ಶುಕ್ರವಾರ, ಏಪ್ರಿಲ್ 3, 2020
19 °C

ಜ್ಯೂಸ್‌ ತಿನ್ನಲು ‘ಈಟ್ ರಾಜಾ’ ಜ್ಯೂಸ್‌ ಸ್ಟಾಲ್‌ಗೆ ಬನ್ನಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆರೋಗ್ಯವಾಗಿರುವುದಕ್ಕೆ ಒಳ್ಳೆಯ ಊಟ, ಹಣ್ಣು ತರಕಾರಿ ತಿನ್ನಬೇಕು, ಸಾಕಷ್ಟು ನೀರು ಕುಡಿಯಬೇಕು ಮತ್ತು ಆಗಾಗ್ಗೆ ಹಣ್ಣುಗಳ ಜ್ಯೂಸ್‌ ಕುಡಿಯಬೇಕು ಎನ್ನುತ್ತಾರೆ. ಜ್ಯೂಸ್‌ ಕುಡಿಯುವುದರ ಜೊತೆಗೆ ಅದನ್ನು ತಿನ್ನುವ ಹಾಗೂ ಇದ್ದಿದ್ರೆ? ಏನು ಜ್ಯೂಸ್‌ ತಿನ್ನೋದಾ? ಹೌದು ಮಲ್ಲೇಶ್ವರಂನಲ್ಲಿ ಕಾಡು ಮಲ್ಲೇಶ್ವರ ಮತ್ತು ಸಾಯಿಬಾಬ ದೇವಸ್ಥಾನದ ಮಧ್ಯದಲ್ಲಿ ಒಂದು ‘ಈಟ್ ರಾಜಾ’ ಎಂಬ ಜ್ಯೂಸ್‌ ಅಂಗಡಿಗೆ ಹೋದ್ರೆ ಜ್ಯೂಸ್‌ ಕುಡಿಯಲೂಬಹುದು, ತಿನ್ನಲೂಬಹುದು.

ಸುಮಾರು 45 ವರ್ಷಗಳ ಇತಿಹಾಸ ಇರುವ ಈ ಜ್ಯೂಸ್ ಸ್ಟಾಲ್ ತನ್ನದೇ ಆದ ವಿಶಿಷ್ಟ ಹಾಗೂ ವಿಭಿನ್ನ ರೀತಿಯಲ್ಲಿ ಈಗ ಚರ್ಚೆಯಲ್ಲಿದೆ. ಇಲ್ಲಿ ಜ್ಯೂಸ್‌ ಕೊಡುವ ರೀತಿಯೇ ಭಿನ್ನ. ಹಣ್ಣುಗಳ ತಿರುಳನ್ನು ಕೊರೆದು ತೆಗೆದು ಜ್ಯೂಸ್‌ ಮಾಡಿ ನಂತರ ಆ ಹಣ್ಣಿನಲ್ಲೇ ಜ್ಯೂಸ್‌ ತುಂಬಿಸಿ ಕೊಡುತ್ತಾರೆ. ಕಲ್ಲಂಗಡಿ, ಬಾಳೆಹಣ್ಣು, ಪೇರಲ, ದಾಳಿಂಬೆ ಹೀಗೆ ಆಯಾಯ ಹಣ್ಣುಗಳ ರಸಗಳನ್ನು ಅದೇ ಹಣ್ಣುಗಳಲ್ಲೇ ತುಂಬಿ ಸವಿಯಲು ಕೊಡುತ್ತಾರೆ.

ಲೋಟಗಳ ಪುನರ್ ಬಳಕೆಯ ತಾಪತ್ರಯ ಇಲ್ಲ. ಸರಿಯಾಗಿ ತೊಳೆದಿದ್ದಾರೋ ಇಲ್ಲವೋ ಎನ್ನುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಿಶ್ಚಿಂತೆಯಿಂದ ಹಣ್ಣಿನ ರಸವನ್ನು ಸವಿಯಬಹುದು.

‘ಚಿಲ್ಲಿ ಗ್ವಾವ’ ಮತ್ತು ‘ಚಿಲ್ಲಿ ಶಾಟ್ಸ್’ ಈ ಸ್ಟಾಲ್‌ನ ಮತ್ತೊಂದು ಆಕರ್ಷಣೆ. ಇದರಲ್ಲಿ ಜ್ಯೂಸ್ ಜೊತೆಗೆ ಹಣ್ಣನ್ನೂ ತಿನ್ನಬಹುದು. ಇದರಿಂದಾಗಿ ಈ ಜ್ಯೂಸ್ ಸ್ಟಾಲ್ ಇಡೀ ಏರಿಯಾದಲ್ಲಿ ‘ಝೀರೋ ವೆಸ್ಟೇಜ್‌ ಸ್ಟಾಲ್‌’ ಎಂದು ಹೆಸರಾಗಿದೆ.

ಪೇಪರ್ ಕಪ್, ಅದಕ್ಕೊಂದು ಸ್ಟ್ರಾ.. ಹೀಗೆ ಜ್ಯೂಸ್ ಕುಡಿದಾದ ಮೇಲೆ ಇವೆಲ್ಲವೂ ಕಸದ ಬುಟ್ಟಿಗೆ ಹೋಗುತ್ತವೆ. ಆದರೆ ಇಲ್ಲಿ ಅಂಥ ಯಾವುದೇ ಪರಿಸರಕ್ಕೆ ಮಾರಕವಾಗುವಂತಹ ತ್ಯಾಜ್ಯ ವಸ್ತು ಅಥವಾ ಕಸ ಶೇಖರಣೆ ಆಗದು. ಮಲ್ಲೇಶ್ವರಂನಲ್ಲಿರುವ ‘ಈಟ್ ರಾಜಾ’ ನಡೆಸುತ್ತಿರುವ ಪ್ಲಾಸ್ಟಿಕ್ ಮುಕ್ತ ವಾತಾವರಣದ ಆಂದೋಲನಕ್ಕೆ ಭೇಷ್‌ ಎನ್ನಲೇಬೇಕು.

-ಗಾಯತ್ರಿ ರಾಜ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)