ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ಒಳನೋಟ: ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಭಕ್ತರಿಗಿಲ್ಲ ಮೂಲಸೌಕರ್ಯದ ‘ಪ್ರಸಾದ’!
ಒಳನೋಟ: ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಭಕ್ತರಿಗಿಲ್ಲ ಮೂಲಸೌಕರ್ಯದ ‘ಪ್ರಸಾದ’!
ದೇವಸ್ಥಾನಗಳ ಆದಾಯ ಸಮರ್ಪಕವಾಗಿ ಬಳಸಿಕೊಳ್ಳದ ಮುಜರಾಯಿ ಇಲಾಖೆ!
Published 18 ನವೆಂಬರ್ 2023, 19:25 IST
Last Updated 18 ನವೆಂಬರ್ 2023, 20:25 IST
ಅಕ್ಷರ ಗಾತ್ರ

ಕೊಪ್ಪಳ: ‘ನದಿಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆದರೆ ಪುಣ್ಯ ಬರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಆದರೆ, ಇಲ್ಲಿನ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿದರೆ ಚರ್ಮರೋಗಗಳು ಅಂಟಿಕೊಳ್ಳುತ್ತವೆ. ಮೈ ತುರಿಕೆಯಾಗುತ್ತದೆ. ಸರಿಯಾಗಿ ಸ್ನಾನಘಟ್ಟ ನಿರ್ಮಿಸಿದ್ದರೆ ದೇವಸ್ಥಾನದ ಸುತ್ತಲಿನ ವಾತಾವರಣವಾದರೂ ಸ್ವಚ್ಛವಾಗಿರುತ್ತಿತ್ತು...’

ಕರ್ನಾಟಕ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಿಂದ ಲಕ್ಷಾಂತರ ಭಕ್ತರನ್ನು ಹೊಂದಿರುವ ಜಿಲ್ಲೆಯ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಬಂದಿದ್ದ ವಿಜಯಪುರದ ಭಕ್ತ ಮಲ್ಲಪ್ಪ ಗುಡಿಹಳ್ಳಿ ಅವರ ಬೇಸರದ ಮಾತುಗಳು ಇವು.

ವಾರ್ಷಿಕವಾಗಿ ₹15 ಕೋಟಿ ಆದಾಯ ಗಳಿಸುವ, ಬ್ಯಾಂಕ್‌ನಲ್ಲಿ ₹54 ಕೋಟಿ ನಿಶ್ಚಿತ ಠೇವಣಿ (ಎಫ್‌.ಡಿ.) ಹೊಂದಿರುವ ಹುಲಿಗಿ ದೇವಸ್ಥಾನದ ಸುತ್ತ ಮೂಲಸೌಕರ್ಯಗಳು ಮರೀಚಿಕೆಯಾಗಿವೆ. ನದಿಯಲ್ಲಿ ತೆಂಗಿನಕಾಯಿ, ಬಳೆ, ಸ್ನಾನಮಾಡಿ ಬಿಟ್ಟು ಹೋದ ರಾಶಿ ರಾಶಿ ಸೀರೆ, ಪ್ಲಾಸ್ಟಿಕ್ ಬಾಟಲ್, ಒಡೆದ ದೇವರ ಫೋಟೊಗಳು, ಚಪ್ಪಲಿ ತ್ಯಾಜ್ಯ ತುಂಬಿಕೊಂಡಿವೆ. ನೀರು ಹಸಿರು ಬಣ್ಣಕ್ಕೆ ತಿರುಗಿದೆ. ನದಿ ದಂಡೆಯಲ್ಲಿ ನಿರ್ಮಿಸಿರುವ ತಗಡಿನ ಶೆಡ್ಡುಗಳೇ ಮಹಿಳೆಯರಿಗೆ ಬಟ್ಟೆ ಬದಲಿಸಲು ಆಸರೆಯಾಗಿವೆ.

[object Object]

ಕೊಪ್ಪಳ ಜಿಲ್ಲೆಯ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದ ಬಳಿ ತುಂಗಭದ್ರಾ ನದಿಯಲ್ಲಿ ಬೀಸಾಡಿರುವ ವಸ್ತುಗಳಿಂದ ನದಿ ಚರಂಡಿಯಂತಾಗಿರುವುದು

–ಪ್ರಜಾವಾಣಿ ಚಿತ್ರ/ಭರತ್‌ ಕಂದಕೂರ

ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯ ದರ್ಶನಕ್ಕೆ 575 ಮೆಟ್ಟಿಲುಗಳನ್ನು ಹತ್ತಬೇಕು. ಬೆಟ್ಟ ಹತ್ತುವ ಜಾಗದಲ್ಲಿ ಮೂಲಸೌಕರ್ಯಗಳಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಅಂಜನಾದ್ರಿಯಲ್ಲಿ ಮೂಲಸೌಕರ್ಯ ಕಲ್ಪಿಸಲು ₹120 ಕೋಟಿ ಬಿಡುಗಡೆ ಮಾಡಿದೆ ಎಂದು ಹೇಳಿತ್ತು. ಆದರೆ, ಇನ್ನೂ ಅಭಿವೃದ್ಧಿ ಕೆಲಸಗಳಿಗೆ ಚಾಲನೆಯೇ ದೊರೆತಿಲ್ಲ.

[object Object]

ಹುಲಿಗಿ ದೇವಸ್ಥಾನದ ಸುತ್ತ ಮೂಲಸೌಕರ್ಯಗಳು ಮರೀಚಿಕೆಯಾಗಿವೆ

–ಪ್ರಜಾವಾಣಿ ಚಿತ್ರ

‘ಇತ್ತೀಚೆಗೆ ಬೆಟ್ಟ ಹತ್ತುವಾಗ ಕಲಘಟಗಿಯ ಯುವಕನೊಬ್ಬ ಮೃತಪಟ್ಟ. ಅಂಜನಾದ್ರಿಯಲ್ಲಿಯೇ ಚಿಕಿತ್ಸಾ ಸೌಲಭ್ಯ ಕಲ್ಪಿಸಿ ಬೆಟ್ಟಕ್ಕೆ ಹತ್ತುವ ಮಾರ್ಗದಲ್ಲಿ ಶುದ್ಧ ಕುಡಿಯುವ ನೀರಿನ ಅನುಕೂಲ ಒದಗಿಸಿದ್ದರೆ ಆ ಯುವಕನ ಜೀವ ಉಳಿಯುತ್ತಿತ್ತೇನೋ. ಭಕ್ತರಿಂದಲೇ ವಾರ್ಷಿಕ ಕೋಟ್ಯಂತರ ರೂಪಾಯಿ ಆದಾಯ ಗಳಿಸುವ ದೇವಸ್ಥಾನಗಳು ಅವರ ಸುರಕ್ಷತೆಗೆ ಹಣ ಖರ್ಚು ಮಾಡಲು ಹಿಂದೇಟು ಹಾಕಿದರೆ ಹೇಗೆ’ ಎಂದು ಹುಬ್ಬಳ್ಳಿಯಿಂದ ಅಂಜನಾದ್ರಿಗೆ ಬಂದಿದ್ದ ಅಮರೇಶ ಮೆಣಸಿನಕಾಯಿ ಪ್ರಶ್ನಿಸಿದರು.

[object Object]

ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯ ಪಾರ್ಕಿಂಗ್ ಸ್ಥಳದ ಬಳಿ ಬಂಡಿ ವ್ಯಾಪಾರಸ್ಥರು ಎಸೆದ ಕಸ ರಾಶಿಗಟ್ಟಲೇ ಸಂಗ್ರಹವಾಗಿ ಬಿದ್ದಿರುವುದು

ಉತ್ತರ ಕರ್ನಾಟಕದ ಇನ್ನೊಂದು ಪ್ರಸಿದ್ಧ ಯಾತ್ರಾ ಸ್ಥಳ ಕಲಬುರಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನ ಗಾಣಗಾಪುರವೂ ಸಮಸ್ಯೆಗಳ ಆಗರ. ಸ್ವಚ್ಛತೆ, ವಸತಿ ವ್ಯವಸ್ಥೆಯ ಕೊರತೆ ಕಾಡುತ್ತಿದೆ. ಹಲವು ತಿಂಗಳ ಹಿಂದೆ ಅಲ್ಲಿ ಮೃತಪಟ್ಟಿದ್ದ ವೃದ್ಧೆಯೊಬ್ಬರ ಶವವನ್ನು ನಾಯಿಗಳು ತಿಂದು ಹಾಕಿದ್ದು ಅವ್ಯವಸ್ಥೆಗೆ ಸಾಕ್ಷಿಯಂತಿದೆ ಎಂದು ಭಕ್ತರು ದೂರುತ್ತಾರೆ.

ಪೂಜಾ ಸಾಮಗ್ರಿಗಳ ವ್ಯಾಪಾರಿ ಅನುಸೂಯಾ, ‘ಗಾಣಗಾಪುರದ ದತ್ತನ ಮಂದಿರದಿಂದ ಎರಡು ಕಿ.ಮೀ. ದೂರದಲ್ಲಿರುವ ಸಂಗಮದಲ್ಲಿ ಹಲವರು ಭೀಮಾ ನದಿಯಲ್ಲಿ ಮಿಂದು, ಪೂಜೆ ನೆರವೇರಿಸುತ್ತಾರೆ. ಸ್ನಾನ ಮಾಡುವ ಭಕ್ತರು ನಂತರ ತಮ್ಮ ಬಟ್ಟೆಗಳನ್ನು ನದಿಯಲ್ಲಿಯೇ ಎಸೆಯುತ್ತಾರೆ. ಬಟ್ಟೆ ಎಸೆಯಲು ಸರಿಯಾದ ಜಾಗ ಕಲ್ಪಿಸಿ, ದೇವಸ್ಥಾನದ ಸುತ್ತಲಿನ ಜಾಗ ಸ್ವಚ್ಛವಾಗಿಟ್ಟರೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ’ ಎಂದರು.

[object Object]

ಕಲಬುರಗಿ ಜಿಲ್ಲೆಯ ಗಾಣಗಾಪುರದ ದತ್ತ ಮಂದಿರದ ಮುಂಭಾಗದಲ್ಲಿ ಜಾನುವಾರುಗಳು ಠಿಕಾಣಿ ಹೂಡಿರುವುದು  

ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್

ದಕ್ಷಿಣ ಭಾರತದ ಪ್ರಮುಖ ಶಕ್ತಿಪೀಠ ಬೆಳಗಾವಿ ಜಿಲ್ಲೆಯ ಸವದತ್ತಿಯ ಯಲ್ಲಮ್ಮನಗುಡ್ಡಕ್ಕೆ ಮಹಾರಾಷ್ಟ್ರ, ತಮಿಳುನಾಡು, ‌ಆಂಧ್ರ ಪ್ರದೇಶ ಮತ್ತು ಗೋವಾ ರಾಜ್ಯಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ವರ್ಷವಿಡೀ ಭಕ್ತರಿಂದ ಗುಡ್ಡದ ಪರಿಸರ ತುಂಬಿ ತುಳುಕುತ್ತದೆ. ಈ ದೇವಸ್ಥಾನಕ್ಕೆ ಬರುವ ವಾರ್ಷಿಕ ಆದಾಯ ₹26 ಕೋಟಿಗೂ ಅಧಿಕ. ಆದರೆ, ಬೇಡಿಕೆಯಷ್ಟು ಮೂಲಸೌಕರ್ಯಗಳೇ ಇಲ್ಲ.

‘ಯಲ್ಲಮ್ಮನಗುಡ್ಡ–ಉಗರಗೋಳ ಮಾರ್ಗದಲ್ಲಿ ತಂಗುದಾಣ ಇಲ್ಲದ್ದರಿಂದ ಬಸ್‌ಗಾಗಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿಯಿದೆ. ಉತ್ತರ ಕರ್ನಾಟಕ ಭಾಗದಲ್ಲಿರುವ ಪ್ರಮುಖ ಧಾರ್ಮಿಕ ಕೇಂದ್ರಗಳು ಉತ್ತಮ ಆದಾಯ ಗಳಿಸುತ್ತಿದ್ದರೂ ಸೌಲಭ್ಯ ಇನ್ನೂ ಕನಿಷ್ಠ ಮಟ್ಟದಲ್ಲಿವೆ. ಈ ಭಾಗದ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸಮಯಕ್ಕೆ ಸರಿಯಾದ ಬಸ್‌ ಸೌಲಭ್ಯ, ಶೌಚಾಲಯ, ವಸತಿಗೃಹದಂತಹ ಸಾಮಾನ್ಯ ಸೌಲಭ್ಯಗಳು ಸಿಗದೇ ಏದುಸಿರು ಬಿಡುವಂತಾಗಿದೆ’ ಎಂದು ಬೈಲಹೊಂಗಲ ತಾಲ್ಲೂಕಿನ ತಿಗಡಿ ಗ್ರಾಮದ ಭಕ್ತ ಮಲ್ಲಿಕಾರ್ಜನ ನಿಚ್ಚಣ್ಣಿ ಬೇಸರ ವ್ಯಕ್ತಪಡಿಸಿದರು.

[object Object]

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಯಲ್ಲಮ್ಮನಗುಡ್ಡದ ಯಲ್ಲಮ್ಮ ದೇವಿ ದೇವಸ್ಥಾನ ಪ್ರವೇಶದ್ವಾರ ಮುಂದಿನ ಸೇತುವೆ ಬಳಿ ಬಿದ್ದಿರುವ ಕಸದ ರಾಶಿ

ಹಳೆ ಮೈಸೂರು ಭಾಗದಲ್ಲಿ ಲಕ್ಷಾಂತರ ಭಕ್ತರನ್ನು ಸೆಳೆದಿರುವ, ಕೋಟ್ಯಂತರ ರೂಪಾಯಿ ಆದಾಯ ತರುವ ದೇವಾಲಯಗಳಿವೆ. ಎಲ್ಲ ದೇವಸ್ಥಾನಗಳಲ್ಲೂ ಮೇಲೆ ಹೇಳಿದ ಸಮಸ್ಯೆಯೇ ಪುನರಾವರ್ತನೆಯಾಗುತ್ತದೆ. ಭಕ್ತರು ನೆಮ್ಮದಿ ಹುಡುಕಿ ದೇವಾಲಯಗಳಿಗೆ ಬಂದರೆ, ದೇವರ ಸನ್ನಿಧಿಯಲ್ಲಿರುವ ಸಮಸ್ಯೆಗಳು, ಇರುವ ನೆಮ್ಮದಿ ಕೆಡಿಸುತ್ತವೆ ಎನ್ನುವ ಆರೋಪ ಭಕ್ತರದ್ದು.

ಸರ್ಕಾರಿ ಸ್ವಾಮ್ಯದಲ್ಲಿ ಹೆಚ್ಚು ಆದಾಯವುಳ್ಳ ರಾಜ್ಯದ ಎರಡನೇ ದೇವಾಲಯವೆಂಬ ಹೆಗ್ಗಳಿಕೆ ಹೊಂದಿರುವ ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ನೆರೆಯ ತಮಿಳುನಾಡು, ಆಂಧ್ರ, ತೆಲಂಗಾಣ ಸೇರಿದಂತೆ ಹೊರ ರಾಜ್ಯಗಳ ಸಾವಿರಾರು ಭಕ್ತರು ಬರುತ್ತಾರೆ. 2022–23ರಲ್ಲಿ ಈ ದೇವಾಲಯ ₹100 ಕೋಟಿ ಆದಾಯ ಗಳಿಸಿದೆ. ₹80 ಕೋಟಿಯಷ್ಟು ಖರ್ಚು ಕಳೆದು ₹20 ಕೋಟಿಯಷ್ಟು ನಿವ್ವಳ ಲಾಭವಿದೆ. ದೇವಾಲಯಕ್ಕೆ ಸರ್ಕಾರ ಪ್ರತ್ಯೇಕ ಪ್ರಾಧಿಕಾರ ರಚಿಸಿದ ಬಳಿಕ ಅಭಿವೃದ್ಧಿ ಕೆಲಸಗಳು ವೇಗ ಪಡೆದುಕೊಂಡರೂ ಪೂರ್ಣಗೊಂಡಿಲ್ಲ ಎನ್ನುತ್ತಾರೆ ಭಕ್ತರು.

[object Object]

ಮಹದೇಶ್ವರ ಬೆಟ್ಟದಲ್ಲಿ ಅಮಾವಾಸ್ಯೆ ಜಾತ್ರೆಯ ಸಂದರ್ಭದಲ್ಲಿ ಮಹದೇಶ್ವರ ಸ್ವಾಮಿಯ ದರ್ಶನಕ್ಕಾಗಿ ಭಕ್ತರು ಸರತಿ ಸಾಲಿನಲ್ಲಿ ನಿಲ್ಲುವಾಗ ತಾತ್ಕಾಲಿಕ ನೆರಳಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಭಕ್ತರ ಸಂಖ್ಯೆ ಇನ್ನೂ ಹೆಚ್ಚಿದ್ದರೆ ಬಿಸಿಲಿನಲ್ಲಿಯೇ ನಿಲ್ಲಬೇಕಾಗುತ್ತದೆ

ಚಾಮುಂಡಿ ಬೆಟ್ಟ ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರ. ಮೈಸೂರಿಗೆ ಭೇಟಿ ನೀಡುವ ವಿದೇಶಿ ಪ್ರವಾಸಿಗರೂ ಚಾಮುಂಡಿ ತಾಯಿಯ ದರ್ಶನ ಮಾಡುತ್ತಾರೆ. ವಾರ್ಷಿಕ 75 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡುವ ದೇವಾಲಯದ ಸರಾಸರಿ ಆದಾಯ ₹26.82 ಕೋಟಿ. ಬೆಟ್ಟದ ಮೇಲೆ ವಾಹನ ಸಂಚಾರ ತಪ್ಪಿಸಲು ರೋಪ್‌ವೇ ಮಾಡುವ ಮಾತು ದಶಕಗಳಿಂದಲೂ ನಡೆಯುತ್ತಿದೆ. ಆದರೆ ಯೋಜನೆ ಕಾರ್ಯಗತವಾಗಿಲ್ಲ. ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ವಾರ್ಷಿಕ ₹16.5 ಕೋಟಿ ಆದಾಯವಿದೆ. ಭಕ್ತರ ಅನುಕೂಲಕ್ಕಾಗಿ 75 ಕೊಠಡಿಗಳ ವಸತಿಗೃಹ ನಿರ್ಮಾಣವಾಗುತ್ತಿದೆ. ನಿತ್ಯ ಸಾವಿರಾರು ಮಂದಿ ಪುಣ್ಯ ಸ್ಥಾನ ಮಾಡುವ ಕಪಿಲಾ ನದಿ ಸ್ನಾನಘಟ್ಟ ಅಭಿವೃದ್ಧಿಯಾಗಿಲ್ಲ. ಹಾಸನ ಜಿಲ್ಲೆಯಲ್ಲಿ ಹಾಸನಾಂಬ ದೇಗುಲದಲ್ಲಿ ಪ್ರತಿವರ್ಷ ಜಾತ್ರೆ ವೇಳೆ ಭಕ್ತರು ಸೌಕರ್ಯಗಳಿಗೆ ಪರದಾಡುತ್ತಾರೆ. ಬೇಲೂರಿನ ಚನ್ನಕೇಶವ ದೇಗುಲದಲ್ಲಿ ಯಾತ್ರಿ ನಿವಾಸ ನಿರ್ಮಿಸಿದ್ದರೂ, ನಿರ್ವಹಣೆಯೇ ಸರಿಯಾಗಿಲ್ಲ. ಪ್ರಶಾಂತ ಪರಿಸರದಲ್ಲಿರುವ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ‘ಎ’ ಗ್ರೇಡ್‌ಗೆ ಏರಿದ್ದರೂ ಆದಾಯ ಹೆಚ್ಚಿಲ್ಲ. ಸುಸಜ್ಜಿತ ಮೆಟ್ಟಿಲುಗಳ ನಿರ್ಮಾಣಕ್ಕೆ ಭೂಮಿ‍ಪೂಜೆ ನಡೆದು ಹಲವು ವರ್ಷವಾದರೂ ಕಾಮಗಾರಿ ಆರಂಭವಾಗಿಲ್ಲ. ದಾಸೋಹ ಭವನವೂ ಸಮರ್ಪಕವಾಗಿಲ್ಲ ಎನ್ನುವುದು ಭಕ್ತರ ದೂರು.

ಶ್ರೀರಂಗಪಟ್ಟಣದ ಪುರಾತನ ರಂಗನಾಥಸ್ವಾಮಿ ದೇವಾಲಯದ ರಿಪೇರಿ ಕಾರ್ಯ ತುರ್ತಾಗಿ ಆಗಬೇಕಿದೆ. ನೆಲಹಾಸು ಕಲ್ಲುಗಳು ಸವೆಯುತ್ತಿವೆ. ಕಂಬಗಳು ಸಹ ಶಿಥಿಲಾವಸ್ಥೆಗೆ ತಿರುಗಿವೆ. ಕಾವೇರಿ ನದಿಯಂಚಿನಲ್ಲಿರುವ ಈ ದೇವಾಲಯವನ್ನು ಆದಿರಂಗ ಎಂದೂ, ಶಿಂಷಾದಲ್ಲಿ ಮಧ್ಯರಂಗ ಹಾಗೂ ತಮಿಳುನಾಡಿನ ಶ್ರೀರಂಗನಾಥಸ್ವಾಮಿಯನ್ನು ಅಂತ್ಯರಂಗನೆಂದೇ ಪ್ರಸಿದ್ಧ. ಈ ಮೂರು ದೇವಸ್ಥಾನಗಳನ್ನು ಒಂದೇ ದಿನದಲ್ಲಿ ದರ್ಶನ ಮಾಡುವ ತಿರಂಗ ದರ್ಶನ ಬಹಳ ಪ್ರಸಿದ್ಧ. ತಮಿಳುನಾಡಿನ ದೇವಾಲಯಕ್ಕೆ ಹೋಲಿಸಿದರೆ ರಾಜ್ಯದ ಎರಡೂ ದೇವಾಲಯಗಳು ಅಭಿವೃದ್ಧಿ ಮತ್ತು ಮೂಲಸೌಕರ್ಯ ದೃಷ್ಟಿಯಲ್ಲಿ ಸರ್ಕಾರದ ತಿರಸ್ಕಾರಕ್ಕೆ ಒಳಗಾಗಿವೆ. ಮಧ್ಯರಂಗದಲ್ಲಿ ಅಭಿವೃದ್ಧಿ ಕಾರ್ಯ ಆರಂಭವಾಗಿದ್ದರೂ ಆಮೆವೇಗದಲ್ಲಿ ನಡೆಯುತ್ತಿದೆ. ಶ್ರೀರಂಗಪಟ್ಟಣದಲ್ಲಿ ತಿರಂಗ ದರ್ಶನಕ್ಕೆ ಸಂಬಂಧಿಸಿದಂತೆ ಕೊಂಚವೂ ಮಾಹಿತಿಯಿಲ್ಲ. ಶ್ರೀರಂಗಕ್ಕೆ ಹೋಲಿಸಿದರೆ ಪೂಜೆ, ಪುನಸ್ಕಾರ, ಅಭಿವೃದ್ಧಿಯಲ್ಲೂ ಕರ್ನಾಟಕದ ಮುಜರಾಯಿ ಇಲಾಖೆಯ ಅಸಡ್ಡೆ ಎದ್ದು ಕಾಣುತ್ತದೆ ಎನ್ನುವುದು ಭಕ್ತರ ದೂರು.

ಮಂಡ್ಯ ಜಿಲ್ಲೆಯ ಹಲವು ಶತಮಾನಗಳಷ್ಟು ಪುರಾತನವಾದ ಪ್ರಸಿದ್ಧ ಚಲುವರಾಯಸ್ವಾಮಿ ದೇವಾಲಯಕ್ಕೆ ಬಳಸಿರುವ ಶಿಲೆ ಶಿಥಿಲಾವಸ್ಥೆಗೆ ತಿರುಗುತ್ತಿದೆ. ನೆಲಹಾಸು ಸವೆದಿದೆ. ದೂರದಿಂದ ಬರುವ ಭಕ್ತರು ಉಳಿಯಲು ಹೋಟೆಲ್‌ ಅಥವಾ ಛತ್ರವಿಲ್ಲ. ಹತ್ತಿರದಲ್ಲೇ ಬೆಟ್ಟದ ಮೇಲಿರುವ ನರಸಿಂಹಸ್ವಾಮಿಯ ದರ್ಶನಕ್ಕೆ ಹಿರಿಯರು ಹೋಗಲು ಪರಿಪಾಡು ಅನುಭವಿಸಬೇಕಾಗುತ್ತದೆ. ಕಾರಣ ಒಂದು ಮೆಟ್ಟಿಲಿಂದ ಮತ್ತೊಂದು ಮೆಟ್ಟಿಲಿಗೆ ಎರಡಡಿ ಎತ್ತರ. ಹಿರಣ್ಯಾಕ್ಷನನ್ನು ಕೊಂದ ನಂತರ ಉಗ್ರನರಸಿಂಹ ಇಲ್ಲಿ ಧ್ಯಾನಾಸಕ್ತನಾದ ಎನ್ನುವ ನಂಬಿಕೆಯಿದೆ. ಆದರೆ ಮೆಟ್ಟಿಲೇರಲಾಗದೆ ಭಕ್ತರು ದೂರದಿಂದಲೇ ನರಸಿಂಹನಿಗೆ ನಮಿಸುತ್ತಾರೆ.

ವಿಜಯನಗರ ಜಿಲ್ಲೆಯ ಮೈಲಾರಲಿಂಗೇಶ್ವರ ದೇವಸ್ಥಾನ ವಾರ್ಷಿಕ ₹4.88 ಕೋಟಿ ಆದಾಯ ಹೊಂದಿದ್ದರೂ ಭಕ್ತರ ಅಗತ್ಯದಷ್ಟು ವಸತಿ ಸೌಲಭ್ಯ ಹೊಂದಿಲ್ಲ. ರಾಯಚೂರು ತಾಲ್ಲೂಕಿನ ದೇವಸೂಗೂರಿನ ಸೂಗೂರೇಶ್ವರ ದೇವಸ್ಥಾನ ವಾರ್ಷಿಕವಾಗಿ ₹60 ಲಕ್ಷ ಆದಾಯ ಬರುತ್ತದೆ. ಭಕ್ತರ ಸಂಖ್ಯೆಗೆ ಅನುಗುಣವಾಗಿ ಇನ್ನಷ್ಟು ಸೇವೆ ಒದಗಿಸಬೇಕಾಗಿದೆ. ಯಾದಗಿರಿ ಜಿಲ್ಲೆಯಲ್ಲಿರುವ ಮೈಲಾಪುರ ಮೈಲಾರಲಿಂಗೇಶ್ವರ ಮತ್ತು ಸುರಪುರ ತಾಲ್ಲೂಕಿನ ತಿಂಥಣಿ ಮೌನೇಶ್ವರದಲ್ಲಿಯೂ ಇದೇ ಸಮಸ್ಯೆ.

‘ತಿಂಥಣಿ ಮೌನೇಶ್ವರ ದೇವಸ್ಥಾನದ ಬಳಿ ಮಹಿಳೆಯರಿಗೆ ಸೂಕ್ತ ಸೌಲಭ್ಯಗಳಿಲ್ಲ. ಉತ್ತಮ ಆದಾಯ ಬರುತ್ತಿದ್ದರೂ ಹಣ ಎಲ್ಲಿಗೆ ಹೋಗುತ್ತಿದೆ’ ಎಂದು ಯಾದಗಿರಿಯ ಭಕ್ತ ನಂದಪ್ಪ ಪೂಜಾರಿ ಪ್ರಶ್ನಿಸುತ್ತಾರೆ.

ಚಿತ್ರದುರ್ಗ ಜಿಲ್ಲೆಯ ಗುರುತಿಪ್ಪೇರುದ್ರಸ್ವಾಮಿ ದೇವಾಲಯ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಹುಚ್ಚರಾಯ ಸ್ವಾಮಿ ದೇವಾಲಯ (ಆಂಜನೇಯ ಸ್ವಾಮಿ) ದೇವಾಲಯಕ್ಕೆ ವಾರ್ಷಿಕವಾಗಿ ₹35 ಲಕ್ಷದಿಂದ ₹40 ಲಕ್ಷ ಆದಾಯ ಬರುತ್ತದೆ. ದೇವಾಲಯದಲ್ಲಿ ಚಾವಣಿ ಇಲ್ಲದಿರುವುದರಿಂದ ಮಳೆ ಬಂದರೆ ನೆನೆಯಬೇಕಾಗುತ್ತದೆ. ಪವಿತ್ರ ಸ್ಥಳದಲ್ಲಿ ಎಗ್ಗಿಲ್ಲದೇ ಮದ್ಯ ಮಾರಾಟ ನಡೆಯುತ್ತಿದೆ. ಇದಕ್ಕೆಲ್ಲ ಕಡಿವಾಣ ಯಾವಾಗ ಎನ್ನುವುದು ಸ್ಥಳೀಯರ ಪ್ರಶ್ನೆ.

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಚಿಕ್ಕತಿರುಪತಿ ಪ್ರಸನ್ನ ವೆಂಕಟರಮಣಸ್ವಾಮಿ ದೇಗುಲಕ್ಕೆ ವಾರ್ಷಿಕ ₹2 ಕೋಟಿಗೂ ಹೆಚ್ಚಿನ ಆದಾಯವಿದ್ದರೂ ಸೌಲಭ್ಯವಿಲ್ಲ. ಮುಖ್ಯಗೋಪುರದ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ದೇವಾಲಯದಲ್ಲಿ ಅನ್ನಪ್ರಸಾದ ನಡೆಯುತ್ತಿದೆ. ಆದರೆ ವಾಹನ ನಿಲುಗಡೆ ಸ್ಥಳದಲ್ಲಿ ಶುಚಿತ್ವದ ಕೊರತೆಯಿದೆ.

‘ನಿತ್ಯ ಸಾವಿರಾರು ಭಕ್ತರು ಭೇಟಿ ನೀಡುವ ಈ ದೇವಾಲಯದಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ದೇಗುಲದ ಬಲಭಾಗದಲ್ಲಿ ಸ್ನಾನಕ್ಕಾಗಿ ಪ್ರತ್ಯೇಕ ಶೆಡ್‌ ನಿರ್ಮಿಸಿದ್ದರೂ ವ್ಯವಸ್ಥಿತವಾಗಿಲ್ಲ. ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಸ್ನಾನ ಗೃಹಗಳ ಅಗತ್ಯವಿದೆ. ಸರ್ಕಾರದಿಂದ ಯಾತ್ರಿ ನಿವಾಸ ಕಟ್ಟಡ ಆರಂಭವಾಗಿ ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ದೂರದಿಂದ ಬರುವ ಭಕ್ತರಿಗೆ ವಾಸ್ತವ್ಯಕ್ಕೆ ವಸತಿ ಸೌಕರ್ಯ ಕೊರತೆ ಎದ್ದು ಕಾಣುತ್ತಿದೆ. ಹೆಚ್ಚು ಆದಾಯ ಬರುವ ದೇಗುಲಗಳಲ್ಲಿ ಒಂದಾಗಿದ್ದು ಯಾಕೆ ನಿರ್ಲಕ್ಷ್ಯ ಮಾಡುತ್ತಾರೋ ಏನೋ’ ಎಂದು ಪ್ರಶ್ನಿಸುತ್ತಾರೆ ಬೆಂಗಳೂರಿನ ಸಾಫ್ಟ್‌ವೇರ್‌ ಉದ್ಯಮಿ ಜಗನ್ನಾಥ್‌.

ಶಕ್ತಿ ಯೋಜನೆ ಜಾರಿಯಾದ ಬಳಿಕ ಶೇ 20ರಿಂದ 30ರಷ್ಟು ಹೆಚ್ಚು ಭಕ್ತರು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಮಹಿಳೆಯರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಹಾಗೇ ಆದಾಯವೂ ಹೆಚ್ಚಿದೆ. ಆದರೆ, ಅದನ್ನು ಮುಜುರಾಯಿ ಇಲಾಖೆ ಬಳಸಿಕೊಂಡು ಮೂಲಸೌಕರ್ಯ ಕಲ್ಪಿಸುತ್ತಿಲ್ಲ. ಆದರೆ, ಬೇರೆ ಧರ್ಮಗಳ ಧಾರ್ಮಿಕ ಸ್ಥಳ ಅಭಿವೃದ್ಧಿಗೆ ಇಲಾಖೆಯ ಹಣ ಬಳಕೆಯಾಗುತ್ತದೆ ಎನ್ನುವ ಆರೋಪ ಹಲವು ಸಾರ್ವಜನಿಕರದ್ದಾಗಿದೆ. ದೇವಸ್ಥಾನದ ಹುಂಡಿಗೆ ಹಾಕಿದ ಹಣ ಮುಜುರಾಯಿ ಇಲಾಖೆ ಖಾತೆಗೆ, ಆರತಿ ತಟ್ಟೆಯಲ್ಲಿ ಹಾಕಿದ ಕಾಣಿಕೆ ಅರ್ಚಕರಿಗೆ ಹೋಗುತ್ತದೆ. ಆದ್ದರಿಂದ ಆರತಿ ತಟ್ಟೆಗೇ ಹಣ ಹಾಕಿ. ಇಲ್ಲವಾದರೆ ಹಣ ಅನ್ಯಧರ್ಮದ ಧಾರ್ಮಿಕ ಸ್ಥಳ ಅಭಿವೃದ್ಧಿಗೆ ಹೋಗುತ್ತದೆ ಎನ್ನುವ ಬಾಯಿ ಮಾತಿನ ಆಂದೋಲನವೂ ನಡೆಯುತ್ತಿದೆ.

ಮುಜರಾಯಿ ಇಲಾಖೆ ಏನು ಹೇಳುತ್ತದೆ ಈ ಬಗ್ಗೆ?

ಈ ಆರೋಪಗಳನ್ನು ಮುಜರಾಯಿ ಇಲಾಖೆ ಅಧಿಕಾರಿಗಳು ತಳ್ಳಿಹಾಕುತ್ತಾರೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಮೈಸೂರು ಚಾಮುಂಡೇಶ್ವರಿ ದೇವಸ್ಥಾನ ಸಹಿತ ಅಧಿಕ ಆದಾಯ ಇರುವ ದೇವಸ್ಥಾನಗಳಲ್ಲಿ ಕೂಡ ಶೇ 90ರಷ್ಟನ್ನು ಅದೇ ದೇವಸ್ಥಾನ, ಪ್ರದೇಶಗಳಿಗೆ ಬಳಸಬೇಕು. ಶೇ 10ರಷ್ಟನ್ನು ಸಾಮಾನ್ಯ ಸಂಗ್ರಹಣಾ ನಿಧಿ ಎಂದು ತೆಗೆದಿರಿಸಲಾಗುತ್ತದೆ. ರಾಜ್ಯ ಧಾರ್ಮಿಕ ಪರಿಷತ್ತು ಈ ಅನುದಾನವನ್ನು ಆದಾಯವಿಲ್ಲದ ದೇವಸ್ಥಾನಗಳ ಮೂಲಸೌಕರ್ಯಗಳ ಅಭಿವೃದ್ಧಿಗೆ ಬಳಸುತ್ತದೆ. ಅದನ್ನು ಹೊರತುಪಡಿಸಿ ಒಂದು ದೇವಸ್ಥಾನದ ಹಣವನ್ನು ಬೇರೆ ಇಲಾಖೆಯಷ್ಟೇ ಅಲ್ಲ, ಬೇರೆ ದೇವಸ್ಥಾನಕ್ಕೂ ಬಳಸುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

[object Object]

ಮುಜರಾಯಿ ದೇವಸ್ಥಾನಗಳನ್ನು ಅವುಗಳ ಆದಾಯದ ಆಧಾರದಲ್ಲಿ ಮೂರು ವಿಭಾಗಗಳನ್ನಾಗಿ ಮಾಡಲಾಗಿದೆ. ವಾರ್ಷಿಕ ₹ 25 ಲಕ್ಷಕ್ಕಿಂತ ಅಧಿಕ ಆದಾಯ ಇರುವ ದೇವಸ್ಥಾನಗಳು ‘ಎ’ ವರ್ಗ, ₹ 5 ಲಕ್ಷದಿಂದ ₹ 25 ಲಕ್ಷದವರೆಗೆ ಆದಾಯ ಇರುವ ದೇವಸ್ಥಾನಗಳನ್ನು ‘ಬಿ’ ವರ್ಗ ಹಾಗೂ ₹ 5 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ದೇವಸ್ಥಾನಗಳನ್ನು ‘ಸಿ’ ವರ್ಗ ಎಂದು ವಿಂಗಡಿಸಲಾಗಿದೆ. 

ಮುಜುರಾಯಿ ಇಲಾಖೆ ವ್ಯಾಪ್ತಿಯ ಕೆಲ ‘ಎ’ ಗ್ರೇಡ್‌ ದೇವಸ್ಥಾನಗಳಲ್ಲಿ ಅರ್ಚಕರಿಗೆ ಮಾಸಿಕ ₹28 ಸಾವಿರ ತನಕ ವೇತನ ಲಭಿಸುತ್ತದೆ. ಹಲವು ವರ್ಷಗಳ ಹಿಂದೆಯಷ್ಟೇ ಅವರಿಗೆ 6ನೇ ವೇತನ ಆಯೋಗದ ಮಾದರಿಯಲ್ಲಿ ವೇತನ ಪರಿಷ್ಕರಣೆ ಮಾಡಲಾಗಿದೆ. ಇನ್ನುಳಿದಂತೆ ದೇವಸ್ಥಾನಗಳು ಗಳಿಸುವ ಆದಾಯದ ಮೇಲೆ ಅರ್ಚಕರಿಗೆ ವೇತನ ನಿಗದಿ ಮಾಡಲಾಗುತ್ತಿದೆ. ಹೀಗೆ ನಿಶ್ಚಿತ ವೇತನ ಪಡೆಯುವ ರಾಜ್ಯದ ಹಲವು ಅರ್ಚಕರಿಗೆ ಆರತಿ ತಟ್ಟೆಯಲ್ಲಿ ಹಾಕಿದ ಹಣ ಪಡೆದುಕೊಳ್ಳಲು ಅವಕಾಶವಿಲ್ಲ.

ಈ ಕುರಿತು ಅರ್ಚಕರೊಬ್ಬರನ್ನು ಪ್ರಶ್ನಿಸಿದಾಗ, ತಮ್ಮ ಹೆಸರು ಪ್ರಕಟಿಸಬಾರದು ಎಂಬ ಷರತ್ತಿನೊಂದಿಗೆ, ‘ರಾಜ್ಯದ ಅನೇಕ ದೇವಸ್ಥಾನಗಳಲ್ಲಿ ಅರತಿ ತಟ್ಟೆಗೆ ಬರುವ ಹಣ ಅರ್ಚಕರಿಗೆ ಸೇರುತ್ತದೆ. ಆದರೆ, ನಮ್ಮ ದೇವಸ್ಥಾನದಲ್ಲಿ ತಟ್ಟೆಗೆ ಹಾಕಿದ ಹಣ ದೇವಾಲಯದ ಖಾತೆಗೆ ಹೋಗುತ್ತದೆ. ಮೊದಲಿನಿಂದಲೂ ಹೀಗೆಯೇ ನಡೆದುಕೊಂಡು ಬಂದಿದೆ. ಅನೇಕರು ಕೋರ್ಟ್‌ ಮೊರೆ ಹೋಗುವಂತೆ ಸಲಹೆ ನೀಡಿದ್ದಾರೆ. ನಾನಿನ್ನೂ ಅಷ್ಟೊಂದು ಧೈರ್ಯ ಮಾಡಿಲ್ಲ’ ಎಂದರು.

ರಾಜ್ಯದ ಆರ್ಥಿಕತೆ ಅಭಿವೃದ್ಧಿಗೆ ಧಾರ್ಮಿಕ ಪ್ರವಾಸೋದ್ಯಮವೂ ಮುಖ್ಯ. ಧಾರ್ಮಿಕ ಪ್ರವಾಸ ಈಗಲೂ ಪ್ರಯಾಸವಾಗುತ್ತಿದೆ. ಧಾರ್ಮಿಕ ಪ್ರವಾಸೋದ್ಯಮದಲ್ಲಿ ಮೇಲುಗೈ ಸಾಧಿಸಿರುವ ತಮಿಳುನಾಡು, ಕೇರಳಕ್ಕೆ ಸಡ್ಡುಹೊಡೆಯಲು ಭಕ್ತರಿಗೆ ಸುಗಮ ದರ್ಶನದ ವ್ಯವಸ್ಥೆ, ಸಮಯಕ್ಕೆ ಸರಿಯಾದ ಬಸ್‌, ಶುದ್ಧ ಕುಡಿಯುವ ನೀರು, ಶೌಚಾಲಯ, ಉಳಿಯಲು ಛತ್ರ ಇಲ್ಲವೇ ಹೋಟೆಲ್‌, ಶುಚಿಯಾದ ಪ್ರಸಾದ ದೊರೆಯಬೇಕು. ಧಾರ್ಮಿಕ ಪ್ರವಾಸ ಸುಖಕರವಾಯಿತು ಎನ್ನುವ ಮಾತು ಹರಿದಾಡಿದರೆ ಮತ್ತಷ್ಟು ಜನ ಪ್ರವಾಸ ಕೈಗೊಳ್ಳುವರು. ಇದು ಟ್ಯಾಕ್ಸಿ ಸೇವೆ, ಹೋಟೆಲ್‌ ಉದ್ಯಮ ಸೇರಿದಂತೆ ಪೂಜಾ ಸಾಮಾಗ್ರಿ ಮಾರುವವರೂ ಹಣ ನೋಡುವಂತಾಗುತ್ತದೆ.

ಭಕ್ತರನ್ನು ಆಕರ್ಷಿಸುವ ಘಟ್ಟ, ಕರಾವಳಿ ಭಾಗ..

ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿನ ಉತ್ತರ ಕರ್ನಾಟಕ ಭಾಗದಲ್ಲಿನ ದೇವಸ್ಥಾನಗಳು ಅವ್ಯವಸ್ಥೆಗಳ ಆಗರವಾಗಿದ್ದರೆ, ಕರಾವಳಿ ಮತ್ತು ಘಟ್ಟದಂಚಿನ ಭಾಗದಲ್ಲಿರುವ ದೇವಸ್ಥಾನಗಳು ಭಕ್ತರನ್ನು ಆಕರ್ಷಿಸುತ್ತಿವೆ. ಸ್ವಚ್ಛ ಪರಿಸರ, ಲಕ್ಷಾಂತರ ಜನರು ಬಂದರೂ ಅಡೆತಡೆಗಳಿಲ್ಲದೆ ದೇವರ ದರ್ಶನಕ್ಕೆ ವ್ಯವಸ್ಥೆ, ಶೌಚಾಲಯ, ಸ್ನಾನಗೃಹ ಮುಂತಾದ ಸಕಲ ವ್ಯವಸ್ಥೆಗಳು, ಶುಚಿರುಚಿಯಾದ ಭೋಜನ ಆಕರ್ಷಣೆಗೆ ಕಾರಣ.

ದೇವಸ್ಥಾನಗಳ ಆಡಳಿತ ಮಂಡಳಿಗಳು ಜವಾಬ್ದಾರಿಯಿಂದ ಕೆಲಸ ಮಾಡುತ್ತಿರುವುದು ಹಾಗೂ ಬಹುತೇಕ ದೇವಸ್ಥಾನಗಳಿಗೆ ಹಲವು ಕೋಟಿ ರೂಪಾಯಿಗಳ ಆದಾಯ ಇರುವುದು ಸಹ ಇದಕ್ಕೆ ಕಾರಣ ಎಂದು ಅಧಿಕಾರಿಗಳು ಹೇಳುತ್ತಾರೆ. ಧಾರ್ಮಿಕ ದತ್ತಿ ಇಲಾಖೆಯ ಆಡಳಿತಕ್ಕೆ ಬರುವ ‘ಎ’ ಶ್ರೇಣಿಯ ದೇವಸ್ಥಾನಗಳ ಸಂಖ್ಯೆ ಉಡುಪಿ ಜಿಲ್ಲೆಯಲ್ಲಿ 25 ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 44 ಇವೆ. ಇವುಗಳ ವಾರ್ಷಿಕ ಆದಾಯವು ₹15 ಲಕ್ಷದಿಂದ ಗರಿಷ್ಠ ₹100 ಕೋಟಿಯವರೆಗೂ ಇದೆ. 

ದಕ್ಷಿಣ ಕನ್ನಡ ಭಾಗದ ಜನರಲ್ಲಿ ಮೊದಲಿನಿಂದಲೇ ಸ್ವಚ್ಛತೆಯ ಬಗ್ಗೆ ಜಾಗೃತಿ ಇದೆ. ಇಲಾಖೆಯು ದೇವಸ್ಥಾನಗಳ ಆಡಳಿತ ಮಂಡಳಿಯವರಿಗೆ ಹೆಚ್ಚಿನ ಅಧಿಕಾರವನ್ನು ನೀಡಿದೆ. ಅಭಿವೃದ್ಧಿ ಹಾಗೂ ಸೌಲಭ್ಯ ಕಲ್ಪಸುವ ವಿಚಾರದಲ್ಲಿ ಆಡಳಿತ ಮಂಡಳಿಯವರು ಸ್ಪರ್ಧೆಗೆ ಇಳಿದವರಂತೆ ಕೆಲಸ ಮಾಡುತ್ತಾರೆ. 

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದ ಕಳಸದ ಕಳಸೇಶ್ವರ ದೇವಸ್ಥಾನ ವರ್ಷಕ್ಕೆ ₹1.5 ಕೋಟಿ ಆದಾಯ ಹೊಂದಿದೆ. ವರ್ಷಕ್ಕೆ 10 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡುತ್ತಿದ್ದಾರೆ. ದೇವಸ್ಥಾನದ ರಾಜಗೋಪುರ ಮತ್ತು ವಾಲಗ ಮಂಟಪದ ಕಾಮಗಾರಿ ನಡೆಯಬೇಕಿದೆ.  ಮಳೆ ದೇವರು ಎಂದು ಖ್ಯಾತಿ ಪಡೆದಿರುವ ಶೃಂಗೇರಿ ತಾಲ್ಲೂಕಿನ ಕಿಗ್ಗ ಶಾಂತ ಸಮೇತ ವೃಷ್ಯ ಶೃಂಗೇಶ್ವರ ದೇವಸ್ಥಾನ ವಾರ್ಷಿಕ ₹60 ಲಕ್ಷ ಆದಾಯ ಹೊಂದಿದ್ದು ಉತ್ತಮ ಆತಿಥ್ಯ ನೀಡುತ್ತಿದೆ. ಚಿಕ್ಕಮಗಳೂರು ಶ್ರೀಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ‘ಎ’ ಗ್ರೇಡ್ ಧಾರ್ಮಿಕ ಕೇಂದ್ರ. ವಾರ್ಷಿಕ ₹87 ಲಕ್ಷ ವರಮಾನ ಬರುತ್ತಿದೆ. ಧಾರ್ಮಿಕ ಕೇಂದ್ರದವರೆಗೂ ರಸ್ತೆ ಉತ್ತಮವಾಗಿದೆ. 

ಉತ್ತರ ಕನ್ನಡ ಜಿಲ್ಲೆ ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೆಸರಾಗಿದೆ. ‘ಎ’ ಗ್ರೇಡ್‍ನ 9 ದೇವಾಲಯಗಳಿದ್ದು, ಒಟ್ಟು ವಾರ್ಷಿಕ ಆದಾಯ ಅಂದಾಜು ₹15 ಕೋಟಿಗೂ ಹೆಚ್ಚಿದೆ. ಭಟ್ಕಳ ತಾಲ್ಲೂಕಿನ ಅಳ್ವೆಕೋಡಿಯ ದುರ್ಗಾಪರಮೇಶ್ವರಿ ದೇವಸ್ಥಾನ, ಶಿರಸಿ ತಾಲ್ಲೂಕು ಮಂಜುಗುಣಿಯ ವೆಂಕಟರಮಣ ದೇವಾಲಯಗಳು ಸರಾಸರಿ ₹1.50 ಕೋಟಿಗಿಂತ ಹೆಚ್ಚು ಆದಾಯ ಹೊಂದಿವೆ. ಜಿಲ್ಲೆ ಗೋಕರ್ಣದ ಮಹಾಬಲೇಶ್ವರ, ಇಡಗುಂಜಿಯ ಸಿದ್ಧಿ ವಿನಾಯಕ, ಶಿರಸಿಯ ಮಾರಿಕಾಂಬಾ ದೇವಾಲಯ ಪ್ರವಾಸಿಗರನ್ನು ಸೆಳೆಯುವಲ್ಲಿ ಮುಂಚೂಣಿಯಲ್ಲಿವೆ.

‘ದೇವಾಲಯಕ್ಕಿರುವ ಉತ್ತಮ ಆದಾಯ ಬಳಸಿಕೊಂಡು ಭಕ್ತರಿಗೆ ಮೂಲಸೌಲಭ್ಯ ಒದಗಿಸಲಾಗುತ್ತಿದೆ. ಆದರೆ ಭಕ್ತರಿಗೆ ವಸತಿ ವ್ಯವಸ್ಥೆಗೆ ಹಲವು ವರ್ಷಗಳ ಹಿಂದೆ ನಿರ್ಮಿಸಿದ ಯಾತ್ರಿ ನಿವಾಸಕ್ಕೆ ವ್ಯವಸ್ಥಿತ ಸೌಕರ್ಯ ಒದಗಿಸಿ ಬಳಕೆಗೆ ನೀಡಲು ಪ್ರವಾಸೋದ್ಯಮ ಇಲಾಖೆ ಹಿಂದೇಟು ಹಾಕುತ್ತಿದೆ’ ಎಂದು ಶಿರಸಿಯ ಮಾರಿಕಾಂಬಾ ದೇವಾಲಯದ ಧರ್ಮದರ್ಶಿ ಮಂಡಳದ ಅಧ್ಯಕ್ಷ ಆರ್.ಜಿ.ನಾಯ್ಕ ಹೇಳುತ್ತಾರೆ.

ಆದಾಯ ಹೆಚ್ಚಿಸಿದ ‘ಶಕ್ತಿ’ ಯೋಜನೆ

ಧಾರ್ಮಿಕ ದತ್ತಿಯಡಿ ಬರುವ ದೇವಸ್ಥಾನಗಳಲ್ಲಿ ವಾರ್ಷಿಕವಾಗಿ ಅಂದಾಜು ₹ 400 ಕೋಟಿಯಿಂದ ₹ 450 ಕೋಟಿ ಆದಾಯ ಬರುತ್ತಿತ್ತು. ಕೋವಿಡ್‌ ಕಾಲದಲ್ಲಿ ಈ ಆದಾಯ ಕುಸಿತವಾಗಿ ₹300 ಕೋಟಿಯಿಂದ ₹ 330 ಕೋಟಿಗೆ ಇಳಿಕೆಯಾಗಿತ್ತು. ಕೋವಿಡ್‌ ಕಡಿಮೆಯಾದ ಬಳಿಕ ಮತ್ತೆ ಆದಾಯ ಹೆಚ್ಚಳವಾಗಿದೆ. ‘ಶಕ್ತಿ’ ಯೋಜನೆ ಜಾರಿಯಾದ ಮೇಲೆ ಶೇ 30ರಷ್ಟು ಆದಾಯ ಹೆಚ್ಚಳವಾಗಿದೆ.

[object Object]

ದಾವಣಗೆರೆಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬಸ್‌ ಹತ್ತಲು ಉಂಟಾದ ನೂಕುನುಗ್ಗಲು ಮತ್ತು ಜನದಟ್ಟಣೆ ಕಂಡು ಬಂದಿದ್ದು ಹೀಗೆ

–ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ್

ಮಂಡ್ಯದ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ವಸತಿ– ಊಟ– ಶೌಚಾಲಯ ಸೇರಿದಂತೆ ಮೂಲಸೌಲಭ್ಯ ಒದಗಿಸಲು ಮಾಸ್ಟರ್‌ ಪ್ಲಾನ್‌ ರೂಪಿಸಲಾಗಿದ್ದು ಪ್ರಸ್ತಾವ ಸಲ್ಲಿಸಲಾಗಿದೆ.
–ಕುಮಾರಸ್ವಾಮಿ ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ
ದೇವಸ್ಥಾನಕ್ಕೆ ಹೊಂದಿಕೊಂಡ ಐದು ಎಕರೆ ಜಾಗವಿದ್ದು ಈ ಜಾಗ ನೀಡಲು ಅರ್ಚಕರ ಮನೆತನದವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಅಭಿವೃದ್ಧಿ ಕೆಲಸ ವಿಳಂಬವಾಗಿದೆ. ವ್ಯಾಜ್ಯ ಪರಿಹಾರವಾದ ತಕ್ಷಣ ಅಭಿವೃದ್ಧಿ ಕೆಲಸ ಕೈಗೆತ್ತಿಕೊಳ್ಳಲಾಗುವುದು.
–ಅಯ್ಯಪ್ಪ ಸುತಗುಂಡಿ ಕಾರ್ಯನಿರ್ವಹಣಾಧಿಕಾರಿ ಹುಲಿಗಿ ದೇವಸ್ಥಾನ

ಯಾವ ಯಾವ ದೇವಸ್ಥಾನಗಳ ಅಭಿವೃದ್ಧಿಗೆ ಆಗಬೇಕಾದ ಕೆಲಸಗಳೇನು?

  • ಕೊಪ್ಪಳ ಜಿಲ್ಲೆಯ ಹುಲಗಿ: ಸ್ನಾನಘಟ್ಟ ಸಾರ್ವಜನಿಕ ಶೌಚಾಲಯ ಭಕ್ತರು ಉಳಿದುಕೊಳ್ಳಲು ಇನ್ನಷ್ಟು ಕೊಠಡಿಗಳ ನಿರ್ಮಾಣ.

  • ಕಲಬುರಗಿ ಜಿಲ್ಲೆಯ ಗಾಣಗಾಪುರ: ದತ್ತ ಮಂದಿರದ ಸುತ್ತಮುತ್ತಲಿನಲ್ಲಿ ಮುಜರಾಯಿ ಇಲಾಖೆ ನಿರ್ವಹಿಸುವ ಧರ್ಮಶಾಲೆಗಳ ಪುನರ್‌ ನಿರ್ಮಾಣವಾಗಬೇಕಿದೆ. ಶೌಚಾಲಯ ಬಳಕೆಗೆ ಮುಕ್ತವಾಗಬೇಕಿದೆ. ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿಸಲಾಗಿರುವ ಯಾತ್ರಿ ನಿವಾಸವನ್ನು ಖಾಸಗಿ ವಸತಿಗೃಹಗಳ ಲಾಬಿಗೆ ಮಣಿದು ಯಾತ್ರಿ ನಿವಾಸ ಆರಂಭಿಸಿಲ್ಲ ಎನ್ನುವ ಆರೋಪಗಳಿದ್ದು ತ್ವರಿತವಾಗಿ ಆರಂಭಿಸಬೇಕು.

  • ಬೆಳಗಾವಿ ಜಿಲ್ಲೆಯ ಸವದತ್ತಿ: ಭಕ್ತರ ಸಂಖ್ಯೆಗೆ ಅನುಗುಣವಾಗಿ ವಸತಿಗೃಹಗಳಿಲ್ಲ. ಶೌಚಗೃಹಗಳ ಕೊರತೆಯಿದೆ. ಕೆಲವರು ಬಯಲಲ್ಲೇ ಶೌಚಕ್ಕೆ ಹೋಗುವುದು ಸಾಮಾನ್ಯವಾಗಿದೆ.

  • ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಸ್ವಾಮಿ ದೇವಾಲಯ: ಅಮಾವಾಸ್ಯೆ ಜಾತ್ರೆ ಸಮಯದಲ್ಲಿ ಲಕ್ಷಾಂತರ ಜನ ಸೇರುವಾಗ ‌ಬಿಸಿಲಿನಲ್ಲಿ ಗಂಟೆಗಟ್ಟಲೆ ನಿಲ್ಲಬೇಕು. ಸ್ವಚ್ಛತೆಯೇ ದೊಡ್ಡ ಸಮಸ್ಯೆ. ಎಲ್ಲರಿಗೂ ವಾಸ್ತವ್ಯದ ವ್ಯವಸ್ಥೆ ಇಲ್ಲ. ಶೌಚಾಲಯ ಸವಲತ್ತು ಸಾಕಾಗುವುದಿಲ್ಲ.

  • ಮೈಸೂರಿನ ಚಾಮುಂಡಿ ಬೆಟ್ಟ: ಮೂಲಸೌಕರ್ಯಗಳ ಕೊರತೆ ತ್ಯಾಜ್ಯ ವಿಲೇವಾರಿಯ ಕೊರತೆ ಮಳಿಗೆದಾರರು ಬೀದಿಯಲ್ಲೇ ವಹಿವಾಟು ನಡೆಸುವುದರಿಂದ ಜಾಗ ಇಕ್ಕಟ್ಟಾಗಿದ್ದು ಭಕ್ತರು ಕಿರಿಕಿರಿ ಅನುಭವಿಸಬೇಕಾಗಿದೆ.

  • ಮಂಡ್ಯದ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯ: ವಿಶ್ವವಿಖ್ಯಾತ ವೈರಮುಡಿ ಉತ್ಸವ ನಡೆಯುವ ಈ ದೇವಸ್ಥಾನಕ್ಕೆ ತಮಿಳುನಾಡು ಆಂಧ್ರ‍ಪ್ರದೇಶ ಮಹಾರಾಷ್ಟ್ರದಿಂದ ಅಪಾರ ಭಕ್ತರು ಬಂದರೂ ವಸತಿ ಸೌಲಭ್ಯವಿಲ್ಲ. ಮಂಡ್ಯ ಮೈಸೂರಿನಲ್ಲಿ ಉಳಿದುಕೊಳ್ಳಬೇಕು. ವಾರ್ಷಿಕ ₹ 2 ಕೋಟಿಗೂ ಹೆಚ್ಚು ಆದಾಯವಿರಬೇಕೆಂಬ ನಿಯಮದಿಂದಾಗಿ ದೇವಾಲಯ ಪ್ರಾಧಿಕಾರ ರಚನೆಯಾಗಿಲ್ಲ.

  • ಚಿತ್ರದುರ್ಗ ಜಿಲ್ಲೆಯ ಗುರುತಿಪ್ಪೇರುದ್ರಸ್ವಾಮಿ ದೇವಾಲಯ: 2004ರಲ್ಲಿ ಪಟ್ಟಣದ ಒಳಮಠ ಮತ್ತು ಹೊರಮಠ ದೇವಾಲಯಗಳ ಬಳಿ ತಲಾ ಒಂದೊಂದು ಬೃಹತ್ ಅತಿಥಿಗೃಹ ಸಮುಚ್ಛಯಗಳನ್ನು ನಿರ್ಮಿಸಲಾಗಿದೆ. ಆಗಿನ ಪೀಠೋಪಕರಣಗಳು ದುರಸ್ತಿಗೊಳ್ಳಬೇಕಿವೆ.

ಮುಜರಾಯಿ ಇಲಾಖೆ ಸಚಿವರು ಏನಂತಾರೆ?

‘‘ಮುಜರಾಯಿ ದೇವಸ್ಥಾನಗಳ ಆದಾಯವನ್ನು ದೇವಸ್ಥಾನ ಮತ್ತು ಅದಕ್ಕೆ ಸಂಬಂಧಿಸಿದ ಪ್ರದೇಶಗಳ ಅಭಿವೃದ್ಧಿಯನ್ನು ಹೊರತುಪಡಿಸಿ ಮತ್ಯಾವುದೇ ಉದ್ದೇಶಕ್ಕೆ ಬಳಸುವಂತಿಲ್ಲ. ಬಳಸುತ್ತಲೂ ಇಲ್ಲ. ಆದರೂ ಕೆಲವರು ವೋಟಿನ ಗಿಮಿಕ್‌ಗಾಗಿ ಅಪಪ್ರಚಾರ ಮಾಡುತ್ತಾ ಇರುತ್ತಾರೆ. ಕೋಮು ಭಾವನೆ ಕೆರಳಿಸಲು ಮಸೀದಿ ಚರ್ಚ್‌ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದು ಹೇಳುವವರು ಅದರ ದಾಖಲೆಗಳನ್ನು ನೀಡುವುದಿಲ್ಲ. ಯಾಕೆಂದರೆ ಅವೆಲ್ಲ ಸುಳ್ಳು ಆರೋಪಗಳು. ಅಲ್ಲದೇ ಈ ರೀತಿ ಆರೋಪಗಳನ್ನು ಮಾಡುವವರು ದೇವಾಲಯಗಳಿಗೆ ಒಂದು ರೂಪಾಯಿ ಕಾಣಿಕೆ ಹಾಕುವವರೂ ಅಲ್ಲ’’

– ರಾಮಲಿಂಗಾರೆಡ್ಡಿ, ಮುಜರಾಯಿ ಖಾತೆ ಸಚಿವ

[object Object]

ರಾಮಲಿಂಗಾ ರೆಡ್ಡಿ

––––––––––

ಒಳನೋಟದ ಪೂರಕ ಮಾಹಿತಿ: ಬಾಲಕೃಷ್ಣ ಪಿ.ಎಚ್., ಬಾಲಚಂದ್ರ ಎಚ್‌., ವಿಜಯಕುಮಾರ್‌ ಎಸ್‌.ಕೆ., ಉದಯ ಯು., ಮನೋಜಕುಮಾರ್‌ ಗುದ್ದಿ, ಕೆ.ಎಂ.ಸತೀಶ್ ಬೆಳ್ಳಕ್ಕಿ, ಜಿ.ಬಿ. ನಾಗರಾಜ, ಕೆ. ಓಂಕಾರ ಮೂರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT