ಮಂಗಳವಾರ, ಡಿಸೆಂಬರ್ 6, 2022
24 °C

ಆಳ–ಅಗಲ: ಅಂಗೈಯಲ್ಲಿ ಅತಿ ವೇಗದ ಅಂತರ್ಜಾಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Stock Image

5ಜಿ ತಂತ್ರಜ್ಞಾನ ಎಂದರೇನು?

5ಜಿ ಎಂಬುದು ಐದನೇ ತಲೆಮಾರಿನ ಸೆಲ್ಯುಲಾರ್ ತಂತ್ರಜ್ಞಾನ. ವೇಗ ಮತ್ತು ಹೆಚ್ಚು ವಿಶ್ವಾಸಾರ್ಹ ಸಂವಹನವನ್ನು ಈ ತಂತ್ರಜ್ಞಾನ ಒದಗಿಸುತ್ತದೆ. 5ಜಿ ಗರಿಷ್ಠ ನೆಟ್‌ವರ್ಕ್ ಡೇಟಾ ವೇಗವು ಸೆಕೆಂಡಿಗೆ 2ರಿಂದ 20 ಗಿಗಾಬೈಟ್ (ಜಿಬಿಪಿಎಸ್) ಇರಲಿದೆ ಎಂದು ಸರ್ಕಾರದ ಸಮಿತಿ ವರದಿ ಅಭಿಪ್ರಾಯಪಟ್ಟಿದೆ.

ಈಗ ದೇಶದಲ್ಲಿರುವ 4ಜಿ ತಂತ್ರಜ್ಞಾನದ ಸರಾಸರಿ ವೇಗ ಪ್ರತಿ ಸೆಕೆಂಡಿಗೆ 6ರಿಂದ 7 ಮೆಗಾಬೈಟ್ (ಎಮ್‌ಬಿಪಿಎಸ್).  ಮುಂದುವರಿದ ದೇಶಗಳಲ್ಲಿ 25 ಎಮ್‌ಬಿಪಿಎಸ್‌ ಇದೆ. ಆದರೆ 5ಜಿ ಅಸೀಮ ವೇಗಕ್ಕೆ ಹೆಸರಾದ ತಂತ್ರಜ್ಞಾನ. ದೇಶದಲ್ಲಿ 5ಜಿ ತಂತ್ರಜ್ಞಾನದ ಸೇವೆ ದೊರಕಿದಲ್ಲಿ, ‘8ಕೆ’ ಸಿನಿಮಾ ಹಾಗೂ ಗ್ರಾಫಿಕ್ ಗೇಮ್‌ಗಳನ್ನು ಕೆಲವೇ ಸೆಕೆಂಡ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದಕ್ಕೆ 5ಜಿ ತಂತ್ರಜ್ಞಾನ ಬೆಂಬಲಿಸುವ ಉಪಕರಣಗಳು ಬೇಕು.

ಉಪಯೋಗ ಎಲ್ಲೆಲ್ಲಿ?

5ಜಿ ತಂತ್ರಜ್ಞಾನವು ಮೊಬೈಲ್‌ ಬಳಕೆಗೆ ಮಾತ್ರವಲ್ಲದೆ, ಬೇರೆಯೂ ಸಾಕಷ್ಟು ಕೊಡುಗೆ ನೀಡಲಿದೆ. ಟೆಲಿ ಮೆಡಿಸಿನ್, ಟೆಲಿ ಎಜುಕೇಷನ್, ಚಾಲಕರಹಿತ ಕಾರು, ಡ್ರೋನ್ ಅಧರಿತ ಕೃಷಿ ನಿಗಾ ವ್ಯವಸ್ಥೆ ಮೊದಲಾದ ಕ್ಷೇತ್ರಗಳಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ. ಇಂಟರ್ನೆಟ್ ಆಫ್ ಥಿಂಗ್ಸ್‌ನಂತಹ (ಐಒಟಿ) ಉದಯೋನ್ಮುಖ ತಂತ್ರಜ್ಞಾನಗಳ ಬೆನ್ನೆಲುಬಾಗಿ ರೂಪುಗೊಳ್ಳುವ ನಿರೀಕ್ಷೆಯಿದೆ.

ಭಾರತೀಯ ನೆಟ್‌ವರ್ಕ್‌ಗಳಲ್ಲಿ 5ಜಿ ಪ್ರವೇಶಿಸಿದ ನಂತರವೂ ಹಿಂದಿನ ತಲೆಮಾರಿನ ಮೊಬೈಲ್ ತಂತ್ರಜ್ಞಾನಗಳಾದ 2ಜಿ, 3ಜಿ ಮತ್ತು 4ಜಿ ಬಳಕೆಯಲ್ಲಿ ಮುಂದುವರಿಯುತ್ತವೆ. ಅವುಗಳ ಸೇವೆ ನಿಲ್ಲಲು ಇನ್ನೂ 10 ಅಥವಾ ಹೆಚ್ಚಿನ ವರ್ಷಗಳು ತೆಗೆದುಕೊಳ್ಳಬಹುದು.

ಎಲ್‌ಟಿಇ ಮೊಬೈಲ್ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್‌ನ ಮೇಲ್ದರ್ಜೆಗೇರಿಸಿದ ಆವೃತ್ತಿಯೇ 5ಜಿ ತಂತ್ರಜ್ಞಾನ. ಮೂರು ಬ್ಯಾಂಡ್‌ಗಳಲ್ಲಿ ಇದು ಕೆಲಸ ಮಾಡುತ್ತದೆ. ಕಡಿಮೆ, ಮಧ್ಯಮ ಮತ್ತು ಅಧಿಕ ತರಂಗಾಂತರಗಳಿದ್ದು, ಮೂರೂ ಅದರದ್ದೇ ಆದ ಉಪಯೋಗ ಮತ್ತು ಮಿತಿಗಳನ್ನು ಹೊಂದಿವೆ.

ಮೂರು ಬ್ಯಾಂಡ್, ಮೂರು ಉಪಯೋಗ

ಕಡಿಮೆ ಬ್ಯಾಂಡ್ ತರಂಗಾಂತರವು ಇಂಟರ್ನೆಟ್ ಮತ್ತು ಡೇಟಾ ವಿನಿಮಯದ ವ್ಯಾಪ್ತಿ ಮತ್ತು ವೇಗದ ದೃಷ್ಟಿಯಿಂದ ಉತ್ತಮ ಎನಿಸಿದೆ. ಇದರ ಗರಿಷ್ಠ ವೇಗವನ್ನು 100 ಎಂಬಿಪಿಎಸ್‌ಗೆ ಸೀಮಿತಗೊಳಿಸಲಾಗಿದೆ. ಅತಿಹೆಚ್ಚು ಇಂಟರ್ನೆಟ್ ವೇಗ ಅಗತ್ಯವಿಲ್ಲದ ಮೊಬೈಲ್ ಬಳಕೆದಾರರಿಗೆ ಇದನ್ನು ನೀಡಬಹುದು. ಉದ್ಯಮದ ವಿಶೇಷ ಅಗತ್ಯಗಳಿಗೆ ಇದು ಸೂಕ್ತವಲ್ಲ.

ಮಧ್ಯಮ ಬ್ಯಾಂಡ್ ತರಂಗಾಂತರವು ಕಡಿಮೆ ಬ್ಯಾಂಡ್‌ಗೆ ಹೋಲಿಸಿದರೆ ಅಧಿಕ ವೇಗವನ್ನು ಹೊಂದಿದೆ. ಆದರೆ ವ್ಯಾಪ್ತಿ ಮತ್ತು ಸಂಕೇತಗಳ ನುಗ್ಗುವಿಕೆಯ (ಪೆನಿಟ್ರೇಷನ್) ವಿಷಯದಲ್ಲಿ ಮಿತಿಗಳಿವೆ. ಈ ಬ್ಯಾಂಡ್ ಅನ್ನು ಕೈಗಾರಿಕೆಗಳಲ್ಲಿ ಬಳಸಬಹುದು. ನಿರ್ದಿಷ್ಟ ಉದ್ಯಮದ ಅಗತ್ಯಗಳಿಗೆ ತಕ್ಕಂತೆ ರೂಪಿಸಬಹುದು.

ಅಧಿಕ ಬ್ಯಾಂಡ್ ತರಂಗಾಂತರವು ಹೆಚ್ಚಿನ ವೇಗಕ್ಕೆ ಹೆಸರಾಗಿದೆ. ಆದರೆ ಅತ್ಯಂತ ಸೀಮಿತ ವ್ಯಾಪ್ತಿ ಮತ್ತು ಸಂಕೇತ ನುಗ್ಗುವ ಹೆಚ್ಚು ಸಾಮರ್ಥ್ಯ ಹೊಂದಿದೆ. ಈ ವಿಭಾಗದಲ್ಲಿ ಇಂಟರ್ನೆಟ್ ವೇಗವು 20 ಜಿಬಿಪಿಎಸ್ ಎಂದು ಪರೀಕ್ಷಿಸಲಾಗಿದೆ.  4ಜಿಯಲ್ಲಿ ಗರಿಷ್ಠ ಇಂಟರ್ನೆಟ್ ಡೇಟಾ ವೇಗ 1 ಜಿಬಿಪಿಎಸ್‌ ಮಾತ್ರ.

5ಜಿ: ಭಾರತದ ಪರಿಸ್ಥಿತಿ

ವಾಣಿಜ್ಯ ಉದ್ದೇಶದ 5ಜಿ ಸೇವೆಗಳನ್ನು ಪ್ರಾರಂಭಿಸಲು ಭಾರತ ಇನ್ನೂ ಬಹಳಷ್ಟು ಹಾದಿ ಕ್ರಮಿಸಬೇಕಿದೆ. 2018ರಲ್ಲೇ 5ಜಿ ಸೇವೆಗೆ ಚಾಲನೆ ನೀಡುವ ಉದ್ದೇಶವಿತ್ತು. ಆದರೆ ಎರಡು ವರ್ಷಗಳ ಬಳಿಕ ಸರ್ಕಾರ ಪರೀಕ್ಷೆಗೆ ಅನುಮತಿ ನೀಡಿದೆ. ರಿಲಯನ್ಸ್ ಜಿಯೊ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳು ಸರ್ಕಾರದಿಂದ ಅನುಮತಿ ಕೇಳಿದ್ದವು. ರಿಲಯನ್ಸ್ ಕಂಪನಿಯು 5ಜಿ ಸಂಪರ್ಕಜಾಲವನ್ನು ಕಟ್ಟಲು ಸ್ವದೇಶಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ. ಈ ವರ್ಷಾಂತ್ಯಕ್ಕೆ ಇದು ಸಿದ್ಧವಾಗುವ ಸೂಚನೆಗಳಿವೆ. ಉಳಿದ ದೂರಸಂಪರ್ಕ ಕಂಪನಿಗಳು ವಿದೇಶಿ ಉಪಕರಣ ಹಾಗೂ ತಂತ್ರಜ್ಞಾನವನ್ನು ನೆಚ್ಚಿಕೊಂಡಿವೆ.

ಎಲ್ಲೆಲ್ಲಿ ಇದೆ?

ದಕ್ಷಿಣ ಕೊರಿಯಾ, ಚೀನಾ, ಅಮೆರಿಕ, ಜಪಾನ್, ಎಸ್ಟೋನಿಯಾ, ಸ್ವೀಡನ್ ಸೇರಿದಂತೆ 61 ದೇಶಗಳಲ್ಲಿ 5ಜಿ ಸೇವೆಯು ಜನರು ಹಾಗೂ ವಾಣಿಜ್ಯ ಬಳಕೆಗೆ ಲಭ್ಯವಿದೆ. ಕೆಲವು ದೇಶಗಳಲ್ಲಿ ಸೇವೆ ಲಭ್ಯವಾಗುವ ಕೊನೆಯ ಹಂತದಲ್ಲಿದೆ. ತಾನು ಮೊದಲು ಈ ಸೇವೆ ನೀಡಿದ್ದಾಗಿ ದಕ್ಷಿಣ ಕೊರಿಯಾ ಹೇಳಿಕೊಂಡಿದೆಯಾದರೂ ಅಮೆರಿಕ ಇದನ್ನು ಅಲ್ಲಗಳೆದಿದೆ.

ಪರೀಕ್ಷೆಗೆ ಧುಮುಕಿದ ಸೇವಾ ಸಂಸ್ಥೆಗಳು

5ಜಿ ತಂತ್ರಜ್ಞಾನದ ಪರೀಕ್ಷೆಗೆ ಅನುಮತಿ ನೀಡುತ್ತಿದ್ದಂತೆಯೇ ಖಾಸಗಿ ಕ್ಷೇತ್ರದ ಮೊಬೈಲ್‌ ಸೇವಾ ಸಂಸ್ಥೆಗಳು ಈ ತಂತ್ರಜ್ಞಾನದ ಪರೀಕ್ಷಾರ್ಥ ಸೇವೆ ಆರಂಭಿಸಲು ಮುಂದಾಗಿವೆ.

ರಿಲಯನ್ಸ್‌ ಜಿಯೊ, ಭಾರ್ತಿ ಏರ್‌ಟೆಲ್‌, ವೊಡಾಫೋನ್‌ ಐಡಿಯಾ ಹಾಗೂ ಎಂಟಿಎನ್‌ಎಲ್‌ ಕಂಪನಿಗಳು ದೇಶದಾದ್ಯಂತ ಪ್ರಮುಖ ನಗರಗಳಲ್ಲಿ ಈ ಸೇವೆಯ ಪರೀಕ್ಷಾರ್ಥ ಸೇವೆ ಆರಂಭಿಸಲಿವೆ. ಎಷ್ಟು ಕಾಲದವರೆಗೆ ಪ್ರಯೋಗ ನಡೆಯಲಿದೆ ಎಂಬುದು ಸ್ಪಷ್ಟವಾಗಿಲ್ಲ.

ಈ ವರ್ಷಾಂತ್ಯದಲ್ಲಿ 5 ಜಿ ತರಂಗಾಂತರ ಹರಾಜು ನಡೆಯುವ ಸಾಧ್ಯತೆ ಇದೆ. ಅದಾದನಂತರ ಗ್ರಾಹಕರಿಗೆ ಪೂರ್ಣ ಪ್ರಮಾಣದಲ್ಲಿ ಈ ಸೇವೆ ಸಭ್ಯವಾಗಲಿದೆ.

ತರಂಗಾಂತರ ಕೊರತೆ ಸರಿದೂಗಿಸುವ ಸಮಸ್ಯೆ

5ಜಿ ಮೊಬೈಲ್‌ ಸೇವೆಗೆ ಭಾರತ ಸಿದ್ಧವಾಗುತ್ತಿದ್ದರೂ ಖಾಸಗಿ ಸಂಸ್ಥೆಗಳಿಗೆ ನೀಡಲು ಬೇಕಾದಷ್ಟು ತರಂಗಾಂತರ ಇದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಲಭ್ಯವಿರುವ 300 ಮೆಗಾಹರ್ಟ್ಸ್‌ ತರಂಗಾಂತರದಲ್ಲಿ 25 ಮೆಗಾಹರ್ಟ್ಸ್‌ ತರಂಗಾಂತರವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ನೀಡಬೇಕು. ಉಪಗ್ರಹಗಳ ಬಳಕೆಗಾಗಿ ಇದು ಅಗತ್ಯ.  100 ಮೆಗಾಹರ್ಟ್ಸ್‌ನಷ್ಟು ತರಂಗಾಂತರವನ್ನು ರಕ್ಷಣಾ ಕ್ಷೇತ್ರಕ್ಕೆ ನೀಡಬೇಕಾಗಿದೆ.

ಆದ್ದರಿಂದ, ಹರಾಜಿಗೆ ಲಭ್ಯವಾಗುವುದು 175 ಮೆಗಾಹರ್ಟ್ಸ್‌ ಮಾತ್ರ. ಪ್ರಸಕ್ತ ದೇಶದಲ್ಲಿ ಮೊಬೈಲ್ ಸೇವೆಗಳನ್ನು ನೀಡುತ್ತಿರುವ ಸಂಸ್ಥೆಗಳಲ್ಲಿ ಇದನ್ನು ಹಂಚಿಕೆ ಮಾಡಬಾಕಾಗಿದೆ. ಆದ್ದರಿಂದ ಈ ಸಮಸ್ಯೆಯನ್ನು ಸರ್ಕಾರ ಹೇಗೆ ನಿರ್ವಹಿಸಲಿದೆ ಎಂಬುದು ಪ್ರಶ್ನೆಯಾಗಿದೆ.

‘ನಾವು ಟೆಲಿಕಾಂ ಸೇವಾ ಸಂಸ್ಥೆಗಳ ಜತೆಗೆ ಮಾತುಕತೆ ನಡೆಸುತ್ತಿದ್ದೇವೆ. ಅವುಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಈ ಸಮಸ್ಯೆ ಬಗೆಹರಿಯುತ್ತದೆ ಎಂಬ ವಿಶ್ವಾಸವಿದೆ. ಸ್ವಲ್ಪ ಹೆಚ್ಚಿನ ತರಂಗಾಂತರ ನಮಗೆ ಲಭಿಸುತ್ತದೆಯೇ ಎಂಬ ಬಗ್ಗೆಯೂ ನಾವು ಪ್ರಯತ್ನಗಳನ್ನು ಮಾಡುತ್ತಿದ್ದೇವೆ’ ಎಂದು ಕೇಂದ್ರ ದೂರಸಂಪರ್ಕ ಸಚಿವಾಲಯದ ಕಾರ್ಯದರ್ಶಿ ಹೇಳಿದ್ದಾರೆ.

ನಿರೀಕ್ಷೆಗೆ ತಕ್ಕಷ್ಟು ತರಂಗಾಂತರ ಲಭ್ಯವಾಗದಿದ್ದರೆ, ಸೇವೆಯ ಗುಣಮಟ್ಟ ಕುಸಿಯಬಹುದು ಮತ್ತು ಮಾಡಿರುವ ಹೂಡಿಕೆಗೆ ಅನುಗುಣವಾದ ಗಳಿಕೆ ಬರಲಾರದು ಎಂಬುದು ದೂರಸಂಪರ್ಕ ಸೇವಾ ಸಂಸ್ಥೆಗಳ ಆತಂಕವಾಗಿದೆ.

ದುಬಾರಿ ದರ?

ಪ್ರತಿ ಗಿಗಾಹರ್ಟ್ಸ್‌ ತರಂಗಾಂತರಕ್ಕೆ ₹492 ಕೋಟಿ ನಿಗದಿ ಮಾಡಬಹುದು ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್‌) ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂಬುದನ್ನು ಭಾರತದ ದೂರಸಂಪರ್ಕ ಸೇವಾದಾತರ ಸಂಘಟನೆಯು (ಸಿಒಎಐ) ಟ್ರಾಯ್‌ಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಿದೆ. 

ಭಾರತ ಮತ್ತು ಇತರ ದೇಶಗಳಲ್ಲಿನ ತರಂಗಾಂತರ ದರವನ್ನು ಈ ವರದಿಯಲ್ಲಿ ಹೋಲಿಕೆ ಮಾಡಲಾಗಿದೆ. ಭಾರತದ ದರವು ಆಸ್ಟ್ರಿಯಾದ ದರಕ್ಕೆ ಹೋಲಿಸಿದರೆ 74 ಪಟ್ಟು, ಸ್ಪೇನ್‌ನಲ್ಲಿನ ದರಕ್ಕೆ ಹೋಲಿಸಿದರೆ 35 ಪಟ್ಟು ಮತ್ತು ಆಸ್ಟ್ರೇಲಿಯಾದಲ್ಲಿನ ದರಕ್ಕೆ ಹೋಲಿಸಿದರೆ 14 ಪಟ್ಟು ಹೆಚ್ಚು ಎಂದು ಹೇಳಲಾಗಿದೆ. ಇದೇ ದರವನ್ನು ದೂರಸಂಪರ್ಕ ಸೇವಾ ಕಂಪನಿಗಳು ಪಾವತಿಸಬೇಕು ಎಂದಾದರೆ ಬಳಕೆದಾರರಿಂದ ದುಬಾರಿ ಶುಲ್ಕವನ್ನು ವಸೂಲಿ ಮಾಡಬೇಕಾಗುತ್ತದೆ. ಹಾಗಾದರೆ, ಸಾಮಾನ್ಯ ಜನರಿಗೆ 5 ಜಿ ಕೈಗೆಟುಕಲಿಕ್ಕಿಲ್ಲ.

ಚೀನಾ ಕಂಪನಿಗಳನ್ನು ಹೊರಗಿಡಲಾಯಿತೇ?

ಭಾರತದಲ್ಲಿ 5ಜಿ ತಂತ್ರಜ್ಞಾನ ಪರೀಕ್ಷೆ ನಡೆಸಲು ಚೀನಾದ ಕಂಪನಿಗಳಿಗೆ ಈ ಮೊದಲು ಅನುಮತಿ ನೀಡಲಾಗಿತ್ತು. ಆದರೆ ಈಗ ಆರು ತಿಂಗಳು ಪರೀಕ್ಷೆ ನಡೆಸಲು ಅನುಮತಿ ಪಡೆದ ಕಂಪನಿಗಳಲ್ಲಿ ಚೀನಾದ ಯಾವ ಕಂಪನಿಯೂ ಇಲ್ಲ.

5ಜಿ ತಂತ್ರಜ್ಞಾನವನ್ನು ಭಾರತದ ಮೊಬೈಲ್ ಸೇವಾ ಸಂಸ್ಥೆಗಳೇ ಪರೀಕ್ಷೆಗೆ ಒಳಪಡಿಸಲಿವೆ. ಆದರೆ, ಈ ಕಂಪನಿಗಳಿಗೆ 5ಜಿ ತಂತ್ರಜ್ಞಾನವನ್ನು ಮೂಲ ಉಪಕರಣ ತಯಾರಿ ಕಂಪನಿಗಳು ಪೂರೈಸಲಿವೆ. ಭಾರತದಲ್ಲಿ, ಕೇಂದ್ರ ಸರ್ಕಾರದ ಅಧೀನ ಸಂಸ್ಥೆ ‘ಸಿ-ಡಾಟ್’ ಮಾತ್ರವೇ 5ಜಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ನೋಕಿಯಾ, ಸ್ಯಾಮ್‌ಸಂಗ್, ಎರಿಕ್‌ಸನ್ ಹಾಗೂ ಚೀನಾದ ಹುವಾವೆ ಮತ್ತು ಝಡ್‌ಟಿಇ ಕಾರ್ಪೊರೇಷನ್‌ ಈ ತಂತ್ರಜ್ಞಾನ ಒದಗಿಸುತ್ತಿವೆ.

ದೇಶದಲ್ಲಿ 5ಜಿ ತಂತ್ರಜ್ಞಾನ ಪರೀಕ್ಷೆಗೆ ಭಾರ್ತಿ ಏರ್‌ಟೆಲ್ ಮತ್ತು ಜಿಯೊ ಇನ್ಫೊಕಾಂ ಅರ್ಜಿ ಸಲ್ಲಿಸಿದ್ದವು. ಭಾರ್ತಿ ಏರ್‌ಟೆಲ್‌ 5ಜಿ ಸೇವೆ ಪರೀಕ್ಷೆ ನಡೆಸಲು ತಂತ್ರಜ್ಞಾನ ಪೂರೈಕೆದಾರರಾಗಿ ಚೀನಾದ ಹುವಾವೆ, ಸ್ವೀಡನ್‌ನ ಎರಿಕ್‌ಸನ್ ಮತ್ತು ನೋಕಿಯಾ ಕಂಪನಿಯನ್ನು ಆಯ್ಕೆ ಮಾಡಿಕೊಂಡಿತ್ತು. ಜಿಯೊ ಕಂಪನಿಯು ತಂತ್ರಜ್ಞಾನ ಪೂರೈಕೆದಾರರಾಗಿ ಸ್ಯಾಮ್‌ಸಂಗ್ ಮತ್ತು ಚೀನಾದ ಝಡ್‌ಟಿಇ ಕಂಪನಿಗಳನ್ನು ಆಯ್ಕೆ ಮಾಡಿಕೊಂಡಿತ್ತು. ಈ ಪ್ರಸ್ತಾವಕ್ಕೆ ಅನುಮತಿಯೂ ಸಿಕ್ಕಿತ್ತು. ಕೋವಿಡ್‌ನ ಕಾರಣದಿಂದ ಈ ಈ ಪರೀಕ್ಷೆಗಳು ಆರಂಭವಾಗಲಿಲ್ಲ.

2020ರ ಸೆಪ್ಟೆಂಬರ್‌ನಲ್ಲಿ ಭಾರತದ ದೂರಸಂಪರ್ಕ ಸೇವಾ ಕಂಪನಿಗಳಿಗೆ, ದೂರಸಂಪರ್ಕ ಇಲಾಖೆಯು ಒಂದು ಪತ್ರ ಬರೆದಿತ್ತು. ‘5ಜಿ ತಂತ್ರಜ್ಞಾನ ಪೂರೈಸುವ ಕಂಪನಿಗಳಲ್ಲಿ, ಆದ್ಯತೆಯ ಕಂಪನಿಗಳನ್ನು ಉಲ್ಲೇಖಿಸಿ’ ಎಂದು ಸೂಚನೆ ನೀಡಿತ್ತು. ಈ ಪ್ರಕಾರ ದೂರಸಂಪರ್ಕ ಕಂಪನಿಗಳು, 5ಜಿ ತಂತ್ರಜ್ಞಾನ ಪೂರೈಕೆಯ ಆದ್ಯತೆಯ ಕಂಪನಿಗಳಾಗಿ ನೋಕಿಯಾ, ಸ್ಯಾಮ್‌ಸಂಗ್ ಮತ್ತು ಎರಿಕ್‌ಸನ್ ಕಂಪನಿಗಳನ್ನು ಉಲ್ಲೇಖಿಸಿದ್ದವು. ಚೀನಾದ ಕಂಪನಿಗಳನ್ನು ಮೂರನೇ ಆದ್ಯತೆಯನ್ನಾಗಿ ಪರಿಗಣಿಸಿದ್ದವು. ಆದ್ಯತೆಯ ಮತ್ತು ಎರಡನೇ ಆದ್ಯತೆಯ ಕಂಪನಿಗಳ 5ಜಿ ತಂತ್ರಜ್ಞಾನ ಪರೀಕ್ಷೆಗೆ ಮಾತ್ರ ಅನುಮತಿ ನೀಡಲಾಗಿದೆ.

ಆಧಾರ: ಪಿಟಿಐ, ಐಎನ್‌ಸಿ42, ಬಿಜಿಆರ್‌.ಇನ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು