ಸೋಮವಾರ, ಜನವರಿ 17, 2022
27 °C

Covid-19 Vaccination | ಮಕ್ಕಳಿಗೆ ಕೋವಿಡ್ ಲಸಿಕೆ: ಡಾಕ್ಟರ್‌ ಹೀಗಂತಾರೆ...

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

Prajavani

ಮಕ್ಕಳಿಗೆ ಕೋವಿಡ್‌ ಲಸಿಕೆ ಅಗತ್ಯವೇ? ಈ ಲಸಿಕೆ ಪರಿಣಾಮಕಾರಿಯೇ? ಯಾರು ಲಸಿಕೆ ಪಡೆಯಬಹುದು ? ಮುನ್ನೆಚ್ಚರಿಕಾ ಕ್ರಮಗಳೇನು ಎಂಬ ಹಲವು ಪ್ರಶ್ನೆಗಳಿಗೆ ಇತ್ತೀಚೆಗೆ ‘ಪ್ರಜಾವಾಣಿ’ ನಡೆಸಿದ ‘ಡಾಕ್ಟರ್ಸ್‌ ಲೈವ್‌’ ಕಾರ್ಯಕ್ರಮದಲ್ಲಿ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಪ್ರೀತ್‌ ಶೆಟ್ಟಿ ಉತ್ತರಿಸಿದ್ದಾರೆ. ಅವರೊಂದಿಗೆ ನಡೆಸಿದ ಮಾತುಕತೆಯ ಸಂಕ್ಷಿಪ್ತ ವಿವರ ಇಲ್ಲಿದೆ.

****

ದೇಶದಲ್ಲಿ ಕೋವಿಡ್‌ ಮೂರನೇ ಅಲೆ ಪ್ರಾರಂಭವಾಗುತ್ತಿದೆ. ಈಗಾಗಲೇ ದೊಡ್ಡವರಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ. ಮಕ್ಕಳನ್ನು ಸೋಂಕಿನಿಂದ ರಕ್ಷಿಸುವ ಸಲುವಾಗಿ ಭಾರತ ಸೇರಿದಂತೆ ಕೆಲವು ದೇಶಗಳಲ್ಲಿ ಮಕ್ಕಳಿಗೆ ಲಸಿಕೆ ಹಾಕುವ ಅಭಿಯಾನ ಆರಂಭವಾಗಿದೆ. ಭಾರತದಾದ್ಯಂತ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಾಕ್ಸಿನ್‌ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಹಾಕುವ ಕಾರ್ಯಕ್ರಮ ವೇಗವಾಗಿ ಸಾಗುತ್ತಿದ್ದು, ರಾಜ್ಯದಲ್ಲಿ ಈಗಾಗಲೇ ಶೇ 50ರಷ್ಟು ಮಕ್ಕಳು ಮೊದಲ ಡೋಸ್‌ ಲಸಿಕೆ ಪಡೆದಿದ್ದಾರೆ.

ಮಕ್ಕಳಿಗೆ ಲಸಿಕೆ ಏಕೆ?

‘ಕೋವಿಡ್‌–19’ ಸಾಂಕ್ರಾಮಿಕ ಕಾಯಿಲೆ. ಇದರ ಸೋಂಕು ವೇಗವಾಗಿ ಹರಡುವ ಮೂಲಕ ಮಕ್ಕಳ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುವ ಸಾಧ್ಯತೆ ಇದೆ. ಮಕ್ಕಳು ಹೊರಗಡೆ ಓಡಾಡಿ ಬರುವುದರಿಂದ ಮನೆಯಲ್ಲಿರುವ ಹಿರಿಯರಿಗೆ ಸೋಂಕು ಹಬ್ಬುವ ಸಾಧ್ಯತೆ ಇರುತ್ತದೆ. ಆದ್ದರಿಂದ ಲಸಿಕೆ ಪಡೆಯುವುದು ಅವಶ್ಯಕ.

ಚಳಿಗಾಲದಲ್ಲಿ ಮಕ್ಕಳಲ್ಲಿ ವೈರಲ್ ಜ್ವರ, ಶೀತ ಜ್ವರ, ನೆಗಡಿ, ಕೆಮ್ಮು ಹರಡುವುದು ಸಾಮಾನ್ಯ. ಈ ಆರೋಗ್ಯ ಸಮಸ್ಯೆ ಇದ್ದ ಮಕ್ಕಳು, ಗುಣಮುಖರಾದ ನಂತರ ಕೋವಿಡ್‌ ಲಸಿಕೆ ಪಡೆಯಬಹುದು. ಲಸಿಕೆ ಪಡೆಯುವುದರಿಂದ ಆರೋಗ್ಯದಲ್ಲಿ ಯಾವುದೇ ತೊಂದರೆಯಾಗುವು ದಿಲ್ಲ. ಸಾಮಾನ್ಯವಾಗಿ ಯಾವುದೇ ವೈರಲ್ ಕಾಯಿಲೆ ಏಳು ದಿನಗಳಲ್ಲಿ ಕಡಿಮೆಯಾಗುತ್ತದೆ.

ಲಸಿಕೆ ಬಗ್ಗೆ ಭಯ ಬೇಡ

ಲಸಿಕೆ ಪಡೆದಾಗ ಜ್ವರ, ಶೀತ, ಕೈ– ಕಾಲು ನೋವು, ತಲೆ ನೋವು ಬರುವುದು ಸಾಮಾನ್ಯ. ಇದು ಒಂದೆರಡು ದಿನಗಳಲ್ಲಿ ಕಡಿಮೆಯಾಗುತ್ತದೆ. ಈ ಬಗ್ಗೆ ಭಯ ಬೇಡ.

ಲಸಿಕೆ ಪಡೆದ ಮೇಲೆ ಇಂಜೆಕ್ಷನ್‌ ಚುಚ್ಚಿದ ಜಾಗದಲ್ಲಿ ಹೆಚ್ಚು ನೋವು ಕಾಣಿಸಿಕೊಂಡರೆ, ಊತ ಬಂದರೆ ಮಾತ್ರ ಪ್ಯಾರಾಸಿಟಮಾಲ್ ನೀಡಬಹುದು. ಸಣ್ಣ ಪ್ರಮಾಣದ ನೋವಿದ್ದರೆ ಬಿಸಿ ನೀರಿನ ಶಾಖ ತೆಗೆದುಕೊಂಡರೆ ಸಾಕಾಗುತ್ತದೆ. ಆಗ ಪ್ಯಾರಾಸಿಟಮಾಲ್ ಮಾತ್ರೆ ಪಡೆಯುವ ಅಗತ್ಯವೂ ಇರುವುದಿಲ್ಲ.

ಹೆಣ್ಣುಮಕ್ಕಳು ಮುಟ್ಟಿನ (menstruation) ಸಮಯದಲ್ಲಿ ಲಸಿಕೆ ತೆಗೆದುಕೊಂಡರೆ ಯಾವುದೇ ತೊಂದರೆ ಆಗುವುದಿಲ್ಲ. ಈವರೆಗೂ ಯಾವುದೇ ಅಡ್ಡಪರಿಣಾಮಗಳು ಕಂಡುಬಂದಿಲ್ಲ. ಹಾಗಾಗಿ, ಆರೋಗ್ಯ ಸಚಿವಾಲಯ ರೂಪಿಸಿರುವ ಮಾರ್ಗಸೂಚಿಗಳನ್ನು ಸಾರ್ವಜನಿಕರು ತಪ್ಪದೆ ಪಾಲಿಸಬೇಕು.

ಮುನ್ನೆಚ್ಚರಿಕಾ ಕ್ರಮಗಳು 

ಮಕ್ಕಳಿಗೆ ಶಾಲೆಗಳಲ್ಲಿ ಸೋಂಕು ಹರಡುವಿಕೆ ಪ್ರಮಾಣ ಕಡಿಮೆ. ಮನೆಯಲ್ಲಿರುವ ಪೋಷಕರು ಮತ್ತು ಹೊರಗಡೆಯಿಂದ ಬರುವವರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಪೋಷಕರು ಸೋಂಕಿಗೆ ಒಳಗಾಗಿದ್ದರೆ ಪ್ರತ್ಯೇಕವಾಸದಲ್ಲಿರುವುದು ಸೂಕ್ತ.‌ ಮಕ್ಕಳ ಜೊತೆ ಇರುವ ಸಮಯದಲ್ಲಿ ಪೋಷಕರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಜತೆಗೆ ಮಕ್ಕಳು ಗುಂಪುಗೂಡಿ ಆಟವಾಡುವ ಸಮಯದಲ್ಲಿ ತಪ್ಪದೆ ಮಾಸ್ಕ್‌ ಧರಿಸಬೇಕು. ಆಗಾಗ್ಗೆ ಸಾಬೂನಿನಿಂದ ಕೈತೊಳೆಯುವುದನ್ನು ಅಭ್ಯಾಸ ಮಾಡಿಸಬೇಕು. ಪದೇ ಪದೇ ಕಣ್ಣು, ಮುಗು, ಬಾಯಿ ಮುಟ್ಟಿಕೊಳ್ಳದಂತೆ ಅವರಿಗೆ ಅರಿವು ಮೂಡಿಸಬೇಕು.

– ನಿರೂಪಣೆ: ದೀಪಕ್ ಗೌಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು