ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುಷ್‌ ಸಾಂಪ್ರದಾಯಿಕ ಆಹಾರ ಪಟ್ಟಿಯಲ್ಲಿ 'ಪತ್ರೊಡೆ'

ಅಕ್ಷರ ಗಾತ್ರ

ಬೆಂಗಳೂರು: ಪೌಷ್ಠಿಕಾಂಶಯುಕ್ತ ಆಹಾರ ಸೇವನೆಗೆ ಸಲಹೆ ನೀಡಿರುವ ಕೇಂದ್ರದ ಆಯುಷ್‌ ಸಚಿವಾಲಯ 26 ಬಗೆಯ ಸಾಂಪ್ರದಾಯಿಕ ಅಡುಗೆಗಳ ರೆಸಿಪಿಗಳನ್ನು (ಮಾಡುವ ವಿಧಾನ) ಪ್ರಕಟಿಸಿದೆ. ದೇಸಿ ಅಡುಗೆ 'ಪತ್ರೊಡೆ' ಸಹ ಆ ಸಾಲಿನಲ್ಲಿದೆ.

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ದೇಶದ ಇತರೆ ಕೆಲವು ಭಾಗಗಳಲ್ಲಿ ಸಿದ್ಧಪಡಿಸುವ ಪತ್ರೊಡೆಗೆ ಈಗ ರಾಷ್ಟ್ರಮಟ್ಟದ ಮನ್ನಣೆ ಸಿಕ್ಕಂತಾಗಿದೆ. ಕೆಸುವಿನ ಎಲೆಯಲ್ಲಿ ಮಾಡುವ ಪತ್ರೊಡೆಯು ಆಯುಷ್‌ ರೆಸಿಪಿಗಳ ಸಂಗ್ರಹದಲ್ಲಿ ಪ್ರಕಟವಾಗಿದೆ. 26 ಸಾಂಪ್ರದಾಯಿಕ ಅಡುಗೆಗಳನ್ನು ತಯಾರಿಸುವ ವಿಧಾನವನ್ನು ವಿವರಿಸಲಾಗಿರುವ ಬುಕ್‌ಲೆಟ್‌ ಆಯುಷ್‌ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಅಡುಗೆಯ ಚಿತ್ರ, ಬೇಕಾಗುವ ಸಾಮಗ್ರಿಗಳು, ತಯಾರಿಸುವ ವಿಧಾನ, ಅದರಿಂದ ಆರೋಗ್ಯಕ್ಕೆ ಆಗುವ ಲಾಭಗಳು ಹಾಗೂ ಯಾವುದನ್ನು ಅತಿಯಾಗಿ ಬಳಸಬಾರದು ಎಂಬ ಎಚ್ಚರಿಕೆಯೂ ಇದರಲ್ಲಿದೆ.

ಆರೋಗ್ಯ ಲಾಭಗಳು

ಜೀರ್ಣ ಕ್ರಿಯೆಗೆ ಅಗತ್ಯವಿರುವ ನಾರಿನ ಅಂಶ ಅಧಿಕಮಟ್ಟದಲ್ಲಿರುವುದರಿಂದ ಸುಲಭವಾಗಿ ಜೀರ್ಣವಾಗುತ್ತದೆ. ಕೆಸುವಿನ ಎಲೆಗಳಲ್ಲಿ ಕಬ್ಬಿಣಾಂಶ, ವಿಟಮಿನ್‌ ಸಿ ಹಾಗೂ ಬೀಟಾ ಕರೊಟೀನ್‌ ಅಂಶ ಹೆಚ್ಚಿದೆ. ಇದರಿಂದಾಗಿ ರಕ್ತದಲ್ಲಿ ಹಿಮೊಗ್ಲೋಬಿನ್‌ ಮಟ್ಟ ವೃದ್ಧಿಸಲು ಅನುವಾಗುತ್ತದೆ. ರುಮಟಾಯ್ಡ್‌ ಆರ್ಥ್ರೈಟಿಸ್‌ ರೋಗಿಗಳಲ್ಲಿ ಉರಿಯೂತ ಕಡಿಮೆ ಮಾಡಲು ಪತ್ರೊಡೆ ಸಹಕಾರಿ ಎಂದು ಆಯುಷ್‌ ವಿವರಿಸಿದೆ.

ಎಲ್ಲೆಲ್ಲ ಪತ್ರೊಡೆ ಪರಿಚಿತ?

ಕರ್ನಾಟಕ ಮಾತ್ರವಲ್ಲದೆ, ಕೇರಳ, ಮಹಾರಾಷ್ಟ್ರ, ಗೋವಾ, ಹಿಮಾಚಲ ಪ್ರದೇಶ, ಗುಜರಾತ್‌ ಹಾಗೂ ಈಶಾನ್ಯ ಪ್ರದೇಶದ ಕೆಲವು ಭಾಗಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಪತ್ರೊಡೆ ಸಿದ್ಧಪಡಿಸಲಾಗುತ್ತದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಹೆಚ್ಚಾಗಿ ಪತ್ರೊಡೆ ತಿಂಡಿ ತಯಾರಿಸಲಾಗುತ್ತದೆ. ಮುಂಗಾರಿನ ಅವಧಿಯಲ್ಲಿ ಪತ್ರೊಡೆಗೆ ಅಗತ್ಯವಿರುವ ಕೆಸುವಿನ ಎಲೆಗಳು ಹೇರಳವಾಗಿ ಬೆಳೆಯುತ್ತವೆ.

ಪ್ರಕಟಿಸಲಾಗಿರುವ ರೆಸಿಪಿಗಳ ಪೈಕಿ ಕೆಲವು; ಮಜ್ಜಿಗೆ, ಅಮಲಕಿ ಪಾನಕ (ಬೆಟ್ಟದ ನೆಲ್ಲಿಕಾಯಿ ಪಾನಕ), ಬೀಟ್‌ರೂಟ್‌ ಹಲ್ವಾ, ಗುಲ್‌ಕಂದ್‌, ರಾಗಿ ಮತ್ತು ಬಾಳೆಹಣ್ಣು ಸ್ಮೂತಿ, ಮಟನ್‌ ಸೂಪ್‌, ಮಧುಕ ಲೇಹ, ಕರ್ಜೂರದ ಲಾಡು,..ಇನ್ನೂ ಹಲವು.

ಆಯುಷ್‌ ಸಚಿವಾಲಯ ಪ್ರಕಟಿಸಿರುವ ಪತ್ರೊಡೆ ರೆಸಿಪಿ
ಆಯುಷ್‌ ಸಚಿವಾಲಯ ಪ್ರಕಟಿಸಿರುವ ಪತ್ರೊಡೆ ರೆಸಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT