ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ– ಅಗಲ: ದ್ವೇಷದ ಹೇಳಿಕೆ ಸೌಹಾರ್ದ ಕದಡೀತೇ?

Last Updated 7 ಜೂನ್ 2022, 19:30 IST
ಅಕ್ಷರ ಗಾತ್ರ

ಪ್ರವಾದಿ ಮಹಮ್ಮದರ ಕುರಿತು ಬಿಜೆಪಿ ನಾಯಕರು ನೀಡಿದ ಹೇಳಿಕೆಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ಆಕ್ಷೇಪ ವ್ಯಕ್ತವಾಗಿದೆ. ಹೀಗೆ ಆಕ್ಷೇಪ ವ್ಯಕ್ತಪಡಿಸಿದ ಮುಸ್ಲಿಂ ರಾಷ್ಟ್ರಗಳಲ್ಲಿ, ಕೊಲ್ಲಿ ರಾಷ್ಟ್ರಗಳು ಭಾರತ ಸರ್ಕಾರದ ಕ್ಷಮೆಗೆ ಪಟ್ಟುಹಿಡಿದಿವೆ. ಕೊಲ್ಲಿ ಸಹಕಾರ ಮಂಡಳಿ (ಜಿಸಿಸಿ) ಸದಸ್ಯ ರಾಷ್ಟ್ರಗಳಾದಸೌದಿ ಅರೇಬಿಯಾ, ಯುಎಇ, ಕುವೈತ್, ಒಮಾನ್, ಕತಾರ್ ಮತ್ತು ಬಹರೈನ್‌ ದೇಶಗಳು ಭಾರತದ ರಾಯಭಾರಿಯನ್ನು ಕರೆಸಿಕೊಂಡು ತಮ್ಮ ಆಕ್ಷೇಪವನ್ನು ದಾಖಲಿಸಿವೆ.

ಇದರ ಬೆನ್ನಲ್ಲೇ, ಕತಾರ್‌ನ ಸೂಪರ್‌ ಮಾರುಕಟ್ಟೆಯೊಂದರಲ್ಲಿ ಭಾರತದ ಉತ್ಪನ್ನಗಳನ್ನು ಮಾರಾಟದಿಂದ ತೆಗೆಯಲಾಗಿದೆ. ಇದಕ್ಕೆ ಪ್ರತಿಯಾಗಿ ಕೊಲ್ಲಿ ಅಥವಾ ಅರಬ್ ದೇಶಗಳ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂಬ ಅಭಿಯಾನ ಭಾರತದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ. #ಬಾಯ್ಕಾಟ್ ಅರಬ್, ಬಾಯ್ಕಾಟ್‌ ಕತಾರ್‌ ಏರ್‌ವೇಸ್‌ ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ಈ ಅಭಿಯಾನ ನಡೆಸಲಾಗುತ್ತಿದೆ.

ಇದರ ಮಧ್ಯೆಯೇ ಅರಬ್‌ ದೇಶಗಳ ಜತೆಗಿನ ವ್ಯಾಪಾರ ಸಂಬಂಧವನ್ನು ಭಾರತವು ಕಡಿದುಕೊಳ್ಳಲು ಸಾಧ್ಯವೇ ಎಂಬ ಚರ್ಚೆಯೂ ನಡೆಯುತ್ತಿದೆ.ಬಹಳ ಮುಖ್ಯವಾದ ಅಂಶವೆಂದರೆ, ಈಚಿನ ವರ್ಷಗಳಲ್ಲಿ ಈ ದೇಶಗಳೊಂದಿಗೆ ಭಾರತದ ವಾಣಿಜ್ಯ ವಹಿವಾಟು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. 2020–21ನೇ ಸಾಲಿನಲ್ಲಿ ₹4.40 ಲಕ್ಷ ಕೋಟಿ ಮೌಲ್ಯದ ಸರಕುಗಳನ್ನು ಈ ಆರು ಕೊಲ್ಲಿ ದೇಶಗಳಿಂದ ಆಮದು ಮಾಡಿಕೊಂಡಿತ್ತು. 2021–22ನೇ ಸಾಲಿನಲ್ಲಿ ಈ ದೇಶಗಳಿಂದ ಆಮದು ಮಾಡಿಕೊಂಡ ಸರಕುಗಳ ಮೌಲ್ಯ ₹8.26 ಲಕ್ಷ ಕೋಟಿಗೆ ಏರಿಕೆಯಾಗಿದೆ. ಅಂದರೆ ಒಂದೇ ವರ್ಷದಲ್ಲಿ ಆಮದಿನ ಮೌಲ್ಯ ಶೇ 87ರಷ್ಟು ಏರಿಕೆಯಾಗಿದೆ.

ಇದೇ ರೀತಿ ಈ ದೇಶಗಳಿಗೆ ಭಾರತವು ರಫ್ತು ಮಾಡಿದ ಸರಕುಗಳ ಮೌಲ್ಯದಲ್ಲಿಯೂ ಭಾರಿ ಪ್ರಮಾಣದ ಏರಿಕೆಯಾಗಿದೆ. 2020–21ನೇ ಸಾಲಿನಲ್ಲಿ ಭಾರತವು ಈ ಆರೂ ದೇಶಗಳಿಗೆ ₹2.05 ಲಕ್ಷ ಕೋಟಿ ಮೌಲ್ಯದ ಸರಕುಗಳನ್ನು ರಫ್ತು ಮಾಡಿತ್ತು. 2021–22ನೇ ಸಾಲಿನಲ್ಲಿ ರಫ್ತು ಮಾಡಿದ ಸರಕುಗಳ ಮೌಲ್ಯ ₹3.27 ಲಕ್ಷ ಕೋಟಿಯಷ್ಟು ಇತ್ತು. ಇದು ಶೇ 59.6ರಷ್ಟು ಏರಿಕೆ. ಈ ದೇಶಗಳೊಂದಿಗೆ ಭಾರತದ ವಾಣಿಜ್ಯ ವಹಿವಾಟು ವೃದ್ಧಿಸುತ್ತಿರುವುದನ್ನು ಈ ದತ್ತಾಂಶಗಳು ಸೂಚಿಸುತ್ತವೆ.

ಭಾರತವು ಕಚ್ಚಾತೈಲ, ಪೆಟ್ರೋಲಿಯಂ ಉತ್ಪನ್ನಗಳು, ರಸಗೊಬ್ಬರ, ಒಣಹಣ್ಣುಗಳು, ಗಾಜು ಮತ್ತು ಸೆರಾಮಿಕ್ ಉತ್ಪನ್ನಗಳಿಗಾಗಿ ಈ ದೇಶಗಳನ್ನು ಅವಲಂಬಿಸಿದೆ. ಈ ದೇಶಗಳು ಸಹ ಮಾಂಸ, ಹಣ್ಣು–ತರಕಾರಿ, ಹಾಲಿನ ಉತ್ಪನ್ನಗಳು, ಹವಳ–ಮುತ್ತು–ರತ್ನಗಳು, ಪರಮಾಣು ರಿಯಾಕ್ಟರ್‌ಗಳಿಗಾಗಿ ಭಾರತವನ್ನು ಅವಲಂಬಿಸಿವೆ.

2021–22ನೇ ಸಾಲಿನಲ್ಲಿ ಭಾರತವು ಈ ದೇಶಗಳಿಂದ ಒಟ್ಟು ₹8.26 ಲಕ್ಷ ಕೋಟಿ ಮೌಲ್ಯದಷ್ಟು ಸರಕುಗಳನ್ನು ಆಮದು ಮಾಡಿಕೊಂಡಿದ್ದರೆ, ಅದರಲ್ಲಿ ಕಚ್ಚಾತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೌಲ್ಯ ₹5.48 ಲಕ್ಷ ಕೋಟಿ. ಇಷ್ಟು ದೊಡ್ಡ ಪ್ರಮಾಣದ ಕಚ್ಚಾತೈಲವನ್ನು ಬೇರೆ ದೇಶಗಳಿಂದ ತರಿಸಿಕೊಳ್ಳಲು ಸಾಧ್ಯವಿಲ್ಲ.ಈ ಪರಸ್ಪರ ಅವಲಂಬನೆಯನ್ನು ತೊಡೆದುಹಾಕಲು ತಕ್ಷಣಕ್ಕೆ ಸಾಧ್ಯವಿಲ್ಲ ಎಂಬುದನ್ನು ಈ ಅಂಕಿಅಂಶಗಳು ಹೇಳುತ್ತವೆ.

ಜಿಸಿಸಿ ದೇಶಗಳಲ್ಲಿದ್ದಾರೆ 88 ಲಕ್ಷ ಭಾರತೀಯರು
ಕೊಲ್ಲಿ ದೇಶಗಳಲ್ಲಿ ಭಾರಿ ಸಂಖ್ಯೆಯಲ್ಲಿ ಭಾರತೀಯರು ವಾಸಿಸುತ್ತಿದ್ದಾರೆ. ವಿದೇಶಗಳಲ್ಲಿ ವಾಸ ಮಾಡುತ್ತಿರುವ 3.2 ಕೋಟಿ ಅನಿವಾಸಿ ಭಾರತೀಯರಲ್ಲಿ ಅರ್ಧದಷ್ಟು ಜನರು ಕೊಲ್ಲಿ ದೇಶಗಳಲ್ಲಿ ಇದ್ದಾರೆ ಎನ್ನಲಾಗಿದೆ. ಕೊಲ್ಲಿ ಸಹಕಾರ ಮಂಡಳಿಯ (ಜಿಸಿಸಿ) ಆರು ದೇಶಗಳಾದ ಯುಎಇ, ಸೌದಿ ಅರೇಬಿಯಾ, ಕುವೈತ್, ಒಮಾನ್, ಕತಾರ್ ಹಾಗೂ ಬಹರೈನ್‌ನಲ್ಲಿ 88.7 ಲಕ್ಷ ಭಾರತೀಯರು ಇದ್ದಾರೆ ಎಂದು ವಿದೇಶಾಂಗ ಸಚಿವಾಲಯ ನೀಡಿರುವ ಅಂಕಿ–ಅಂಶಗಳು ತಿಳಿಸುತ್ತವೆ.ಈ ಪೈಕಿ ಬಹುತೇಕರು ಕೊಲ್ಲಿ ದೇಶಗಳ ಪೆಟ್ರೋಲಿಯಂ ಘಟಕಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

ಯುಎಇಯಲ್ಲಿಯೇ ಭಾರತದ ಸುಮಾರು 70 ಸಾವಿರ ಜನರು ಅನಧಿಕೃತವಾಗಿ ವಾಸಿಸುತ್ತಿದ್ದಾರೆ ಎಂಬ ಮಾಹಿತಿಯಿದೆ. ಈ ಮಾಹಿತಿ ಖಚಿತವೇ ಎಂದು ಸಂಸದ ಕೆ.ಸಿ. ರಾಮಮೂರ್ತಿ ಅವರು 2018ರಲ್ಲಿ ರಾಜ್ಯಸಭೆಯಲ್ಲಿ ಸರ್ಕಾರವನ್ನು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಸಚಿವ ಜನರಲ್ ವಿ.ಕೆ. ಸಿಂಗ್ ಅವರು, ಅನಧಿಕೃತವಾಗಿ ವಾಸಿಸುವವರ ಸ್ಪಷ್ಟ ಸಂಖ್ಯೆಯನ್ನುಯುಎಇ ಮೊದಲಾದ ಕೊಲ್ಲಿ ದೇಶಗಳು ನೀಡಿಲ್ಲ ಎಂದು ಹೇಳಿದ್ದರು.

ಜಿಸಿಸಿ ದೇಶಗಳಲ್ಲಿ 88.7 ಲಕ್ಷ ಅನಿವಾಸಿ ಭಾರತೀಯರು ಅಧಿಕೃತವಾಗಿ ವಾಸಿಸುತ್ತಿದ್ದು, ಅನಧಿಕೃತವಾಗಿ ವಾಸಿಸುವವರ ಸಂಖ್ಯೆಯ ಬಗ್ಗೆ ಸ್ಪಷ್ಟತೆ ಇಲ್ಲ. ಮಾಹಿತಿ ಪ್ರಕಾರ, ಸುಮಾರು ಒಂದೂವರೆ ಕೋಟಿ ಭಾರತೀಯರು ಜಿಸಿಸಿ ದೇಶಗಳಲ್ಲಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಒಂದು ವೇಳೆ, ಈ ಎಲ್ಲ ಭಾರತೀಯರಿಗೆ ಉದ್ಯೋಗ ನಿರಾಕರಿಸಿದರೆ, ಅವರೆಲ್ಲರೂ ತವರಿಗೆ ಬರಬೇಕಾಗಬಹುದು. ಇಷ್ಟು ಸಂಖ್ಯೆಯ ಜನರಿಗೆ ಭಾರತದಲ್ಲಿ ಉದ್ಯೋಗ ಒದಗಿಸುವ ದೊಡ್ಡ ಸವಾಲು ಸರ್ಕಾರಕ್ಕೆ ಎದುರಾಗಬಹುದು ಎಂದು ವಿಶ್ಲೇಷಿಸಲಾಗಿದೆ.

ವಿದೇಶಗಳಿಂದ ಹಣ ರವಾನೆ: ಭಾರತ ಮುಂದು
ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಸಂಜಾತರು ತಾವು ದುಡಿದ ಹಣವನ್ನು ತಾಯ್ನಾಡಿಗೆ (ರೆಮಿಟೆನ್ಸ್) ಕಳಿಸುತ್ತಿದ್ದಾರೆ. ಹೀಗೆ ಹೆಚ್ಚಿನ ಪ್ರಮಾಣದಲ್ಲಿ ಹಣ ರವಾನೆಯಾದ ದೇಶಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ ಎಂದು 2021ರ ನವೆಂಬರ್‌ನಲ್ಲಿ ಪ್ರಕಟವಾದ ವಿಶ್ವಬ್ಯಾಂಕ್ ವರದಿ ಹೇಳುತ್ತದೆ. ₹6.52 ಲಕ್ಷ ಕೋಟಿ (8,700 ಕೋಟಿ ಡಾಲರ್) ಹಣ ವಿದೇಶಗಳಿಂದ ಭಾರತಕ್ಕೆ ಹರಿದುಬಂದಿದೆ.

ಹಣ ರವಾನೆಯಾದ ದೇಶಗಳ ಸಾಲಿನಲ್ಲಿ ಭಾರತದ ಬಳಿಕ ಚೀನಾ, ಮೆಕ್ಸಿಕೊ, ಫಿಲಿಪ್ಪೀನ್ಸ್ ಹಾಗೂ ಈಜಿಪ್ಟ್ ದೇಶಗಳಿವೆ. 2022ರಲ್ಲಿ ಭಾರತಕ್ಕೆ ಹಣ ರವಾನೆ ಶೇ 3ರಷ್ಟು ಹೆಚ್ಚಳವಾಗುವ (89.6 ಡಾಲರ್) ಸಾಧ್ಯತೆಯಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.

ಭಾರತಕ್ಕೆ ರವಾನೆಯಾದ ಹಣದಲ್ಲಿ ಶೇ 20ರಷ್ಟು ಪಾಲು ಅಮೆರಿಕಕ್ಕೆ ಸೇರಿದೆ. ಉಳಿದಂತೆ ದೊಡ್ಡ ಮೊತ್ತವು ಜಿಸಿಸಿ ದೇಶಗಳಿಂದ ಬಂದಿರುವುದು ವಿಶೇಷ. ಜಿಸಿಸಿ ದೇಶಗಳಲ್ಲಿ ವಾಸಿಸುತ್ತಿರುವ ಲಕ್ಷಾಂತರ ಭಾರತೀಯರು, ತಾವು ಗಳಿಸುವ ಹಣವನ್ನು ಭಾರತದಲ್ಲಿರುವ ತಮ್ಮ ಕುಟುಂಬಗಳಿಗೆ ರವಾನೆ ಮಾಡುತ್ತಿದ್ದಾರೆ. ಈ ಹಣವನ್ನು ನಂಬಿಕೊಂಡು ಜೀವನ ಸಾವಿಸುವ ಬಹುತೇಕ ಕುಟುಂಬಗಳು ದೇಶದಲ್ಲಿವೆ. ಒಂದು ವೇಳೆ ಜಿಸಿಸಿ ದೇಶಗಳಲ್ಲಿರುವ ಭಾರತೀಯರ ಉದ್ಯೋಗಕ್ಕೆ ಕತ್ತರಿ ಬಿದ್ದರೆ, ಭಾರತಕ್ಕೆ ಹರಿದುಬರುವಇಷ್ಟೂ ಪ್ರಮಾಣದ ಹಣ ನಿಂತುಹೋಗಲಿದೆ.

ಜಿಸಿಸಿ ದೇಶಗಳಲ್ಲಿರುವ ಭಾರತದ ಕೌಶಲರಹಿತ ಕೆಲಸಗಾರರು ಪ್ರತೀ ತಿಂಗಳು ಅಂದಾಜು ₹30,000 ಹಣವನ್ನು ಭಾರತದ ತಮ್ಮ ಕುಟುಂಬಗಳಿಗೆ ಕಳುಹಿಸುತ್ತಿದ್ದಾರೆ. ಇದೇ ಸ್ವರೂಪದ ಕೆಲಸ ಮಾಡುವ ಚೀನಾ ಹಾಗೂ ಫಿಲಿಪ್ಪೀನ್ಸ್‌ನ ವಲಸಿಗರಿಗೆ ಹೋಲಿಸಿದರೆ, ಭಾರತದ ಕೆಲಸಗಾರರು ಜಿಸಿಸಿ ದೇಶಗಳಿಂದ ಕಳುಹಿಸುವ ಹಣ ಕಡಿಮೆಯಿದೆ ಎಂದು ವರದಿ ತಿಳಿಸಿದೆ.

ಆಧಾರ:ವಾಣಿಜ್ಯ ಸಚಿವಾಲಯದ ಆಮದು–ರಫ್ತು ದತ್ತಾಂಶ ಬ್ಯಾಂಕ್‌, ವಿಶ್ವಬ್ಯಾಂಕ್ ವರದಿ, ಭಾರತದ ವಿದೇಶಾಂಗ ಸಚಿವಾಲಯ, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT