ಗುರುವಾರ , ಏಪ್ರಿಲ್ 2, 2020
19 °C

ಕಡಲ ತೀರದ ಖಾದ್ಯಗಳು

ವಿದ್ಯಾಶ್ರೀ ಎಸ್‌. Updated:

ಅಕ್ಷರ ಗಾತ್ರ : | |

ಕರಾವಳಿ ಎಂದಾಕ್ಷಣ ನೆನಪಾಗುವುದು ಕಡಲ ತೀರ ಹಾಗೂ ಮೀನಿನ ಖಾದ್ಯಗಳು. ಬಗೆ ಬಗೆಯ ಮೀನಿನ ಖಾದ್ಯಗಳ ತಯಾರಿಕೆಗೆ ಕರಾವಳಿಗರು ಎತ್ತಿದ ಕೈ. ಮೀನಿನ ಜೊತೆಗೆ ಇತರೆ ಮಾಂಸಾಹಾರಿ ಖಾದ್ಯಗಳನ್ನೂ ತಮ್ಮದೇ ಆದ ರುಚಿಯಲ್ಲಿ ಉಣಬಡಿಸುತ್ತಾರೆ ಅಲ್ಲಿನ ಜನ. ಸಿಗಡಿ, ಏಡಿ, ಕೋಳಿ ಮಾಂಸದಿಂದ ಫ್ರೈ, ಘೀ ರೋಸ್ಟ್‌, ಸುಕ್ಕ, ಸಾಂಬಾರ್ ಕೂಡ ತಯಾರಿಸುತ್ತಾರೆ. ಮನೆಯಲ್ಲಿಯೇ ಕುಳಿತು ಸುಲಭವಾಗಿ ಈ ಖಾದ್ಯಗಳನ್ನು ಹೇಗೆ ತಯಾರಿಸಬಹುದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಚಿಕನ್‌ ಫ್ರೈ
ಬೇಕಾಗುವ ಸಾಮಗ್ರಿಗಳು:
ಮೂಳೆ ರಹಿತ ಚಿಕನ್‌– 250 ಗ್ರಾಂ, ಶುಂಠಿ–ಬೆಳ್ಳುಳ್ಳಿ ಪೇಸ್ಟ್‌ – 1 ಚಮಚ, ಹಸಿಮೆಣಸಿನ ಪೇಸ್ಟ್‌– ಅರ್ಧ ಚಮಚ, ಅರಿಸಿನ ಪುಡಿ– ಅರ್ಧ ಚಮಚ, ಜೀರಿಗೆ ಪುಡಿ – 1 ಚಮಚ, ಕೊತ್ತಂಬರಿ ಪುಡಿ – 1ಚಮಚ, ಗರಂ ಮಸಾಲಾ– 1 ಚಮಚ, ಉಪ್ಪು– ರುಚಿಗೆ ತಕ್ಕಷ್ಟು, ವಿನೆಗರ್‌ – 1 ಚಮಚ, ಮೊಟ್ಟೆ 1, ಮೈದಾ– 1 ಕಪ್‌, ಎಣ್ಣೆ– 2ಕಪ್‌

ತಯಾರಿಸುವ ವಿಧಾನ: ಕೋಳಿ ಮಾಂಸವನ್ನು ಶುಂಠಿ, ಬೆಳ್ಳುಳ್ಳಿ ಮತ್ತು ಹಸಿಮೆಣಸಿನ ಪೇಸ್ಟ್‌ನೊಂದಿಗೆ ಕಲಸಿಡಿ. 10 ನಿಮಿಷದ ನಂತರ ಜೀರಿಗೆ, ಅರಿಸಿನ, ಗರಂ ಮಸಾಲಾ ಮತ್ತು ಉಪ್ಪನ್ನು ಸೇರಿಸಿಕೊಳ್ಳಿ. ಇದಕ್ಕೆ ವಿನೇಗರ್‌ ಹಾಕಿ. ಚೆನ್ನಾಗಿ ಮಿಶ್ರಣ ಮಾಡಿ. 1 ಗಂಟೆ ನಂತರ ಇದಕ್ಕೆ ಮೊಟ್ಟೆಯನ್ನು ಒಡೆದು ಹಾಕಿ. ಸ್ವಲ್ಪ ಮೈದಾವನ್ನು ಹಾಕಿ ಕಲಸಿ. ನಂತರ ದಪ್ಪ ತಳ ಪಾತ್ರೆಗೆ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ಈ ಎಣ್ಣೆಗೆ ಕಲಸಿಟ್ಟುಕೊಂಡ ಕೋಳಿ ಮಾಂಸವನ್ನು ಹಾಕಿ ಕಂದು ಬಣ್ಣ ಬರುವವರೆಗೂ ಎರಡೂ ಬದಿ ಹುರಿದರೆ, ರುಚಿಯಾದ ಚಿಕನ್‌ ಫ್ರೈ ಸವಿಯಲು ಸಿದ್ಧವಾಗುತ್ತದೆ. 

***

ಸಿಗಡಿ ಫ್ರೈ
ಬೇಕಾಗುವ ಸಾಮಗ್ರಿಗಳು: ಸಿಗಡಿ – ಅರ್ಧ ಕೆ.ಜಿ. ಕೆಂಪು ಮೆಣಸಿನ ಪುಡಿ - 2 ಚಿಕ್ಕ ಚಮಚ,  ಅರಿಸಿನ ಪುಡಿ - ಸ್ವಲ್ಪ, ಎಣ್ಣೆ, ಕೊತ್ತಂಬರಿ ಪುಡಿ (ಕೊತ್ತಂಬರಿ ಪುಡಿ) - 1½ ಚಮಚ, ಉಪ್ಪು– ರುಚಿಗೆ ತಕ್ಕಷ್ಟು, ಬೆಳ್ಳುಳ್ಳಿ–ಶುಂಠಿ ಪೇಸ್ಟ್ - 1 ಚಮಚ, ಈರುಳ್ಳಿ - 2, ಕರಿಬೇವಿನ ಎಲೆ, ನೀರು - ½ ಕಪ್, ಲಿಂಬೆರಸ ಸ್ವಲ್ಪ, ಕೊತ್ತಂಬರಿ ಸೊಪ್ಪು. 

ತಯಾರಿಸುವ ವಿಧಾನ: ಒಂದು ಚಿಕ್ಕ ಪಾತ್ರೆಯಲ್ಲಿ ಸಿಗಡಿ, ಉಪ್ಪು, ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಅರಿಸಿನ ಪುಡಿ, ಬೆಳ್ಳುಳ್ಳಿ–ಶುಂಠಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಹತ್ತು ನಿಮಿಷ ನೆನೆಯಲು ಬಿಡಿ. ಬಾಣಲೆಗೆ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಇರಿಸಿ. ಇದಕ್ಕೆ ಈರುಳ್ಳಿ ಸೇರಿಸಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಬಳಿಕ ಮೊದಲ ಪಾತ್ರೆಯಿಂದ ಸಿಗಡಿಯನ್ನು ಹಾಕಿ ಇದರ ಜೊತೆಗೆ ಕರಿಬೇವಿನ ಎಲೆಗಳನ್ನು ಹಾಕಿ ಮಿಶ್ರಣ ಮಾಡಿ. ಸಿಗಡಿ ಚೆನ್ನಾಗಿ ಇದರಲ್ಲಿ ಫ್ರೈ ಆಗಲಿ. ಬಳಿಕ ನೀರು ಹಾಕಿ ಮಿಶ್ರಣ ಮಾಡಿ ಮುಚ್ಚಳ ಮುಚ್ಚಿ. ಸುಮಾರು ಐದರಿಂದ ಎಂಟು ನಿಮಿಷಗಳವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿ. ಬಳಿಕ ಮುಚ್ಚಳವನ್ನು ತೆರೆದು ಸಿಗಡಿಯ ಎಲ್ಲಾ ಭಾಗಗಳು ಬೇಯುವಂತೆ ಇನ್ನಷ್ಟು ಹುರಿಯಿರಿ. ತುಂಬಾ ಒಣಗಿದ್ದಂತೆ ಕಂಡುಬಂದರೆ ಕೊಂಚ ಎಣ್ಣೆಯನ್ನು ಸೇರಿಸಬಹುದು. ಮಸಾಲೆಯುಕ್ತ ಸಿಗಡಿ ಫ್ರೈ ಈಗ ತಯಾರಾಗಿದೆ. ಇದಕ್ಕೆ ಕೊಂಚ ಲಿಂಬೆ ರಸ ಸಿಂಪಡಿಸಿ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾಗಿರುತ್ತದೆ.

***

ಸಿಗಡಿ ಘೀ ರೋಸ್ಟ್‌
ಬೇಕಾಗುವ ಸಾಮಗ್ರಿಗಳು:
 ಏಡಿ – 1/2 ಕೆ.ಜಿ, ಕೆಂಪು ಮೆಣಸು – 15-20,  ಕರಿಮೆಣಸಿನ ಪುಡಿ – ಅರ್ಧಚಮಚ, ಅರಸಿನ ಪುಡಿ– ಅರ್ಧ ಚಮಚ, ಬೆಳ್ಳುಳ್ಳಿ – 5 ಎಸಳು, ಕರಿಬೇವಿನ ಎಲೆ, ಚಿಕ್ಕ ಶುಂಠಿ ತುಂಡು, ರುಚಿಗೆ ತಕ್ಕ ಉಪ್ಪು, ನಿಂಬೆ ಗಾತ್ರದ ಹುಣಸೆಹಣ್ಣು, ತುಪ್ಪ – 200ಮಿ.ಲೀ

ತಯಾರಿಸುವ ವಿಧಾನ: ಹುಣಸೆಹಣ್ಣಿನ ರಸ ಮಾಡಿ ಅದರಲ್ಲಿ ಕೆಂಪು ಮೆಣಸನ್ನು ಒಂದು ರಾತ್ರಿ ನೆನೆ ಹಾಕಬೇಕು. ನಂತರ ಆ ಕೆಂಪು ಮೆಣಸು, ಶುಂಠಿ, ಬೆಳ್ಳುಳ್ಳಿ, ಸ್ವಲ್ಪ ಕರಿಮೆಣಸು ಹಾಕಿ ಚೆನ್ನಾಗಿ ಪೇಸ್ಟ್ ಮಾಡಬೇಕು. ತುಪ್ಪ ಬಿಸಿಯಾದಾಗ ಸ್ವಲ್ಪ ಕರಿಬೇವಿನ ಎಲೆ ಮತ್ತು ಈ ಮೆಣಸಿನ ಪೇಸ್ಟ್ ಹಾಕಿ ಚೆನ್ನಾಗಿ ಹುರಿಯಬೇಕು. ತುಪ್ಪ ಮಿಶ್ರಣದ ಮೇಲ್ಭಾಗದಲ್ಲಿ ತೇಲುವಂತೆ ಇರಬೇಕು. ನಂತರ ಅದಕ್ಕೆ ಸಿಗಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಬೇಕು. ಆಗಾಗ ಸೌಟ್‌ನಿಂದ ಸಿಗಡಿಯನ್ನು ತಿರುಗಿಸುತ್ತಾ ಇರಬೇಕು. ಮಿಶ್ರಣ ತುಂಬಾ ಗಟ್ಟಿಯಾಗಿದ್ದರೆ  ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಶ್ರಮಾಡಿ ಸಿಗಡಿ ಬೇಯಿಸಬೇಕು. ಸಿಗಡಿ ಬೆಂದ ತಕ್ಷಣ ಉರಿಯಿಂದ ತೆಗೆಯಬೇಕು. 

***

ಎಗ್ ಬೋಂಡಾ
ಬೇಕಾಗುವ ಸಾಮಗ್ರಿಗಳು: 
ಬೇಯಿಸಿದ ಮೊಟ್ಟೆ – 6, ಉಪ್ಪು ರುಚಿಗೆ, ಅರಿಸಿನ ಪುಡಿ – 1 ಚಮಚ, ಮೆಣಸಿನ ಪುಡಿ – ಖಾರಕ್ಕೆ ತಕ್ಕಷ್ಟು, ಕರಿಮೆಣಸಿನ ಪುಡಿ - 1 ಚಮಚ, ಕಡಲೆ ಹಿಟ್ಟು- 1/2 ಕಪ್, ಅಕ್ಕಿ ಹಿಟ್ಟು- 2 ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ, ಈರುಳ್ಳಿ- 1, ಕರಿಯಲು ಎಣ್ಣೆ, ನೀರು

ತಯಾರಿಸುವ ವಿಧಾನ: ಒಂದು ಪ್ಲೇಟ್‌ನಲ್ಲಿ ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಅರಿಸಿನ ಪುಡಿ, ಮೆಣಸಿನ ಪುಡಿ, ಕರಿಮೆಣಸಿನ ಪುಡಿಯನ್ನು ಬೆರೆಸಿ ಚೆನ್ನಾಗಿ ಕಲಸಿ. ಈ ಮಿಶ್ರಣವನ್ನು ಬೇಯಿಸಿಕೊಂಡ ಮೊಟ್ಟೆಯ ಮೇಲೆ ಸವರಿ. ನಂತರ ಒಂದು ಪಾತ್ರೆಯಲ್ಲಿ ಅರ್ಧ ಕಪ್ ಕಡಲೆ ಹಿಟ್ಟು, 2 ಚಮಚ ಅಕ್ಕಿ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಮೆಣಸಿನ ಪುಡಿ, ಅರ್ಧ ಚಮಚ ಕರಿಮೆಣಸಿನ ಪುಡಿ, 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ. ನಂತರ ಅದಕ್ಕೆ ಸ್ವಲ್ಪ ನೀರು ಹಾಕಿ ಕಲೆಸಿ. ಇದರಲ್ಲಿ ಮೊಟ್ಟೆಯನ್ನು ಡಿಪ್‌ ಮಾಡಿ ಎಣ್ಣೆಯಲ್ಲಿ ಬಿಡಿ. ಮೊಟ್ಟೆಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಕರಿಯಿರಿ. ಬೋಂಡವನ್ನು 2 ಭಾಗವಾಗಿ ಕತ್ತರಿಸಿ ಅದಕ್ಕೆ ಹೆಚ್ಚಿದ ಈರುಳ್ಳಿ ಮತ್ತು ಸ್ವಲ್ಪ ಖಾರದ ಪುಡಿ  ಹಾಕಿ ಸವಿಯಿರಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)