ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

PV Web Exclusive| ದಕ್ಷಿಣ ಭಾರತದ ಹೆಗ್ಗುರುತು 'ಪೊಂಗಲ್ ಪರಿಮಳ...'

ಫಾಲೋ ಮಾಡಿ
Comments

ಭಾರತೀಯರ ಬಹುತೇಕ ಹಬ್ಬಗಳು ಆಹಾರ ವೈವಿಧ್ಯದೊಂದಿಗೆ ಬೆಸೆದುಕೊಂಡಿವೆ. ಈ ನೆಲದ ಸಂಸ್ಕೃತಿ ಶ್ರೀಮಂತಗೊಳ್ಳುವಲ್ಲಿ ಆಹಾರ ಖಾದ್ಯಗಳ ಪಾತ್ರ ಅನನ್ಯ. ಖಾದ್ಯಗಳ ಜನಪ್ರಿಯತೆ ಎಷ್ಟೆಂದರೆ ಖಾದ್ಯದ ಹೆಸರಿನಿಂದಲೇ ವಿಶ್ವ ಮಟ್ಟದಲ್ಲಿ ಪ್ರಾದೇಶಿಕ ಸಂಸ್ಕೃತಿಯೂ ಗುರುತಿಸಿಕೊಳ್ಳುತ್ತದೆ. ಅದಕ್ಕೆ ಉದಾಹರಣೆ ‘ಪೊಂಗಲ್‌’.

ಪೊಂಗಲ್ ಎಂದೊಡನೆ ಥಟ್ಟನೆ ನೆನಪಾಗುವುದು ದಕ್ಷಿಣ ಭಾರತ, ತಮಿಳುನಾಡು. ಹಬ್ಬದ ಹೆಸರನ್ನೇ ಖಾದ್ಯಕ್ಕೂ ಅಂಟಿಸಿಕೊಂಡಿರುವ ಪೊಂಗಲ್‌ ದಕ್ಷಿಣ ಭಾರತದ ಸಾಂಪ್ರದಾಯಿಕ ಸಿಗ್ನೇಚರ್‌ ಖಾದ್ಯಗಳಲ್ಲಿ ಒಂದು. ಉತ್ತರ ಭಾರತದಲ್ಲಿ ಕಿಚಡಿ ಹೇಗೆ ಜನಪ್ರಿಯವೋ; ಹಾಗೇ ಪೊಂಗಲ್‌ ದಕ್ಷಿಣ ಭಾರತೀಯರ ಮನೆ ಮಾತು. ವಿಶ್ವವ್ಯಾಪಿ ಹರಡಿರುವ ತಮಿಳಿಗರು ಈ ಖಾದ್ಯದ ಸವಿಯನ್ನು ವಿಶ್ವದ ಉದ್ದಗಲಕ್ಕೂ ಪಸರಿಸಿದ್ದಾರೆ.

ಈಗಷ್ಟೇ ಮಕರ ಸಂಕ್ರಾಂತಿ ಹಬ್ಬದ ಸಡಗರದಲ್ಲಿ ಮಿಂದೆದ್ದ ದಕ್ಷಿಣ ಭಾರತೀಯರ ಮನೆಗಳಲ್ಲಿ ಪೊಂಗಲ್‌ ಘಮ್ಮೆಂದಿದೆ. ಸಿಹಿ ಪೊಂಗಲ್‌, ಖಾರ ಪೊಂಗಲ್‌ ಸವಿದು ಹಬ್ಬವನ್ನು ಸಂಪನ್ನಗೊಳಿಸಿದ್ದಾರೆ. ವರ್ಷದ ಮೊದಲ ಹಬ್ಬ ತಮಿಳುನಾಡು, ಪಾಂಡಿಚೇರಿ, ಕೇರಳ ರಾಜ್ಯಗಳಲ್ಲಿ ಪೊಂಗಲ್‌ ಹಬ್ಬವಾಗಿ ಆಚರಣೆಗೊಂಡರೆ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣಗಳಲ್ಲಿ ‘ಸಂಕ್ರಾಂತಿ’ಯಾಗಿ ಸಂಭ್ರಮ ಮನೆಮಾಡುತ್ತದೆ. ಈ ಹಬ್ಬದ ಪ್ರಮುಖ ಖಾದ್ಯ ಪೊಂಗಲ್‌.

ಸಿಹಿ ಪೊಂಗಲ್‌
ಸಿಹಿ ಪೊಂಗಲ್‌

ಅಕ್ಕಿ, ಹೆಸರುಬೇಳೆಯಿಂದ ತಯಾರಾಗುವ ಪೊಂಗಲ್‌ ರೈತರ ಸುಗ್ಗಿಯ ಸಂಭ್ರಮಕ್ಕೆ ಜತೆಯಾಗುತ್ತದೆ. ರೈತರು ತಾವು ಬೆಳೆದ ಭತ್ತದ ಬೆಳೆಯನ್ನು ಕಟಾವು ಮಾಡಿ ಹೊಸ ಅಕ್ಕಿಯಲ್ಲಿ ಪೊಂಗಲ್‌ ತಯಾರಿಸಿ ದೇವರಿಗೆ ನೈವೇದ್ಯ ಇಡುತ್ತಾರೆ. ಬೆಳೆ ಸಮೃದ್ಧವಾಗಿ ಬರಲು ಸಹಕರಿಸಿದ ಭೂಮಿ ತಾಯಿ, ಸೂರ್ಯ ದೇವನಿಗೆ ಈ ಮೂಲಕ ಕೃತಜ್ಞತೆ ಸಲ್ಲಿಸುತ್ತಾರೆ. ಹೊಸ ಅಕ್ಕಿಯಲ್ಲಿ ತಯಾರಿಸಿದ ಮೊದಲ ಖಾದ್ಯ ದೇವರಿಗೆ ಅರ್ಪಿಸುವ ಉಮೇದು ರೈತನದ್ದು. ಈ ಉಮೇದಿಗೆ ಪೊಂಗಲ್‌ ಸಾಥಿಯಾಗುತ್ತದೆ. ದೇವರಿಗೆ ಅರ್ಪಿಸುವುದೆಂದರೆ ಖಾದ್ಯದ ತಯಾರಿಯೂ ವಿಶೇಷವಾಗಿರಬೇಕಲ್ಲವೇ. ಹೀಗಾಗಿ ಹಾಲು, ತುಪ್ಪ, ಗೋಡಂಬಿ ಬೆರೆಸಿದ ಸಿಹಿ, ಖಾರದ ಪೊಂಗಲ್‌ ತಯಾರಾಗುತ್ತದೆ. ಹೊಸ ಅಕ್ಕಿಯಲ್ಲಿ ತಯಾರಾದ ಪೊಂಗಲ್‌ ರುಚಿಯೇ ಭಿನ್ನ.

ಹೆಚ್ಚು ಸಮಯ ಬೇಡದ, ಪೋಷಕಾಂಶಯುಕ್ತ, ತಯಾರಿಸಲು ಸುಲಭವಾದ, ಕಡಿಮೆ ಪದಾರ್ಥ ಬಳಕೆಯ ರುಚಿಕರವಾದ ಪೊಂಗಲ್‌ ಹಬ್ಬದ ಸಮಯದಲ್ಲಿ ಮಾತ್ರವಲ್ಲದೆ ಸಾಮಾನ್ಯ ದಿನಗಳಲ್ಲೂ ತಿಂಡಿಗಳ ಮೆನುವಿನಲ್ಲಿ ಸ್ಥಾನ ಪಡೆದಿದೆ. ಬೆಳಗಿನ ತಿಂಡಿಗೆ ಪೂರ್ವ ತಯಾರಿ ಏನೂ ಮಾಡಿಕೊಂಡಿರದಿದ್ದರೆ ದಿಢೀರಾಗಿ ಪೊಂಗಲ್‌ ತಯಾರಿಸಬಹುದು. ಸಿಹಿಯೂ ಬೇಕೆಂದು ಮಕ್ಕಳು ಹಠ ಹಿಡಿದರೆ ಸಿಹಿ ಪೊಂಗಲ್‌ ಸಹ ತಕ್ಷಣಕ್ಕೆ ತಯಾರಿಸಬಹುದು. ಖಾದ್ಯ ತಯಾರಿಸುವವರ ಕೈ ಚುರುಕಾಗಿದ್ದರೆ 20ರಿಂದ 30 ನಿಮಿಷಗಳಲ್ಲಿ ಪೊಂಗಲ್‌ ಸವಿಯಲು ಸಿದ್ಧವಾಗುತ್ತದೆ.

ಪೊಂಗಲ್‌
ಪೊಂಗಲ್‌

ಪೊಂಗಲ್‌ ಬಹುತೇಕರ ಮನೆಗಳಲ್ಲಿ ‘ಹುಗ್ಗಿ’ ಎಂದೇ ಕರೆಸಿಕೊಳ್ಳುತ್ತದೆ. ಸಿಹಿ ಪೊಂಗಲ್‌ ಅನ್ನು ‘ಅಕ್ಕಿ ಖೀರು’ ಎಂದೂ ಕರೆಯುವರು. ಕೆಲವೆಡೆ ‘ಪೊಂಗಲಿ’ ಎಂತಲೂ ಕರೆಯುವರು. ಚಕಾರೈ ಪೊಂಗಲ್‌, ವೆನ್‌ ಪೊಂಗಲ್‌, ಮೆಲಾಗು ಪೊಂಗಲ್‌, ಪುಲಿ ಪೊಂಗಲ್‌ ಹೀಗೆ ಹಲವು ವಿಧಗಳೂ ಪೊಂಗಲ್‌ನಲ್ಲಿವೆ. ಬೆಲ್ಲ, ಹಾಲು, ತುಪ್ಪ ಹಾಕಿ ತಯಾರಿಸಿದ ಪೊಂಗಲ್‌ಗೆ ಸಿಹಿ ಪೊಂಗಲ್‌ ಅಥವಾ ಚಕಾರೈ ಪೊಂಗಲ್‌ ಎನ್ನುವರು. ಇದನ್ನು ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಪ್ರಸಾದವಾಗಿ ನೀಡಲಾಗುತ್ತದೆ. ವೆನ್‌ ಪೊಂಗಲ್‌ ತಮಿಳಿಗರ ಮನೆಗಳಲ್ಲಿ ಪ್ರಸಿದ್ಧವಾದ ಖಾದ್ಯ. ವೆನ್‌ ಎಂದರೆ ತಮಿಳಿನಲ್ಲಿ ‘ಬಿಳಿ’ ಎಂದರ್ಥ. ಇದು ತಮಿಳುನಾಡು, ಶ್ರೀಲಂಕಾದಲ್ಲಿ ಪ್ರಮುಖ ಉಪಾಹಾರವಾಗಿದೆ.

ಮೆಲಾಗು ಪೊಂಗಲ್‌ ಅಕ್ಕಿ, ಹೆಸರು ಬೇಳೆ, ಕಾಳುಮೆಣಸಿನಿಂದ ತಯಾರಾಗುತ್ತದೆ. ಕಾಳು ಮೆಣಸು ಬಳಸಿ ತಯಾರಾದ ಪೊಂಗಲ್‌ ಬಹು ಜನಪ್ರಿಯ. ಮೆಣಸು ಚಳಿಗಾಲದ ಸಮಯದಲ್ಲಿ ದೇಹಕ್ಕೆ ಅಗತ್ಯವಾಗಿರುವ ಉಷ್ಣತೆಯನ್ನು ಕೊಡುತ್ತದೆ. ಆರೋಗ್ಯ ವರ್ಧನೆಗೂ ಸಹಕಾರಿ, ರುಚಿಯಲ್ಲೂ ಒಂದು ಕೈ ಮಿಗಿಲು. ಹೀಗಾಗಿ ಬಹುಜನರ ಆಕರ್ಷಣೆಗೆ ಈ ಪೊಂಗಲ್‌ ಒಳಗಾಗಿದೆ. ಬಹುತೇಕ ದೇವಸ್ಥಾನಗಳಲ್ಲಿ ಈ ಪೊಂಗಲ್‌ ಪ್ರಸಾದದ ರೂಪು ತಳೆಯುತ್ತದೆ.

ರುಚಿಯಲ್ಲಿ ಭಿನ್ನತೆ ಕಾಯ್ದುಕೊಳ್ಳಲು ಪುಳಿ ಅಥವಾ ಹುಳಿ ಪೊಂಗಲ್‌ ಅನ್ನು ಕೆಲವರು ತಯಾರಿಸುತ್ತಾರೆ. ಇದರಲ್ಲಿ ಹುಣಸೆಹಣ್ಣು ಪ್ರಾಧಾನ್ಯ ಪಡೆದಿರುತ್ತದೆ. ಹಬ್ಬದ ಸಮಯ ಹೊರತುಪಡಿಸಿ ಬೇರೆ ದಿನಗಳಲ್ಲಿ ಸಾಮಾನ್ಯವಾಗಿ ಹುಳಿ ಪೊಂಗಲ್‌ ಮಾಡುತ್ತಾರೆ.

ರವಾ ಪೊಂಗಲ್‌, ಅವಲಕ್ಕಿ ಪೊಂಗಲ್‌, ತರಕಾರಿ ಪೊಂಗಲ್‌, ಸಿರಿಧಾನ್ಯಗಳಲ್ಲಿ ಪೊಂಗಲ್‌, ಶುಂಠಿ ಫ್ಲೇವರ್‌ ಪೊಂಗಲ್‌ ಹೀಗೆ ಪೊಂಗಲ್‌ ಭಿನ್ನ ರೂಪದಲ್ಲಿ ತಯಾರಾಗುತ್ತದೆ. ಅಡುಗೆ ಮನೆಯಲ್ಲಿ ಪೊಂಗಲ್‌ನ ವಿವಿಧ ರೂಪಗಳ ಸಂಶೋಧನೆ ನಡೆಯುತ್ತಲೇ ಇದೆ.

ಅಕ್ಕಿ, ಹೆಸರು ಬೇಳೆ, ಗೋಡಂಬಿ, ಕರಿಬೇವು, ಕಾಳುಮೆಣಸು, ಕೊಬ್ಬರಿ, ತುಪ್ಪ ಹಾಕಿ ತಯಾರಿಸುವ ಪೊಂಗಲ್‌ ಪೋಷಕಾಂಶಗಳ ಆಗರ. ಈ ಪದಾರ್ಥಗಳು ದೇಹಕ್ಕೆ ಕಾರ್ಬೊಹೈಡ್ರೇಟ್ಸ್‌, ಪ್ರೊಟೀನ್‌ ಒದಗಿಸುತ್ತವೆ. ಚಳಿಗಾಲದ ಸಮಯದಲ್ಲಿ ದೇಹದ ಉಷ್ಣತೆಯನ್ನು ಸಮತೋಲನದಲ್ಲಿ ಇಡಲು ಸಹಕಾರಿಯಾಗಿದೆ. ಚಳಿಯೊಂದಿಗೆ ಬಿಸಿ ಬಿಸಿ ಪೊಂಗಲ್‌, ಜತೆಗೊಂದಿಷ್ಟು ಕಾಯಿ ಚಟ್ನಿ ಇಟ್ಟರೆ ರುಚಿಮೊಗ್ಗು ಅರಳುತ್ತದೆ. ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರಿಯ ಊಟ ಹೀಗೆ ಎಲ್ಲ ಸಮಯಕ್ಕೂ ಪೊಂಗಲ್‌ ಹೊಂದಿಕೆಯಾಗುವ ಖಾದ್ಯ.

ತನ್ನ ಮೃದುತ್ವದ ಗುಣದಿಂದಲೇ ಬಹುತೇಕರ ಬಾಯಲ್ಲಿ ನೀರೂರಿಸುವ ಪೊಂಗಲ್‌ ಹಲವರ ಇಷ್ಟದ ತಿಂಡಿ. ಬಾಯಿಗೆ ಇಟ್ಟಕೂಡಲೇ ಗಂಟಲಿಗೆ ಇಳಿದು ರುಚಿಯ ಅನುಭವ ನೀಡುವ ಈ ಹುಗ್ಗಿ ಚಿಕ್ಕಮಕ್ಕಳಿಗೂ ಸಹ್ಯವೆನಿಸುತ್ತದೆ. ಕಾಯಿ ಚಟ್ನಿ, ಸಾಂಬರ್‌, ಮೊಸರು ಬಜ್ಜಿ, ರಾಯತ ಇವುಗಳಲ್ಲಿ ಒಂದರ ಜತೆ ಪೊಂಗಲ್‌ ಸವಿದರೆ ಭಿನ್ನ ರುಚಿ ನೀಡುತ್ತದೆ.

ಪೊಂಗಲ್‌ ಮಾಡಲು ಬಾರದು ಎನ್ನುವವರು ಮಾರುಕಟ್ಟೆಯಲ್ಲಿ ಸಿಗುವ ಪೊಂಗಲ್‌ ಇನ್‌ಸ್ಟಂಟ್‌ ಮಿಕ್ಸ್‌ ಖರೀದಿಸಿ ತಂದು ಹತ್ತೇ ನಿಮಿಷದಲ್ಲಿ ಸುಲಭವಾಗಿ ಪೊಂಗಲ್‌ ತಯಾರಿಸಕೊಳ್ಳಬಹುದು. ಸಿಹಿ, ಖಾರದ ಪೊಂಗಲ್‌ ಎರಡರ ಇನ್‌ಸ್ಟಂಟ್‌ ಮಿಕ್ಸ್‌ ಸಹ ಲಭ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT