ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಜಾವಿನ ದಿನಚರಿಯಲ್ಲಿದೆ ಮನೋಲ್ಲಾಸದ ಗುಟ್ಟು

Last Updated 2 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಒತ್ತಡ ನಿರ್ವಹಣೆ ಹೇಗೆ ಎಂಬುದು ಬಹುತೇಕರ ಪ್ರಶ್ನೆ. ಇದಕ್ಕೆ ಉತ್ತರವೂ ನಮ್ಮಲ್ಲಿಯೇ ಇದೆ. ಒಂದೊಳ್ಳೆ ಮುಂಜಾವಿನ ಆರಂಭಕ್ಕೆ ಮನಸ್ಸನ್ನು ದಿನಪೂರ್ತಿ ಆಹ್ಲಾದಕರವಾಗಿಸುವ ಸಾಮರ್ಥ್ಯ ಇದೆ.

ಮೂ ವತ್ತು ವರ್ಷದ ಸ್ನೇಹಾ ಸಾಫ್ಟ್‌ವೇರ್‌ ಎಂಜಿನಿಯರ್‌. ಪ್ರತಿಷ್ಠಿತ ಕಂಪನಿಯ ಉದ್ಯೋಗಿಯಾಗಿರುವ ಸ್ನೇಹಾ ಉತ್ತಮ ಕೆಲಸಗಾರ್ತಿ ಎಂದು ಮೆಚ್ಚುಗೆ ಪಡೆದುಕೊಂಡವಳು. ಆದರೆ, ಇತ್ತೀಚೆಗೆ ಆಕೆಯಲ್ಲಿ ಕೆಲಸದಲ್ಲಿ ಆಸಕ್ತಿ ಕಡಿಮೆಯಾಗುತ್ತಿರುವ ಜೊತೆಗೆ ಸಣ್ಣ ವಿಷಯಗಳಿಗೂ ಅತಿಯಾಗಿ ರೇಗುವಷ್ಟು ಕೋಪಕಾಣುತ್ತಿದೆ. ಇದಕ್ಕೆ ಕಾರಣ ಹುಡುಕಿದಾಗ ತಿಳಿದದ್ದು, ಆಕೆ ಅತಿಯಾದ ಮಾನಸಿಕ ಒತ್ತಡದಿಂದ ಉದ್ವೇಗಕ್ಕೆ ಒಳಗಾಗುತ್ತಿದ್ದಾರೆ ಎಂಬುದು.

ಒತ್ತಡದ ಸಮಸ್ಯೆ ಇಂದು ನಿನ್ನೆಯದಲ್ಲ. ಆದರೆ, ಮನೆಯಲ್ಲಿಯೇ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾದ ನಂತರದ ದಿನಗಳಲ್ಲಿ ಈ ಸಮಸ್ಯೆ ಅಧಿಕವಾಗಿದೆ. ದಿನಪೂರ್ತಿ ಮನೆಯಲ್ಲಿಯೇ ಕಾಲ ಕಳೆಯುವುದು, ಮಕ್ಕಳು, ಕುಟುಂಬದ ಹೊಣೆ ಅಧಿಕವಾಗಿರುವುದರಿಂದ ನಮ್ಮನ್ನು ನಾವೇ ಮರೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಹಾಗಿದ್ದರೆ ಈ ಸಮಸ್ಯೆಗೆ ಪರಿಹಾರ ಇಲ್ಲವೇ ಎಂದು ಕೇಳಿದರೆ, ‘ಖಂಡಿತ ಇದೆ. ಆದರೆ, ನಮ್ಮ ಜೀವನ ಶೈಲಿ ಬದಲಾಗಬೇಕು. ಸವಾಲುಗಳನ್ನು ಎದುರಿಸುವ ಕಲೆಯನ್ನು ಅರಿಯಬೇಕು’ ಎನ್ನುತ್ತಾರೆ ಮನಶ್ಶಾಸ್ತ್ರಜ್ಞರು.

ಒತ್ತಡ ಸಮಸ್ಯೆ ನಿವಾರಣೆಗೆ ಎರಡು ಮಾರ್ಗಗಳಿವೆ. ವ್ಯಾಯಾಮ, ಧ್ಯಾನ, ಯೋಗ ಮತ್ತು ದೀರ್ಘ ಉಸಿರಾಟದ ಮೂಲಕ ದೇಹವನ್ನು ಪ್ರಶಾಂತ ಸ್ಥಿತಿಗೆ ತರುವುದು ಮೊದಲನೆಯದಾದರೆ, ಸಂಘಟಿತ ಜೀವನಶೈಲಿ, ಸಮಯ ನಿರ್ವಹಣೆ, ಸಂವಹನ ಕೌಶಲದಂತಹ ಸರಳ ವಿಧಾನಗಳ ಮೂಲಕ ಒತ್ತಡಮುಕ್ತ ಜೀವನಶೈಲಿಯನ್ನು ನಮ್ಮದಾಗಿಸಿಕೊಳ್ಳುವುದು ಎರಡನೇ ಮಾರ್ಗ.

ಕಟ್ಟಡದ ಆಯಸ್ಸು ಅದರ ಭದ್ರ ಬುನಾದಿಯನ್ನು ಅವಲಂಬಿಸಿರುವಂತೆ, ಒಂದೊಳ್ಳೆ ಮುಂಜಾವಿನ ಆರಂಭ ದಿನ ಪೂರ್ತಿ ಆಹ್ಲಾದಕರವಾಗಿರುವಂತೆ ಮಾಡಬಲ್ಲದು ಎನ್ನುತ್ತಾರೆ ಮನಶ್ಶಾಸ್ತ್ರಜ್ಞೆ ಜಿನ್ನಿ ಜೋಸ್‌.

l ಆಲಸ್ಯ ಬಿಡಿ: ಒತ್ತಡ ಇದ್ದಾಗ ಏಳಲೂ ಮನಸ್ಸೇ ಆಗುವುದಿಲ್ಲ. ಅಂತಹ ಸಮಯದಲ್ಲಿ ಆಲಸ್ಯ ಸಲ್ಲದು. ಎಚ್ಚರವಾದ ತಕ್ಷಣ ಹಾಸಿಗೆಯಿಂದ ಎದ್ದು ಬಿಡಬೇಕು. ಮನಸ್ಸು ಮತ್ತು ದೇಹಕ್ಕೆ ನಿಕಟ ಸಂಪರ್ಕವಿದೆ. ಹಾಗಾಗಿ, ಎದ್ದ ಕೂಡಲೇ ದೇಹದ ಚಲನೆಗೆ ಆದ್ಯತೆ ನೀಡಿ. ಎದ್ದ ಕೂಡಲೇ ಕಾಫಿ ಬದಲು ಒಂದು ಲೋಟ ನೀರು ಕುಡಿದರೆ ಉತ್ಸಾಹ, ಶಕ್ತಿ, ಮಾನಸಿಕ ದೃಢತೆ ಎಲ್ಲವೂ ಜಾಸ್ತಿಯಾಗುತ್ತವೆ. ಹಾಗೆಯೇ ಎದ್ದ ಕೂಡಲೇ ಫೋನ್‌ ಮೇಲೆ ಕಣ್ಣಾಡಿಸುವುದನ್ನು ಬಿಡಿ.

l ದಿನದ ಮೇಲೆ ನಿಯಂತ್ರಣ ಇರಲಿ: ಇವತ್ತೇನು ಒಳ್ಳೆಯದಾಗಲು ಸಾಧ್ಯ. ನಿನ್ನೆ ಇದ್ದ ಹಾಗೆಯೇ ಇವತ್ತೂ ಇರುತ್ತದೆ ಎಂಬುದು ಬಹುತೇಕರ ಮನಸ್ಥಿತಿ. ಆದರೆ, ಇದು ಸರಿಯಲ್ಲ. ಉತ್ಸಾಹದಿಂದ ಹೊಸ ದಿನವನ್ನು ಎದುರಿಸಿ. ಇವತ್ತು ಏನು ಮಾಡಬೇಕು ಎಂಬುದರ ಬಗ್ಗೆ ಯೋಚಿಸಿ. ಹೊಸ ಸವಾಲುಗಳನ್ನು ಸ್ವೀಕರಿಸಲು ತಯಾರಾಗಿ.

l ಅಪ್ಪುಗೆ: ಅಪ್ಪುಗೆಯಲ್ಲಿ ಬೆಚ್ಚನೆಯ ಭಾವ ಅಡಗಿದೆ. ಸಾಮಾನ್ಯವಾಗಿ ಮಕ್ಕಳು, ಸ್ನೇಹಿತರು ಬೇಸರದಲ್ಲಿದ್ದಾಗ ತಬ್ಬಿಕೊಂಡರೆ ಅವರಿಗೊಂದು ಸುರಕ್ಷಿತ ಅನುಭವ ಆಗುತ್ತದೆ. ಅದೇ ರೀತಿ, ನೀವೇ ನಿಮಗೊಂದು ಅಪ್ಪುಗೆ ಕೊಟ್ಟು ನೋಡಿ. ಅದು ನಿಮ್ಮಲ್ಲಿಯ ಆತ್ಮವಿಶ್ವಾಸವನ್ನು ಇನ್ನಷ್ಟು ದೃಢವಾಗಿಸುತ್ತದೆ.

l ಆರೋಗ್ಯಕರ ಆಹಾರ ಸೇವಿಸಿ: ಆಹಾರವು ದೇಹ ಮತ್ತು ಮನಸ್ಸು ಎರಡಕ್ಕೂ ಒಪ್ಪಿಗೆ ಆಗುವಂತಿರಬೇಕು. ಪೌಷ್ಟಿಕಾಂಶಯುಕ್ತ ಆಹಾರಕ್ಕೆ ಆದ್ಯತೆ ನೀಡಿ.

l ಇಷ್ಟವಾದ ಪುಸ್ತಕ ತೆಗೆದುಕೊಂಡು ಒಂದಿಷ್ಟು ಪುಟಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಿ.

ಮೂವತ್ತು ನಿಮಿಷ ಖುಷಿಯಾಗಿರಿ

ಒತ್ತಡ ನಿರ್ವಹಣೆ ಅಷ್ಟೇನೂ ಕಷ್ಟವಲ್ಲ. ನಮ್ಮ ಜೀವನ ಶೈಲಿಯಲ್ಲಿ ಶಿಸ್ತು ರೂಢಿಸಿಕೊಂಡರೆ ಅದನ್ನು ಸಲೀಸಾಗಿ ನಮ್ಮಿಂದ ಓಡಿಸಬಹುದು. ಒತ್ತಡವನ್ನು ಓಡಿಸಲು ನಿಮ್ಮ ದೇಹವನ್ನು ವಾಹಕದ ರೀತಿ ಬಳಸಿ. ಫೋನ್‌, ಕಂಪ್ಯೂಟರ್‌ ಸ್ಟ್ರಕ್‌ ಆದರೆ ಅದನ್ನು ರೀಸ್ಟಾರ್ಟ್‌ ಮಾಡುವಂತೆ, ಮನಸ್ಸನ್ನು ಪ್ರತಿದಿನ ತಯಾರಿ ಮಾಡಬೇಕು. ನೀವು ನಿಮಗಾಗಿ 30 ನಿಮಿಷ ಮೀಸಲಿಡಿ. ಈ ಸಮಯವನ್ನು ಖುಷಿ ಕೊಡುವ ಕೆಲಸದ ಜೊತೆಗೆ ಮೆದುಳಿನ ವಿಶ್ರಾಂತಿಗೂ ಬಳಸಿಕೊಳ್ಳಿ.

–ಜಿನ್ನಿ ಜೋಸ್‌, ಮನಶ್ಶಾಸ್ತ್ರಜ್ಞೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT