ಭಾನುವಾರ, ಆಗಸ್ಟ್ 1, 2021
27 °C

ನರೇಂದ್ರ ಮೋದಿ ಭೇಟಿ ನೀಡಿದ್ದು ಸೇನಾ ಆಸ್ಪತ್ರೆಗೆ, ಅದು ಫೋಟೊಶಾಪ್ ವಾರ್ಡ್ ಅಲ್ಲ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 3ರಂದು ಲಡಾಖ್‌ಗೆ ತೆರಳಿದ್ದಾಗ ಸೇನಾ ಆಸ್ಪತ್ರೆಗೆ ಭೇಟಿ ನೀಡಿದ್ದರು. ಜೂನ್‌ 15ರಂದು ಚೀನಾ ಪಡೆಗಳ ಜತೆಗಿನ ಸಂಘರ್ಷದಲ್ಲಿ ಗಾಯಗೊಂಡಿದ್ದ ಯೋಧರು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ಭೇಟಿ ಅವರ ಆರೋಗ್ಯ ವಿಚಾರಿಸಿದ್ದರು. ಈ ವಿಚಾರ ಬಳಿಕ ಟ್ವಿಟರ್‌ನಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ‘ಮೋದಿಯವರು ಸೇನಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಎಂದು ಬಿಂಬಿಸಲು ಕಾನ್ಫರೆನ್ಸ್‌ ಹಾಲ್‌ ಅನ್ನು ವಾರ್ಡ್‌ ಆಗಿ ಪರಿವರ್ತಿಸಲಾಗಿದೆ’ ಎಂದು ಕಾಂಗ್ರೆಸ್ ಆರೋಪಿಸಿತ್ತು.

‘ಇದು ಹೇಗೆ ಆಸ್ಪತ್ರೆಯಂತೆ ಕಾಣಿಸಲು ಸಾಧ್ಯ? ಡ್ರಿಪ್‌ ಇಲ್ಲ, ವೈದ್ಯರು ಇರಬೇಕಾದ ಜಾಗದಲ್ಲಿ ಫೋಟೊಗ್ರಾಫರ್ ಇದ್ದಾರೆ, ಔಷಧವಿಲ್ಲ, ನೀರೂ ಇಲ್ಲ’ ಎಂದು ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಅಭಿಷೇಕ್ ದತ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು.

ಕಾಂಗ್ರೆಸ್‌ನ ಶ್ರೀವತ್ಸ ಮತ್ತು ಸಲ್ಮಾನ್ ನಿಜಾಮಿ ಸಹ ಇಂತಹದ್ದೇ ಟ್ವೀಟ್‌ಗಳನ್ನು ಮಾಡಿದ್ದರು. ಇವುಗಳನ್ನು ಇತರ ಟ್ವಿಟರ್‌ ಬಳಕೆದಾರರು ಸಹ ರಿಟ್ವೀಟ್ ಮಾಡಿದ್ದರು.

ಈ ಕುರಿತು ಆಲ್ಟ್‌ ನ್ಯೂಸ್ ಜಾಲತಾಣ ಫ್ಯಾಕ್ಟ್ ಚೆಕ್ ನಡೆಸಿದ್ದು, ವಾಸ್ತವ ತೆರೆದಿಟ್ಟಿದೆ.

ಫ್ಯಾಕ್ಟ್ ಚೆಕ್

ಎರಡು ದಿನಗಳ ಲಡಾಖ್ ಭೇಟಿ ವೇಳೆ ಸೇನಾ ಮುಖ್ಯಸ್ಥ ಎಂ.ಎಂ.ನರವಣೆ ಸಹ ಗಾಯಾಳು ಯೋಧರನ್ನು ಭೇಟಿ ಮಾಡಿದ್ದರು. ಮೋದಿಯವರು ಭೇಟಿ ನೀಡಿದ್ದ ಅದೇ ವಾರ್ಡ್‌ಗೆ ಅವರು ತೆರಳಿದ್ದರು.

ನರವಣೆ ಅವರು ಭೇಟಿ ನೀಡಿದ್ದ ಸಂದರ್ಭದ ವಿಡಿಯೊ ಕೆಳಗೆ ನೀಡಲಾಗಿದೆ.

ಇಬ್ಬರೂ ಭೇಟಿ ನೀಡಿದ್ದ ವಾರ್ಡ್ ಒಂದೇ ಎಂದು ಸೂಚಿಸುವ ದೃಶ್ಯಗಳನ್ನು ಇಲ್ಲಿ ಹೈಲೈಟ್ ಮಾಡಲಾಗಿದೆ.

1. ನೀಲಿ ಗುರುತು – ಒಂದೇ ಕರ್ಟನ್‌ಗಳು

2. ಕೆಂಪು ಪೆಟ್ಟಿಗೆ – ಒಂದೇ ಫೋಟೊ ಫ್ರೇಮ್

3. ಹಸಿರು ಬಾಕ್ಸ್ – ಗೋಡೆಯ ಹುಕ್ ಮತ್ತು ಎಡ ಬದಿಯ ಫೋಟೊದಲ್ಲಿರುವ ಫ್ರೇಮ್

ಹೆಲಿಕಾಪ್ಟರ್ ಇರುವ ಚಿತ್ರವನ್ನೂ ಇಬ್ಬರ ಭೇಟಿಯ ಸಂದರ್ಭದ ಫೋಟೊಗಳಲ್ಲೂ ಕಾಣಬಹುದು

ಮೋದಿ ಭೇಟಿ ಸಂದರ್ಭದ ಚಿತ್ರ (ಮೇಲಿರುವ) ಹಾಗೂ ನರವಣೆ ಭೇಟಿ ಸಂದರ್ಭದ ಚಿತ್ರ (ಕೆಳಗಿನದ್ದು) ಕೂಡ ಸಾಮ್ಯತೆ ಇರುವುದನ್ನು ಗಮನಿಸಬಹುದು. ಅವುಗಳನ್ನು ಇಲ್ಲಿ ಗುರುತಿಸಲಾಗಿದೆ.

1. ನೀಲಿ ಗುರುತು – ಬಾಗಿಲು

2. ಹಸಿರು ಗುರುತು – ಪೈಪಿಂಗ್

3. ಕೆಂಪು ಗುರುತು – ಪವರ್ ಬೋರ್ಡ್

4. ಹಳದಿ ಗುರುತು – ಫೊಟೊ ಫ್ರೇಮ್

ಮೋದಿ (ಎಡಭಾಗದಲ್ಲಿ), ನರವಣೆ (ಬಲ ಭಾಗದಲ್ಲಿ) ಭೇಟಿ ವೇಳೆ ವಾರ್ಡ್‌ನ ಭಿನ್ನ ಬದಿಗಳಲ್ಲಿರುವ ಬಾಗಿಲು ಮತ್ತು ಹಾಸಿಗೆಗಳಲ್ಲಿನ ಸಾಮ್ಯತೆಯನ್ನೂ ಗಮನಿಸಬಹುದು.

ನರವಣೆ ಭೇಟಿ ಸಂದರ್ಭದ ವಿಡಿಯೊದಲ್ಲಿ ಕಾಣಿಸಿದ ಪ್ರೊಜೆಕ್ಟರ್ ಮತ್ತು ವೇದಿಕೆಯಂತಹ ಪ್ರದೇಶವೂ ಒಂದೇ ಆಗಿರುವುದನ್ನು ಗಮನಿಸಬಹುದು. ಅವುಗಳ ಸ್ಕ್ರೀನ್‌ಶಾಟ್ ಇಲ್ಲಿ ನೀಡಲಾಗಿದೆ.

ಈ ಎಲ್ಲ ದೃಶ್ಯಗಳು, ಚಿತ್ರಗಳು ಮೋದಿ ಭೇಟಿ ವೇಳೆ ಕೃತಕವಾಗಿ ಸೆಟ್ ನಿರ್ಮಿಸಿದ್ದಲ್ಲ ಎಂಬುದನ್ನು ಸಾಬೀತುಪಡಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು