ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಒಂದಿಷ್ಟು ತಿಳಿಯೋಣ: ಮಕ್ಕಳಲ್ಲಿ ಸುಲಭವಾಗಿ ಹರಡುವ ರೂಪಾಂತರ ವೈರಸ್‌

Last Updated 31 ಡಿಸೆಂಬರ್ 2020, 20:40 IST
ಅಕ್ಷರ ಗಾತ್ರ

ಬ್ರಿಟನ್‌ನಲ್ಲಿ ಹಬ್ಬಿರುವ, ಈಗ ಭಾರತಕ್ಕೂ ಕಾಲಿಟ್ಟಿರುವ ರೂಪಾಂತರಗೊಂಡ ಕೊರೊನಾ ವೈರಸ್‌ ಮಕ್ಕಳಲ್ಲಿ ಸುಲಭವಾಗಿ ಸೋಂಕು ಹರಡಬಲ್ಲದು ಎಂದು ಬ್ರಿಟನ್‌ನ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಇದುವರೆಗೆ ಕೋವಿಡ್‌–19 ಉಂಟು ಮಾಡುವ ಸಾರ್ಸ್‌ ಕೋವ್‌–2 ವೈರಾಣು ಮಕ್ಕಳಲ್ಲಿ ಅಷ್ಟು ಸುಲಭವಾಗಿ ಸೋಂಕು ಉಂಟು ಮಾಡುತ್ತಿರಲಿಲ್ಲ. ಶೇ 1–5ರಷ್ಟು ಮಕ್ಕಳಲ್ಲಿ ಕೋವಿಡ್‌–19 ಪತ್ತೆಯಾಗಿತ್ತು ಎಂದು ಈ ಹಿಂದಿನ ಅಧ್ಯಯನಗಳು ಹೇಳಿದ್ದವು. ಹಾಗೆಯೇ ಮಕ್ಕಳಲ್ಲಿ ಹೆಚ್ಚು ಕಡಿಮೆ ಈ ಸೋಂಕು ಲಕ್ಷಣರಹಿತವಾಗಿತ್ತು. ಆದರೆ ರೂಪಾಂತರಗೊಂಡ ಕೊರೊನಾ ವೈರಸ್‌ ಮಕ್ಕಳಲ್ಲಿ ವೇಗವಾಗಿ ಹಬ್ಬುತ್ತದೆ ಎಂಬುದನ್ನು ಅಂಕಿ– ಅಂಶಗಳು ದೃಢಪಡಿಸಿವೆ ಎಂದು ಸಂಶೋಧಕರು ಹೇಳಿದ್ದಾರೆ.

ರೂಪಾಂತರಗೊಂಡ ಈ ವೈರಾಣು ವಿಯುಐ – 202012/01 (ವೇರಿ ಯೆಂಟ್‌ ಅಂಡರ್‌ ಇನ್‌ವೆಸ್ಟಿಗೇಶನ್‌) ಬ್ರಿಟನ್‌ನಲ್ಲಿ ಸೋಂಕು ಉಂಟು ಮಾಡಿರುವುದನ್ನು ಗಮನಿಸಿದರೆ, ಚಿಕ್ಕ ಮಕ್ಕಳಿಗೂ ಹರಡಿರುವುದು ಗೊತ್ತಾಗಿದೆ. ಇದನ್ನು ಕೋವಿಡ್‌ ಕುರಿತಂತೆ ಅಲ್ಲಿಯ ಸರ್ಕಾರ ರಚಿಸಿರುವ ಸಲಹಾ ಸಮಿತಿಯ ವಿಜ್ಞಾನಿ ಪ್ರೊ. ನೀಲ್‌ ಫರ್ಗೂಸನ್‌ ಅವರು ಲಂಡನ್‌ನ ಇಂಪೀರಿಯಲ್‌ ಕಾಲೇಜ್‌ ಹೊರತಂದಿರುವ ಜರ್ನಲ್‌ನಲ್ಲಿ ಪ್ರಕಟವಾದ ವರದಿಯಲ್ಲಿ ಹೇಳಿದ್ದಾರೆ.

ಇದುವರೆಗೆ ಈ ರೂಪಾಂತರಗೊಂಡ ವೈರಸ್‌ ಸೋಂಕು ತಗಲಿದ ಮಕ್ಕಳಲ್ಲಿ ಯಾರೂ ಮೃತಪಟ್ಟ ಬಗ್ಗೆ ವರದಿಯಾಗಿಲ್ಲ. ಆದರೆ ಮೊದಲಿಗಿಂತ ಹೆಚ್ಚಿನ ಮಕ್ಕಳಿಗೆ ಸೋಂಕು ತಗಲಿದ್ದು, ಸಾರ್ಸ್‌ ಕೋವ್‌–2 ವೈರಸ್‌ಗೂ ರೂಪಾಂತರಗೊಂಡ ವೈರಸ್‌ಗೂ ಇರುವ ವ್ಯತ್ಯಾಸ ಗೊತ್ತಾಗುತ್ತಿದೆ. ಕಳೆದ 5–6 ವಾರಗಳ ಅವಧಿಯಲ್ಲಿ ಈ ಬದಲಾವಣೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಈ ರೂಪಾಂತರಗೊಂಡ ವೈರಸ್‌ ಮಕ್ಕಳ ಮೇಲೇ ಹೆಚ್ಚು ದಾಳಿ ನಡೆಸುತ್ತದೆ ಎಂದು ತಿಳಿಯಬೇಕಾಗಿಲ್ಲ. ಆದರೆ ಮಕ್ಕಳಿಗೂ ಇದು ತಗಲುವ ಸಾಧ್ಯತೆ ಅಧಿಕವಾಗಿದ್ದು, ಪೋಷಕರು ಎಚ್ಚರ ವಹಿಸಬೇಕಾಗಿದೆ ಎಂದು ಲಂಡನ್‌ ಇಂಪೀರಿಯಲ್‌ ಕಾಲೇಜ್‌ನ ಸಾಂಕ್ರಾಮಿಕ ಕಾಯಿಲೆ ವಿಭಾಗದ ಪ್ರಾಧ್ಯಾಪಕಿ ಪ್ರೊ. ವೆಂಡಿ ಬಾರ್‌ಕ್ಲೇ ಕೂಡ ಸಲಹೆ ನೀಡಿದ್ದಾರೆ. ಸಾರ್ಸ್‌ ಕೋವ್‌–2 ವೈರಸ್‌ ವಯಸ್ಕರಿಗೆ ಸೋಂಕು ಹರಡಿದಷ್ಟು ಮಕ್ಕಳಲ್ಲಿ ಹರಡಲು ಶಕ್ತವಾಗಿರಲಿಲ್ಲ ಎಂದು ಅವರು ಪ್ರಸ್ತಾಪಿಸಿದ್ದಾರೆ. ಕಠಿಣ ನಿಯಮಗಳನ್ನು ಜಾರಿಗೊಳಿಸಿದರೆ ಸಂಪರ್ಕಿತರ ಸಂಖ್ಯೆಯನ್ನು ಸೀಮಿತಗೊಳಿಸಬಹುದು ಎಂದು ಇತರ ದೇಶಗಳಿಗೂ ಬ್ರಿಟನ್‌ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT