ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ರಾಂತಿ ಎಂದರೆ ಸೋಮಾರಿತನವಲ್ಲ

Last Updated 14 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

‘ವಿಶ್ರಾಂತಿ’ ಎನ್ನುವುದು ‘ಕೆಲಸ’ ಎಂಬುದರ ವಿರುದ್ಧಪದ ಎಂಬ ಭಾವನೆ ನಮ್ಮದು. ಕೆಲವೊಮ್ಮೆ ವಿಶ್ರಾಂತಿ ಎನ್ನುವ ಪದ ನಿದ್ರೆಗೆ ಸಮಾನಾರ್ಥವಾಗಿ ಬಳಕೆಯಾಗುತ್ತದೆ.

ಜಾಗತಿಕ ವಿಪತ್ತಿನ ಮೂಲಕ ಹಾದು ಹೋಗುತ್ತಿರುವ ಕಾಲಘಟ್ಟದಲ್ಲಿ ಮಾಹಿತಿಯ ಮಹಾಸ್ಫೋಟ ಮತ್ತು ಅನೂಹ್ಯದ ಆತಂಕಗಳು ಸೇರಿ ಮೈ-ಮನಸ್ಸುಗಳನ್ನು ಅನೇಕ ಸಮಸ್ಯೆಗಳಿಗೆ ಒಡ್ಡುತ್ತಿವೆ. ಇದರಿಂದ ಚೇತರಿಸಿಕೊಳ್ಳಲು ವಿಶ್ರಾಂತಿ ಅತ್ಯಗತ್ಯ. ಆದರೆ, ‘ವಿಶ್ರಾಂತಿ’ ಎಂದರೇನು? ಕೆಲಸ ಮಾಡದೇ ಜಡವಾಗಿ ಇರುವುದೇ? ಹೆಚ್ಚು ಕಾಲ ಮಲಗುವುದೇ? ಗಂಟೆಗಟ್ಟಲೇ, ಬುದ್ಧಿಗೆ ಹೆಚ್ಚು ಕೆಲಸ ಕೊಡದೆ ಏನನ್ನೋ ನೋಡುತ್ತಾ ಕಾಲ ಹಾಕುವುದೇ? ವಿಶ್ರಾಂತಿಯನ್ನು ಅರ್ಥಪೂರ್ಣವಾಗಿ ಸಾಧಿಸುವುದು ಹೇಗೆ?

‘ವಿಶ್ರಾಂತಿ’ ಎನ್ನುವುದು ‘ಕೆಲಸ’ ಎಂಬುದರ ವಿರುದ್ಧಪದ ಎಂಬ ಭಾವನೆ ನಮ್ಮಲ್ಲಿದೆ. ಕೆಲವೊಮ್ಮೆ ವಿಶ್ರಾಂತಿ ಎನ್ನುವ ಪದ ನಿದ್ರೆಗೆ ಸಮಾನಾರ್ಥವಾಗಿ ಬಳಕೆಯಾಗುತ್ತದೆ. ವೈಜ್ಞಾನಿಕವಾಗಿ ವಿಶ್ರಾಂತಿಯನ್ನು ಮೂರು ಆಯಾಮಗಳಿಂದ ಗ್ರಹಿಸಬಹುದು. ಭೌತಿಕ ವಿಶ್ರಾಂತಿಯೆಂದರೆ ಶರೀರದ ಚಲನೆಯನ್ನು ಸಾಧ್ಯವಾದಷ್ಟೂ ಕಡಿತಗೊಳಿಸುವುದು. ದೇಹದಲ್ಲಿ ಶಕ್ತಿಯ ಪ್ರಮಾಣ ಕಡಿಮೆಯಾದಾಗ ಭೌತಿಕ ವಿಶ್ರಾಂತಿಯಿಂದ ಶರೀರಕ್ಕೆ ಚೈತನ್ಯದ ಮರುಪೂರಣವಾಗುತ್ತದೆ. ಮಾನಸಿಕ/ಭಾವನಾತ್ಮಕ ವಿಶ್ರಾಂತಿಯೆಂದರೆ ಚಿಂತೆ, ಆತಂಕ, ಸಮಸ್ಯೆಗಳ ಸಿಕ್ಕಿನಲ್ಲಿ ಸಿಲುಕಿದ ಬುದ್ಧಿ-ಮನಸ್ಸುಗಳ ಚೇತರಿಕೆಗಾಗಿ ನೀಡುವ ಸಮಯಾವಕಾಶ. ಭೌತಿಕ ವಿಶ್ರಾಂತಿಗಿಂತ ಇದು ಸ್ವಲ್ಪ ಕಠಿಣ. ಆಧ್ಯಾತ್ಮಿಕ ವಿಶ್ರಾಂತಿಯೆಂದರೆ ಜಂಜಾಟದಲ್ಲಿ ನಿರತವಾಗಿರುವ ಅತೃಪ್ತ ಮೆದುಳಿಗೆ ಶಾಂತಿ-ನೆಮ್ಮದಿಗಳ ಹಾದಿ ತೋರುವ ಪ್ರಯತ್ನ. ಈ ಮೂರೂ ಆಯಾಮಗಳು ವಿಶ್ರಾಂತಿಯ ಅಂಗಗಳು ಎಂದು ತಜ್ಞರ ಅಭಿಪ್ರಾಯ.

ಪ್ರಾಯೋಗಿಕವಾಗಿ ವಿಶ್ರಾಂತಿಯನ್ನು ಸಾಧಿಸಲು ಮನಸ್ಸು-ಬುದ್ಧಿಗಳ ಸಹಕಾರ ಅಗತ್ಯ. ಒಂದೇ ಸಮನೆ ಕೆಲಸ ಮಾಡುವುದರಿಂದ ಸುಸ್ತಿನ ಭಾವ ಆವರಿಸುತ್ತದೆ. ಮಾಡುವ ಕೆಲಸದಿಂದ ಆಗಾಗ ಬಿಡುವು ಪಡೆದು, ಕೆಲವು ನಿಮಿಷಗಳ ಕಾಲ ಮನಸ್ಸನ್ನು ಬೇರೆಡೆಗೆ ಹರಿಸಬೇಕು. ಒಂದು ಕೆಲಸದಿಂದ ಮತ್ತೊಂದು ಕೆಲಸಕ್ಕೆ ಜಿಗಿದರೆ ವಿಶ್ರಾಂತಿ ಸಿಗುವುದಿಲ್ಲ. ದೇಹಕ್ಕೆ ಉಲ್ಲಾಸ ನೀಡುವಂತಹ, ಬುದ್ಧಿಗೆ ಕಸರತ್ತು ನೀಡದಂತಹ ಕ್ರಿಯೆಗೆ ಒಡ್ಡಿಕೊಳ್ಳಬೇಕು. ಕೆಲಸದ ತಾಣದಿಂದ ಕೆಲವು ನಿಮಿಷಗಳ ಕಾಲ ಹೊರಬಂದು ಸಣ್ಣದೊಂದು ನಡಿಗೆ ಮಾಡುವುದು; ಕಿಟಕಿಯ ಬಳಿ ಬಂದು ಕೆಲಬಾರಿ ದೀರ್ಘಶ್ವಾಸ ತೆಗೆದುಕೊಳ್ಳುವುದು; ಇರುವೆಡೆಯಲ್ಲೇ ಕಣ್ಣು ಮುಚ್ಚಿ, ಮನಸ್ಸನ್ನು ಶ್ವಾಸದ ಮೇಲೆ ಕೇಂದ್ರೀಕರಿಸಿ ಉಸಿರಾಡುವುದು – ಇಂತಹ ಸರಳ ವಿಧಾನಗಳಿಂದ ದೇಹ-ಮನಸ್ಸುಗಳೆರಡೂ ವಿಶ್ರಾಂತಿ ಪಡೆಯುತ್ತವೆ.

ಪ್ರತಿದಿನವೂ ನಿರ್ದಿಷ್ಟ ಸಮಯದಲ್ಲಿ ಮಾಡುವ ವ್ಯಾಯಾಮ, ಯೋಗ ಮತ್ತು ಪ್ರಾಣಾಯಾಮಗಳು ದೀರ್ಘಕಾಲಿಕ ಅವಧಿಯಲ್ಲಿ ಮಾನಸಿಕ ವಿಶ್ರಾಂತಿಗೆ ರಹದಾರಿ. ವ್ಯಾಯಾಮದ ಮೂಲಕ ದೇಹದ ಸಹಜ ಬಿಗುವನ್ನು ಸಡಿಲಗೊಳಿಸುವುದರಿಂದ ಶಕ್ತಿಯ ಬಳಕೆ ಕಡಿಮೆಯಾಗುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಇದು ವಿಶ್ರಾಂತಿಗೆ ಸಮನಾದದ್ದು. ಕಾಯಿಲೆಯ ವೇಳೆಯಲ್ಲಿ ದೈಹಿಕ ವ್ಯಾಯಾಮ ಸಾಧ್ಯವಾಗದಿದ್ದರೂ, ಪ್ರಾಣಾಯಾಮವನ್ನು ಮಾಡಬಹುದು. ಇದರಿಂದ ಶರೀರಕ್ಕೆ ಅಗತ್ಯವಾದ ಆಕ್ಸಿಜನ್ ಸರಬರಾಜಾಗಿ, ದೇಹದ ಚೇತರಿಕೆಗೆ ಅನುಕೂಲವಾಗುತ್ತದೆ. ಮನಸ್ಸಿಗೆ ಆಹ್ಲಾದವನ್ನು ನೀಡುವ ಸಣ್ಣ-ಪುಟ್ಟ ಕೆಲಸಗಳೂ ವಿಶ್ರಾಂತಿಯ ಪರಿಭಾಷೆಯಲ್ಲಿಯೇ ಬರುತ್ತವೆ. ಹೂತೋಟದಲ್ಲಿನ ನಿಧಾನನಡಿಗೆ, ಸಾಕುಪ್ರಾಣಿಗಳ ಸ್ಪರ್ಶ, ಅಗರಬತ್ತಿಯ ಸುವಾಸನೆ, ಸೂರ್ಯಾಸ್ತದ ದೃಶ್ಯ, ಹಿತವಾದ ಸಂಗೀತ, ಸೊಗಸಾದ ಪುಸ್ತಕದ ಓದು, ಒಳ್ಳೆಯ ಸ್ನಾನ – ಇವೆಲ್ಲವೂ ಮನಸ್ಸಿಗೆ ಚೇತೋಹಾರಿ.

ಚಿಂತನೆಯ ಅಸ್ಪಷ್ಟತೆ ನಮ್ಮ ದೇಹ-ಮನಸ್ಸುಗಳನ್ನು ದಣಿಸುತ್ತದೆ. ಸಮಸ್ಯೆಗಳನ್ನು ಮನಸ್ಸಿನಲ್ಲೇ ಲೆಕ್ಕಾಚಾರ ಮಾಡುತ್ತಾ, ಇಲ್ಲಸಲ್ಲದ ಪರಿಣಾಮಗಳ ಬಗ್ಗೆ ಆತಂಕಗೊಳ್ಳುತ್ತಾ, ಸಂಜೆಯ ವೇಳೆಗೆ ದಣಿವನ್ನು ಅನುಭವಿಸುವ, ರಾತ್ರಿ ಸರಿಯಾಗಿ ನಿದ್ರೆ ಬಾರದ ಸ್ಥಿತಿಗೆ ತಲುಪುವ ಅನುಭವಗಳು ಬಹುತೇಕ ಎಲ್ಲರದ್ದೂ ಆಗಿರುತ್ತವೆ. ಸಮಸ್ಯೆಗಳನ್ನು ಒಂದೆಡೆ ಬರೆಯುವುದು ಚಿಂತನೆಗಳ ಸ್ಪಷ್ಟತೆಗೆ ಕಾರಣವಾಗುತ್ತದೆ. ಇದರಿಂದ ಮನಸ್ಸು ವಿಶ್ರಾಂತಸ್ಥಿತಿಗೆ ಬರುತ್ತದೆ.

ಸಂಘಜೀವಿಯಾದ ಮನುಷ್ಯನಿಗೆ ತನ್ನ ಆಲೋಚನೆಗಳ ಹಂಚಿಕೆ, ಚರ್ಚೆಗಳಿಗೆ ಸಮಾಜದ ಇತರರ ಸಂಪರ್ಕ ಅಗತ್ಯ. ಆದರೆ, ಕೆಲವು ಕಾರಣಗಳಿಂದ ಭೌತಿಕ ಸಾಂಗತ್ಯ ಸಾಧ್ಯವಾಗುವುದಿಲ್ಲ. ಈ ಕೊರತೆಯ ನಿವಾರಣೆಗೆ ಸಾಮಾಜಿಕ ಜಾಲತಾಣಗಳ ಮೊರೆ ಹೋಗುವುದು ಸಾಮಾನ್ಯವಾಗಿದೆ. ಒಂದು ಹಂತದಲ್ಲಿ ಇದು ಗೀಳಿನ ಮಟ್ಟವನ್ನು ತಲುಪಿ, ಮನ್ನಣೆಯ ದಾಹ ಆವರಿಸುತ್ತದೆ. ತನ್ನನ್ನು ವಿರೋಧಿಸಿದವರ ಜೊತೆ ಅಪ್ರಾಯೋಗಿಕ ವಾದಗಳು ಏರ್ಪಡುತ್ತವೆ. ಇದು ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡುತ್ತದೆ. ಇಂತಹ ಜಾಲತಾಣಗಳಿಂದ ಸ್ವಲ್ಪಕಾಲ ದೂರವಿರುವುದು, ಪ್ರತಿದಿನವೂ ಜಾಲತಾಣಗಳಿಗೆ ನೀಡುವ ಸಮಯವನ್ನು ಮಿತಗೊಳಿಸುವುದು ಕೂಡ ವಿಶ್ರಾಂತಿಯ ಮಾರ್ಗ.

ನಿಸರ್ಗದ ಸಂಪರ್ಕವನ್ನು ಅಧಿಕಗೊಳಿಸುವುದು, ಮಾಡುವ ಕೆಲಸಗಳನ್ನು ಉದ್ವೇಗವಿಲ್ಲದೆ ಮಾಡುವುದು, ಸಾಕಷ್ಟು ನಿದ್ರಿಸುವುದು, ಕಾಫಿಯಂತಹ ಉತ್ತೇಜಕ ಪೇಯಗಳನ್ನು ಕಡಿಮೆ ಸೇವಿಸುವುದು, ಆರೋಗ್ಯಕರ ದಿನಚರಿಗೆ ಬದ್ಧರಾಗುವುದು, ಸ್ನೇಹಿತರ ಜೊತೆಗಿನ ಒಡನಾಟ, ಕುಟುಂಬದ ಜೊತೆಗೆ ಕಾಲ ಕಳೆಯುವುದು – ಇವೆಲ್ಲವೂ ವಿಶ್ರಾಂತಿಯ ಮಾದರಿಗಳೇ.

ವಿಶ್ರಾಂತಿಯೆಂಬುದು ಸೋಮಾರಿತನವಲ್ಲ. ಅದು ಶರೀರ-ಮನಸ್ಸುಗಳನ್ನು ಪುನಶ್ಚೇತನಗೊಳಿಸುವ ದಾರಿ. ‘ವಿಶ್ರಾಂತಿ ತೆಗೆದುಕೊಳ್ಳಿ’ ಎಂಬ ಸಲಹೆಯನ್ನು ‘ನಿಮ್ಮ ಮನಸ್ಸಿಗೆ ಒಪ್ಪುವ ಹಾದಿಯನ್ನು ಅನುಸರಿಸಿ, ಪ್ರಫುಲ್ಲಿತರಾಗಿ’ ಎಂದು ಅರ್ಥೈಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT