ಶನಿವಾರ, ಮೇ 15, 2021
25 °C

ಮಧುಮೇಹಿಗಳಲ್ಲಿ ಎಷ್ಟು ಅಪಾಯಕಾರಿ?

ಡಾ. ವಿ. ಲಕ್ಷ್ಮಿನಾರಾಯಣ್ Updated:

ಅಕ್ಷರ ಗಾತ್ರ : | |

Prajavani

ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಪಸರಿಸಿರುವ ಕೊರೊನಾ ಸೋಂಕು ಇತ್ತೀಚಿನ ವರ್ಷಗಳಲ್ಲಿ ಮನುಕುಲವನ್ನು ಕಾಡಿರುವ ಮಹಾ ಪಿಡುಗು. ರೋಗ ನಿರೋಧಕ ಶಕ್ತಿ ಕುಂಠಿತವಾಗಿರುವ, ಕ್ಯಾನ್ಸರ್‌, ಆಸ್ತಮಾ, ಎಚ್‌ಐವಿ, ಮಧುಮೇಹದಂತಹ ಕಾಯಿಲೆಗಳಿರುವ ವ್ಯಕ್ತಿಗಳಿಗೆ ಈ ಸೋಂಕು ಹರಡಿದರಂತೂ ಪರಿಣಾಮ ಅತ್ಯಂತ ಭೀಕರ. 

ಹಾಗಾದರೆ ಈ ಕೊರೊನಾ ಸೋಂಕು ತೀವ್ರವಾಗಿರುವ ಸಂದರ್ಭದಲ್ಲಿ ಮಧುಮೇಹಿಗಳಿಗೆ ಅದು ಎಷ್ಟು ಅಪಾಯಕಾರಿ? ಅವರು ಯಾವ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು?

ಕೋವಿಡ್-19ಗೆ ಕಾರಣವಾಗುವ ಸಾರ್ಸ್‌–ಕೋವ್‌–2 (ಕೊರೊನಾ–2) ವೈರಸ್‌ ಮಧುಮೇಹಿಗಳಲ್ಲಿ ಹೆಚ್ಚು ತೊಂದರೆ ಉಂಟು ಮಾಡುವುದಕ್ಕೆ  ಮುಖ್ಯವಾಗಿ ಎರಡು ಕಾರಣಗಳಿವೆ. ಮೊದಲನೆಯದಾಗಿ ಮಧುಮೇಹಿಗಳಲ್ಲಿ ಪ್ರತಿರಕ್ಷಾ ಶಕ್ತಿ (ಇಮ್ಯುನಿಟಿ) ದುರ್ಬಲವಾಗಿರುವುದು.

ಮಧುಮೇಹ ಬಂದ ಮೇಲೆ ವ್ಯಕ್ತಿಯಲ್ಲಿ ಹಲವಾರು ವರ್ಷಗಳ ಕಾಲ ರಕ್ತದಲ್ಲಿನ ಸಕ್ಕರೆ ಮಟ್ಟ (ಗ್ಲೂಕೋಸ್) ನಿಯಂತ್ರಣದಲ್ಲಿಲ್ಲದಿದ್ದರೆ, ಅಧಿಕ ಗ್ಲೂಕೋಸ್ ಅಂಶ ನರಸಮೂಹದ ಮೇಲೆ ಮತ್ತು ಮುಖ್ಯ ಅಂಗಾಂಗಗಳ ಜೀವಕೋಶಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ರಕ್ತದಲ್ಲಿರುವ ಪ್ರತಿರಕ್ಷಾ ರಕ್ತಕಣ (ಫೈಟಿಂಗ್‌ ಸೆಲ್ಸ್‌)ಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಾ ಹೋಗುತ್ತದೆ.

ಇಂತಹ ಸನ್ನಿವೇಶದಲ್ಲಿ ಬ್ಯಾಕ್ಟೀರಿಯ ಅಥವಾ ವೈರಾಣುಗಳು ಸುಲಭವಾಗಿ ಮಾನವ ದೇಹದೊಳಗೆ ಪ್ರವೇಶ ಮಾಡುತ್ತವೆ. ಈ ಕಾರಣದಿಂದಲೇ ದೀರ್ಘಕಾಲ ಮಧುಮೇಹ ಇರುವವರು ಮತ್ತು ಗ್ಲೂಕೋಸ್‌ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದಿರುವವರಲ್ಲಿ ಕೊರೊನಾ ಸೋಂಕು ತಗುಲುವ ಸಂಭವ ಹೆಚ್ಚಾಗಿರುತ್ತದೆ.

ರಕ್ತ ಪರಿಚಲನಾ ವ್ಯೂಹಕ್ಕೆ ಹಾನಿ

ಎರಡನೆಯದಾಗಿ ಮಧುಮೇಹಿಗಳಲ್ಲಿ ರಕ್ತ ಪರಿಚಲನಾ ವ್ಯೂಹಕ್ಕೆ ಹಾನಿ ಸಂಭವಿಸುವುದು. ಸರಿಯಾದ ಮಧುಮೇಹ ಚಿಕಿತ್ಸೆಯನ್ನು ತೆಗೆದುಕೊಳ್ಳದಿದ್ದರೆ, ದೀರ್ಘಕಾಲ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಏರುಪೇರಾಗುತ್ತಿದ್ದರೆ ದೇಹದಲ್ಲಿನ ರಕ್ತಪರಿಚಲನಾ ವ್ಯೂಹದಲ್ಲಿರುವ ಸುಮಾರು 60 ಸಾವಿರ ಮೈಲಿಗಳಷ್ಟು ಉದ್ದದ ರಕ್ತನಾಳಗಳು ಹಾನಿಗೊಳಗಾಗುತ್ತವೆ. ಇದರಿಂದ ಮಾನವ ದೇಹದಲ್ಲಿ ಎಲ್ಲಾ ಕಡೆಗಳಿಗೂ ರಕ್ತ ಸರಬರಾಜಾಗದೆ ರಕ್ತಹೀನತೆ ಉಂಟಾಗುತ್ತದೆ. ರಕ್ತಕ್ಕೆ ವ್ಯಾಧಿಯನ್ನು ವಾಸಿ ಮಾಡುವ ಗುಣವಿದೆ. ಆದರೆ ಅಂಗಾಂಗಗಳಿಗೆ ರಕ್ತ ಸರಬರಾಜಾಗುವ ಪ್ರಕ್ರಿಯೆ ಕ್ಷೀಣಿಸಿದಾಗ ಮಧುಮೇಹಿಗಳ ಅಂಗಾಂಗಗಳೊಳಗೆ ಕೊರೊನಾ ವೈರಸ್‌ ಪ್ರವೇಶ ಮಾಡುವುದು ಸುಲಭ.

ಪರಿಹಾರ ಮಾರ್ಗಗಳು

*ಮಧುಮೇಹಕ್ಕೆ ಬೇಕಾಗುವ ಔಷಧಿಗಳನ್ನು ದಾಸ್ತಾನು ಮಾಡಿಕೊಳ್ಳುವುದು.

*ಪೌಷ್ಟಿಕ ಆಹಾರ ಸೇವನೆ ಮತ್ತು ಹೆಚ್ಚಾಗಿ ಶುದ್ಧವಾದ ನೀರು ಕುಡಿಯುವುದು.

*ಸ್ವಯಂ ದಿಗ್ಬಂಧನದಲ್ಲಿರುವ ಸಂಭವ ಬಂದರೆ ಅದಕ್ಕೆ ತಕ್ಕಂತೆ ವ್ಯವಸ್ಥೆ ಮಾಡಿಕೊಳ್ಳುವುದು.‌

*ರಕ್ತದಲ್ಲಿನ ಗ್ಲೂಕೋಸ್ ಮಟ್ಟ ನಿಯಂತ್ರಣದಲ್ಲಿಟ್ಟುಕೊಳ್ಳುವುದು.

*ವೈದ್ಯರ, ದಾದಿಯರ ಸಂಪರ್ಕದಲ್ಲಿರುವುದು

*ಮನೆಯಲ್ಲೇ ಇರುವುದು, ಮುಖಗವಸು ಧರಿಸುವುದು, ಕೈಗಳನ್ನು ಶುದ್ಧವಾಗಿಟ್ಟುಕೊಳ್ಳುವುದು.

(ಲೇಖಕರು ಬೆಂಗಳೂರಿನಲ್ಲಿ ಮಧುಮೇಹ ತಜ್ಞರು)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು