‘ನನ್ನ ಜೊತೆ ಅಷ್ಟು ಸ್ನೇಹದಿಂದ ಇದ್ದ ಗೆಳತಿ ಇದ್ದಕ್ಕಿದ್ದಂತೆ ಮಾತನಾಡೋದನ್ನ ನಿಲ್ಲಿಸಿಬಿಟ್ರು; ಕಾರಣನೇ ಗೊತ್ತಿಲ್ಲ. ಫೇಸ್ ಬುಕ್-ಇನ್ಸಟಾ ಎಲ್ಲದರಲ್ಲೂ ನಾನು ‘ಅನ್ಫ್ರೆಂಡ್’! ಮೊದಮೊದಲು ಏನೋ ಕಷ್ಟ-ದುಃಖದಲ್ಲಿರಬಹುದು ಅಂತ ನಾನೇ ಸಂಪರ್ಕಿಸೋಕೆ ಪ್ರಯತ್ನಿಸಿದೆ. ನೋಡಿದ್ರೆ ನನ್ನ ಬಿಟ್ಟು ಬೇರೆ ಎಲ್ಲರ ಹತ್ತಿರವೂ ಫ್ರೆಂಡ್ಶಿಪ್ ಮುಂದುವರೆದಿದೆ! ನಾನೂ ಪ್ರಯತ್ನ ಬಿಟ್ಟೆ. ಆದರೂ ಮನಸ್ಸಿಗೆ ಏನೋ ಒಂಥರಾ ಬೇಸರ. ಯಾವ ಕಾರಣನೂ ನೀಡದೆ ನನ್ನ ಹತ್ತಿರ ಈ ರೀತಿ ಸಂಪರ್ಕ ಕಡಿದುಕೊಳ್ಳೋ ಬದಲು, ಜಗಳ ಮಾಡಿದ್ರೂ ಪರವಾಗಿರಲಿಲ್ಲ’.

ಇಂತಹ ಸಂದರ್ಭ ನಿಮಗೂ ಎದುರಾಗಿದೆಯೇ?

ಸಾಮಾಜಿಕ ಸಂಬಂಧಗಳನ್ನು ಬೆಳೆಸಿಕೊಳ್ಳುವುದು, ಸ್ನೇಹಿತರನ್ನು ಹುಡುಕಿಕೊಳ್ಳುವುದು, ವಿವಿಧ ದಾರಿಗಳ ಮೂಲಕ ಆ ಸ್ನೇಹವನ್ನು ಕಾಪಾಡಿಕೊಳ್ಳುವುದು ನಮ್ಮ ಜೀವನಕ್ಕೆ, ಆರೋಗ್ಯಕ್ಕೆ ಅಗತ್ಯವೂ ಹೌದು. ಅಂತಹ ಸಂಬಂಧಗಳಲ್ಲಿ ಸ್ನೇಹಿತರೊಬ್ಬರು ನಮ್ಮ ಸ್ನೇಹವನ್ನು ಇದ್ದಕ್ಕಿದ್ದಂತೆ ನಿರಾಕರಿಸಿದಾಗ, ಇಂತಹ ನಡವಳಿಕೆ ಏಕೆ ಎಂಬುದೇ ಅರ್ಥವಾಗದೆ ಕಣ್ಣು ಕಣ್ಣು ಬಿಡುವ ಸ್ಥಿತಿಯಲ್ಲಿ ನಾವಿರುವಂತೆ ಆಗುವಾಗ ಅದನ್ನು ಹೇಗೆ ಎದುರಿಸಬೇಕು ಎಂಬುದೇ ಒಂದು ಸವಾಲಾಗುತ್ತದೆ. ಮನೋವೈಜ್ಞಾನಿಕವಾಗಿ ಹೀಗೆ ಸ್ನೇಹ ಮಾಯವಾಗುವುದನ್ನು ‘ಗೋಸ್ಟಿಂಗ್’– ‘Ghosting’ ಎಂದು ಕರೆಯಲಾಗುತ್ತದೆ.

ಹಿಂದೆಂದಿಗಿಂತ ಇಂದು ಸಾಮಾಜಿಕ ಮಾಧ್ಯಮಗಳ ಮೂಲಕ ಸಂಪರ್ಕ ಸುಲಭ ಸಾಧ್ಯವಾಗಿರುವಾಗ, ಇದ್ದಕ್ಕಿದ್ದಂತೆ ಅದೃಶ್ಯವಾಗುವುದೂ, ‘ಬ್ಲಾಕ್’ ಮಾಡುವುದೂ, ‘ಅನ್ಫ್ರೆಂಡ್’ ‘ಅನ್ಫಾಲೋ’ ಮಾಡುವುದೂ ಅಷ್ಟೇ ವೇಗವಾಗಿ ಸಾಧ್ಯವಾಗುವ ಕ್ರಿಯೆ. ಇಂತಹ ನಿರಾಕರಣೆಯಿಂದ ನಮಗೇಕೆ ಅಷ್ಟು ನೋವು? ಒಬ್ಬರಿಗೆ ನಮ್ಮ ಸ್ನೇಹ ಬೇಡವೆಂದರೆ ನಾವೂ ಅದು ‘ಬೇಡ’ವೆಂದು ಬಿಟ್ಟರಾಯಿತು; ನಮ್ಮ ಸ್ನೇಹ ಬಯಸುವ ಇತರರೊಡನೆ ಸ್ನೇಹ ಬೆಳೆಸಿದರಾಯಿತು ತಾನೆ?! ಮನಸ್ಸಿನ ಕಥೆ ಅಷ್ಟು ಸರಳವಾಗಿದ್ದರೆ ಈ ಜಗತ್ತಿನಲ್ಲಿ ಎಷ್ಟೆಲ್ಲಾ ಸಮಸ್ಯೆಗಳೇ ಇರುತ್ತಿರಲಿಲ್ಲ! ನಮಗೆ ಸಂಬಂಧದಲ್ಲಿ ಸಮಸ್ಯೆಯೇ ಇದ್ದರೂ ಸರಿ, ಅದು ನಮಗೆ ಗೊತ್ತಿರಬೇಕು; ಜಗಳವಾಗಿಯೇ ಆದರೂ ಪರವಾಗಿಲ್ಲ ನಮಗೆ ಸಂಬಂಧಕ್ಕೆ ‘ಮುಕ್ತಾಯ’ ಎನ್ನುವುದು ಬೇಕು! ಹಠಾತ್ ನಿರಾಕರಣೆಯ ‘ಗೋಸ್ಟಿಂಗ್’ ಉಂಟಾದಾಗ ಮನಸ್ಸು ಚಡಪಡಿಸುತ್ತದೆ.

‘ಗೋಸ್ಟಿಂಗ್’ ಸಂಬಂಧದಲ್ಲಿ ಎದುರಾದಾಗ ಎರಡು ಮುಖ್ಯ ಪ್ರಶ್ನೆಗಳನ್ನು ಚರ್ಚಿಸುವುದು ಅವಶ್ಯಕ. ಮೊದಲನೆಯದು ಗೋಸ್ಟಿಂಗ್ ಹಿಂದಿನ ಕಾರಣಗಳು ಏನಿರಬಹುದು ಎನ್ನುವುದು; ಎರಡನೆಯದು ‘ಗೋಸ್ಟಿಂಗ್’ ಎದುರಿಸುತ್ತಿರುವ ವ್ಯಕ್ತಿ ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎನ್ನುವುದು. ಈ ಎರಡೂ ಪ್ರಶ್ನೆಗಳಿಗೆ ಉತ್ತರ ನೀಡಲು ಮನೋವಿಜ್ಞಾನಿಗಳು ಸಾಕಷ್ಟು ಅಧ್ಯಯನಗಳನ್ನು ಈಗಾಗಲೇ ಮಾಡಿದ್ದಾರೆ. ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ 2024ರಲ್ಲಿ ಹೊರಬಂದ ಒಂದು ಅಧ್ಯಯನ ಸರಣಿ ಕೆಲವು ಕುತೂಹಲಕಾರಿ ಅಂಶಗಳನ್ನೂ ಹೊರಹಾಕಿದೆ.

ಪ್ರೇಮಿಗಳು, ಸ್ನೇಹಿತರ ನಡುವೆ ಮಾತ್ರ ಇಂತಹ ಗೋಸ್ಟಿಂಗ್ ನಡೆಯುವುದಲ್ಲ; ವೃತ್ತಿಪರ ಸಂಬಂಧಗಳಲ್ಲಿಯೂ ಇದು ಸಾಧ್ಯ. ಅಂದರೆ ಒಂದು ವ್ಯಾಪಾರದ ‘ಡೀಲ್’ ಇನ್ನೇನು ಕುದುರುತ್ತದೆ, ಒಟ್ಟಿಗೆ ಊಟ ಮಾಡಿದ್ದೇವೆ, ಚೆನ್ನಾಗಿ ಮಾತಾಡಿದ್ದೇವೆ, ನೂರಕ್ಕೆ ನೂರು ವ್ಯವಹಾರ ಕುದುರುವುದು ಖಂಡಿತ ಎಂದುಕೊಂಡಿದ್ದಾರೆ ಎನ್ನಿ. ನಾಳೆ ಫೋನ್ ಮಾಡುತ್ತೇನೆ ಎಂದ ಮನುಷ್ಯ ಇದ್ದಕ್ಕಿದ್ದಂತೆ ಮೌನವಾಗಿಬಿಟ್ಟಿರುತ್ತಾರೆ! ಅಥವಾ ಉದ್ಯೋಗಸ್ಥಳದಲ್ಲಿ ಕೆಲಸ ಮಾಡುವ ಒಬ್ಬ ವ್ಯಕ್ತಿ ಇದ್ದಕ್ಕಿದ್ದಂತೆ ಯಾವ ಕಾರಣವನ್ನೂ ನೀಡದೆ ನಾಳೆ ಬರುತ್ತೇನೆ ಎಂದವರು ಬರದಿರಬಹುದು.

ಅಪ್ರಿಯವಾದ ಸತ್ಯವನ್ನು ಹೇಳುವುದು, ಕಲಹವನ್ನು - ಹೇಳಿಸಿಕೊಂಡವರ ನೋವನ್ನು ಎದುರಿಸುವುದು ಅಸಹನೀಯ ಎನಿಸಿದಾಗ ‘ಗೋಸ್ಟಿಂಗ್’ ಅನ್ನು ಒಂದು ತಂತ್ರವಾಗಿ ಬಳಸುತ್ತಾರೆ. ಒಂದೊಮ್ಮೆ ಮತ್ತೆ ಮಾತನಾಡಲು ಆರಂಭಿಸಿದರೂ ಹಠಾತ್ ನಿರಾಕರಣೆಯನ್ನು ತಾವು ಮಾಡಿದ್ದು ಏಕೆ ಎಂಬ ಬಗ್ಗೆ ಅವರು ನಿಜ ಹೇಳಿ, ಎದುರಿನವರ ಮನಸ್ಸಿನ ಚಡಪಡಿಕೆಯನ್ನು ಶಾಂತವಾಗಿಸುವ ಸಾಧ್ಯತೆ ಕಡಿಮೆಯೇ. ಕ್ಷಮೆ ಇಲ್ಲವೇ ತೇಲಿಸಿ ‘ಅದನ್ನೆಲ್ಲಾ ಬಿಡು, ಏನೋ ಆಗಿ ಹೋಯ್ತು/ಅದೆಲ್ಲಾ ಈಗೇಕೆ’ ಎಂದು ತಳ್ಳಿ ಹಾಕುವ, ನಿರೀಕ್ಷೆ ಮಾಡಿದ ನಿಜ ದೊರೆಯದಿರುವ ಸಂಭವವೇ ಹೆಚ್ಚು. ಅದು ವಾಸ್ತವದಲ್ಲಿ ಅವರಿಗಿರುವ ಸಂಬಂಧದ ಬಗೆಗಿನ ದ್ವಂದ್ವ ಮನೋಭಾವವನ್ನೇ ತೋರಿಸುತ್ತದೆ. ನಾವೇ ಈ ರೀತಿ ಸಂಬಂಧಗಳಲ್ಲಿ ‘ಗೋಸ್ಟರ್’ ಆಗಬಹುದಾದಂತಹ ಸಾಧ್ಯತೆಯೂ ಇರಬಹುದು ಎಂಬುದನ್ನೂ ಗಮನಿಸಬೇಕು! ಸನ್ನಿವೇಶ ಭಾವನಾತ್ಮಕವಾಗಿ ಕಷ್ಟದ್ದು ಎಂಬ ಕಾರಣಕ್ಕೆ ಪಲಾಯನವಾದಕ್ಕೆ ಕಟ್ಟು ಬೀಳುವ ಬದಲು, ಇನ್ನೊಬ್ಬರಿಗೆ ನೇರವಾಗಿ ‘ಇದು ನನಗೆ ಇಷ್ಟವಿಲ್ಲ’ ಎಂದು ಮೃದುವಾಗಿ ಆದರೆ ದೃಢವಾಗಿ ಹೇಳುವ ಕೌಶಲವನ್ನು ಬೆಳೆಸಿಕೊಳ್ಳಬೇಕು. ಎಷ್ಟೇ ಮೃದುವಾಗಿ ಹೇಳಿದ್ದಾಗ್ಯೂ ಸಂಬಂಧದಲ್ಲಿ ಬಿರುಕು-ನೋವುಗಳು ಇರಬಹುದು; ಆದರೆ ಅಲ್ಲಿ `ಮುಕ್ತಾಯ'ವಿದೆ; ಕ್ರಮೇಣ ಮನಸ್ಸು ಹೊಂದಿಕೊಳ್ಳುತ್ತದೆ ಎಂಬ ವೈಜ್ಞಾನಿಕ ಅಂಶಗಳು ಇಲ್ಲಿ ಮುಖ್ಯವಾಗಿ ನಿಲ್ಲುತ್ತವೆ.

ನಿರಾಕರಣೆಗೆ ಒಳಗಾದ ವ್ಯಕ್ತಿ ಏನು ಮಾಡಬೇಕು? ಸ್ನೇಹ ಬೇಡ ಎನ್ನುವ ವ್ಯಕ್ತಿಯನ್ನು ಮತ್ತೆ ಮತ್ತೆ ಸಂಪರ್ಕಿಸಿ, ಮನವೊಲಿಸುವ ಪ್ರಯತ್ನ ಮಾಡಬೇಕೆ? ಮನಸ್ಸು ಸಂಬಂಧದ ಬಗ್ಗೆ ಮೆಲುಕು ಹಾಕುವುದು, ಮತ್ತೆ ಮತ್ತೆ ಕಾರಣ ಊಹಿಸುವುದು, ಒಂದು ಬಾರಿ ಬಂದು ಮಾತಾಡಿ ಎಲ್ಲವನ್ನೂ ‘ಕ್ಲಿಯರ್’ ಮಾಡಿಬಿಟ್ಟರೆ ಸಾಕು ಎಂದು ಯೋಚಿಸುವುದು ಇವು ಸಾಮಾನ್ಯವಾಗಿ ನಡೆಯುವ ಮಾನಸಿಕ ಪ್ರಕ್ರಿಯೆಗಳು. ಹಿಂದೆ ಇವುಗಳಿಂದ ಬೇಗ ಹೊರಬರಲು ಮಿದುಳು ಮಾತ್ರ ನಡೆದ ಘಟನೆಗಳು, ಆ ವ್ಯಕ್ತಿಯೊಡನೆ ಕಳೆದ ಕ್ಷಣಗಳನ್ನು ಮರೆತರೆ ಸಾಕಾಗಿತ್ತು, ಸುಲಭವಾಗಿತ್ತು. ಈಗ ಹಾಗಲ್ಲ. ನಮ್ಮ ಎಫ್ಬಿ, ಇನ್ಸ್ಟಾ-ಮೊಬೈಲ್ ‘ಮೆಮೊರಿ’ಗಳನ್ನೂ ನಾವು ನಿಭಾಯಿಸಬೇಕು! ಇವುಗಳಿಂದ ‘ಗೋಸ್ಟಿಂಗ್’ ಎಂಬ ಸಮಸ್ಯೆ ಮತ್ತಷ್ಟು ನಮ್ಮನ್ನು ಹಿಂಬಾಲಿಸಲು ಸಾಧ್ಯವಿದೆ.

ಇಂತಹ ಸಂದರ್ಭದಲ್ಲಿ ಮನಸ್ಸನ್ನು ಮಗುವಿನಂತೆ ಸಮಾಧಾನಿಸಬೇಕು; ನಿಮಗೇ ನೀವು ಮಾಡಿದ ಯಾವುದೋ ತಪ್ಪು ಹೀಗಾಗಲು ಕಾರಣವಾಗಿರಬಹುದು ಎಂಬ ಸಂದೇಹವಿದ್ದರೆ ಅದನ್ನು ಬರೆದು ನಿಮ್ಮ ಮೌನವಾದ ಸ್ನೇಹಿತ/ಸ್ನೇಹಿತೆಗೆ ತಿಳಿಸಬಹುದು. ಅಥವಾ ನಿಮ್ಮಿಂದ ಯಾವ ತಪ್ಪೂ ಆಗಿಲ್ಲ ಅನ್ನಿಸಿದರೆ ‘ನಿನಗೆ ಯಾವ ಕಾರಣದಿಂದಲಾದರೂ ಬೇಸರವೆನಿಸಿದ್ದರೆ, ಅದಕ್ಕೆ ನನ್ನ ಸಹಾನುಭೂತಿಯಿದೆ; ನಿನ್ನ ಸ್ನೇಹ ನನಗಂತೂ ಬೇಕು, ನಿನಗೂ ಬೇಕೆಂದರೆ ಸಂಪರ್ಕಿಸು’ ಎಂಬ ಸಂದೇಶ ಕಳಿಸಬಹುದು. ಹೀಗೆ ಕಳಿಸುವುದು ನಿಮ್ಮ ಮನಸ್ಸಿಗೆ ನಿಮ್ಮ ಕಡೆಯಿಂದ ‘ಮುಕ್ತಾಯ’ದ ಸಮಾಧಾನವನ್ನಂತೂ ನೀಡುತ್ತದೆ. ಊಹೆಯ ಸರಣಿಯನ್ನು ನಿಲ್ಲಿಸಿ, ಮನಸ್ಸು ಇತರ ವಿಷಯಗಳಲ್ಲಿ ತೊಡಗಿಕೊಳ್ಳುವುದು ಸುಲಭವಾಗುತ್ತದೆ. ಇವುಗಳನ್ನು ಮೀರಿ ಇತರರ ಬಳಿ ಚರ್ಚಿಸುವುದು, ಮತ್ತೆ ಮತ್ತೆ ಸಂಪರ್ಕಿಸುವುದು ಖಂಡಿತ ಸಲ್ಲದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.