ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತನದ ಮೇಲಿನ ಮೊಡವೆ ನಿರ್ಲಕ್ಷಿಸಬೇಡಿ, ಅದು ಕ್ಯಾನ್ಸರ್ ಆಗಿರಬಹುದು ಎಚ್ಚರ

Last Updated 8 ಅಕ್ಟೋಬರ್ 2021, 12:50 IST
ಅಕ್ಷರ ಗಾತ್ರ

ಅಕ್ಟೋಬರ್‌ ಮಾಸವನ್ನು ಸ್ತನ ಕ್ಯಾನ್ಸರ್ ಮಾಸವೆಂದೇ ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತಿದೆ. ವಿಶ್ವದಲ್ಲಿ ಶೇ 25 ರಷ್ಟು ಮಹಿಳೆಯರು ಸ್ತನ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಆಘಾತಕಾರಿ ವಿಷಯವೆಂದರೆ ಪ್ರತಿ ವರ್ಷ ಸ್ತನ ಕ್ಯಾನ್ಸರ್‌ಗೆ ಒಳಗಾಗುತ್ತಿರುವ ಮಹಿಳೆಯರ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಆರಂಭದ ಹಂತದಲ್ಲಿಯೇ ಈ ಕ್ಯಾನ್ಸರ್‌ನನ್ನು ಪತ್ತೆ ಹಚ್ಚುವುದರಿಂದ ಮುಂದಾಗುವ ಅಪಾಯವನ್ನು ತಪ್ಪಿಸಬಹುದು. ಆದರೆ, ಈ ಕ್ಯಾನ್ಸರ್ ಕೊನೆಯ ಹಂತಕ್ಕೆ ತಲುಪಿದರೆ ಚಿಕಿತ್ಸೆ ಅಸಾಧ್ಯದ ಮಾತು.

ಸ್ತನದ ಜೀವಕೋಶದಲ್ಲಿ ಬೆಳೆಯುವ ಕ್ಯಾನ್ಸರ್ ಅನ್ನು ‘ಸ್ತನ ಕ್ಯಾನ್ಸರ್’ ಎಂದು ಗುರುತಿಸಲಾಗುತ್ತದೆ.

4 ಹಂತದಲ್ಲಿ ಸ್ತನ ಕ್ಯಾನ್ಸರ್

ಸ್ತನ ಕ್ಯಾನ್ಸರ್ ಅನ್ನು 4 ಹಂತವಾಗಿ ವಿಂಗಡಿಸಲಾಗಿದೆ. ಅಂದರೆ ಸ್ತನದಲ್ಲಿ ಬೆಳೆದಿರುವ ಗಡ್ಡೆ ಎಷ್ಟು ಬೆಳೆದಿದೆ ಮತ್ತು ಎಷ್ಟು ಭಾಗಕ್ಕೆ ಪಸರಿಸಿದೆ ಎಂಬುದರ ಆಧಾರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಸ್ತನ ಕ್ಯಾನ್ಸರ್ ಅನ್ನು ಪ್ರಾರಂಭದಲ್ಲಿ ಕಂಡುಹಿಡಿಯುವುದು ಕಷ್ಟ. ಮನುಷ್ಯನ ಸ್ತನದಲ್ಲಿ ಗೊತ್ತಿಲ್ಲದೆ ಕ್ಯಾನ್ಸರ್ ಹುಟ್ಟಿಕೊಳ್ಳುತ್ತದೆ. ಇದನ್ನು ಡಕ್ಟಲ್ ಕಾರ್ಸಿನೋಮಿನ್ ಸಿತು (ಡಿಸಿಐಎಸ್) ಎಂದು ಕರೆಯುತ್ತಾರೆ.

ಹಂತ 1: ಸ್ತನ ಕ್ಯಾನ್ಸರ್ ಗಡ್ಡೆಯಾಗಿ ಬೆಳೆಯುತ್ತದೆ. ಪ್ರಾರಂಭದಲ್ಲಿ ಯಾವುದೇ ಮೊಡವೆ ರೀತಿ ಕಂಡು ಬರುವುದಿಲ್ಲ. ಒಂದು ಎಳೆಯಾಗಿ ಕ್ಯಾನ್ಸರ್‌ ಒಳಗಡೆ ಬೆಳೆಯುತ್ತಾ ಹೋಗುತ್ತದೆ. ನಂತರದಲ್ಲಿ ಅದು ಗಡ್ಡೆಯಾಗಿ ಮಾರ್ಪಡಲಿದೆ.

ಹಂತ 2: ಗಡ್ಡೆ ಸುಮಾರು 2 ಸೆ. ಮೀಟರ್‌ಗೆ ದೊಡ್ಡದಾಗಿ ಬೆಳೆಯಲು ಪ್ರಾರಂಭಿಸುತ್ತದೆ. ನಂತರ ಹತ್ತಿರದ ದುಗ್ಧರಸ ಗ್ರಂಥಿಗಳ ಮೇಲೆ ಪರಿಣಾಮ ಬೀರುತ್ತಾ ಹೋಗುತ್ತದೆ. ಕೆಲವು ಸಮಯದಲ್ಲಿ ಗಡ್ಡೆ ಬೆಳೆಯದೇ ಹಾಗೆಯೇ ಉಳಿದುಕೊಳ್ಳುವ ಸಾಧ್ಯತೆಯೂ ಇದೆ.

ಹಂತ 3: ನಂತರ ಹಂತ ಹಂತವಾಗಿ ಗಡ್ಡೆಯ ಗಾತ್ರದಲ್ಲಿ ಬದಲಾವಣೆಯಾಗಬಹುದು. 5 ಸೆ. ಮೀಟರ್‌ಗೂ ಹೆಚ್ಚು ದೊಡ್ಡದಾಗಿ ಬೆಳೆಯಬಹುದು. ಆಕ್ಸಿಲರಿ ದುಗ್ಧರಸ ಗ್ರಂಥಿಗಳ ಮೇಲೆ ಹರಡುತ್ತ ಪರಿಣಾಮ ಬೀರುತ್ತಾ ಬರುತ್ತದೆ.

ಹಂತ 4: ಸ್ತನ ಕ್ಯಾನ್ಸರ್ ಹರಡುತ್ತಾ ಹೋದಂತೆ ಯಕೃತ್, ಶ್ವಾಸಕೋಶ ಅಥವಾ ಮಿದುಳಿನ ಮೇಲೆ ಪರಿಣಾಮ ಬೀರುತ್ತದೆ. ಮೂಳೆಗಳಿಗೂ ಹಾನಿಯಾಗುವ ಸಾಧ್ಯತೆಯಿದೆ. ಮಹಿಳೆಯರು ಆರಂಭದಲ್ಲೇ ಸ್ತನ ಕ್ಯಾನ್ಸರ್ ಬಗ್ಗೆ ಪತ್ತೆಹಚ್ಚಬೇಕಾದರೆ ಮ್ಯಾಮೊಗ್ರಫಿ ಪರೀಕ್ಷೆಗೆ ಒಳಪಡುವುದು ಉತ್ತಮ. ಆ ಮೂಲಕ ಸ್ತನ ಕ್ಯಾನ್ಸರ್ ಇದೆಯಾ ಎಂದು ಪತ್ತೆ ಹಚ್ಚಬಹುದಾಗಿದೆ.

ಪ್ರಾರಂಭದಲ್ಲೇ ಪತ್ತೆ ಹಚ್ಚಿ: ಮಹಿಳೆಯರು ‌ತಮ್ಮ‌ ಸ್ತನದ ಬಗ್ಗೆ ಆಗಾಗ್ಗೆ ಗಮನ ಹರಿಸುವುದು ಒಳ್ಳೆಯದು. ಅದರಲ್ಲೂ 45 ವರ್ಷ ಮೇಲ್ಪಟ್ಟ ಮಹಿಳೆಯರು 6 ತಿಂಗಳಿಗೊಮ್ಮೆ ಸ್ತನ ಕ್ಯಾನ್ಸರ್‌ ಪರೀಕ್ಷೆ ಮಾಡಿಸಿಕೊಳ್ಳಿ. ಒಂದು ವೇಳೆ ನಿಮ್ಮ‌ ಸ್ತನದಲ್ಲಿ‌ ಮೊಡವೆಯ ರೀತಿ ಇದ್ದರೆ, ಅದನ್ನು ನಿರ್ಲಕ್ಷಿಸಬೇಡಿ. ಕೂಡಲೇ ವೈದ್ಯರನ್ನು ಭೇಟಿ ಮಾಡಿ ತಪಾಸಣೆಗೆ ಒಳಗಾಗಿ. ಪ್ರಾರಂಭದಲ್ಲಿಯೇ ಈ ಕ್ಯಾನ್ಸರ್‌ ಅನ್ನು ಪತ್ತೆ ಹಚ್ಚುವುದರಿಂದ ಚಿಕಿತ್ಸೆ ಮೂಲಕ ಗುಣಪಡಿಸಬಹುದು.

ಸ್ತನ ಕ್ಯಾನ್ಸರ್‌ಗೆ ಕಾರಣವೇನು?
ಸ್ತನ ಕ್ಯಾನ್ಸರ್‌ಗೆ ನಿಖರ ಕಾರಣವಿಲ್ಲ. ಆದರೆ, ಅನಾರೋಗ್ಯಕರ ಜೀವನ ಶೈಲಿ ಹೊಂದಿದ್ದರೆ, ಮದ್ಯಪಾನ ಸೇವನೆ, ಬೊಜ್ಜು, ಒಬೆಸೀಟಿ, ವ್ಯಾಯಾಮ ಮಾಡದೇ ಇರುವುದು ಸೇರಿದಂತೆ ಇತರೆ‌ ಅಂಶಗಳು ಕ್ಯಾನ್ಸರ್‌ಗೆ ಕಾರಣವಾಗಬಹುದು ಎನ್ನಲಾಗಿದೆ.

ಪುರುಷರಿಗೂ ಸ್ತನ ಕ್ಯಾನ್ಸರ್‌ ಬರಲಿದೆ: ಸ್ತನ ಕ್ಯಾನ್ಸರ್ ಕೇವಲ ಮಹಿಳೆಯರಿಗೆ ಮಾತ್ರ ಬರಬಹುದು ಎಂಬ ನಿಮ್ಮ‌ ಊಹೆ ತಪ್ಪು.‌ ಪುರುಷರಲ್ಲೂ ಈ ಕ್ಯಾನ್ಸರ್‌ ಕಾಣಿಸಿಕೊಂಡಿರುವ ಉದಾಹರಣೆಗಳಿವೆ. ಪುರುಷರಲ್ಲಿ ಸ್ತನ ಕ್ಯಾನ್ಸರ್‌ ಬರಲು ಪ್ರಮುಖ ಕಾರಣ ಅನುವಂಶಿಯವಾಗಿರುತ್ತದೆ‌. ಕುಟುಂಬದಲ್ಲಿ ಈಗಾಗಲೇ ಈ ಕ್ಯಾನ್ಸರ್‌ಗೆ ಒಳಗಾಗಿದ್ದರೆ ಬರಬಹುದು. ಅದೂ ಅತ್ಯಂತ ವಿರಳ ಎನ್ನಲಾಗಿದೆ.

ಜಾಗೃತಿ ಇರಲಿ: ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ್‌ ಬಗ್ಗೆ ಹೆಚ್ಚು ಜಾಗೃತಿ ಉಂಟಾಗಿದೆ. ಮೊದಲೆಲ್ಲಾ ಮಹಿಳೆಯರು ಸ್ತನ ಕ್ಯಾನ್ಸರ್ ‌ಎರಡು ಅಥವಾ ಮೂರನೇ ಹಂತ ತಲುಪಿದ ಮೇಲೆ ಚಿಕಿತ್ಸೆಗೆ ಬರುತ್ತಿದ್ದರು. ಆದರೀಗ, ಪ್ರಾರಂಭದಲ್ಲಿಯೇ ಸ್ತನ ಕ್ಯಾನ್ಸರ್‌ ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಆದರೆ, ಗ್ರಾಮೀಣ ಭಾಗದ ಮಹಿಳೆಯರಿಗೆ ಈ ಬಗ್ಗೆ ಜಾಗೃತಿ ಅಗತ್ಯ. ಕೆಲವರು ಎದೆ ಮೇಲಿನ ಮೊಡವೆಯನ್ನು ನಿರ್ಲಕ್ಷಿಸಿ ಈ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಕ್ಯಾಂಪ್ ನಡೆಸುವ ಮೂಲಕ ಜಾಗೃತಿ ಮೂಡಿಸಬಹುದು.

ಲೇಖಕರು: ಡಾ. ಸಂದೀಪ್ ನಾಯಕ್, ನಿರ್ದೇಶಕರು ಸರ್ಜಿಕಲ್ ಆಂಕೊಲಾಜಿ ವಿಭಾಗ, ಫೋರ್ಟಿಸ್ ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT