ಶುಕ್ರವಾರ, ಮಾರ್ಚ್ 31, 2023
32 °C

ಕ್ಷೇಮ ಕುಶಲ | ಶರೀರದ ಭಂಗಿ ಸರಿ ಇರಲಿ

ಡಾ. ಕಿರಣ್‌ ವಿ. ಎಸ್‌. Updated:

ಅಕ್ಷರ ಗಾತ್ರ : | |

Prajavani

ಪ್ರಸ್ತುತ ಜೀವನಶೈಲಿ ನಮ್ಮ ದೇಹದ ಭಂಗಿಯನ್ನು ಇನ್ನಷ್ಟು ಗಾಸಿಗೆ ಒಳಪಡಿಸಿದೆ. ದೇಹದ ಸಹಜ ಭಂಗಿ ಏನು? ಅದನ್ನು ಸರಿಯಾಗಿ ಅನುಸರಿಸುವುದು ಹೇಗೆ?

ಪ್ರತಿಯೊಂದು ಪ್ರಾಣಿಗೂ ಅದರ ಸಹಜ ಭಂಗಿಗಳಿವೆ. ವಿಶ್ರಾಂತಿಯ ಮತ್ತು ಚಲನೆಯ ಸ್ಥಿತಿಗಳಲ್ಲಿ ಶರೀರ ನಿರ್ದಿಷ್ಟ ಭಂಗಿಗೆ ಹೊಂದಿಕೊಂಡಿರುತ್ತದೆ. ಭಂಗಿಯ ಸಮಸ್ಯೆ ಮಾನವರಲ್ಲಿ ವಿಶಿಷ್ಟ. ಜೀವವಿಕಾಸದಲ್ಲಿ ಮನುಷ್ಯಪ್ರಾಣಿ ಮೂಲತಃ ಚತುಷ್ಪಾದಿ. ಇದು ಕಾಲಾಂತರದಲ್ಲಿ ದ್ವಿಪಾದಿಯಾಗಿ ಬದಲಾಯಿತು. ಎರಡು ಕಾಲಿನ ಮೇಲೆ ನಿಲ್ಲಬಲ್ಲ, ನಡೆಯಬಲ್ಲ. ಓಡಬಲ್ಲ ಭಂಗಿ ಮಾನವಜೀವಿಯ ಅಸಾಧಾರಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರೂ, ವೈಯಕ್ತಿಕವಾಗಿ ಶರೀರದ ಮೇಲೆ ಹಲವಾರು ಕೆಟ್ಟ ಪರಿಣಾಮಗಳಿಗೂ ಕಾರಣವಾಯಿತು. ನಾಲ್ಕು ಕಾಲುಗಳ ಮೇಲೆ ಹರಡುತ್ತಿದ್ದ ತೂಕ ಎರಡು ಕಾಲುಗಳ ಮೇಲೆ ಅವಲಂಬಿತವಾಯಿತು. ಭೂಮಿಗೆ ಸಮಾನಾಂತವಾಗಿ ಇರಬೇಕಾದ ಬೆನ್ನುಮೂಳೆ ನೆಲಕ್ಕೆ ಲಂಬವಾಗಿ ಇರುವಂತಾಗಿ, ಶರೀರದ ಮೇಲ್ಭಾಗದ ತೂಕ ಬೆನ್ನಿನ ಆಧಾರದ ಮೇಲೆ ಬೀಳುವಂತಾಯಿತು. ಸೊಂಟದ ಕೆಳಭಾಗದ ಮೂಳೆಗಳು, ಕೀಲುಗಳು, ಮತ್ತು ಮಾಂಸಖಂಡಗಳ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಿ, ಹಲವಾರು ಕಾಯಿಲೆಗಳಿಗೆ ದಾರಿಯಾಯಿತು. ಪ್ರಸ್ತುತ ಜೀವನಶೈಲಿ ನಮ್ಮ ದೇಹದ ಭಂಗಿಯನ್ನು ಇನ್ನಷ್ಟು ಗಾಸಿಗೆ ಒಳಪಡಿಸಿದೆ. ದೇಹದ ಸಹಜ ಭಂಗಿ ಏನು? ಅದನ್ನು ಸರಿಯಾಗಿ ಅನುಸರಿಸುವುದು ಹೇಗೆ? ಈ ಪ್ರಕ್ರಿಯೆಯಿಂದ ಶರೀರಕ್ಕೆ ಆಗುವ ಲಾಭಗಳು ಏನೆಂಬುದನ್ನು ಎಲ್ಲರೂ ಅರಿತಿರಬೇಕು.

ದೇಹದ ಭಂಗಿ ವಿಶ್ರಾಮದ ಸ್ಥಿತಿಯಲ್ಲಿ ಮತ್ತು ಚಲನೆಯಲ್ಲಿ ಭಿನ್ನವಾಗಿರುತ್ತದೆ. ವಿಶ್ರಾಂತಿಯ ಸ್ಥಿತಿ ಎಂದರೆ ಬೇರೇನೂ ಮಾಡದೆ ಕುಳಿತಾಗ, ನಿಂತಾಗ, ಮತ್ತು ಮಲಗಿರುವಾಗ ಶರೀರ ಇರುವ ರೀತಿ. ಚಲನೆ ಎಂಬುದು ಓಡುವುದು, ನಡೆಯುವುದು, ಬಗ್ಗುವುದು ಮೊದಲಾದ ಯಾಂತ್ರಿಕ ಕೆಲಸಗಳನ್ನು ಒಳಗೊಂಡಿದೆ. ಇವೆರಡೂ ಸ್ಥಿತಿಗಳಲ್ಲಿ ನಮ್ಮ ಶರೀರ ಸರಿಯಾದ ಭಂಗಿಗಳನ್ನು ಅನುಸರಿಸಬೇಕು. ಈ ಪ್ರಕ್ರಿಯೆಯ ಅತಿ ಮುಖ್ಯ ಅಂಗ ಬೆನ್ನುಮೂಳೆ. ತಲೆಯ ಭಾಗವನ್ನು ಕಾಲುಗಳಿಗೆ ಸಂಪರ್ಕಿಸುವ ಬೆನ್ನುಮೂಳೆಯ ಕತ್ತಿನ ಮತ್ತು ಕೆಳ-ಬೆನ್ನಿನ ಭಾಗಗಳು ಹಿಂಬದಿಗೆ ಹಾಗೂ ಮಧ್ಯ-ಬೆನ್ನಿನ ಭಾಗ ಮುಂಬದಿಗೆ ನಯವಾಗಿ ಬಾಗಿದೆ. ಈ ಬಾಗುಗಳನ್ನು ಸಹಜ ಸ್ಥಿತಿಯಲ್ಲಿ ಇರಿಸಿಕೊಳ್ಳುವುದು ಆಯಾ ಭಂಗಿಯ ಮೂಲ ಉದ್ದೇಶ. ಆದರೆ ಪ್ರಸ್ತುತ ಜೀವನಶೈಲಿಯ ಬಹುತೇಕ ಕೆಲಸಗಳ ವೇಳೆ ಸಹಜ ಭಂಗಿಗಳ ಸ್ವರೂಪ ಬದಲಾಗುತ್ತದೆ. ಉದಾಹರಣೆಗೆ, ಬಹಳಷ್ಟು ಮಂದಿ ದಿನದ ಹಲವಾರು ಗಂಟೆಗಳ ಕಾಲ ಕತ್ತು ಬಗ್ಗಿಸಿ ತಮ್ಮ ಮೊಬೈಲ್ ಫೋನಿನ ಪರದೆಯ ಮೇಲೆ ಗಮನ ಹರಿಸುತ್ತಾರೆ. ಅಂದರೆ, ನೇರವಾಗಿ ಕತ್ತಿನ ಮೇಲೆ ಇರಬೇಕಾದ ತಲೆಯ ಭಾಗ ಹಲವಾರು ಗಂಟೆಗಳ ಕಾಲ ಕೆಳಗೆ ಬಾಗಿದ ಕೋನದಲ್ಲಿ ಇರುತ್ತದೆ. ಇತರ ಚತುಷ್ಪಾದಿ ಪ್ರಾಣಿಗಳಿಗೆ ಹೋಲಿಸಿದರೆ ಮನುಷ್ಯರ ಮೆದುಳಿನ ತೂಕ ಹೆಚ್ಚು. ಹೀಗಾಗಿ, ನಮ್ಮ ತಲೆಯ ತೂಕವೂ ಹೆಚ್ಚು. ಆದರೆ ಭಾರವಾದ ತಲೆಯನ್ನು ಹೊತ್ತಿರುವ ಕತ್ತಿನ ಭಾಗದ ಬೆನ್ನುಮೂಳೆ ವಿಕಾಸದ ಹಾದಿಯಲ್ಲಿ ಇನ್ನೂ ನಾಜೂಕಾಗಿಯೇ ಮುಂದುವರೆದಿದೆ. ದಶಕಗಳ ಕಾಲ ಭಾರವಾದ ತಲೆಯನ್ನು ನೇರವಾಗಿ ಹೊರುವುದೇ ಈ ನಾಜೂಕು ಮೂಳೆಗೆ ಕಷ್ಟದ ಸಂಗತಿ. ಪರದೆಯುಕ್ತ ಮೊಬೈಲ್ ಫೋನುಗಳ ಕಾರಣದಿಂದ ಕಳೆದ ಒಂದು ದಶಕದಲ್ಲಿ ಗಂಟೆಗಟ್ಟಲೆ ಬಗ್ಗಿರುವ ಕತ್ತಿನ ಕಾರಣದಿಂದ ಇದರ ಮೇಲೆ ಅಗಾಧ ಒತ್ತಡ ಬೀಳುತ್ತಿದೆ. ಕತ್ತುನೋವು, ತಲೆಸುತ್ತುವಿಕೆ, ಕೈಗಳ ನೋವು, ಬೆನ್ನಿನ ಮೇಲ್ಭಾಗದ ನೋವು ಮೊದಲಾದ ಸಮಸ್ಯೆಗಳು ಮೊಬೈಲ್ ಫೋನುಗಳ ಬಳಕೆದಾರರಲ್ಲಿ ಹೆಚ್ಚುತ್ತಿವೆ.

ಅಂತೆಯೇ, ಕಂಪ್ಯೂಟರ್ ಮತ್ತು ದೂರದರ್ಶನ ಪರದೆಗಳೂ ಬೆನ್ನಿನ ಮೇಲೆ ಒತ್ತಡಕ್ಕೆ ಕಾರಣವಾಗಿವೆ. ಬಹಳ ಕಾಲ ಕುಳಿತಾಗ ನಮಗೆ ಅರಿವಿಲ್ಲದಂತೆ ಬೆನ್ನು ಬಾಗುತ್ತದೆ. ಭುಜಗಳು ಸಡಿಲವಾಗಿ, ಕೆಳಗೆ ಜೋತು ಬೀಳುತ್ತವೆ. ಆಗ ಬೆನ್ನುಮೂಳೆಯ ಮಧ್ಯಭಾಗ ಮತ್ತಷ್ಟು ಹಿಂದಕ್ಕೆ ಓರೆಯಾಗುತ್ತದೆ. ಕೆಲವೊಮ್ಮೆ ದೇಹದ ತೂಕವನ್ನು ನಾವು ಎಡಗಡೆಗೋ ಇಲ್ಲವೇ ಬಲಗಡೆಗೋ ಹೆಚ್ಚು ವರ್ಗಾಯಿಸುತ್ತೇವೆ. ನೋಡುವ ನೋಟದಲ್ಲಿ ಮತ್ತು ಮಾಡುವ ಕೆಲಸದಲ್ಲಿ ನಮ್ಮ ನಿಗಾ ಇರುವುದರಿಂದ ಶರೀರದ ಆಯಾ ಭಾಗ ನೀಡುವ ನೋವಿನ ಸೂಚನೆಗಳು ನಮ್ಮ ಗಮನಕ್ಕೆ ಬಾರದೆ ಹೋಗುತ್ತವೆ. ಇದರಿಂದ ನೋವು ಒಂದು ನಿರ್ದಿಷ್ಟ ಹಂತವನ್ನು ದಾಟುವವರೆಗೆ ನಾವು ಅದನ್ನು ಲಕ್ಷಿಸುವುದೇ ಇಲ್ಲ. ನೋವು ನಮ್ಮ ಅರಿವಿಗೆ ಬರುವಷ್ಟರಲ್ಲಿ ಮೂಳೆಗಳು ಮತ್ತು ಸ್ನಾಯುಗಳು ಸಾಕಷ್ಟು ಗಾಸಿಗೊಂಡಿರುತ್ತವೆ. ಇದು ಬಹುತೇಕ ಪ್ರತಿದಿನವೂ ನಡೆಯುತ್ತಲೇ ಹೋಗುವ ಪ್ರಕ್ರಿಯೆ. ಸಮಸ್ಯೆ ಹೆಚ್ಚಾದಾಗ ಶರೀರ ಅದನ್ನು ಮತ್ತಷ್ಟು ಸಹಿಸಲು ಸಾಧ್ಯವಿಲ್ಲದೆ ವೈದ್ಯರ ಮೊರೆ ಹೋಗಬೇಕಾಗುತ್ತದೆ. ಹಲವಾರು ಪುಸ್ತಕಗಳನ್ನು ಒಟ್ಟಿರುವ ಭಾರವಾದ ಬೆನ್ನಿನ ಚೀಲ ಹೊತ್ತು ನಡೆಯುವ ಶಾಲಾಮಕ್ಕಳಿಗೂ ಈ ಸಮಸ್ಯೆ ಹೊರತಲ್ಲ.

ನಮ್ಮ ಭಂಗಿಯನ್ನು ಸುಧಾರಿಸಿಕೊಳ್ಳುವ ಮೂಲಕ ಹಲವಾರು ಸಮಸ್ಯೆಗಳನ್ನು ತಡೆಯಬಹುದು. ಕತ್ತು ಮತ್ತು ಬೆನ್ನಿನ ಸ್ನಾಯುಗಳನ್ನು ಬಲಗೊಳಿಸುವ ಸರಳ ವ್ಯಾಯಾಮಗಳನ್ನು ಪ್ರತಿಯೊಬ್ಬರೂ ಮಾಡಬೇಕು. ಹೆಚ್ಚಿನ ಕಾಲ ಮೊಬೈಲ್ ಫೋನ್ ಬಳಸಬೇಕಾದವರು ಮೇಜಿನ ಮೇಲೆ ಮೊಬೈಲ್ ಫೋನನ್ನು ಲಂಬವಾದ ಆಸರೆಯಲ್ಲಿ ಇರಿಸಿ, ಬೆನ್ನನ್ನು ಒರಗಿಸಬಲ್ಲ ಹಿಂಬದಿಯಿರುವ ಅನುಕೂಲಕರ ಎತ್ತರದ ಕುರ್ಚಿಯಲ್ಲಿ ಕೂತು ಕತ್ತನ್ನು ಹೆಚ್ಚು ಬಗ್ಗಿಸದೆ ನೋಡುವುದು ಸೂಕ್ತ. ಮೊಬೈಲ್ ಫೋನಿನಲ್ಲಿ ಅಕ್ಷರಗಳನ್ನು ಟೈಪು ಮಾಡುವ ಬದಲಿಗೆ ಸಾಧ್ಯವಾದಷ್ಟೂ ಧ್ವನಿಯ ಮೂಲಕ ಪದಗಳನ್ನು ಮೂಡಿಸಬಲ್ಲ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬಹುದು.

ಹೆಚ್ಚುಕಾಲ ಕುಳಿತುಕೊಳ್ಳಬೇಕಾದಾಗ ಬೆನ್ನಿಗೆ ದೃಢವಾದ ಮತ್ತು ಹಿತವಾದ ಆಸರೆಯಿರುವ ಕುರ್ಚಿಯನ್ನು ಬಳಸಬೇಕು. ಕುಳಿತಾಗ ತೊಡೆಗಳು ಭೂಮಿಗೆ ಸಮಾನಾಂತರವಾಗಿರಬೇಕು. ಆಗ ಸೊಂಟ ಮತ್ತು ಮಂಡಿಗಳು ಒಂದೇ ಸರಳರೇಖೆಯಲ್ಲಿ ಇರುತ್ತವೆ. ಕಂಪ್ಯೂಟರಿನಲ್ಲಿ ಟೈಪು ಮಾಡುವಾಗ ಕೀಬೋರ್ಡ್ ಮೊಣಕೈ ಮಟ್ಟದಲ್ಲಿ, ಪರದೆ ಕಣ್ಣುಗಳ ಮಟ್ಟದಲ್ಲಿ, ಮತ್ತು ಭುಜಗಳು ಮುಂದಕ್ಕೆ ಬಾಗದೆ ನೇರವಾಗಿ ಇರಬೇಕು. ದೇಹದ ಭಂಗಿಯ ಬಗ್ಗೆ ಪ್ರಜ್ಞಾಪೂರ್ವಕವಾಗಿ ಆಗಾಗ ಆಲೋಚಿಸಿ, ಸರಿಪಡಿಸಿಕೊಳ್ಳಬೇಕು. ಕನಿಷ್ಠ ಅರ್ಧಗಂಟೆಗೆ ಒಮ್ಮೆ ಕುರ್ಚಿಯಿಂದ ಎದ್ದು ಸುಮಾರು ನೂರಿನ್ನೂರು ಹೆಜ್ಜೆ ನಡೆದು ಬರಬೇಕು.

ಸರಿಯಾದ ಭಂಗಿ ಜೀವನದ ಅಗತ್ಯ. ಅದು ಹಲವಾರು ಸಮಸ್ಯೆಗಳನ್ನು ಬಾರದಂತೆ ತಡೆಯಬಲ್ಲದು. ಧಾವಂತದ ಆಧುನಿಕ ಬದುಕಿನಲ್ಲಿ ಸಮಸ್ಯೆ ಗಳನ್ನು ಸರಿಪಡಿಸುವುದಕ್ಕಿಂತ ಅವು ಬಾರದಂತೆ ತಡೆ ಯುವುದರಲ್ಲಿ ನಮ್ಮ ವಿವೇಕವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು