ಪ್ರೀತಿ ಹುಟ್ಟಿದಾಗಲೇ ಜಗಳವೂ ಹುಟ್ಟಿತೇನೋ? ಪ್ರೀತಿ ಶುರುವಾದಾಗ ‘ನಾವು ಒಬ್ಬರನ್ನೊಬ್ಬರು ಅಷ್ಟು ಪ್ರೀತಿಸುತ್ತೇವೆ; ಅದು ಹೇಗೆ ನಾವು ಜಗಳವಾಡಲು ಸಾಧ್ಯ’ ಎಂದೂ, ಭಿನ್ನಾಭಿಪ್ರಾಯಗಳು ಜಾಸ್ತಿಯಾದಾಗ ‘ಇಷ್ಟೊಂದು ವೈಮನಸ್ಯವಿರುವ ನಾವು ಹೇಗೆ ಒಬ್ಬರನ್ನೊಬ್ಬರು ಪ್ರೀತಿಸಲು ಸಾಧ್ಯ’ ಎಂದೂ ಅನಿಸುತ್ತಿರುತ್ತದೆ. ಆಳವಾದ ಪ್ರೀತಿ ಮತ್ತು ಯಾವುದೇ ದುರುದ್ದೇಶಗಳಿರದ ಶುದ್ಧ ಅಂತಃಕರಣದಿಂದಲೇ ಪ್ರಕಟಗೊಳ್ಳುವ ಜಗಳ ಎರಡೂ ನಮಗೆ ತಿಳಿಯದಂತೆ ಒಂದು ಬಗೆಯ ಸಂವಾದ ಮಾಡುತ್ತಿರುತ್ತವೇನೋ?

ಪ್ರೀತಿ ಆಳವಾದಷ್ಟು ಜಗಳಗಳೂ ಜಾಸ್ತಿಯಾಗುವುದು, ಜಗಳ ಜಾಸ್ತಿಯಾದಷ್ಟು ಪ್ರೀತಿ ಉತ್ಕಟವಾಗುತ್ತಾ ಹೋಗುವುದು – ಒಮ್ಮೆಯಾದರೂ ಎಲ್ಲರ ಅನುಭವಕ್ಕೆ ಬಂದಿರುತ್ತದೆ. ಸ್ನೇಹ-ಪ್ರೇಮಸಂಬಂಧಗಳಲ್ಲಿ, ದಾಂಪತ್ಯದಲ್ಲಿ ಉಂಟಾಗುವ ಜಗಳಕ್ಕೇನೋ ಹೆದರುತ್ತೇವೆ ನಿಜ. ಆದರೆ ಉತ್ಕಟಗೊಳ್ಳುತ್ತಾ ಹೋಗುವ ಪ್ರೀತಿಗೂ ಹೆದರುತ್ತೇವಾ?

ಹೌದು, ಪ್ರೀತಿಗೂ ಪ್ರೀತಿಯ ಅಭಿವ್ಯಕ್ತಿಗೂ ನಾವು ಹೆದರುವುದು ಸುಳ್ಳಲ್ಲ. ಹಾಗಿಲ್ಲದಿದ್ದರೆ ಅದೆಷ್ಟೋ ಜನರಿಗೆ ‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದು ಹೇಳಲು ಅಥವಾ ಹೇಳಿಸಿಕೊಳ್ಳಲು ಅಷ್ಟೊಂದು ಭಯವಾಗುವುದಾದರೂ ಏಕೆ?

ಯಾರಾದರೂ ನಮ್ಮನ್ನು ತುಂಬಾ ಹಚ್ಚಿಕೊಳ್ಳತೊಡಗಿದರೆ ಅಥವಾ ನಾವೇ ಇನ್ನೊಬ್ಬರಿಗೆ ಆತ್ಮೀಯವಾಗಲು ಹಂಬಲಿಸುವಾಗ ‘ಇಷ್ಟೊಂದು ಅಟ್ಯಾಚ್ಮೆಂಟ್ ಬೇಕಾ?’ ಎಂದು ಒಂದು ಕ್ಷಣ ಚಿಂತಿತರಾಗುತ್ತೇವೆ. ಏಕೆಂದರೆ ನಮ್ಮ ಒಳಮನಸ್ಸಿಗೆ ಗೊತ್ತು, ಪ್ರೀತಿ ಇಂದೋ ನಾಳೆಯೋ ನೋವನ್ನು ಕೊಟ್ಟೇಕೊಡುತ್ತದೆಂದು!

ನಮ್ಮ ಸುಖ-ಸಂತೋಷ ನಾವು ಪ್ರೀತಿಸುವವರ ಮೇಲೆ ಅವಲಂಬಿತವಾಗಿರುವಾಗ ನಾವು ಹೇಗೆ ಸ್ವತಂತ್ರರು? ನಾವು ಪ್ರೀತಿಸುವವರು ನಮ್ಮ ಪ್ರೀತಿಯನ್ನು ತಿರಸ್ಕರಿಸಬಹುದು, ಕಾರಣಾಂತರಗಳಿಂದ ನಾವಿಬ್ಬರೂ ದೂರವಾಗಬಹುದು, ನಮ್ಮ ನಡುವೆ ಕೆಡವಲಾರದ ಗೋಡೆಯೊಂದು ಏಳಬಹುದು, ಕಾಲಕ್ರಮೇಣ ಪ್ರೀತಿ ಮಾಸಿಹೋಗಿ ಕರ್ತವ್ಯವಷ್ಟೇ ಉಳಿಯಬಹುದು; ಇವೆಲ್ಲಾ ಏನೂ ಆಗದಿದ್ದರೂ ಕಡೆಗೆ ಸಾವು ಎನ್ನುವುದಂತೂ ಇದ್ದೇ ಇದೆಯಲ್ಲ, ಪ್ರೀತಿಸುವ ಎರಡು ಜೀವಗಳನ್ನು ದೂರ ಮಾಡಲು?

ಪ್ರೀತಿಗೆ ಹೆದರಲು ಇವಿಷ್ಟೇ ಕಾರಣಗಳಾಗಿದ್ದರೆ ಹೇಗೋ ಸುಧಾರಿಸಬಹುದಿತ್ತು, ಇದಕ್ಕಿಂತಲೂ ತೀಕ್ಷ್ಣವಾದ ನೋವೊಂದಿದೆ. ನಾವು ಇನ್ನೊಂದು ವ್ಯಕ್ತಿಯನ್ನು ಆಳವಾಗಿ ಪ್ರೀತಿಸುತ್ತಾ ನಮ್ಮನ್ನೇ ನಾವು ಕಳೆದುಕೊಳ್ಳುವ ಸಾಧ್ಯತೆಯಿದೆ. ತುಂಬಾ ಪ್ರೀತಿಸುವ ಸಂಬಂಧವನ್ನು ನಿರ್ವಹಿಸುವುದು ಸುಲಭವಲ್ಲ. ಯಾರಿಗೂ ಸಿಗದ, ನನ್ನ ನಿರೀಕ್ಷೆಗೂ ಮೀರಿದ ಪ್ರೀತಿ ನನಗೆ ಸಿಕ್ಕಿದಾಗ ‘ನಾನು ಇದಕ್ಕೆಲ್ಲಾ ಅರ್ಹಳೇ?’ ಎನ್ನುವ ಪ್ರಶ್ನೆ ಒಂದು ಕಡೆಯಾದರೆ, ಇಂಥ ಅಪರೂಪದ ಬೆಲೆಕಟ್ಟಲಾಗದ ಪ್ರೀತಿಯನ್ನು ನಾನು ಹೇಗೋ ಕಳೆದುಕೊಂಡುಬಿಟ್ಟರೆ?’ ಎಂಬ ಆತಂಕ ಇನ್ನೊಂದು ಕಡೆ.

ನನ್ನ ಇಡೀ ಜೀವನ, ಜೀವನದ ಅರ್ಥ, ಆನಂದ, ಸಾರ್ಥಕತೆ – ಎಲ್ಲವೂ ನನ್ನನ್ನು ಪ್ರೀತಿಸುವ ವ್ಯಕ್ತಿಯ ಮೇಲೆ ಅವಲಂಬಿತವಾಗಿದ್ದರೆ ನನ್ನನ್ನು ಅದೆಷ್ಟು ಕಳವಳಗೊಳಿಸಬಹುದಲ್ಲವೇ?

ನಾವು ಆಳವಾಗಿ ಪ್ರೀತಿಸಲು ತೊಡಗಿದಾಗ, ಅಷ್ಟೊಂದು ಪ್ರೀತಿಸುವವರು ನಮಗೆ ದೊರೆತಾಗ ನಮ್ಮ ಜೀವನದಲ್ಲಿ ನಮ್ಮನ್ನು ಪ್ರೀತಿಸುವವರಿಗಿರುವ ಪ್ರಾಮುಖ್ಯಕ್ಕಿಂತ ನಮ್ಮ ಜೀವನದಲ್ಲಿ ನಮಗಿರುವ ಪ್ರಾಮುಖ್ಯ ಹೆಚ್ಚಿರಬೇಕು; ಪ್ರೀತಿಯಲ್ಲಿ ನನ್ನನ್ನೇ ನಾನು ಕಳೆದುಕೊಳ್ಳಬಾರದು, ಪ್ರೀತಿಯನ್ನು ಕಳೆದುಕೊಂಡರೂ ನನ್ನನ್ನು ನಾನೇ ಕಳೆದುಕೊಳ್ಳದಷ್ಟು ಬೆಳೆಯಬೇಕು ಎನ್ನುವ ಅರಿವಿರಬೇಕು. ಅಂದರೆ ನಮ್ಮನ್ನು ಪ್ರೀತಿಸುವವರಿಗಿಂತಲೂ ಮಿಗಿಲಾದುದನ್ನು ನಮ್ಮೊಳಗೇ ನಾವೇ ಕಂಡುಕೊಳ್ಳಬೇಕಾಗುತ್ತದೆ; ಇದರ ಅರ್ಥ ನಾವು ಆಂತರಿಕವಾಗಿ ವಿಸ್ತಾರಗೊಳ್ಳುತ್ತಾ, ಆಧ್ಯಾತ್ಮಿಕವಾಗಿ ವಿಕಾಸಹೊಂದುತ್ತಾ, ನಮ್ಮ ಸ್ವ-ಮೌಲ್ಯವನ್ನು ಒಂದು ಉನ್ನತ ಮಟ್ಟದಲ್ಲಿ ಸಾಕ್ಷಾತ್ಕರಿಸಿಕೊಳ್ಳುವುದು ಎಂದು.

ಶುದ್ಧ, ಸುಂದರ, ಪರಿಪೂರ್ಣ ಪ್ರೀತಿ ಮನುಷ್ಯನಿಗೆ ಬಲು ಕಷ್ಟ; ಇದ್ದಾಗ ಕಳೆದುಕೊಳ್ಳುವ ಆತಂಕ, ಕಳೆದುಕೊಂಡಾಗ ಕಡುದುಃಖ; ಆ ಆತಂಕದಿಂದಲೂ ಈ ದುಃಖದಿಂದಲೂ ಪಾರಾಗಬೇಕಾದರೆ ಆತ್ಮೋನ್ನತಿಯನ್ನು, ಭಾವನಾತ್ಮಕ ಪ್ರೌಢಿಮೆಯನ್ನು ಮೈಗೂಡಿಸಿಕೊಳ್ಳುವ ಕಷ್ಟದ ಹಾದಿಯನ್ನು ಸವೆಸಬೇಕು. ಅಂದರೆ ಪಕ್ವ ಪ್ರೀತಿ ಪ್ರೀತಿಸುತ್ತಿರುವ ಇಬ್ಬರನ್ನೂ ಭಾವನಾತ್ಮಕ, ಆಧ್ಯಾತ್ಮಿಕ ಬೆಳವಣಿಗೆಗೆ ಪ್ರೇರೇಪಿಸುತ್ತಿರುತ್ತದೆ. ಯಾವಾಗ ಅಂತಹ ಬೆಳವಣಿಗೆ ಸಾಧ್ಯವಾಗದೇ ಇಬ್ಬರೂ ನಿಂತಲ್ಲೇ ನಿಂತಿರುತ್ತಾರೋ ಆಗ ಒಂದು ಬಗೆಯ ಸ್ಥಗಿತತೆ (deadlock/gridlock) ಅಥವಾ ಬಿಕ್ಕಟ್ಟು (crisis) ಉಂಟಾಗುತ್ತದೆ. ಜಗಳ ಎನ್ನುವುದು ಈ ಬಿಕ್ಕಟ್ಟನ್ನು ಪರಿಹರಿಸಿಕೊಂಡು ಪ್ರೀತಿಯನ್ನು ಮತ್ತೂ ಆಳವಾಗಿ ಕಂಡುಕೊಳ್ಳುವ, ಪ್ರೇಮವನ್ನು ಆಸ್ವಾದಿಸಲು ಅನುವು ಮಾಡಿಕೊಡುವ ಹಾದಿಯಾಗಿರುವಾಗ ಜಗಳವೆಂದರೆ ಭಯವೇಕೆ?

ಒಂದು ಉದಾಹರಣೆಯ ಮೂಲಕ ಇದನ್ನು ನೋಡುವುದಾದರೆ, ತನ್ನೆಲ್ಲಾ ಅಭದ್ರತೆ, ಆತಂಕಗಳನ್ನು ಸಂಗಾತಿಯೇ ನಿವಾರಿಸಬೇಕು. ತನಗೆ ಸಮಾಧಾನವಾಗುವಂತೆ ಸದಾ ಸ್ಪಂದಿಸುತ್ತಿರಬೇಕು ಎಂದು ಬಯಸುವ ಅವಳ ನಡೆಯಿಂದ ಅವನು ಭಾವನಾತ್ಮಕವಾಗಿ ದಣಿದಿರುತ್ತಾನೆ, ಅವಳ ಬೇಡಿಕೆಗಳಿಂದ ಕಂಗಾಲಾಗಿ ಅವಳಿಂದ ದೂರಸರಿಯುತ್ತಾನೆ. ತಾನು ನಿರೀಕ್ಷಿಸಿದಂತೆ ಅವನ ನಡೆ-ನುಡಿಯಿಲ್ಲವೆಂದು ಅವಳೂ, ತನ್ನ ಅಸಹಾಯಕತೆಯನ್ನು ಅವಳು ಅರ್ಥಮಾಡಿಕೊಳ್ಳುತ್ತಿಲ್ಲವೆಂದು ಅವನೂ ಜಗಳಕ್ಕಿಳಿಯುತ್ತಾರೆ. ಈ ಬಿಕ್ಕಟ್ಟಿನಿಂದ ಪಾರಾಗುವ ಸಲುವಾಗಿ ಆಡುವ ಜಗಳದಿಂದ ಇಬ್ಬರೂ ತಮ್ಮ ಆಂತರಿಕ ವಿಕಾಸ ಹೇಗಿರಬೇಕು ಎಂದು ಕಂಡುಕೊಂಡಾಗ ಅವರ ಜಗಳ ಸಾರ್ಥಕವಾಗಿ ಪ್ರೀತಿಯ ಪಯಣದಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲನ್ನು ದಾಟುತ್ತಾರೆ.

ಅಂತಹ ಸಹಜ, ‘ಪ್ರಾಮಾಣಿಕ’ ಆದ ಜಗಳದಲ್ಲಿ ತೊಡಗಿದಾಗ ಮರೆಯಲೇಬಾರದ ಕೆಲವು ವಿಚಾರಗಳು ಇಲ್ಲಿವೆ:

1. ಜಗಳದಲ್ಲಿ ಪರಸ್ಪರ ದೋಷಾರೋಪಣೆಗಿಂತ ಒದಗಿರುವ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನವಿರಲಿ. ಅದಕ್ಕೆ ಸಂಗಾತಿಯ ಬಗೆಗೆ ಸಹಾನುಭೂತಿ ಅತ್ಯಗತ್ಯ.

2. ನಮ್ಮ ಭಾವನೆಗಳನ್ನು, ನಿರೀಕ್ಷೆಗಳನ್ನು, ಸಂಕಟವನ್ನು ಎದುರಿಗಿರುವವರ ಮುಂದೆ ತೆರೆದಿಟ್ಟುಕೊಂಡಾಗ ನಾವು ಅಸಹಾಯಕರಂತೆ, ದುರ್ಬಲರಂತೆ ಕಾಣಬಹುದು. ಎದುರಿನವರು ನಮ್ಮನ್ನು ಭಾವನಾತ್ಮಕವಾಗಿ ನುಚ್ಚುನೂರು ಮಾಡಬಹುದಾಗಿದ್ದರೂ ನಮ್ಮ ಆಂತರ್ಯವನ್ನು ಸಂಪೂರ್ಣವಾಗಿ ತೆರೆದಿಡುವುದು (vulnerability) ಪ್ರೀತಿ ಬೆಳೆಯಲು ದಾರಿಯಾಗುತ್ತದೆ.

3. ‘ನೀನಿಲ್ಲದಿದ್ದರೂ ನನ್ನ ಬದುಕು ನಡೆಯುತ್ತದೆ’ ಎನ್ನುವುದು ಭಾವನಾತ್ಮಕ ಸ್ವಾತಂತ್ರವಲ್ಲ, ಅದು ಪ್ರೀತಿಯ ಹಂಬಲವನ್ನು ಹತ್ತಿಕ್ಕಿ ಸುಳ್ಳು ಗಟ್ಟಿತನದಿಂದ ತನಗೆ ತಾನೇ ಮೋಸಮಾಡಿಕೊಳ್ಳುವುದು. ‘ಪ್ರೀತಿಯ ಹಂಬಲವಿತ್ತು, ದೊರೆಯಲಿಲ್ಲ, ದುಃಖವಿದೆ ಆದರೂ ನೀಗಿಕೊಂಡು ಬದುಕುವ ಜೀವನಪ್ರೀತಿ ಮೈಗೂಡಿಸಿಕೊಳ್ಳುವೆ’ ಎನ್ನುವುದು ಭಾವನಾತ್ಮಕ ಸ್ವಾಯತ್ತತೆ.

4. ಎದುರಿಗಿರುವ ವ್ಯಕ್ತಿ ‘ನಿನ್ನಿಂದ ನನಗೆ ನೋವಾಗಿದೆ’ ಎಂದು ಹೇಳಿದಾಗ ಅದಕ್ಕೆ ತಾರ್ಕಿಕ ಉತ್ತರ, ವಿವರಣೆ, ಸಮಜಾಯಿಷಿ ಕೊಡುವುದು, ನೋವನ್ನು ಪ್ರಶ್ನಿಸುವುದು ಮಾಡದೆ ಆ ನೋವಿಗೆ ಹೃದಯಪೂರ್ವಕವಾಗಿ ಸ್ಪಂದಿಸುವುದು ಜಗಳದಲ್ಲಿ ಪ್ರೀತಿಯ ನಡೆ.

5. ಕೋಪಕ್ಕೆ ನಾವು ಸಾಧಾರಣವಾಗಿ ಹೇಳಿಕೊಳ್ಳಲು ಹಿಂಜರಿಯುವ ಮಾತುಗಳನ್ನು ಹೊರಹಾಕಿಸುವ ಶಕ್ತಿಯಿದೆ. ಅದು ಬಾಂಧವ್ಯದ ದಿಕ್ಕನ್ನೇ ಬದಲಾಯಿಸುತ್ತದೆ. ಕೋಪವನ್ನು ವಿವೇಚನೆಯಿಂದ ಬಳಸಲು ಅಭ್ಯಾಸ ಬೇಕು.

6. ‘ನಾನು ಹೇಳಿದಂತೆ ಕೇಳಿದರೆ ಸರಿ ಇಲ್ಲದಿದ್ದರೆ ಪರಿಣಾಮ ಎದುರಿಸುವೆ’ ಎಂಬಂತಹ ಬೆದರಿಕೆಗಳು, ಎದುರಿಗಿರುವವರಲ್ಲಿ ಸ್ವ-ಮರುಕದ ಮೂಲಕ ತಪ್ಪಿತಸ್ಥ ಭಾವನೆಯುಂಟುಮಾಡುವುದು ಮುಂತಾದವು ಇನ್ನೊಬ್ಬರನ್ನು ನಮ್ಮ ತಾಳಕ್ಕೆ ತಕ್ಕಂತೆ ಕುಣಿಸಲು ಉಪಯೋಗಿಸುವ ದುರುದ್ದೇಶಪೂರಿತ ವಿಷಮಯ ತಂತ್ರ; ಇಂತಹ ಜಗಳ ಅನರ್ಥಕ್ಕೆ ದಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.