ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ಹೊಸಗಾಳಿ ಬೀಸುತಿದೆ: ಪರಿಸರಕ್ಕೆ ವರವಾದ ಲಾಕ್‌ಡೌನ್‌ ಬದಲಾವಣೆ

Last Updated 5 ಏಪ್ರಿಲ್ 2020, 0:59 IST
ಅಕ್ಷರ ಗಾತ್ರ
ADVERTISEMENT
""
""

ಜಗತ್ತಿನ ಮಹಾನಗರಗಳ ವಾಯುಮಾಲಿನ್ಯದ ಪ್ರಮಾಣ ದಿಢೀರ್‌ ಇಳಿಕೆಯಾಗುತ್ತಿದೆ. ನದಿ, ಸಮುದ್ರ ತೀರಗಳು ಶುಭ್ರವಾಗಿವೆ. ಮಾಲಿನ್ಯದ ಪರದೆಯಲ್ಲಿ ಮರೆಯಾಗಿ ಹೋಗಿದ್ದ ಪರ್ವತಗಳು ಸಹ ದರ್ಶನ ನೀಡಲು ಆರಂಭಿಸಿವೆ. ಕಾಡು ಪ್ರಾಣಿಗಳು ಕೆಲವೆಡೆ ನಾಡಿನೊಳಗೆ ಬಂದು ಸ್ವಚ್ಛಂದವಾಗಿ ವಿಹರಿಸುತ್ತಿವೆ. ಎಲ್ಲೆಲ್ಲೂ ಹೊಸಗಾಳಿ ಬೀಸುತ್ತಿದೆ. ಹೌದು, ಕೊರೊನಾ ವೈರಸ್‌ ಹರಡದಂತೆ ವಿಧಿಸಿರುವ ಲಾಕ್‌ಡೌನ್‌, ಪರಿಸರದಲ್ಲಿ ಎಷ್ಟೊಂದು ಸಕಾರಾತ್ಮಕ ಬದಲಾವಣೆ ತಂದಿದೆ!

ಮತ್ತೆ ದರ್ಶನ ನೀಡಿದ ಪರ್ವತಶ್ರೇಣಿ

ಪಂಜಾಬ್‌ನ ಜಲಂಧರ್‌ ನಗರದ ಜನ ಮೊನ್ನೆ ಎದ್ದೊಡನೆ ಕಣ್ಣುಜ್ಜುತ್ತಾ ಕಂಡ ದೃಶ್ಯವನ್ನು ತಕ್ಷಣಕ್ಕೆ ನಂಬಲು ಸಿದ್ಧರೇ ಇರಲಿಲ್ಲ. ‘ಇದು ಬರೀ ಬೆಳಗಲ್ಲೋ ಅಣ್ಣಾ’ ಎಂಬ ಉದ್ಗಾರ ಸಹ ಅವರಿಂದ ಹೊರಟಿತ್ತು. ಏಕೆಂದರೆ, ಸುಮಾರು 200 ಕಿ.ಮೀ. ದೂರದಲ್ಲಿರುವ ಹಿಮಾಚಲ ಪ್ರದೇಶದ ಧೌಲಾಧಾರ ಪರ್ವತ ಶ್ರೇಣಿ 30 ವರ್ಷಗಳ ಬಳಿಕ ಅವರಿಗೆ ದರ್ಶನವನ್ನು ನೀಡಿತ್ತು! ಲಾಕ್‌ಡೌನ್‌ನಿಂದ ಮಾಲಿನ್ಯದ ಪ್ರಮಾಣವು ಗಣನೀಯವಾಗಿ ಕಡಿಮೆ ಆಗಿದ್ದರಿಂದ ಅಲ್ಲಿನ ಜನರಿಗೆ ಆ ಪರ್ವತ ಶ್ರೇಣಿಯನ್ನು ಮತ್ತೆ ಕಾಣುವ ಭಾಗ್ಯ ದೊರೆತಿದೆ. ಈ ಖುಷಿಯನ್ನು ಫೋಟೊದೊಂದಿಗೆ ಟ್ವಿಟರ್‌ನಲ್ಲಿ ಹಂಚಿಕೊಂಡ, ಐಎಫ್‌ಎಸ್‌ ಅಧಿಕಾರಿ ಸುಶಾಂತ್‌ ನಂದಾ, ‘ನಿಸರ್ಗ ಹಿಂದೆ ಹೇಗಿತ್ತು, ಈಗ ಹೇಗೆ ಮಾಡಿದ್ದೇವೆ’ ಎಂದು ಬರೆದಿದ್ದರು.

ಚಂಡೀಗಡದಲ್ಲಿ ಸಾಂಬಾರ್‌

ಚಂಡೀಗಡ ನಗರವನ್ನು ಅರಣ್ಯ ಪ್ರದೇಶವು ಸುತ್ತುವರಿದಿದೆ. ಈ ಅರಣ್ಯದಲ್ಲಿ ಸಾಂಬಾರ್‌ಗಳು ಅತ್ಯಧಿಕ. ಅವು ಆಗಾಗ್ಗೆ ಚಂಡೀಗಡಕ್ಕೆ ಬರುವುದು ಸಾಮಾನ್ಯ, ಆದರೆ,ಅವುಗಳು ಹಾಗೆಬರುತ್ತಿದ್ದುದು ತಡರಾತ್ರಿ
ಯಲ್ಲಿ. ಈಗ ಅವು ಹಾಡಹಗಲಲ್ಲೇ ಧೈರ್ಯವಾಗಿ ಓಡಾಡುತ್ತಿವೆ.

ವೆನಿಸ್‌ನಲ್ಲಿ ಸ್ವಚ್ಛ ನೀರು

ಕೊರೊನಾ ದಾಳಿಯಿಂದ ತತ್ತರಿಸಿರುವ ಇಟಲಿಯಲ್ಲಿ ಸಂಪೂರ್ಣ ಲಾಕ್‌ಡೌನ್‌ ಪರಿಣಾಮ
ಅಲ್ಲಿನ ವೆನಿಸ್‌ ನಗರದ ಕಾಲುವೆಗಳ ನೀರು ಸ್ವಚ್ಛವಾಗುತ್ತಿದೆ. ನಗರದ ಮಧ್ಯದಲ್ಲೇ ಹಾದುಹೋಗುವ ಕಾಲುವೆಗಳಲ್ಲಿ ನಡೆಯುವ ದೋಣಿ ವಿಹಾರವು ಜಗತ್ತಿನ ವಿವಿಧ ರಾಷ್ಟ್ರಗಳಪ್ರವಾಸಿಗರನ್ನು ಅಕರ್ಷಿಸುತ್ತದೆ. ಈಗ ಪ್ರವಾಸಿಗರೇ ಇಲ್ಲದ ಕಾರಣ ಬೋಟ್‌ಗಳೆಲ್ಲವೂ ದಡಸೇರಿವೆ. ಪರಿಣಾಮ ನೀರು ತಾನಾಗಿಯೇ ಸ್ವಚ್ಛಗೊಳ್ಳುತ್ತಿದೆ. ಜತೆಗೆ ಸಣ್ಣ ಮೀನು, ಏಡಿ ಮುಂತಾದಜಲಚರಗಳು, ನೀರಿನಲ್ಲಿ ಬೆಳೆಯುತ್ತಿದ್ದ ಬಹುವರ್ಣಗಳ ಗಿಡಗಳುಸ್ಪಷ್ಟವಾಗಿ ಗೋಚರಿಸಲಾರಂಭಿಸಿವೆ.ಡಾಲ್ಫಿನ್‌ಗಳು ಬರುತ್ತಿವೆ

ಕೋಯಿಕ್ಕೋಡ್‌ನಲ್ಲಿ ಸಿವೆಟ್

ಕೋಯಿಕ್ಕೋಡ್‌ನ ರಸ್ತೆಯಲ್ಲಿ ‘ಸ್ಮಾಲ್ ಇಂಡಿಯನ್ ಸಿವೆಟ್‌’ ಒಂದು ಓಡಾಡುತ್ತಿರುವ ವಿಡಿಯೊ ವೈರಲ್ ಆಗಿದೆ. ಮೊದಲು ಇದು ವಿನಾಶದ ಅಂಚಿನಲ್ಲಿರುವ ‘ಮಲಬಾರ್ ಸ್ಪಾಟೆಡ್ ಸಿವೆಟ್‌’ ಎಂದು ವೈರಲ್ ಆಗಿತ್ತು. ಆದರೆ, ಅದು ಸ್ಮಾಲ್ ಇಂಡಿಯನ್ ಸಿವೆಟ್‌ ಎಂಬುದು ನಂತರ ಗೊತ್ತಾಯಿತು. ಸಿವೆಟ್‌ಗಳು ಕೋಯಿಕ್ಕೋಡ್‌ನಲ್ಲಿ ಓಡಾಡುವುದು ಸಾಮಾನ್ಯ. ಆದರೆ, ನಡುರಸ್ತೆಯಲ್ಲಿ ಆರಾಮವಾಗಿ ಓಡಾಡುತ್ತಿರುವುದು ಇದೇ ಮೊದಲು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ನೋಯಿಡಾದಲ್ಲಿ ನೀಲ್‌ಗಾಯ್

ದೆಹಲಿಗೆ ಹೊಂದಿಕೊಂಡಿರುವ ಉತ್ತರ ಪ್ರದೇಶದ ನಗರ ನೋಯಿಡಾವು, ಯಮುನಾ ನದಿಯ ಜಲಾನಯನ ಪ್ರದೇಶದಲ್ಲಿದೆ. ಇದಕ್ಕೆ ಹೊಂದಿಕೊಂಡ ಅರಣ್ಯಪ್ರದೇಶದಲ್ಲಿ ನೀಲ್‌ಗಾಯ್‌ಗಳು ಬಹಳ ಸಂಖ್ಯೆಯಲ್ಲಿವೆ. ಲಾಕ್‌ಡೌನ್‌ನ ಈ ಸಮಯದಲ್ಲಿ ನೀಲ್‌ಗಾಯ್‌ ಒಂದು ನೋಯಿಡಾ ನಗರಕ್ಕೆ ಹಾಡಹಗಲಲ್ಲೇ ಬಂದು, ರಸ್ತೆಗಳಲ್ಲಿ ರಾಜಾರೋಷವಾಗಿ ಓಡಾಡುತ್ತಿರುವ ವಿಡಿಯೊ ವೈರಲ್ ಆಗಿದೆ.

‘ಜನರು ಲಾಕ್‌ಡೌನ್‌ ಅನ್ನು ಸರಿಯಾಗಿ ಪಾಲಿಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಪ್ರಾಣಿಗಳು ಊರಿಗೆ ಬಂದಿವೆ’ ಎಂಬ ತಮಾಷೆಯ ಮಾತೂ ಕೇಳಿಬರುತ್ತಿದೆ.

ನಗರಗಳೀಗ ಧೂಳುಮುಕ್ತ

ಲಾಕ್‌ಡೌನ್‌ ಪರಿಣಾಮವಾಗಿ ದೇಶದ 91 ನಗರಗಳ ವಾಯುಮಾಲಿನ್ಯವು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಕೇಂದ್ರದ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ. 2019ನೇ ಸಾಲಿನ ಮೊದಲ ಮೂರು ತಿಂಗಳ ವಾಯು ಗುಣಮಟ್ಟ ಸೂಚ್ಯಂಕವನ್ನು 2020ರ ಮೊದಲ ಮೂರು ತಿಂಗಳಿಗೆ ಹೋಲಿಸಿದರೆ, ಗುಣಮಟ್ಟದಲ್ಲಿ ಶೇ 60ರಷ್ಟು ಸುಧಾರಣೆ ಆಗಿರುವುದು ಕಂಡುಬಂದಿದೆ.

*ವಾಹನ, ಕೈಗಾರಿಕೆ, ವಿದ್ಯುತ್‌ ಉತ್ಪಾದನಾ ಘಟಕ, ನಿರ್ಮಾಣ ಕಾಮಗಾರಿ, ಕೃಷಿ ತ್ಯಾಜ್ಯ ಸುಡುವಿಕೆ, ದೂಳು ಮುಂತಾದವು ಮಾಲಿನ್ಯಕ್ಕೆ ಪ್ರಮುಖ ಕಾರಣಗಳು. ಲಾಕ್‌ಡೌನ್‌ನಿಂದ ಇವೆಲ್ಲವೂ ಸ್ತಬ್ಧವಾಗಿವೆ. ಇದರಿಂದಾಗಿ 39 ನಗರಗಳ ವಾಯು ಗುಣಮಟ್ಟವು ‘ಉತ್ತಮ’ ಎನ್ನಿಸುವ ಸ್ಥಿತಿಗೆ ಮತ್ತು 51 ನಗರಗಳ ವಾಯು ಗುಣಮಟ್ಟವು ‘ಸಮಾಧಾನಕರ’ ಹಂತಕ್ಕೆ ಬಂದಿದೆ.

*ದೆಹಲಿಯ ಗಾಳಿಯಲ್ಲಿ ಪಿಎಂ2.5 (ಮಾಲಿನ್ಯಕಾರಕ ಸೂಕ್ಷ್ಮ ಕಣಗಳು) ಪ್ರಮಾಣವು ಶೇ 30ರಷ್ಟು ಇಳಿಕೆಯಾಗಿದೆ.

*ಚೆನ್ನೈ, ಬೆಂಗಳೂರು, ಕೋಲ್ಕತ್ತ ಹಾಗೂ ಮುಂಬೈಯ ಗಾಳಿಯಲ್ಲಿ ನೈಟ್ರೋಜನ್‌ ಡಯಾಕ್ಸೈಡ್‌ ಪ್ರಮಾಣವು ಶೇ 71ರಷ್ಟು ಇಳಿಕೆಯಾಗಿದೆ ಎಂದು ಕೇಂದ್ರ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. ಈ ನಗರಗಳ ಮಾಲಿನ್ಯ ಗುಣಮಟ್ಟವೂ ಗಮನಾರ್ಹವಾಗಿ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT