ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿ ಹಾಲಿನ ಪ್ರಾಮುಖ್ಯತೆ, ಎದೆ ಹಾಲಿನ ಬ್ಯಾಂಕ್‌ಗಳು...ಇಲ್ಲಿದೆ ಮಾಹಿತಿ

Last Updated 5 ಆಗಸ್ಟ್ 2022, 1:18 IST
ಅಕ್ಷರ ಗಾತ್ರ

ತಾಯಿಯ ಹಾಲನ್ನು ಜೀವಾಮೃತ ಎಂದೇ ಹೇಳಬಹುದು. ತಾಯಿ ಮಗುವನ್ನು ಅಪ್ಪಿ ಹಿಡಿದು ಹಾಲುಣಿಸುವ ಆ ಸಮಯ ಮಗುವಿಗೆ ಬೆಚ್ಚನೆಯ ಭಾವ ನೀಡುತ್ತದೆ. ಇದು, ಮಗುವಿಗೆರಕ್ಷಣಾಭಾವ, ಸಂತೃಪ್ತಿ, ಬಾಂಧವ್ಯಬೆಸುಗೆಯನ್ನು ನೀಡುತ್ತದೆ.

ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ‘ಕಾಂಗರೂ ಪರಿಕಲ್ಪನೆ‘ (Kangaroo concept) ಎಂದು ಕರೆಯಲಾಗುತ್ತದೆ. ತಾಯಿ ಎದೆಹಾಲನ್ನು ಉಣಿಸುವ ಸಮಯದ ಈ ಬಾಂಧವ್ಯ ಮಗುವಿನ ಜೀವನ ಪೂರ್ತಿ ಸಂಬಂಧವನ್ನು ಕಾಪಾಡುವಲ್ಲಿ ಪೂರಕ.

ಮಗುವು ಜನಿಸಿದ ತಕ್ಷಣ ಉತ್ಪತ್ತಿಯಾಗುವ ‘ಕೊಲಸ್ಟ್ರಮ್‌‘ಮಗುವಿಗೆ ಜೀವನ ಪೂರ್ತಿ ಆಂತರಿಕ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಬಲ್ಲ ಪ್ರತಿಕಾಯಗಳನ್ನು ಒದಗಿಸುತ್ತದೆ. ಮಗುವು ಜನಿಸಿದ ಮೊದಲ ಆರು ತಿಂಗಳು ಕೇವಲ ಎದೆ ಹಾಲನಲ್ಲದೇ ಬೇರೆ ಯಾವ ಆಹಾರದ ಅವಶ್ಯಕತೆಯೂ ಸಹ ಮಗುವಿಗಿರುವುದಿಲ್ಲ. ಆದುದರಿಂದ ಇತರೆ ಸೋಂಕಿನಿಂದ ಮಗುವನ್ನು ರಕ್ಷಿಸಿ ಆರೋಗ್ಯಕರವಾಗಿ ಬೆಳೆಯಲು ತಾಯಿಯ ಹಾಲು ಅತ್ಯಂತ ಅವಶ್ಯಕ.

ದುರಾದೃಷ್ಟವಶಾತ್ ಹಲವಾರು ಕಾರಣಗಳಿಂದ ತಾಯಿ ಮಗುವಿಗೆ ಹಾಲುಣಿಸಲು ವಿಫಲವಾಗಬಹುದಾಗಿದೆ. ಅವಧಿಗೆ ಮುನ್ನ ಮಗುವಿನ ಜನನ, ಎದೆಹಾಲು ಉತ್ಪತ್ತಿಯಾಗಲು ವಿಫಲವಾದಾಗ ಅಥವಾ ಮಗುವು ತಾಯಿಯನ್ನು ಕಳೆದುಕೊಂಡಾಗ ಅಥವಾ ತಾಯಿ ಎದೆಹಾಲನ್ನು ಉಣಿಸುವ ಪರಿಸ್ಥಿತಿಯಲ್ಲಿ ಇಲ್ಲದಿರುವ ಸಂದರ್ಭಗಳಲ್ಲಿ ಹುಟ್ಟಿದ ಪರಿಕಲ್ಪನೆಯೇ ‘ತಾಯಿ ಹಾಲಿನ
ಬ್ಯಾಂಕ್‘. ಭಾರತದ ಪ್ರಥಮ ತಾಯಿಯ ಹಾಲಿನ ಬ್ಯಾಂಕ್ 1989 ರಲ್ಲಿ ಸಿಯಾನ್ ಆಸ್ಪತ್ರೆ, ಮುಂಬೈಯಲ್ಲಿ
ಸ್ಥಾಪಿತವಾಯಿತು. ಪ್ರತಿ ವರ್ಷ 3000-5000 ಮಕ್ಕಳು ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ.

ಇಡೀ ಭಾರತ ದೇಶದಲ್ಲಿ ಸುಮಾರು 90 ತಾಯಿಯ ಹಾಲಿನ ಬ್ಯಾಂಕ್‌ಗಳನ್ನು ಕಾಣಬಹುದಾಗಿದೆ. ದಾನಿಗಳಿಂದ ಪಡೆದ ತಾಯಿ ಹಾಲನ್ನು ಸೇವಿಸಿದ ಮಕ್ಕಳಲ್ಲಿ ಸೋಂಕು , ಎಂಟೆರೋಕೋಲೈಟಿನ್, ತೀವ್ರವಾದ ಕಾಯಿಲೆಗಳಾಗುವ ಸಂಭವ ಕಡಿಮೆ ಎಂದು ಅಧ್ಯಯನಗಳು ತಿಳಿಸುತ್ತವೆ.

ಏನಿದು ತಾಯಿಯ ಹಾಲಿನ ಬ್ಯಾಂಕ್‌ಗಳು?

* ದಾನಿಗಳಿಂದ ತಾಯಿಯ ಹಾಲನ್ನು ಸರಿಯಾದ ರೀತಿಯಲ್ಲಿ ಪಡೆದು ಶೇಖರಿಸಲಾಗುತ್ತದೆ. ಹಾಲನ್ನು ಪಡೆಯುವ ಮುನ್ನ ತಾಯಿಯ ಅನುಮತಿಯನ್ನು ಪಡೆಯಬೇಕಾಗುತ್ತದೆ. ಅಲ್ಲದೆ ತಾಯಿಗೆ ಅವಶ್ಯಕವಿರುವ ರಕ್ತ ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ. ಹೆಪಟೈಟಿಸ್ ‘ಬಿ’, ‘ಸಿ’, ಎಚ್‌ಐವಿ, ಎಚ್‌ಟಿಎಲ್‌ವಿ–1, 2,ಸಿಫಿಲಿಸ್ ಮುಂತಾದ ಸೋಂಕುಗಳು ದಾನಿಯಾದ ತಾಯಿಗೆ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ.

*ಸ್ವಯಂ ಪ್ರೇರಿತ ದಾನಿಗಳು, ಮಗುವನ್ನು ಕಳೆದುಕೊಂಡ ತಾಯಂದಿರು, ಕೆಲಸಕ್ಕೆ ಹೋಗುವ ತಾಯಂದಿರು
ಹಾಲನ್ನು ದಾನ ಮಾಡಬಹುದಾಗಿದೆ.

* ಪಡೆದ ತಾಯಿಯ ಹಾಲನ್ನು -20 ಡಿಗ್ರಿ ಸೆಲ್ಸಿಯಸ್‌ನಲ್ಲಿ ಶೇಖರಿಸಿ ಒಂದು ದಿನದ ನಂತರ 3-5 ತಾಯಂದಿರ ಹಾಲನ್ನು
ಒಟ್ಟುಗೂಡಿಸಿ ಪ್ಯಾಷ್ಚರಿಕರಣ ಮಾಡಲಾಗುತ್ತದೆ. ಇದರಿಂದ ಹಾಲಿನ ಪೌಷ್ಠಿಕಾಂಶವನ್ನು ಸಮ ಪ್ರಮಾಣದಲ್ಲಿ ಹಂಚಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅಲ್ಟ್ರಾಸೌಂಡ್ ಹಾಗೂ ತರ್ಮೋ ಅಲ್ಟ್ರಾಸೋನಿಕ್ ಚಿಕಿತ್ಸಾ ವಿಧಾನಗಳನ್ನು ಸಹ ಉಪಯೋಗಿಸಲಾಗುತ್ತದೆ.

ಯಾವ ಮಕ್ಕಳಲ್ಲಿ ಇದು ಉಪಯೋಗವಾಗಬಹುದಾಗಿದೆ?

*ಅವಧಿಗೆ ಮುನ್ನ ಜನಿಸಿದ ಮಕ್ಕಳಲ್ಲಿ 1500gm ಕ್ಕಿಂತ ತೂಕ ಕಡಿಮೆಯಿರುವ ಶಿಶುಗಳಿಗೆ ಇದು ಉಪಯೋಗವಾಗಬಹುದಾಗಿದೆ.

* ನವಜಾತ ಶಿಶುಗಳಲ್ಲಿ ಜೀರ್ಣಾಂಗವ್ಯೂಹದ ನ್ಯೂನತೆಗಳು ಹಾಗೂ ಕಾಯಿಲೆಗಳು ಇದ್ದಲ್ಲಿ
ಉಪಯೋಗವಾಗಬಹುದಾಗಿದೆ.

* ತಾಯಿಯ ಹಾಲು ಉತ್ಪತ್ತಿಯಾಗಲು ನಿಧಾನವಾದಾಗ, ತಾಯಿಯನ್ನು ಮಗುವು ಕಳೆದುಕೊಂಡಾಗ, ತಾಯಿ
ತೀವ್ರತರವಾದ ಕಾಯಿಲೆಗಳಿಂದ ಬಳಲುತ್ತಿದ್ದು ತಾಯಿ ಹಾಲುಣಿಸುವ ಪರಿಸ್ಥಿತಿಯಲ್ಲಿ ಇಲ್ಲದಿರುವಾಗ ಈ ಹಾಲಿನ ಉಪಯೋಗವನ್ನು ಪಡೆಯಬಹುದಾಗಿದೆ.

ತಾಯಿಯ ಹಾಲಿನ ಬ್ಯಾಂಕ್ ಗಳ ಪ್ರಾಮುಖ್ಯತೆಗಳು...

* ಮಗುವಿನ ಬೆಳವಣಿಗೆಗೆ ಪೂರಕವಾದ ಸಮತೋಲನವಾದ ಪೌಷ್ಟಿಕಾಂಶವನ್ನು ತಾಯಿಯ ಹಾಲು ಹೊಂದಿರುವುದರಿಂದ ಮಗುವಿಗೆ ಆರು ತಿಂಗಳ ತನಕ ಕೇವಲ ತಾಯಿಯ ಹಾಲನ್ನಷ್ಟೇ ನೀಡಬಹುದಾಗಿದೆ.ಆರು ತಿಂಗಳ ನಂತರ ಇತರೆ ಪೂರಕ ಆಹಾರವನ್ನು ನೀಡಬಹುದಾಗಿದೆ.

* ತಾಯಿಯ ಹಾಲಿನಲ್ಲಿ ಅನೇಕ ಸಂರಕ್ಷಕ ಅoಶಗಳಿದ್ದು ಮಗುವನ್ನು ಸೋಂಕಿನಿಂದ ರಕ್ಷಿಸಬಹುದಾಗಿದೆ.

*ತಾಯಿಯ ಹಾಲಿನ ಸೇವನೆಯಿಂದ ಮಗುವು ಅಧಿಕ ತೂಕ ಸಮಸ್ಯೆ, ಮಧುಮೇಹ ,ಅಲರ್ಜಿಗಳು, ರಕ್ತದಲ್ಲಿ ಅಧಿಕ ಕೊಲೆಸ್ಟರಾಲ್ ಅಂಶ ಮುಂತಾದ ಸಮಸ್ಯೆಗಳಿಗಲಿಂದ ದೂರ ಉಳಿಯಬಹುದಾಗಿದೆ.

* ತಾಯಿಯ ಹಾಲನ್ನು ಪೂರ್ವಾವಧಿಯಾಗಿ ಜನಿಸಿದ ಮಕ್ಕಳಿಗೆ ನೀಡಿದಲ್ಲಿ ಸುಲಭವಾಗಿ ಜೀರ್ಣವಾಗುವ ಪುಡಿ ಹಾಲು ಅಥವಾ ಇನ್ಫ್ಯಾಂಟ್ ಫಾರ್ಮುಲಾ ಗಳಿಗಿಂತ ಆರೋಗ್ಯಕರ ಎನ್ನಬಹುದಾಗಿದೆ.

* ಅವಧಿಗೆ ಮುನ್ನವೇ ಮಗುವು ಜನಿಸಿದಾಗ ತಾಯಿಯ ಎದೆ ಹಾಲನ್ನು ಹೊರತೆಗೆಯುವುದರಿಂದ ಅಥವಾ ಪಂಪ್ ಮಾಡುವುದರಿಂದ ತಾಯಿಗೆ ಇನ್ನೂ ಹೆಚ್ಚಿನ ಹಾಲಿನ ಉತ್ಪತ್ತಿಗೆ ಸಹಾಯಕ.

* ತಾಯಿಯ ಹಾಲು ಅಥವಾ ಹಾಲಿನ ಬ್ಯಾಂಕ್ ಗಳಿಂದ ಪಡೆದ ಹಾಲನ್ನು ಸೇವಿಸಿದ ಮಕ್ಕಳಲ್ಲಿ ಸೋಂಕಿನ ಪ್ರಮಾಣ, ಮಾರಣಾಂತಿಕ ಸಮಸ್ಯೆಗಳು, ಜೀರ್ಣಾಂಗ ಸಮಸ್ಯೆಗಳು ಕಡಿಮೆ ಎನ್ನಬಹುದಾಗಿದೆ.

* ತಾಯಿಯ ಹಾಲನ್ನು ದಾನ ಮಾಡುವುದರಿಂದ ತಾಯಂದಿರು ಅಧಿಕ ತೂಕ, ಕ್ಯಾನ್ಸರ್ ಮುಂತಾದ
ಸಮಸ್ಯೆಗಳಿಂದ ದೂರ ಉಳಿಯಬಹುದಾಗಿದೆ.

ತಾಯಿಯ ಹಾಲು ಮಗುವಿಗೆ ಅತ್ಯಂತ ಶ್ರೇಷ್ಠವಾದ ಆಹಾರ. ಹಲವಾರು ಪರಿಸ್ಥಿತಿಗಳಲ್ಲಿ ತಾಯಿಯು ನೇರವಾಗಿ ಹಾಲುಣಿಸಲು ಸಾಧ್ಯವಾಗದಿದ್ದಾಗ ದಾನಿಗಳ ತಾಯಿಯ ಹಾಲನ್ನು ಬ್ಯಾಂಕ್ ಗಳಿಂದ ಪಡೆದು ಮಗುವಿಗೆ ನೀಡಬಹುದಾಗಿದ್ದು ಕೃತಕ ಹಾಲಿನ ಪುಡಿಗಳು ಅಥವಾ ಇನ್‌ಫೆಂಟ್ ಫಾರ್ಮುಲಾಗಳಿಗಿಂತ ಉತ್ತಮ ಪೌಷ್ಠಿಕಾಂಶವನ್ನು ಮಗುವಿಗೆ ನೀಡಬಹುದಾಗಿದೆ.

(ಲೇಖಕರು: –ಡಾ. ಸ್ಮಿತಾ ಜೆ. ಡಿ, ಓರಲ್ ಮೆಡಿಸಿನ್ ಅಂಡ್ ರೇಡಿಯೋಲಾಜಿ ತಜ್ಞರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT