ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ | ಪಶ್ಚಿಮ ಘಟ್ಟ: ಪರಿಸರ ಸೂಕ್ಷ್ಮ ಪ್ರದೇಶ ಉದ್ದೇಶವೇ ಪ‍್ರಶ್ನಾರ್ಹ

Last Updated 4 ಆಗಸ್ಟ್ 2022, 21:15 IST
ಅಕ್ಷರ ಗಾತ್ರ

ಮಾಧವ ಗಾಡ್ಗೀಳ್‌ ಹಾಗೂ ಕಸ್ತೂರಿರಂಗನ್ ಅವರು ವರದಿ ಕೊಡುವ ಮೊದಲು ಸ್ಥಳೀಯರ ಅಭಿಪ್ರಾಯ ಆಲಿಸುವ ಗೋಜಿಗೇ ಹೋಗಿಲ್ಲ. ಎಲ್ಲಿಯೂ ಸಮೀಕ್ಷೆಯನ್ನೂ ನಡೆಸಿಲ್ಲ. ಬಹುರಾಷ್ಟ್ರೀಯ ಕಂಪನಿಗಳಿಂದ ಅನುದಾನ ಪಡೆಯುವ ಸ್ವಯಂ ಸೇವಾ ಸಂಸ್ಥೆಗಳು ಸಿದ್ಧಪಡಿಸಿದ ವರದಿಯನ್ನಷ್ಟೇ ಅವರು ನೀಡಿದರು. ಇಲ್ಲವೆಂದರೆ ಆರೇಳು ರಾಜ್ಯಗಳ, ಸಹಸ್ರಾರು ಚದರ ಕಿ.ಮೀ ಹರಡಿಕೊಂಡ ಪಶ್ಚಿಮಘಟ್ಟದ ಪಾರಿಸರಿಕ ವೈವಿಧ್ಯದ ಬಗ್ಗೆ ಕೇವಲ 18 ತಿಂಗಳಲ್ಲಿ ವರದಿ ನೀಡಲು ಗಾಡ್ಗೀಳ್‌ ಅವರಿಗೆ ಹೇಗೆ ಸಾಧ್ಯವಾಯಿತು?

ಪಶ್ಚಿಮಘಟ್ಟ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವಂತೆ ಶಿಫಾರಸು ಮಾಡಿದ ವರದಿಗಳನ್ನು ಜಾರಿಗೊಳಿಸಲು ಮುಂದಾದ ಉದ್ದೇಶವೇ ಪ್ರಶ್ನಾರ್ಹ. ಜಗತ್ತಿನ ಎಂಟನೇ ಪ್ರಮುಖ ಜೀವವೈವಿಧ್ಯ ತಾಣ (ಹಾಟ್ ಸ್ಪಾಟ್‌) ಎಂದು ಪ್ರತಿಪಾದಿಸುತ್ತಾ ಈ ಪ್ರದೇಶವನ್ನು ಯುನೆಸ್ಕೊ ಪಟ್ಟಿಗೆ ಸೇರಿಸಲಾಯಿತು. ಇದರ ಹಿಂದೆ ಜನರ ಕಾಳಜಿ, ಪರಿಸರದ ಕಾಳಜಿಯಿಲ್ಲ; ಯಾರ ಪ್ರತಿಷ್ಠೆಗೋಸ್ಕರ ಇದನ್ನು ಸೇರ್ಪಡೆ ಮಾಡಲಾಯಿತೋ ಗೊತ್ತಿಲ್ಲ; ಒಮ್ಮೆ ಯುನೆಸ್ಕೊ ಪಟ್ಟಿಗೆ ಸೇರಿಸಿದ ಮೇಲೆ ಆ ಪ್ರದೇಶ ಅಥವಾ ಸ್ಮಾರಕ/ಕಟ್ಟಡಗಳ ಯಥಾಸ್ಥಿತಿಯನ್ನು ಕಾಪಾಡಬೇಕು ಎಂಬ ನಿಯಮವಿದೆ.ಅಲ್ಲಿಂದಲೇ ಸಮಸ್ಯೆಗಳು ಶುರುವಾದವು.

ಪಶ್ಚಿಮಘಟ್ಟವು ಜೀವವೈವಿಧ್ಯ ತಾಣ, ಮಳೆಕಾಡಿನ ಪ್ರದೇಶ ಎಂಬುದೆಲ್ಲವೂ ಸರಿ. ಇಲ್ಲಿನ ಪರಿಸರ ಉಳಿಸಲು ಇಲ್ಲಿ ವಾಸಿಸುವವರು ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಕುದುರೆಮುಖದ ಅಪಾರ ಪ್ರಮಾಣದ ಕಬ್ಬಿಣದ ಅದಿರನ್ನು ವಿದೇಶಕ್ಕೆ ಸಾಗಿಸುವಾಗ ಪರಿಸರದ ಕಾಳಜಿ ಬರಲಿಲ್ಲವೇ? ಅದನ್ನು ವಿರೋಧಿಸಿ ತುಂಗಾಮೂಲ ಉಳಿಸಿ ಹೋರಾಟವನ್ನು ನಾವೆಲ್ಲ ಒಗ್ಗೂಡಿ ನಡೆಸಿದ್ದಲ್ಲದೇ, ಕೊನೆಗೆ ಗಣಿಗಾರಿಕೆಗೆ ಅವಕಾಶ ದೊರೆಯದಂತೆ ನೋಡಿಕೊಂಡೆವು. ಪಶ್ಚಿಮ ಘಟ್ಟವನ್ನು ಉಳಿಸಲು ಇಂತಹ ಅನೇಕ ಹೋರಾಟಗಳು ನಡೆದಿವೆ; ನಡೆಯುತ್ತಲೇ ಇವೆ.

ದೇಶದ ಒಂದಿಷ್ಟು ಪ್ರದೇಶವನ್ನು ಮ್ಯೂಸಿಯಂ ರೀತಿ ಇಟ್ಟು, ಅಲ್ಲಿ ಪರಿಸರ ಉಳಿದರೆ ಇಡೀ ಜಗತ್ತಿನ ಪರಿಸರವೇ ಉಳಿಯುತ್ತದೆ ಎಂದು ವಾದಿಸಿದಂತಿದೆ ಮಾಧವ ಗಾಡ್ಗೀಳ್‌, ಕಸ್ತೂರಿರಂಗನ್‌ ಅವರು ನೀಡಿರುವ ವರದಿಗಳ ಸಾರಾಂಶ. ಹಾಗೆ ನೋಡಿದರೆ ಪ್ರಪಂಚದ ಎಲ್ಲ ಪ್ರದೇಶಗಳೂ ಪರಿಸರ ಸೂಕ್ಷ್ಮ ಪ್ರದೇಶವೇ ಆಗಿದ್ದು, ಅವೆಲ್ಲವನ್ನೂ ಸಂರಕ್ಷಣೆ ಮಾಡಬೇಕಾಗಿದೆ.

ಒಂದು ಕೇಂದ್ರವನ್ನು ಇಟ್ಟುಕೊಂಡು ಉಳಿದ ಪ್ರದೇಶ ಬಿಟ್ಟರೆ ಹೇಗೆ? ಮಲೆನಾಡು ಭಾಗದಲ್ಲಿ 13 ರಾಷ್ಟ್ರೀಯ ಉದ್ಯಾನಗಳು, ಅನೇಕ ವನ್ಯಜೀವಿಧಾಮಗಳು, ಅರಣ್ಯ ಯೋಜನೆ, ಹುಲಿ ಯೋಜನೆ, ಆನೆ ಕಾರಿಡಾರ್‌ಗಳೇ ತುಂಬಿಕೊಂಡಿವೆ. ಸೂಕ್ಷ್ಮ ಪ್ರದೇಶ ಎಂದು ಘೋಷಿಸಲು ಉದ್ದೇಶಿಸಿದ ಪ್ರದೇಶಗಳಿಗಿಂತ ಹೆಚ್ಚಿನ ಪ್ರದೇಶವನ್ನು ಸಂರಕ್ಷಣೆ ಮಾಡಲಾಗಿದೆ. ಅರಣ್ಯ ಸಂರಕ್ಷಣೆ, ವನ್ಯ ಜೀವಿ ಸಂರಕ್ಷಣೆ ಕಾಯ್ದೆಗಳ ಅನ್ವಯವೇ ಇವನ್ನೆಲ್ಲ ಅನುಷ್ಠಾನ ಮಾಡಲಾಗಿದ್ದು, ಇದರಿಂದ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ; ಅನುಭವಿಸುತ್ತಿದ್ದಾರೆ.

ಜಾಗತಿಕ ತಾಪಮಾನ ಹಾಗೂ ಹವಾಮಾನ ವೈಪರೀತ್ಯಗಳಿಗೆ ಕಾರಣವಾಗಿರುವುದು ಪಶ್ಚಿಮಘಟ್ಟದಲ್ಲಿರುವ ಜನರಲ್ಲ. ಮುಂದುವರಿದ ದೇಶಗಳ ಆರ್ಥಿಕ ನಡೆ ಹಾಗೂ ವೈಭವೋಪೇತ ಜೀವನಶೈಲಿ. ವಿದ್ಯುತ್‌, ಸಿಮೆಂಟ್, ಹವಾನಿಯಂತ್ರಣ ಸೌಲಭ್ಯ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಬಳಸುತ್ತಿರುವವರು ನಗರವಾಸಿ ಜನರು. ಈ ನಗರವಾಸಿಗಳಿಗೆ 24 ಗಂಟೆ ನಿರಂತರ ವಿದ್ಯುತ್ ಬೇಕು, ಓಡಾಡಲು ಪೆಟ್ರೋಲ್–ಡೀಸೆಲ್ ಸಿಗುತ್ತಲೇ ಇರಬೇಕು, ಮನೆಗಳಲ್ಲಿ ಮಾತ್ರ ಎ.ಸಿಯಲ್ಲದೇ ಕಾರು, ಬಸ್‌, ಮೆಟ್ರೊ, ವಿಮಾನ, ರೈಲು, ಥಿಯೇಟರ್‌, ಹೋಟೆಲ್‌ ಹೀಗೆ ಎಲ್ಲ ಕಡೆ ಎ.ಸಿ ಇರಲೇಬೇಕು.

ಮೋಜು ಭರಿತ ಜೀವನ ಶೈಲಿಗೆ ಯಾವುದೇ ಅಡಚಣೆ ಇರಬಾರದು. ಅಭಿವೃದ್ಧಿ ಹೆಸರಿನಲ್ಲಿ ಸುಖಸಮೃದ್ಧಿಯನ್ನು ನಗರದ ಜನರು ಅನುಭವಿಸುತ್ತಲೇ ಇರಬೇಕು. ಅವರ ನಾಗಾಲೋಟದ ಜೀವನಕ್ಕೆ ಯಾವುದೇ ನಿರ್ಬಂಧ ಇಲ್ಲ; ಇವ್ಯಾವುದಕ್ಕೂ ಕಡಿವಾಣ ಹಾಕದೇ ಪಶ್ಚಿಮಘಟ್ಟದ ಒಂದಿಷ್ಟು ಪ್ರದೇಶಕ್ಕೆ ನಿರ್ಬಂಧ ಹಾಕಿದರೆ ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಬರಲಿದೆ ಎಂಬುದಕ್ಕೆ ಏನು ಖಾತರಿ ಕೊಡುವಿರಿ?

ಕಸ್ತೂರಿರಂಗನ್ ವರದಿಯೇ ಅವೈಜ್ಞಾನಿಕ ಹಾಗೂ ಅವಾಸ್ತವಿಕ. ಒಂದು ಚದರ ಕಿ.ಮೀ. ಪ್ರದೇಶದಲ್ಲಿ 100ಕ್ಕಿಂತ ಕಮ್ಮಿ ಜನ ಇದ್ದರೆ ಅದು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. ಅದರ ಜತೆಗೆ ರಾಸಾಯನಿಕ ಬಳಸಬೇಡಿ, ಮರಳು ತೆಗೆಯಬೇಡಿ ಎಂದೆಲ್ಲ ನಿರ್ಬಂಧ ಹಾಕಲಾಗಿದೆ. ಮಲೆನಾಡಿಗರಿಗೆ ಅಡಿಕೆಯೇ ಆರ್ಥಿಕ ಬೆಳೆಯಾಗಿದೆ. ಅಡಿಕೆಗೆ ಬರುವ ಕೊಳೆರೋಗ ತಪ್ಪಿಸಲು ಕೋಲ್ಮನ್ ಅವರು ಬೋಡೋ ಮಿಶ್ರಣವನ್ನು ಕಂಡು ಹಿಡಿದಿದ್ದರು. ಕಾಫರ್‌ ಸಲ್ಫೇಟ್ ಮಿಶ್ರಣವಾದ ಇದು ಅಡಿಕೆಯನ್ನು, ಬೆಳೆಗಾರರನ್ನು ರಕ್ಷಿಸಿದೆ. ಇದಕ್ಕೆ ಪರ್ಯಾಯವನ್ನೇ ಸರ್ಕಾರ ಕಂಡು ಹಿಡಿದಿಲ್ಲ.

ಔಷಧ ಹೊಡೆಯದೇ ಇದ್ದರೆ ಅಡಿಕೆಯನ್ನು ಉಳಿಸಿಕೊಳ್ಳುವುದಾದರೂ ಹೇಗೆ? ನನಗೆ ಎರಡು ಗ್ರಾಮಗಳಲ್ಲಿ ತೋಟ ಇದೆ. ಒಂದು ಗ್ರಾಮ ಸೂಕ್ಷ್ಮ ವಲಯ ವ್ಯಾಪ್ತಿಯಲ್ಲಿದ್ದರೆ, ಮತ್ತೊಂದು ತೋಟ ವಲಯದ ವ್ಯಾಪ್ತಿಯಿಂದ ಹೊರಗಿದೆ. ತೋಟಕ್ಕೆ ಬೋಡೋ ಮಿಶ್ರಣ ಹೊಡೆದರೆ 10 ಕ್ವಿಂಟಲ್ ಅಡಿಕೆ ಸಿಗುತ್ತದೆ. ಇಲ್ಲದಿದ್ದರೆ 5 ಕ್ವಿಂಟಲ್. ಇದು ನನ್ನೊಬ್ಬನ ಕತೆಯಲ್ಲ; ಈ ನಷ್ಟವನ್ನು ಭರಿಸುವುದು ಯಾರು? ಇದಕ್ಕೆ ಸರ್ಕಾರ ಪರಿಹಾರ ಕೊಡುತ್ತದೆ ಎಂದಾದರೆ ಕಸ್ತೂರಿರಂಗನ್‌ ವರದಿಯನ್ನು ಒಪ್ಪಿಕೊಳ್ಳಬಹುದು.

ಮರಳು ಗಣಿಗಾರಿಕೆಯ ವಿಷಯಕ್ಕೆ ಬಂದರೆ ಮತ್ತೊಂದು ಯಡವಟ್ಟು. ಮರಳು ಗಣಿಗಾರಿಕೆಯಿಂದ ದೇಶದ ಯಾವುದೋ ಮೂಲೆಯಲ್ಲಾದ ಅನಾಹುತಗಳನ್ನು ನಮ್ಮ ಮೇಲೂ ಆರೋಪಿಸಿ ಅದಕ್ಕೆ ನಿರ್ಬಂಧ ಹೇರಲಾಗಿದೆ. ಮರಳು ತೆಗೆಯಬಾರದು ಎಂಬುದರ ಪರಿಣಾಮ ಏನಾಗಿದೆ ಎಂದರೆ ಹೊಳೆ, ಹಳ್ಳಗಳು ಸಂಪೂರ್ಣ ಕಣ್ಮರೆಯಾಗಿ, ಮಳೆಗಾಲದಲ್ಲಿ ಮಾತ್ರ ಪ್ರವಾಹ ಉಕ್ಕೇರುವಂತಾಗಿದೆ. ಸರ್ಕಾರದ ಬಳಿ ಕೆರೆ ಹೂಳು ತೆಗೆಯಲು ಕಾರ್ಯಕ್ರಮ, ಅನುದಾನ ಇದೆ. ನದಿಯ ಹೂಳು ತೆಗೆಯುವ ಯೋಜನೆ ಎಲ್ಲಿದೆ? ಮರಳು ತೆಗೆಯದೇ ಇರುವುದರಿಂದ ನದಿಗಳ ಸ್ವರೂಪವೇ ಬದಲಾಗುತ್ತಿದ್ದು, ಗುಂಡಿಗಳೇ ತುಂಬಿಕೊಂಡಿವೆ.

ಕೊಡಗಿನಲ್ಲಿ ಭೂ ಕುಸಿತಕ್ಕೆ ರೆಸಾರ್ಟ್‌, ಮಾನವನ ಹಸ್ತಕ್ಷೇಪ ಕಾರಣವಾಗಿದ್ದು, ಪಶ್ಚಿಮ ಘಟ್ಟ ಉಳಿಯಬೇಕಾದರೆ ವರದಿಯನ್ನು ಅನುಷ್ಠಾನ ಮಾಡಲೇಬೇಕು ಎಂದು ಕೆಲವು ವರ್ಷಗಳ ಹಿಂದೆ ಮಾಧವ ಗಾಡ್ಗೀಳ್‌ ಅವರಿಂದ ಹೇಳಿಕೆ ಕೊಡಿಸಲಾಯಿತು. ಆದರೆ, 120 ವರ್ಷಗಳ ಮಳೆ– ಅನಾಹುತದ ಅಧ್ಯಯನ ಮಾಡಿದರೆ ಬೇರೆಯದೇ ಸತ್ಯ ಗೋಚರವಾಗುತ್ತದೆ. 1924ರ ಜುಲೈ 23ರಂದು ಕೇರಳದಲ್ಲಿ ಮಹಾಪ್ರವಾಹ ಸಂಭವಿಸಿತ್ತಲ್ಲದೇ, ದೊಡ್ಡ ಅನಾಹುತವೂ ಘಟಿಸಿತ್ತು. ಬೃಹತ್ ಗುಡ್ಡವೊಂದು ಮುಲ್ಲ ಪೆರಿಯಾರ್‌ ನದಿಯ ಮೇಲೆ ಕುಸಿದಿದ್ದಲ್ಲದೇ, ಒಂದು ಅಣೆಕಟ್ಟೆ ಒಡೆದು ಹೋಗಿತ್ತು.

ಸಾವಿರಾರು ಜನ ಸತ್ತಿದ್ದಲ್ಲದೇ, ಭೂ ಸಮಾಧಿಯಾಗಿದ್ದರು. 1924ರ ಜುಲೈ 26ರಂದು ಕರ್ನಾಟಕದಲ್ಲೂ ಅಂತಹ ಪ್ರವಾಹ ಬಂದು, ಭೂ ಕುಸಿತವಾಗಿತ್ತು. ಆಗ ಯಾವುದೇ ರೆಸಾರ್ಟ್‌– ಮಾನವನ ಹಸ್ತಕ್ಷೇಪಗಳು ಇರಲಿಲ್ಲ. ಪಶ್ಚಿಮಘಟ್ಟವೇ ಬಂಡೆಯ ಮೇಲಿನ ಮಣ್ಣಿನ ಬೃಹತ್ ರಾಶಿ. ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಮಳೆ ಬಂದರೆ ಭೂಮಿಗೆ ಧಾರಣಾ ಶಕ್ತಿ ಇಲ್ಲ. ಇಲ್ಲಿನ ಮಣ್ಣು ಸ್ಪಾಂಜಿನ ರೀತಿಯಿದ್ದು, ನೀರನ್ನು ಹಿಡಿದುಕೊಂಡು ಹೊರಬಿಡುವ ಗುಣ ಹೊಂದಿದೆ. ಈ ಸಾಮಾನ್ಯ ಜ್ಞಾನ ಅರ್ಥಮಾಡಿಕೊಳ್ಳದವರು ಎಂತಹುದೋ ವರದಿ ಮುಂದಿಟ್ಟು, ಪಶ್ಚಿಮ ಘಟ್ಟದ ಮೇಲೆ ಹಸ್ತಕ್ಷೇಪವಲ್ಲ; ಆಕ್ರಮಣವನ್ನೇ ಮಾಡುತ್ತಿದ್ದಾರೆ.

ಪ್ರಾಣಿ–ಪಕ್ಷಿ, ಮರಗಿಡಗಳ ಜತೆಗೆ ಮನುಷ್ಯ ಕೂಡ ಜೀವವೈವಿಧ್ಯದ ಭಾಗವೇ. ಹೀಗಾಗಿ, ಇಡೀ ಪಶ್ಚಿಮಘಟ್ಟವನ್ನು ಜನರಹಿತವಾಗಿಸುವ ಯತ್ನವೇ ಜೀವ–ಪರಿಸರ ವಿರೋಧಿಯಾದುದು.

ಮಾಧವ ಗಾಡ್ಗೀಳ್‌ ಹಾಗೂ ಕಸ್ತೂರಿರಂಗನ್ ಅವರು ವರದಿ ಕೊಡುವ ಮೊದಲು ಸ್ಥಳೀಯರ ಅಭಿಪ್ರಾಯ ಆಲಿಸುವ ಗೋಜಿಗೇ ಹೋಗಿಲ್ಲ. ಎಲ್ಲಿಯೂ ಸಮೀಕ್ಷೆಯನ್ನೂ ನಡೆಸಿಲ್ಲ. ಬಹುರಾಷ್ಟ್ರೀಯ ಕಂಪನಿಗಳಿಂದ ಅನುದಾನ ಪಡೆಯುವ ಸ್ವಯಂ ಸೇವಾ ಸಂಸ್ಥೆಗಳು ಸಿದ್ಧಪಡಿಸಿದ ವರದಿಯನ್ನಷ್ಟೇ ಅವರು ನೀಡಿದರು. ಇಲ್ಲವೆಂದರೆ ಆರೇಳು ರಾಜ್ಯಗಳ, ಸಹಸ್ರಾರು ಚದರ ಕಿ.ಮೀ ಹರಡಿಕೊಂಡ ಪಶ್ಚಿಮಘಟ್ಟದ ಪಾರಿಸರಿಕ ವೈವಿಧ್ಯದ ಬಗ್ಗೆ ಕೇವಲ 18 ತಿಂಗಳಲ್ಲಿ ವರದಿ ನೀಡಲು ಗಾಡ್ಗೀಳ್‌ ಅವರಿಗೆ ಹೇಗೆ ಸಾಧ್ಯವಾಯಿತು?

ಸಣ್ಣದೊಂದು ಉದಾಹರಣೆ ಹೇಳುತ್ತೇನೆ. ಹುಲಿಗಳೇ ಇಲ್ಲದ ನಮ್ಮೂರಿನ ಹುಲಿಯೋಜನೆಗೆ ಅಮೆರಿಕದ ಎಕ್ಸಾನ್ ಮೊಬಿಲಿ ಎಂಬ ಪೆಟ್ರೋಲಿಯಂ ಕಂಪನಿ ನೆರವು ನೀಡುತ್ತಿದೆ. ಸಮುದ್ರ ಮಾಲಿನ್ಯ ಹಾಗೂ ಜೀವವೈವಿಧ್ಯದ ಧಕ್ಕೆಗೆ ದೊಡ್ಡ ಪಾಲು ನೀಡುತ್ತಿರುವ ಪೆಟ್ರೋಲಿಯಂ ರಿಫೈನರಿ ಕಂಪನಿಯು ಕುದುರೆಮುಖದ ಹುಲಿ ಯೋಜನೆಗೆ ದುಡ್ಡು ಕೊಡುತ್ತದೆ. ಅದರ ನಿರ್ದೇಶನದ ಮೇಲೆ ಇಲ್ಲಿ ನಿಯಮ–ಯೋಜನೆಗಳು ರೂಪುಗೊಳ್ಳುತ್ತವೆ. ಅಮೆರಿಕದಲ್ಲಿ ಹುಲಿಗಳೇ ಇಲ್ಲ; ಹಾಗಿದ್ದರೂ ಎಕ್ಸಾನ್ ಮೊಬಿಲಿ ಕಂಪನಿಯು ಹುಲಿಯನ್ನು ತನ್ನ ಲಾಂಛನವಾಗಿ ಮಾಡಿಕೊಂಡಿದೆ. ಆ ಉದ್ದೇಶಕ್ಕಷ್ಟೇ ಅದು ದುಡ್ಡು ಕೊಡುತ್ತಿಲ್ಲ. ತಾನು ವಿಶ್ವದಾದ್ಯಂತ ಬೇರೆ ಬೇರೆ ಕಡೆಗಳಲ್ಲಿ ಮಾಡಿದ ಪಾಪವನ್ನು ಪಶ್ಚಿಮ ಘಟ್ಟದ ಜನ ತೊಳೆಯಬೇಕು ಎಂಬ ಉದ್ದೇಶಕ್ಕೆ ಈ ದುಡ್ಡನ್ನು ಕೊಡುತ್ತಿದೆ. ಈ ವಾಸ್ತವ ಪಶ್ಚಿಮಘಟ್ಟವಾಸಿಗಳಿಗೆ ಅರ್ಥವಾಗಬೇಕಿದೆ.

ಜನರನ್ನು ಕಾಡಿನಿಂದ ಹೊರಹಾಕಿದರೆ ಏನಾಗುತ್ತದೆ ಎಂಬುದನ್ನು ಬಂಡೀಪುರ, ನಾಗರಹೊಳೆಯ ನಿದರ್ಶನಗಳು ತೋರಿಸಿಕೊಟ್ಟಿವೆ. ಬಂಡೀಪುರ, ನಾಗರಹೊಳೆಯಲ್ಲಿ ಆರಂಭಿಕ ಹಂತದಲ್ಲಿ ಬೆಂಕಿ ಕಾಣಿಸಿಕೊಂಡಾಗ ಅಲ್ಲಿ ಯಾರೂ ಇರಲಿಲ್ಲ. ಹೀಗಾಗಿ, ಬೆಂಕಿ ಕೆನ್ನಾಲಗೆ ಚಾಚುತ್ತಲೇ ಹೋಯಿತು.21 ಸಾವಿರ ಎಕರೆಗೂ ಹೆಚ್ಚಿನ ಕಾಡು ಸುಟ್ಟು ನಾಶವಾಗಿ ಹೋಯಿತು. ಅಲ್ಲಿ ಮೂಲನಿವಾಸಿಗಳು ಇದ್ದಿದ್ದರೆ ಬೆಂಕಿ ಹಬ್ಬಲು ಬಿಡುತ್ತಿರಲಿಲ್ಲ. ಇದು ತಥಾಕಥಿತ ಪರಿಸರವಾದಿಗಳಿಗೆ ಅರ್ಥವಾಗಬೇಕಿದೆ.

ನಗರ ಪ‍್ರದೇಶದ ಜನರು, ಅಭಿವೃದ್ಧಿ ಹೆಸರಿನ ಲೋಲುಪತೆ–ಸೌಲಭ್ಯಗಳಿಂದಾದ ಪಾಪವನ್ನು ಪಶ್ಚಿಮಘಟ್ಟವಾಸಿಗಳು ಏಕೆ ತೊಳೆಯಬೇಕು? ನಿಮ್ಮ ಪಾಪವನ್ನು ನೀವೇ ತೊಳೆದುಕೊಳ್ಳಿ ಎಂದು ನಗರವಾಸಿಗಳಿಗೆ ಪಶ್ಚಿಮಘಟ್ಟವಾಸಿಗಳು ಬಲವಾಗಿ ಹೇಳಬೇಕಾದ ಕಾಲ ಇದಾಗಿದೆ.

ಲೇಖಕ: ಪರಿಸರ ಹೋರಾಟಗಾರ

ಪ್ರತಿಕ್ರಿಯೆಗಳು

‘ಸಂತ್ರಸ್ತರಿಗೆ ತೊಂದರೆ ಕೊಡುತ್ತಿರುವುದು ಎಷ್ಟು ಸರಿ?’

ಪಶ್ಚಿಮಘಟ್ಟಗಳಲ್ಲಿ ಮಾನವಶತಮಾನಗಳಿಂದ ಪರಿಸರ ಸಮತೋಲನ ಕಾಪಾಡಿಕೊಂಡು ಬದುಕುತ್ತಾ ಬಂದಿದ್ದಾನೆ. ಆದರೆ, ಸರ್ಕಾರಗಳು ಪರಿಸರ ಸೂಕ್ಷ್ಮತೆಯನ್ನು ಅರಿತುಕೊಳ್ಳದೇ ಹಲವಾರು ವಿದ್ಯುತ್ ಮತ್ತು ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಕಾಡು ನಾಶಮಾಡಿ ಅಲ್ಲಿರುವ ಜೀವಸಂಕುಲಗಳ ವಿನಾಶಕ್ಕೆ ಕಾರಣವಾಗಿವೆ.ಈಗ ‘ಊರು ಕೊಳ್ಳೆಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ’ ಎನ್ನುವ ಹಾಗೆ ಪರಿಸರ ಸೂಕ್ಷ್ಮಪ್ರದೇಶ ಎಂದು ಘೋಷಣೆ ಮಾಡಲು ಹೊರಟಿದೆ. ಇಲ್ಲಿಯೇ ತಲೆತಲಾಂತರಗಳಿಂದ ಮೇಲೆ ತಿಳಿಸಿದ ಯೋಜನೆಗಳಿಂದ ಸಂತ್ರಸ್ತರಾಗಿ ಬದುಕುತ್ತಿರುವವರಿಗೆ ತೊಂದರೆ ಕೊಡುತ್ತಿರುವುದು ಎಷ್ಟು ಸರಿ? ಹಲವು ಆದಿವಾಸಿ ಜನಾಂಗಗಳು ಇಲ್ಲಿನ ಅರಣ್ಯ ಉತ್ಪನ್ನಗಳನ್ನೇ ಅವಲಂಬಿಸಿ ಬದುಕುತ್ತಿದ್ದಾರೆಂಬ ಸೂಕ್ಷ್ಮತೆಯನ್ನು ಸಮಿತಿಯ ಸದಸ್ಯರು ಅರಿಯದಾದುದು ವಿಪರ್ಯಾಸವೇ ಸರಿ.

-ಕೃಷ್ಣಮೂರ್ತಿ ಹಿಳ್ಳೋಡಿ,ಶಿವಮೊಗ್ಗ

****

‘ಸೂಕ್ತ, ಅತ್ಯವಶ್ಯಕ’

ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸುವುದು ತುಂಬಾ ಸೂಕ್ತ ಮತ್ತು ಅತ್ಯವಶ್ಯಕ. ಏಕೆಂದರೆ ಮಾನವನ ಚಟಕ್ಕೆ, ದುರಾಸೆಗೆ, ಕೆಟ್ಟ ಬಯಕೆಗೆ ಈಗಾಗಲೇ ಪ್ರಕೃತಿ ಸಾಕಷ್ಟು ಹಾನಿಗೊಳಗಾಗಿದೆ. ಇದು ಹೀಗೆಯೇ ಮುಂದುವರಿದರೆ ಪ್ರಕೃತಿಯ ವಿಕೋಪಕ್ಕೆ ಸಕಲ ಜೀವ ಸಂತತಿಯ ಸರ್ವನಾಶ ಕಟ್ಟಿಟ್ಟ ಬುತ್ತಿ. ಆದಕಾರಣ ಸರ್ಕಾರ ಯಾವ ಒತ್ತಡಕ್ಕೂ ಮಣಿಯದೆ ಕೂಡಲೇ ಈ ಘೋಷಣೆ ಮಾಡುವುದು ಸ್ವಾಗತಾರ್ಹವಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT