ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World No Tobacco Day | ಧೂಮಪಾನ ಎಂಬ ವಿಷಪಾನ: ತ್ಯಜಿಸಲು ನೂರಾರು ಕಾರಣ

ವಿಶ್ವ ತಂಬಾಕು ರಹಿತ ದಿನ -ಮೇ 31
Last Updated 31 ಮೇ 2021, 3:31 IST
ಅಕ್ಷರ ಗಾತ್ರ

ನಾಳೆ (ಮೇ 31) ವಿಶ್ವ ತಂಬಾಕು ರಹಿತ ದಿನ. ‘ಜೀವನ ಜಯಿಸಲು ತಂಬಾಕು ತ್ಯಜಿಸಿ’ (quit tobacco to be a winner) ಈ ಬಾರಿಯ ಘೋಷವಾಕ್ಯ. ಹಿಂದೆಂದಿಗಿಂತಲೂ ಈ ಬಾರಿಯ ಘೋಷವಾಕ್ಯ ಹೆಚ್ಚು ಅರ್ಥಪೂರ್ಣವಾಗಿದೆ. ಇಂದಿನ ಕೋವಿಡ್‌ ಸನ್ನಿವೇಶದಲ್ಲಿ ಧೂಮಪಾನ ಮತ್ತು ತಂಬಾಕು ಸೇವನೆಯಿಂದ ಮುಕ್ತಿ ಪಡೆಯುವುದು ಬಹಳ ಅಗತ್ಯ ಮತ್ತು ಅನಿವಾರ್ಯ ಕ್ರಮವಾಗಿದೆ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ. ಅಷ್ಟೆ ಅಲ್ಲ, ಧೂಮಪಾನ ಮತ್ತು ತಂಬಾಕು ಸೇವನೆಯನ್ನು ತ್ಯಜಿಸಲು ನೂರಾರು ಕಾರಣ, ಅಂತಹ ಹಲವು ಕಾರಣಗಳನ್ನು ಅದು ತನ್ನ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಿದೆ.

ಇಂತಹ ಚಟಗಳಿಗೆ ದಾಸರಾಗುವುದು ಬಹಳ ಸುಲಭ, ಮುಕ್ತಿ ಪಡೆಯುವುದು ಅಷ್ಟೆ ಕಠಿಣ. ಆದರೆ ಅಸಾಧ್ಯವೇನೂ ಅಲ್ಲ. ವಿಶ್ವಾದ್ಯಂತ ಸುಮಾರು 78 ಕೋಟಿ (780 ಮಿಲಿಯನ್) ಜನರು ಈ ಚಟಗಳನ್ನು ತ್ಯಜಿಸಬೇಕೆಂದು ಬಯಸುತ್ತಾರೆ, ಆದರೆ ಅವರಲ್ಲಿ ಕೇವಲ ಶೇ30ರಷ್ಟು ಜನರಿಗೆ ಮಾತ್ರ ಅದು ಸಾಧ್ಯವಾಗುತ್ತದೆ. ಸಾಂಕ್ರಾಮಿಕ ರೋಗದ ಪರಿಣಾಮ ಮಾನಸಿಕ, ಸಾಮಾಜಿಕ ಮತ್ತು ಆರ್ಥಿಕ ಒತ್ತಡದಿಂದಾಗಿ, ಈ ಚಟಕ್ಕೆ ಸೇರ್ಪಡೆಗೊಳ್ಳುವವರ ಸಂಖ್ಯೆ ಹೆಚ್ಚಿದೆ. ಇದರಿಂದ ಹೊರಬರಬೇಕು ಎಂದು ಬಯಸುವವರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ಅವರಿಂದ ಸಾಧ್ಯವಾಗುತ್ತಿಲ್ಲ. ಅಂಥವರಿಗಾಗಿ ವಿಶ್ವ ಆರೋಗ್ಯ ಸಂಸ್ಥೆ ಒಂದು ವರ್ಷದ ಅಭಿಯಾನವನ್ನು ಆರಂಭಿಸಿದೆ.

ಇದನ್ನು ತ್ಯಜಿಸಬೇಕೆಂದು ನೀವು ದೃಢ ಸಂಕಲ್ಪ ಮಾಡಿದ್ದೇ ಆದರೆ ನಿಮ್ಮ ಬದುಕಿಗೆ, ನಿಮ್ಮ ಪ್ರೀತಿ ಪಾತ್ರರಿಗೆ, ನಿಮ್ಮ ಸಮಾಜಕ್ಕೆ, ಈ ಭೂಮಂಡಲಕ್ಕೆ ನಿಮ್ಮಿಂದ ಎಷ್ಟು ದೊಡ್ಡ ಉಪಕಾರವಾಗುತ್ತದೆ ಎನ್ನುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಒತ್ತಿ ಹೇಳಿದೆ. ಅದರಿಂದ ಉಂಟಾಗುವ ಲಾಭಗಳನ್ನು ಅದು ಪಟ್ಟಿ ಮಾಡಿದೆ. ಆ ಕೆಲವು ಕಾರಣಗಳು ಹೀಗಿವೆ:

ಇಂದೇ ನೀವು ಧೂಮಪಾನ ಮತ್ತು ತಂಬಾಕು ಸೇವನೆಯನ್ನು ತ್ಯಜಿಸುವ ಸಂಕಲ್ಪ ಮಾಡಿ ಏಕೆಂದರೆ–

* ಧೂಮಪಾನ ತ್ಯಜಿಸಿದ ಕೇವಲ 20 ನಿಮಿಷದಲ್ಲಿಯೇ ಆರೋಗ್ಯ ಲಾಭಗಳನ್ನು ಗುರುತಿಸಬಹುದು. 20 ನಿಮಿಷಗಳಲ್ಲಿ, ಹೃದಯ ಬಡಿತ ಮತ್ತು ರಕ್ತದೊತ್ತಡ ಸಾಮಾನ್ಯ ಸ್ಥಿತಿಗೆ ಬರುತ್ತದೆ.

* 12 ಗಂಟೆಗಳಲ್ಲಿ, ರಕ್ತದಲ್ಲಿನ ಇಂಗಾಲದ ಮೊನಾಕ್ಸೈಡ್ ಮಟ್ಟವು ಸಾಮಾನ್ಯ ಸ್ಥಿತಿಗೆ ಬರುತ್ತದೆ.

* 2ರಿಂದ 12 ವಾರಗಳಲ್ಲಿ, ರಕ್ತಪರಿಚಲನೆಯು ಸುಧಾರಿಸುತ್ತದೆ ಮತ್ತು ಶ್ವಾಸಕೋಶದ ಕಾರ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.

* 1ರಿಂದ 9 ತಿಂಗಳ ಒಳಗೆ, ಕೆಮ್ಮು ಮತ್ತು ಉಸಿರಾಟದ ತೊಂದರೆ ಕಡಿಮೆಯಾಗುತ್ತದೆ.

* 1 ವರ್ಷದ ಒಳಗೆ, ಹೃದಯ ಕಾಯಿಲೆಯ ಅಪಾಯ ಅರ್ಧದಷ್ಟು ತಗ್ಗುತ್ತದೆ.

* 5 ವರ್ಷದ ಒಳಗೆ, ಪಾರ್ಶ್ವವಾಯು ಅಪಾಯವು ಕಡಿಮೆಯಾಗುತ್ತದೆ.

* 10 ವರ್ಷಗಳ ಒಳಗೆ, ಶ್ವಾಸಕೋಶದ ಕ್ಯಾನ್ಸರ್ ಅಪಾಯ ಅರ್ಧದಷ್ಟು ಕಡಿಮೆಯಾಗುತ್ತದೆ ಮತ್ತು ಬಾಯಿ, ಗಂಟಲು, ಅನ್ನನಾಳ, ಗರ್ಭಕಂಠ ಮತ್ತು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಅಪಾಯವೂ ಕಡಿಮೆಯಾಗುತ್ತದೆ.

ಇದಷ್ಟೆ ಅಲ್ಲ, ಧೂಮಪಾನಿಗಳು ಕೋವಿಡ್‌ಗೆ ಗುರಿಯಾಗುವ ಅಪಾಯ ಹೆಚ್ಚು. ಧೂಮಪಾನಿಗಳು ಕೋವಿಡ್‌ನ ತೀವ್ರವಾದ ದಾಳಿಗೆ ಒಳಗಾಗು ಸಾಧ್ಯತೆ ಹೆಚ್ಚು ಮತ್ತು ಸಾವಿನ ಅಪಾಯವೂ ಅಧಿಕ ಎಂದುಡಬ್ಲ್ಯುಎಚ್‌ಒ ಎಚ್ಚರಿಸಿದೆ. ತಂಬಾಕು ಸೇವಿಸುವವರು ಇತರರಿಗಿಂತ 10 ವರ್ಷ ಮುಂಚೆ ಸಾವನ್ನಪ್ಪುತ್ತಾರೆ. ಅವರ ಜೀವನದ ಗುಣಮಟ್ಟವೂ ಸಹ ಕಳಪೆಯಾಗಿರುತ್ತದೆ. ಅವರು ಇತರರಿಗಿಂತ ಹೆಚ್ಚು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ತಂಬಾಕು ಸಾಂಕ್ರಾಮಿಕ ರೋಗಗಕ್ಕಿಂತ ಭೀಕರವಾಗಿದ್ದು, ವಿಶ್ವ ಎದುರಿಸುತ್ತಿರುವ ಅತಿದೊಡ್ಡ ಸಾರ್ವಜನಿಕ ಆರೋಗ್ಯ ಅಪಾಯಗಳಲ್ಲಿ ಒಂದಾಗಿದೆ.

ಹೊಸ ಪರಿಹಾರ ಹುಡುಕಬೇಕು
‘ಇಷ್ಟು ದಿನ ಧೂಮಪಾನ ಮುಕ್ತ ಭಾರತಕ್ಕಾಗಿ ನಾವೆಲ್ಲಾ ಪ್ರಯತ್ನಿಸಿದ್ದಾಗಿದೆ. ಈಗ ಧೂಮಪಾನ ನಿಷೇಧಿಸುವ ಸಮಗ್ರ ವಿಧಾನದ ಅಗತ್ಯವನ್ನು ಅರಿತುಕೊಳ್ಳುವ ಸಮಯ ಬಂದಿದೆ. ಅಷ್ಟೆ ಅಲ್ಲ, ವಿಜ್ಞಾನ ಮತ್ತು ಸಂಶೋಧನೆಯ ಅಡಿಪಾಯದಲ್ಲಿ ಕಡಿಮೆ ಅಪಾಯಕಾರಿ ಉತ್ಪನ್ನಗಳ ಅಗತ್ಯವನ್ನು ಈಗ ಹೆಚ್ಚು ಗಂಭೀರವಾಗಿ ಪರಿಗಣಿಸಬೇಕಿದೆ’ ಎನ್ನುತ್ತಾರೆ ವಿಶ್ವ ತಂಬಾಕು ರಹಿತ ದಿನದ ಸಂದರ್ಭದಲ್ಲಿ ‘ಧೂಮಪಾನ ಮುಕ್ತ ಪೀಳಿಗೆ’ ಆಂದೋಲನದ ಉಪೇಂದ್ರನಾಥ್ ಶರ್ಮಾ.

‘ಗ್ಲೋಬಲ್‌ ಅಡಲ್ಟ್ಸ್‌ ಟೊಬ್ಯಾಕೊ ಸರ್ವೆ (GATS2) ಪ್ರಕಾರ, ಭಾರತವು 27 ಕೋಟಿಗೂ (270 ಮಿಲಿಯನ್‌) ಹೆಚ್ಚು ತಂಬಾಕು ಬಳಕೆದಾರರ ನೆಲೆಯಾಗಿದೆ, ಜಗತ್ತಿನಲ್ಲಿ ತಂಬಾಕು ಉತ್ಪನ್ನಗಳ ಉತ್ಪಾದನೆ ಮತ್ತು ಉಪಯೋಗದಲ್ಲಿ ಎರಡನೇ ಅತಿದೊಡ್ಡ ರಾಷ್ಟ್ರವಾಗಿದೆ. ತಂಬಾಕು / ಧೂಮಪಾನದ ಬಗ್ಗೆ ಕಠಿಣ ನಿಯಮಗಳಿದ್ದರೂ ಸಹ, ಭಾರತದಲ್ಲಿ ಧೂಮಪಾನಿಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆ ಆಗಿಲ್ಲ. ಭಾರತದಲ್ಲಿ ಅಕಾಲಿಕ ಮರಣ ಮತ್ತು ಅಸ್ವಸ್ಥತೆಗೆ ಧೂಮಪಾನ ಈಗಲೂ ಒಂದು ದೊಡ್ಡ ಕಾರಣವಾಗಿದೆ. ಅದರಲ್ಲೂ ಕೊರೊನಾ ಸಂದರ್ಭ ಈ ಸ್ಥಿತಿಯನ್ನು ಇನ್ನಷ್ಟು ಜಟಿಲಗೊಳಿಸಿದೆ. ಇಂತಹ ಸಂದರ್ಭದಲ್ಲಿ ನಾವು ಹೊಸ ಸಾಧ್ಯತೆಗಳ ಬಗ್ಗೆ ಆಲೋಚಿಸಬೇಕು’ ಎನ್ನುತ್ತಾರೆ ಅವರು.

–ಉಪೇಂದ್ರನಾಥ್ ಶರ್ಮಾ
–ಉಪೇಂದ್ರನಾಥ್ ಶರ್ಮಾ

ವಾತಾವರಣದಿಂದಲೂ ಆರೋಗ್ಯ ಸಮಸ್ಯೆ!
ತಂಬಾಕು ಸೇವಿಸುವವರಿಗೆ ಮಾತ್ರ ಅಪಾಯ, ನಮಗೇನೂ ತೊಂದರೆ ಇಲ್ಲ ಎಂದು ಇತರರು ಸಮಾಧಾನ ಪಡುವಂತಿಲ್ಲ. ವಿಶ್ವದಾದ್ಯಂತ ಪ್ರತಿವರ್ಷ ಸುಮಾರು 12 ಲಕ್ಷ (1.2 ಮಿಲಿಯನ್) ಜನರು ಇನ್ನೊಬ್ಬರು ಮಾಡುವ ತಪ್ಪಿಗೆ ಬೆಲೆ ತೆತ್ತವರಾಗಿರುತ್ತಾರೆ. ಅಂದರೆ ಇವರು ನೇರವಾಗಿ ಧೂಮಪಾನಿಗಳಲ್ಲ, ಆದರೆ ಧೂಮಪಾನಿಗಳ ಸಂಪರ್ಕಕ್ಕೆ ಒಳಗಾದವರು. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಹೊಗೆಯಿಂದ ಕಲುಷಿತವಾದ ಗಾಳಿಯನ್ನು ಉಸಿರಾಡುವ ಸುಮಾರು 65,000 ಮಕ್ಕಳು ಪ್ರತಿ ವರ್ಷ ಜೀವಕಳೆದುಕೊಳ್ಳುತ್ತಾರೆ.

ತಂಬಾಕು ಸೇವನೆ ಮಾತ್ರವಲ್ಲ, ತಂಬಾಕು ಬೆಳೆಗಾರರೂ ಸಹ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಾರೆ. ಅದನ್ನು "green tobacco sickness" ಎಂದು ಕರೆಯಲಾಗುತ್ತದೆ. ಹಿಂದುಳಿದ ದೇಶಗಳ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ತಂಬಾಕು ಹೊಲಗಳಲ್ಲಿ ಕೆಲಸ ಮಾಡುತ್ತಾರೆ. ಅಂಥವರು ಅನಾರೋಗ್ಯಕ್ಕೆ ಗುರಿಯಾಗುವ ಸಾಧ್ಯತೆ ಅಧಿಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT