ಮಂಗಳವಾರ, ಅಕ್ಟೋಬರ್ 27, 2020
22 °C

PV Web Exclusive: ಎಲ್ಲರಿಗೂ ಮಾನಸಿಕ ಆರೋಗ್ಯ, ತುರ್ತು ಅಗತ್ಯ!

ರಾಮಕೃಷ್ಣ ಸಿದ್ರಪಾಲ Updated:

ಅಕ್ಷರ ಗಾತ್ರ : | |

Prajavani

ಪ್ರತಿ ವರ್ಷ ಅಕ್ಟೋಬರ್ 10ನ್ನು ‘ವಿಶ್ವ ಮಾನಸಿಕ ಆರೋಗ್ಯ ದಿನ’ವಾಗಿ ಆಚರಿಸಲಾಗುತ್ತಿದೆ. ಈ ವರ್ಷದ ಘೋಷವಾಕ್ಯ ‘ಎಲ್ಲರಿಗೂ ಮಾನಸಿಕ ಆರೋಗ್ಯ’ (Mental Health for All). ಕೋವಿಡ್‌ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಮತ್ತು ಮಾನಸಿಕವಾಗಿ ಪರಸ್ಪರ ಬೆಂಬಲ ನೀಡುವುದು ಇಂದಿನ ತುರ್ತು ಕೂಡ ಆಗಿದೆ...

ಈ ವರ್ಷ ಕೋವಿಡ್‌–19 ಸಾಂಕ್ರಾಮಿಕದ ಪರಿಣಾಮ ನಮ್ಮ ದೈನಿಕ ದೊಡ್ಡ ಮಟ್ಟದಲ್ಲಿ ಬದಲಾಗಿದೆ. ಬಹಳಷ್ಟು ಜನರ ದೈಹಿಕ, ಮಾನಸಿಕ ಆರೋಗ್ಯ ಹದಗೆಟ್ಟಿದೆ. ಆತಂಕ, ಖಿನ್ನತೆ, ಸಂಶಯ, ಗೀಳು ರೋಗ ಮನೆಮಾಡಿದೆ. ಕೊರೊನಾ ತಂದ ಸವಾಲುಗಳೂ ಅನೇಕ. ವಿದ್ಯಾರ್ಥಿಗಳು, ಶಿಕ್ಷಕರು, ಉದ್ಯೋಗಸ್ಥರು, ಕಾರ್ಮಿಕರು, ರೈತರು... ಹೀಗೆ ಎಲ್ಲ ಕ್ಷೇತ್ರದವರಿಗೂ ಭವಿಷ್ಯದ ಬಗ್ಗೆ ಆತಂಕ; ಜೀವನೋಪಾಯ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಮತ್ತು ಮಾನಸಿಕವಾಗಿ ಪರಸ್ಪರ ಬೆಂಬಲ ನೀಡುವುದು ಇಂದಿನ ತುರ್ತು ಕೂಡ ಆಗಿದೆ.

ಪ್ರತಿ ವರ್ಷ ಅಕ್ಟೋಬರ್ 10ನ್ನು ‘ವಿಶ್ವ ಮಾನಸಿಕ ಆರೋಗ್ಯ ದಿನ’ವಾಗಿ ಆಚರಿಸಲಾಗುತ್ತಿದೆ. ಈ ವರ್ಷದ ಘೋಷವಾಕ್ಯ ‘ಎಲ್ಲರಿಗೂ ಮಾನಸಿಕ ಆರೋಗ್ಯ’ (Mental Health for All).

ಜತೆಗೆ, ‘ಈ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಆಗಬೇಕು ಹಾಗೂ ಹೆಚ್ಚಿನ ಜನರಿಗೆ ಈ ಕಾರ್ಯಕ್ರಮದ ಪ್ರಯೋಜನ ತಲುಪಿಸಬೇಕು’ ಎನ್ನುವುದೂ ಸೇರಿದೆ. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆ (WHO) ಮಾನಸಿಕ ಆರೋಗ್ಯದ ಬಗ್ಗೆ ಮೊಟ್ಟಮೊದಲ ಬಾರಿಗೆ ಜಾಗತಿಕ ಆನ್‌ಲೈನ್ (Online) ಕಾರ್ಯಕ್ರಮವನ್ನು ಈ ವರ್ಷ ಆಯೋಜಿಸುತ್ತಿದೆ. ಮಾನಸಿಕ ಆರೋಗ್ಯ ತಜ್ಞರು, ವಿಶ್ವ ನಾಯಕರು, ವಿಶ್ವಸಂಸ್ಥೆಯ ಮಹಾನಿರ್ದೇಶಕರು ಆನ್‌ಲೈನ್‌ ಚರ್ಚೆಯಲ್ಲಿ ಸೇರಿಕೊಳ್ಳಲಿದ್ದಾರೆ.

ಸಮುದಾಯದ ಮಾನಸಿಕ ಆರೋಗ್ಯ ಸುಧಾರಣೆಗೆ ನಾವೆಲ್ಲರೂ ಏನು ಮಾಡಬಹುದು ಮತ್ತು ಹೇಗೆ ಮಾಡಬಹುದು? ಎಂಬುದನ್ನು ಜಗತ್ತಿಗೆ ತಿಳಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಗುಣಮಟ್ಟದ ಮಾನಸಿಕ ಆರೋಗ್ಯವು ಅಗತ್ಯವಿರುವ ಎಲ್ಲರಿಗೂ ಲಭ್ಯವಿದೆ ಎನ್ನುವುದನ್ನು ಖಚಿತಪಡಿಸುವುದು ಈ ಕಾರ್ಯಕ್ರಮದ ಉದ್ದೇಶವೂ ಹೌದು.

ಈ ಕಾರ್ಯಕ್ರಮವು ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರವಾಗಲಿದೆ. ಭಾರತೀಯ ಕಾಲಮಾನದ ಪ್ರಕಾರ ಅ.10ರಂದು ಸಂಜೆ 7.30 ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು ಸುಮಾರು ಮೂರು ತಾಸು ನಡೆಯಲಿದೆ. ಫೇಸ್‌ಬುಕ್, ಟ್ವಿಟರ್, ಲಿಂಕ್ಡ್‌ಇನ್, ಯೂಟ್ಯೂಬ್ ಚಾನೆಲ್‌ಗಳು ಮತ್ತು ವೆಬ್‌ಸೈಟ್‌ನಲ್ಲಿ ಪ್ರಸಾರವಾಗಲಿದೆ.

ಮಾನಸಿಕ ಅಸ್ವಸ್ಥತೆ...

ವಿಶ್ವದಲ್ಲಿ ಸುಮಾರು 100 ಕೋಟಿ ಜನರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ.  ಪ್ರತಿ ವರ್ಷ ಸುಮಾರು 30 ಲಕ್ಷ  ಜನರು ಮದ್ಯಪಾನ, ತಂಬಾಕು ಮತ್ತಿತರ ವ್ಯಸನಗಳ ಬಳಕೆಯಿಂದ ಸಾಯುತ್ತಾರೆ. ಪ್ರತಿ 40 ಸೆಕೆಂಡಿಗೆ ಒಬ್ಬ ವ್ಯಕ್ತಿ ಆತ್ಮಹತ್ಯೆಯಿಂದ ಸಾಯುತ್ತಿದ್ದಾನೆ.  ಪ್ರಸ್ತುತ ವಿಶ್ವದಾದ್ಯಂತ 100 ಕೋಟಿ ಜನರು ಕೊರೊನಾ ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದಾರೆ. ಇದೆಲ್ಲ ಜನರ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ದೈಹಿಕ ಕಾಯಿಲೆಯಂತೆ ಮಾನಸಿಕ ಕಾಯಿಲೆ ಕೂಡ. ಯಾವುದೇ ಅಧಿಕಾರ, ದೊಡ್ಡ ಹುದ್ದೆ, ಪ್ರಭಾವಿ ವ್ಯಕ್ತಿ, ಸೆಲೆಬ್ರಿಟಿ...ಯಾರಾದರೂ ಆಗಿರಬಹುದು. ಅದಕ್ಕೆ ವ್ಯಕ್ತಿ, ಜಾತಿ, ಅಂತಸ್ತಿನ ಪರಿವೆ ಇಲ್ಲ. ವ್ಯಕ್ತಿಯ ಮಿದುಳಿನಲ್ಲಿ ಆಗುವಂಥ ರಾಸಾಯನಿಕ ರಸದೂತಗಳ ಏರು ಪೇರಿನಿಂದ ಮಾನಸಿಕ ಕಾಯಿಲೆ ಕಂಡು ಬರುತ್ತದೆ. ಕೆಲವೊಮ್ಮೆ ಪರಿಸ್ಥಿತಿಯ ಒತ್ತಡ, ಆನುವಂಶೀಯತೆ, ಸುತ್ತಮುತ್ತಲ ವಾತಾವರಣ, ಕಾರ್ಯದ ಒತ್ತಡ, ಕೆಲಸದ ಸ್ಥಳದಲ್ಲಿನ ಕಿರಿಕಿರಿ, ಕೌಟುಂಬಿಕ ಸಮಸ್ಯೆ ಇತ್ಯಾದಿಗಳೆಲ್ಲವೂ ಕೂಡ ವ್ಯಕ್ತಿಯನ್ನು ಮಾನಸಿಕ ವ್ಯಾಕುಲತೆಯಲ್ಲಿ ಸಿಲುಕಿಸಬಹುದು.

ಹಿಂದೆಲ್ಲ ಮಾನಸಿಕ ರೋಗಕ್ಕೆ ತುತ್ತಾದ ಜನರನ್ನು ಅಪಹಾಸ್ಯ ಮಾಡುತ್ತಿದ್ದರು, ಅಲಕ್ಷಿಸಲಾಗುತ್ತಿತ್ತು. ಶೋಚನೀಯ ಸ್ಥಿತಿಯಲ್ಲಿ ಒಬ್ಬರನ್ನೇ ಇರಿಸಲಾಗುತ್ತಿತ್ತು. ದೇವಸ್ಥಾನ, ದೇವರು, ದಿಂಡಿರ ಮೊರೆ ಹೋಗುವುದು ಮಾಮೂಲಿಯಾಗಿತ್ತು. ಮನೋವೈದ್ಯರ ಬಳಿ ಕರೆತರುವವರು ಬಹಳ ಕಡಿಮೆಯಾಗಿದ್ದರು.

ಮನೋವೈದ್ಯಕೀಯ ಚಿಕಿತ್ಸೆ ದೊಡ್ಡ ಮಟ್ಟದಲ್ಲಿ ಆರಂಭವಾಗಿದ್ದೇ 20 ನೇ ಶತಮಾನದಲ್ಲಿ. ಮನಸ್ಸು ಕೂಡ ದೇಹದಂತೆ ಕಾಯಿಲೆಗೆ ಬೀಳುತ್ತದೆ. ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿದರೆ ಸರಿ ಹೋಗುತ್ತದೆ ಎನ್ನುವುದು ಕಾಲಕ್ರಮೇಣ ಅರಿವಾಗುತ್ತಿದೆ. ಆದರೂ ಜನಸಾಮಾನ್ಯರಿಗಾಗಲಿ, ವಿದ್ಯಾವಂತರಿಗೇ ಆಗಲಿ ಇದನ್ನು ಮನವರಿಕೆ ಮಾಡಿಸುವುದು ಈಗಲೂ ಕೂಡ ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿದೆ. ಸದ್ಯದ ಸ್ಥಿತಿಯಲ್ಲಿ ಮಾನಸಿಕ ರೋಗಿಗಳನ್ನು ಸಾಮಾನ್ಯ ರೋಗಿಯಂತೆ ಪರಿಗಣಿಸುವವರು ಕೂಡ ಕಡಿಮೆಯೇ.

ಮನೋವೈದ್ಯರು ಹೇಳುವುದು ಹೀಗೆ...

‘ಎಲ್ಲ ಬಗೆಯ ಪರಿಸ್ಥಿತಿಯಲ್ಲಿಯೂ ಸಮಚಿತ್ತದಿಂದ ಇರುವುದೇ ಮಾನಸಿಕ ಆರೋಗ್ಯ. ಅದು ದೇಹ ಮತ್ತು ಮನಸ್ಸಿನ ಸಮತೋಲನದ ಸ್ಥಿತಿ. ಯಾವುದೇ ಒಂದಕ್ಕೆ ಸಮಸ್ಯೆಯಾದರೂ ಎರಡರ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಇವೆರಡನ್ನೂ ಕಾಪಾಡಿಕೊಳ್ಳುವುದು ಬಹಳ ಮುಖ್ಯ’ ಎನ್ನುತ್ತಾರೆ ಮಾನಸಿಕ ರೋಗ ತಜ್ಞ ಹುಬ್ಬಳ್ಳಿಯ ಡಾ.ಶಿವಾನಂದ ಹಿರೇಮಠ.

‘ವಿಶೇಷವಾಗಿ ಕೋವಿಡ್‌ ಸಮಯದಲ್ಲಿ ಬಹಳಷ್ಟು ಜನರ ಮಾನಸಿಕ ಆರೋಗ್ಯ ಹದಗೆಟ್ಟಿದೆ. ಆತಂಕ, ಸಂಶಯ, ಗೀಳು ರೋಗ ಮನೆಮಾಡಿದೆ. ಬಹುತೇಕರಲ್ಲಿ ಈ ರೋಗ ಯಾವಾಗ ಮುಗಿಯುತ್ತದೆಯೋ ಎನ್ನುವ ಅನಿಶ್ಚಿತತೆ, ಒಂದು ವೇಳೆ ನಾವೂ ಈ ರೋಗಕ್ಕೆ ತುತ್ತಾದರೆ ಎನ್ನುವ ಆತಂಕ, ಹಣಕಾಸಿನ ಸಮಸ್ಯೆ, ಮಕ್ಕಳು, ಹಿರಿಯರಿಗೆಲ್ಲ ಸದಾಕಾಲ ಮನೆಯಲ್ಲೇ ಇರಬೇಕಾಗಿದ್ದರಿಂದ ಒಂದಿಷ್ಟು ಖಿನ್ನತೆ ಆವರಿಸಿದೆ... ಒಟ್ಟಿನಲ್ಲಿ ಕೋವಿಡ್‌ ಮಾನಸಿಕ ಮತ್ತು ದೈಹಿಕವಾಗಿ  ಸಂಕಷ್ಟ ತಂದೊಡ್ಡಿದೆ’ ಎನ್ನುತ್ತಾರೆ ವೈದ್ಯರು.

ಧೈರ್ಯ ತುಂಬುವ ಕೆಲಸ ಆಗಲಿ...

‘ಕೊರೊನಾ ಸಮಯದಲ್ಲಿ ಉತ್ತಮ ದೇಹಾರೋಗ್ಯ ಇದ್ದವರೂ ಮಾನಸಿಕ ಗೊಂದಲಕ್ಕೀಡಾದ ಸನ್ನಿವೇಶ ನಮ್ಮೆದುರು ಇವೆ. ಎಲ್ಲ ಕ್ಷೇತ್ರಗಳಲ್ಲಿಯೂ ಅನಿಶ್ಚಿತತೆ ಇದೆ. ಮಕ್ಕಳು, ಹಿರಿಯರು, ಮಹಿಳೆಯರು, ಉದ್ಯೋಗಸ್ಥರು, ಕಾರ್ಮಿಕರು... ಹೀಗೆ ಎಲ್ಲರೂ ಗೊಂದಲದಲ್ಲಿದ್ದಾರೆ. ಇಂತಹ ಸಮಯದಲ್ಲಿ ಜನರಲ್ಲಿ ಧೈರ್ಯ ತುಂಬುವ ಕೆಲಸ ಆಗಲಿ’ ಎನ್ನುತ್ತಾರೆ ಧಾರವಾಡದ ಮಾನಸಿಕ ರೋಗ ತಜ್ಞ ಡಾ.ಆದಿತ್ಯ ಪಾಂಡುರಂಗಿ. 

‘ಸ್ವಭಾವತಃ ಸೂಕ್ಷ್ಮ ಇರುವವರಿಗಂತೂ ಈಗಿನ ಸ್ಥಿತಿ ಬಹಳ ಕಾಡುತ್ತಿದೆ. ಆತಂಕ, ಉದ್ವೇಗ, ಉಸಿರಾಟದ ಸಮಸ್ಯೆ ಇತ್ಯಾದಿ ಕಾಣಿಸಿಕೊಳ್ಳುತ್ತಿದೆ. ಹಲವರು ಒತ್ತಡ ತಾಳಲಾರದೇ ಕತ್ತು, ಬೆನ್ನು, ತಲೆನೋವು ಇತ್ಯಾದಿ ಸಮಸ್ಯೆಗೆ ಒಳಗಾಗಿದ್ದಾರೆ. ಇನ್ನೂ ಕೆಲವರು ನಿಜವಾಗಿಯೂ ಖಿನ್ನತೆಯಲ್ಲಿ ಮುಳುಗಿ ಹೋದವರೂ ಇದ್ದಾರೆ. ಅಲ್ಲದೇ, ಕೋವಿಡ್‌ ನಿಂದ ಬಳಲಿ ಗುಣವಾಗಿ ಬಂದವರೂ ಕೂಡ ಗೊಂದಲದಲ್ಲಿದ್ದಾರೆ. ಅವರನ್ನು ಸಮಾಜ ನೋಡುವ ದೃಷ್ಟಿಕೋನ ಮಾನಸಿಕ ಸಮಸ್ಯೆಗೆ ದೂಡುತ್ತಿದೆ. ಹೀಗಾಗಿ ನಮ್ಮ ಜನರಲ್ಲಿ ಮಾನವೀಯ ದೃಷ್ಟಿಕೋನ ಇನ್ನಷ್ಟು ಬೆಳೆಯಬೇಕು’ ಎನ್ನುತ್ತಾರೆ ಅವರು.

‘ಇಂತಹ ಸಂಕಷ್ಟದ ಸಮಯ ದೀರ್ಘ ಕಾಲ ಉಳಿಯಲಿಕ್ಕಿಲ್ಲ ಎನ್ನುವುದು ಇತಿಹಾಸದಿಂದ ಅರಿವಾಗುತ್ತದೆ. ಹಿಂದೆಯೂ ಬಹಳಷ್ಟು ಸಾಂಕ್ರಾಮಿಕ ರೋಗಗಳು ಬಂದಿದ್ದವು. ಅವು ಹೋಗಿವೆ. ಕೊರೊನಾ ಕೂಡ ಹೋಗುತ್ತದೆ. ಆದರೆ ಸಮುದಾಯಕ್ಕೆ ತಾಳ್ಮೆ ಬೇಕಾಗಿದೆ. ಒತ್ತಡ ನಿಭಾಯಿಸುವುದನ್ನು ಕಲಿಸಬೇಕಾಗಿದೆ. ಹಾಗೆಯೇ ಧೈರ್ಯ ತುಂಬಬೇಕಾಗಿದೆ. ಇದು ಆರೋಗ್ಯವಂತ ಸಮಾಜದ ಕರ್ತವ್ಯ ಕೂಡ’ ಎನ್ನುತ್ತಾರೆ ಪಾಂಡುರಂಗಿ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು