ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರೋಗ್ಯ | ರಕ್ತಹೀನತೆಯಿಂದ ಹೃದಯಕ್ಕೆ ಆಪತ್ತು!

ಡಾ. ಅದಿಲ್‌ ಸಾದಿಕ್‌
Published : 30 ಸೆಪ್ಟೆಂಬರ್ 2024, 23:30 IST
Last Updated : 30 ಸೆಪ್ಟೆಂಬರ್ 2024, 23:30 IST
ಫಾಲೋ ಮಾಡಿ
Comments

ಮಹಿಳೆಯರಲ್ಲಿ ಸಾಮಾನ್ಯ ಎನಿಸಿರುವ ರಕ್ತಹೀನತೆ ಹಾಗೂ ಅತಿಯಾದ ಬೊಜ್ಜಿನ ಕಾರಣಗಳಿಂದಾಗಿಯೂ ಹೃದ್ರೋಗ ಕಾಣಿಸಿಕೊಳ್ಳುತ್ತದೆ. 

ಋತುಸ್ರಾವ ಕಾರಣಕ್ಕೆ ಮಹಿಳೆಯರಲ್ಲಿ ರಕ್ತಹೀನತೆಯೆಂಬುದು ಸಾಮಾನ್ಯವೆಂದು ನಿರ್ಲಕ್ಷ್ಯಿಸುವ ಹಾಗಿಲ್ಲ. ದೀರ್ಘಕಾಲ ರಕ್ತಹೀನತೆಯಿಂದ ಬಳಲುತ್ತಿದ್ದವರ ಹೃದಯ ದುರ್ಬಲಗೊಳ್ಳುವ ಸಾಧ್ಯತೆ ಹೆಚ್ಚು. ರಕ್ತಹೀನತೆಯು ಹೃದಯದ ಕಾರ್ಯಚಟುವಟಿಕೆಗಳಲ್ಲಿ ವೈಫಲ್ಯ ಉಂಟು ಮಾಡಬಲ್ಲದು. 

ತೊಂದರೆ ಹೇಗೆ?

ಕೆಂಪು ರಕ್ತಕಣಗಳು ಸಾಕಷ್ಟು ಪ್ರಮಾಣದಲ್ಲಿ  ಹೃದಯಕ್ಕೆ ಆಮ್ಲಜನಕವನ್ನು ಪೂರೈಸಿದಾಗ ಮಾತ್ರವೇ ಹೃದಯ ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲದು. ಜೀವಕೋಶಗಳಲ್ಲಿರುವ ಕೆಂಪುರಕ್ತ ಕಣಗಳು ಶ್ವಾಸಕೋಶದಿಂದ ದೇಹದ ಎಲ್ಲಾ ಅಂಗಾಂಶಗಳಿಗೆ ಆಮ್ಲಜನಕವನ್ನು ಕೊಂಡೊಯ್ಯುತ್ತವೆ. ರಕ್ತಹೀನತೆ ಇರುವವರಲ್ಲಿ ಹೃದಯಕ್ಕೆ ಅಗತ್ಯವಿರುವಷ್ಟು ಆಮ್ಲಜನಕ ಪೂರೈಕೆಯಾಗುವುದಿಲ್ಲ.  ಪೂರೈಸಲು ಕೆಂಪು ರಕ್ತಕಣಗಳ ಕೊರತೆ ಇರುತ್ತವೆ. ಇದರಿಂದ ಹೃದಯದ ಮೇಲೆ ತೀವ್ರತರದ ಒತ್ತಡ ಬೀಳುತ್ತದೆ.

ರಕ್ತಹೀನತೆ ಇರುವ ಮಹಿಳೆಯರ ಹೃದಯದ ರಕ್ತನಾಳಗಳ ಕಾರ್ಯವೈಖರಿಯಲ್ಲಿ ವ್ಯತ್ಯಯ ಉಂಟಾಗಬಹುದು. ಹೃದಯ ಬಡಿತ ಇದ್ದಕ್ಕಿದ್ದ ಹಾಗೆ ಹೆಚ್ಚುಗೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ರಕ್ತಹೀನತೆಯನ್ನು ಕಡೆಗಣಿಸಬೇಡಿ. 

ಇನ್ನು ತೂಕ ಹೆಚ್ಚಳವು ಹೃದ್ರೋಗವನ್ನು ತಂದೊಡ್ಡಬಲ್ಲದು. ಮಹಿಳೆಯರಲ್ಲಿ ಹಾರ್ಮೋನ್‌ಗಳ ವ್ಯತ್ಯಾಸದಿಂದಾಗಿ ತೂಕ ಹೆಚ್ಚಳವೆಂಬುದು ಸಾಮಾನ್ಯ. ಅದರಲ್ಲಿಯೂ ಮದುವೆ ಹಾಗೂ ತಾಯ್ತನದ ನಂತರ ಹಾರ್ಮೋನ್‌ಗಳಲ್ಲಿ ವ್ಯಾಪಕ ಬದಲಾವಣೆ ಉಂಟಾಗುತ್ತದೆ. ಒತ್ತಡದ ಬದುಕು, ಅತಿ ತಿನ್ನುವಿಕೆ, ವ್ಯಾಯಾಮರಹಿತ ಜೀವನ ಇವುಗಳಿಂದಾಗಿಯೂ ತೂಕ ಹೆಚ್ಚಳಗೊಳ್ಳಬಹುದು.

ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾಗಿಯೂ ಬೊಜ್ಜಿಗೆ ಕಾರಣವಾಗಬಹುದು. ಅತಿಯಾದ ಬೊಜ್ಜು ಮಹಿಳೆಯರ ಹೃದಯಕ್ಕೆ ಆಪತ್ತು ತರಬಹುದು. ರಕ್ತದಲ್ಲಿ ಕೊಬ್ಬಿನಾಂಶ ಹೆಚ್ಚಳಗೊಂಡರೆ ಹೃದಯಕ್ಕೆ ಸರಿಯಾಗಿ ರಕ್ತ ಪೂರೈಕೆಯಾಗುವುದಿಲ್ಲ. ಜತೆಗೆ ಇನ್ಸುಲಿನ್‌ ಪ್ರತಿರೋಧವನ್ನು ಹೆಚ್ಚಿಸುತ್ತದೆ. ಇದರೊಂದಿಗೆ ಕೆಂಪು ರಕ್ತಕಣಗಳ ಉತ್ಪಾದನೆ ಕಡಿಮೆಯಾಗಿ ರಕ್ತಹೀನತೆ ಬಿಗಡಾಯಿಸುತ್ತದೆ. 

ಇನ್ನು ಹೃದ್ರೋಗ ಸಮಸ್ಯೆ ಇರುವ ಮಹಿಳೆಯರಲ್ಲಿ ‘ಕಾರ್ಡಿಯೋರೆನಲ್‌ ಅನೀಮಿಯಾ ಸಿಂಡ್ರೋಮ್‌’ ಕಾಣಿಸಿಕೊಳ್ಳಬಹುದು. ಇಂಥ ಪರಿಸ್ಥಿತಿಯಲ್ಲಿ ಹೃದಯ, ಮೂತ್ರಪಿಂಡ ಮತ್ತು ಕೆಂಪುರಕ್ತ ಕಣಗಳ ಕಾರ್ಯವೈಖರಿಯಲ್ಲಿ ಬದಲಾವಣೆಯಾಗುತ್ತದೆ. ಹೃದ್ರೋಗ ಸಮಸ್ಯೆಯಿಂದಾಗಿ ಉಂಟಾಗುವ ಊರಿಯೂತವು ಕೆಂಪು ರಕ್ತ ಕಣಗಳ ಉತ್ಪಾದನೆಗೆ ಅಡ್ಡಿಪಡಿಸುತ್ತದೆ. ಇದರಿಂದ ರಕ್ತಹೀನತೆ ಸಮಸ್ಯೆ ಹೆಚ್ಚಾಗಬಹುದು.

ಏನು ಮಾಡಬಹುದು?

  • ಹೃದ್ರೋಗ ಸಮಸ್ಯೆ ಮಹಿಳೆಯರಲ್ಲಿ ಕಡಿಮೆ ಎಂದು ನಿರ್ಲಕ್ಷ್ಯಿಸಬೇಡಿ. ಮಹಿಳೆಯರು ಕಡ್ಡಾಯವಾಗಿ ಆಗಾಗ್ಗೆ ಹೃದಯದ ತಪಾಸಣೆ ಮಾಡಿಸಿ.

  • ಏಕಕಾಲಕ್ಕೆ ಹಲವು ಕೆಲಸಗಳನ್ನು ಒಟ್ಟಿಗೆ ನಿರ್ವಹಿಸುವ, ಮನೆ ಹಾಗೂ ಕಚೇರಿಯನ್ನು ಒಟ್ಟಿಗೆ ನಿಭಾಯಿಸುವ ಮಹಿಳೆಯರು ಹೃದಯದ ಕಾಳಜಿಯೂ ಮಾಡಿ.

  • ಧಾರಣಾ ಶಕ್ತಿ ಇದೆಯೆಂದು ದೈಹಿಕ ಹಾಗೂ ಮಾನಸಿಕ ಒತ್ತಡವನ್ನು ಅನುಭವಿಸಬೇಡಿ. ಮುಲಾಜಿಲ್ಲದೇ ಹೊರೆಯನ್ನು ಇಳಿಸುವ ಜಾಣ್ಮೆಯನ್ನು ಕಲಿಯಿರಿ. 

  • ಕುಟುಂಬದ ದೇಖರೇಖಿ ನೋಡಿಕೊಳ್ಳುವ ಮಹಿಳೆಯರು ಆಗಾಗ್ಗೆ ಹೃದಯದ ಆರೋಗ್ಯದ ಕಡೆಗೆ ಗಮನ ಕೊಡಿ. ಧೂಮಪಾನ ಮಾಡುತ್ತಿದ್ದರೆ ಬಿಟ್ಟುಬಿಡಿ. ಧೂಮಪಾನದಿಂದ ರಕ್ತನಾಳಗಳು ಹಾನಿಗೆ ಒಳಗಾಗುತ್ತವೆ. ಇದು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.

  • ಮದ್ಯಸೇವನೆಯು ಕಬ್ಬಿಣ ಮತ್ತು ಫೋಲಿಕ್‌ನಂಥ ನಿರ್ಣಾಯಕ ಪೋಷಕಾಂಶಗಳ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಇದರಿಂದಲೂ ಅಧಿಕ ರಕ್ತದೊತ್ತಡ ಉಂಟಾಗಿ ಹೃದ್ರೋಗ ಸಮಸ್ಯೆ ಉಂಟಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT