ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Recipe|ಮಿಂಟ್‌ ಮಜ್ಜಿಗೆ, ಕುಲ್ಕಿ ಶರಬತ್‌

Published 28 ಏಪ್ರಿಲ್ 2023, 14:23 IST
Last Updated 28 ಏಪ್ರಿಲ್ 2023, 18:38 IST
ಅಕ್ಷರ ಗಾತ್ರ

ಬೇಸಿಗೆಯಲ್ಲಿ ತಂಪು ಪಾನೀಯಗಳದ್ದೇ ದರ್ಬಾರು. ಬೇರೆ ದಿನಗಳಲ್ಲಿ ಅಡುಗೆ ಮನೆಯಲ್ಲಿ ವಿಶಿಷ್ಟ ಖಾದ್ಯಗಳ ತಯಾರಿಕೆ ಪ್ರಯೋಗಗಳು ನಡೆದಂತೆ, ಬೇಸಿಗೆಯಲ್ಲಿ ಹೊಸ ರೀತಿಯ ಪಾನೀಯಗಳನ್ನು ತಯಾರಿಸುವ ಪ್ರಯತ್ನಗಳು ನಡೆಯುತ್ತಿರುತ್ತವೆ. ಅಂಥ ವಿಶಿಷ್ಟ ಪಾನೀಯಗಳ ರೆಸಿಪಿಗಳನ್ನು ಎಚ್‌.ಎಸ್.ವೇದಾವತಿ ಅವರು ಇಲ್ಲಿ ಹಂಚಿಕೊಂಡಿದ್ದಾರೆ.  

1. ಮಿಂಟ್ ಮಸಾಲೆ ಮಜ್ಜಿಗೆ.

ಬೇಕಾಗುವ ಸಾಮಗ್ರಿಗಳು:

ಗಟ್ಟಿ ಮೊಸರು 1/2 ಲೀಟರ್, ಉಪ್ಪು ರುಚಿಗೆ ತಕ್ಕಷ್ಟು, ಚಿಕ್ಕದಾಗಿ ಕತ್ತರಿಸಿದ ಹಸಿ ಮೆಣಸಿನಕಾಯಿ 1, ಕೊತ್ತಂಬರಿ ಸೊಪ್ಪು, ಪುದೀನಾ, ಕರಿಬೇವು ಎಲ್ಲವೂ ಸ್ವಲ್ಪ ಸ್ವಲ್ಪ, ಶುಂಠಿ ಒಂದಿಂಚು, ಹುರಿದು ಪುಡಿ ಮಾಡಿದ ಜೀರಿಗೆ 1/2ಟೀ ಚಮಚ.

ತಯಾರಿಸುವ ವಿಧಾನ:

ಮೇಲೆ ತಿಳಿಸಿರುವ ಸಾಮಗ್ರಿಗಳನ್ನು ಮಿಕ್ಸಿಯಲ್ಲಿ ಹಾಕಿ ಜೊತೆಗೆ ಸ್ವಲ್ಪ ಮೊಸರನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಉಳಿದ ಮೊಸರನ್ನು ಅದಕ್ಕೆ ಸೇರಿಸಿ ಒಂದು ಸುತ್ತು ಮಿಕ್ಸಿಯಲ್ಲಿ ರುಬ್ಬಿ ಕೊಳ್ಳಿ. ತಯಾರಿಸಿದ ಮಿಂಟ್ ಮಸಾಲೆ ಮಜ್ಜಿಗೆಯನ್ನು ಸರ್ವಿಂಗ್ ಮಾಡುವಾಗ ಐಸ್ ಕ್ಯೂಬ್ ಸೇರಿಸಿ ಸರ್ವ್ ಮಾಡಿ.ರುಚಿಕರವಾದ ಆರೋಗ್ಯಕ್ಕೆ ಹಿತಕರವಾದ ಮಿಂಟ್ ಮಸಾಲೆ ಮಜ್ಜಿಗೆ ತಯಾರಿಸಿ ಸವಿಯಿರಿ.

2. ಕುಲ್ಕಿ ಶರಬತ್

ದೇಹಕ್ಕೆ ತಂಪಾದ ತಂಪು ಪಾನೀಯ ಇದಾಗಿದೆ. ಇದು ಕೇರಳ ರಾಜ್ಯದ ಪಾನೀಯವಾಗಿದೆ. ಕೆಲವೇ ಕೆಲವು ಸಾಮಗ್ರಿಗಳನ್ನು ಉಪಯೋಗಿಸಿ ತಯಾರಿಸುವಂಥದ್ದು. ತುಂಬಾ ಸುಲಭವಾಗಿ ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು:

ನಿಂಬೆ ಹಣ್ಣು 1, ಕಾಮಕಸ್ತೂರಿ ಬೀಜ 2ಟೀ ಚಮಚ, ಹಸಿರು ಮೆಣಸಿನ ಕಾಯಿ 1(ಒಂದು ಗ್ಲಾಸಿಗೆ ಒಂದರಂತೆ ಹಾಕಬೇಕು), ಸಕ್ಕರೆ 2ಟೇಬಲ್ ಚಮಚ ಅಥಾವ ಜೇನು ತುಪ್ಪ.(ನಿಮ್ಮ ಸಿಹಿಗೆ ಅನುಗುಣವಾಗಿ ಹಾಕಿ), ಉಪ್ಪು ಚಿಟಿಕೆ, ನೀರು ಒಂದು ಗ್ಲಾಸ್, ಪುದೀನ ಸೊಪ್ಪು ಸ್ವಲ್ಪ.

ತಯಾರಿಸುವ ವಿಧಾನ

ಕಾಮಕಸ್ತೂರಿ ಬೀಜವನ್ನು ನೀರಿನಲ್ಲಿ ಐದು ನಿಮಿಷಗಳ ಕಾಲ ನೆನೆಸಿಡಿ. ನಿಂಬೆ ಹಣ್ಣನ್ನು ಒಂದರಲ್ಲಿ ಒಂದು ಚಿಕ್ಕದಾಗಿ ವೃತ್ತಾಕಾರವಾಗಿ ಕತ್ತರಿಸಿ. ಅದನ್ನು ಗ್ಲಾಸಿನಲ್ಲಿ ಹಾಕಿ. ಚಿಟಿಕೆ ಉಪ್ಪು ಮತ್ತು ಸಕ್ಕರೆಯನ್ನು ಗ್ಲಾಸಿನೊ ಳಗೆ ಹಾಕಿ. ನಂತರ ನೆನೆಸಿದ ಕಾಮಕಸ್ತೂರಿ ಬೀಜವನ್ನು ಅದರಲ್ಲಿ ಸೇರಿಸಿ. ಬಳಿಕ ಹಸಿರು ಮೆಣಸಿನ ಕಾಯಿಯನ್ನು ತೊಟ್ಟಿನ ಬುಡದಿಂದ ಕೊನೆಯವರೆಗೆ ಮಧ್ಯದಲ್ಲಿ ಕತ್ತರಿಸಿ ಅದನ್ನು ಗ್ಲಾಸಿನೊಳಗೆ ಹಾಕಿ. ಒಂದು ನಿಂಬೆ ಹಣ್ಣಿನ ರಸವನ್ನು ಸೇರಿಸಿ. ಈಗ ಐಸ್ ಕ್ಯೂಬ್ ಸೇರಿಸಿ. ನೀರನ್ನು ಗ್ಲಾಸಿನಲ್ಲಿ ಹಾಕಿ. ಕೊನೆಯಲ್ಲಿ ಪುದೀನ ಸೊಪ್ಪು ಸೇರಿಸಿ.

ಅದೇ ಗಾತ್ರದ ಒಂದು ಲೋಟದಿಂದ ಗಟ್ಟಿಯಾಗಿ ಮುಚ್ಚಿ ಚನ್ನಾಗಿ ಕಲಕಿ. ಸಕ್ಕರೆ ಪೂರ್ತಿ ಕರಗುವರೆಗೆ ಕಲಕಿ. ಈಗ ರುಚಿಕರವಾದ ಮತ್ತು ದೇಹಕ್ಕೆ ತಂಪ್ಪಾದ ಕುಲ್ಕಿ ಶರಬತ್ ಸವಿಯಲು ರೆಡಿ.

ಕುಲ್ಕಿ ಶರಬತ್
ಕುಲ್ಕಿ ಶರಬತ್

3. ಕಿತ್ತಳೆ ಹಣ್ಣಿನ ಜ್ಯೂಸ್

ಬಿಸಿಲು ಕಾಲದಲ್ಲಿ ತಂಪಾದ ಜ್ಯೂಸ್‌ಗಳು ದೇಹಕ್ಕೆ ಹಿತವನ್ನುಂಟು ಮಾಡುತ್ತವೆ. ಕಿತ್ತಳೆ ಹಣ್ಣಿನಲ್ಲಿ ’ಸಿ’ ವಿಟಮಿನ್ ಹೇರಳವಾಗಿ ಇರುವುದರಿಂದ ಆರೋಗ್ಯಕ್ಕೂ ಒಳ್ಳೆಯದು.

ಬೇಕಾಗುವ ಸಾಮಗ್ರಿಗಳು

ಕಿತ್ತಳೆ ಹಣ್ಣು 4, ಬ್ಲಾಕ್ ಸಾಲ್ಟ್ 1/4ಟೀ ಚಮಚ, ಚಾಟ್ ಮಸಾಲ 1/2ಟೀ ಚಮಚ, ಸಕ್ಕರೆ ನಿಮ್ಮ ಸಿಹಿಗೆ ಅನುಸಾರವಾಗಿ ಹಾಕಿ, ಐಸ್ ಕ್ಯೂಬ್ ಸ್ವಲ್ಪ.

ತಯಾರಿಸುವ ವಿಧಾನ

ಕಿತ್ತಳೆ ಹಣ್ಣಿನ ಸಿಪ್ಪೆ ಮತ್ತು ಬೀಜವನ್ನು ಬಿಡಿಸಿಕೊಳ್ಳಿ. ನಂತರ ಮಿಕ್ಸಿಯಲ್ಲಿ ಕಿತ್ತಳೆ ಹಣ್ಣು, ಸಕ್ಕರೆ, ಬ್ಲಾಕ್ ಸಾಲ್ಟ್, ಚಾಟ್ ಮಸಾಲವನ್ನು ಹಾಕಿ ರುಬ್ಬಿ ಕೊಂಡು ರಸವನ್ನು ತಯಾರಿಸಿ ಕೊಳ್ಳಿ. ತಯಾರಿಸಿ ಕೊಂಡ ಜ್ಯೂಸ್ ಗೆ ಐಸ್ ಕ್ಯೂಬ್ ಸೇರಿಸಿ ಇನ್ನೊಮ್ಮೆ ಒಂದು ಸುತ್ತು ಮಿಕ್ಸಿಯಲ್ಲಿ ರುಬ್ಬಿ.

ನಂತರ ಸರ್ವಿಂಗ್ ಗ್ಲಾಸ್ ನಲ್ಲಿ ಹಾಕಿ. ಚಿಟಿಕೆ ಚಾಟ್ ಮಸಾಲೆಯನ್ನು ಅದರ ಮೇಲೆ ಉದುರಿಸಿ ಅಲಂಕರಿಸಿ. ರುಚಿಕರವಾದ ಕಿತ್ತಳೆ ಹಣ್ಣಿನ ಜ್ಯೂಸ್ ತಯಾರಿಸಿ ಸವಿಯಿರಿ.

5. ಶುಂಠಿ-ನಿಂಬೆ ಜ್ಯೂಸ್

ಬೇಕಾಗುವ ಸಾಮಗ್ರಿಗಳು

ನಿಂಬೆ ಹಣ್ಣು 1, ಶುಂಠಿ 2 ಇಂಚು, ಬೇಸಿಲ್ ಸೀಡ್ಸ್ 1ಟೇಬಲ್ ಚಮಚ(ಕಾಮಕಸ್ತೂರಿ ಬೀಜ), ಫ್ರೆಶ್ ಅರಶಿನದ ಗೆಡ್ಡೆ 2ಇಂಚು, ಕ್ಯಾರೆಟ್ 2, ಬ್ಲಾಕ್ ಸಾಲ್ಟ್ ಚಿಟಿಕೆ, ಪುದೀನ ಎಲೆಗಳು 15, ಜೇನು ತುಪ್ಪ ನಿಮ್ಮ ಸಿಹಿಗೆ ಅನುಗುಣವಾಗಿ ಹಾಕಿ.

ತಯಾರಿಸುವ ವಿಧಾನ:

ಬೇಸಿಲ್ ಸಿಡ್ಸ್ಅನ್ನು ಮುಕ್ಕಾಲು ಕಪ್ ನೀರಿನಲ್ಲಿ ನೆನೆಸಿಟ್ಟುಕೊಳ್ಳಿ. ತಾಜಾವಾಗಿರುವ ಅರಿಸಿನ ಗೆಡ್ಡೆ, ಶುಂಠಿ ಮತ್ತು ಕ್ಯಾರೆಟ್ ಸಿಪ್ಪೆಯನ್ನು ತೆಗೆದು ಚಿಕ್ಕದಾಗಿ ಕತ್ತರಿಸಿ ಕೊಳ್ಳಿ. ಹೆಚ್ಚಿಕೊಂಡ ಕ್ಯಾರೆಟ್, ಅರಿಸಿನ ಮತ್ತು ಶುಂಠಿಯನ್ನು ಮಿಕ್ಸಿಯಲ್ಲಿ ಹಾಕಿ, ಜೊತೆಗೆ ಪುದೀನ, ಜೇನುತುಪ್ಪ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಕಪ್ ನೀರನ್ನು ಸೇರಿಸಿ ಮತ್ತೊಮ್ಮೆ ರುಬ್ಬಿಕೊಳ್ಳಿ. ಒಂದು ಪಾತ್ರೆಯಲ್ಲಿ ಹಾಕಿ ನಿಂಬೆರಸ ಮತ್ತು ಬೇಸಿಲ್ ಸೀಡ್ಸ್ಅನ್ನು ಸೇರಿಸಿ ಮಿಶ್ರಣ ಮಾಡಿ. ರುಚಿಕರವಾದ ಮತ್ತು ಆರೋಗ್ಯಕರವಾದ ಶುಂಠಿ-ನಿಂಬೆ ಜ್ಯೂಸ್ ತಯಾರಿಸಿ ಸವಿಯಿರಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT