ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಮಹಿಳೆಯರ ಘನತೆಗೆ ಮಸಿ ಬಳಿಯಲು ‘ಬುಲ್ಲಿ ಬಾಯಿ’ ಹರಾಜು

Last Updated 5 ಜನವರಿ 2022, 19:31 IST
ಅಕ್ಷರ ಗಾತ್ರ

ಬುಲ್ಲಿ ಬಾಯಿ, ಮೈಕ್ರೊಸಾಫ್ಟ್‌ ಕಾರ್ಪೊರೇಷನ್‌ನ ಗಿಟ್‌ಹಬ್ ಪ್ಲಾಟ್‌ಫಾರ್ಮ್‌ನಲ್ಲಿ ಸೃಷ್ಟಿಸಲಾದ ಒಂದು ಅಪ್ಲಿಕೇಷನ್. ಇಲ್ಲಿ ಪ್ರತಿದಿನ ಒಬ್ಬ ಮಹಿಳೆಯ ಚಿತ್ರವನ್ನು ಬಳಸಿಕೊಂಡು ಅವರನ್ನು ಹರಾಜು ಹಾಕಲಾಗತ್ತದೆ. ಹರಾಜಿನಲ್ಲಿ ಆಯ್ಕೆಯಾದ ಮಹಿಳೆಯರ ತಿರುಚಲಾದ ಚಿತ್ರವನ್ನು ‘ಬುಲ್ಲಿ ಆಫ್‌ ದಿ ಡೇ’ ಎಂದು ಘೋಷಿಸಲಾಗುತ್ತದೆ. ಹಿಂದಿ ಮಿಶ್ರಿತ ಉರ್ದುವಿನಲ್ಲಿ ಮಹಿಳೆಯನ್ನು ತುಚ್ಛವಾಗಿ ಬೈಯುವ ಪದವಾಗಿ ‘ಬುಲ್ಲಿ’ ಎಂಬ ಪದ ಬಳಕೆಯಾಗುತ್ತದೆ. ಹೀಗೆ ಒಬ್ಬ ಮಹಿಳೆಯನ್ನು ‘ಬುಲ್ಲಿ ಆಫ್‌ ದಿ ಡೇ’ ಎಂದು ಆಯ್ಕೆ ಮಾಡುವ ಮೂಲಕ, ಅವರ ಘನತೆಗೆ ಕುಂದು ತರಲಾಗುತ್ತದೆ. ಮಹಿಳೆಯ ಘನತೆಗೆ ಕುಂದು ತರುವುದೇ ಈ ಚಟುವಟಿಕೆಯ ಹಿಂದಿನ ಪ್ರಧಾನ ಉದ್ದೇಶ.

ಇದೇ ಜನವರಿ 1ರಂದು ಈ ಆ್ಯಪ್‌ ಸಾರ್ವಜನಿಕರಿಗೆ ಲಭ್ಯವಾಗಿದೆ. ಅದು ಸ್ಥಗಿತವಾಗುವವರೆಗೆ ಸಾವಿರಾರು ಮಂದಿ ಅದನ್ನು ಡೌನ್‌ಲೋಡ್‌ ಮಾಡಿಕೊಂಡು, ಬಳಸಿದ್ದಾರೆ. ಕೆಲವೇ ದಿನಗಳಲ್ಲಿ ಈ ಅಪ್ಲಿಕೇಷನ್‌ ಮೂಲಕ ಸಾವಿರಾರು ಮಹಿಳೆಯರನ್ನು ಹರಾಜು ಹಾಕಲಾಗಿದೆ. ಹರಾಜಿನಲ್ಲಿ ಆಯ್ಕೆಯಾದ ಏಳೆಂಟು ಮಹಿಳೆಯರ ಚಿತ್ರಗಳನ್ನು ‘ಬುಲ್ಲಿ ಆಫ್‌ ದಿ ಡೇ’ ಎಂದು ಘೋಷಿಸಲಾಗಿದೆ. ಹೀಗೆ ಘೋಷಿಸಲಾದ ಮಹಿಳೆಯರ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.

2020ರಲ್ಲಿ ಇದೇ ಗಿಟ್‌ಹಬ್‌ ಪ್ಲಾಟ್‌ಫಾರ್ಮ್‌ನಲ್ಲಿ ಸೃಷ್ಟಿಸಲಾಗಿದ್ದ ‘ಸುಲ್ಲಿ ಡೀಲ್ಸ್‌’ ಎಂಬ ಅಪ್ಲಿಕೇಷನ್‌ ಮೂಲಕ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳ ಗಣ್ಯ ಮಹಿಳೆಯರನ್ನು ಹರಾಜು ಹಾಕಲಾಗುತ್ತಿತ್ತು. ಇದರಲ್ಲಿ ಮುಸ್ಲಿಂ ಮಹಿಳೆಯರನ್ನೇ ಗುರಿ ಮಾಡಿಕೊಳ್ಳಲಾಗಿತ್ತು. ‘ಸುಲ್ಲಿ’ ಎಂಬ ಪದವೂ, ‘ಬುಲ್ಲಿ’ ಎಂಬ ಪದದ ಅರ್ಥದಲ್ಲಿಯೇ ಬಳಕೆಯಾಗುತ್ತದೆ. ಈ ಆ್ಯಪ್‌ನ ಬಗ್ಗೆ ದೂರುಗಳು ದಾಖಲಾದ ನಂತರ, ಅದನ್ನು ಸ್ಥಗಿತಗೊಳಿಸುವಂತೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮೈಕ್ರೊಸಾಫ್ಟ್‌ ಕಾರ್ಪೊರೇಷನ್‌ಗೆ ಪತ್ರ ಬರೆದಿತ್ತು. ಆನಂತರ ಆ ಅಪ್ಲಿಕೇಷನ್ ಸ್ಥಗಿತವಾಗಿತ್ತು. ಆದರೆ, ಅದರ ಬೆನ್ನಲ್ಲೇ ‘ಬುಲ್ಲಿ ಬಾಯಿ’ ಎಂಬ ಅಪ್ಲಿಕೇಷನ್‌ ಅನ್ನು ಸೃಷ್ಟಿಸಲಾಗಿದೆ. ಸುಲ್ಲಿ ಡೀಲ್ಸ್‌ನ ತದ್ರೂಪದಂತೆಯೇ ಬುಲ್ಲಿ ಆ್ಯಪ್‌ ಇದೆ.

ಪತ್ತೆಯಾಗಿದ್ದು ಹೇಗೆ?

ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿರುವ ‘ಬುಲ್ಲಿ ಬಾಯಿ’ ಆ್ಯಪ್ ಬಗ್ಗೆ ಪತ್ರಕರ್ತೆಯೊಬ್ಬರು ಹೊಸ ವರ್ಷದ ಆರಂಭದಲ್ಲಿ ಮೊದಲಿಗೆ ದನಿ ಎತ್ತಿದರು. ಟ್ವೀಟ್ ಮಾಡಿದ್ದ ಅವರು, ತಮ್ಮ ಚಿತ್ರವನ್ನು ಬಳಸಿಕೊಂಡು ಆ್ಯಪ್‌ನಲ್ಲಿ ತಮ್ಮನ್ನು ಮಾರಾಟಕ್ಕೆ ಇಡಲಾಗಿದೆ ಎಂದು ಆರೋಪಿಸಿದ್ದರು. ಕಳೆದ ವಾರ ಅವರು ದೆಹಲಿಯ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡುವುದರೊಂದಿಗೆ ಈ ಪ್ರಕರಣವು ಬೆಳಕಿಗೆ ಬಂದಿತ್ತು. ಅಪರಿಚಿತ ಜನರ ಗುಂಪು ಈ ಕೆಲಸದಲ್ಲಿ ತೊಡಗಿದ್ದು, ಇದು ಲೈಂಗಿಕ ಕಿರುಕುಳ ಮತ್ತು ಧರ್ಮದ ಆಧಾರದ ಮೇಲೆ ದ್ವೇಷವನ್ನು ಪ್ರಚೋದಿಸುವ ಕೃತ್ಯ ಎಂದು ಆರೋಪಿಸಿದ್ದರು.

ಪ್ರಿಯಾಂಕಾ ಚತುರ್ವೇದಿ
ಪ್ರಿಯಾಂಕಾ ಚತುರ್ವೇದಿ

‘ಇಂತಹ ದ್ವೇಷ ಪ್ರಚೋದಕ ವ್ಯಕ್ತಿಗಳು ಯಾವುದೇ ಶಿಕ್ಷೆಯ ಭಯವಿಲ್ಲದೆ, ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿಕೊಂಡ ನಿರ್ಭೀತ ನಡೆ ನಿಜಕ್ಕೂ ನಿರಾಶಾದಾಯಕ’ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಅವರು ಉಲ್ಲೇಖಿಸಿದ್ದರು. ಟ್ವೀಟ್‌ ಹಾಗೂ ದೂರು ಆಧರಿಸಿ ದೆಹಲಿ ಪೊಲೀಸರು ಭಾರತೀಯ ದಂಡ ಸಂಹಿತೆಯ 509 ಸೆಕ್ಷನ್‌ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದರು.

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಇದು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನಕ್ಕೆ ಕಾರಣವಾಯಿತು. ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಈ ಬಗ್ಗೆ ಪ್ರಬಲ ದನಿ ಎತ್ತಿದರು. ಇದೇ ಸ್ವರೂಪದ ‘ಸುಲ್ಲಿ ಡೀಲ್ಸ್’ ಎಂಬ ಆ್ಯಪ್ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಈ ಮೊದಲು ಪದೇ ಪದೇ ಒತ್ತಾಯಿಸಿದ್ದೆ ಎಂದು ತ್ರಿವೇದಿ ನೆನಪಿಸಿದರು. ಮಹಿಳೆಯರನ್ನು ಅತಿರೇಕವಾಗಿ ಚಿತ್ರಿಸುವ ಹಾಗೂ ಕೋಮುವಾದ ಪ್ರಚೋದಿಸುವುದನ್ನೇ ಗುರಿಯಾಗಿಸಿಕೊಂಡಿರುವ ಸುಲ್ಲಿ ಡೀಲ್ಸ್‌ನಂತಹ ವೇದಿಕೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪ್ರಿಯಾಂಕಾ ಆಗ್ರಹಿಸಿದ್ದರು.

ಇಂತಹ ಅತಿರೇಕದ ವರ್ತನೆಗಳನ್ನು ಮುಂದುವರಿಯಲು ಬಿಟ್ಟಿದ್ದು ನಾಚಿಕೆಗೇಡು ಎಂದು ಅವರು ಟ್ವಿಟರ್‌ನಲ್ಲಿ ಖಾರವಾಗಿ ಪ್ರತಿಕ್ರಿಯಿಸಿದರು. ‘ಈ ಹಿಂದೆ ಐಟಿ ಸಚಿವರಿಗೆ ದೂರು ನೀಡಿದಾಗ ಆ್ಯಪ್‌ ಅನ್ನು ಸ್ಥಗಿತಗೊಳಿಸಲಾಗಿತ್ತು. ಆ್ಯಪ್ ಸ್ಥಗಿತಗೊಳಿಸುವುದು ಒಂದು ವಿಧಾನದ ನಿಯಂತ್ರಣ ಕ್ರಮ. ಆದರೆ ಆ್ಯಪ್ ಸೃಷ್ಟಿಕರ್ತರ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸಿದ್ದಿದ್ದರೆ, ಈ ಬಾರಿ ಬುಲ್ಲಿ ಬಾಯಿ ತಲೆ ಎತ್ತುತ್ತಿರಲಿಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಯಾರ ಕೈವಾಡ?

ಈ ಪ್ರಕರಣದಲ್ಲಿ ಬೆಂಗಳೂರಿನ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆ ವಿದ್ಯಾರ್ಥಿಯು, ಬುಲ್ಲಿ ಬಾಯಿ‌ ಆ್ಯಪ್‌ನ ಬಳಕೆದಾರರಲ್ಲಿ ಒಬ್ಬ ಎಂಬುದು ಪತ್ತೆಯಾಗಿದೆ. ಆದರೆ, ಆ್ಯಪ್‌ನ ಇಡೀ ಚಟುವಟಿಕೆಯನ್ನು ನಿಯಂತ್ರಿಸುತ್ತಿದ್ದ ಆರೋಪ ಎದುರಿಸಿರುವ ಉತ್ತರಾಖಂಡದ ಶ್ವೇತಾ ಸಿಂಗ್‌ ಎಂಬ 18 ವರ್ಷದ ಯುವತಿಯನ್ನು ಮುಂಬೈ ಪೊಲೀಸರು ಬುಧವಾರವಷ್ಟೇ ಬಂಧಿಸಿದ್ದಾರೆ. ಒಟ್ಟು ಮೂವರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ.

ಬೆಂಗಳೂರಿನ ಎಂಜಿನಿಯರಿಂಗ್ ವಿದ್ಯಾರ್ಥಿ ನೀಡಿದ ಸುಳಿವಿನ ಆಧಾರದಲ್ಲಿ ಶ್ವೇತಾ ಸಿಂಗ್‌ಳನ್ನು ಬಂಧಿಸಲಾಗಿದೆ. ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಈಕೆ, 2011ರಲ್ಲಿ ಕ್ಯಾನ್ಸರ್‌ನಿಂದ ತನ್ನ ತಾಯಿಯನ್ನು ಕಳೆದುಕೊಂಡಿದ್ದಾಳೆ. ಈಚೆಗೆ ಕೋವಿಡ್‌ಗೆ ಆಕೆಯ ತಂದೆಯೂ ಬಲಿಯಾಗಿದ್ದಾರೆ. ರಾಜ್ಯ ಸರ್ಕಾರ ಪ್ರತಿತಿಂಗಳು ನೀಡುತ್ತಿರುವ ₹3,000 ಮಾಸಾಶನದಲ್ಲಿ ಶ್ವೇತಾ ಸಿಂಗ್‌ ಮತ್ತು ಆಕೆಯ ಸೋದರಿ ಮತ್ತು ಸೋದರ ಜೀವನ ನಡೆಸುತ್ತಿದ್ದಾರೆ.

ಆಕೆಯ ಈ ಅಸಹಾಯಕತೆಯನ್ನು ಬಳಸಿಕೊಂಡು ಬೇರೆಯವರು ಈ ಕೆಲಸ ಮಾಡಿಸಿದ್ದಾರೆ. ಆ್ಯಪ್‌ನ ಎಲ್ಲಾ ಚಟುವಟಿಕೆಗಳನ್ನು ಶ್ವೇತಾ ಸಿಂಗ್‌ ನಿರ್ವಹಣೆ ಮಾಡಿದ್ದಾಳೆ. ನೇಪಾಳದ ವ್ಯಕ್ತಿಯೊಬ್ಬನ ನಿರ್ದೇಶನದಂತೆ ಶ್ವೇತಾ ಕೆಲಸ ಮಾಡಿದ್ದಾಳೆ. ಇದಕ್ಕಾಗಿ ಆಕೆ ಆ ವ್ಯಕ್ತಿಯಿಂದ ಹಣ ಪಡೆದಿದ್ದಾಳೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. ಆದರೆ ನೇಪಾಳದ ವ್ಯಕ್ತಿಯ ಮಾಹಿತಿ ಲಭ್ಯವಾಗಿಲ್ಲ. ಇದರ ಹಿಂದೆ ಬಹುದೊಡ್ಡ ಜಾಲ ಇರುವ ಸಾಧ್ಯತೆ ಇದೆ. ಒಂದು ಸಮುದಾಯದ ಮಹಿಳೆಯರನ್ನೇ ಗುರಿ ಮಾಡಿಕೊಂಡು ಈ ಜಾಲ ಕೆಲಸ ಮಾಡುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ತನಿಖೆ ನಡೆಯುತ್ತಿದೆ.

‘ಪ್ರಭಾವಿ’ ಮುಸ್ಲಿಂ ಮಹಿಳೆಯರೇ ಗುರಿ

2022ರ ಹೊಸ ವರ್ಷವು ಮುಸ್ಲಿಂ ಮಹಿಳೆಯರಿಗೆ ಕಹಿ ಆರಂಭ ನೀಡಿದೆ. ಅನುಮತಿ ಪಡೆಯದೇ, ಕೆಲವು ಮಹಿಳೆಯರನ್ನು ಜನವರಿ 1ರಂದು ಆ್ಯಪ್‌ನಲ್ಲಿ ಹರಾಜಿಗೆ ಇಡಲಾಗಿತ್ತು. 2021ರ ಜುಲೈನಲ್ಲಿ ಇಂತಹದ್ದೇ ಸ್ವರೂಪದ ಕಾರ್ಯಾಚರಣೆಯನ್ನು ಸುಲ್ಲಿ ಡೀಲ್ಸ್‌ ಎಂಬ ಆ್ಯಪ್ ನಡೆಸಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಾರಿಯೂ ಬುಲ್ಲಿ ಬಾಯಿ‌ನಲ್ಲಿ ಮಹಿಳೆಯರು, ಅದರಲ್ಲೂ ವಿಶೇಷವಾಗಿ ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಲಾಗಿದೆ.

ಸುಮಾರು 100 ಮಸ್ಲಿಂ ಮಹಿಳೆಯರು ಈ ಆ್ಯಪ್‌ನಲ್ಲಿ ಹರಾಜಿಗೆ ಇದ್ದು, ಬಹುತೇಕರು ಭಾರತೀಯರು ಎನ್ನಲಾಗಿದೆ. ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ವಿದ್ಯಾರ್ಥಿಗಳು, ಖ್ಯಾತ ವ್ಯಕ್ತಿಗಳು ಹಾಗೂ ಸರ್ಕಾರದ ವಿರುದ್ಧ ದನಿ ಎತ್ತಿದವರನ್ನೇ ಗುರಿಯಾಗಿಸಿ, ಅವರಿಗೆ ಅಪಮಾನ ಮಾಡುವ ಉದ್ದೇಶದಿಂದ ಹೀಗೆ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಬುಲ್ಲಿ ಬಾಯಿ‌ನಲ್ಲಿ ಸಮಾಜದಲ್ಲಿ ‘ಪ್ರಭಾವಿ’ ಎನಿಸಿಕೊಂಡಿರುವ ಮುಸ್ಲಿಂ ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ. ಆನ್‌ಲೈನ್ ವೇದಿಕೆಗಳಲ್ಲಿ ಸಕ್ರಿಯವಾಗಿರುವ ಹಾಗೂ ಬಹಿರಂಗವಾಗಿ ದನಿ ಎತ್ತುತ್ತಿರುವ ಮಹಿಳೆಯರೇ ಈ ಆ್ಯಪ್‌ನ ಗುರಿ. ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ಅವರ ಚಿತ್ರಗಳನ್ನು, ಅವರ ಅನುಮತಿ ಪಡೆಯದೇ ಈ ಆ್ಯಪ್‌ನಲ್ಲಿ ಅಶ್ಲೀಲವಾಗಿ ತಿರುಚಿ ಬಳಸಲಾಗುತ್ತಿದೆ ಎಂಬ ಆರೋಪವಿದೆ.

ಕಳೆದ ಭಾನುವಾರ ಆ್ಯಪ್‌ನಲ್ಲಿ ಹರಾಜು ಹಾಕಲಾಗಿದ್ದ ಮಹಿಳೆಯರಲ್ಲಿ ಖ್ಯಾತ ನಟಿ, ವಿರೋಧ ಪಕ್ಷದ ನಾಯಕಿ ಸೇರಿದಂತೆ ಬಹುತೇಕ ಭಾರತೀಯರೇ ಇದ್ದರು. ಕಳೆದ ಬಾರಿ ಸುಲ್ಲಿ ಡೀಲ್ಸ್‌ ಆ್ಯಪ್‌ನಲ್ಲಿ ಪೈಲಟ್ ವೃತ್ತಿಯಲ್ಲಿರುವ ಮಹಿಳೆಯೊಬ್ಬರ ಚಿತ್ರವನ್ನು ಅನಧಿಕೃತವಾಗಿ ಸಂಗ್ರಹಿಸಿ ಆ್ಯಪ್‌ನಲ್ಲಿ ಹರಾಜಿಗೆ ಇಡಲಾಗಿತ್ತು. ಸ್ನೇಹಿತೆಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ ಬಳಿಕವಷ್ಟೇ ಅವರಿಗೆ ಗಮನಕ್ಕೆ ಬಂದಿತ್ತು.

ಮುಸ್ಲಿಂ ಮಹಿಳೆಯರನ್ನು ಅಪಮಾನಿಸಲು ‘ಸುಲ್ಲಿ’ ಎಂಬ ಅಶ್ಲೀಲ ಪದವನ್ನು ಬಲಪಂಥೀಯ ಸಂಘಟನೆಗಳು ಬಳಸುತ್ತವೆ. ಇಲ್ಲಿ ನೈಜ ಖರೀದಿ ಇರುವುದಿಲ್ಲ. ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಮಹಿಳೆಯರನ್ನು, ಅದರಲ್ಲೂ ಪ್ರಭಾವಿ ಎನಿಸಿರುವ ಮಹಿಳೆಯರನ್ನು ಅಪಮಾನ ಮಾಡುವುದು ಈ ಆ್ಯಪ್‌ನ ಏಕೈಕ ಉದ್ದೇಶ ಎಂಬ ಆರೋಪಗಳಿವೆ.

ಹರಾಜು ಹೇಗೆ?

ಈ ಆ್ಯಪ್‌ ಅನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಬಹುದಾಗಿದೆ. ಅಪ್ಲಿಕೇಷನ್‌ ಅನ್ನು ಡೌನ್‌ಲೋಡ್ ಮಾಡಿಕೊಂಡವರು, ತಮ್ಮನ್ನು ಅದರಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಹೀಗೆ ನೋಂದಣಿ ಮಾಡಿಕೊಂಡ ಬಳಕೆದಾರರ ಫೋನ್‌ನಲ್ಲಿ ಪ್ರತಿದಿನ ಬೆಳಿಗ್ಗೆ ಮಹಿಳೆಯರು ಹರಾಜಿಗೆ ಇರುವ ಬಗ್ಗೆ ನೋಟಿಫಿಕೇಷನ್ ಬರುತ್ತದೆ. ನೋಟಿಫಿಕೇಷನ್‌ ಆಧಾರದಲ್ಲಿ ಬಳಕೆದಾರರು ಹರಾಜಿನಲ್ಲಿ ಭಾಗಿಯಾಗಬಹುದು.

ದಿನವೊಂದರಲ್ಲಿ ಕನಿಷ್ಠ ನೂರು ಮಹಿಳೆಯರನ್ನು ಹರಾಜಿಗೆ ಇಡಲಾಗುತ್ತದೆ. ಬೇರೊಬ್ಬರ ಅರೆನಗ್ನ ಮತ್ತು ಮಾದಕ ಭಂಗಿಯ ಚಿತ್ರಗಳಿಗೆ ಗಣ್ಯ/ಖ್ಯಾತ ಮಹಿಳೆಯರ ಮುಖವನ್ನು ಸೇರಿಸಿ, ಅವರನ್ನು ಹರಾಜು ಹಾಕಲಾಗುತ್ತದೆ. ಹರಾಜಿನಲ್ಲಿ ಭಾಗಿಯಾಗುವವರು ತಮ್ಮಿಷ್ಟದ ಒಬ್ಬ ಮಹಿಳೆಯನ್ನು ಆಯ್ಕೆ ಮಾಡಬೇಕು. ಹೀಗೆ ಹೆಚ್ಚು ಜನರಿಂದ ಆಯ್ಕೆಯಾದ ಮಹಿಳೆಯನ್ನು, ಅಂದಿನ ‘ಬುಲ್ಲಿ ಆಫ್‌ ದಿ ಡೇ’ ಎಂದು ಆಯ್ಕೆ ಮಾಡಲಾಗುತ್ತದೆ. ದಿನವಿಡೀ ಈ ಶೀರ್ಷಿಕೆಯಡಿ ಆ ಚಿತ್ರವು ಅಪ್ಲಿಕೇಷನ್‌ನ ಹೋಂಪೇಜ್‌ನಲ್ಲಿ ಬಿತ್ತರವಾಗುತ್ತದೆ. ಈ ಚಿತ್ರಗಳ ಅಡಿಯಲ್ಲಿ ಕಾಮೆಂಟ್ ಮಾಡಲು ಅವಕಾಶವಿದೆ. ಹೀಗೆ ಮಾಡಲಾದ ಕಾಮೆಂಟ್‌ಗಳಲ್ಲಿ ಬಹುತೇಕವು ಅತ್ಯಂತ ತುಚ್ಛವಾಗಿವೆ ಮತ್ತು ಆ ಮಹಿಳೆಯ ಘನತೆಗೆ ಧಕ್ಕೆ ತರುವ ರೀತಿಯಲ್ಲಿರುತ್ತವೆ.

ಹೋಂಪೇಜ್‌ನಲ್ಲಿ ಬಿತ್ತರವಾಗುವ ಈ ಚಿತ್ರ ಮತ್ತು ಅದಕ್ಕೆ ನೀಡಲಾದ ಕಾಮೆಂಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಫೇಸ್‌ಬುಕ್‌, ಟ್ವಿಟರ್‌ ಮತ್ತು ವಾಟ್ಸ್‌ಆ್ಯಪ್‌ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಅವಕಾಶವಿದೆ. ತುಚ್ಛ ಕಾಮೆಂಟ್‌ನ ಸರಣಿ ಅಲ್ಲಿಯೂ ಮುಂದುವರಿಯುತ್ತದೆ. ಹೀಗೆ ಇಡೀ ದಿನ ಆ ಮಹಿಳೆಯ ಘನತೆಗೆ ಧಕ್ಕೆ ತರಲಾಗುತ್ತದೆ. ಮರುದಿನ ಮತ್ತೆ ಮಹಿಳೆಯರ ಹರಾಜು ನಡೆಯುತ್ತದೆ. ಆಯ್ಕೆಯಾದ ಮಹಿಳೆಯ ಘನತೆಗೆ ಧಕ್ಕೆ ತರುವ ಸರಣಿ ಮುಂದುವರಿಯುತ್ತದೆ.

ಆಧಾರ: ಪಿಟಿಐ, ರಾಯಿಟರ್ಸ್‌, ಬಿಬಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT