ಮಂಗಳವಾರ, ಜೂನ್ 15, 2021
27 °C

ಆಳ–ಅಗಲ | ರಾಜ್ಯದ ಜಲಧಾರೆಗಳಿಗೀಗ ತುಂಬು ಹರೆಯ: ನಾಡು ತುಂಬಾ ನೀರ ಹಾಡು

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

Prajavani

ರಾಜ್ಯದ ಹಲವು ಜಿಲ್ಲೆಗಳಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ. ಬಹುತೇಕ ಎಲ್ಲಾ ನದಿಗಳು ಮೈದುಂಬಿ ಹರಿಯುತ್ತಿವೆ. ಅಂತೆಯೇ ಜಲಪಾತಗಳೂ ವೈಯ್ಯಾರ ತೋರತೊಡಗಿವೆ. ಈ ಜಲಪಾತಗಳು ಮಳೆಗಾಲ ಮತ್ತು ಮಳೆಗಾಲ ಮುಗಿದ ಒಂದೆರಡು ತಿಂಗಳಲ್ಲಷ್ಟೇ ಮೈದುಂಬಿ ಧುಮ್ಮಿಕ್ಕುತ್ತವೆ. ಇವುಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಇದು ಸರಿಯಾದ ಸಮಯ.

ಪಶ್ಚಿಮ ಘಟ್ಟ, ಮಲೆನಾಡು, ಅರೆಮಲೆನಾಡು ಮಾತ್ರವಲ್ಲದೆ ಬಯಲುಸೀಮೆಯಲ್ಲೂ ಹಲವು ಜಲಪಾತಗಳಲ್ಲೀಗ ಜೀವಕಳೆ. ಪ್ರಖ್ಯಾತ ಜಲಪಾತಗಳ ಬಳಿ ಈಗಾಗಲೇ ಪ್ರವಾಸಿಗರ ದಂಡು ಹೆಚ್ಚಾಗಿದೆ. ಹೆಚ್ಚು ಜನಪ್ರಿಯವಲ್ಲದ, ಅದರೆ ಸೌಂದರ್ಯದಲ್ಲಿ ಕಡಿಮೆ ಇಲ್ಲದ ಜಲಪಾತಗಳೂ ಹಲವಾರು ಇವೆ.

***

ಎತ್ತಿಪೋತೆ ಜಲಪಾತ
ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಸಂಗಾಪುರ ಗ್ರಾಮದ ಬಳಿಯಿರುವ ಎತ್ತಿಪೋತೆ ಜಲಪಾತವು ಪ್ರವಾಸಿಗರನ್ನು ಸೆಳೆಯುತ್ತಿದೆ. ಪ್ರತಿ ದಿನವೂ 200ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಜಲಪಾತಕ್ಕೆ ಹೋಗಲು ಮೊದಲು ಚಿಂಚೋಳಿ ಪಟ್ಟಣಕ್ಕೆ ಬರಬೇಕು. ಅಲ್ಲಿಂದ ಕುಂಚಾವರಂ, ಧರ್ಮಸಾಗರ ಮಾರ್ಗದ ಮೂಲಕ ಒಂಟಿಚಿಂತ ಗ್ರಾಮ ತಲುಪಬೇಕು.

ಅಲ್ಲಿಂದ ಗೋಪುನಾಯಕ ತಾಂಡಾಗೆ ಬಂದು ಬಲಬದಿಗೆ ತಿರುಗಬೇಕು. ಅಲ್ಲಿಂದ ಸಂಗಾಪುರ ಗ್ರಾಮದ ಮೂಲಕ 1 ಕಿ.ಮೀ.ಕ್ರಮಿಸಿದರೆ ಎತ್ತಿಪೋತೆ ನಾಲಾ ಸಿಗುತ್ತದೆ. ಅದರ ಬಳಿ ಎಡಭಾಗದಿಂದ 200 ಮೀಟರ್ ಕ್ರಮಿಸಿದರೆ ಚಿಕ್ಕ ಜಲಪಾತ ಸಿಗುತ್ತದೆ. ಅಲ್ಲಿಂದ ಸ್ವಲ್ಪ ದೂರ ಸಾಗಿದರೆ, ದೊಡ್ಡ ಜಲಪಾತ ಕಾಣಸಿಗುತ್ತದೆ.

ಕಾಫಿನಾಡಿನ ಜಲಪಾತಗಳು
ಮಾಣಿಕ್ಯಧಾರಾ ಜಲಪಾತ: ಚಿಕ್ಕಮಗಳೂರು ತಾಲ್ಲೂಕಿನ ಬಾಬಾಬುಡನ್‌ ಗಿರಿಯಿಂದ ಎರಡೂವರೆ ಕಿ.ಮೀ. ದೂರದಲ್ಲಿದೆ. ಬೆಟ್ಟ ಕಣಿವೆಯ ಇಳಿಜಾರಿನಲ್ಲಿ ಎತ್ತರದಿಂದ ನೀರು ಧುಮ್ಮಿಕ್ಕುತ್ತದೆ. ವನರಾಶಿ ನಡುವೆ ಜಲವೈಭವ ಝೇಂಕರಿಸುತ್ತದೆ.

ಹೊನ್ನಮ್ಮನ ಹಳ್ಳ ಜಲಧಾರೆ: ಬಾಬಾಬಡುನ್‌ಗಿರಿಗೆ ಸಾಗುವ ಮಾರ್ಗ ಮಧ್ಯೆ ಹೊನ್ನಮ್ಮನ ಹಳ್ಳ ಜಲಧಾರೆಯು ರಸ್ತೆ ಬದಿಯಲ್ಲೇ ಇದೆ. ಬಂಡೆಗಳ ನಡುವೆ ನುಸುಳಿಕೊಂಡು ನೀರು ಸಾಗುತ್ತದೆ. ಚಿಕ್ಕಮಗಳೂರಿನಿಂದ ಬಾಬಾಬುಡನ್‌ಗಿರಿಗೆ 31 ಕಿ.ಮೀ. ಕ್ರಮಿಸಬೇಕು.

ಅಬ್ಬುಗುಡಿಗೆ ಜಲಪಾತ: ಕಳಸದ ಬಳಿಯ ಅಬ್ಬುಗುಡಿಗೆ ಗ್ರಾಮದ ಸಮೀಪದ ಜಲಪಾತ ಮಳೆಗಾಲದಲ್ಲಿ ಮೈದುಂಬಿಕೊಂಡು ಧುಮ್ಮಿಕ್ಕುತ್ತದೆ. ಅಬ್ಬುಗುಡಿಗೆ ಗ್ರಾಮವು ಕಳಸದಿಂದ 6 ಕಿ.ಮೀ. ದೂರದಲ್ಲಿದೆ. ಕಳಸ- ಕಳಕೋಡು ರಸ್ತೆಯಲ್ಲಿ ಕಳಸದಿಂದ 2 ಕಿ.ಮೀ. ಸಾಗಿದ ನಂತರ ಬಲಕ್ಕೆ ತಿರುಗಿ ಮತ್ತೆ 4 ಕಿ.ಮೀ. ಕ್ರಮಿಸಬೇಕು. ಕೊನೆಯ ಅರ್ಧ ಕಿ.ಮೀ ಕಾಲ್ನಡಿಗೆಯಲ್ಲೇ ತಲುಪಬೇಕು. ಜಲಪಾತ 25 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ.

ಕಡಾಂಬಿ ಜಲಪಾತ: ಕಳಸ- ಕಾರ್ಕಳ ಹೆದ್ದಾರಿಯಲ್ಲಿ ಕುದುರೆಮುಖದಿಂದ 10 ಕಿ.ಮೀ. ದೂರದಲ್ಲಿ ಕಡಾಂಬಿ ಜಲಪಾತ ಇದೆ. ರಸ್ತೆ ಬದಿಯಲ್ಲೇ ಕಾಣಿಸುತ್ತದೆ. 60 ಅಡಿ ಎತ್ತರದಿಂದ ವೈಯ್ಯಾರದಿಂದ ಧುಮ್ಮಿಕುತ್ತದೆ. ಚಿಕ್ಕಮಗಳೂರಿನಿಂದ ಕಳಸ 92 ಕಿ.ಮೀ. ದೂರದಲ್ಲಿದೆ.

ಸಿರಿಮನೆ ಜಲಪಾತ: ಶೃಂಗೇರಿ ತಾಲ್ಲೂಕಿನ ಕಿಗ್ಗಾದಿಂದ ಐದು ಕಿ.ಮೀ. ದೂರದಲ್ಲಿ ಸಿರಿಮನೆ ಜಲಪಾತ ಇದೆ. 40 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ. ಹಸಿರು ವನರಾಶಿಯ ನಡುವೆ ತೆರೆತೆರೆಯಾಗಿ ಹರಿದು ಬೆಳ್ನೊರೆಯ ಜಲವೈಭವ ಸೃಷ್ಟಿತ್ತದೆ. ಚಿಕ್ಕಮಗಳೂರಿನಿಂದ 100 ಕಿ.ಮೀ ದೂರದಲ್ಲಿದೆ.

ಕಲ್ಹತ್ತಿ ಜಲಪಾತ: ಈ ಜಲಪಾತವು ತರೀಕೆರೆ ತಾಲ್ಲೂಕಿನ ಕಲ್ಹತ್ತಿಪುರದಲ್ಲಿದೆ. ಚಂದ್ರದ್ರೋಣ ಪರ್ವತದಿಂದ ಹರಿಯುವ ಈ ಜಲಧಾರೆಯು ಬಂಡೆಗಳ ಸಂದಿಗೊಂದಿಗಳಲ್ಲಿ ಸಾಗಿ ವೀರಭದ್ರೇಶ್ವರ ದೇಗುಲ ಬಳಿ ಧುಮ್ಮಿಕ್ಕುತ್ತದೆ. 410 ಅಡಿ ಎತ್ತರದಿಂದ ಭೋರ್ಗರೆಯುತ್ತದೆ. ಚಿಕ್ಕಮಗಳೂರಿನಿಂದ 53 ಕಿ.ಮೀ, ತರೀಕೆರೆಯಿಂದ 24 ಕಿ.ಮೀ, ಬೀರೂರಿನಿಂದ 25 ಕಿ.ಮೀ ದೂರದಲ್ಲಿದೆ.

ಮೂಕನಮನೆ ಜಲಪಾತ: ಪಶ್ಚಿಮ ಘಟ್ಟದ ಕಾಡುಗಳ ನಡುವೆ ಬೆಟ್ಟಗುಡ್ಡಗಳಲ್ಲಿ ಧುಮ್ಮಿಕ್ಕುತ್ತ ಹಾಲ್ನೊರೆಯಂತೆ ಹರಿಯುವ ಮೂಕನಮನೆ ಜಲಪಾತದ ಸೌಂದರ್ಯ ನೋಡುಗರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ. ಪಶ್ಚಿಮಾಭಿಮುಖವಾಗಿ ಹರಿಯುವ ಮೂಕನಮನೆ ಹೊಳೆಯು ಸಕಲೇಶಪುರ ತಾಲ್ಲೂಕಿನ ಹೊಂಗಡಹಳ್ಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ತಿಹಳ್ಳಿ ಗ್ರಾಮದ ಬಳಿ ಜಲಪಾತ ಸೃಷ್ಟಿಸುತ್ತದೆ. ಅಂದಾಜು 25 ರಿಂದ 30 ಅಡಿ ಎತ್ತರದ ಕಲ್ಲು ಬಂಡೆಗಳ ಮೇಲಿನಿಂದ ಧುಮ್ಮಿಕ್ಕುತ್ತದೆ.

ಮೂಕನಮನೆ ಜಲಪಾತದ ಜೊತೆಗೆ ಈ ಭಾಗದಲ್ಲಿ ಕಾಗಿನಹೆರೆಯಲ್ಲಿ ಟಿಪ್ಪು ನಿರ್ಮಿಸಿದ ಹಳೆಯ ಕೋಟೆ ಹಾಗೂ ವೀವ್‌ ಪಾಯಿಂಟ್‌, ಹೊಸಳ್ಳಿ ಬೆಟ್ಟ, ಯಡಕುಮರಿ ರೈಲ್ವೆ ಸೇತುವೆ ಮತ್ತು ಸುರಂಗ ನೋಡಬಹುದು. ಆಗಸ್ಟ್‌ನಿಂದ ಜನವರಿವರೆಗೂ ಭೇಟಿ ನೀಡಲು ಸೂಕ್ತ ಸಮಯ.

ಹಾಸನ ಜಿಲ್ಲಾ ಕೇಂದ್ರದಿಂದ 80 ಕಿ.ಮೀ ದೂರ ಇರುವ ಈ ಸ್ಥಳಕ್ಕೆ ಸಕಲೇಶಪುರ ರಸ್ತೆ ಮೂಲಕ ಸಾಗಿ, ಬಾಳ್ಳುಪೇಟೆ ಬಳಿ ಎಡಕ್ಕೆ ತಿರುವು ತೆಗೆದುಕೊಳ್ಳಬೇಕು. ಮಾಗಲು ಗ್ರಾಮದಿಂದ ಹೆತ್ತೂರು, ನಂತರ ಕೂಡುರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬಾಚಿಹಳ್ಳಿ ವೃತ್ತದ ಮೂಲಕ ಅತ್ತಿಹಳ್ಳಿಗೆ ಹೋಗಬೇಕು. ಜಲಪಾತದಿಂದ ಕೊಂಚ ದೂರದವರೆಗೂ ವಾಹನದಲ್ಲಿ ಹೋಗಬಹುದು. ನೀರು ಬೀಳುವ ಸ್ಥಳಕ್ಕೆ ನಡೆದೇ ಸಾಗಬೇಕು.

ಚೇಲಾವರ ಜಲಪಾತವು: ಮಡಿಕೇರಿಯಿಂದ 30 ಕಿ.ಮೀ ದೂರದಲ್ಲಿರುವ ನಾಪೋಕ್ಲು ಸಮೀಪದ ಚೇಲಾವರ ಜಲಪಾತವು ಕಾನನ ಸುಂದರಿಯೆಂದೇ ಪ್ರಸಿದ್ಧಿ ಪಡೆದಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಿರುವ ಕುಟ್ಟ ಗ್ರಾಮದಿಂದ 5 ಕಿ.ಮೀ ದೂರದಲ್ಲಿರುವ ಇರ್ಪು ಜಲಪಾತ ಬ್ರಹ್ಮಗಿರಿ ಬೆಟ್ಟದಿಂದ 120 ಅಡಿ ಎತ್ತರದಿಂದ ನಾಲ್ಕು ಹಂತದಲ್ಲಿ ಜಲಧಾರೆಯಾಗಿ ಧುಮ್ಮಿಕ್ಕುತ್ತಿದೆ.

ಚಿಂಗಾರದ ಶೃಂಗಾರ: ಯವಕಪಾಡಿಯ ಚಿಂಗಾರ ಜಲಪಾತವೂ ಕಾನನದ ನಡುವೆ ಸೊಬಗು ಚೆಲ್ಲುತ್ತಿದೆ. ಎತ್ತರದ ಬೆಟ್ಟಸಾಲುಗಳ ಕಣಿವೆಗಳಲ್ಲಿ ಉಗಮಿಸಿ ಹರಿದು ಬರುವ ಜಲಧಾರೆಯಿಂದ ಉದ್ಭವಿಸಿದ ಚಿಂಗಾರ ಜಲಪಾತವೀಗ ಭೋರ್ಗರೆಯುತ್ತಿದೆ.

ಜೋಗದ ಗುಂಡಿಯ ರುದ್ರರಮಣೀಯ ಸೌಂದರ್ಯ
ಅಚ್ಚಕನ್ಯೆ ಜಲಪಾತ:
 ತೀರ್ಥಹಳ್ಳಿ–ಹೊಸನಗರಕ್ಕೆ ಹೋಗುವ ಮಾರ್ಗದಲ್ಲಿ 21 ಕಿ.ಮೀ. ದೂರದ, ಅರಳಸುರಳಿ ಗ್ರಾಮ ಪಂಚಾಯಿತಿ ಪಕ್ಕದ ರಸ್ತೆಯಲ್ಲಿ 2 ಕಿ.ಮೀ ದೂರದಲ್ಲಿ ಅಚ್ಚಕನ್ಯೆ ಜಲಪಾತವಿದೆ. ಜಲಪಾತದ ಸಮೀಪದವರೆಗೆ ಡಾಂಬರು ರಸ್ತೆ ಇದೆ. ಸ್ವಲ್ಪ ದೂರ ಕಚ್ಚಾರಸ್ತೆ. ಮಳೆಗಾಲದಲ್ಲಿ ಮಾತ್ರ ಸೊಗಸು ತೋರುವ ಫಾಲ್ಸ್ ಬೇಸಿಗೆಯಲ್ಲಿ ಬರಿದಾಗಿರುತ್ತದೆ. ಜೂನ್‌ನಿಂದ ಡಿಸೆಂಬರ್‌ವರೆಗೆ ಪ್ರವಾಸಿಗರು ಭೇಟಿ ನೀಡಬಹುದಾಗಿದೆ.

ಮಾವಿನಗುಂಡಿ ಜಲಪಾತ: ಜೋಗದಿಂದ 5 ಕಿ.ಮೀ ಅಂತರದಲ್ಲಿ ಮಾವಿನಗುಂಡಿ ಜಲಪಾತವಿದೆ. ಸಿದ್ದಾಪುರ ತಾಲ್ಲೂಕಿನ ಮಾವಿನಗುಂಡಿಯಿಂದ ಒಂದು ಕಿ.ಮೀ. ದೂರದಲ್ಲಿದೆ. ಬೆಟ್ಟ ಗುಡ್ಡಗಳಲ್ಲಿ ನೈಸರ್ಗಿಕವಾಗಿ ಹರಿಯುವ ಝರಿಗಳು ಒಂದಾಗಿ 800 ಅಡಿಗೂ ಎತ್ತರದಿಂದ ಕೆಳಗೆ ಧುಮುಕುತ್ತವೆ. 

ಒನಕೆ ಅಬ್ಬಿ ಜಲಪಾತ: ತೀರ್ಥಹಳ್ಳಿಯಿಂದ 30 ಕಿ.ಮೀ. ದೂರದ ಆಗುಂಬೆ ಬಳಿ ಈ ಜಲಪಾತವಿದೆ. ಎತ್ತರದಿಂದ ನೀರು ನೇರವಾಗಿ ಬೀಳುವಾಗ ಮನೆಗಳಲ್ಲಿ ಕುಟ್ಟಲು ಬಳಸುವ ಒನಕೆಯಂತೆ ಕಾಣುವುದರಿಂದ ಈ ಹೆಸರು ಬಂದಿದೆ. ಈ ಜಲಪಾತ ಆಗುಂಬೆಯಿಂದ 8 ಕಿ.ಮೀ ದೂರದಲ್ಲಿ ಪಶ್ಚಿಮಘಟ್ಟದ ಬೆಟ್ಟದಲ್ಲಿದೆ. ಅರಣ್ಯ ಮಾರ್ಗದ ಚಾರಣದ ಮೂಲಕ ಅಲ್ಲಿಗೆ ತಲುಪಬಹುದು. ಕಾಲುದಾರಿ ಇದೆ. ಜಲಪಾತದ ಕವಲಿನ ತುದಿ ತಲುಪಲು ಮೆಟ್ಟಿಲುಗಳಿವೆ. ಜೂನ್‌ನಿಂದ ಜನವರಿವರೆಗೆ ವೀಕ್ಷಿಸಬಹುದು.

ಚುಂಚನಕಟ್ಟೆ ಜಲಪಾತ: ಮೈಸೂರು ಜಿಲ್ಲೆ ಕೆ.ಆರ್‌.ನಗರ ತಾಲ್ಲೂಕಿನ ಚುಂಚನಕಟ್ಟೆ ಬಳಿ ಕಾವೇರಿ ನದಿ ಸುಮಾರು 65 ಅಡಿಗಳ ಎತ್ತರದಿಂದ ಭೋರ್ಗರೆಯುತ್ತಾ ಧುಮ್ಮಿಕ್ಕುವ ರುದ್ರ ರಮಣೀಯ ದೃಶ್ಯ ನೋಡುವುದೇ ಚೆಂದ. ಈ ಜಲಪಾತ ಕೆ.ಆರ್‌.ನಗರದಿಂದ 15 ಕಿ.ಮೀ ಹಾಗೂ ಮೈಸೂರಿನಿಂದ 55 ಕಿ.ಮೀ. ದೂರದಲ್ಲಿದೆ.

ಕೊಡಗಿನಲ್ಲಿ ಉತ್ತಮ ಮಳೆಯಾದರೆ, ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿ ಚುಂಚನಕಟ್ಟೆ ಜಲಪಾತ ಮೈದುಂಬಿಕೊಳ್ಳುತ್ತದೆ. ಬಂಡೆ ಕಲ್ಲುಗಳ ನಡುವೆ ಭೋರ್ಗರೆಯುತ್ತಾ ಹರಿಯುವ ನೀರಿನ ಸದ್ದು ಸುಮಾರು ದೂರದವರೆಗೆ ಕೇಳಿಸುತ್ತದೆ.

ಮಲ್ಲಳ್ಳಿಯ ಚೆಲುವು: ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಸಮೀಪದ ನಿಸರ್ಗದ ಮಡಿಲಲ್ಲಿ ಮಲ್ಲಳ್ಳಿ ಜಲಪಾತ ಇದೆ. ಪುಷ್ಪಗಿರಿ ತಪ್ಪಲಿನಲ್ಲಿ ಹೆಚ್ಚು ಮಳೆಯಾಗಿದ್ದು ಈ ಜಲಪಾತಕ್ಕೆ ಜೀವಕಳೆ ಬಂದಿದೆ.

ಸಾಗುವ ಹಾದಿಯಲ್ಲಿನ ವನರಾಶಿ ಪ್ರವಾಸಿಗರಿಗೆ ಮನಸ್ಸಿಗೆ ಹಿತಾನುಭವ ನೀಡುತ್ತಿದೆ. ಸೋಮವಾರಪೇಟೆಯಿಂದ 25 ಕಿ.ಮೀ ದೂರದಲ್ಲಿದೆ.

ಭರಚುಕ್ಕಿ ಜಲಪಾತ
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಶಿವನಸಮುದ್ರದ ಬಳಿಯ ಭರಚುಕ್ಕಿ ಜಲಪಾತ, ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು. ಕಾವೇರಿ ನದಿಯು ಇಲ್ಲಿ ಕೊರಕಲು ಕಲ್ಲುಗಳ ನಡುವೆ ಅತ್ಯಂತ ವಿಶಾಲವಾಗಿ ಹರಡಿಕೊಂಡು ಕವಲು ಕವಲಾಗಿ 100 ಅಡಿ ಆಳಕ್ಕೆ ಧುಮುಕುತ್ತದೆ. ಕಾವೇರಿ ನದಿ ಶಿವನಸಮುದ್ರದ ಬಳಿ ಎರಡು ಕವಲಾಗುತ್ತದೆ. ಒಂದು ಕವಲು ಭರಚುಕ್ಕಿಯಲ್ಲಿ ಧುಮ್ಮಿಕ್ಕಿದ್ದರೆ ಮತ್ತೊಂದು ಕವಲು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿಗೆ ಸೇರಿದ ಗಗನಚುಕ್ಕಿ ಎಂಬಲ್ಲಿ ಧುಮ್ಮಿಕ್ಕುತ್ತದೆ. ಎರಡೂ ಜಲಪಾತದ ದೃಶ್ಯ ವೈಭವವನ್ನು ಜಿಲ್ಲೆಯಿಂದ ಕಾಣಬಹುದು.

ಭರಚುಕ್ಕಿ ಜಲಪಾತ ಪ್ರದೇಶವು ಕೊಳ್ಳೇಗಾಲದಿಂದ 22 ಕಿ.ಮೀ ದೂರದಲ್ಲಿದೆ. ಬೆಂಗಳೂರು, ಮಂಡ್ಯ, ರಾಮನಗರ ಮುಂತಾದ ಪ್ರದೇಶಗಳಿಂದ ಬರುವವರು ಕೊಳ್ಳೇಗಾಲಕ್ಕೆ ಬರಬೇಕಾಗಿಲ್ಲ. ಸತ್ತೇಗಾಲದ ಬಳಿ ಎಡಕ್ಕೆ ತಿರುಗಿ ಜಲಪಾತದತ್ತ ಸಾಗಬಹುದು. ಮೈಸೂರು ಕಡೆಯಿಂದ ಬರುವವರು ಕೊಳ್ಳೇಗಾಲಕ್ಕೆ ಬಂದೇ ಹೋಗಬೇಕು.

ಹೊಗೇನಕಲ್‌ ಜಲಪಾತ
ಕರ್ನಾಟಕ ಮತ್ತು ತಮಿಳುನಾಡಿನ ಗಡಿ ಭಾಗದಲ್ಲಿರುವ ಈ ಜಲಪಾತವನ್ನು ಎರಡೂ ರಾಜ್ಯಗಳ ನೆಲದಿಂದ ವೀಕ್ಷಿಸಬಹುದು. ವಿಶಾಲವಾಗಿ ಹರಿಯುವ ಕಾವೇರಿ ನದಿಯು ಇಲ್ಲಿ ಕಲ್ಲಿನ ಕೊರಕಲ ಕಂದಕಕ್ಕೆ ಏಕಾಏಕಿ ಧುಮ್ಮಿಕ್ಕಿ ಜಲಪಾತದ ಸ್ವರೂಪ ಪಡೆದಿದೆ. ಮಳೆಗಾಲದಲ್ಲಿ ಜಲಾಶಯಗಳಿಂದ ಹೆಚ್ಚು ನೀರು ಬಿಟ್ಟಾಗ, ಜಲಪಾತಕ್ಕೆ ಕಳೆ ಬರುತ್ತದೆ.

ಸುತ್ತಲೂ ಬೆಟ್ಟಗಳ ರಾಶಿ, ಹಸಿರು ಸೌಂದರ್ಯದ ನಡುವೆ ಇರುವ ರಮಣೀಯ ಹೊಗೇನಕಲ್‌ ಜಲಪಾತ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಿಂದ 110 ಕಿ.ಮೀ ದೂರದಲ್ಲಿದೆ. ಪವಿತ್ರ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದಿಂದ 48 ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ ಕೃಷ್ಣಗಿರಿ, ಧರ್ಮಪುರಿ ಮಾರ್ಗದ ಮೂಲಕವೂ (200 ಕಿ.ಮೀ ದೂರ) ಈ‌ ಜಲಪಾತಕ್ಕೆ ಭೇಟಿ ನೀಡಬಹುದು. 

ಗೋಲಾರಿ ಜಲಪಾತ: ಕಾರವಾರ ತಾಲ್ಲೂಕಿನ ತೋಡೂರು ಸಮೀಪದ ‘ಗೋಲಾರಿ’ ಜಲಪಾತ ದಟ್ಟ ಕಾಡಿನ ನಡುವೆ ಇದೆ.  ಕಾರವಾರದಿಂದ 17 ಕಿ.ಮೀ ದೂರದಲ್ಲಿ ತೋಡೂರು ಗ್ರಾಮದಲ್ಲಿದೆ. ಕಾರವಾರದಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತೋಡೂರು ಕ್ರಾಸ್‌ವರೆಗೆ ಸಾಗಿ (ಸುಮಾರು 14 ಕಿ.ಮೀ) ಅಲ್ಲಿಂದ ಎಡಕ್ಕೆ ಮೂರು ಕಿಲೋಮೀಟರ್ ಒಳದಾರಿಯಲ್ಲಿ ಸಾಗಬೇಕು.

ಅಂಕೋಲಾ ಕಡೆಯಿಂದ ಬರುವವರು ತೋಡೂರು ಕ್ರಾಸ್‌ಗೆ (21 ಕಿ.ಮೀ‌) ಬಂದು ಬಲಕ್ಕೆ ಪ್ರಯಾಣಿಸಬೇಕು. ರಸ್ತೆಯ ಕೊನೆಯಲ್ಲಿ ವಾಹನ ನಿಲ್ಲಿಸಿ ಮತ್ತೆರಡು ಕಿಲೋಮೀಟರ್ ನಡೆಯಬೇಕು. ಬೆಟ್ಟದ ಏರು ದಾರಿಯಲ್ಲಿ ಕಲ್ಲು, ಬಂಡೆಗಳ ನಡುವೆ ಸಾಗುವುದು ಹಲವರಿಗೆ ಚಾರಣದ ಅನುಭವ ನೀಡುತ್ತದೆ.

ಅಪ್ಸರಕೊಂಡ ಜಲಪಾತ: ಹೊನ್ನಾವರ ತಾಲ್ಲೂಕಿನ ಕಾಸರಕೋಡ ಸಮೀಪದ ಅಪ್ಸರಕೊಂಡ ಜಲಪಾತವು ರಾಷ್ಟ್ರೀಯ ಹೆದ್ದಾರಿ 66ರಿಂದ ಎರಡು ಕಿಲೋಮೀಟರ್ ಅಂತರದಲ್ಲಿದೆ. ಮಳೆಗಾಲದಲ್ಲಿ ಮೈದುಂಬುವ ಈ ಜಲಧಾರೆ ನಂತರ ಬತ್ತಿ ಹೋಗುತ್ತದೆ. ಸಮೀಪದಲ್ಲಿ ಸುಂದರ ಕಡಲತೀರ ಹಾಗೂ ಅರಣ್ಯ ಇಲಾಖೆ ಅಭಿವೃದ್ಧಿಪಡಿಸಿರುವ ಉದ್ಯಾನವಿದೆ. ಹೊನ್ನಾವರದಿಂದ ಸುಮಾರು ಏಳು ಕಿಲೋಮೀಟರ್ ದೂರದಲ್ಲಿದೆ.

ತಾಲ್ಲೂಕಿನ ಗೇರುಸೊಪ್ಪ ಸಮೀಪ ಕಾಡಿನಲ್ಲಿ ‘ಬಂಗಾರ ಕುಸುಮ’ ಎಂಬ ಜಲಪಾತವಿದೆ. ರಾಷ್ಟ್ರೀಯ ಹೆದ್ದಾರಿ 206ರಿಂದ ಅನತಿ ದೂರದಲ್ಲಿದೆ. ಹೊನ್ನಾವರದಿಂದ 35  ಕಿ.ಮೀ.ದೂರದಲ್ಲಿದ್ದು ಜಲಪಾತದ ಜಾಗ ಚಾರಣಿಗರಿಗೂ ಪ್ರಿಯವಾಗುವಂತಿದೆ.

ಹಾನುಬಾಳು ಅಬ್ಬಿ ಫಾಲ್ಸ್‌: ಸಕಲೇಶಪುರ ತಾಲ್ಲೂಕಿನ ಹಾನುಬಾಳು ಸಮೀಪ ಇರುವ ಅಬ್ಬಿಪಾಲ್ಸ್‌ ಮಳೆ ಹಾಗೂ ಬೇಸಿಗೆ ಕಾಲದಲ್ಲೂ ಸಾಕಷ್ಟು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಸಕಲೇಶಪುರದಿಂದ ಸುಮಾರು 18 ಕಿ.ಮೀ ದೂರದಲ್ಲಿರುವ ಈ ಜಲಪಾತಕ್ಕೆ ಹಾನುಬಾಳಿನಿಂದ ದೇವರುಂದ ರಸ್ತೆಯಲ್ಲಿ 5 ಕಿ.ಮೀ ಸಾಗಬೇಕು.

ರಸ್ತೆಯ ಪಕ್ಕದಲ್ಲಿಯೇ ಜಲಪಾತ ಇರುವುದರಿಂದ ಜನರನ್ನು ಬೇಗ ಆಕರ್ಷಿಸುತ್ತದೆ. ಸುಮಾರು 15 ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಪಾತ ಇದಾಗಿದೆ. ದೊಡ್ಡ ದೊಡ್ಡ ಬಂಡೆಗಳ ನಡುವೆ ಹರಿಯುವ ನೀರಿನಲ್ಲಿ ಇಳಿದು ಆಟವಾಡಲು ಜನರು ಇಲ್ಲಿಗೆ ಬರುತ್ತಾರೆ.

ಉಂಚಳ್ಳಿ ಜಲಪಾತ: ಸಿದ್ದಾಪುರ ತಾಲ್ಲೂಕಿನ ಹೆಗ್ಗರಣಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ದಟ್ಟ ಕಾನನದ ನಡುವೆ ಇರುವ ಉಂಚಳ್ಳಿ ಜಲಪಾತ ಸಾಕಷ್ಟು ಪ್ರಸಿದ್ಧವಾಗಿದೆ. ಸ್ಥಳೀಯವಾಗಿ ‘ಮಾಣಿ ಹೊಳೆ’ ಎಂದು ಕರೆಯುವ ಅಘನಾಶಿನಿ ನದಿ 116 ಮೀಟರ್‌ ಎತ್ತರದಿಂದ ಧುಮುಕಿ, ಈ ಜಲಪಾತ ನಿರ್ಮಾಣವಾಗಿದೆ.

1845ರಲ್ಲಿ ಬ್ರಿಟಿಷ್‌ ಅಧಿಕಾರಿ ಜೆ.ಡಿ.ಲೂಸಿಂಗ್‌ ಟನ್‌, ಮೊದಲ ಬಾರಿ ಕಂಡ ಕಾರಣ ‘ಲೂಸಿಂಗ್‌ಟನ್‌ ಫಾಲ್ಸ್‌’ ಎಂದು ಕೂಡ ಕರೆಯಲಾಗುತ್ತದೆ. ಹೆಗ್ಗರಣಿಯಿಂದ ಐದು ಕಿ.ಮೀ ದೂರವಿರುವ ಈ ಜಲಪಾತಕ್ಕೆ ಹುಬ್ಬಳ್ಳಿ ಕಡೆಯಿಂದ ಶಿರಸಿ ಮೂಲಕ ಮತ್ತು ಶಿವಮೊಗ್ಗ ಕಡೆಯಿಂದ ಸಿದ್ದಾಪುರ ಮೂಲಕ ತೆರಳಬಹುದು. ಶಿರಸಿ ಮತ್ತು ಸಿದ್ದಾಪುರದಿಂದ ಸುಮಾರು 35 ಕಿ.ಮೀ ದೂರವಿದೆ.

‘ವಜ್ರ’ ಜಲಪಾತ: ಕಾರವಾರ ತಾಲ್ಲೂಕಿನ ಅಣಶಿಯಲ್ಲಿರುವ ‘ವಜ್ರ’ ಜಲಪಾತವು, ಸದಾಶಿವಗಡ– ರಾಮನಗರ ಹೆದ್ದಾರಿಯ ಅಂಚಿನಲ್ಲೇ ಹಾಲ್ನೊರೆಯಂತೆ ಹರಿಯುತ್ತದೆ. ಬೆಟ್ಟದ ಮೇಲಿನ ಭಾಗದಲ್ಲಿ ಸುರಿಯುವ ಮಳೆ ನೀರು, ಕೆಳಗೆ ಧುಮ್ಮಿಕ್ಕುತ್ತ ಸುಂದರ ತಾಣವನ್ನೇ ಸೃಷ್ಟಿಸಿದೆ. ಜಲಪಾತದ ಬುಡದಲ್ಲಿ ನಿಂತುಕೊಳ್ಳಲು ಕಲ್ಲುಬಂಡೆಗಳಿವೆ.

ವಾಹನಗಳನ್ನು ಹೆದ್ದಾರಿ ಅಂಚಿನಲ್ಲೇ ನಿಲ್ಲಿಸಿ ಅಥವಾ ವಾಹನದಲ್ಲೇ ಕುಳಿತು ಈ ಜಾಗವನ್ನು ಕಣ್ತುಂಬಿಕೊಳ್ಳಬಹುದು. ಕಾರವಾರದಿಂದ ಕದ್ರಾ ಮೂಲಕ ಸಾಗಿದರೆ ಅಣಶಿ ಜಲಪಾತಕ್ಕೆ 37 ಕಿ.ಮೀ ದೂರವಾಗುತ್ತದೆ. ಹುಬ್ಬಳ್ಳಿಯಿಂದ ಜೊಯಿಡಾ (95 ಕಿ.ಮೀ) ಅಲ್ಲಿಂದ ಕದ್ರಾ 46 ಕಿ.ಮೀ ದೂರವಿದೆ.

ಚಾಲುಕ್ಯ ನಾಡಿನ ವಯ್ಯಾರಿಯರು
ಬಾಗಲಕೋಟೆ: ಮಳೆಗಾಲ ಬಂತೆಂದರೆ ಚಾಲುಕ್ಯರ ನಾಡು ಬಾದಾಮಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಪುಟ್ಟ ಪುಟ್ಟ ಜಲಪಾತಗಳು ಮೈದಳೆಯುತ್ತವೆ. ಬಾದಾಮಿ ಪಟ್ಟಣದಿಂದ ಆರಂಭವಾಗುವ ಬೆಟ್ಟ ಸಾಲುಗಳಲ್ಲಿ ವೈಯ್ಯಾರ ತೋರುತ್ತಾ, ಬಳುಕುತ್ತಾ, ಬಾಗುತ್ತಾ ಹಾಲ್ನೊರೆಯೊಂದಿಗೆ ಧುಮ್ಮಿಕ್ಕುವ ಈ ಜಲಪಾತಗಳು ನೋಡುಗರ ಕಣ್ಮನ ಸೆಳೆಯುತ್ತವೆ.

ಅಕ್ಕ–ತಂಗಿ ಜಲ‍ಪಾತ: ದೊಡ್ಡ ಮಳೆ ಸುರಿಯಿತೆಂದರೆ ಬಾದಾಮಿಯ ಅಗಸ್ತ್ಯತೀರ್ಥ ಹೊಂಡದ ಪರಿಸರದಲ್ಲಿ ಭೂತನಾಥ ಗುಡಿಯ ಹಿಂಭಾಗ ಅಕ್ಕ–ತಂಗಿ ಜಲಪಾತ ಮೈದಳೆಯುತ್ತವೆ. ಸುತ್ತಲೂ ಕೆಂಪು ಕಲ್ಲಿನ ಬೆಟ್ಟ ಶ್ರೇಣಿಯ ನಡುವೆ ಬೀಳುವ ನೀರಧಾರೆ ಅಕ್ಷರಶಃ ದೃಶ್ಯಕಾವ್ಯವೇ ಸರಿ.

ಹುಲಿಗೆಮ್ಮನ ಕೊಳ್ಳ: ಬಾದಾಮಿಯಿಂದ ಪಟ್ಟದಕಲ್ಲು ದೇವಾಲಯ ಸಮುಚ್ಛಯಕ್ಕೆ ಸಾಗುವ ರಾಜ್ಯಹೆದ್ದಾರಿಯಲ್ಲಿ ಬಿ.ಎನ್‌.ಜಾಲಿಹಾಳ ಬಳಿ ಎಡಕ್ಕೆ ಮೂರು ಕಿ.ಮೀ ಸಾಗಿದರೆ ಹುಲಿಗೆಮ್ಮನ ಕೊಳ್ಳ ಸಿಗುತ್ತದೆ. ಇಲ್ಲಿ ಮಳೆಗಾಲದಲ್ಲಿ ಜಲಪಾತ ಸೃಷ್ಟಿಯಾಗುತ್ತದೆ. ಇದು ಸಿನಿಮಾ ಚಿತ್ರೀಕರಣ ತಾಣವಾಗಿದೆ.

ಸಿದ್ಧನ ಕೊಳ್ಳ: ಪಟ್ಟದಕಲ್ಲು–ಐಹೊಳೆ ರಸ್ತೆಯ ನಡುವೆ ಬಲಕ್ಕೆ ಕಾಡು ಹಾದಿಯಲ್ಲಿ ಎರಡು ಕಿ.ಮೀ ಸಾಗಿದರೆ ಸಿದ್ಧನಕೊಳ್ಳ ಸಿಗುತ್ತದೆ. ಇಲ್ಲಿ ಸಿದ್ಧನಾಥ ಗುಡಿ ಇದೆ. ಮಳೆಗಾಲದಲ್ಲಿ ಮೈದುಂಬಿ ಧುಮ್ಮಿಕ್ಕುವ ಪುಟ್ಟ ಜಲಧಾರೆ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಲಲಿತಾ ಕೊಳ್ಳ: ಬಾದಾಮಿ ತಾಲ್ಲೂಕಿನ ಹಾನಾಪುರ ಎಸ್‌ಪಿ ಸರಹದ್ದಿನಲ್ಲಿ ಮೈದಳೆಯುವ ಜಲಪಾತ ಬ್ರಿಟಿಷ್ ಗೆಜೆಟಿಯರ್‌ನಲ್ಲಿ ಲಲಿತಾ ಕೊಳ್ಳ ಎಂಬ ಹೆಸರಿನಲ್ಲಿ ಉಲ್ಲೇಖವಾಗಿದೆ. ಸ್ಥಳೀಯರು ಇದನ್ನು ಹಾಲು ಹಂಡೆ ಜಲಪಾತ ಎನ್ನುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು