ಸೋಮವಾರ, ಮಾರ್ಚ್ 27, 2023
21 °C

PV Web Exclusive | ವೃದ್ಧಿಸಿಕೊಳ್ಳಿ ಮನೋಬಲ, ರೋಗನಿರೋಧಕ ಶಕ್ತಿ

ಕೃಷ್ಣಿ ಶಿರೂರ Updated:

ಅಕ್ಷರ ಗಾತ್ರ : | |

ಧ್ಯಾನಸ್ಥ ಭಂಗಿ

ಕೋವಿಡ್‌ ಅಂಕಿ–ಅಂಶ ದಿನದಿಂದ ದಿನಕ್ಕೆ ಏರುತ್ತಲೇ ಸಾಗಿದೆ. ಕೊರೊನಾ ಸಂಕಟ ಕಾಲ ಸದ್ಯಕ್ಕೆ ಮುಗಿಯುವ ಹಾಗೇ ಕಾಣದು. ಆದರೆ ಆರಂಭದಲ್ಲಿದ್ದ ಭೀತಿ ತಿಳಿಯಾಗಿದ್ದು ಕೊಂಚ ಸಮಾಧಾನದ ಸಂಗತಿ. ಆದರೂ ಕೊರೊನಾ ಸೋಂಕಿನ ಪರಿಣಾಮಗಿಂತಲೂ ಅದರ ಭಯಕ್ಕೆ ಬಿದ್ದು, ಮಾನಸಿಕವಾಗಿ ಕುಗ್ಗಿ ಸಾಯುವವರ ಸಂಖ್ಯೆ ಹೆಚ್ಚುತ್ತಿದೆಯೇನೋ ಎಂದೆನಿಸುತ್ತಿದೆ. ಇಷ್ಟುದಿನ ಮನೆಯಲ್ಲೇ ಕಚೇರಿ ನಿರ್ವಹಿಸುತ್ತಿರುವವರು ಹೊರಳಿ ಕಚೇರಿಯಿಂದಲೇ ತಮ್ಮ ಕೆಲಸ ನಿರ್ವಹಣೆ ಆರಂಭವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಜೊತೆಗೇ ನಮ್ಮ ಜೀವನ ಸಾಗಿಸುವುದು ಅನಿವಾರ್ಯವಾಗಿದೆ. ಇದಕ್ಕಾಗಿ ನಾವು ಮಾನಸಿಕವಾಗಿ, ಆಂತರಿಕವಾಗಿ ಗಟ್ಟಿಯಾಗಬೇಕಿದೆ.

ಅಂದರೆ ನಮ್ಮೊಳಗಿನ ಮನೋಬಲ, ರೋಗ ನಿರೋಧಕಶಕ್ತಿಯನ್ನು ವೃದ್ಧಿಸಿಕೊಳ್ಳಬೇಕಿದೆ. ಮನೋಬಲ ಮಾರುಕಟ್ಟೆಯಲ್ಲಿ ಸಿಗುವ ವಸ್ತುವಲ್ಲ. ಅದು ನಮ್ಮೊಳಗೇ ಇರುವಂಥದ್ದು. ಮನೋಬಲ/ಆತ್ಮವಿಶ್ವಾಸವನ್ನು ಅಕ್ಷಯವಾಗಿಸಿಕೊಳ್ಳೊದು ಅಷ್ಟು ಕಷ್ಟವೂ ಅಲ್ಲ; ಅಷ್ಟು ಸುಲಭವೂ ಅಲ್ಲ; ಕಷ್ಟ ಎಂದು ಕೊಂಡರೆ ಕಷ್ಟ. ಮಾಡಿಯೇ ತೀರುವೆ ಎಂದುಕೊಂಡರೆ ಸುಲಭ. ನಮ್ಮೊಳಗಿನ ಆತ್ಮಬಲವನ್ನು ನಾವೇ ವೃದ್ಧಿಸಿಕೊಳ್ಳಬೇಕಿದೆ. ಅದಕ್ಕಾಗಿ ನಮ್ಮ ಮನಸ್ಸನ್ನು ಸಿದ್ಧಗೊಳಿಸಬೇಕು. ಇದುವೇ ಮೊದಲ ಮೆಟ್ಟಿಲು.

ನಮ್ಮೆಲ್ಲರಲ್ಲೂ ಆತ್ಮಬಲ ಇದ್ದೇ ಇದೆ. ಆದರೆ ಅದು ನಮ್ಮೊಳಗಿನ ಭಯ, ಮಾನಸಿಕ ಕ್ಷೋಭೆ, ಆತಂಕ, ದುಗುಡ, ಕ್ರೋಧ, ಮತ್ಸರ ಎಂಬ ಭಾವನೆಗಳಿಂದ ಕುಗ್ಗಿ ಹೋಗಿದೆ. ಇಂಥ ಮನಃಸ್ಥಿತಿಯನ್ನು ಹೀಗೆ ಬಿಟ್ಟಲ್ಲಿ ಅವು ಹೆಮ್ಮರವಾಗಿ ನಮ್ಮನ್ನು ಖಿನ್ನತೆಗೆ ದೂಡಲಿದೆ. ಅದೇ ನಮ್ಮ ಮನೋಬಲವನ್ನು ವೃದ್ಧಿಸಿಕೊಂಡಲ್ಲಿ ಆತ್ಮವಿಶ್ವಾಸ ವೃದ್ಧಿಸಲಿದೆ. ಇದಕ್ಕೆ ಒಂದಷ್ಟು ಮಾರ್ಗಗಳಿವೆ. ಅವುಗಳನ್ನು ತಪಸ್ಸಿನಂತೆ ಅನುಸರಿಸಿದರೆ ಆತ್ಮವಿಶ್ವಾಸ ವೃದ್ಧಿಯಾಗುವುದು ನಿಶ್ಚಿತ.

ಮೊದಲು ಮನಸ್ಸನ್ನು ಬಯಕೆಗಳಿಂದ ಮುಕ್ತಗೊಳಿಸಿ. ಮನಸ್ಸನ್ನು ಸಮಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವುದು ಮುಖ್ಯ. ಹೇಗೆಂದರೆ ಖುಷಿಯನ್ನು ಅತಿಯಾಗಿ ಸಂಭ್ರಮಿಸದೆ, ಸಂಕಷ್ಟವನ್ನು ಅತಿಯಾಗಿ ದುಃಖಿಸದೆ ಮನಸ್ಸನ್ನು ನಿಗ್ರಹಿಸಿಕೊಳ್ಳಬೇಕು. ಈಗಿನ ಕಾಲದಲ್ಲಿ ಹೆಚ್ಚಿನವರದ್ದು ಒತ್ತಡದ ಬದುಕು. ಅದನ್ನು ಒತ್ತಡ ರಹಿತವಾಗಿಸಿಕೊಂಡಲ್ಲಿ ನೆಮ್ಮದಿ ನಮ್ಮದಾಗಲಿದೆ. ಮನಸ್ಸು ಸಮಸ್ಥಿತಿಯಲ್ಲಿದ್ದಲ್ಲಿ ಸಮಾಧಾನ ತಾನಾಗಿಯೇ ಸಿಗಲಿದೆ. ಅದೇ ಸಮಾಧಾನ ನಮ್ಮ ಒತ್ತಡವನ್ನು ದೂರಗೊಳಿಸಲಿದೆ. ಇದಕ್ಕಾಗಿ ನಿತ್ಯ ಒಂದಷ್ಟು ಸಮಯವನ್ನು ಮೀಸಲಿಡುವುದು ಅಗತ್ಯ. ಯೋಗ, ಧ್ಯಾನ, ಪ್ರಾಣಾಯಾಮ, ಮುದ್ರೆಗಳು ಮನಸ್ಸನ್ನು ಶಾಂತಗೊಳಿಸಬಲ್ಲ ಸಾಧನಗಳು.

ಹೆಚ್ಚಿಗೆ ಅಲ್ಲದಿದ್ದರೂ 10 ನಿಮಿಷಗಳ ಕಾಲ ಕಣ್ಮುಚ್ಚಿ, ದೀರ್ಘ ಉಸಿರಾಟದೊಂದಿಗೆ ಸುಖಾಸನದಲ್ಲಿ ಬೆನ್ನನ್ನು ನೇರವಾಗಿಸಿ ಕುಳಿತುಕೊಳ್ಳಿ. ಈ ಸಮಯದಲ್ಲಿ ನೂರಾರು ಆಲೋಚನೆಗಳು ಸುಳಿಯುವುದು ಸಾಮಾನ್ಯ. ಅವು ಬರಲಿ ಬಿಡಿ. ಅವು ಹೇಗೆ ಬಂದವೋ ಅಷ್ಟೇ ವೇಗವಾಗಿ ಹೋಗಿ ಬಿಡಲಿ. ಒಂದೈದು ನಿಮಿಷ ಈ ಪ್ರಕ್ರಿಯೆ ಮುಂದುವರಿಯಬಹುದು. ನಂತರ ನಿಮ್ಮ ಅರಿವಿಗೆ ಬಾರದ ರೀತಿಯಲ್ಲಿ ನಿಮ್ಮ ಮನಸ್ಸು ಪ್ರಶಾಂತತೆಯಲ್ಲಿ ತೇಲಾಡಿದ್ದು ನಿಮ್ಮ ಅನುಭವಕ್ಕೆ ಬರಲಿದೆ. ಪ್ರಾಣಾಯಾಮದಲ್ಲಿನ ಉಸಿರಾಟ ಪ್ರಕ್ರಿಯೆ ಕೂಡ ಮನಸ್ಸನ್ನು ಹದಗೊಳಿಸಲಿದೆ. ಯೋಗಾಸನಗಳು ಕೂಡ ದೇಹ, ಮನಸ್ಸನ್ನು ಸತ್ವಗೊಳಿಸಲಿದೆ. ಮುದ್ರೆಗಳೂ ಮನಸ್ಸನ್ನು ಉಲ್ಲಸಿತಗೊಳಿಸಲಿದೆ. ಬೆಳಗಿನ ನಡಿಗೆ ಕೂಡ ನಿಮ್ಮ ಒತ್ತಡವನ್ನು ದೂರಗೊಳಿಸಲಿದೆ. ಇಷ್ಟೆಲ್ಲ ಆಯುಧಗಳು ನಮ್ಮೊಳಗೆ ಇರಲು ನಾವ್ಯಾಕೆ ಯೋಚಿಸಬೇಕು. ಈ ಎಲ್ಲ ಆಯುಧಗಳನ್ನು ಸಮರ್ಥವಾಗಿ ಬಳಸಲು ಮನದಲ್ಲೊಂದಿಷ್ಟು ಜಾಗಕೊಡಿ. ಒಂದಷ್ಟು ಸಮಯ ಮೀಸಲಿಡಿ.

ಒಂದೆರಡು ವಾರ ಕಳೆಯುತ್ತಲೇ ಊಟ, ನಿದ್ದೆಯಂತೆ ಯೋಗ, ಧ್ಯಾನ, ಪ್ರಾಣಾಯಾಮ ಕೂಡ ನಮ್ಮ ಜೀವನದ ಭಾಗವಾಗುತ್ತಿದೆ ಎಂದು ನಿಮಗನ್ನಿಸಿದಾಗ ನೀವು ಈ ಟಾಸ್ಕ್‌ನಲ್ಲಿ ಗೆದ್ದಂತೆ. ಭಯ, ಆತಂಕ, ದುಗುಡ, ಖಿನ್ನತೆ ಈ ಎಲ್ಲವು ನಿಮ್ಮಿಂದಲೇ ದೂರವಾಗಲಿದೆ. ದಿನಕಳೆದಂತೆ ನಿಮ್ಮೊಳಗಿನ ಆತ್ಮವಿಶ್ವಾಸ ಅಕ್ಷಯವಾಗಿದ್ದು ನಿಮ್ಮ ಗಮನಕ್ಕೇ ಬರಲಿದೆ. ಅಷ್ಟೇ ಅಲ್ಲ; ನೀವಿರುವ ಪರಿಸರದಲ್ಲೂ ಅದರ ಪರಿಣಾಮ ಕಂಡುಬರಲಿದೆ.

ಇವಿಷ್ಟು ಮನಸ್ಸಿಗೆ ಸಂಬಂಧಿಸಿದ್ದಾದರೆ ಎರಡನೆಯದ್ದೇ ನಮ್ಮೊಳಗಿನ ರೋಗ ನಿರೋಧಕ ಶಕ್ತಿಯನ್ನು ಅಕ್ಷಯವಾಗಿಸಿಕೊಳ್ಳುವುದು. ಕೊರೊನಾದಂಥ ವೈರಾಣುಗಳಿಂದ ದೂರವಿರಬೇಕೆಂದರೆ ನಾನು ನಮ್ಮೊಳಗಿನ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಲೇಬೇಕು.

ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಿದ್ದಲ್ಲಿ ಅಂಥವರಲ್ಲಿ ಸಾಂಕ್ರಾಮಿಕ ರೋಗಗಳು ಬಹುಬೇಗ ತಮ್ಮ ವಾಸ್ತವ್ಯವನ್ನು ಗಟ್ಟಿಮಾಡುತ್ತವೆ. ಕೋವಿಡ್ 19 ನಂತಹ ಕಾಯಿಲೆಗಳು ವ್ಯಾಪಿಸುವಲ್ಲಿ ರೋಗನಿರೋಧಕ ಶಕ್ತಿಯ ಕೊರತೆಯೂ ಪಾತ್ರ ವಹಿಸುತ್ತಿವೆ. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಿಗೆ ಕೊರೊನಾದಂಥ ವೈರಾಣು ಸೋಕಿದಲ್ಲಿ ಸುಲಭವಾಗಿ ಆ ಕಾಯಿಲೆಗೆ ತುತ್ತಾಗುತ್ತಾರೆ. ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದಲ್ಲಿ ಸಾಂಕ್ರಾಮಿಕ ರೋಗ ತಗುಲಿದರೂ ಅದನ್ನು ಹಿಮ್ಮೆಟ್ಟಿಸಬಹುದು.

ನಾವು ತಿನ್ನುವ ಹಣ್ಣು, ತರಕಾರಿ, ಆಹಾರದಲ್ಲಿ ಸೂಕ್ತ ಆಯ್ಕೆ ಮಾಡಿಕೊಂಡಲ್ಲಿ ರೋಗ ನಿರೋಧಕ ಶಕ್ತಿ ನಮ್ಮೊಳಗೆ ತಾನಾಗಿಯೇ ವೃದ್ಧಿಸಲಿದೆ.

ನಿಮ್ಮ ದಿನದ ಆರಂಭ ಬಿಸಿನೀರಿನ ಜೊತೆ ನಿಂಬೆ ರಸದಿಂದಲೇ ಶುರುವಾಗಲಿ. ಗ್ರೀನ್ ಟೀ/ ಬ್ಲ್ಯಾಕ್‌ ಟೀಗಳಲ್ಲಿ ರೋಗ ನಿರೋಧಕ ಶಕ್ತಿ ಇಮ್ಮಡಿಗೊಳಿಸುವ ಸಾಮರ್ಥ್ಯವಿದೆ. ಈ ಎರಡೂ ಪಾನೀಯಗಳ ಸೇವನೆ ಮೈಮನವನ್ನು ಪ್ರಪುಲ್ಲಗೊಳಿಸಲಿವೆ. ಹಣ್ಣುಗಳನ್ನು ತರುವಾಗ ಸಿಟ್ರಸ್ /ವಿಟಾಮಿನ್ ಸಿ ಅಂಶವಿರುವ ಹಣ್ಣುಗಳನ್ನೇ ಆಯ್ಕೆ ಮಾಡಿಕೊಳ್ಳಿ. ಮೊಸಂಬಿ, ಕಿತ್ತಳೆ, ಲಿಂಬು, ಲೈಮ್‌ಗಳಲ್ಲಿ ಸಿಟ್ರಸ್ ಅಂಶ ಹೆಚ್ಚಿರಲಿದೆ. 

ತರಕಾರಿಗಳಲ್ಲಿ ಸೊಪ್ಪು, ಅದರಲ್ಲೂ ಪಾಲಕನಂತ ಸೊಪ್ಪು ಪೋಷಕಾಂಶಗಳ ಆಗರವೇ ಎನಿಸಿದೆ.  ದೊಣ್ಣ ಮೆಣಸಿನಕಾಯಿ, ಬ್ರೊಕೊಲಿಗಳಲ್ಲಿ ಹೆಚ್ಚು ರೋಗ ನಿರೋಧಕ ಶಕ್ತಿಯಿರಲಿದೆ. ಅರಿಸಿನ, ಶುಂಠಿ, ಬೆಳ್ಳುಳ್ಳಿ ಕೂಡ ಅಡುಗೆಯಲ್ಲಿ ಇರಲೇಬೇಕು. ಇವುಗಳಲ್ಲಿ ಆ್ಯಂಟಿಆಕ್ಸಿಡೆಂಟ್ ಹೆಚ್ಚಿರಲಿದೆ. ಸೋಂಕುಗಳ ವಿರುದ್ಧ ಹೋರಾಡಲು ಬೆಳ್ಳುಳ್ಳಿ ಪಾತ್ರ ದೊಡ್ಡದು.

ಡ್ರೈಫ್ರುಟ್ಸ್‌ಗಳಲ್ಲಿ ಬಾದಾಮಿ, ಅಕ್ರೂಟ್ ಉತ್ತಮ ಆರೋಗ್ಯ ವರ್ಧಕಗಳಾಗಿವೆ. ರೋಗಗಳ ವಿರುದ್ಧ ಹೋರಾಡುವಲ್ಲಿ ಮೊಸರು ಕೂಡ ಮಹತ್ವದ ಪಾತ್ರ ವಹಿಸಲಿದೆ. 

ಮಾಂಸಾಹಾರಿಗಳಾಗಿದ್ದವರು ಚಿಕನ್‌, ಮೀನು ಮತ್ತು ಶೆಲ್ ಫಿಶ್‌ಗಳನ್ನು ಬಳಸಬಹುದು. ಏಡಿ (ಕ್ರ್ಯಾಬ್), ಚಿಪ್ಪಿಕಲ್ಲು (ಕ್ಲಾಮ್ಸ್), ನೀಲಿಕಲ್ಲಿನಂಥ ಸಮುದ್ರ ಆಹಾರಗಳನ್ನು ಬಳಸಬಹುದು.

ಅಡುಗೆಗೆ ಬಳಸುವ ಎಣ್ಣೆಗಳು ಆದಷ್ಟು ಗಾಣದ ಎಣ್ಣೆಗಳಾಗಿದ್ದಲ್ಲಿ ಆರೋಗ್ಯಕ್ಕೆ ಉತ್ತಮ. ಕರಿಬೇವು ಕೂಡ ಅಡುಗೆಯಲ್ಲಿ ಧಾರಾಳವಾಗಿರಲಿ. ಅಗಸೆ ಬೀಜ ಕೂಡ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲಿದೆ.

ಇಷ್ಟೆಲ್ಲ ಅನುಸರಿಸಿ ಮಾನಸಿಕವಾಗಿ, ಆಂತರಿಕವಾಗಿ ಸದೃಢಗೊಂಡಲ್ಲಿ ನಾವು ಕೊರೊನಾ ಸೋಂಕಿನ ಹತ್ತಿರ ಸುಳಿದರೂ ಅದು ನಮ್ಮನ್ನು ಏನೂ ಮಾಡಲಾಗದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು