ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೋಚನೆ | ಇರುವಂತೆಯೇ ಸ್ವೀಕರಿಸಿ...

Last Updated 6 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಮಧ್ಯರಾತ್ರಿ, ಗಾಢ ಕತ್ತಲು, ಹೊರಗೆ ನಿಶ್ಯಬ್ದ. ಹಗಲಿದ್ದ ಪ್ರಪಂಚವೇ ಸುಳ್ಳೇನೋ ಎನಿಸುವಂತೆ ಎಲ್ಲವೂ ಸ್ತಬ್ಧ. ಜಗವೆಲ್ಲಾ ಸುಖನಿದ್ರೆಯಲ್ಲಿ ಮುಳುಗಿರುವಾಗ ನಾವು ಮಾತ್ರ ನಿದ್ರೆ ಬರದೆ ಚಡಪಡಿಸುತ್ತಿದ್ದೇವೆ. ಹಾಸಿಗೆಯಲ್ಲಿ ಅತ್ತಿಂದಿತ್ತ ಹೊರಳಿ, ಕಣ್ಣನ್ನು ಗಟ್ಟಿಯಾಗಿ ಮುಚ್ಚಿ ‘ನಿದ್ರೆ ಬರಲು ಏನು ಮಾಡಬೇಕು' ಎಂದು ಎಂದೋ ಓದಿದ, ಕೇಳಿದ ಟಿಪ್ಸ್-ಗಳನ್ನೆಲ್ಲಾ ಪ್ರಯೋಗ ಮಾಡುತ್ತೇವೆ. ಸುಮಾರು ಹೊತ್ತು ಪ್ರಯತ್ನಿಸಿದರೂ ನಿದ್ರೆ ಬರದೆ ಹತಾಶರಾಗುತ್ತೇವೆ. ಸಿಟ್ಟು, ದುಃಖ ಒಳಗಿನಿಂದ ಒದ್ದುಕೊಂಡು ಬಂದು ಒಮ್ಮೆ ಚೀರಾಡಿ ರಾತ್ರಿಯ ನೀರವತೆಯನ್ನು ಕದಡಿ ಬಿಡುವಷ್ಟು ಆವೇಶ ಉಂಟಾಗುತ್ತದೆ.

ಸ್ವಲ್ಪ ಸಮಯದ ನಂತರ ಯೋಚಿಸಲು ಶುರುಮಾಡುತ್ತೇವೆ: ಯಾಕೆ ನಿದ್ರೆ ಬರುತ್ತಿಲ್ಲ? ಇಡೀ ದಿನದಲ್ಲಿ ನಾನು ಮಾಡಿದ ಯಾವ ಕೆಲಸ ನಿದ್ರೆಗೆ ಅಡಚಣೆಯಾಯಿತು? ಅಷ್ಟು ಸಮಯ ಸ್ಮಾರ್ಟ್ ಫೋನ್ ನೋಡಿದ್ದೇ, ತಿಂದ ಜಂಕ್ ಫುಡ್ಡಿನದ್ದೇ, ಮಾಡದೇ ಇದ್ದ ವ್ಯಾಯಾಮವೇ, ಮನೆಯಲ್ಲಿ ಆಡಿದ ಜಗಳವೇ? ಯಾವ ಚಿಂತೆ ಕಾಡಿಸುತ್ತಿದೆ ಹೀಗೆ ನಿದ್ರಾಹೀನತೆಯಾಗಿ? ನಾನು ನಿದ್ರೆ ಮಾಡಲೇಬೇಕು, ಮಾಡದಿದ್ದರೆ ನನ್ನ ಆರೋಗ್ಯದ ಗತಿಯೇನು? ಹೀಗೇ ಸಾಗುತ್ತದೆ ನಮ್ಮ ಯೋಚನಾ ಲಹರಿ.

ಇಲ್ಲಿ ನಿದ್ರೆ ಬಾರದೇ ಇರುವುದು ಸಮಸ್ಯೆಯಾ ಅಥವಾ ನಿದ್ರೆ ಬಾರದ ಸ್ಥಿತಿಯ ಬಗೆಗಿನ ನಮ್ಮ ಆಲೋಚನೆ, ಭಾವನೆ- ಇವುಗಳು ಸಮಸ್ಯೆಯಾ? ನಿದ್ರೆ ಬರುತ್ತಿಲ್ಲ ಸರಿ, ಆದರೆ ನಿದ್ರೆ ಬರದ ಸ್ಥಿತಿಯ ಬಗೆಗೆ ಕೋಪ, ನಿದ್ರೆ ಮಾಡಲೇಬೇಕೆಂಬ ಹಠ, ನಿದ್ರೆ ಬರದಿದ್ದರೆ ಎಂಬ ಆತಂಕ, ನಿದ್ರೆ ಬರದೆ ಇರಲು ನಾನು ಮಾಡಿದ/ಮಾಡದ ಯಾವುದೋ ಕೆಲಸವೇ ಕಾರಣ ಎಂಬ ಆತ್ಮನಿಂದನೆ... ಇವೆಲ್ಲಾ ನಿದ್ರೆ ಬರದ ನಮ್ಮ ಸ್ಥಿತಿಯನ್ನು ಮತ್ತಷ್ಟು ಶೋಚನೀಯವಾಗಿಸುತ್ತಿದೆ, ಅಲ್ಲವೇ? ನಿದ್ರೆ ಬರದ ಸ್ಥಿತಿಯ ಬಗೆಗಿನ ಈ ವೇದನೆಯೇ ನಿದ್ರೆಯನ್ನು ಮತ್ತೂ ದೂರಕ್ಕೆ ತಳ್ಳುತ್ತಿರಬಹುದೇ?

ನಿದ್ರಾಹೀನತೆಯಷ್ಟೇ ಅಲ್ಲ, ಬದುಕಿನ ಎಲ್ಲ ಕ್ರಿಯೆ, ಘಟನೆ, ಅನುಭವ, ಭಾವ ಎಲ್ಲವೂ ಹೀಗೇ; ಅದು ಇರುವುದು ಒಂದು ರೀತಿಯಾದರೆ, ನಾವು ನಮ್ಮ ಆಲೋಚನೆಯಲ್ಲಿ, ಭಾವದಲ್ಲಿ ಅದನ್ನು ಇನ್ನೊಂದು ರೀತಿಯಾಗಿ ಚಿತ್ರಿಸಿಕೊಂಡು ಸಂಕಟವನ್ನು ಅನುಭವಿಸುತ್ತೇವೆ. ನಮ್ಮ ದುಃಖಕ್ಕೆ ಘಟನೆ ಕಾರಣವೇ, ಘಟನೆಯ ಕುರಿತಾದ ನಿಲುವು ಕಾರಣವೇ? ಜೀವನದ ವಾಸ್ತವವನ್ನು ಬದಲಿಸುವುದು ಸುಲಭವೇ, ವಾಸ್ತವದ ಕುರಿತಾದ ನಮ್ಮ ಆಲೋಚನೆಯನ್ನು ಬದಲಿಸುವುದು ಸುಲಭವೇ?

ಇನ್ನೊಂದು ಉದಾಹರಣೆಯ ಮೂಲಕ ಇದನ್ನು ನೋಡೋಣ. ನಾನು ಬಲುಬೇಗ ಆತಂಕಕ್ಕೆ ಒಳಗಾಗುವ ಸ್ವಭಾವದ ವ್ಯಕ್ತಿ ಎಂದಿಟ್ಟುಕೊಳ್ಳೋಣ. ನನಗೆ ಆತಂಕ ಇರುವುದರ ಬಗ್ಗೆಯೇ ಅವಮಾನ, ಬೇಸರ ಇದ್ದರೆ, ನಾನು ಈ ಅವಮಾನ ಬೇಸರಗಳು ಆತಂಕವನ್ನು ಹೇಗೆ ಅರ್ಥಮಾಡಿಕೊಂಡು ನಿರ್ವಹಿಸುತ್ತೇನೆ ಎಂಬುದನ್ನು ಪ್ರಭಾವಿಸುತ್ತದೆ. ಆತಂಕದ ಕುರಿತಾಗಿ ನಾನು ಮಾತನಾಡಲು ಹಿಂಜರಿಯುವಂತೆ ಮಾಡುತ್ತದೆ. ಪ್ರತಿಬಾರಿಯೂ ಆತಂಕಕ್ಕೆ ಒಳಗಾದಾಗ ಅದನ್ನು ನಿರ್ವಹಿಸುವುದರ ಜೊತೆಗೇ ಅದರ ಬಗ್ಗೆ ಇರುವ ಅವಮಾನವನ್ನು, ಕೀಳರಿಮೆಯನ್ನೂ ನಿರ್ವಹಿಸಲು ಪರದಾಡಬೇಕಾಗುತ್ತದೆ.

ನಮ್ಮೆಲ್ಲಾ ಭಾವಗಳೂ ಹೀಗೇ, ಅದರ ಕುರಿತಾಗಿ ಮತ್ತೊಂದು ಭಾವವಿರುತ್ತದೆ. ಕೋಪದ ಬಗ್ಗೆ ಭಯ, ಭಯದ ಬಗ್ಗೆ ಕೀಳರಿಮೆ, ದುಃಖದ ಬಗ್ಗೆ ಆತಂಕ, ಹೀಗೆ ಎಲ್ಲ ಭಾವ, ಆಲೋಚನೆ, ಪರಿಸ್ಥಿತಿಯ ಬಗ್ಗೆಯೂ ನಮಗೊಂದು ನಿಲುವು, ಆಗ್ರಹ ಇರುತ್ತದೆ. ‘ನಾನು ಯಾವಾಗಲೂ ಧೈರ್ಯವಾಗೇ ಇರಬೇಕು’, ‘ಭಾವನೆಗಳನ್ನು ತೋರ್ಪಡಿಸಿಕೊಳ್ಳದೆ ಶಾಂತವಾಗಿ ಕಾಣಿಸಿಕೊಂಡರೆ ಮಾತ್ರ ಜನರು ನನ್ನನ್ನು ಗೌರವಿಸುವುದು’ ಇನ್ನೂ ಹೀಗೇ ಕೆಲವೊಂದು. ಇವೆಲ್ಲಾ ನಮ್ಮ ಮೂಲ ಭಾವನೆಗಳ ಬಗೆಗೆ ನಮಗಿರುವ ಭಾವನೆಗಳು (how we feel about what we feel). ಇಂಥ ನಮ್ಮ ಭಾವನೆಯ ಬಗೆಗಿನ ಭಾವವೇ ಅನೇಕ ಬಾರಿ ನಮ್ಮ ಮನಸ್ಸಿನ ಶಾಂತಿಗೆ ತೊಡಕಾಗಿರುತ್ತದೆ. ಹಾಗಿಲ್ಲದೇ ನಮಗೇನು ಅನಿಸುತ್ತಿದೆಯೋ ಅದನ್ನು ಯಾವ ಹಿಂಜರಿಕೆಯಿಲ್ಲದೆ ಸಂಪೂರ್ಣ ಅನುಭವಿಸಲು ಸಾಧ್ಯವಾದರೆ ಹೇಗಿರುತ್ತದೆ? ಉದಾ: ನನಗೆ ಭಯವಾದಾಗ ‘ಭಯಪಡಬಾರದು, ಅದು ದೌರ್ಬಲ್ಯದ ಲಕ್ಷಣ’ ಎಂದು ಹೇಳಿಕೊಂಡು ಅವಮಾನಪಡುತ್ತಾ ಭಯಪಡುತ್ತಿರುವುದನ್ನು ಮರೆಮಾಚಲು ಯತ್ನಿಸುವ ಬದಲು ‘ನನಗೆ ಭಯವಾಗುವುದು ಸಹಜ’ ‘ಭಯಕ್ಕೂ ನನ್ನ ಜೀವನದಲ್ಲಿ ಒಂದು ಸ್ಥಾನವಿರಲಿ’ ಎಂದು ಒಪ್ಪಿಕೊಳ್ಳುತ್ತಾ ಭಯದ ಬಗ್ಗೆ ಸ್ಪಷ್ಟತೆ ಪಡೆಯುತ್ತಾ, ಭಯ ತಾನೇ ತಾನಾಗಿ ಅದರ ತೀವ್ರತೆ ಕಳೆದುಕೊಳ್ಳುವ ತನಕ ಕಾಯುವ ತಾಳ್ಮೆ ಉಂಟಾದರೆ ಹೇಗಿರುತ್ತದೆ? ಸ್ವೀಕಾರಕ್ಕೆ ಇರುವ ಶಕ್ತಿ ಅದು.

ಮತ್ತೆ ನಮ್ಮ ಮೊದಲಿನ ಉದಾಹರಣೆಯಾದ ನಿದ್ರಾಹೀನತೆಯ ಬಗೆಗೆ ಹೇಳುವುದಾದರೆ ನಿದ್ರೆ ಬರದ ಸ್ಥಿತಿಯನ್ನು ಹೇಗಾದರೂ ಬದಲಾಯಿಸಿ ನಿದ್ರೆ ಮಾಡಿಬಿಡಬೇಕೆಂಬ ಆಗ್ರಹ ತೊರೆದು ನಿದ್ರೆ ಮಾಡಲಾಗದ ಸ್ಥಿತಿಯನ್ನೂ ಒಪ್ಪಿಕೊಂಡು ಅಂತಹ ಒಂದು ಸ್ಥಿತಿಗೂ ನಮ್ಮ ಬದುಕಿನಲ್ಲಿ ಸ್ಥಾನ ನೀಡಿದರೆ ಹೇಗೆ? ನಿದ್ರೆಯ ಸಮಸ್ಯೆಯೇ ಇರಲಿ ಬೇರೆ ಯಾವ ಸಮಸ್ಯೆ, ತೊಡಕುಂಟು ಮಾಡುವ ಭಾವವೇ ಇರಲಿ ಅದರ ಬಗೆಗಿನ ನಮ್ಮ ಆಗ್ರಹ ತೊರೆದು ಅದನ್ನು ಒಂದು ಚಿಕ್ಕ ಮಗುವಿನಂತೆ, ಒಂದು ಗಿಡದಂತೆ, ಒಂದು ಮುದ್ದಾದ ಸಾಕುಪ್ರಾಣಿಯಂತೆ ಪ್ರೀತಿಯಿಂದ ಸ್ವೀಕರಿಸಿದರೆ, ಅದರ ಮಾತನ್ನು ಆಲಿಸಿ, ಲಾಲಿಸಿದರೆ, ಅದರ ಬಗೆಗೆ ಕುತೂಹಲ ತಳೆದರೆ, ಅದಕ್ಕೇನು ಬೇಕು ಎಂಬುದನ್ನರಿತರೆ ಹೇಗಿರುತ್ತದೆ?

ಯಾವ ಪರಿಸ್ಥಿತಿಯೂ ನಾವು ಮನಸ್ಸಿನಲ್ಲಿ ಚಿತ್ರಿಸಿಕೊಂಡಷ್ಟು ದುರಂತಮಯವಾಗಿರುವುದಿಲ್ಲ. ಯಾವ ಭಾವನೆಯೂ ಅನರ್ಥಕಾರಿಯಲ್ಲ, ಮಾರಕವಲ್ಲ; ಭಾವನೆಗಳನ್ನು ಅನುಭವಿಸದೇ ಅದುಮಿಡುವುದು ಅನರ್ಥಕಾರಿ. ಎಲ್ಲ ಭಾವನೆಯೂ ಸ್ವೀಕಾರಾರ್ಹವೇ ಹೌದು, ಭಾವನೆಯಿಂದ ಪ್ರಚೋದಿತಗೊಂಡು ಯಾವುದಾದರೂ ಕೆಲಸ ಮಾಡಲು ಹೊರಟಾಗ ಮಾತ್ರ ಆ ಕೆಲಸದ ಸಾಧಕ ಬಾಧಕಗಳನ್ನು ಪರಿಶೀಲಿಸಬೇಕು. ಕೋಪ ಸ್ವೀಕಾರಾರ್ಹವೇ ಹೌದು ಕೋಪದಿಂದ ಪ್ರೇರೇಪಿತರಾಗಿ ಯಾವುದಾದರೂ ಕೆಲಸ ಮಾಡಲು ಹೊರಟಾಗ ಮಾತ್ರ ಜಾಗೃತರಾಗಿರಬೇಕೆಷ್ಟೇ.

ನಾವೆಲ್ಲಾ ನಮ್ಮನ್ನು ನಾವು ಬದಲಾಯಿಸಿಕೊಳ್ಳಲು, ಬೇರೆಯವರನ್ನು ಬದಲಾಯಿಸಲು, ಪರಿಸ್ಥಿತಿಯನ್ನು ಬದಲಾಯಿಸಲು ಪರದಾಡುತ್ತೇವೆ. ಆದರೆ ಈಗ ಪ್ರಸ್ತುತ ಯಾವ ಸ್ಥಿತಿಯಿದೆಯೋ ಅದಕ್ಕೆ ಅವಕಾಶ ಕೊಡದೇ, ಅದನ್ನು ಸ್ವೀಕರಿಸದೇ, ಅನುಭವಿಸದೇ ಬದಲಾವಣೆ ಸಾಧ್ಯವೇ ಇಲ್ಲ ಎನ್ನುವುದನ್ನು ಮರೆಯಲೇಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT