ಮಂಗಳವಾರ, ಮೇ 18, 2021
30 °C

ಆಳ–ಅಗಲ | ಖಿನ್ನತೆ ಸಾಕು, ಉತ್ಸಾಹ ಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಎಲ್ಲ ಚಟುವಟಿಕೆಗಳನ್ನು ಬದಿಗೊತ್ತಿ ಕೋವಿಡ್‌ ಪಿಡುಗಿನ ವಿರುದ್ಧ ಹೋರಾಡುವುದೇ ಮುಖ್ಯವಾಗಿರುವ ಈ ಹೊತ್ತು ಜನರಲ್ಲಿ ಮಾನಸಿಕ ತುಮುಲಕ್ಕೆ ಕಾರಣವಾಗಿದೆ. ಈ ತುಮುಲವು ಖಿನ್ನತೆಗೆ ತಿರುಗಿ ಯುವ ಜನರಲ್ಲಿ ಉತ್ಸಾಹವೇ ಮರೆಯಾಗುವುದು ಅಪಾಯಕಾರಿ ಸ್ಥಿತಿ. ಕೋವಿಡ್‌ ಪಿಡುಗು ತಾತ್ಕಾಲಿಕ. ಕೋವಿಡ್‌ಗಿಂತ ಮೊದಲಿನ ಹಾಗೆ ಉಲ್ಲಾಸದಿಂದ ನಲಿದಾಡಲು ಈಗ ಸ್ವಲ್ಪ ತೊಡಕುಗಳು ಇರಬಹುದು. ಆದರೆ, ಹುರುಪಿನಿಂದ ತೊಡಗಿಸಿಕೊಳ್ಳಬಹುದಾದ ದಾರಿಗಳು ಹಲವಿವೆ. ಹಾಗಾಗಿ, ಕೋವಿಡ್‌ ಜತೆಗೆ ಖಿನ್ನತೆಯ ವಿರುದ್ಧವೂ ಹೋರಾಡಿ ಜೀವನೋತ್ಸಾಹ ಮುಕ್ಕಾಗದಂತೆ ನೋಡಿಕೊಳ್ಳಬೇಕು ಎಂದು ಮನಶ್ಶಾಸ್ತ್ರಜ್ಞರು ಹೇಳುತ್ತಾರೆ.

ವಿಶ್ವದ ಯುವ ಜನರ ಪೈಕಿ ಇಬ್ಬರಲ್ಲಿ ಒಬ್ಬರು ಖಿನ್ನತೆಗೆ ಗುರಿಯಾಗಿದ್ದಾರೆ ಎಂದು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಒ) ಹೇಳಿದೆ. ಐಎಲ್‌ಒ‌, ವಿಶ್ವದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಪತ್ತೆಯಾಗಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ್ದವರಲ್ಲಿ ಶೇ 16.7ರಷ್ಟು ಜನರು ಖಿನ್ನತೆಯಿಂದ ತೀವ್ರವಾಗಿ ಬಳಲುತ್ತಿದ್ದಾರೆ. ಕೋವಿಡ್‌ ಹರಡುವುದಕ್ಕೆ ಮೊದಲೇ ಯುವಜನರಲ್ಲಿ ಖಿನ್ನತೆ ಇತ್ತು. ಕೋವಿಡ್‌ ಬಂದ ನಂತರ ಖಿನ್ನತೆಯ ಪ್ರಮಾಣ ಹೆಚ್ಚಾಗಿದೆ ಎಂದು ಐಎಲ್‌ಒ‌ ಹೇಳಿದೆ.

‘ಕೋವಿಡ್‌ನ ಕಾರಣದಿಂದ ಜಗತ್ತಿನ ಎಲ್ಲೆಡೆ ದೈನಂದಿನ ಜೀವನ ಅಸ್ತವ್ಯಸ್ತವಾಗಿದೆ. ಕೋವಿಡ್‌ನಿಂದಾಗಿ ಯುವಜನರ ಶಿಕ್ಷಣ ಮತ್ತು ಉದ್ಯೋಗಕ್ಕೆ ಕುತ್ತು ಬಂದಿದೆ. ಅವರ ಮೂಲಭೂತ ಹಕ್ಕುಗಳಿಗೂ ಧಕ್ಕೆಯಾಗಿದೆ. ಇದನ್ನು ಪರಿಹರಿಸಲು ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಯುವಜನರು ತೀವ್ರ ಖಿನ್ನತೆಗೆ ಗುರಿಯಾಗುವ ಅಪಾಯವಿದೆ. ಇದು ದೀರ್ಘಾವಧಿಯವರೆಗೂ ಕಾಡಲಿದೆ’ ಎಂದು ಐಎಲ್‌ಒ ಎಚ್ಚರಿಕೆ ನೀಡಿದೆ.

112 ದೇಶಗಳಲ್ಲಿ ಆನ್‌ಲೈನ್‌ನ ವಿವಿಧ ಪ್ಲಾಟ್‌ಫಾರಂಗಳ ಮೂಲಕ ಸಮೀಕ್ಷೆ ನಡೆಸಲಾಗಿದೆ. 18ರಿಂದ 29 ವರ್ಷ ವಯಸ್ಸಿನ ಯುವಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ ಪ್ರತಿ ಇಬ್ಬರಲ್ಲಿ ಒಬ್ಬರು, ಖಿನ್ನತೆಗೆ ಒಳಗಾಗಿದ್ದಾರೆ. ಹೀಗೆ ಖಿನ್ನತೆಗೆ ಒಳಗಾದವರಲ್ಲಿ ಯುವಕರಿಗಿಂತ ಯುವತಿಯರ ಪ್ರಮಾಣ ಹೆಚ್ಚು. ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಯುವತಿಯರಲ್ಲಿ ಶೇ 53.4ರಷ್ಟು ಮಂದಿಗೆ ಖಿನ್ನತೆ ಇರುವುದು ಪತ್ತೆಯಾಗಿದೆ. ಯುವಕರಲ್ಲಿ ಈ ಪ್ರಮಾಣ ಶೇ 46.5ರಷ್ಟು. ಖಿನ್ನತೆಯಿಂದ ತೀವ್ರವಾಗಿ ಬಳಲುತ್ತಿರುವವರಲ್ಲಿಯೂ ಯುವತಿಯರ ಪ್ರಮಾಣ ಹೆಚ್ಚು. ಸಮೀಕ್ಷೆಗೆ ಒಳಗಾದವರಲ್ಲಿ ಶೇ 18.3ರಷ್ಟು ಯುವತಿಯರ ಖಿನ್ನತೆಯ ಸಮಸ್ಯೆ ಗಂಭೀರವಾಗಿದೆ. ಯುವಕರಲ್ಲಿ ಹೀಗೆ ಬಳಲುತ್ತಿರುವವರ ಪ್ರಮಾಣ ಶೇ 14.8ರಷ್ಟಿದೆ.

ಕೋವಿಡ್‌ನ ಕಾರಣದಿಂದ ಉದ್ಯೋಗದಲ್ಲಿ ಆಗಿರುವ ನಷ್ಟ ಖಿನ್ನತೆಗೆ ಪ್ರಮುಖ ಕಾರಣ ಎಂದು ಗುರುತಿಸಲಾಗಿದೆ. ಖಾಸಗಿ ವಲಯದಲ್ಲಿ ಕೋಟ್ಯಂತರ ಉದ್ಯೋಗಗಳು ನಷ್ಟವಾಗಿವೆ. ಬಡ ದೇಶಗಳು ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಈ ಪ್ರಮಾಣ ಹೆಚ್ಚು. ಹೋಟೆಲ್, ಪ್ರವಾಸೋದ್ಯಮ, ಬ್ಯಾಂಕಿಂಗ್‌, ಟ್ಯಾಕ್ಸಿ, ಒಳಾಂಗಣ ವಿನ್ಯಾಸ, ಇವೆಂಟ್ ಮ್ಯಾನೇಜ್‌ಮೆಂಟ್‌ ಸೇರಿದಂತೆ ಸೇವಾ ವಲಯದಲ್ಲಿ ಭಾರಿ ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗಿದೆ. ಹೀಗೆ ಉದ್ಯೋಗ ಕಳೆದುಕೊಂಡವರಲ್ಲಿ ಶೇ 38ರಷ್ಟು ಮಂದಿ, ತಮ್ಮ ಭವಿಷ್ಯ ಏನಾಗುತ್ತದೆ ಎಂಬುದರ ಬಗ್ಗೆ ಏನೂ ತಿಳಿದಿಲ್ಲ ಎಂದು ಹೇಳಿದ್ದಾರೆ.

ಶಾಲಾ–ಕಾಲೇಜುಗಳು ಮುಚ್ಚಿರುವುದೂ ಖಿನ್ನತೆ ಹೆಚ್ಚಾಗಲು ಕಾರಣ ಎಂದು ಸಮೀಕ್ಷಾ ವರದಿ ಹೇಳಿದೆ. ಕೋವಿಡ್‌ನ ಕಾರಣದಿಂದ ಬಹುತೇಕ ಎಲ್ಲಾ ಶಾಲಾ–ಕಾಲೇಜುಗಳು ಮುಚ್ಚಿವೆ. ಹಲವೆಡೆ ಆನ್‌ಲೈನ್‌ ಶಿಕ್ಷಣ ಆರಂಭವಾಗಿದೆಯಾದರೂ ಎಲ್ಲರಿಗೂ ಇದರ ಲಭ್ಯತೆ ಇಲ್ಲ. ಸಮೀಕ್ಷೆಯಲ್ಲಿ ಭಾಗವಹಿಸಿದ್ದವರಲ್ಲಿ ಶೇ 22ರಷ್ಟು ಯುವಜನರು, ತಮ್ಮ ಶಿಕ್ಷಣದ ಭವಿಷ್ಯ ಏನಾಗುತ್ತದೋ ಎಂಬುದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಶೇ 13ರಷ್ಟು ಯುವಜನರು ಆನ್‌ಲೈನ್‌ ಶಿಕ್ಷಣಕ್ಕೆ ನೋಂದಾಯಿಸಿಕೊಳ್ಳಲೂ ಸಾಧ್ಯವಾಗಿಲ್ಲ ಎಂದಿದ್ದಾರೆ. ಶೇ 12ರಷ್ಟು ಯುವಜನರು ಮಾತ್ರವೇ ತಮ್ಮ ಶಿಕ್ಷಣ ಸರಿಯಾಗಿ ನಡೆಯುತ್ತಿದೆ ಎಂದು ಉತ್ತರಿಸಿದ್ದಾರೆ. 

18–29 ವರ್ಷ ವಯಸ್ಸಿನ ಈ ಸಮುದಾಯವನ್ನು ಖಿನ್ನತೆಗೆ ಗುರಿಮಾಡುವುದು ಅತ್ಯಂತ ಅಪಾಯಕಾರಿ. ಇದರ ಪರಿಣಾಮವನ್ನು ವಿಶ್ವವು ದೀರ್ಘಕಾಲದವೆರೆಗೆ ಎದುರಿಸಬೇಕಾಗುತ್ತದೆ. ಈ ಸಮುದಾಯವನ್ನು ಖಿನ್ನತೆಯಿಂದ ಹೊರತರಲು ಮತ್ತು ಖಿನ್ನತೆಗೆ ಒಳಗಾಗದಂತೆ ತಡೆಯಲು ತುರ್ತಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ತಜ್ಞರು ಹೇಳಿದ್ದಾರೆ ಎಂದು ಸಮೀಕ್ಷಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆಧಾರ: ಐಎಲ್‌ಒ‌, ‘ಯುವಜನರ ಶಿಕ್ಷಣ, ಉದ್ಯೋಗ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೋವಿಡ್‌–19 ಪರಿಣಾಮಗಳು’ ಸಮೀಕ್ಷಾ ವರದಿ

***
ಸಕಾಲಿಕ ಚಿಕಿತ್ಸೆಯೇ ಪರಿಹಾರ
ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವೂ ಮುಖ್ಯ. ಆತಂಕ, ಒತ್ತಡ ಮತ್ತು ಖಿನ್ನತೆಯಿಂದ ಮಾನಸಿಕ ಆರೋಗ್ಯ ಹದಗೆಡುತ್ತದೆ. ಎಂಥ ಸಂದರ್ಭದಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಸಕಾರಾತ್ಮಕ ಚಿಂತನೆ ಮತ್ತು ಕ್ರಿಯಾಶೀಲತೆ ಮಾನಸಿಕ ಆರೋಗ್ಯದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.

ಮಾರ್ಚ್‌ನಿಂದ ಇಲ್ಲಿಯವರೆಗೆ ದೂರವಾಣಿ ಮೂಲಕ ರಾಜ್ಯದ 4.5 ಲಕ್ಷ ಮಂದಿಯ ಜತೆ ಸಮಾಲೋಚನೆ ನಡೆಸಲಾಗಿದೆ. ಶೇ 20–30ರಷ್ಟು ಜನರಲ್ಲಿ ಒತ್ತಡ, ಆತಂಕ, ಖಿನ್ನತೆಯ ಲಕ್ಷಣಗಳು ಕಂಡುಬಂದಿವೆ. ಹಾಗಂತ ಗಂಭೀರ ಮನೋರೋಗ ಎಂದು ಹೇಳಲಾಗದು. ಬೇಜಾರು, ಒಂಟಿತನ ಕಾಡಿದರೆ ಮನೋವೈದ್ಯರನ್ನು ಕಾಣಿ. ಸಮಾಲೋಚನೆ ಮತ್ತು ಸಕಾಲಿಕ ಚಿಕಿತ್ಸೆಯಿಂದ ಎಂಥ ಮನೋರೋಗವನ್ನಾದರೂ ಗೆಲ್ಲಬಹುದು.
–ಡಾ. ರಜನಿ ಪಿ., ಉಪ ನಿರ್ದೇಶಕರು, ಮಾನಸಿಕ ಆರೋಗ್ಯ ವಿಭಾಗ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರು

**
ಸಕಾರಾತ್ಮಕ ಚಿಂತನೆ ಅಗತ್ಯ
ಕೊರೊನಾ ತಂದೊಡ್ಡಿರುವ ಆರೋಗ್ಯ, ಉದ್ಯೋಗ ಮತ್ತು ಆರ್ಥಿಕ ಸಮಸ್ಯೆಗಳಿಂದ ಯುವ ಸಮೂಹ ಮಾನಸಿಕ ಒತ್ತಡ, ಖಿನ್ನತೆಗೆ ಒಳಗಾಗುತ್ತಿದೆ. ನಕಾರಾತ್ಮಕ ಯೋಚನೆ ಮತ್ತು ಚಿಂತೆಯಿಂದಾಗಿ ಹೆಚ್ಚಿನ ಯುವಕ–ಯುವತಿಯರು ‘ಸೈಕೊ ಸೊಮಾಟಿಕ್‌ ಡಿಸಾರ್ಡರ್‌’ಎಂಬ ಮನೋವ್ಯಾಧಿಯಿಂದ ಬಳಲುತ್ತಿದ್ದಾರೆ. ಇದು ಮಾನಸಿಕವಾಗಿ ದುರ್ಬಲರಾಗಿರುವವರಲ್ಲಿ ಕಂಡು ಬರುವ ಮನುಷ್ಯ ಸಹಜ ಮನಸ್ಥಿತಿ. ಸಮಸ್ಯೆಗಳನ್ನು ಯಾರೊಂದಿಗೂ ಹಂಚಿಕೊಳ್ಳದೆ ಕೊರಗುವುದರಿಂದ ಖಿನ್ನತೆಗೆ ಜಾರುತ್ತಾರೆ.  ಅಂತರ್ಜಾಲ, ಸಾಮಾಜಿಕ ಜಾಲತಾಣ, ವಾಟ್ಸ್ ಆ್ಯಪ್‌ ಸುದ್ದಿಗಳಿಂದ ದೂರವಿರುವುದು ಒಳಿತು.

– ಡಾ. ರಾಜಣ್ಣ ಬಿ.ಎಂ., ಮನೋಸಾಮಾಜಿಕ ತಜ್ಞರು, ತುಮಕೂರು

**
ಪರ್ಯಾಯ ಮಾರ್ಗ ತೋರಿಸಿ
ಕೋವಿಡ್‌–19 ಸಾಂಕ್ರಾಮಿಕ ರೋಗದಿಂದಾಗಿ ಆರೋಗ್ಯದ ಜತೆಗೆ ಬದುಕು ಮತ್ತು ಭವಿಷ್ಯದ ಬಗ್ಗೆ ಎಲ್ಲೆಡೆ ಅನಿಶ್ಚಿತ ವಾತಾವರಣ ಮನೆಮಾಡಿದೆ. ಕುಟುಂಬದ ಹಿರಿಯರಿಗೆ ಆರೋಗ್ಯದ ಚಿಂತೆಯಾದರೆ, ಮನೆಯ ಯಜಮಾನನಿಗೆ ಉದ್ಯೋಗ ನಷ್ಟದ ಭೀತಿ. ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣದ ಒತ್ತಡ, ಯುವಕ–ಯುವತಿಯರಿಗೆ ಭವಿಷ್ಯದ ಭಯ. ಆರು ತಿಂಗಳಲ್ಲಿ ಕೊರೊನಾ ಒಂದು ಕುಟುಂಬದ ಎಲ್ಲರನ್ನೂ ಒಟ್ಟೊಟ್ಟಿಗೆ ಒತ್ತಡ ಮತ್ತು ಆತಂಕಕ್ಕೆ ದೂಡಿದ ಪರಿಣಾಮವಿದು.

18–29 ವರ್ಷದೊಳಗಿನ ಯುವಸಮೂಹ ಸಹಜವಾಗಿ ಭವಿಷ್ಯ, ಉದ್ಯೋಗದ ಬಗ್ಗೆ ಚಿಂತಿತವಾಗಿದೆ. ಕೊರೊನಾದಿಂದ ಕಂಗೆಟ್ಟಿರುವ ಅವರಲ್ಲಿ ವಿಶ್ವಾಸ ತುಂಬುವಲ್ಲಿ ನಮ್ಮ ರಾಜಕೀಯ ಮತ್ತು ವೈದ್ಯಕೀಯ ನಾಯಕತ್ವ ವಿಫಲವಾಗಿದೆ. ಸರ್ಕಾರದ ಪ್ಯಾಕೇಜ್‌ಗಳು ಪರಿಹಾರವಲ್ಲ. ಕೌಶಲ ವೃದ್ಧಿ, ಕಸುಬುಗಳಿಗೆ ಉತ್ತೇಜನ ನೀಡಬೇಕು. ಕಷ್ಟ ಕಾಲದಲ್ಲೂ ಧೃತಿಗೆಡದೆ ಸವಾಲು ಎದುರಿಸಲು ವಿಶ್ವಾಸ ತುಂಬಬೇಕು. ಬದುಕಲು ಪರ್ಯಾಯ ಮಾರ್ಗ ಕಂಡುಕೊಳ್ಳಲು ಪ್ರೇರೇಪಿಸಬೇಕು. ಭಯ, ಭೀತಿಯಿಂದ ಮುಕ್ತವಾದ  ಜನಸಮೂಹವನ್ನು ಹೊಸ ಸನ್ನಿವೇಶಕ್ಕೆ ಸಿದ್ಧಪಡಿಸಬೇಕು.

–ಡಾ. ಆ. ಶ್ರೀಧರ, ಮನೋವಿಜ್ಞಾನಿ

**
ನಿರೂಪಣೆ: ಗವಿಸಿದ್ಧಪ್ಪ ಬ್ಯಾಳಿ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು