ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತ ವರ್ಗಾವಣೆ ಹೇಗೆ? ಏಕೆ?

Last Updated 20 ಮಾರ್ಚ್ 2023, 22:30 IST
ಅಕ್ಷರ ಗಾತ್ರ

ರಕ್ತ ಕೇಂದ್ರದಿಂದ ತಂದ ರಕ್ತವ್ನನು ಕೂಡಲೇ ರೋಗಿಗೆ ವರ್ಗಾವಣೆ ಮಾಡಬಹುದು.

ತೀವ್ರತರ ರಕ್ತಹೀನತೆ, ಅನಿಯಂತ್ರಿತ ರಕ್ತಸ್ರಾವ, ವಿವಿಧ ಕಾಯಿಲೆಗಳಲ್ಲಿ ಕಂಡು ಬರುವ ಕಿರುಬಿಲ್ಲೆಗಳ ಸಂಖ್ಯೆಯ ಇಳಿಮುಖ ಮೊದಲಾದ ಇನ್ನೂ ಹಲವು ಸಮಸ್ಯೆಗಳಲ್ಲಿ ರಕ್ತವರ್ಗಾವಣೆ ಚಿಕಿತ್ಸೆಯ ಮುಖ್ಯ ಭಾಗವೆನಿಸುತ್ತದೆ. ಅಪಘಾತಗಳಲ್ಲಿ, ಪ್ರಸವದ ವೇಳೆ ಮತ್ತು ದೊಡ್ಡ ಪ್ರಮಾಣದ ಶಸ್ತ್ರಚಿಕಿತ್ಸೆಗಳನ್ನು ಮಾಡುವಾಗ ಅಧಿಕ ರಕ್ತಸ್ರಾವವಾಗುವುದು ಸಾಮಾನ್ಯ. ಅಂತಹ ಸಂದರ್ಭಗಳಲ್ಲಿಯೂ ರೋಗಿ ಗುಣಮುಖವಾಗುವಲ್ಲಿ ರಕ್ತವರ್ಗಾವಣೆ ಬಹಳವೇ ಮಹತ್ವದ್ದೆನಿಸುತ್ತದೆ. ರೋಗಿಯ ಅವಶ್ಯಕತೆಗೆ ಅನುಗುಣವಾಗಿ ರಕ್ತದ ಮೂರು ಮುಖ್ಯ ಘಟಕಗಳಾದ ಕೇಂದ್ರೀಕೃತ ಕೆಂಪು ರಕ್ತಕಣಗಳು ಅಥವಾ ರಕ್ತದ ದ್ರವಾಂಶ ಅಥವಾ ಕಿರುಬಿಲ್ಲೆಗಳನ್ನು (ಪ್ಲೇಟಿಲೇಟ್ಸ್) ವರ್ಗಾವಣೆ ಮಾಡಲಾಗುತ್ತದೆ.

ಆಸ್ಪತ್ರೆಗಳಲ್ಲಿ ರೋಗಿಗೆ ರಕ್ತವರ್ಗಾವಣೆ ಮಾಡಬೇಕು ಎಂದು ನಿರ್ಧಾರವಾದ ಕೂಡಲೇ ವೈದ್ಯರು ರೋಗಿಯ ಸಂಬಂಧಿಕರಿಗೆ ವಿಷಯವನ್ನು ತಿಳಿಸುತ್ತಾರೆ. ಕೂಡಲೇ ಕಾರ್ಯಪ್ರವೃತ್ತರಾಗುವ ಅಲ್ಲಿನ ಶುಶ್ರೂಷಕರು ಹತ್ತಿರದ ರಕ್ತಕೇಂದ್ರಕ್ಕೆ (ಹಿಂದೆ ರಕ್ತನಿಧಿ ಅಥವಾ ರಕ್ತಭಂಡಾರ ಎಂಬ ಹೆಸರಿನಿಂದ ಕರೆಯುತ್ತಿದ್ದರು) ಕೋರಿಕೆಯ ಪತ್ರವನ್ನು ರೋಗಿಯ ಕಡೆಯವರಿಗೆ ಕೊಡುತ್ತಾರೆ. ಅದರಲ್ಲಿ ರೋಗಿಯ ಸಂಪೂರ್ಣ ವಿವರ, ಅಂದರೆ ರೋಗಿಯ ಪೂರ್ಣ ಹೆಸರು, ರಕ್ತದ ಗುಂಪು, ವರ್ಗಾವಣೆ ಮಾಡಲು ಕಾರಣ ಮೊದಲಾದ ಮಾಹಿತಿಯನ್ನು ಸೂಚಿಸಿರುತ್ತಾರೆ. ಇದರ ಜೊತೆಯಲ್ಲಿ ರೋಗಿಯ ರಕ್ತದ ಮಾದರಿಯನ್ನು ಕೊಟ್ಟು ಹತ್ತಿರದ ರಕ್ತಕೇಂದ್ರದಿಂದ ರಕ್ತದ ಘಟಕವನ್ನು ತರಲು ಸೂಚಿಸುತ್ತಾರೆ. ರೋಗಿಯ ಕಡೆಯವರೇ ಆ ಪತ್ರವನ್ನು ಹತ್ತಿರದ ರಕ್ತಕೇಂದ್ರಕ್ಕೆ ಕೊಂಡೊಯ್ದು ತಮ್ಮ ರೋಗಿಗೆ ಸೂಕ್ತ, ಸರಿ ಹೊಂದುವ ರಕ್ತದ ಘಟಕವನ್ನು ತರಬೇಕಾಗುತ್ತದೆ.

ರಕ್ತಕೇಂದ್ರದಲ್ಲಿ ನಡೆಯುವುದೇನು?

ರಕ್ತವರ್ಗಾವಣೆಯ ಕೋರಿಕೆಯ ಪತ್ರವನ್ನು ರಕ್ತಕೇಂದ್ರದಲ್ಲಿ ಕೊಟ್ಟಾಗ ಅಲ್ಲಿನ ತಂತ್ರಜ್ಞರು ಮೊದಲು ಪತ್ರದಲ್ಲಿ ರಕ್ತದ ಯಾವ ಘಟಕವನ್ನು ಸೂಚಿಸಿದ್ದಾರೆ; ಆ ಗುಂಪಿನ, ಆ ಘಟಕ ತಮ್ಮ ಕೇಂದ್ರದಲ್ಲಿದೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳುತ್ತಾರೆ. ಒಂದು ವೇಳೆ ಇದೆ ಎಂದಾದಲ್ಲಿ ರೋಗಿಯ ರಕ್ತದ ಮಾದರಿಯನ್ನು ರಕ್ತಕೇಂದ್ರದ ಒಳಭಾಗದಲ್ಲಿರುವ ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗುತ್ತಾರೆ. ಅದೇ ಗುಂಪಿನ, ಮುಖ್ಯ ಸೂಕ್ಷ್ಮಾಣುಗಳಿಗಾಗಿ (ಎಚ್‍ಐವಿ, ಹೆಪಟೈಟಿಸ್ ಬಿ, ಹೆಪಟೈಟಿಸ್ ಸಿ, ಸಿಫಿಲಿಸ್ ಮತ್ತು ಮಲೇರಿಯ) ತಪಾಸಣೆಗೊಳಗಾದ ದಾನಿಯ ರಕ್ತದಚೀಲವನ್ನು ವಿಶೇಷ ರೆಫ್ರಿಜೆರೇಟರ್‌ನಿಂದ ಹೊರತೆಗೆಯುತ್ತಾರೆ. ರಕ್ತದಚೀಲದೊಂದಿಗೆ ನಾಳದಂತಿರುವ ಭಾಗದಲ್ಲಿ ವಿವಿಧ ತಪಾಸಣೆಗಳಿಗೆಂದೇ ಒಂದಿಷ್ಟು ರಕ್ತವಿರುತ್ತದೆ. ಆ ರಕ್ತದ ಮಾದರಿಯೊಂದಿಗೆ ರೋಗಿಯ ರಕ್ತವನ್ನು ಹೊಂದಿಸಿ ನೋಡುವ ಎರಡು ಮುಖ್ಯ ತಪಾಸಣೆಗಳನ್ನು (ಕ್ರಾಸ್ ಮ್ಯಾಚಿಂಗ್) ಮಾಡುತ್ತಾರೆ. ಈ ತಪಾಸಣೆಗೆ ಕನಿಷ್ಠ ನಲವತ್ತೈದು ನಿಮಿಷಗಳಿಂದ ಒಂದು ತಾಸು ಬೇಕಾಗುತ್ತದೆ. ಈ ಸಮಯದಲ್ಲಿ ರೋಗಿಯ ಸಂಬಂಧಿ ತಾಳ್ಮೆಯಿಂದ ಕೇಂದ್ರದಲ್ಲಿ ಕಾಯಬೇಕಾಗುತ್ತದೆ. ಈ ಸಮಯದಲ್ಲಿ ಅಲ್ಲಿನ ತಂತ್ರಜ್ಞರು ರೋಗಿಯ ಕಡೆಯವರನ್ನು ಸ್ವಯಂಪ್ರೇರಿತ ರಕ್ತದಾನಕ್ಕೂ ವಿನಂತಿಸಿಕೊಳ್ಳಬಹುದು. ಯಾವುದೇ ಹಿಂಜರಿಕೆ ಅಥವಾ ಅಳುಕಿಲ್ಲದೆ ಅವರು ಅಲ್ಲಿನ ವೈದ್ಯಾಧಿಕಾರಿಯೊಂದಿಗೆ ಸಮಾಲೋಚಿಸಿ ಆಗಲೇ ರಕ್ತದಾನವನ್ನೂ ಮಾಡಬಹುದು ಅಥವಾ ಮುಂದಿನ ದಿನಗಳಲ್ಲಿಯೂ ಮಾಡಬಹುದು. ರೋಗಿಗಳಿಗೆ ಅನುಕೂಲವಾಗುವಂತೆ ಸಾಕಷ್ಟು ರಕ್ತದ ಘಟಕಗಳನ್ನು ಸಂಗ್ರಹದಲ್ಲಿಡಲು ತಂತ್ರಜ್ಞರು ಆ ರೀತಿ ವಿನಂತಿಸಿಕೊಳ್ಳುವುದು ಸಹಜ. ಹೊಂದಿಸಿ ಪರಿಶೀಲಿಸುವ ತಪಾಸಣೆಯಲ್ಲಿ ಯಾವುದೇ ಪ್ರತಿಕೂಲ ಪ್ರತಿಕ್ರಿಯೆಗಳು ಕಂಡು ಬರದಿದ್ದಾಗ ಮಾತ್ರ ಆ ರಕ್ತದಚೀಲವನ್ನು ರೋಗಿಯ ಕಡೆಯವರಿಗೆ ಕೊಡಲಾಗುತ್ತದೆ. ಔಷಧ ನಿಯಂತ್ರಣ ಮಂಡಳಿಯು ನಿಗದಿ ಪಡಿಸಿದ ಮೊತ್ತವನ್ನು ಪಾವತಿಸಿ ರಕ್ತದ ಚೀಲವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಬೇಕಾಗುತ್ತದೆ. ಆಸ್ಪತ್ರೆ ಹತ್ತಿರದಲ್ಲಿ ಇದ್ದರೆ (ಮೂವತ್ತು ನಿಮಿಷಗೊಳೊಳಗಿನ ಹಾದಿ) ಅದನ್ನು ಸರಳವಾದ ಪ್ಲ್ಯಾಸ್ಟಿಕ್ ಚೀಲದಲ್ಲಿರಿಸಿ ಕಳುಹಿಸುತ್ತಾರೆ. ಮೂವತ್ತು ನಿಮಿಷಗಳಿಗೂ ಹೆಚ್ಚಿನ ದೂರವಿರುವ ಹಾದಿಯಾದರೆ ತಂಪು ಡಬ್ಬಿಯಲ್ಲಿರಿಸಿ ಕಳುಹಿಸಬೇಕಾಗುತ್ತದೆ.

ಹೀಗೆ ತೆಗೆದುಕೊಂಡು ಹೋದ ರಕ್ತದ ಚೀಲವನ್ನು ವಿಳಂಬ ಮಾಡದೇ ಆಸ್ಪತ್ರೆಯ ಶುಶ್ರೂಷಕರಿಗೆ ತಲುಪಿಸಬೇಕು. ಸಾಮಾನ್ಯವಾಗಿ ಶುಶ್ರೂಷಕರು ಕೂಡಲೇ ವರ್ಗಾವಣೆಗೆ ಅಣಿ ಮಾಡಿಕೊಳ್ಳುತ್ತಾರೆ. ರೋಗಿಯ ಪೂರ್ವಾಪರ ಮಾಹಿತಿಯನ್ನು ಪಡೆದು, ಕನಿಷ್ಠ ಅಲರ್ಜಿಯೂ ಆಗದಿರಲೆಂದು ಕೆಲವು ಔಷಧಗಳನ್ನು ಚುಚ್ಚುಮದ್ದುಗಳ ರೂಪದಲ್ಲಿ ಕೊಟ್ಟು ವರ್ಗಾವಣೆಯನ್ನು ಆರಂಭಿಸುತ್ತಾರೆ.
ಫ್ರಿಜ್‍ನಲ್ಲಿರಿಸಿದ ತಣ್ಣನೆಯ ರಕ್ತವನ್ನು ಕೂಡಲೇ ರೋಗಿಗೆ ವರ್ಗಾವಣೆ ಮಾಡಬಾರದೆಂದೂ, ಅದು ಕೊಠಡಿಯ ಉಷ್ಣತೆಗೆ ತಂದು ನಂತರವೇ ವರ್ಗಾವಣೆ ಮಾಡಬೇಕೆಂಬ ತಪ್ಪು ಕಲ್ಪನೆ ಕೆಲವೆಡೆ ಇದೆ. ಆದರೆ ದಾನಿಯ ರಕ್ತವು ಹನಿ ಹನಿಯಾಗಿ ಮತ್ತು ನಿಧಾನವಾಗಿ ರೋಗಿಯ ರಕ್ತಪರಿಚಲನಾ ವ್ಯವಸ್ಥೆಯನ್ನು ಸೇರುವುದೂ ಅಲ್ಲದೆ, ಸುಮಾರು ಆರು ಲೀಟರ್ ರಕ್ತವಿರುವ ರೋಗಿಯ ರಕ್ತ ಪರಿಚಲನಾ ವ್ಯವಸ್ಥೆಗೆ ದಾನಿಯ ಕೇವಲ 350ರಿಂದ 450 ಮಿಲಿ ಲೀಟರ್ ತಣ್ಣನೆಯ ರಕ್ತ ಸೇರುವುದರಿಂದ ಅದು ಯಾವುದೇ ಪ್ರತಿಕೂಲ ಪರಿಣಾಮಗಳಿಗೆ ಕಾರಣವಾಗುವುದಿಲ್ಲ. ಹಾಗಾಗಿ ರಕ್ತಕೇಂದ್ರದಿಂದ ತಂದ ರಕ್ತವನ್ನು ಕೂಡಲೇ ರೋಗಿಗೆ ವರ್ಗಾವಣೆ ಮಾಡಬಹುದು. ಹಾಗೆ ತಂದ ರಕ್ತವನ್ನು ಹೆಚ್ಚು ಕಾಲ ಕೊಠಡಿಯ ಉಷ್ಣತೆಯಲ್ಲಿ ಇಡುವುದು ಉಚಿತವಲ್ಲ. ಘಟಕವು ರಕ್ತನಿಧಿಯಿಂದ ಹೊರ ಬಿದ್ದ ನಾಲ್ಕು ತಾಸುಗಳ ಒಳಗಾಗಿ ವರ್ಗಾವಣಾ ಪ್ರಕ್ರಿಯೆ ಸಂಪೂರ್ಣಗೊಳ್ಳಬೇಕು. ಏಕೆಂದರೆ ಅದಕ್ಕಿಂತಲೂ ಹೆಚ್ಚು ಹೊತ್ತು ಕೊಠಡಿಯ ಉಷ್ಣತೆಯಲ್ಲಿದ್ದರೆ, ರಕ್ತಕಣಗಳಲ್ಲಿ ಬಿರುಕುಂಟಾಗಿ ಅವು ಕ್ಷಮತೆಯನ್ನು ಕಳೆದುಕೊಳ್ಳುವುದಷ್ಟೇ ಅಲ್ಲದೆ ರೋಗಿಯ ಶರೀರದಲ್ಲಿ ಪ್ರತಿಕೂಲ ಪರಿಣಾಮಗಳಿಗೂ ಕಾರಣವಾಗಬಹುದು.

ಪ್ರತಿಕೂಲ ಪರಿಣಾಮಗಳು

ರಕ್ತವರ್ಗಾವಣೆ ಒಂದು ಸಂಕೀರ್ಣ ಪ್ರಕ್ರಿಯೆ. ಈ ಸಮಯದಲ್ಲಿ ರೋಗಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದು ಅತ್ಯವಶ್ಯ. ರಕ್ತನಿಧಿಯಲ್ಲಿ ಎಷ್ಟೇ ಹೊಂದಿಸಿ ಪರೀಕ್ಷೆ ಮಾಡಿದ್ದರೂ ಒಮ್ಮೊಮ್ಮೆ ರೋಗಿಯ ಶರೀರದಲ್ಲಿ ಸಣ್ಣ ಪುಟ್ಟ ಪ್ರತಿಕೂಲ ಪರಿಣಾಮಗಳಾಗಬಹುದು. ಚಳಿ, ನಡುಕ, ಮೈ ಬಿಸಿಯಾದಂತೆನಿಸುವುದು, ಉಸಿರಾಟಕ್ಕೆ ತೊಂದರೆ, ತಲೆನೋವು, ಬಾಯಿ ಒಣಗಿದಂತಾಗುವುದು, ತೀವ್ರತರವಾದ ಎದೆಬಡಿತ, ಕೆಳಹೊಟ್ಟೆಯಲ್ಲಿ ನೋವು, ತುರಿಕೆ, ಮೈ ಕೆಂಪು ಕೆಂಪಾಗುವುದು ಮೊದಲಾದ ಯಾವುದೇ ಲಕ್ಷಣ ರೋಗಿಯಲ್ಲಿ ಕಂಡು ಬಂದಲ್ಲಿ ಸಂಬಂಧಿಕರು ಕೂಡಲೇ ಶುಶ್ರೂಷಕರ ಗಮನಕ್ಕೆ ತರಬೇಕು. ರೋಗಿಯೂ ಕೂಡ ಯಾವುದೇ ಅಹಿತಕರ ಅನುಭವವಾದರೆ ತಕ್ಷಣ ತಿಳಿಸಬೇಕು.

ಯಾವುದೇ ಸಂದರ್ಭದಲ್ಲಿಯೂ ದಾನಿಯಿಂದ ಸ್ವೀಕರಿಸಿದ ರಕ್ತವನ್ನು ಆ ಕೂಡಲೇ ರೋಗಿಗೆ ಕೊಡಲು ಬರುವುದಿಲ್ಲ. ಅದನ್ನು ರಕ್ತದ ಮೂಲಕ ಹರಡಬಹುದಾದ ಮುಖ್ಯ ಸೂಕ್ಷ್ಮಾಣುಗಳು ಇವೆಯೇ ಎಂದು ತಪಾಸಣೆ ಮಾಡಿ, ವರದಿ ಸರಿಯಿದ್ದರೆ ಮಾತ್ರ ಅದನ್ನು ಸಂಗ್ರಹಿಸಿಟ್ಟು, ಮುಂದೆ ಅವಶ್ಯಕತೆ ಇರುವ ಬೇರೆ ರೋಗಿಗೆ ಕೊಡಲು ಸಾಧ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT