಿನ್ಯಾಸ ಮಾಡುವಂತೆ ಸೂಚಿಸಿದ್ದರು. ಅದರಲ್ಲಿ ಚರಕ ಇರಬೇಕೆಂದು ಹೇಳಿದ್ದರು. ಹೀಗಾಗಿ ಇಂದಿನ ಧ್ವಜವು ವೆಂಕಯ್ಯನವರ ವಿನ್ಯಾಸ ಎಂದು ಹೇಳಲು ಅಡ್ಡಿಯಿಲ್ಲ.

ಬದಲಾವಣೆ ಹೇಳಿದ್ದ ಗಾಂಧಿ

1921ರಲ್ಲಿ ವಿಜಯವಾಡದಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧಿವೇಶನದಲ್ಲಿ, ಎರಡು ಬಣ್ಣಗಳಿಂದ ರಚನೆಯಾದ ಧ್ವಜವನ್ನು ವೆಂಕಯ್ಯ ಅವರು ಪ್ರಸ್ತುತಪಡಿಸಿದ್ದರು. ಆಗ ಅದರಲ್ಲಿ ಕೆಂಪು ಮತ್ತು ಹಸಿರು ಬಣ್ಣಗಳಷ್ಟೇ ಇದ್ದವು. ಈ ಎರಡೂ ಬಣ್ಣಗಳು ಪ್ರಮುಖ ಎರಡು ಸಮುದಾಯಗಳನ್ನು ಪ್ರತಿನಿಧಿಸುತ್ತಿದ್ದವು. ಅಂದರೆ ಹಿಂದೂಗಳು ಮತ್ತು ಮುಸ್ಲಿಮರು. ಆದರೆ, ಭಾರತದ ಉಳಿದ ಸಮುದಾಯಗಳನ್ನು ಪ್ರತಿನಿಧಿಸುವ ಬಿಳಿ ಪಟ್ಟಿಯನ್ನು ಸೇರಿಸಲು ಗಾಂಧಿ ಆ ಅಧಿವೇಶನದಲ್ಲಿ ಸ್ಪಷ್ಟವಾಗಿ ಸೂಚಿಸಿದ್ದರು.

ಕೆಲವು ಮಾರ್ಪಾಡುಗಳ ನಂತರ ರಾಷ್ಟ್ರಧ್ವಜವನ್ನು 1931ರಲ್ಲಿ ರೂಪಿಸಲಾಯಿತು. ಕೆಂಪು ಬಣ್ಣವನ್ನು ಕೇಸರಿಗೆ ಬದಲಾಯಿಸಲಾಯಿತು ಮತ್ತು ಬಿಳಿ ಪಟ್ಟಿಯನ್ನು ಮಧ್ಯಕ್ಕೆ ತರಲಾಯಿತು. ಅಡಿಯಲ್ಲಿ ಹಸಿರು ಬಣ್ಣ ಹೊಂದಿಸಲಾಯಿತು. ಧ್ವಜದ ಮಧ್ಯಭಾಗದಲ್ಲಿ ಚರಕವನ್ನು ಇರಿಸಲಾಗಿತ್ತು.

ಸ್ವತಂತ್ರ ಭಾರತದ ಧ್ವಜ

ಸ್ವತಂತ್ರ ಭಾರತದ ರಾಷ್ಟ್ರ ಧ್ವಜವು 1931ರಲ್ಲಿದ್ದ ಧ್ವಜವನ್ನೇ ಬಹುಪಾಲು ಹೋಲುತ್ತದೆ. ಆದರೆ, ಚರಕದ ಜಾಗದಲ್ಲಿ ಅಶೋಕ ಚಕ್ರವಿದೆ. ತ್ರಿವರ್ಣ ಧ್ವಜದಲ್ಲಿ, ಕೇಸರಿ ಧೈರ್ಯವನ್ನು ಸೂಚಿಸಿದರೆ, ಬಿಳಿ ಶಾಂತಿಯನ್ನು ಸಂಕೇತಿಸುತ್ತದೆ ಮತ್ತು ಹಸಿರು ಸಮೃದ್ಧತೆಯನ್ನು ಸೂಚಿಸುತ್ತದೆ. ಮಧ್ಯದಲ್ಲಿರುವ ಧರ್ಮ ಚಕ್ರವು ಚಲನೆ ಮತ್ತು ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ. ಚಕ್ರದಲ್ಲಿನ 24 ಗೆರೆಗಳು 24 ಸದ್ಗುಣಗಳನ್ನು ಸಂಕೇತಿಸುತ್ತವೆ.

ಇವುಗಳನ್ನೂ ಓದಿ 

ಮಿಸಳ್ ಹಾಪ್ಚಾ 75- ಗರಗದ ಧ್ವಜವಸ್ತ್ರ | Misal Half Cha | National Flag

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು