ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಹಿ ಹಾಗಲ ರುಚಿ ಖಾದ್ಯಗಳು

Last Updated 29 ಮಾರ್ಚ್ 2019, 19:31 IST
ಅಕ್ಷರ ಗಾತ್ರ

ಹಾಗಲಕಾಯಿ ಸುಕ್ಕ
ಬೇಕಾಗುವ ಸಾಮಗ್ರಿಗಳು: ಮಧ್ಯಮ ಗಾತ್ರದ ಹಾಗಲಕಾಯಿ - 1, ಒಗ್ಗರಣೆಗೆ ಎಣ್ಣೆ - 2 ಟೇಬಲ್ ಸ್ಪೂನ್, ಉದ್ದಿನಬೇಳೆ - 1 ಚಮಚ, ಕರಿಬೇವು ಸ್ವಲ್ಪ, ಸಾಸಿವೆ ಸ್ವಲ್ಪ, ಒಣಮೆಣಸಿನಕಾಯಿ - 1, ಹುಣಸೆಹಣ್ಣು ಸ್ವಲ್ಪ, ಖಾರಪುಡಿ - 1 ಚಮಚ, ಕಾಯಿತುರಿ – 5-6 ಚಮಚ, ಬೆಲ್ಲದ ಪುಡಿ - 4 ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಹಾಗಲಕಾಯಿ ಸಣ್ಣಗೆ ಹೆಚ್ಚಿ ಸ್ವಲ್ಪ ಉಪ್ಪು ಮತ್ತು ಹುಣಸೆರಸ ಹಾಕಿ 10 ನಿಮಿಷ ಇಡಬೇಕು. ನಂತರ ನೀರು ಸ್ವಲ್ಪ ಹಿಂಡಿ ತೆಗೆಯಬೇಕು. ಪಾತ್ರೆಯಲ್ಲಿ ಒಗ್ಗರಣೆಗೆ ಎಣ್ಣೆ ಇಟ್ಟು ಉದ್ದಿನಬೇಳೆ, ಕರಿಬೇವು, ಸಾಸಿವೆ ಹಾಕಿ, ಒಣಮೆಣಸಿನಕಾಯಿ ತುಂಡುಗಳನ್ನು ಹುರಿದು, ಹಾಗಲಕಾಯಿ ಹೋಳುಗಳನ್ನು ಹಾಕಿ ಚೆನ್ನಾಗಿ ಫ್ರೈ ಮಾಡಬೇಕು. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ವಲ್ಪ ಹೊತ್ತು ಮುಚ್ಚಿ ಇಡಬೇಕು. ಒಗ್ಗರಣೆಯಲ್ಲಿ ಹೋಳುಗಳು ಚೆನ್ನಾಗಿ ಬಾಡಿದಾಗ 2 ಚಮಚ ಹುಣಸೆರಸ, ಖಾರಪುಡಿ ಹಾಕಿ ಚೆನ್ನಾಗಿ ಕೈಯಾಡಿಸಿ, ಕಾಯಿತುರಿ, ಬೆಲ್ಲ ಹಾಕಿ ಒಂದೆರಡು ನಿಮಿಷ ಫ್ರೈ ಮಾಡಿ ಇಳಿಸುವುದು. ಇದು ಊಟದ ರುಚಿಯನ್ನು ಹೆಚ್ಚಿಸುತ್ತದೆ.

*


ಹಾಗಲಕಾಯಿ ಬೋಂಡ
ಬೇಕಾಗುವ ಸಾಮಗ್ರಿಗಳು:
ಹಾಗಲಕಾಯಿ - 1, ಕಡಲೆಹಿಟ್ಟು - 2 ಕಪ್, ಹುಣಸೆರಸ - 1 ಚಮಚ, ಹಸಿಮೆಣಸಿನಕಾಯಿ - 1, ಖಾರದಪುಡಿ - 1 ಚಮಚ, ಕೊತ್ತಂಬರಿ ಸೊಪ್ಪು, ಶುಂಠಿ ಸ್ವಲ್ಪ, ಕರಿಯಲು ಎಣ್ಣೆ, ಸ್ವಲ್ಪ ಹಿಂಗು, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಹಾಗಲಕಾಯಿಯನ್ನು ತೆಳ್ಳಗೆ ಬಿಲ್ಲೆಯಾಗಿ ಕತ್ತರಿಸಿ ಉಗುರು ಬೆಚ್ಚಗಿನ ನೀರಿಗೆ ಹಾಕಿ ಅದಕ್ಕೆ ಉಪ್ಪು, ಹುಣಸೆರಸ ಹಾಕಿ 10 ನಿಮಿಷ ಇಡಬೇಕು. ನಂತರ ಬಿಲ್ಲೆಗಳನ್ನು ಒಂದು ತಟ್ಟೆಗೆ ಹಾಕಿ ತೆಗೆದು ಇಡುವುದು. ಕೊತ್ತಂಬರಿ ಸೊಪ್ಪು, ಹೆಚ್ಚಿದ ಶುಂಠಿ ಮತ್ತು ಹಸಿಮೆಣಸಿನಕಾಯಿಯನ್ನು ಮಿಕ್ಸಿಯಲ್ಲಿ ಪೇಸ್ಟ್ ಮಾಡಿ ಕಡಲೆಹಿಟ್ಟಿಗೆ ಹಾಕಿ ಖಾರಪುಡಿ, ಉಪ್ಪು ಸೇರಿಸಿ, ಪುಡಿ ಹಿಂಗನ್ನು ಬೆರಸಿ ಬೋಂಡ ಹಿಟ್ಟಿನಂತೆ ಕಲೆಸುವುದು. ಹಾಗಲದ ಬಿಲ್ಲೆಗಳನ್ನು ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಗೆ ಹಾಕಿ ಮಂದ ಉರಿಯಲ್ಲಿ ಬೇಯಿಸುವುದು. ಸ್ವಲ್ಪ ಖಾರ, ಸ್ವಲ್ಪ ಒಗರು ರುಚಿಯ ಗರಿಗರಿಯಾದ ಬೋಂಡ ತಿನ್ನಲು ರುಚಿಯಾಗಿರುತ್ತದೆ.

*


ಹಾಗಲಕಾಯಿ ಉಪ್ಕರಿ
ಬೇಕಾಗುವ ಸಾಮಗ್ರಿಗಳು: ಹಾಗಲಕಾಯಿ – 1, ಈರುಳ್ಳಿ – 1,ಬೆಳ್ಳುಳ್ಳಿ ಎಸಳು - 2, ಸಾಂಬಾರುಪುಡಿ – 1 ಚಮಚ, ಕಾಯಿತುರಿ – 1/2 ಬಟ್ಟಲು, ಬೆಲ್ಲ – 1/4 ಬಟ್ಟಲು, ಹುಣಿಸೆಹಣ್ಣು – 1/2 ಲಿಂಬೆ ಹೋಳಿನಷ್ಟು, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಹಾಗಲಕಾಯಿಯನ್ನು ಸಣ್ಣದಾಗಿ ಹೆಚ್ಚಿ, ಉಪ್ಪು ಬೆರಸಿ 10-15 ನಿಮಿಷ ಇಡಿ. ನಂತರ ಸ್ವಲ್ಪ ರಸ ಹಿಂಡಿ ತೆಗೆಯಿರಿ. ಪಾತ್ರೆಯಲ್ಲಿ ಒಗ್ಗರಣೆಗೆ 1 ಟೇಬಲ್ ಸ್ಪೂನ್ ಎಣ್ಣೆ ಇಟ್ಟು ಸ್ವಲ್ಪ ಉದ್ದಿನಬೇಳೆ ಹುರಿದು , ಬೆಳ್ಳುಳ್ಳಿ ಎಸಳು, ಸಾಸಿವೆ, ಕರಿಬೇವು, ಒಣಮೆಣಸಿನಕಾಯಿ ತುಂಡು, ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಬೇಕು. ಬಳಿಕ ಹಾಗಲಕಾಯಿ ಹೋಳುಗಳನ್ನು ಹಾಕಿ 4-5 ನಿಮಿಷ ಬಾಡಿಸಬೇಕು. ನಂತರ ಉಪ್ಪು ಹುಣಿಸೆರಸ, ಅರಿಸಿನಪುಡಿ ಹಾಕಿ ಮುಚ್ಚಿಟ್ಟು ಬೇಯಿಸಿ. ಬೆಂದ ಬಳಿಕ ಸಾಂಬಾರುಪುಡಿ, ಕಾಯಿತುರಿ, ಬೆಲ್ಲ ಹಾಕಿ 3-4 ನಿಮಿಷ ಚೆನ್ನಾಗಿ ಕೈಯಾಡಿಸಿ ಇಳಿಸಿ. ರುಚಿಕರವಾದ ಈ ಖಾದ್ಯದೊಂದಿಗೆ ಎರಡು ತುತ್ತು ಊಟ ಹೆಚ್ಚಿಗೆ ಸೇರುತ್ತದೆ.

*


ಹಾಗಲ ಮೆಣಸ್ಕಾಯ್
ಬೇಕಾಗುವ ಸಾಮಗ್ರಿಗಳು:
ದೊಡ್ಡ ಹಾಗಲಕಾಯಿ - 1, ಒಂದು ಗಿಟಕು ಕಾಯಿತುರಿ, ಕಡಲೆಬೇಳೆ - 2 ಚಮಚ, ಉದ್ದಿನಬೇಳೆ - 2 ಚಮಚ, ಬ್ಯಾಡಗಿ ಮೆಣಸಿನಕಾಯಿ – 7-8, ಮೀಡಿಯಂ ಎಳ್ಳು - 1 ಚಮಚ, ಒಂದು ಲಿಂಬೆ ಗಾತ್ರದ ಹುಣಸೆಹಣ್ಣು, ಅಷ್ಟೇ ಪ್ರಮಾಣದ ಬೆಲ್ಲ, ಧನಿಯಾ - 1 ಚಮಚ, ಜೀರಿಗೆ 1/2 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಒಗ್ಗರಣೆಗೆ ಎಣ್ಣೆ, ಸಾಸಿವೆ, ಕರಿಬೇವು.

ತಯಾರಿಸುವ ವಿಧಾನ: ಹಾಗಲಕಾಯಿಯನ್ನು ತೆಳ್ಳಗಿನ ಬಿಲ್ಲೆಗಳಾಗಿ ಕತ್ತರಿಸಿ ನಡುವೆ ಪುನಃ ಕತ್ತರಿಸಬೇಕು. ಅದಕ್ಕೆ ಉಪ್ಪು ಮತ್ತು ಹುಣಸೆರಸ ಹಾಕಿ ಅರ್ಧ ಗಂಟೆ ಇಡಬೇಕು. ಬಳಿಕ ನೀರು ಹಿಂಡಿ ಒಂದು ಪ್ಲೇಟಿಗೆ ತೆಗೆಯಬೇಕು. ಉದ್ದಿನಬೇಳೆ, ಕಡಲೆಬೇಳೆ, ಬ್ಯಾಡಗಿ ಮೆಣಸಿನಕಾಯಿ, ಧನಿಯಾ, ಜೀರಿಗೆ, ಎಳ್ಳು ಇವನ್ನು ಸ್ವಲ್ಪ ಎಣ್ಣೆ ಹಾಕಿ ಹುರಿದು ತೆಗೆದು ಹುಣಸೆಹಣ್ಣು ಮತ್ತು ಕಾಯಿತುರಿ ಜೊತೆಗೆ ನಯವಾಗಿ ರುಬ್ಬಬೇಕು. ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಕರಿಬೇವು, ಒಣಮೆಣಸಿನ ತುಂಡು ಹಾಕಿ ಹುರಿದು, ಹಾಗಲಕಾಯಿ ಬಿಲ್ಲೆಗಳನ್ನು ಹಾಕಿ 5-6 ನಿಮಿಷ ಹುರಿಯಬೇಕು. ಇದಕ್ಕೆ ಅರಿಸಿನ ಪುಡಿ ಉಪ್ಪು ಬೆರೆಸಿ ಪುನಃ 4-5 ನಿಮಿಷ ಕೈಯಾಡಿಸಿ ಸ್ವಲ್ಪ ಹೊತ್ತು ಮುಚ್ಚಿ ಇಡಬೇಕು. ಸ್ವಲ್ಪ ಬೆಂದ ಬಳಿಕ ಬೆಲ್ಲ ಹಾಕಿ ಸ್ವಲ್ಪ ಹೊತ್ತು ಕೈಯಾಡಿಸಿ ರುಬ್ಬಿದ ಮಸಾಲೆ ಸೇರಿಸಿ ಚೆನ್ನಾಗಿ ಕೈಯಾಡಿಸಬೇಕು. ನಂತರ ಸ್ವಲ್ಪ ನೀರು ಸೇರಿಸಿ 2-3 ನಿಮಿಷ ಕುದಿಸಿ ಇಳಿಸುವುದು. ಇದನ್ನು ಅನ್ನದ ಜೊತೆ ಕಲಸಿ ತಿನ್ನಬಹುದು. ದೋಸೆ ಚಪಾತಿಗೂ ಹೊಂದುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT