ಶನಿವಾರ, ಅಕ್ಟೋಬರ್ 31, 2020
27 °C

PV web exclusive | ಇಡ್ಲಿ ಪುರಾಣ

ಸುಮಾ ಬಿ Updated:

ಅಕ್ಷರ ಗಾತ್ರ : | |

Prajavani

‘ಅಲ್ಲಿಯೂ ದಿನ ಬೆಳಿಗ್ಗೆ ಇಡ್ಲಿ ಕೊಡುತ್ತಿದ್ದರು...’ ಹೀಗೆ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾಗಿ ಗುಣಮುಖರಾಗಿ ಬಂದಿದ್ದ 40ರ ಪ್ರಾಯದ ವ್ಯಕ್ತಿ ಖುಷಿಯಿಂದ ಹೇಳುತ್ತಿದ್ದರು. ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಇಡ್ಲಿ ಪೌಷ್ಟಿಕ ಆಹಾರ. ನಿತ್ಯವೂ ಇಡ್ಲಿ ದೊರೆಯುತ್ತದೆ ಎಂಬ ಕಾರಣಕ್ಕೆ ಆ ವ್ಯಕ್ತಿ ಕೇರ್‌ ಸೆಂಟರ್‌ ದಿನಗಳನ್ನು ಉಲ್ಲಾಸದಿಂದ ಕಳೆದರು!

ಆರೋಗ್ಯಪೂರ್ಣವಾದ, ಅತಿ ಸುಲಭದಲ್ಲಿ ಜೀರ್ಣಗೊಳ್ಳುವ, ರೋಗಿಗಳಿಗೆ, ತೂಕ ಇಳಿಸುವವರಿಗೆ ವೈದ್ಯರು ಸಲಹೆ ನೀಡುವ, ಹೆಚ್ಚು ಪೌಷ್ಟಿಕಾಂಶ ಹೊಂದಿರುವ, ಮಕ್ಕಳಾದಿಯಾಗಿ ಬಹುತೇಕರು ಇಷ್ಟಪಟ್ಟು ತಿನ್ನುವ, ಬ್ರೇಕ್‌ಫಾಸ್ಟ್‌ ಮೆನುವಿನಲ್ಲಿ ಅಗ್ರಸ್ಥಾನ ಪಡೆದಿರುವ ತಿಂಡಿ ಇಡ್ಲಿ.

ಹಿಟ್ಟು ರಾತ್ರಿಯಿಡಿ ಹುದುಗುವ, ಹಬೆಯಲ್ಲಿ ಬೇಯುವ ಕಾರಣಕ್ಕೆ ಇಡ್ಲಿ ಹೆಚ್ಚು ಪೌಷ್ಟಿಕವಾಗಿರುತ್ತದೆ. ಒಂದು ಇಡ್ಲಿ 39 ಕ್ಯಾಲೊರಿ ಒಳಗೊಂಡಿರುತ್ತದೆ ಎಂಬುರು ಆಹಾರ ತಜ್ಞರ ಲೆಕ್ಕಾಚಾರ. 2 ಗ್ರಾಂ ಪ್ರೋಟಿನ್‌, 2 ಗ್ರಾಂ ಫೈಬರ್‌ ಅಂಶ ಹಾಗೂ 8 ಗ್ರಾಂ ಕಾರ್ಬೊಹೈಡ್ರೇಟ್‌, 5 ಗ್ರಾಂ ನಾರಿನಂಶವನ್ನು ಒಳಗೊಂಡಿರುತ್ತದೆ. ಆರೋಗ್ಯಪೂರ್ಣವಾದ ತಿಂಡಿಯಾಗಿ ಪರಂಪರಾಗತವಾಗಿ ಅಡುಗೆ ಮನೆ ಸೇರಿದೆ. ಅಂದಮೇಲೆ ಇದನ್ನು ಕೋವಿಡ್ ಕೇರ್ ಸೆಂಟರ್, ಕೋವಿಡ್‌ ಆಸ್ಪತ್ರೆಗಳಲ್ಲಿ ಪೌಷ್ಟಿಕ ಆಹಾರ ಎಂದು ಕೊಟ್ಟಿದ್ದರಲ್ಲಿ ಹೆಚ್ಚುಗಾರಿಕೆಯೇನೂ ಇಲ್ಲ!

ಉಪಾಹಾರಗಳಲ್ಲಿ ಇಡ್ಲಿ ದಕ್ಷಿಣ ಭಾರತದಲ್ಲಿಯೇ ಮಹಾರಾಜ! ದಕ್ಷಿಣ ಭಾರತದ ಎಲ್ಲ ಸಸ್ಯಹಾರಿ ಹೋಟೆಲ್‌ಗಳ ಮೆನುವಿನಲ್ಲಿ ಇಡ್ಲಿಗೆ ಸ್ಥಾನ ಇದ್ದೇ ಇದೆ. ಕೇರಳ, ತಮಿಳುನಾಡು, ಕರ್ನಾಟಕದ ಪ್ರಮುಖ ಆಹಾರವಾಗಿಯೂ ಇಡ್ಲಿ ಅಟ್ಟಕ್ಕೇರಿದೆ. ಇಡ್ಲಿಗೆ ಉದ್ದಿನ ವಡ ಸಂಗಾತಿ. ಮೊಮೊಸ್‌, ಮನೆಗಳಲ್ಲಿ ಹಾಗೂ ಈಗೀಗ ಕೆಲ ಹೋಟೆಲ್‌ಗಳಲ್ಲಿ ಸಿಗುವ ಪಡ್ಡು ತಿಂಡಿ ಇಡ್ಲಿಯ ಕವಲುಗಳೇ ಆಗಿವೆ.

ಇಡ್ಲಿಯ ಗುಣ ಮತ್ತು ರೂಪು ಒಂದೇ ತರವಾಗಿಲ್ಲ. ಕಾಲ ಕಾಲಕ್ಕೆ ವಿವಿಧ ರೂಪಗಳನ್ನು ಪಡೆಯುತ್ತಲೇ ಅದು ಮುಂದೆ ಸಾಗಿದೆ. ಒಂದೊಂದು ಬಗೆಯ ಇಡ್ಲಿಯೂ ಒಂದೊಂದು ಬಗೆಯ ರುಚಿ. ಬಟ್ಟಲು ಇಡ್ಲಿ, ತಟ್ಟೆ ಇಡ್ಲಿ, ಮಲ್ಲಿಗೆ ಇಡ್ಲಿ ಜನಪ್ರಿಯ. ಕೆಲ ಇಡ್ಲಿಗಳು ಪ್ರಾದೇಶಿಕ ಮಾನ್ಯತೆಯನ್ನೂ ತಂದುಕೊಟ್ಟಿವೆ. ಊರುಗಳ ಹೆಸರು ಅಂಟಿಸಿಕೊಂಡು ಜನಪ್ರಿಯತೆ ಪಡೆದಿವೆ. ಬಿಡದಿ ತಟ್ಟೆ ಇಡ್ಲಿ, ಕಾಂಚೀಪುರಂ ಇಡ್ಲಿ. ಮೈಸೂರಿನಲ್ಲಿ ಮಲ್ಲಿಗೆ ಇಡ್ಲಿ, ಉಡುಪಿ ಬ್ರಾಹ್ಮಣರ ಹೋಟೆಲ್‌ ಇಡ್ಲಿಯ ಹೆಸರು ಚಿರಪರಿಚಿತ.

ಹಲಸಿನ ಎಲೆಯಲ್ಲಿ ಹಿಟ್ಟು ಎರೆದು ಹಬೆಯಲ್ಲಿ ಬೇಯಿಸುವ ಮೂಡೆ ಇಡ್ಲಿ, ಬಾಳೆ ಎಲೆಯಲ್ಲಿ ಇಟ್ಟು ಬೇಸಿಸುವ ಕೊಟ್ಟೆ ಕಡುಬು, ಹಲಸಿನ ಹಣ್ಣಿನ ಕಾಲದಲ್ಲಿ ತಯಾರಾಗುವ ಹಲಸಿನ ಇಡ್ಲಿ, ಬೆಲ್ಲ ಹಾಕಿ ಮಾಡುವ ಸ್ವೀಟ್‌ ಇಡ್ಲಿ, ರಾಗಿ ಇಡ್ಲಿ, ರವಾ ಇಡ್ಲಿ, ಸೌತೆಕಾಯಿ ಇಡ್ಲಿ, ವೆಜಿಟೇಬಲ್‌ ಇಡ್ಲಿ, ಖಾರಾ ಇಡ್ಲಿ, ಸ್ಟಫ್ಡ್‌ ಇಡ್ಲಿ, ಮಸಾಲೆ ಇಡ್ಲಿ, ಬುಲೆಟ್‌ ಇಡ್ಲಿ, ಬಟನ್‌ ಇಡ್ಲಿ....ಅಬ್ಬಾ! ಒಂದೇ ಎರಡೇ ಇದರ ರೂಪು.

ಹೆಣ್ಣುಮಕ್ಕಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಇಡ್ಲಿಯಲ್ಲೂ ಅವರ ಕಲಾ ಕುಸುರಿ ತೋರಿಸಿದ್ದಾರೆ. ಮಕ್ಕಳಿಗೂ ತರಕಾರಿ ತಿನ್ನಿಸುವ ಹೆಬ್ಬಯಕೆಗೆ ಇಡ್ಲಿಯೇ ವೇದಿಕೆ. ಇಡ್ಲಿ ಹಿಟ್ಟನ್ನು ತಟ್ಟೆಗೆ ಹಾಕಿ ತರಕಾರಿ, ಸೊಪ್ಪುಗಳನ್ನು ವಿವಿಧ ಆಕಾರದಲ್ಲಿ ಕತ್ತರಿಸಿ ಅಲಂಕರಿಸಿ ಹಬೆಯಲ್ಲಿ ಬೇಯಿಸಲಾಗುತ್ತದೆ. ಕಲರ್‌ಫುಲ್‌ ಆಗಿರುವ ಇಡ್ಲಿಯನ್ನು ಮಕ್ಕಳೂ ಇಷ್ಟಪಟ್ಟು ಸವಿಯುತ್ತಾರೆ.

ಇಷ್ಟೆಲ್ಲಾ ರುಚಿ, ರೂಪು ಪಡೆದ ಇಡ್ಲಿಗೂ ಇತಿಹಾಸ ಇದೆ. ಇಡ್ಲಿ ಈ ಶತಮಾನದಲ್ಲೇ ಉದಯಿಸಿತು ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. 10ನೇ ಶತಮಾನದಲ್ಲಿ ರಚನೆಯಾದ ಕನ್ನಡದ ಮೊದಲ ಗದ್ಯ ಕೃತಿ ಶಿವಕೋಟ್ಯಾಚಾರ್ಯರ ‘ವಡ್ಡಾರಾಧನೆ’ಯಲ್ಲಿ ‘ಇಡ್ಡಲಿಗೆ’ ಎಂಬ ಪದ ಬಳಕೆಯಾಗಿದೆ. ಈಗಲೂ ಕೆಲ ಗ್ರಾಮೀಣ ಭಾಗದಲ್ಲಿ ಇಡ್ಲಿಯನ್ನು ‘ಇಡ್ಲಿಗಿ’ ಎನ್ನುವರು. ಸೋಮೇಶ್ವರ ಕವಿ ಸಂಸ್ಕೃತದಲ್ಲಿ ಬರೆದ ‘ಮಾನಸೋಲ್ಲಾಸ’ ಕೃತಿಯಲ್ಲೂ ಇಡ್ಲಿಯ ಉಲ್ಲೇವಿದೆ. ಇಡ್ಲಿ ಮೂಲ ಭಾರತದ್ದಲ್ಲ; ಇಂಡೊನೇಷಿಯಾದಿಂದ ಬಂದದ್ದು ಎಂಬ ಜಿಜ್ಞಾಸೆಯೂ ಇದೆ. ಅದೇನೇ ಇರಲಿ, ಈಗ ಇಡ್ಲಿ ಅಪ್ಪಟವಾಗಿ ನಮ್ಮದೇ ಆಹಾರ!

ಇಡ್ಲಿ ತಯಾರಿಸಲು ಸಾಮಾನ್ಯವಾಗಿ ಎರಡು ದಿನ ಬೇಕಿತ್ತು. ಏಳೆಂಟು ತಾಸು ಅಕ್ಕಿ, ಉದ್ದಿನ ಬೇಳೆ ನೆನೆ ಹಾಕಿ ಸಂಜೆ ರುಬ್ಬಿಟ್ಟು ಮತ್ತೆ ಆರೇಳು ತಾಸು ಬಿಟ್ಟು ಇಡ್ಲಿ ತಯಾರಿಸಬೇಕಿತ್ತು. ಆದರೆ, ಈಗ ಈ ದೀರ್ಘ ಅವಧಿಯೂ ಬೇಕಿಲ್ಲ. ಇಡ್ಲಿ ಇನ್‌ಸ್ಟಂಟ್‌ಗಳೂ ಬಂದಿವೆ. ಹಸಿಯಾದ ಹಿಟ್ಟು ಪ್ಯಾಕೆಟ್‌ನಲ್ಲಿ ರೆಡಿ ಆಗಿರುತ್ತದೆ. ಮನೆಗೆ ತಂದು ಇಡ್ಲಿ ಪಾತ್ರೆಯಲ್ಲಿ ಬೇಯಿಸಿದರೆ ಆಯಿತು. ಇನ್ನು ವೆಜಿಟೇಬಲ್‌ ರವೆ ಇಡ್ಲಿ ಹಿಟ್ಟು ಸಹ ಲಭ್ಯವಿದೆ. ಅದಕ್ಕೆ ಒಂದಷ್ಟು ಮೊಸರು ಕಲೆಸಿ ತಕ್ಷಣಕ್ಕೆ ಇಡ್ಲಿ ತಯಾರಿಸಬಹುದು. ಹೀಗೆ ಮಾರುಕಟ್ಟೆ ಹೆಚ್ಚಿಸಿಕೊಂಡವರ ಸಾಲಿನಲ್ಲಿ ಇಡ್ಲಿಯದ್ದು ಪ್ರಮುಖ ಸ್ಥಾನ.

ಪ್ರಿಡ್ಜ್‌ನಲ್ಲಿ ಹಿಟ್ಟು ಸಂಗ್ರಹಿಸಿಟ್ಟು, ಬೇಕೆಂದಾಗ, ಬೇಕಾದಷ್ಟು ತೆಗೆದು ಬಳಸಹುದು. ಆದರೂ ಎಷ್ಟು ದಿನ, ಹೇಗೆ ಸಂಗ್ರಹಿಸಿಡಬೇಕು ಎಂಬ ಖಾತ್ರಿ ಇಲ್ಲ. ಆಹಾರ ತಜ್ಞರ ಪ್ರಕಾರ ಫ್ರಿಡ್ಜ್‌ನಲ್ಲಿ ಎರಡು ಅಥವಾ ಮೂರು ದಿನ ಹಿಟ್ಟನ್ನು ಇಡಬಹುದು. ಹೆಚ್ಚು ದಿನ ಇಟ್ಟರೆ ಪೋಷಕಾಂಶ ಕಡಿಯಾಗುತ್ತದೆ. ಗಾಳಿಯಾಡದ ಡಬ್ಬದಲ್ಲಿ ಹಿಟ್ಟನ್ನು ಹಾಕಿ ಅದರ ಮೇಲೆ ಚಿಕ್ಕ ಬಾಳೆ ಎಲೆ ಇಡುವುದರಿಂದ ಹಿಟ್ಟು ಬೇಗ ಹಾಳಾಗುವುದಿಲ್ಲ.

ವೈವಿಧ್ಯದ ಗರಿಮೆ ಪಡೆದ ಇಡ್ಲಿಗೂ ಒಂದು ದಿನ ಮೀಸಲಿದೆ. ಮಾರ್ಚ್‌ 30 ಅನ್ನು ಇಡ್ಲಿ ದಿನವಾಗಿ ಆಚರಿಸಲಾಗುತ್ತದೆ. 2017ರಿಂದ ಈ ಆಚರಣೆ ಚಾಲ್ತಿಗೆ ಬಂದಿದೆ. ತಮಿಳುನಾಡಿನಲ್ಲಿ ಇಡ್ಲಿ ದಿನ ಆಚರಣೆ ಚಾಲ್ತಿಗೆ ಬಂದಿತು.

ಮೃದುವಾದ ಇಡ್ಲಿ ತಯಾರಿಸಲು ಟಿಪ್ಸ್‌

• ಅಕ್ಕಿ ನೆನೆಸುವ ಮುನ್ನ ಚೆನ್ನಾಗಿ ತೊಳೆಯಬೇಕು. ಗುಣಮಟ್ಟದ ಅಕ್ಕಿಯನ್ನೇ ಬಳಸಿ. ಮಾರುಕಟ್ಟೆಯಲ್ಲಿ ಇಡ್ಲಿಗೆಂದೇ ಅಕ್ಕಿ ಸಿಗುತ್ತದೆ. ಅದನ್ನೂ ಬಳಸಬಹುದು.

• ಉದ್ದಿನ ಬೇಳೆಯನ್ನು ಎರಡು ಬಾರಿ ತೊಳೆದರೆ ಸಾಕು.

• ರುಬ್ಬಿದ ಹಿಟ್ಟನ್ನು ಋತು ಹಾಗೂ ತಾಪಮಾನಕ್ಕೆ ಅನುಗುಣವಾಗಿ ಹುದುಗಲು ಬಿಡಬೇಕು.

• ಬೇಸಿಗೆ ಕಾಲದಲ್ಲಿ ಮೂರುವರೆ ಅಥವಾ ನಾಲ್ಕು ಗಂಟೆ ಹಿಟ್ಟು ಹುದುಗಿದರೆ ಸಾಕು. ಅದಕ್ಕಿಂತಲೂ ಹೆಚ್ಚು ಕಾಲ ಹಿಟ್ಟು ಹುದುಗಿದರೆ ಹುಳಿ ಬರುವ ಸಾಧ್ಯತೆ ಇರುತ್ತದೆ.

• ಚಳಿಗಾಲದಲ್ಲಿ ಹೆಚ್ಚು ಕಾಲ ಹಿಟ್ಟನ್ನು ಹುದುಗಲು ಬಿಟ್ಟಷ್ಟೂ ಇಡ್ಲಿ ಚೆನ್ನಾಗಿ ಬರುತ್ತದೆ.

• ರುಬ್ಬಿದ ಮಿಶ್ರಣಕ್ಕೆ ಉಪ್ಪು ಹಾಕಿ ಕಲೆಸಲು ಕೈಗಳನ್ನು ಬಳಸಿ. ಚಮಚದ ಮೂಲಕ ಕಲೆಸಬೇಡಿ. ದೇಹದ ಉಷ್ಣತೆ ಹಿಟ್ಟು ಚೆನ್ನಾಗಿ ಹುದುಗಲು ಸಹಕಾರಿಯಾಗುತ್ತದೆ.

• ಮಿಕ್ಸಿಯಲ್ಲಿ ಹಿಟ್ಟನ್ನು ಹೆಚ್ಚು ಹೊತ್ತು ರುಬ್ಬಬಾರದು. ಇಡ್ಲಿ ಹಿಟ್ಟಿನ ಹದಕ್ಕೆ ಬಂದ ಕೂಡಲೆ ಮಿಕ್ಸಿ ಆಫ್‌ ಮಾಡಿ. ಹೆಚ್ಚು ರುಬ್ಬಿದಷ್ಟು ಹಿಟ್ಟು ಬಿಸಿಯಾಗುತ್ತದೆ. ಹಿಟ್ಟು ಹುದುಗುವಿಕೆ ಮೇಲೂ ಇದು ಪ್ರಭಾವ ಬೀರುತ್ತದೆ.

• ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಪ್ರತ್ಯೇಕವಾಗೇ ರುಬ್ಬಿಕೊಳ್ಳಿ, ಆದರೆ, ಸರಿಯಾಗಿ ಮಿಕ್ಸ್‌ ಮಾಡುವುದನ್ನು ಮರೆಯಬೇಡಿ. ಎಷ್ಟೋ ಬಾರಿ ಇಡ್ಲಿ ಗಟ್ಟಿಯಾಗಲೂ ಇದೂ ಕಾರಣವಾಗಿರುತ್ತದೆ. ಮೇಲ್ಮಟ್ಟಕ್ಕೆ ಮಿಕ್ಸ್‌ ಮಾಡಿ ಇಟ್ಟರೆ ತಳಭಾಗದಲ್ಲಿ ಅಕ್ಕಿ ಹಿಟ್ಟು, ಮೇಲ್ಭಾಗದಲ್ಲಿ ಉದ್ದಿನಹಿಟ್ಟು ಉಳಿಯುತ್ತದೆ. ಎರಡೂ ಸರಿಯಾಗಿ ಸಾಟಿಯಾಗದಿದ್ದರೆ ಇಡ್ಲಿ ಮೃದುವಾಗುವುದಿಲ್ಲ.

• ಇಡ್ಲಿ ಪಾತ್ರೆಯ ತಳಭಾಗದಲ್ಲಿ ಹಾಕುವ ನೀರನ್ನು ಮೊದಲೇ ಬಿಸಿ ಮಾಡಬೇಕು. ನಂತರ ಇಡ್ಲಿ ಹೊಯ್ದ ತಟ್ಟೆಗಳನ್ನು ಇಡಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು