ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡೆದ ಬಯೊಬಬಲ್‌.. ಮುಂದೇನು?

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ ಮುಂದೂಡಿಕೆಯ ಸುತ್ತಮುತ್ತ
Last Updated 5 ಮೇ 2021, 20:00 IST
ಅಕ್ಷರ ಗಾತ್ರ

‘ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಜಾರಿ ಮಾಡಿರುವ ಕ್ಲಸ್ಟರ್‌ಕ್ಯಾರವಾನ್‌ ಮಾದರಿಯು ಉತ್ತಮವಾಗಿದೆ. ಎಂಟು ತಂಡಗಳು ಆರು ತಾಣಗಳಲ್ಲಿ ಪಂದ್ಯಗಳನ್ನು ಆಡಲಿವೆ. ಈ ತಾಣಗಳ ನಡುವೆ ಪ್ರಯಾಣಿಸುವ ಮತ್ತು ಪಂದ್ಯಗಳ ದಿನಾಂಕವನ್ನು ಯೋಜಿಸಿರುವ ರೀತಿ ಅನನ್ಯವಾಗಿದೆ. ಇದೇ ಮಾದರಿಯನ್ನು ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಟೂರ್ನಿಗೂ ಅನ್ವಯಿಸುವ ಬಗ್ಗೆ ಪರಿಶೀಲಿಸಬಹುದು’

–ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ (ಐಸಿಸಿ) ಜೀವ ಸುರಕ್ಷತಾ ನಿಯಮ ಅನುಷ್ಠಾನ ವಿಭಾಗದ ಮುಖ್ಯಸ್ಥ ಡೇವ್ ಮಸ್ಕರ್‌ ಏಪ್ರಿಲ್ 22ರಂದು ನೀಡಿದ್ದ ಹೇಳಿಕೆ ಇದು.

‘ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದ್ದೇವೆ. ಐಸಿಸಿಯೊಂದಿಗೆ ಸಂಪರ್ಕದಲ್ಲಿದ್ದೇವೆ. ಸೆಪ್ಟೆಂಬರ್–ಅಕ್ಟೋಬರ್‌ನಲ್ಲಿ ಪರಿಸ್ಥಿತಿ ಹೇಗಿರಬಹುದು ಎಂಬ ಅವಲೋಕನ ಮಾಡುತ್ತಿದ್ದೇವೆ. ಕೊನೆಯ ಆಯ್ಕೆಯಾಗಿ ಅರಬ್‌ ಸಂಯುಕ್ತ ಸಂಸ್ಥಾನಕ್ಕೆ (ಯುಎಇ) ಸ್ಥಳಾಂತರದ ಬಗ್ಗೆ ಯೋಚಿಸುತ್ತೇವೆ’ ಎಂದು ಬಿಸಿಸಿಐ ಕ್ರಿಕೆಟ್ ಚಟುವಟಿಕೆಗಳ ಮುಖ್ಯ ವ್ಯವಸ್ಥಾಪಕ ಧೀರಜ್ ಮಲ್ಹೋತ್ರಾ ಮಂಗಳವಾರ ಹೇಳಿದ್ದಾರೆ.

ಈ ಎರಡು ಹೇಳಿಕೆಗಳ ನಡುವಿನ ಅಂತರ 13 ದಿನಗಳು. ವಿಶ್ವದ ಅತ್ಯಂತ ಶ್ರೀಮಂತ ಕ್ರೀಡಾಸಂಸ್ಥೆಗಳಲ್ಲಿ ಒಂದಾಗಿರುವ ಬಿಸಿಸಿಐಗೆ ಮುಜುಗರ ತಂದ ದಿನಗಳು ಇವು. ಏಕೆಂದರೆ ಐಸಿಸಿಯ ಮೇಲೆ ಯಾವುದೇ ಸಂದರ್ಭದಲ್ಲಿಯೂ ಪ್ರಭಾವ ಬೀರುವ ಶಕ್ತಿ ಬಿಸಿಸಿಐಗೆ ಇರುವುದು ಹಲವು ವಿಷಯಗಳಲ್ಲಿ ಸಾಬೀತಾಗಿದೆ. ಆದರೆ ಇದೀಗ ಬಯೊಬಬಲ್‌ (ಜೀವ ಸುರಕ್ಷಾ) ನಿಯಮದ ನಿರ್ವಹಣೆಯಲ್ಲಿ ಆಗಿರುವ ವೈಫಲ್ಯದಿಂದ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮಂಡಳಿಗೆ ಮುಜುಗರವಾಗಿರುವುದು ಸತ್ಯ. ಇದೆಲ್ಲದರ ಜೊತೆಗೆ ಎರಡು ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ ನಷ್ಟವನ್ನೂ ಅನುಭವಿಸುತ್ತಿದೆ. ಇವುಗಳಿಂದ ತಪ್ಪಿಸಿಕೊಳ್ಳುವ ಅವಕಾಶವನ್ನು ಬಿಸಿಸಿಐ ಕಳೆದುಕೊಂಡಿರುವುದಂತೂ ದಿಟ.

ಈ ವರ್ಷ ಐಪಿಎಲ್ ಮುಂದುವರಿಕೆ ಸಾಧ್ಯವೇ?: ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಐಪಿಎಲ್‌ನಲ್ಲಿ ಇನ್ನೂ 31 ಪಂದ್ಯಗಳು ಬಾಕಿ ಇವೆ. ಆದರೆ ಸೆಪ್ಟೆಂಬರ್‌ನಲ್ಲಿ ಅವುಗಳನ್ನು ನಡೆಸಲು ಪ್ರಯತ್ನಿಸಲಾಗುವುದು ಎಂದು ಐಪಿಎಲ್ ಆಡಳಿತ ಸಮಿತಿ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಹೇಳಿದ್ದಾರೆ. ಆದರೆ ಭಾರತದಲ್ಲಿಯೇ ಆಯೋಜಿಸುವ ಬಗ್ಗೆ ಅವರು ಸ್ಪಷ್ಟಪಡಿಸಿಲ್ಲ. ಏಕೆಂದರೆ ಅದೇ ವೇಳೆಗೆ ಕೋವಿಡ್ ಮೂರನೇ ಅಲೆ ಅಪ್ಪಳಿಸಬಹುದು ಎಂಬ ಎಚ್ಚರಿಕೆಯನ್ನು ತಜ್ಞರು ಈಗಾಗಲೇ ನೀಡಿದ್ದಾರೆ.

ಏಪ್ರಿಲ್ 9ರಂದು ಐಪಿಎಲ್ ಆರಂಭವಾಗುವ ಮುನ್ನವೇ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ದೇವದತ್ತ ಪಡಿಕ್ಕಲ್, ಕೋಲ್ಕತ್ತ ನೈಟ್ ರೈಡರ್ಸ್ ತಂಡದ ನಿತೀಶ್ ರಾಣಾ, ಎನ್ರಿಚ್ ನೊಕಿಯ, ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಅಕ್ಷರ್ ಪಟೇಲ್ ಅವರು ಟೂರ್ನಿ ಆರಂಭಕ್ಕೂ ಮುನ್ನವೇ ಕೊರೊನಾ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡಿದ್ದರು. ಕಡ್ಡಾಯ ಪ್ರತ್ಯೇಕವಾಸ ನಿಯಮಗಳನ್ನು ಮುಗಿಸಿ ತಮ್ಮ ತಂಡಗಳನ್ನು ಸೇರಿಕೊಂಡಿದ್ದರು. ಆದರೂ ಬಿಸಿಸಿಐ ಹೆಜ್ಜೆ ಹಿಂದೆ ಇಟ್ಟಿರಲಿಲ್ಲ. ಆ್ಯಡಂ ಜಂಪಾ, ಅ್ಯಂಡ್ರ್ಯೂ ಟೈ ಮತ್ತು ಕೇನ್ ರಿಚರ್ಡ್ಸನ್ ಅವರು ಹೋದ ವಾರ ಇಲ್ಲಿಯ ಸ್ಥಿತಿಗೆ ಆತಂಕ ವ್ಯಕ್ತಪಡಿಸಿ ತಮ್ಮ ದೇಶಗಳಿಗೆ ಮರಳಿದ್ದರು. ಆಗಲೇ ಟೂರ್ನಿಗೆ ತಡೆಯೊಡ್ಡಿದ್ದರೆ ಇಂದಿನ ಮುಜುಗರವನ್ನೂ ತಪ್ಪಿಸಿಕೊಳ್ಳಬಹುದಿತ್ತೇನೋ...

ಆದ್ದರಿಂದ ಬಾಕಿ ಉಳಿದಿರುವ ಪಂದ್ಯಗಳ ಆಯೋಜನೆ ಯಲ್ಲಿ ಈಗ ಆಗಿರುವ ಲೋಪಗಳನ್ನು ತಿದ್ದಿಕೊಂಡು ಮುಂದೆ ಹೆಜ್ಜೆ ಇಡುವ ಸಾಧ್ಯತೆಯೇ ಹೆಚ್ಚು. ಅದಕ್ಕಾಗಿಯೂ ಯುಎಇಯತ್ತಲೇ ಮಂಡಳಿ ಮುಖ ಮಾಡಿದೆ. ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಬಹಳಷ್ಟು ದೇಶಗಳು ಭಾರತದ ವಿಮಾನಗಳಿಗೆ ನಿರ್ಬಂಧ ಹೇರಿವೆ. ಕಠಿಣ ನಿಯಮಗಳನ್ನೂ ವಿಧಿಸಿವೆ.

ಬಯೊಬಬಲ್ ನಿಯಮದಲ್ಲಿ ಬದಲು?: ಹೋದ ವರ್ಷ ಮಾರ್ಚ್‌ನಿಂದ ಸುಮಾರು ನಾಲ್ಕು ತಿಂಗಳು ವಿಶ್ವದೆಲ್ಲೆಡೆಯೂ ಕ್ರೀಡಾ ಚಟುವಟಿಕೆಗಳು ಸ್ಥಗಿತವಾಗಿದ್ದವು. ಐಸಿಸಿ ರೂಪಿಸಿದ ಜೀವ ಸುರಕ್ಷಾ ನಿಯಮಗಳನ್ನು ಮೊದಲಿಗೆ ಜಾರಿ ಮಾಡಿದ ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಮಂಡಳಿಯು ವೆಸ್ಟ್ ಇಂಡೀಸ್ ವಿರುದ್ಧ ಸರಣಿ ನಡೆಸಿತು. ಐರ್ಲೆಂಡ್, ಪಾಕಿಸ್ತಾನ ಎದುರೂ ಟೂರ್ನಿಗಳು ಅಲ್ಲಿ ನಡೆದವು. ಆದರೂ ಆಸ್ಟ್ರೇಲಿಯಾಕ್ಕೆ ಧೈರ್ಯ ಸಾಲಲಿಲ್ಲ. ಅಕ್ಟೋಬರ್‌ನಲ್ಲಿ ತಾನು ಆತಿಥ್ಯ ವಹಿಸಬೇಕಿದ್ದ ಟಿ20 ವಿಶ್ವಕಪ್ ಟೂರ್ನಿಯನ್ನು ಆ ದೇಶವು ಮುಂದೂಡಿತ್ತು.

ಅದೇ ಆಸ್ಟ್ರೇಲಿಯಾ ನವೆಂಬರ್–ಡಿಸೆಂಬರ್‌ನಲ್ಲಿ ಭಾರತದ ಎದುರು ದ್ವಿಪಕ್ಷೀಯ ಸರಣಿಗಳನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಬಹುತಂಡಗಳು ಸ್ಪರ್ಧಿಸುವ ಟೂರ್ನಿಯನ್ನು ಆಯೋಜಿಸಲು ಯಾವುದೇ ದೇಶವೂ ಇದುವರೆಗೆ ಧೈರ್ಯ ಮಾಡಿಲ್ಲ. ಆದರೆ, ಬಿಸಿಸಿಐ ಅದಕ್ಕೆ ಮುನ್ನುಡಿ ಬರೆಯುವ ಗುರಿಯೊಂದಿಗೆ ಐಪಿಎಲ್ ಆಯೋಜಿಸಿತ್ತು. ಒಂದೊಮ್ಮೆ ಯಶಸ್ವಿಯಾಗಿದ್ದರೆ ಏಷ್ಯಾಕಪ್ ಟೂರ್ನಿ, ವಿಶ್ವಕಪ್ ಟೂರ್ನಿಗಳನ್ನು ನಡೆಸಲು ಆಯೋಜಕರಿಗೆ ಹುಮ್ಮಸ್ಸು ಬರುತ್ತಿತ್ತು.

ಆದರೆ ಈ ಸಲದ ಐಪಿಎಲ್‌ನಲ್ಲಿ ನಿಗದಿ ಪಡಿಸಲಾಗಿದ್ದ ಆರು ತಾಣಗಳ ಪೈಕಿ ನಾಲ್ಕರಲ್ಲಿ ಮಾತ್ರ ಪಂದ್ಯಗಳು ನಡೆದಿದ್ದವು. ತಂಡಗಳು ಈ ನಗರಗಳ ನಡುವೆ ಮಾತ್ರ ಪ್ರಯಾಣ ಮಾಡಿದ್ದವು. ಆಟಗಾರರು, ನೆರವು ಸಿಬ್ಬಂದಿ, ಅಧಿಕಾರಿಗಳು ಮತ್ತು ಆಟಗಾರರ ಕುಟುಂಬ ಸದಸ್ಯರು ನಿರಂತರವಾಗಿ ಬಯೊಬಬಲ್‌ ವ್ಯವಸ್ಥೆಯಲ್ಲಿದ್ದರು. ಆದರೂ ನಾಲ್ಕು ತಂಡಗಳ ಕೆಲವು ಆಟಗಾರರು ಮತ್ತು ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ಬಯೊಬಬಲ್ ಲೋಪವನ್ನು ಎತ್ತಿ ತೋರಿಸಿದೆ.

ಇದು, ಎರಡು–ಮೂರಕ್ಕಿಂತ ಹೆಚ್ಚು ತಂಡಗಳು ಮತ್ತು ಬೇರೆ ಬೇರೆ ತಾಣಗಳಲ್ಲಿ ಪಂದ್ಯ ನಡೆಯುವಾಗ ವಿಭಿನ್ನವಾದ ಶಿಷ್ಟಾಚಾರಗಳನ್ನು ರೂಪಿಸುವ ಅಗತ್ಯವಿದೆಯೇ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ. ಬಾಕಿ ಉಳಿದಿರುವ ಐಪಿಎಲ್ ಮತ್ತು ವಿಶ್ವಕಪ್ ಟೂರ್ನಿಗಳನ್ನು ಆಯೋಜಿಸುವ ಮುನ್ನ ಬಿಸಿಸಿಐ ಮತ್ತು ಐಸಿಸಿ ಒಟ್ಟಿಗೆ ಕುಳಿತು ಈ ಬಗ್ಗೆ ಒಮ್ಮತಕ್ಕೆ ಬರುವ ಅಗತ್ಯವಿದೆ.

‘ಹೋದ ಬಾರಿ ಯುಎಇಯಲ್ಲಿ ಐಪಿಎಲ್ ಆಯೋಜನೆ ಅಚ್ಚುಕಟ್ಟಾಗಿತ್ತು. ಈ ಬಾರಿ ಅಲ್ಲಿಯಷ್ಟು ಪರಿಣಾಮಕಾರಿಯಾದ ಬಯೊಬಬಲ್ ವ್ಯವಸ್ಥೆ ಇದ್ದಂತೆ ಕಾಣಲಿಲ್ಲ’ ಎಂದು ಆ್ಯಡಂ ಜಂಪಾ ಹೇಳಿದ್ದ ಮಾತನ್ನೂ ಗಂಭೀರವಾಗಿ ಪರಿಗಣಿಸಬೇಕು.

ಜೀವ ಸುರಕ್ಷಾ ನಿಯಮ ಪಾಲನೆಯಲ್ಲಿ ಆಗುವ ಮಾನಸಿಕ ಒತ್ತಡದ ಕುರಿತು ಈ ಹಿಂದೆ ವಿರಾಟ್ ಕೊಹ್ಲಿ, ಜಯದೇವ್ ಉನದ್ಕತ್ ಮತ್ತಿತರ ಆಟಗಾರರು ಹೇಳಿದ್ದರು. ಆ ವಿಷಯವನ್ನು ಪರಿಗಣಿಸಬೇಕು. ಏಕೆಂದರೆ ಬಿಸಿಸಿಐ ಮತ್ತು ಕ್ರಿಕೆಟ್‌ ಬೆಳವಣಿಗೆಗೆ ಆಟಗಾರರೇ ಮುಖ್ಯ. ಅವರ ಭಾವನೆಗಳಿಗೆ ಮತ್ತು ಸುರಕ್ಷತೆಗೆ ಮೊದಲ ಆದ್ಯತೆ ಕೊಡಬೇಕು.

ನಿಯಮಗಳು

ಫ್ರ್ಯಾಂಚೈಸಿಗಳಿಗೆ ಪ್ರತ್ಯೇಕ ಬಯೊಬಬಲ್

ತಂಡಗಳಿಗಾಗಿ ನಿಗದಿಯಾದ ಹೋಟೆಲ್‌ಗಳಿಗೆ ಬೇರೆ ಯಾರಿಗೂ ಪ್ರವೇಶವಿಲ್ಲ

ಹೋಟೆಲ್, ಊಟದ ವ್ಯವಸ್ಥೆಯಲ್ಲಿ ಇರುವ ಸಿಬ್ಬಂದಿಗೂ ನಿಯಮಪಾಲನೆ ಕಡ್ಡಾಯ. ಪ್ರತಿದಿನವೂ ಕೋವಿಡ್ ಪರೀಕ್ಷೆ

ಆಟಗಾರರು, ನೆರವು ಸಿಬ್ಬಂದಿ ಮತ್ತು ಅಧಿಕಾರಿಗಳೊಂದಿಗೆ ಹೋಟೆಲ್ ಸಿಬ್ಬಂದಿಯ ನೇರ ಸಂಪರ್ಕವಿಲ್ಲ

ಅಭ್ಯಾಸ ಮತ್ತು ಪಂದ್ಯಗಳು ನಡೆಯುವ ಕ್ರೀಡಾಂಗಣಗಳ ಸಿಬ್ಬಂದಿಗೆ ಪ್ರತ್ಯೇಕವಾಸ ಕೋಣೆಗಳು. ನಿಯಮಿತವಾಗಿ ಕೋವಿಡ್ ಟೆಸ್ಟ್

ಆಟಗಾರರ ಕ್ರಿಕೆಟ್ ಕಿಟ್ ಮತ್ತು ಸಲಕರಣೆಗಳಿಗೆ ಸ್ಯಾನಿಟೈಸೇಷನ್

ನಗರಗಳ ನಡುವಣ ಪ್ರಯಾಣಕ್ಕಾಗಿ ಖಾಸಗಿ ವಿಮಾನಗಳ ಬಳಕೆ. ರಸ್ತೆ ಮಾರ್ಗದಲ್ಲಿ ಸಂಚರಿಸಲು ತಂಡಗಳಿಗೆ ಪ್ರತ್ಯೇಕ ಬಸ್‌ಗಳ ವ್ಯವಸ್ಥೆ

ಸಾರಿಗೆ ಸಿಬ್ಬಂದಿಗೂ ಕೋವಿಡ್ ಪತ್ತೆ ಪರೀಕ್ಷೆ

ಆಟಗಾರರೊಂದಿಗೆ ಪ್ರಯಾಣಿಸುವ ಕುಟುಂಬ ಸದಸ್ಯರಿಗೂ ಬಯೊಬಬಲ್ ನಿಯಮ ಕಡ್ಡಾಯ

ಆಟಗಾರರು, ಸಿಬ್ಬಂದಿಗಳ ಚಲನವಲನದ ಮೇಲೆ ನಿಗಾವಹಿಸಲು ಜಿಪಿಎಸ್‌ ತಂತ್ರಜ್ಞಾನ ಬಳಕೆ

ಟೂರ್ನಿ ಆರಂಭಕ್ಕೂ ಮುನ್ನ ಎಲ್ಲರಿಗೂ ಏಳು ದಿನಗಳ ಕ್ವಾರಂಟೈನ್ ಕಡ್ಡಾಯ

ಟೂರ್ನಿಯ ಮಧ್ಯದಲ್ಲಿ ತಂಡವನ್ನು ಸೇರಿಕೊಳ್ಳುವ ಆಟಗಾರರಿಗೂ ಆರು ದಿನಗಳ ಕ್ವಾರಂಟೈನ್ ಕಡ್ಡಾಯ

ವಿದೇಶ ಪ್ರಯಾಣ ನಿಬಂಧನೆಗಳು

ಆಸ್ಟ್ರೇಲಿಯಾ: ವಿಮಾನಯಾನ ರದ್ದು

ಇಂಗ್ಲೆಂಡ್: ಇಲ್ಲಿಗೆ ಬರುವ ತನ್ನ ದೇಶವಾಸಿಗಳು ಹತ್ತು ದಿನಗಳ ಕ್ವಾರಂಟೈನ್‌ನಲ್ಲಿರಬೇಕು. ಈ ಅವಧಿಯಲ್ಲಿ ಎರಡು ಬಾರಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು.

ನ್ಯೂಜಿಲೆಂಡ್: ಇಲ್ಲಿಗೆ ಬರುವವರಿಗೆ 14 ದಿನಗಳ ಕ್ವಾರಂಟೈನ್ ಕಡ್ಡಾಯ. ನೆಗೆಟಿವ್‌ ವರದಿಯ ನಂತರ ಪ್ರವೇಶ.

ದಕ್ಷಿಣ ಆಫ್ರಿಕಾ: ಎಲ್ಲ ಪ್ರಯಾಣಿಕರಿಗೂ ಪ್ರವೇಶ

ಬಾಂಗ್ಲಾದೇಶ: ವಿಮಾನಯಾವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಭೂಮಾರ್ಗದ ಮೂಲಕ ಹೋದವರಿಗೆ 14 ದಿನಗಳ ಕಡ್ಡಾಯ ಪ್ರತ್ಯೇಕವಾಸ

ಯುಎಇ: ಭಾರತದಿಂದ ಬರುವ ಎಲ್ಲ ವಿಮಾನಗಳಿಗೂ ತಡೆಯೊಡ್ಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT