ಭಾನುವಾರ, ಸೆಪ್ಟೆಂಬರ್ 19, 2021
29 °C

'ಬರ್ತ್ ಡೇ ಬಂಪ್ಸ್' ನಿಂದ ವಿದ್ಯಾರ್ಥಿ ಸಾವು, ಸುಳ್ಳು ಸುದ್ದಿ ವೈರಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹುಟ್ಟುಹಬ್ಬಆಚರಣೆ ವೇಳೆ ಹಾಸ್ಟೆಲ್‌ನಲ್ಲಿ ಗೆಳೆಯರು ನೀಡಿದ ಬರ್ತ್ ಡೇ ಬಂಪ್ಸ್‌ನಿಂದ ವಿದ್ಯಾರ್ಥಿಯೊಬ್ಬ ಸಾವಿಗೀಡಾಗಿದ್ದಾನೆ ಎಂಬುದು ಸುದ್ದಿಯಾಗಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಬರ್ತ್ ಡೇ ಬಂಪ್ಸ್ ವಿಡಿಯೊ ವೈರಲ್ ಆಗಿದೆ. ಆದರೆ, ಗೆಳೆಯರ ಹೊಡೆತಕ್ಕೆ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂಬುದು ಸುಳ್ಳು ಸುದ್ದಿ !.

ಈ  ವೈರಲ್ ವಿಡಿಯೊವನ್ನು ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದರು. 

ಇದಕ್ಕೆ ಪ್ರತಿಕ್ರಯಿಸಿದ ಯುವಕನೊಬ್ಬ, ವಿಡಿಯೊದಲ್ಲಿರುವ ವಿದ್ಯಾರ್ಥಿ ನನ್ನ ಕಾಲೇಜಿನ ಹುಡುಗ. ಆತ ಸತ್ತಿಲ್ಲ, ವಿಡಿಯೊ ಡಿಲೀಟ್ ಮಾಡಿ ಎಂದು ಮನವಿ ಮಾಡಿದ್ದನು. ಆನಂತರ ಸೆಹ್ವಾಗ್ ವಿಡಿಯೊ ಡಿಲೀಟ್ ಮಾಡಿದ್ದರು. 

ವಿಡಿಯೊದಲ್ಲಿ ಏನಿದೆ?

ಹುಡುಗರ ಗುಂಪೊಂದು ಹುಡುಗನಿಗೆ ಯದ್ವಾತದ್ವ ಹೊಡೆದು, ತುಳಿಯುತ್ತಿರುವ ದೃಶ್ಯ ವಿಡಿಯೊದಲ್ಲಿದೆ. ಹತ್ತಿರದಲ್ಲಿಯೇ ಬರ್ತ್‌ಡೇ ಕೇಕ್ ಇರಿಸಿದ್ದು ಕಾಣಿಸಿದ್ದು, ಇಷ್ಟೆಲ್ಲಾ ಹೊಡೆದ ಮೇಲೆ ಆ ಹುಡುಗನನ್ನು ಕೈ ಹಿಡಿದೆತ್ತಿ ಮೇಜಿನ ಬಳಿ ಕರೆತರುವುದು ವಿಡಿಯೊದಲ್ಲಿದೆ. ಕೇಕ್ ಕತ್ತರಿಸುವ ದೃಶ್ಯ ಇದರಲ್ಲಿ ಇಲ್ಲದೇ ಇದ್ದರೂ, ಅದು ಹುಟ್ಟುಹಬ್ಬ ಆಚರಣೆಯ ವಿಡಿಯೊ ಎಂದು ಗೊತ್ತಾಗುತ್ತದೆ. ಈ ವಿಡಿಯೊ ಜತೆ ಇರುವ ಒಕ್ಕಣೆ ಏನೆಂದರೆ ಬರ್ತ್‌ ಡೇ ಬಂಪ್ಸ್ ನಿಂದಾಗಿ ಹುಡುಗನ ಮೇದೋಜೀರಕ ಗ್ರಂಥಿಗೆ (pancreas) ಹೊಡೆತ ಬಿದ್ದು ಆತ ಮರುದಿನ ಮೃತಪಟ್ಟಿದ್ದಾನೆ  ಎಂಬುದಾಗಿತ್ತು.

ಈ ಬಗ್ಗೆ ಫ್ಯಾಕ್ಟ್‌ಚೆಕ್ ಮಾಡಿದ ಇಂಡಿಯಾ ಟುಡೇ, ಹುಟ್ಟಹಬ್ಬ ಆಚರಿಸಿಕೊಂಡ ಹುಡುಗ ಬದುಕಿದ್ದಾನೆ ಎಂದು ವರದಿ ಮಾಡಿದೆ.
ಇಂಡಿಯಾ ಟುಡೇ  ಫ್ಯಾಕ್ಟ್‌ಚೆಕ್ ತಂಡವು ಆ ಹುಡುಗನಲ್ಲಿ ಮಾತನಾಡಿದ್ದು, ಆತ ಆರಾಮವಾಗಿದ್ದಾನೆ ಎಂದಿದೆ.

ಫ್ಯಾಕ್ಟ್‌ಚೆಕ್ 
ವಿರೇಂದ್ರ ಸೆಹ್ವಾಗ್ ಅವರು ಮಾಡಿದ ಟ್ವೀಟ್‌ಗೆ ರಘುರಾಜ್ ಸಿಂಗ್ ಎಂಬ ವ್ಯಕ್ತಿ ಪ್ರತಿಕ್ರಯಿಸಿ, ಹುಡುಗ ಮೃತಪಟ್ಟಿದ್ದಾನೆ ಎಂಬುದು ಸುಳ್ಳು ಸುದ್ದಿ, ವಿಡಿಯೊ ಡಿಲೀಟ್ ಮಾಡಿ ಸರ್ ಎಂದಿದ್ದ.

ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುವುದಕ್ಕಾಗಿ ರಘುರಾಜ್ ಯಾರು ಎಂಬುದನ್ನು ಹುಡುಕಿದಾಗ ಈತ ಕಿರ್ಗಿಸ್ತಾನ್‌ನ ರಾಜಧಾನಿ ಬಿಶ್‌ಕೆಕ್‌ನಲ್ಲಿರುವ ಕಾಲೇಜು ವಿದ್ಯಾರ್ಥಿ ಎಂಬುದು ತಿಳಿಯಿತು. ರಘುರಾಜ್‌ನ್ನು ಸಂಪರ್ಕಿಸಲು ಯತ್ನಿಸಿದ್ದರೂ ಅದು ಸಾಧ್ಯವಾಗಲಿಲ್ಲ. 

ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೊ ಹೈದರಾಬಾದ್‌ನದ್ದು, ಚೆನ್ನೈಯದ್ದು ಎಂದು ಹೇಳಲಾಗಿತ್ತು. ಆದರೆ ಈ ವಿಡಿಯೊ ಭಾರತದಲ್ಲಿ ನಡೆದ ಬರ್ತ್ ಡೇ ಪಾರ್ಟಿಯದ್ದು ಅಲ್ಲ.

ರಘುರಾಜ್‍ನ  ಫೇಸ್‌ಬುಕ್ ಪ್ರೊಫೈಲ್‌ಗೆ  ಭೇಟಿ ನೀಡಿದಾಗ ಆತ ಕಾಲೇಜು ಸಹಪಾಠಿಗಳೊಂದಿಗೆ ಇರುವ ಫೋಟೊವೊಂದನ್ನು ಅಲ್ಲಿ ಶೇರ್ ಮಾಡಿದ್ದ. ಅದರಲ್ಲಿರುವ ಒಬ್ಬ ವಿದ್ಯಾರ್ಥಿ ಹೆಸರು ದೀಪಕ್ ಆಂಜನಾ. ದೀಪಕ್ ಜತೆ ಇಂಡಿಯಾ ಟುಡೇ ತಂಡ ಮಾತನಾಡಿದಾಗ ಹುಟ್ಟುಹಬ್ಬದ ದಿನ ಹೊಡೆತ ತಿಂದ ಯುವಕ ಬದುಕಿದ್ದಾನೆ ಎಂದು ಆತ ಹೇಳಿದ್ದಾನೆ. ದೀಪಕ್ ಸಹಾಯದಿಂದಲೇ ಮಾಧ್ಯಮ ತಂಡ ಆ ಹುಡುಗನ ಜತೆ ಮಾತನಾಡಿದೆ.

ಈ ಹುಟ್ಟುಹಬ್ಬ ಆಚರಣೆ ನಡೆದಿದ್ದು 2018 ಡಿಸೆಂಬರ್ ತಿಂಗಳಲ್ಲಿ. ಈ ವೇಳೆ ಗೆಳೆಯರು ಬರ್ತ್‌ ಡೇ ಬಂಪ್ಸ್ ನೀಡಿದ್ದರು ಎಂದು ಆ ಹುಡುಗ ಹೇಳಿದ್ದಾನೆ.

ವಿಡಿಯೊ ವೈರಲ್ ಆದ ನಂತರ ಹುಡುಗ ಮಾನಸಿಕ ಒತ್ತಡಕ್ಕೊಳಗಾಗಿದ್ದಾನೆ. ಕಾಲೇಜು ಆಡಳಿತ ಮಂಡಳಿಯೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಹುಡುಗನ ಗುರುತನ್ನು ಬಹಿರಂಗಪಡಿಸಬಾರದು ಎಂಬ ಮನವಿ ಮೇರೆಗೆ ಇಲ್ಲಿರುವ ಕಾಮೆಂಟ್‌ನಲ್ಲಿ ಹೆಸರನ್ನು ಅಳಿಸಲಾಗಿದೆ.

ಇದೇ ವಿಡಿಯೊ ಬಗ್ಗೆ ಬೂಮ್ ಲೈವ್ ಕೂಡಾ ಫ್ಯಾಕ್ಟ್‌ಚೆಕ್ ಮಾಡಿದ್ದು ರಘುರಾಜ್ ಅವರನ್ನು ವಾಟ್ಸ್ಆ್ಯಪ್‌ ಮೂಲಕ ಸಂಪರ್ಕಿಸಿದೆ. ರಘುರಾಜ್ ಪ್ರಕಾರ ಈ ಬರ್ತ್ ಡೇ ಪಾರ್ಟಿ ನಡೆದದ್ದು ಡಿಸೆಂಬರ್  28, 2018ರಲ್ಲಿ. ಹುಟ್ಟುಹಬ್ಬದಾಚರಣೆಯಲ್ಲಿ  ಬರ್ತ್ ಡೇ ಬಂಪ್ಸ್ ಸರ್ವೇ ಸಾಮಾನ್ಯವಾಗಿದ್ದು ಆ ರಾತ್ರಿಯೂ ಹಾಗೇ ಆಗಿತ್ತು. ಇದು ಪ್ರಥಮ ವರ್ಷ ವೈದ್ಯಕೀಯ ಪದವಿ ವಿದ್ಯಾರ್ಥಿಯ ಬರ್ತ್ ಡೇ ಪಾರ್ಟಿ ಆಗಿದ್ದು ಈತ ನನ್ನ ಜೂನಿಯರ್ ಎಂದಿದ್ದಾರೆ ರಘುರಾಜ್. ಈತನ ಇನ್ನಿಬ್ಬರು ಗೆಳೆಯರಾದ ದೀಪಕ್ ಆಂಜನಾ ಮತ್ತು ಅಮಿತ್ ಸಿಂಗ್ ಪರಿಹಾರ್ ಅವರ ಜತೆಗೂ ಬೂಮ್ ಟೀಂ ಮಾತನಾಡಿದ್ದು, ಹುಟ್ಟುಹಬ್ಬದಂದು ಹೊಡೆತ ತಿಂದ ಹುಡುಕ ಆರಾಮವಾಗಿದ್ದಾನೆ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು