ಮಂಗಳವಾರ, ಅಕ್ಟೋಬರ್ 27, 2020
23 °C

ಆಳ-ಅಗಲ: ಬಿಹಾರ ಚುನಾವಣೆಯಲ್ಲಿ ಯಾರಿಗೆ ಸಿಗಲಿದೆ ಅಧಿಕಾರ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಜಕಾರಣದಲ್ಲಿ ಜಾತಿಯ ಪ್ರಭಾವವು ದಟ್ಟವಾಗಿ ಕಾಣಿಸುವ ರಾಜ್ಯಗಳ ಸಾಲಿನಲ್ಲಿ ಬಿಹಾರವೂ ಇದೆ. ಹಲವು ಪ್ರಾದೇಶಿಕ ಪಕ್ಷಗಳು ಮತ್ತು ಪ್ರತಿಯೊಂದು ಪಕ್ಷಕ್ಕೂ ತನ್ನದೇ ಆದ ಜಾತಿ ಬೆಂಬಲ ಇರುವುದು ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಚುನಾವಣೆಯಿಂದ ಚುನಾವಣೆಗೆ ಸಮೀಕರಣಗಳು ಬದಲಾಗುವುದರ ಜತೆಗೆ, ಜಾತಿವಾರು ಮತಗಳ ಧ್ರುವೀಕರಣ ಬಲಗೊಳ್ಳುತ್ತಲೇ ಇದೆ. ಯಾವುದೇ ಪಕ್ಷವು ತನ್ನ ಸ್ವಂತ ಬಲದಿಂದ ಸರ್ಕಾರ ರಚಿಸಲಾಗದಂಥ ಸ್ಥಿತಿಗೆ ಬಿಹಾರ ಬಂದಿದೆ.

ಬಿಹಾರದ ಮೈತ್ರಿಕೂಟ ರಾಜಕಾರಣದಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ಸಂಯುಕ್ತ ಜನತಾದಳ (ಜೆಡಿಯು) ಹಾಗೂ ಬಿಜೆಪಿಯು ಅತ್ಯಂತ ಮಹತ್ವದ ಕೊಂಡಿಗಳೆನಿಸಿವೆ. ಇವುಗಳಲ್ಲಿ ಆರ್‌ಜೆಡಿ ಹಾಗೂ ಜೆಡಿಯು ಬಿಹಾರ ಕೇಂದ್ರಿತ ಪ್ರಾದೇಶಿಕ ಪಕ್ಷಗಳು. ಇವುಗಳ ಜತೆಗೆ ಎಲ್‌ಜೆಪಿ ಹಾಗೂ ಹಿಂದುಸ್ತಾನ್‌ ಆವಾಮ್‌ ಮೋರ್ಚಾಗಳೂ ದಲಿತ ಮತಗಳನ್ನು ಸ್ವಲ್ಪ ಪ್ರಮಾಣದಲ್ಲಿ ಸೆಳೆದು ಅಸ್ತಿತ್ವ ಉಳಿಸಿಕೊಂಡಿವೆ. ರಾಷ್ಟ್ರೀಯ ಪಕ್ಷಗಳೆನಿಸಿರುವ ಬಿಜೆಪಿ ಹಾಗೂ ಕಾಂಗ್ರೆಸ್‌ ಪ್ರಬಲ ಜಾತಿ ಮತ್ತು ಸಮುದಾಯಗಳ ಮತಗಳನ್ನೇ ಅವಲಂಬಿಸಿವೆ. ಆದ್ದರಿಂದ, ಈ ಎರಡೂ ಪಕ್ಷಗಳು ಯಾವುದೋ ಒಂದು ಪ್ರಾದೇಶಿಕ ಪಕ್ಷವನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ಇಂತಹ ಅವಲಂಬನೆಯಿಂದ ಅತಿ ಹೆಚ್ಚು ಲಾಭ ಗಳಿಸುತ್ತಿರುವುದು ಜೆಡಿಯು. ಹಿಂದುಳಿದ ಮತ್ತು ಅತಿ ಹಿಂದುಳಿದ ಸಮುದಾಯಗಳ ಬೆಂಬಲವನ್ನು ಈ ಪಕ್ಷವು ಹೊಂದಿದೆ.

1985ರವರೆಗೂ ಬಿಹಾರದಲ್ಲಿ ಪ್ರಬಲ ಪಕ್ಷವೆನಿಸಿದ್ದ ಕಾಂಗ್ರೆಸ್‌, ಕಳೆದ ಕೆಲವು ದಶಕಗಳಲ್ಲಿ ಮುಸ್ಲಿಂ ಹಾಗೂ ಹಿಂದುಳಿದ ವರ್ಗಗಳವರ ಬೆಂಬಲವನ್ನು ಕಳೆದುಕೊಂಡು ಮೈತ್ರಿಕೂಟದ ಕಿರಿಯ ಪಾಲುದಾರ ಪಕ್ಷವಾಗಿ ಉಳಿಯುವ ಸ್ಥಿತಿಗೆ ಬಂದಿದೆ.

ರಾಜ್ಯದ ಜನಸಂಖ್ಯೆಯಲ್ಲಿ ಐದನೇ ಒಂದರಷ್ಟು ಇರುವ ಬನಿಯಾ ಸಮುದಾಯವು ಬಿಜೆಪಿಯ ಬಲವಾಗಿದೆ. ಲಾಲು ಪ್ರಸಾದ್‌ ನೇತೃತ್ವದ ಆರ್‌ಜೆಡಿಯು ಮುಸ್ಲಿಂ ಹಾಗೂ ಯಾದವ ಸಮುದಾಯದವರನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. ರಾಜ್ಯದ ಜನಸಂಖ್ಯೆಯಲ್ಲಿ ಇವೆರಡು ಸಮುದಾಯಗಳ ಪಾಲು ಮೂರನೇ ಒಂದರಷ್ಟು. ನಿತೀಶ್‌ ಕುಮಾರ್‌ ಅವರ ಜೆಡಿಯುಗೆ ಯಾದವೇತರ ಸಮುದಾಯದವರ ಬೆಂಬಲ ಹೆಚ್ಚಾಗಿದೆ. ಅದರಲ್ಲಿ ಇತರ ಹಿಂದುಳಿದ ವರ್ಗದವರು, ಕುರ್ಮಿ, ಕೊಯಿರಿ ಮುಂತಾದ ಅತ್ಯಂತ ಹಿಂದುಳಿದ ವರ್ಗದವರು ಸೇರಿದ್ದಾರೆ.

ಇತ್ತೀಚೆಗೆ ನಿಧನರಾದ ರಾಮ್‌ ವಿಲಾಸ್‌ ಪಾಸ್ವಾನ್‌ ಸಹ ಬಿಹಾರ ರಾಜಕಾರಣದಲ್ಲಿ ಪ್ರಮುಖರೆನಿಸಿದ್ದರು. ರಾಜ್ಯದ ಜನಸಂಖ್ಯೆಯಲ್ಲಿ ಶೇ 5ರಷ್ಟಿರುವ ಪಾಸ್ವಾನ್‌ ಸಮುದಾಯ ಕೆಲವು ಕ್ಷೇತ್ರಗಳ ಫಲಿತಾಂಶದ ಮೇಲೆ ಪ್ರಭಾವ ಬೀರಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಪಾಸ್ವಾನ್‌ ಹಾಗೂ ನಿತೀಶ್‌ ಅವರು ತಮ್ಮ ಬೆಂಬಲಿಗ ಮತಗಳನ್ನು ತಮಗೆ ಬೇಕಾದ ಮೈತ್ರಿಯತ್ತ ತಿರುಗಿಸಬಲ್ಲರು ಎಂಬುದು ಹಿಂದಿನ ಹಲವು ಚುನಾವಣೆಗಳಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. 2005ರ ವಿಧಾನಸಭಾ ಚುನಾವಣೆಯ ನಂತರ ನಿತೀಶ್‌ ಅವರು ಯಾವ ಮೈತ್ರಿಯಲ್ಲಿದ್ದಾರೋ ಅದೇ ಮೈತ್ರಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಬಿಜೆಪಿಯಾಗಲಿ ಮಹಾ ಘಟಬಂಧನವಾಗಲಿ ನಿತೀಶ್‌ ಅವರ ಮಾತನ್ನು ತಳ್ಳಿಹಾಕದಿರುವುದಕ್ಕೆ ಇದು ಕಾರಣವಾಗಿದೆ.

ಎಡಪಕ್ಷಗಳು ಬಿಹಾರದಲ್ಲಿ ಆಕರ್ಷಣೆ ಕಳೆದುಕೊಂಡಿದ್ದವು. ಕನ್ಹಯ್ಯಾ ಕುಮಾರ್‌ ಪ್ರವೇಶದಿಂದ ಇತ್ತೀಚೆಗೆ ಪಕ್ಷದಲ್ಲಿ ಸಣ್ಣ ಸಂಚಲನ ಉಂಟಾಗಿದ್ದರೂ, ಜಾತಿ ರಾಜಕಾರಣ ದಟ್ಟವಾಗಿರುವುದರಿಂದ ಎಡಪಕ್ಷಗಳು ಹೇಳಿಕೊಳ್ಳುವ ಪರಿಣಾಮ ಉಂಟುಮಾಡಲಾರವು ಎಂದು ವಿಶ್ಲೇಷಕರು ಹೇಳುತ್ತಾರೆ. 2015ರ ಚುನಾವಣೆಯಲ್ಲಿ ಆರ್‌ಜೆಡಿ ಹಾಗೂ ಎಡಪಕ್ಷಗಳ ನಡುವೆ ಸೀಟು ಹಂಚಿಕೆಯಲ್ಲಿ ಆಗಿರುವ ಏರುಪೇರು, ಆರ್‌ಜೆಡಿಯ ಕೆಲವು ಮುಖಂಡರ ಅಸಮಾಧಾನಕ್ಕೆ ಕಾರಣವಾಗಿತ್ತು. ಈಗಾಗಲೇ ಕೆಲವು ನಾಯಕರು ಘಟಬಂಧನದಿಂದ ಹೊರನಡೆದಿರುವುದರಿಂದ ಎಚ್ಚರಿಕೆಯ ಹೆಜ್ಜೆಗಳನ್ನಿಡಬೇಕಾದ ಅನಿವಾರ್ಯ ಆರ್‌ಜೆಡಿಗೆ ಇದೆ.


ಚುನಾವಣೆಗೆ ಬಿಜೆಪಿ ಭರದ ಸಿದ್ಧತೆ ನಡೆಸಿದೆ. ಪಟ್ನಾದಲ್ಲಿ ಬಿಜೆಪಿ ನಾಯಕರ ಕಟೌಟ್‌ಗಳನ್ನು ಸಿದ್ಧಪಡಿಸಿ ಇಡಲಾಗಿದೆ

ಬಿಜೆಪಿ– ಜೆಡಿಯು ಮೈತ್ರಿಕೂಟದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಧಾನಸಭಾ ಕ್ಷೇತ್ರಗಳನ್ನು ಸಮಾನವಾಗಿ ಹಂಚಿಕೊಂಡಿವೆ. 1995ರ ನಂತರ ಬಿಜೆಪಿಯು ಪ್ರತಿ ಚುನಾವಣೆಯಲ್ಲೂ ತನ್ನ ಮತಗಳಿಕೆ ಪ್ರಮಾಣವನ್ನು ಹೆಚ್ಚಿಸುತ್ತಾ ಬಂದಿದೆ. ಆದರೆ 2010ರಲ್ಲಿ ಶೇ 22.6ರಷ್ಟು ಮತಗಳನ್ನು ಗಳಿಸಿಕೊಂಡಿದ್ದ ಜೆಡಿಯು ಪಕ್ಷದ ಮತಗಳಿಕೆಯು 2015ರ ಚುನಾವಣೆಯಲ್ಲಿ ಶೇ 16.8ರಷ್ಟಿತ್ತು. ಏನೇ ಇದ್ದರೂ ನಿತೀಶ್‌ ಅವರು ತಮ್ಮ ಮಿತ್ರಪಕ್ಷ ಗಳಿಸಿದ್ದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತಾರೆ ಎಂಬುದು ಈಚಿನ ಚುನಾವಣೆಗಳಲ್ಲಿ ಕಂಡುಬಂದಿದೆ. ಚುನಾವಣೆಯ ಫಲಿತಾಂಶ ಏನೇ ಇದ್ದರೂ, ಈ ಚುನಾವಣೆಯ ಬಳಿಕ ನಿತೀಶ್‌ ಅವರು ರಾಜ್ಯ ರಾಜಕೀಯದಲ್ಲಿ ಹಿಂದಿನಷ್ಟೇ ಪ್ರಭಾವಶಾಲಿ ಆಗಿ ಉಳಿಯುವುದು ಸಂದೇಹ ಎಂದು ವಿಶ್ಲೇಷಕರು ಹೇಳುತ್ತಾರೆ.

ಪಾಸ್ವಾನ್ ನಿಧನ ಪರಿಣಾಮ ಬೀರುವುದೇ...

ಬಿಹಾರ ವಿಧಾನಸಭಾ ಚುನಾವಣೆಗೆ ಮೂರು ವಾರಗಳಷ್ಟೇ ಬಾಕಿ ಇರುವಾಗ, ಲೋಕಜನಶಕ್ತಿ ಪಕ್ಷದ (ಎಲ್‌ಜೆಪಿ) ನಾಯಕ ಹಾಗೂ ಕೇಂದ್ರದ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಅವರು ನಿಧನರಾಗಿರುವುದು ಚುನಾವಣೆ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ.

ಎಲ್‌ಜೆಪಿಯನ್ನು ಅವರ ಪುತ್ರ ಚಿರಾಗ್ ಪಾಸ್ವಾನ್ ಮುನ್ನಡೆಸುತ್ತಿದ್ದಾರೆ. ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಯ ಭಾಗವಾಗಿರುವ ಎಲ್‌ಜೆಪಿ, ರಾಜ್ಯದಲ್ಲಿ ಮೈತ್ರಿಕೂಟದಿಂದ ಹೊರಬಂದು, ಸ್ವತಂತ್ರವಾಗಿ ಸ್ಪರ್ಧಿಸುವ ನಿರ್ಧಾರ ತೆಗೆದುಕೊಂಡಿದೆ. ‘ನಮ್ಮ ಸಿಟ್ಟು ಇರುವುದು ಮುಖ್ಯಮಂತ್ರಿ ನಿತೀಶ್ ಕುಮಾರ್ ಮೇಲೆಯೇ ಹೊರತು ಬಿಜೆಪಿ ಮೇಲೆ ಅಲ್ಲ’ ಎಂದು ಚಿರಾಗ್ ಹೇಳಿದ್ದಾರೆ.

2015ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 42 ಕ್ಷೇತ್ರಗಳಲ್ಲಿ 2ರಲ್ಲಿ ಮಾತ್ರ ಎಲ್‌ಜೆಪಿ ಅಭ್ಯರ್ಥಿಗಳು ಗೆದ್ದಿದ್ದರು. ಆದರೆ ಈ ಬಾರಿ ಪಾಸ್ವಾನ್ ಅನುಪಸ್ಥಿತಿಯಲ್ಲಿ ಬಲಿಷ್ಠ ಜೆಡಿಯು ವಿರುದ್ಧ ಸ್ಪರ್ಧಿಸುವ ಬಹುದೊಡ್ಡ ಸವಾಲನ್ನು ಚಿರಾಗ್ ತಮ್ಮ ಮೇಲೆ ಎಳೆದುಕೊಂಡಿದ್ದಾರೆ. ಎಲ್‌ಜೆಪಿಗೆ ಅನುಕಂಪದ ಅಲೆ ಕೆಲಸ ಮಾಡಲಿದೆ ಎನ್ನಲಾಗಿದ್ದರೂ, ಅದರ ಪ್ರಮಾಣ ಎಷ್ಟರ ಮಟ್ಟಿಗೆ ಇರಲಿದೆ ಎಂಬ ಬಗ್ಗೆ ರಾಜಕೀಯ ಪಕ್ಷಗಳು ಹಾಗೂ ವಿಶ್ಲೇಷಕರಲ್ಲಿ ಭಿನ್ನ ಅಭಿಪ್ರಾಯಗಳಿವೆ.

‘ಪಾಸ್ವಾನ್ ಅವರು ಪ್ರಬಲ ದಲಿತ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವರ ಸಾವಿನ ಅನುಕಂಪವು ಮತಗಳಾಗಿ ಪರಿವರ್ತನೆಯಾಗಬಹುದು ಎಂದು ಹೇಳುವುದು ಕಷ್ಟ’ ಎನ್ನುತ್ತಾರೆ ಪಟ್ನಾ ವಿಶ್ವವಿದ್ಯಾಲಯದ ನಿವೃ‌ತ್ತ ಪ್ರಾಧ್ಯಾಪಕ ಎನ್.ಕೆ. ಚೌಧರಿ.

‘ರಾಜ್ಯದಲ್ಲಿ ಪಾಸ್ವಾನ್ ಅವರು ದಲಿತರ ಒಂದು ವರ್ಗವನ್ನು ಮಾತ್ರ ಪ್ರತಿನಿಧಿಸುತ್ತಿದ್ದರು. ಅವರಿಗೆ ಕೆಲವು ಜಾತಿಗಳ ಬೆಂಬಲವಿತ್ತು. ಆದರೆ ಇಡೀ ಬಿಹಾರದಲ್ಲಿ ಅವರ ಪರ ಅನುಕಂಪ ಕೆಲಸ ಮಾಡುತ್ತದೆ ಎಂದು ಹೇಳಲಾಗದು. ಅವರು ಎಲ್ಲ ಬಿಹಾರಿಗಳ ಪ್ರತಿನಿಧಿ ಆಗಿರಲಿಲ್ಲ. ಅವರ ಮಗ ಚಿರಾಗ್ ದೆಹಲಿ ನಿವಾಸಿ ಎಂಬುದು ಪಕ್ಷಕ್ಕೆ ಒಂದು ಅಡ್ಡಿಯಾಗಬಹುದು. ಅವರು ಬಿಹಾರಕ್ಕೆ ರಾತ್ರಿ ಹೊತ್ತು ಬಂದು ಹೋಗುತ್ತಾರೆ ಎಂಬ ಮಾತೂ ಜನಜನಿತ’ ಎನ್ನುತ್ತಾರೆ ಅವರು.

‘ಪಾಸ್ವಾನ್ ಅವರ ಸಾವು ಚುನಾವಣೆ ಮೇಲೆ ದೊಡ್ಡ ಪರಿಣಾಮ ಬೀರದು. ಅವರ ಸಾವು ಆಕಸ್ಮಿಕವಲ್ಲ. ಅವರಿಗೆ ಅನಾರೋಗ್ಯ ಇತ್ತು ಮತ್ತು ವಯಸ್ಸೂ ಆಗಿತ್ತು’ ಎನ್ನುತ್ತಾರೆ ಜೆಡಿಯು ಮಾಜಿ ಸಂಸದ ರಂಜನ್ ಪ್ರಸಾದ್ ಯಾದವ್.

ಜೆಡಿಯು– ಬಿಜೆಪಿ ದೋಸ್ತಿ

243 ಸದಸ್ಯಬಲದ ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಆಡಳಿತಾರೂಢ ಜೆಡಿಯು ಹಾಗೂ ಬಿಜೆಪಿ ಸೀಟು ಹೊಂದಾಣಿಕೆ ಮಾಡಿಕೊಂಡಿವೆ. ಜೆಡಿಯು 122 ಹಾಗೂ ಬಿಜೆಪಿ 121 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ. ಕೇಂದ್ರದಲ್ಲಿ ಎನ್‌ಡಿಎ ಭಾಗವಾಗಿರವ ಎಲ್‌ಜೆಪಿ, ಈ ಬಾರಿ ಸ್ವತಂತ್ರ ಸ್ಪರ್ಧೆ ಮಾಡುವ ಘೋಷಣೆ ಮಾಡಿದೆ. 

ಸೀಟು ಹಂಚಿಕೆಯಲ್ಲಿ ಬಿಜೆಪಿಗಿಂತ ಒಂದು ಹೆಚ್ಚುವರಿ ಸ್ಥಾನ ಪಡೆಯಲಷ್ಟೇ ನಿತೀಶ್ ಕುಮಾರ್ ಶಕ್ತರಾಗಿದ್ದಾರೆ. ಇದರರ್ಥ, ಮೈತ್ರಿಯಲ್ಲಿ ಪ್ರತಿ ಬಾರಿ ಮೇಲುಗೈ ಸಾಧಿಸುತ್ತಿದ್ದ ನಿತೀಶ್ ಅವರ ಪ್ರಾಬಲ್ಯ ಈ ಬಾರಿ ಕುಗ್ಗಿದಂತೆ ತೋರುತ್ತಿದೆ. ಆದರೂ, ಬಹುತೇಕ ಸಮಾನ ಕ್ಷೇತ್ರಗಳಲ್ಲಿ ಉಭಯ ಪಕ್ಷಗಳು ಸ್ಪರ್ಧೆ ಮಾಡುತ್ತಿವೆ. ‘ಜೆಡಿಯುಗೆ ಕಡಿಮೆ ಸ್ಥಾನ ಸಿಕ್ಕರೂ ನಿತೀಶ್ ಅವರೇ ಮುಖ್ಯಮಂತ್ರಿ’ ಎಂದು ಬಿಜೆಪಿ ಮೊದಲೇ ಘೋಷಿಸಿದೆ.

ಬಿಜೆಪಿ ವಿರುದ್ಧ ಎಲ್‌ಜೆಪಿ ಅಭ್ಯರ್ಥಿಗಳನ್ನು ಹಾಕುತ್ತಿಲ್ಲ. ಆದರೆ, ಮುಖ್ಯಮಂತ್ರಿ ನಿತೀಶ್ ಸೇರಿದಂತೆ ಜೆಡಿಯು ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಚಿರಾಗ್ ಪಾಸ್ವಾನ್ ಘೋಷಣೆ ಮಾಡಿರುವುದೂ ಸಹ ನಿತೀಶ್‌ಗೆ ನುಂಗಲಾರದ ತುತ್ತಾಗಿದೆ. 

ಪ್ರಶಾಂತ್ ಕಿಶೋರ್ ಸದ್ದಿಲ್ಲ

ಅದು 2015ರ ಬಿಹಾರ ವಿಧಾನಸಭಾ ಚುನಾವಣೆ. ರಾಜ್ಯದಲ್ಲಿ ಕಾಂಗ್ರೆಸ್–ಆರ್‌ಜೆಡಿ–ಜೆಡಿಯು ಮೈತ್ರಿಮಾಡಿಕೊಂಡು ಸರ್ಕಾರ ರಚಿಸಿದವು. ಈ ಮೈತ್ರಿ (ಮಹಾಘಟಬಂಧನ) ದೇಶದೆಲ್ಲೆಡೆ ಹೊಸ ಸಂಚಲನ ಸೃಷ್ಟಿಸಿತು. ಈ ನಿರ್ಧಾರದ ಹಿಂದೆ ಇದ್ದವರು ಚುನಾವಣಾ ನೀತಿ ನಿರೂಪಕ ಪ್ರಶಾಂತ್ ಕಿಶೋರ್. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ರಚನೆಯಲ್ಲಿ ಪ್ರಶಾಂತ್ ಅವರ ಚುನಾವಣಾ ನೀತಿಗಳು ಕೆಲಸ ಮಾಡಿದ್ದವು. ಪ್ರಮುಖ ರಾಜಕೀಯ ಪಕ್ಷಗಳು ಗೆಲುವಿಗಾಗಿ ಕಿಶೋರ್ ಹಿಂದೆ ಬಿದ್ದವು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ತಮಿಳುನಾಡಿನಲ್ಲಿ ಎಂ.ಕೆ. ಸ್ಟಾಲಿನ್ ಜೊತೆ ಅವರು ಒಪ್ಪಂದ ಮಾಡಿಕೊಂಡಿದ್ದಾರೆ. 

ಚುನಾವಣಾ ತಂತ್ರಜ್ಞರಾಗಿದ್ದ ಕಿಶೋರ್‌ಗೆ ಇದ್ದಕ್ಕಿದ್ದಂತೆ ರಾಜಕೀಯ ಸೇರುವ ಮನಸಾಯಿತು. ಮುಖ್ಯಮಂತ್ರಿ ಆಗುವ ಉಮೇದಿನಿಂದ 2018ರಲ್ಲಿ ಜೆಡಿಯು ಸೇರಿದ ಅವರು, ನಿತೀಶ್ ನಂತರದ ಹುದ್ದೆ ದಕ್ಕಿಸಿಕೊಳ್ಳಲು ಪಕ್ಷದಲ್ಲಿ ಸಾಕಷ್ಟು ಏದುಸಿರುಬಿಟ್ಟರು. ಟಿ–10 ಮಿಷನ್ ಎಂಬ ಅಭಿಯಾನ ಶುರು ಮಾಡಿದರು. 10 ವರ್ಷದಲ್ಲಿ ಬಿಹಾರದ ಅಭಿವೃದ್ಧಿಯ ರೂಪುರೇಷೆಯನ್ನು ತೆರೆದಿಟ್ಟರು. ಆದರೆ ಕಿಶೋರ್ ವಿರುದ್ಧ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿತು. ಸ್ವತಃ ನಿತೀಶ್ ಅವರೇ ಕಳೆದ ಜನವರಿಯಲ್ಲಿ ಅವರನ್ನು ಪಕ್ಷದಿಂದ ಹೊರಹಾಕಿದರು. ಪಕ್ಷದಿಂದ ಹೊರಬಂದ ಅವರು ನಿತೀಶ್ ವಿರುದ್ಧ ‘ಬಾತ್ ಬಿಹಾರ್ ಕಿ’ ಎಂಬ ಅಭಿಯಾನ ನಡೆಸಿ, ನಿತೀಶ್ ಸರ್ಕಾರದ ವೈಫಲ್ಯಗಳನ್ನು ತೆರೆದಿಟ್ಟರು. ಕೊರೊನಾ ಆರ್ಭಟ ಹೆಚ್ಚಾಗುತ್ತಿದ್ದಂತೆ, ಕಿಶೋರ್ ಅಭಿಯಾನವೂ ತಣ್ಣಗಾಯಿತು. 

ಬಿಹಾರ ಚುನಾವಣೆ ಘೋಷಣೆಯಾದರೂ ಪ್ರಶಾಂತ್ ಕಿಶೋರ್ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ನಿತೀಶ್ ವಿರುದ್ಧ ತೊಡೆ ತಟ್ಟಿರುವ ಚಿರಾಗ್ ಪಾಸ್ವಾನ್ ಅವರನ್ನು ಕಿಶೋರ್ ಬೆಂಬಲಿಸುತ್ತಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ತನ್ನನ್ನು ಪಕ್ಷದಿಂದ ಹೊರಹಾಕಿದ ನಿತೀಶ್ ಅವರ ಮೇಲಿನ ಸಿಟ್ಟನ್ನು ಈ ಮೂಲಕ ತೀರಿಸಿಕೊಳ್ಳುತ್ತಿದ್ಧಾರೆ ಎನ್ನಲಾಗುತ್ತಿದೆ. 

ಮಹಾಮೈತ್ರಿಗೆ ಈ ಚುನಾವಣೆ ಸುಲಭವಲ್ಲ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ ನೇತೃತ್ವದ ‘ಮಹಾಮೈತ್ರಿ’ಯು ಜೆಡಿಯು– ಬಿಜೆಪಿ ನೇತೃತ್ವದ ಎನ್‌ಡಿಎಯನ್ನು ಎದುರಿಸಲಿದೆ. 2015ರ ವಿಧಾನಸಭಾ ಚುನಾವಣೆಯಲ್ಲಿ ಮಹಾಮೈತ್ರಿಯು ಎನ್‌ಡಿಎಯನ್ನು ಸೋಲಿಸಿತ್ತು. ಆದರೆ, ಈ ಬಾರಿ ಮಹಾಮೈತ್ರಿಯ ಗೆಲುವು ಅಷ್ಟು ಸುಲಭವಿಲ್ಲ.

2015ರಲ್ಲಿ ಜೆಡಿಯು, ಆರ್‌ಜೆಡಿ ಮತ್ತು ಕಾಂಗ್ರೆಸ್ ಒಟ್ಟಾಗಿ ‘ಮಹಾಘಟಬಂಧನ’ ರಚಿಸಿಕೊಂಡಿದ್ದವು. 2014ರ ಲೋಕಸಭಾ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ನೇತೃತ್ವದ ಎನ್‌ಡಿಎಯ ವಿರುದ್ಧ ಈ ಘಟಬಂಧನ ಭಾರಿ ಗೆಲುವು ಸಾಧಿಸಿತ್ತು. 243 ಸ್ಥಾನಗಳಿರುವ ಬಿಹಾರ ವಿಧಾನಸಭೆಯಲ್ಲಿ 176 ಸ್ಥಾನಗಳನ್ನು ಗೆದ್ದು,  ಸರ್ಕಾರ ರಚಿಸಿತು. ಆದರೆ, ಮಧ್ಯದಲ್ಲಿಯೇ ಜೆಡಿಯು ಘಟಬಂಧನವನ್ನು ತೊರೆದ ಕಾರಣ, ಸರ್ಕಾರ ಪತನವಾಯಿತು. ಜೆಡಿಯು ಎನ್‌ಡಿಎಯನ್ನು ಸೇರಿತು.

ಮಹಾಮೈತ್ರಿಯಲ್ಲಿ ದೊಡ್ಡ ಪಕ್ಷವಾಗಿದ್ದ ಆರ್‌ಜೆಡಿ ಈಗ ಘಟಬಂಧನದ ನೇತೃತ್ವ ವಹಿಸಿದೆ. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ, ಜೆಡಿಯು ಈಗ ಎದುರಾಳಿ ಪಾಳಯದಲ್ಲಿದೆ. ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಅವರ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸಲಾಗಿತ್ತು. ಈಗ ಲಾಲು ಪುತ್ರ ತೇಜಸ್ವಿ ಯಾದವ್ ನೇತೃತ್ವದಲ್ಲಿ ಚುನಾವಣೆ ಎದುರಿಸಲು ಸಿದ್ಧತೆ ನಡೆದಿದೆ.

ಮಹಾಘಟಬಂಧನದಲ್ಲಿ ಚುನಾವಣೆ ಘೋಷಣೆಗೂ ಮುನ್ನವೇ ಒಡಕು ಉಂಟಾಗಿತ್ತು. ಸಣ್ಣಪುಟ್ಟ ಪಕ್ಷಗಳು ಮೈತ್ರಿಕೂಟವನ್ನು ತೊರೆದು ಹೋಗಿವೆ. 2019ರ ಲೋಕಸಭಾ ಚುನಾವಣೆಯಲ್ಲಿ ಘಟಬಂಧನದಲ್ಲಿದ್ದ ವಿಐಪಿ ಪಕ್ಷವು ಈಗ ಎನ್‌ಡಿಎಯಲ್ಲಿದೆ. ವಿಐಪಿ ಪಕ್ಷವು ಈಗ ಎನ್‌ಡಿಎ ಸೇರಿದ್ದು, ಘಟಬಂಧನಕ್ಕೆ ಸಣ್ಣ ಹೊಡೆತ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. 

ಜಿತನ್ ರಾಂ ಮಾಂಜಿ ನೇತೃತ್ವದ ಎಚ್‌ಎಎಂ, ಉಪೇಂದ್ರ ಕುಶ್ವಾಹ ನೇತೃತ್ವದ ಆರ್‌ಎಲ್‌ಎಸ್‌ಪಿ ಸಹ ಘಟಬಂಧನವನ್ನು ತೊರೆದಿವೆ. ಚುನಾವಣೆ ಘೋಷಣೆಯಾಗಿ ಇಷ್ಟು ದಿನ ಕಳೆದರೂ ಸೀಟುಹಂಚಿಕೆ ಅಂತಿಮವಾಗಿಲ್ಲ. ಮೊದಲ ಹಂತದ ಮತದಾನದ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಘಟಬಂಧನದಲ್ಲಿ ಈಗಲೂ ಉಳಿದುಕೊಂಡಿರುವ ಎಡಪಕ್ಷಗಳು ಈ ಮೊದಲೇ 30 ಸ್ಥಾನಗಳಿಗೆ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿದ್ದವು. ಆದರೆ, ಆರ್‌ಜೆಡಿ ನಾಯಕರು ಮಾತುಕತೆ ನಡೆಸಿದ ಕಾರಣ ಮೈತ್ರಿಯಲ್ಲಿ ಉಳಿಯಲು ಒಪ್ಪಿಕೊಂಡಿದ್ದಾರೆ.

ಕಾಂಗ್ರೆಸ್‌ ಪಕ್ಷವು ಭಾನುವಾರವಷ್ಟೇ ತಾರಾಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕೋವಿಡ್‌ನ ಕಾರಣ ಡಿಜಿಟಲ್ ಪ್ರಚಾರಕ್ಕೆ ಎಲ್ಲಾ ಪಕ್ಷಗಳೂ ಮೊರೆ ಹೋಗಬೇಕಿದೆ. ಚುನಾವಣೆಯಲ್ಲಿ ಪ್ರಚಾರದ ಕೊರತೆ ಯಾವ ರೀತಿ ಪರಿಣಾಮ ಬೀರಲಿವೆ ಎಂಬುದನ್ನು ಕಾದು ನೋಡಬೇಕಿದೆ.

ರಾಜ್ಯ ಚುನಾವಣೆಯನ್ನು ಯಾವ ವಿಷಯಗಳ ಮೇಲೆ ಎದುರಿಸಬೇಕು ಎಂಬುದರಲ್ಲೂ ಘಟಬಂಧನದಲ್ಲಿ ಗೊಂದಲವಿದೆ. 2015ರಲ್ಲಿ ಸ್ಥಳೀಯ ವಿಚಾರಗಳನ್ನು ಮುಂದಿಟ್ಟು ಚುನಾವಣೆ ಎದುರಿಸಲಾಗಿತ್ತು. ಕಾಂಗ್ರೆಸ್‌ ಅನ್ನು ಬಿಜೆಪಿಯು ‘ಬಾಹರಿ’ (ಹೊರಗಿನವರು) ಎಂದು ಕರೆದಿತ್ತು. ‘ಬಿಹಾರಿ’ ಮತ್ತು ‘ಬಾಹರಿ’ ವಿಚಾರವನ್ನು ಮುಂದು ಮಾಡಿ ಬಿಜೆಪಿ ಕಣಕ್ಕೆ ಇಳಿದಿತ್ತು.  ಆದರೆ, ಘಟಬಂಧನವು ಸ್ಥಳೀಯ ವಿಷಯಗಳನ್ನು ಮುಂದು ಮಾಡಿ ಪ್ರಚಾರ ನಡೆಸಿದ ಫಲವಾಗಿ ಗೆಲುವು ದೊರೆತಿತ್ತು. ಆಗ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮೈತ್ರಿ ಕೂಟದಲ್ಲಿತ್ತು ಎಂಬುದೂ ಗಮನಾರ್ಹ. ಈಗ ಘಟಬಂಧನವು ಬಿಜೆಪಿ ಮತ್ತು ಜೆಡಿಯು ಮುಖ್ಯಸ್ಥ ನಿತೀಶ್‌ಕುಮಾರ್ ವಿರುದ್ಧ ಸೆಣಸಬೇಕಿದೆ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯೂ ಅಷ್ಟಾಗಿ ಕಾಣುತ್ತಿಲ್ಲ. ಹೀಗಾಗಿ, ನಿರುದ್ಯೋಗ ಮತ್ತು ಆರ್ಥಿಕತೆಯನ್ನು ವಿಷಯವನ್ನಾಗಿಸಿಕೊಂಡು ಘಟಬಂಧನವು ಚುನಾವಣೆಯನ್ನು ಎದುರಿಸಬೇಕಿದೆ.

- ಸಂಗ್ರಹ: ಉದಯ ಯು, ಅಮೃತಕಿರಣ್ ಬಿ.ಎಂ., ಜಯಸಿಂಹ ಆರ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು