ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ರಣಬಿಸಿಲು; ಬದುಕು ಕಂಗಾಲು

ಏರುತ್ತಿರುವ ತಾಪಮಾನದಿಂದ ಜನರು ತತ್ತರ; ಜೀವನ ದುಸ್ತರ
Published 22 ಏಪ್ರಿಲ್ 2023, 20:16 IST
Last Updated 22 ಏಪ್ರಿಲ್ 2023, 20:16 IST
ಅಕ್ಷರ ಗಾತ್ರ

ರಾಹುಲ ಬೆಳಗಲಿ

ಕಲಬುರಗಿ: ‘ಬೇಸಿಗೆ ರಜೆಯೆಂದರೆ, ಮಕ್ಕಳು ಮೈದಾನದಲ್ಲಿ ದಿನಪೂರ್ತಿ ಆಟವಾಡುತ್ತ ಸಂಭ್ರಮಿಸಬೇಕು.ಆದರೆ, ಈ ವರ್ಷದ ರಣಬಿಸಿಲು ಇದಕ್ಕೆ ಸಂಪೂರ್ಣ ತಡೆಯೊಡ್ಡಿದೆ. ಮಕ್ಕಳು ಆಟ ಆಡುವುದಿರಲಿ, ಹಿರಿಯರು ಕೂಡ ಸಣ್ಣಪುಟ್ಟ ಕೆಲಸಗಳಿಗೆ ಹೊರ ಹೋಗಲು ಹಿಂಜರಿಯುತ್ತಿದ್ದಾರೆ. ಸುಡು ಬಿಸಿಲಿಗೆ ಚರ್ಮ ಸುಡುತ್ತೆ, ಇಲ್ಲವೇ ಆಯಾಸಗೊಂಡು ರಸ್ತೆಯಲ್ಲೇ ಕುಸಿದು ಬೀಳುವ ಭಯ ಅವರಲ್ಲಿದೆ’.

ಹೀಗೇಳಿದ್ದು ಕಲಬುರಗಿಯ ಹಿರಿಯರಾದ ಸಿದ್ರಾಮಪ್ಪ ಸಜ್ಜನ. ಬೆಂಗಳೂರಿ ನಿಂದ ಬೇಸಿಗೆ ರಜೆಯಲ್ಲಿ ಮನೆಗೆ ಬಂದಿದ್ದ ಮೊಮ್ಮಗ ರಘು ಸಜ್ಜನ ಬಿಸಿಲ ಝಳಕ್ಕೆ ನಿತ್ರಾಣಗೊಂಡು ಹಾಸಿಗೆ ಹಿಡಿದಿರುವುದು ಅವರ ಚಿಂತೆಗೆ ಕಾರಣ. ಅವರಷ್ಟೇ ಅಲ್ಲ, ರಾಜ್ಯದ ಬಹುತೇಕ ಜಿಲ್ಲೆಗಳ ಜನರು ಈ ವರ್ಷ ಬೇಸಿಗೆಯ ದಿನಗಳ ಬದಲಾದ ಸ್ವರೂಪದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾರೆ. ಬಿಸಿಲಿನ ಪ್ರಕೋಪ ಮನುಷ್ಯರಿಗೆ ಅಲ್ಲದೇ, ಪ್ರಾಣಿ ಮತ್ತು ಪಕ್ಷಿಗಳಿಗೂ ತಟ್ಟಿದೆ. ಮನೆಯಿಂದ ಹೊರಹೋದರೆ ಅಸಹನೀಯ ಶಾಖ, ಮನೆಯಲ್ಲೇ ಉಳಿದರೆ ಇಡೀ ಮೈ ನೀರಾಗಿಸುವ ಸೆಖೆ. ಒಟ್ಟಿನಲ್ಲಿ ಸಹಜ ಜೀವನಶೈಲಿ ಮೇಲೆ ಆಗಿರುವ ಆಘಾತ ಸಾಮಾನ್ಯವಾದುದ್ದಲ್ಲ.

ಡಾ.ಶಂಕರ್‌ ಅವರು ಹೇಳುವ ಪ್ರಕಾರ, ಬೆಳಿಗ್ಗೆ 11 ರಿಂದ ಮಧ್ಯಾಹ್ನ 4ರವರೆಗೆ ಉಷ್ಣಾಂಶ ಹೆಚ್ಚಿರುತ್ತದೆ. ಈ ಅವಧಿಯಲ್ಲಿ ನಿರಂತರವಾಗಿ ಬಿಸಿಲಲ್ಲಿ ಓಡಾಡಿದರೆ, ಚರ್ಮ ರೋಗದ ಜೊತೆ ಮೈಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ನಿರ್ಜಲೀಕರಣ, ಆಯಾಸ ಅಧಿಕಗೊಂಡು ದೇಹದಲ್ಲಿ ನಿಶ್ಯಕ್ತಿ ಉಂಟಾಗುತ್ತದೆ. ಆಹಾರ ಸೇವಿಸಲು ಆಗುವುದಿಲ್ಲ. ಸೇವಿಸಿದರೂ ಅಜೀರ್ಣ ಆಗುತ್ತದೆ. ಸೂರ್ಯನ ಹೊಡೆತಕ್ಕೆ (ಸನ್‌ ಸ್ಟ್ರೋಕ್) ಪ್ರಜ್ಞೆ ತಪ್ಪಿ ಬಿದ್ದು, ಪ್ರಾಣಕ್ಕೂ ಅಪಾಯವಾಗುವ ಸಾಧ್ಯತೆಯಿದೆ.

ಭಾರತೀಯ ಹವಾಮಾನ ಇಲಾಖೆಯು ಕಳೆದ ಫೆಬ್ರುವರಿಯಲ್ಲಿ ದೇಶದಲ್ಲಿ 120 ವರ್ಷಗಳಲ್ಲೇ ಗರಿಷ್ಠ ತಾಪಮಾನ 29.54 ಡಿಗ್ರಿ ಸೆಲ್ಸಿಯಸ್ ದಾಖಲಾದ ಬಗ್ಗೆ ಮಾಹಿತಿ ನೀಡಿತ್ತು. ಈಗ ರಾಜ್ಯದ ಬಹುತೇಕ ಕಡೆ ತಾಪಮಾನವು 30 ರಿಂದ 41 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿದ್ದು, ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಕಿಂಚಿತ್ತೂ ಕರುಣೆ ತೋರದ ಈ ಕೆಂಡದ ದಿನಗಳು ಹೀಗೆ ಮುಂದುವರಿದರೆ, ಬಿಸಿಲಿನಿಂದ ತತ್ತರಿಸಿ ಅನಾರೋಗ್ಯಕ್ಕೀಡಾದ ಜನರ ಸಾಲಿಗೆ ಇನ್ನಷ್ಟು ಮಂದಿ ಸೇರಿಕೊಳ್ಳುತ್ತಾರೆ.

ಅತಿಯಾದ ತಾಪಮಾನದ ಏಟಿಗೆ ಮಹಾರಾಷ್ಟ್ರದಲ್ಲಿ 13ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಪಶ್ಚಿಮ ಬಂಗಾಳ, ಬಿಹಾರ, ಸಿಕ್ಕಿಂ, ಒಡಿಶಾ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಜನರು ಬಿಸಿಗಾಳಿಗೆ ತತ್ತರಿಸಿ ಅಸ್ವಸ್ಥಗೊಂಡಿದ್ದಾರೆ. ಬಿಸಿ ಗಾಳಿಯ ವಾತಾವರಣ ದೀರ್ಘ ಅವಧಿಯವರೆಗೆ ಇರುವ ಸಾಧ್ಯತೆಯಿದೆ ಎಂದು
ಹವಾ ಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕೆಲ ಕಡೆ ಶಾಲೆಗಳಿಗೆ ರಜೆ ನೀಡಲಾಗಿದ್ದರೆ, ಇನ್ನೂ ಕೆಲ ಕಡೆ ಸಮಯ ಬದಲಿಸಲು ಆಯಾ ರಾಜ್ಯ ಸರ್ಕಾರಗಳು ಚಿಂತನೆ ನಡೆಸಿವೆ.

ಬಿಸಿಲಿನ ಪ್ರಮಾಣ ಈ ವರ್ಷ ಹೀಗೆ ಜಾಸ್ತಿಯಾಗಲು ಕಾರಣವೇನು ಎಂದು ಹುಡುಕಿ ಹೊರಟರೆ, ‘ಮಾನವನ ದುರಾಸೆ ಮತ್ತು ಪ್ರಕೃತಿಯ ಮೇಲೆ ನಿರಂತರ ದಾಳಿಯೇ ಕಾರಣ’ ಎಂಬ ಉತ್ತರ ಸಿಗುತ್ತದೆ.

‘ಮಲೆನಾಡು ಪ್ರದೇಶದಲ್ಲಿ ಅರಣ್ಯ ಸಂಪತ್ತಿನ ವಿನಾಶದಿಂದ ತುಂಬಾ ಸಮಸ್ಯೆಯಾಗಿದೆ. ವಾಣಿಜ್ಯ ಉದ್ದೇಶಕ್ಕೆ ಭೂಪರಿವರ್ತನೆ ಎಗ್ಗಿಲ್ಲದೇ ನಡೆದಿದೆ. ಪಶ್ಚಿಮಘಟ್ಟಗಳನ್ನು ಉಳಿಸುವ ಬದಲು ಬೆಟ್ಟಗಳನ್ನು ಕೊರೆದು ಹೆದ್ದಾರಿ ನಿರ್ಮಾಣ, ರೈಲ್ವೆ ಯೋಜನೆ ಅನುಷ್ಠಾನ ತರಲಾಗುತ್ತಿದೆ. ಕೊಡಗಿನಲ್ಲಿ ಜನರಿಗೆ ಬೇಕಿಲ್ಲದ 7 ಹೆದ್ದಾರಿಗಳ ನಿರ್ಮಾಣಕ್ಕೆ ಅನುಮತಿ ಸಿಕ್ಕಿದೆ. ಎರಡು ಹೊಸ ರೈಲ್ವೆ ಯೋಜನೆಗಳಿಗೆ ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿದೆ. ಇದು ಕೂಡ ತಾಪಮಾನ ಹೆಚ್ಚಳಕ್ಕೆ ಕಾರಣವಾಗಿದೆ’ ಎಂದು ಕೂರ್ಗ್‌ವೈಲ್ಡ್ ಲೈಫ್‌ ಸೊಸೈಟಿಯ ಕಾರ್ಯಕಾರಿ ಸಮಿತಿ ಸದಸ್ಯ ಚೆಪ್ಪುಡೀರ ಮುತ್ತಣ್ಣ ಬೇಸರಿಸುತ್ತಾರೆ.

ಮಲೆನಾಡು ಪ್ರದೇಶದಲ್ಲಿ ಕಾಡು ಅಪಾಯದ ಸ್ಥಿತಿ ಎದುರಿಸಿದರೆ, ಹಳೆಯ ಮೈಸೂರು ಭಾಗದ ಸುತ್ತಮುತ್ತ ವ್ಯಾಪಕವಾಗಿ ಕಲ್ಲು ಗಣಿಗಾರಿಕೆ ನಡೆದಿದೆ. ರಾಮನಗರ ಜಿಲ್ಲೆಯ ಮಾಗಡಿ–ಬೆಂಗಳೂರಿನ ಗಡಿಯುದ್ದಕ್ಕೂ ಗಣಿಗಾರಿಕೆಯಿಂದ ಬೆಟ್ಟಗಳ ಸಾಲು ಕರಗಿವೆ. ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಪ್ರದೇಶದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ತುಮಕೂರು ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ಮಿತಿ ಮೀರಿದ್ದು, ಕಂಡಲೆಲ್ಲಾ ಬಂಡೆಗಳನ್ನು ಸೀಳಲಾಗುತ್ತಿದೆ. ತುಮಕೂರು ಜಿಲ್ಲೆಯಲ್ಲಿ ಅಧಿಕೃತವಾಗಿ 300ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಮಾತ್ರ ಗಣಿಗಾರಿಕೆಗೆ ಅವಕಾಶವಿದೆ. ಆದರೆ, ಇದರ ಐದಾರು ಪಟ್ಟು ವಿವಿಧೆಡೆ ಅಕ್ರಮವಾಗಿ ಗಣಿಗಾರಿಕೆ ಮುಂದುವರೆದಿದೆ. ಇದರಿಂದ ತಂಪಾದ ವಾತಾವರಣ ಮರೆಯಾಗಿತ್ತಿದೆ. ಬಯಲು ಸೀಮೆಯ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿಧಾಮದ ಸುತ್ತಮುತ್ತ ಹೆಚ್ಚಿದ ಗಣಿಗಾರಿಕೆಯಿಂದ ಹಸಿರು ವಲಯ ಪ್ರದೇಶಕ್ಕೆ ಧಕ್ಕೆಯಾಗಿದೆ. ನಂದಿ ಬೆಟ್ಟವು ಪಾಪಾಗ್ನಿ, ಪೆನ್ನಾರ್, ಪಾಲಾರ್, ಕುಮದ್ವತಿ ಮತ್ತು ಅರ್ಕಾವತಿ ನದಿಗಳ ಉಗಮ ಸ್ಥಾನವಾಗಿತ್ತು. ಈಗ ಜೀವ ಜಲ ಬತ್ತಿದೆ.

‘ಮೊದಲೆಲ್ಲ ಹಸಿರು ಗಿಡಮರಗಳ ಹೊದಿಕೆಯಿಂದ ಬೆಟ್ಟ ಗುಡ್ಡಗಳಲ್ಲಿನ ಬಂಡೆಗಲ್ಲುಗಳು ಹೆಚ್ಚು ಕಾಣುತ್ತಿರಲಿಲ್ಲ. ಆದರೆ, ಮರಗಳನ್ನು ಯಥೇಚ್ಛ ಕಡಿಯುತ್ತಿರುವ ಕಾರಣ ಬಂಡೆಗಲ್ಲುಗಳು ಬಿಸಿಲಿನಿಂದ ಬಿಸಿಯಾಗುತ್ತಿವೆ. ಅವು ಹೊರಸೂಸುವ ಶಾಖದಿಂದ 1ರಿಂದ 2 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚುತ್ತಿದೆ’ ಎಂದು ಎಂದು ಕೋಲಾರದ ಪರಿಸರ ಬಳಗದ ಸಂಸ್ಥಾಪಕ ಸದಸ್ಯ ಪರಶುರಾಮೇಗೌಡ ಹೇಳುತ್ತಾರೆ.

‘ತುಂಗಾ ಪಾನ, ಗಂಗಾ ಸ್ನಾನ’ ನಾಣ್ಣುಡಿ ಶಿವಮೊಗ್ಗ ನಗರದ ಮಟ್ಟಿಗೆ ಸುಳ್ಳಾಗಿದೆ. ತುಂಗೆ ಜೀವದಾಯಿನಿ ಆಗಿ ಉಳಿದಿಲ್ಲ. ಬಿಸಿಲಿನ ಬೇಗೆ ಈಗ 40 ಡಿಗ್ರಿ ಆಸುಪಾಸಿನಲ್ಲಿದೆ. ನಗರದ ಸೂಳೆಬೈಲು ಸೇರಿ ವಿವಿಧೆಡೆ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದೆ. ನೀರಿಗಾಗಿ ಜನರು ಬೀದಿಗಿಳಿದು ಹೋರಾಟ ಮುಂದುವರೆಸಿದ್ದಾರೆ. ತೀರ್ಥಹಳ್ಳಿಯಲ್ಲಿ ತುಂಗಾನದಿ ಒಡಲು ಬರಿದಾಗಿದೆ.

ಕಾಳಿ, ಶರಾವತಿ, ಅಘನಾಶಿನಿಯಂತಹ ಪ್ರಮುಖ ನದಿಗಳು ಹರಿಯುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಪರದಾಟ ಹೆಚ್ಚಾಗಿದೆ. ಅಂಕೋಲಾ, ಕಾರವಾರ ತಾಲ್ಲೂಕಲ್ಲದೇ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲೂ ಸಂಕಷ್ಟ ತಲೆದೋರಿದೆ. ಮಲೆನಾಡಿಗೆ ಹೊಂದಿಕೊಂಡಿರುವ ಬೆಳಗಾವಿ ಜಿಲ್ಲೆಯ ಮಲಪ್ರಭೆ ಮಡಿಲಲ್ಲಿರುವ ಸವದತ್ತಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಪುರಸಭೆಯಿಂದ ವಾರಕ್ಕೊಮ್ಮೆ ಮಾತ್ರ ನೀರು ಪೂರೈಸಲಾಗುತ್ತಿದೆ.

ಕೊಡಗು ಜಿಲ್ಲೆಯಲ್ಲಿ ನದಿಗಳೆಲ್ಲವೂ ಬತ್ತುತ್ತಿವೆ. ಕಾವೇರಿ ಹುಟ್ಟುವ ಭಾಗಮಂಡಲದಲ್ಲೇ ನದಿಯಲ್ಲಿ ಮೊಣಕಾಲುದ್ದ ನೀರಿದ್ದರೆ, ಲಕ್ಷ್ಮಣತೀರ್ಥ ನದಿ ಬತ್ತಿದೆ. ಹಾರಂಗಿ ಜಲಾಶಯದಲ್ಲಿ ನೀರು ಕ್ಷೀಣಿಸಿದೆ. ಇತ್ತ ಮಡಿಕೇರಿ ನಗರಕ್ಕೆ ನೀರು ಸರಬರಾಜು ಮಾಡುವ ಕೂಟುಹೊಳೆ ಹಾಗೂ ಪಂಪಿನಕೆರೆಯ ನೈಸರ್ಗಿಕ ಜಲಮೂಲಗಳೆಲ್ಲವೂ ಸಂಪೂರ್ಣ ಬತ್ತಿದ್ದು, ಮಡಿಕೇರಿ ನಗರಸಭೆ ವತಿಯಿಂದ ಎರಡು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ.

ಮೈಸೂರು ನಗರಕ್ಕೆ ಇನ್ನೆರಡು ತಿಂಗಳು ನೀರಿನ ಕೊರತೆಯಾಗದು.‌ ಆದರೆ, ಕಬಿನಿ ಜಲಾಶಯದ ನೀರಿನ ಸಂಗ್ರಹ ಕಳೆದ ವರ್ಷಕ್ಕಿಂತ ಈ ಅವಧಿಗೆ 3.84 ಟಿಎಂಸಿ ಅಡಿ ಕಡಿಮೆ ಇದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ 6 ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಇದ್ದು ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ. ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು ತಾಲ್ಲೂಕುಗಳಲ್ಲಿ ಕೆರೆಗಳಲ್ಲಿ ನೀರು ಕಡಿಮೆಯಾಗಿದೆ.

ದಶಕದ ಬಳಿಕ ಇದೇ ಮೊದಲ ಸಲ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರ ಸ್ವರೂಪ ಪಡೆಯುವ ಭೀತಿ ಎದುರಾಗಿದೆ. ಉಡುಪಿ ನಗರಸಭೆ ವ್ಯಾಪ್ತಿಯ 35 ವಾರ್ಡ್‌ಗಳಿಗೆ ಬಜೆ ಜಲಾಶಯದಿಂದ ನೀರು ಪೂರೈಸಲಾಗುತ್ತಿದೆ. ಆದರೆ, ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಕುಸಿಯುತ್ತಿರುವ ಕಾರಣ ಮೇ ತಿಂಗಳ ಮೊದಲ ವಾರದವರೆಗೆ ಮಾತ್ರ ನೀರು ಸಿಗುವ ಸಾಧ್ಯತೆಯಿದೆ.

ಉತ್ತರ ಕನ್ನಡ ಜಿಲ್ಲೆಯ ಅಂತರ್ಜಲ ಮಟ್ಟದ ಪ್ರಮಾಣ ಸದ್ಯಕ್ಕೆ ಸರಾಸರಿ 8.75 ಮೀಟರ್ ಆಳವಿದೆ. ಆದರೆ ಜಿಲ್ಲೆಯ 24 ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿದೆ. ಇನ್ನು 110 ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಬಗ್ಗೆ ಜಿಲ್ಲಾಡಳಿತ ಪಟ್ಟಿ ಮಾಡಿದೆ.

ಧಾರವಾಡ ತಾಲ್ಲೂಕಿಗೆ ನೀರು ಪೂರೈಸುವ ಸವದತ್ತಿ ರೇಣುಕಾಸಾಗರ ಹಾಗೂ ಕಲಘಟಗಿ ನೀರಸಾಗರದ ಪರಿಸ್ಥಿತಿ ಶೋಚನೀಯವಾಗಿದೆ. ಎರಡೂ ಕಡೆ ನೀರಿನ ಮಟ್ಟ ಕುಸಿದಿದ್ದು, ಕುಂದಗೋಳ, ನವಲಗುಂದ ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಉಂಟಾಗಿದೆ.

ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ ಐದು ದಿನಗಳ ಬದಲು 10ರಿಂದ 12 ದಿನಗಳಿಗೆ ಒಮ್ಮೆ ನೀರು ಪೂರೈಸಲಾಗುತ್ತಿದೆ. ‌‘ನೀರಿನ ಸಮಸ್ಯೆ ನಿವಾರಣೆಗೆ ವಿಶೇಷ ತಂಡಗಳನ್ನು ರಚಿಸಿ, ಪ್ರತಿ ದಿನ ನೀರು ಪೂರೈಕೆಗೆ ಯೋಜನೆ ರೂಪಿಸಲಾಗಿದೆ ಎಂದು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ವರ್ಷಗಳಿಂದ ಹೇಳುತ್ತಲೇ ಇದ್ದಾರೆ. ಆದರೆ, ಅದು ಕಾರ್ಯರೂಪಕ್ಕೆ ಬಂದಿಲ್ಲ’ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ಬೆಳಗಾವಿ, ಧಾರವಾಡ, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳ ಜನರ ಜೀವನಾಡಿಯಾದ ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿದೆ. ಕಲಬುರಗಿ ಜಿಲ್ಲೆಯಲ್ಲಿ ಎರಡು ವರ್ಷ ಉತ್ತಮ ಮಳೆ ಆಗಿರುವುದರಿಂದ ಈ ಭಾಗದಲ್ಲಿನ ಭೀಮಾ, ಬೆಣ್ಣೆತೊರ, ಗಂಡೋರಿ ನಾಲಾ, ನಾಗರಾಳ, ಅಮರ್ಜಾ ಜಲಾಶಯಗಳಲ್ಲಿ ನೀರಿನ ಮಟ್ಟ ಉತ್ತಮ ಸ್ಥಿತಿಯಲ್ಲಿದೆ. ಆದರೆ, ಯಾದಗಿರಿ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಸಮಸ್ಯೆ ಇದೆ. ಚಿಕ್ಕಬಳ್ಳಾಪುರ, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಗದಗ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಅಷ್ಟಾಗಿ ತಲೆದೋರಿಲ್ಲ.

ಒಂದೆಡೆ ಕುಡಿಯುವ ನೀರಿನ ಸಮಸ್ಯೆ ಹೀಗಿದ್ದರೆ, ಮತ್ತೊಂದೆಡೆ ಶುದ್ಧ ಕುಡಿಯುವ ನೀರು ಸಿಗುವುದು ದುಸ್ತರವಾಗಿದೆ. ನಗರ ಪ್ರದೇಶದಲ್ಲಿ ಆರ್ಥಿಕವಾಗಿ ಸ್ಥಿತಿವಂತರು ಕ್ಯಾನ್‌ ನೀರು ಇಲ್ಲವೇ ಕೊಳವೆಬಾವಿಗಳನ್ನು ಅವಲಂಬಿಸಿದ್ದಾರೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಜನರು ನದಿ, ಕೆರೆ, ಕುಂಟೆಯ ನೀರಿಗೆ ಮೊರೆ ಹೋಗುತ್ತಾರೆ. ಕಲುಷಿತ ನೀರು ಕುಡಿದು ಜನರು ಅಸ್ವಸ್ಥಗೊಳ್ಳುವ ಪ್ರಕರಣಗಳು ಆಗಾಗ್ಗೆ ಘಟಿಸುತ್ತಲೇ ಇರುತ್ತವೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಅನಪುರದಲ್ಲಿ ಕಲುಷಿತ ನೀರು ಕುಡಿದು ಇಬ್ಬರು ಮಹಿಳೆಯರು ಸಾವನ್ನಪ್ಪಿ, 30ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದರು ಎನ್ನುವುದನ್ನು ಸ್ಮರಿಸಬಹುದು.

‘ರಾಜ್ಯದ ವಿವಿಧೆಡೆ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಚುನಾವಣೆ ಘೋಷಣೆ ಮುನ್ನವೇ ಆಯಾ ಜಿಲ್ಲೆಗಳಿಗೆ ಸರ್ಕಾರದಿಂದ ₹ 1 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ಪರಿಸ್ಥಿತಿ ಅವಲೋಕಿಸಿ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಯವರು ನೀರಿನ ಸಮಸ್ಯೆ ನಿವಾರಣೆಗೆ ಹಣವನ್ನು ಸದ್ಬಳಕೆ ಮಾಡಿಕೊಳ್ಳಬಹುದು’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಜನರ ಆರೋಗ್ಯದ ಮೇಲೆಯಷ್ಟೇ ಅಲ್ಲ, ಜಾನುವಾರುಗಳ ಆರೋಗ್ಯದ ಮೇಲೆಯೂ ಬಿಸಿಲು ಭಾರಿ ಪರಿಣಾಮ ಉಂಟು ಮಾಡಿದೆ. ಕೃಷಿ ಚಟುವಟಿಕೆಗೂ ಅಡ್ಡಿಯಾಗಿದೆ. ಸಕಾಲಕ್ಕೆ ಮಳೆಯಾಗದಿದ್ದರೆ, ಪರಿಸ್ಥಿತಿ ಇನ್ನೂ ಮೀರುವ ಆತಂಕ ಕಾಡುತ್ತಿದೆ. ಅತಿಯಾದ ಬಿಸಿಲು ಇರುವ ಕಾರಣ ರೈತರು ಕೃಷಿ ಜಮೀನಿನತ್ತ ಹೋಗುತ್ತಿಲ್ಲ. ಬೆಳಗಿನ 5 ರಿಂದ 9 ಗಂಟೆಯೊಳಗೆ ಕೃಷಿ ಕೆಲಸ ಮುಗಿಸಿಕೊಂಡು ಜಾನುವಾರುಗಳ ಸಮೇತ ಮನೆಗಳಿಗೆ ಮರಳುತ್ತಾರೆ. ಅಗತ್ಯವೆನ್ನಿಸಿದರೆ, ಸಂಜೆ 5 ರಿಂದ 7ರ ಅವಧಿಯಲ್ಲಿ ಒಂದು ಸುತ್ತು ಜಮೀನಿಗೆ ಹೋಗುತ್ತಾರೆ. ಬಿಸಿಲಿನಿಂದ ಜಾನುವಾರುಗಳು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದ್ದು, ಅವುಗಳನ್ನು ಆರೋಗ್ಯಯುತವಾಗಿ ಕಾಯ್ದಿಡುವುದೇ ರೈತರಿಗೆ ಸವಾಲಾಗಿದೆ.

ಅಡಿಕೆ ಕೃಷಿಗೆ ಹೆಚ್ಚು ವಾಲಿಕೊಂಡಿರುವ ಚಿತ್ರದುರ್ಗ ಜಿಲ್ಲೆಯ ರೈತರಿಗೆ ಪ್ರಸಕ್ತ ಬೇಸಿಗೆ ಹೊಸ ಸಂಕಷ್ಟ ತಂದೊಡ್ಡಿದೆ. 37 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ತಾಪಮಾನ ಇರುವುದರಿಂದ ಅಡಿಕೆಯ ಇಂಗಾರದ ಹರಳು ಉದುರತೊಡಗಿವೆ. ಅಡಿಕೆ ಕಾಯಿ ಒಣಗುತ್ತಿದೆ. ಅಡಿಕೆ ಇಳುವರಿ ಕುಸಿಯುತ್ತಿದೆ. ನೀರಿನ ಕೊರತೆಯಿಂದ ತೋಟ ನಿರ್ವಹಣೆ ಕಷ್ಟವಾಗುತ್ತಿದೆ.

‘2022ರಲ್ಲಿ ಮಾರ್ಚ್‌, ಏಪ್ರಿಲ್‌ ತಿಂಗಳಲ್ಲೇ ಮಳೆಯಾಗಿತ್ತು. ಹೀಗಾಗಿ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್‌ ದಾಟಿರಲಿಲ್ಲ. ಮಳೆ ಸುರಿದು ಹಲವು ತಿಂಗಳು ಕಳೆದಿವೆ. ಉಷ್ಣಾಂಶ ಈಗಾಗಲೇ 39 ಡಿಗ್ರಿ ಸೆಲ್ಸಿಯಸ್‌ ಮುಟ್ಟಿದೆ. ಮಳೆ ಬಿದ್ದರಷ್ಟೇ ಉಷ್ಣಾಂಶ ಕಡಿಮೆಯಾಗಬಹುದು’ ಎನ್ನುತ್ತಾರೆ ದಾವಣಗೆರೆ ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ಜಯಣ್ಣ.

ಬೇಸಿಗೆಯಲ್ಲಿ ಹಸಿ ಮೇವು ಕಮರಿದ್ದು ಒಣ ಮೇವು ಮಾತ್ರ ಜಾನುವಾರುಗಳಿಗೆ ಆಸರೆಯಾಗಿದೆ. ಆದರೂ, ಮೇವು ಬ್ಯಾಂಕ್‌, ಗೋಶಾಲೆ ತೆರೆಯುವ ಅನಿವಾರ್ಯತೆ ಸೃಷ್ಟಿಯಾಗಿಲ್ಲ ಎನ್ನುವುದು ಅಧಿಕಾರಿಗಳ ಅಭಿಪ್ರಾಯ. ಆದರೆ ಈ ಕಾರ್ಯ ಆರಂಭಿಸಬೇಕಾದ ಕಂದಾಯ ಇಲಾಖೆಯ ಅಧಿಕಾರಿಗಳು ಚುನಾವಣಾ ಕಾರ್ಯದಲ್ಲಿ ಮಗ್ನರಾಗಿ, ಮೇವು ಬ್ಯಾಂಕ್‌ ಆರಂಭಿಸಲು ತಯಾರಿಕೆಯನ್ನೇ ಮಾಡಿಲ್ಲ. ಮುಂದಿನ ದಿನಗಳಲ್ಲಿ ಮೇವು ಕೊರತೆ ಎದುರಾದರೆ ಯುದ್ಧಕಾಲದಲ್ಲಿ ಶಸ್ತ್ರಭ್ಯಾಸ ಮಾಡಬೇಕಾಗುತ್ತದೆ.

‘ಸದ್ಯಕ್ಕೆ ಒಣಮೇವಿನಿಂದ ಪರಿಸ್ಥಿತಿ ನಿಭಾಯಿಸ ಬಹುದು. ಆದರೆ, ಇದೇ ಪರಿಸ್ಥಿತಿ ಮುಂದುವರಿದರೆ, ಮೇವಿನ ಸಮಸ್ಯೆ ತಲೆದೋರಬಹುದು. ಇದೆಲ್ಲವನ್ನೂ ಅವಲೋಕಿಸಿ, ಸರ್ಕಾರವು ಮುಂದಿನ ದಿನಗಳಲ್ಲಿ ಗೋಶಾಲೆ ತೆರೆಯಲು ಅಥವಾ ಮೇವಿನ ಬ್ಯಾಂಕ್ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳುತ್ತದೆ’ ಎಂದು ಕಲಬುರಗಿ ಜಿಲ್ಲೆಯ ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಡಾ. ಯಲ್ಲಪ್ಪ ಇಂಗಳೆ ಹೇಳುತ್ತಾರೆ.

‘ಅತಿಯಾದ ತಾಪಮಾನದಿಂದ ಜಾನುವಾರುಗಳಲ್ಲಿ ಹಾಲು ಕೊಡುವ ಪ್ರಮಾಣ ಕಡಿಮೆಯಾಗುತ್ತದೆ. ಗರ್ಭಪಾತ ಸಂಭವಿಸುವ ಸಾಧ್ಯತೆ ಇರುತ್ತದೆ. ನಿರ್ಜಲೀಕರಣ, ದೈಹಿಕ ಒತ್ತಡ ಸಮಸ್ಯೆಯಿಂದ ಆರೋಗ್ಯದಲ್ಲಿ ಏರುಪೇರಾಗಬಹುದು. ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತೆ ಪಶುವೈದ್ಯರ ಸಲಹೆ, ಸೂಚನೆ ಪಾಲಿಸಬೇಕು’ ಎನ್ನುತ್ತಾರೆ ಅವರು.

ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಮುಖ್ಯವಾಗಿ ಧಾರ್ಮಿಕ ಪ್ರವಾಸೋದ್ಯಮಕ್ಕೆ ಪ್ರಸಿದ್ಧ. ಏರುತ್ತಿರುವ ತಾಪಮಾನದ ಕಾರಣ ಜನರು ಹೈರಾಣಾಗುತ್ತಿದ್ದಾರೆ. ಧಗೆಯನ್ನು ಸಹಿಸಿಕೊಂಡೆ ಅವರು ಬರುತ್ತಿದ್ದಾರೆ. ಕರಾವಳಿ ಭಾಗದ ಬಹುತೇಕ ಎಲ್ಲಾ ದೇವಸ್ಥಾನಗಳಲ್ಲಿ ಊಟೋಪಚಾರ, ನೀರು– ನೆರಳಿನ ಸೌಲಭ್ಯಗಳಿರುವ ಕಾರಣದಿಂದ ಪ್ರವಾಸಿಗರಿಗೆ ಅಷ್ಟು ಸಮಸ್ಯೆ ಇಲ್ಲ ಎನ್ನಬಹುದು. ಆದರೂ ಬಿಸಿಲು ಪ್ರವಾಸಿಗರನ್ನು ಹೈರಾಣು ಮಾಡಿದೆ.

ಉಡುಪಿ ಹಾಗೂ ದಕ್ಷಿಣ ಕನ್ನಡದ ಜಿಲ್ಲೆಯ ಕೆಲವು ಬೀಚ್‌ಗಳಲ್ಲಿ ಬಿಸಿಲಿನಿಂದ ರಕ್ಷಣೆಗೆ ಅಲ್ಲಲ್ಲಿ ಕೊಡೆಯ ಆಕಾರದಲ್ಲಿ ಗುಡಿಸಲುಗಳನ್ನು ನಿರ್ಮಿಸಲಾಗಿದೆ. ಕೆಲ ಕಡೆ ಕುಡಿಯುವ ಶುಚಿಯಾದ ನೀರಿನ ವ್ಯವಸ್ಥೆ ಇಲ್ಲದಿರುವುದು ಪ್ರವಾಸಿಗರನ್ನು ಕಾಡುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದ್ದು, ಅಲ್ಲಿನ ಪ್ರವಾಸೋದ್ಯಮದ ಮೇಲೆ ಪರಿಣಾಮ ಉಂಟು ಮಾಡಿದೆ. ವಾರಾಂತ್ಯದಲ್ಲಿ ತಣ್ಣನೆಯ ಹವಾಮಾನವನ್ನು ಅರಸಿಕೊಂಡು ಜಿಲ್ಲೆಗೆ ಬರುತ್ತಿದ್ದವರ ಸಂಖ್ಯೆ ಈಗ ಇಳಿಕೆಯಾಗಿದೆ.

ಬಳ್ಳಾರಿ, ಹೊಸಪೇಟೆ, ಕಲಬುರಗಿ, ವಿಜಯಪುರ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಹಂಪಿ, ತುಂಗಭದ್ರಾ ಜಲಾಶಯ, ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನ, ದರೋಜಿ ಕರಡಿಧಾಮ ಮುಂತಾದ ಕಡೆ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ.

ಹಸಿರೀಕರಣಕ್ಕೆ ಪೂರಕವಾಗಿ ಅರಣ್ಯ ಇಲಾಖೆಯು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯೋಜನೆಗಳನ್ನು ಜಾರಿಗೊಳಿಸಿದರೂ ಬಿಸಿಲಿನ ತಾಪವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ.

‘ಒಂದು ಎಕರೆ ಅರಣ್ಯಕ್ಕೆ ಸಾವಿರ ಎಕರೆ ಸಸಿ ನೆಡುವಿಕೆ ಸಮ ಆಗುವುದಿಲ್ಲ. ಹೊಸದಾಗಿ ಗಿಡಗಳನ್ನು ನೆಡುವುದರ ಜತೆಗೆ ಇರುವ ಅರಣ್ಯದ ಒಂದಿಂಚೂ ಪ್ರದೇಶವೂ ನಾಶವಾಗದ ಹಾಗೆ ಜತನದಿಂದ ಕಾಯ್ದುಕೊಳ್ಳಬೇಕು. ಆಗ ಮಾತ್ರ ಪರಿಸರ ಉಳಿಯತ್ತದೆ’ ಎಂದು ಕೊಡಗು ವೃತ್ತ ಹಾಗೂ ಅರಣ್ಯ ಕಾರ್ಯಪಡೆಯ ಡಿಸಿಎಫ್ ಪೂವಯ್ಯ ಹೇಳುತ್ತಾರೆ.

ಅಭಿವೃದ್ಧಿಯ ನೆಪದಲ್ಲಿ ಪ್ರತಿ ವರ್ಷವೂ ಅರಣ್ಯ ನಾಶವಾಗುತ್ತಿದೆ. ಇದು ತಪ್ಪಬೇಕು. ಆಗ ಮಾತ್ರ ಕಾಲಕಾಲಕ್ಕೆ ಮಳೆ ಸುರಿಯುತ್ತದೆ ಎನ್ನುವುದು ಪರಿಸರವಾದಿಗಳ ಅಭಿಪ್ರಾಯ.

ಕೊಪ್ಪಳ ತಾಲ್ಲೂಕಿನ ಹಂದ್ರಾಳ ಗ್ರಾಮದ ಜನ ಕುಡಿಯಲು ಕೆರೆಯಂಗಳದ ರಾಡಿ ನೀರನ್ನೇ ಆಶ್ರಯಿಸಿದ್ದಾರೆ
ಕೊಪ್ಪಳ ತಾಲ್ಲೂಕಿನ ಹಂದ್ರಾಳ ಗ್ರಾಮದ ಜನ ಕುಡಿಯಲು ಕೆರೆಯಂಗಳದ ರಾಡಿ ನೀರನ್ನೇ ಆಶ್ರಯಿಸಿದ್ದಾರೆ –ಪ್ರಜಾವಾಣಿ ಚಿತ್ರ/ಭರತ್‌ ಕಂದಕೂರು

‘ಅತಿ ನೇರಳೆ ಕಿರಣ ಅಪಾಯಕಾರಿ’

ಕಳೆದ ನಾಲ್ಕು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಿಸಿಲು ತೀವ್ರವಾಗಿದೆ. ಲಾ ನಿನಾ (ಸಾಗರ ಮತ್ತು ವಾತಾವರಣದ ವಿದ್ಯಮಾನ) ಪರಿಸ್ಥಿತಿ ಕೊನೆಗೊಂಡು. ಜೂನ್‌ ವೇಳೆಗೆ ಎಲ್‌ ನಿನೊ (ಸಾಗರದಲ್ಲಿ ಉಷ್ಣಾಂಶ ಅಧಿಕಗೊಳ್ಳುವುದು) ವಿದ್ಯಮಾನ ಮರುಕಳಿಸುವ ಸಾಧ್ಯತೆಯಿದೆ. ಇದಕ್ಕೆ ಪೂರಕ ವಾತಾವರಣ ಈಗಲೇ ಸೃಷ್ಟಿಯಗಿದ್ದು, ವಾತಾವರಣದಲ್ಲಿ ಬಿಸಿ ಗಾಳಿ ಬೀಸುತ್ತಿದೆ. ಸೂರ್ಯನ ಅತಿನೇರಳೆ ಕಿರಣಗಳಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.  

ಡಾ. ಜಿ.ಎಸ್.ಶ್ರೀನಿವಾಸ ರೆಡ್ಡಿ, ಹವಾಮಾನ ತಜ್ಞ

ಮಕ್ಕಳು, ವೃದ್ಧರ ಬಗ್ಗೆ ಕಾಳಜಿಯಿರಲಿ’

ಅತಿಯಾದ ತಾಪಮಾನವು ಮೇ ತಿಂಗಳ ಅಂತ್ಯದವರೆಗೆ ಇರುವ ಕಾರಣ ಜನರು ಹೆಚ್ಚು ಎಚ್ಚರದಿಂದ ಇರಬೇಕು.  ಆಗಾಗ್ಗೆ ನೀರು ಕುಡಿಯುತ್ತಿರಬೇಕು. ಜೊತೆಗೆ ಮಜ್ಜಿಗೆ, ಮೊಸರನ್ನು ಹೆಚ್ಚು ಸೇವಿಸಬೇಕು. ಮಧ್ಯಾಹ್ನ 11ರಿಂದ ಸಂಜೆ 4 ರವರೆಗೆ ಹೊರಗೆ ಹೋಗುವುದು ಕಡಿಮೆ ಮಾಡಬೇಕು. ಅನಿವಾರ್ಯವಾದರೆ, ತಲೆಗೆ ಟೋಪಿ ಧರಿಸಿ, ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಬೇಕು. ಬಿಗಿ ಅಥವಾ ಸಿಂಥೆಟಿಕ್ ಬದಲು ಸಡಿಲ, ತೆಳು ಬಣ್ಣದ ಹತ್ತಿಯ ಬಟ್ಟೆಗಳನ್ನು ಧರಿಸುವುದು ಸೂಕ್ತ. ದೇಹವು ನಿರ್ಜಲೀಕರಣ ಆಗದಂತೆ ತಡೆಯಬೇಕು. ಮಕ್ಕಳು ಮತ್ತು ವೃದ್ಧರತ್ತ ವಿಶೇಷ ಕಾಳಜಿ ವಹಿಸಬೇಕು. ಅವರು ವಿನಾಕಾರಣ ಬಿಸಿಲಿನಲ್ಲಿ ಹೋಗುವುದು ತಡೆಯಬೇಕು.

ಡಾ. ಅಂಬಾರಾಯ ರುದ್ರವಾಡಿ, ಜಿಲ್ಲಾ ಶಸ್ತ್ರಚಿಕಿತ್ಸಕ, ಜಿಮ್ಸ್, ಕಲಬುರಗಿ

‘ಉದ್ಯೋಗ ಸ್ಥಳದಲ್ಲಿ ನೀರಿನ ಸೌಲಭ್ಯ ಕಲ್ಪಿಸಿ’

ಕೃಷಿ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಬಿಸಿಲಿನಲ್ಲಿ ಕೆಲಸ ಮಾಡುವಾಗ ಎಚ್ಚರವಹಿಸಬೇಕು ಎಂದು ವೈದ್ಯರು ಹೇಳುತ್ತಾರೆ. ಆದರೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಮಿಕರು ಕೆಲಸ ಮಾಡುವ ಸ್ಥಳದಲ್ಲಿ ಅಧಿಕಾರಿಗಳು ನೀರಿನ ಸೌಲಭ್ಯ ಕಲ್ಪಿಸುವುದಿಲ್ಲ. ನೆರಳಿನ ವ್ಯವಸ್ಥೆ ಕೂಡ ಮಾಡುವುದಿಲ್ಲ. ಕಾರ್ಮಿಕರು ಬೆಳಿಗ್ಗೆ 6ಕ್ಕೆ ಉದ್ಯೋಗಕ್ಕೆ ಹೊರಟರೆ, ಮಧ್ಯಾಹ್ನ 4ರವರೆಗೆ ಬಿಸಿಲಲ್ಲೇ ಕೆಲಸ ಮಾಡಬೇಕಾದ ಸ್ಥಿತಿಯಿದೆ. ಕೂಲಿ ಕಾರ್ಮಿಕರ ಹಿತದೃಷ್ಟಿಯಿಂದ ಬೇಸಿಗೆ ಅವಧಿಯಲ್ಲಿ ಕೆಲಸಗಳನ್ನು ಅದಷ್ಟು ಮಧ್ಯಾಹ್ನ 12ರೊಳಗೆ ಮುಗಿಯುವಂತೆ ನೋಡಿಕೊಳ್ಳಲು ಕೋರಿದ್ದೇವೆ. ಬರೀ ಕೆಲಸಗಳಾದರೆ ಸಾಲದು, ಕಾರ್ಮಿಕರ ಆರೋಗ್ಯಸ್ಥಿತಿಯನ್ನು ಅಧಿಕಾರಿಗಳು ಗಮನಿಸಬೇಕು.

ಶರಣಬಸಪ್ಪ ಮಮಶೆಟ್ಟಿ, ಅಧ್ಯಕ್ಷ, ಕರ್ನಾಟಕ ಪ್ರಾಂತ ರೈತ ಸಂಘ, ಕಲಬುರಗಿ

ಏಪ್ರಿಲ್‌ ಅಂತ್ಯದೊಳಗೆ ಮಳೆ ಆಗದಿದ್ದರೆ ನೀರಿನ ‘ರೇಶನಿಂಗ್‌’ ಮಾಡಬೇಕಾಗಬಹುದು. ನೀರನ್ನು ಮಿತವಾಗಿ ಬಳಸಬೇಕು. ಅಭಾವ ತಡೆಯಲು ಎಚ್ಚರ ವಹಿಸಬೇಕು.

-ಜಯಾನಂದ ಅಂಚನ್‌, ಮೇಯರ್‌, ಮಂಗಳೂರು ಮಹಾನಗರ ಪಾಲಿಕೆ

ಬೇಸಿಗೆ ವೇಳೆ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗುವ ಸಮಸ್ಯೆ ಮುಂಡಗೋಡ, ಹಳಿಯಾಳದಲ್ಲಿದೆ. ಇದಕ್ಕಾಗಿ ಪರೀಕ್ಷೆ ನಡೆಸುತ್ತಿದ್ದೇವೆ

-ಡಾ.ಅನ್ನಪೂರ್ಣ ವಸ್ತ್ರದ್, ಜಿಲ್ಲಾ ಆರೋಗ್ಯಾಧಿಕಾರಿ, ಉತ್ತರ ಕನ್ನಡ

(ಪೂರಕ ಮಾಹಿತಿ: ಬ್ಯೂರೋಗಳಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT