ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಒಂದಷ್ಟು ತಿಳಿದುಕೊಳ್ಳೊಣ: ಅಸ್ವಸ್ಥರಿಗೆ ಪ್ಲಾಸ್ಮಾ ಥೆರಪಿ

Last Updated 15 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ಗಂಭೀರವಾಗಿ ಅಸ್ವಸ್ಥರಾದ ಕೊರೊನಾ ಸೋಂಕಿತರ ಚೇತರಿಕೆಗೆ ಪ್ಲಾಸ್ಮಾ ಥೆರಪಿ ಸಹಕಾರಿ. ಕಾಯಿಲೆಯಿಂದ ಗುಣಮುಖರಾದವರು ಪ್ಲಾಸ್ಮಾ ದಾನಮಾಡಲು ಮುಂದಾಗಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ರಾಜ್ಯ ಸರ್ಕಾರವು ಡ್ರಗ್‌ ಕಂಟ್ರೋಲರ್ ಜನರಲ್ ಆಫ್‌ ಇಂಡಿಯಾ (ಡಿಸಿಜಿಐ) ಅನುಮತಿ ಪಡೆದು, ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯಲ್ಲಿ (ಬಿಎಂಸಿಆರ್‌ಐ) ಕಳೆದ ಏಪ್ರಿಲ್ 25ಕ್ಕೆ ಪ್ಲಾಸ್ಮಾ ಥೆರಪಿಗೆ ಚಾಲನೆ ನೀಡಿತ್ತು. ಗಂಭೀರವಾಗಿ ಅಸ್ವಸ್ಥರಾಗಿ, ತೀವ್ರ ನಿಗಾ ಘಟಕದಲ್ಲಿರುವವರಿಗೆ (ಐಸಿಯು) ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಈ ಥೆರಪಿ ಮಾಡಲಾಗುತ್ತಿದೆ. ಸದ್ಯ 850ಕ್ಕೂ ಅಧಿಕ ರೋಗಿಗಳು ಐಸಿಯುನಲ್ಲಿ ಇದ್ದಾರೆ.

ಪ್ಲಾಸ್ಮಾ ದಾನ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ದಾನಿಗಳಿಗೆ ಪೌಷ್ಠಿಕಾಂಶದ ಭತ್ಯೆಯಾಗಿ ತಲಾ ₹ 5 ಸಾವಿರ ಘೋಷಿಸಿದೆ. ಕೋವಿಡ್‌ನಿಂದ ಚೇತರಿಸಿಕೊಂಡವರು ದಾನ ಮಾಡುವ ರಕ್ತದಿಂದ ಪ್ಲಾಸ್ಮಾವನ್ನು ಪ್ರತ್ಯೇಕಿಸಲು ಆರೋಗ್ಯ ಇಲಾಖೆಯು ಒಂದು ಯೂನಿಟ್‌ಗೆ ₹ 7,500 ದರ ನಿಗದಿಪಡಿಸಿದೆ.

‘ರಕ್ತದಲ್ಲಿ ಸಮಾನವಾಗಿ ಕೋಶ ಮತ್ತು ರಸಗಳು (ಪ್ಲಾಸ್ಮಾ) ಇರುತ್ತವೆ. ರೋಗದಿಂದ ಗುಣಮುಖರಾದವರ ದುಗ್ಧ ರಸದಲ್ಲಿ ಇರುವ ಪ್ರತಿರೋಧ ಕಣಗಳನ್ನು ತೆಗೆದುಕೊಂಡು, ರೋಗದಿಂದ ಬಳಲುತ್ತಿರುವ ವ್ಯಕ್ತಿಯ ರಕ್ತಕ್ಕೆ ಸೇರಿಸಲಾಗುತ್ತದೆ. ಈ ಪ್ರತಿರೋಧ ಕಣಗಳು ಕೊರೊನಾ ವೈರಾಣುವಿನ ಮೇಲೆ ದಾಳಿ ನಡೆಸುವ ಗುಣಗಳನ್ನು ಬೆಳೆಸಿಕೊಂಡಿರುತ್ತದೆ. ಈಗಾಗಲೇ ಗುಣಮುಖರಾದ ಬಹುತೇಕ ಎಲ್ಲರಲ್ಲಿಯೂ ಪ್ರತಿರೋಧ ಕಣಗಳು ವೃದ್ಧಿಯಾಗಿವೆ. ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದಲ್ಲಿ ಪ್ಲಾಸ್ಮಾ ಥೆರಪಿಯ ಮೂಲಕ ಸಾವಿನ ಪ್ರಮಾಣವನ್ನು ಗಣನೀಯವಾಗಿ ಇಳಿಕೆ ಮಾಡಲು ಶ್ರಮಿಸಬಹುದು’ ಎಂದು ಕ್ಯಾನ್ಸರ್ ತಜ್ಞ ಹಾಗೂ ಎಚ್‌ಸಿಜಿ ಆಸ್ಪತ್ರೆಯ ಪ್ಲಾಸ್ಮಾ ಬ್ಯಾಂಕ್‌ನ ಮುಖ್ಯಸ್ಥ ಡಾ. ವಿಶಾಲ್ ರಾವ್ ತಿಳಿಸಿದ್ದಾರೆ.

‘ಸೋಂಕಿನಿಂದ ಗುಣಮುಖರಾದವರು ಅಪಾಯದಲ್ಲಿರುವ ರೋಗಿಗಳಿಗೆ ನೆರವಾಗಬೇಕು. ವಿಶ್ವದ ವಿವಿಧೆಡೆ ನಡೆಸಲಾಗಿರುವ ಅಧ್ಯಯನಗಳಲ್ಲಿ ಪ್ಲಾಸ್ಮಾ ಥೆರಪಿ ಉತ್ತಮ ಫಲಿತಾಂಶ ನೀಡಲಿದೆ ಎಂಬುದು ಸಾಬೀತಾಗಿದೆ. ಗುಣಮುಖರಾಗಿರುವ ವ್ಯಕ್ತಿಗಳು 2 ವಾರಗಳ ಅಂತರದಲ್ಲಿ ಕನಿಷ್ಠ ಇಬ್ಬರು ಅಥವಾ ಮೂವರಿಗೆ ಪ್ಲಾಸ್ಮಾ ನೆರವು ನೀಡಬಹುದಾಗಿದೆ. ದಾನಿಗಳಿಗೆ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ. ಒಂದು ಗಂಟೆಯಲ್ಲಿ ವ್ಯಕ್ತಿಯು ಪ್ಲಾಸ್ಮಾ ನೀಡಿ, ಮನೆಗೆ ತೆರಳಬಹುದು’ ಎಂದರು.

ದಾನಿಗೆ ಇರಬೇಕಾದ ಆರೋಗ್ಯ ಲಕ್ಷಣಗಳು

*ಆಸ್ಪತ್ರೆಯಿಂದ ಮನೆಗೆ ತೆರಳಿ 14ರಿಂದ 28 ದಿನಗಳು ಆಗಿರಬೇಕು

*ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣ ಶೇ 12.5ರಷ್ಟು ಇರಬೇಕು

*ದೇಹದ ತೂಕ 50 ಕೆ.ಜಿಗಿಂತ ಅಧಿಕ ಇರಬೇಕು

*18ರಿಂದ 60 ವರ್ಷದೊಳಗಿನವರಾಗಿರಬೇಕು

*ಅನಾರೋಗ್ಯ ಸಮಸ್ಯೆಗಳು ಇರಬಾರದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT