ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೋನಿಂಗ್‌: ಉಸಿರಾಟದ ಸಮಸ್ಯೆಗೆ ಪರಿಹಾರ

Last Updated 24 ಮೇ 2021, 19:30 IST
ಅಕ್ಷರ ಗಾತ್ರ

ಕೋವಿಡ್‌ನಿಂದ ಎದುರಾಗುವ ಸಮಸ್ಯೆಗಳಲ್ಲಿ ಪ್ರಮುಖವಾದದ್ದು ಉಸಿರಾಟದ ಸಮಸ್ಯೆ. ಪ್ರೋನಿಂಗ್ ವಿಧಾನ ಉಸಿರಾಟದ ತೊಂದರೆಯನ್ನು ನಿವಾರಿಸುತ್ತದೆ – ಎಂದು ಭಾರತ ಸರ್ಕಾರದ ಆರೋಗ್ಯ ಸಚಿವಾಲಯವೇ ಖಚಿತಪಡಿಸಿದೆ.

ಪ್ರೋನಿಂಗ್ ಎಂದರೆ ಏನು?

ಪ್ರೋನಿಂಗ್ ಎನ್ನುವುದು ಉದರ ಭಾಗದ ಮೇಲೆ ಮಲಗಿ ವಿಶ್ರಾಂತಿ ಮಾಡುವ ಒಂದು ವಿಧಾನ ಹಾಗೂ ಆಮ್ಲಜನಕವನ್ನು (ಉಸಿರಾಟ) ಸುಧಾರಿಸಲು ವೈದ್ಯರು ಹಾಗೂ ವಿಜ್ಞಾನಿಗಳಿಂದ ಅಂಗೀಕರಿಸಲ್ಪಟ ಒಂದು ಭಂಗಿ. ಇದು ಪ್ರಾಚೀನ ಕಾಲದಿಂದಲೂ ಆಚರಣೆಯಲ್ಲಿರುವ ಚಿಕಿತ್ಸಾ ಪದ್ಧತಿ. ಇದರಿಂದ ಆಮ್ಲಜನಕದ ಮಟ್ಟವನ್ನು ಸುಧಾರಿಸಬಹುದು. ಇದನ್ನು ತೀವ್ರ ಉಸಿರಾಟದ ವೈಫಲ್ಯದ ರೋಗಿಗಳ ಮೇಲೆ ಬಳಸಲಾಗುತ್ತದೆ. ಆಮ್ಲಜನಕದ ಮಟ್ಟವನ್ನು ಸುಧಾರಿಸಲು ಇದು ಸರಳ ಮತ್ತು ಸುರಕ್ಷಿತ ವಿಧಾನ. ಉಸಿರಾಟದ ತೊಂದರೆ ಇರುವ ಕೋವಿಡ್‌-19 ಸೋಂಕಿತ ವ್ಯಕ್ತಿಗಳಲ್ಲಿಯೂ ಇದು ಉಪಯುಕ್ತ.

ಭಾರತ ಮತ್ತು ವಿದೇಶಗಳ ವೈದ್ಯರು ತಮ್ಮ ಕೋವಿಡ್‌-19 ಚಿಕಿತ್ಸೆಯ ಪ್ರೋಟೋಕಾಲ್‌ನ ನಿಯಮಿತ ಭಾಗವಾಗಿ ಪ್ರೋನಿಂಗ್‌ ಅನ್ನು ಸೇರಿಸಿ, ಸೋಂಕಿತ ವ್ಯಕ್ತಿಗಳಿಗೆ ಇದರ ಅಭ್ಯಾಸವನ್ನು ಮಾಡಿಸುತ್ತಿದ್ದಾರೆ. ಈ ಚಿಕಿತ್ಸೆಯಲ್ಲಿ ಬರುವ ವಿವಿಧ ಭಂಗಿಗಳು ಯೋಗಾಸದ ಭಂಗಿಗಳೇ ಆಗಿವೆ (ಮಕರಾಸನ, ಸರಳ ಅನಂತಶಯನಾಸನ, ಬಾಲಾಸನ ಮತ್ತು ದಂಡಾಸನದ ವಿಶ್ರಾಂತಿಸ್ಥಿತಿ). ಇವುಗಳ ಅಭ್ಯಾಸದಿಂದ ದೇಹಕ್ಕೆ ಸಂಪೂರ್ಣ ವಿಶ್ರಾಂತಿಯೊಂದಿಗೆ ಆಮ್ಲಜನಕದ ಪ್ರಮಾಣವೂ ಹೆಚ್ಚಾಗಿ ದೊರೆಯುತ್ತದೆ.

ಪ್ರೋನಿಂಗ್ ಮಾಡುವ ವಿಧಾನ

1. ಮೊದಲನೆಯ ವಿಧಾನ

ಉದರಭಾಗದ ಮೇಲೆ ಮಲಗುವುದು: ಈ ಸ್ಥಿತಿಯಲ್ಲಿ ನೆಲದ ಮೇಲೆ, ಹೊಟ್ಟೆಯ ಮೇಲೆ ಮಲಗಬೇಕು; ಕಾಲುಗಳು ಎರಡೂ ಪರಸ್ಪರ ತಾಗಿರಲಿ ಅಥವಾ ಕಾಲುಗಳ ಮದ್ಯೆ ಅಂತರ ಇರಲಿ ಹಾಗೂ ಕೈಗಳೆರಡು ದೇಹದ ಪಕ್ಕದಲ್ಲಿ ಇರಲಿ. ಸರಳವಾಗಿ ಹಾಗೂ ಸಹಜವಾಗಿ ಉಸಿರಾಡುವುದು. ಈ ಭಂಗಿಯಲ್ಲಿ ಮೂವತ್ತು ನಿಮಿಷದಿಂದ ಎರಡು ಗಂಟೆಗಳವರೆಗೆ ಹೊಟ್ಟೆಯ ಮೇಲೆ ಮಲಗಿ ಉಸಿರಾಟ ಕ್ರಿಯೆ ಮಾಡಬಹುದು.

2. ಎರಡನೆಯ ವಿಧಾನ

ಬಲಭಾಗದ ಕಡೆಗೆ ತಿರುಗಿ ಮಲಗಿ, ಬಲಗೈಯನ್ನು ತಲೆಯ ಕೆಳಭಾಗದಲ್ಲಿ ಇರಿಸಿ ಎಡಗೈ ಹಸ್ತ ಎದೆಯ ಗೂಡಿನ ಪಕ್ಕದಲ್ಲಿ ಅಥವಾ ಎಡಗಾಲಿನ ತೊಡೆಯ ಮೇಲೆ ಇರಿಸಿ, ವಿಶ್ರಾಂತಿ ಮಾಡುತ್ತ ಸರಳ ಹಾಗೂ ಸಹಜವಾಗಿ ಉಸಿರಾಡುವುದು. ಮೂವತ್ತು ನಿಮಿಷದಿಂದ ಎರಡು ಗಂಟೆಗಳವರೆಗೆ ಬಲಭಾಗದ ಮೆಲೆ ಮಲಗಿ ಉಸಿರಾಟಕ್ರಿಯೆಯನ್ನು ನಡೆಸಬಹುದು.

3. ಮೂರನೆಯ ವಿಧಾನ

ಸರಳ ದಂಡಾಸನ (ವಿಶಾಲಕೋನದಲ್ಲಿ) ಕುಳಿತು ಸರಳ ಹಾಗೂ ಸಹಜವಾಗಿ ಉಸಿರಾಡುವುದು. ಹೀಗೆ ಮೂವತ್ತು ನಿಮಿಷದಿಂದ ಎರಡು ಗಂಟೆಗಳವರೆಗೆ ಇದೇ ಭಂಗಿಯಲ್ಲಿ ಕುಳಿತುಕೊಳ್ಳುವುದು.

4. ನಾಲ್ಕನೆಯ ವಿಧಾನ

ಎಡಭಾಗದ ಕಡೆಗೆ ತಿರುಗಿ ಮಲಗಿ, ಎಡಗೈಯನ್ನು ತಲೆಯ ಕೆಳಭಾಗದಲ್ಲಿ ಇರಿಸಿ ಬಲಗೈ ಹಸ್ತವನ್ನು ಎದೆಯ ಗೂಡಿನ ಪಕ್ಕದಲ್ಲಿ ಅಥವಾ ಬಲಗಾಲಿನ ತೊಡೆಯ ಮೇಲೆ ಇರಿಸಿ ವಿಶ್ರಾಂತಿ ಮಾಡುತ್ತ ಸರಳ ಹಾಗೂ ಸಹಜವಾಗಿ ಉಸಿರಾಡುವುದು. ಈ ಭಂಗಿಯಲ್ಲಿ ಮೂವತ್ತು ನಿಮಿಷದಿಂದ ಎರಡು ಗಂಟೆಗಳವರೆಗೆ ಎಡಭಾಗದ ಮೇಲೆ ಮಲಗಿ ಉಸಿರಾಟಕ್ರಿಯೆಯನ್ನು ಮಾಡಬಹುದು.

5. ಐದನೆಯ ವಿಧಾನ

ಈ ಸ್ಥಿತಿಯಲ್ಲಿ ಮೊದಲನೆಯ ಭಂಗಿಗೆ ಮರಳಿ ಮೊದಲಿನಂತೆಯೇ ಅಭ್ಯಾಸ ಮಾಡುವುದು.

ಪ್ರೋನಿಂಗ್ ಮಹತ್ವ

ಬೋರಲಾಗಿ ಮಲಗುವ ವಿಧಾನವನ್ನು ಅನುಸರಿಸುವುದರಿಂದ ಉಸಿರಾಟ ಸುಗಮವಾಗಲು, ಶ್ವಾಸಕೋಶಕ್ಕೆ ಗಾಳಿಯ ಸಂಚಾರ ಸುಲಭವಾಗಿ ದೊರೆಯಲು ನೆರವಾಗುತ್ತದೆ.

ಎದೆ ಮತ್ತು ಹೊಟ್ಟೆ ಬೋರಲು ಮಾಡಿ ಅಥವಾ ಬದಿಗಳಲ್ಲಿ ಮಲಗುವುದರಿಂದ ದೇಹವು ಶ್ವಾಸಕೋಶ ಎಲ್ಲಾ ಪ್ರದೇಶಗಳಿಗೆ ಹೆಚ್ಚಿನ ಗಾಳಿಯನ್ನು ಪಡೆಯಲು ಸಹಾಯಕವಾಗುತ್ತದೆ.

ತೀವ್ರವಾದ ಉಸಿರಾಟದ ಕಾಯಿಲೆ ಸಿಂಡ್ರೋಮ್ (ಎಆರ್‌ಡಿಎಸ್) ಇರುವವರಿಗೆ ಇದು ಪ್ರಯೋಜನಕಾರಿ.

ಪ್ರೋನಿಂಗ್ ಆಮ್ಲಜನಕೀಕರಣವನ್ನು ಸುಧಾರಿಸುತ್ತದೆ; ಶ್ವಾಸಕೋಶದ ಪ್ರಮಾಣವನ್ನು ಹೆಚ್ಚಿಸುತ್ತದೆ.

ಸೋಂಕಿತರು ಉಸಿರಾಡಲು ಕಷ್ಟಪಡುತ್ತಿದ್ದರೆ ಮತ್ತು ಅವರ ದೇಹದ ಆಮ್ಲಜನಕದ ಪ್ರಮಾಣ ಶೇ. 94ಕ್ಕಿಂತ ಕಡಿಮೆ ಇದ್ದರೆ ಈ ವಿಧಾನ ಅನುಸರಿಸಬೇಕು.

ಇದನ್ನು ಉತ್ತಮ ಗಾಳಿ ಇರುವ ವಾತಾವರಣದಲ್ಲಿ ಅಭ್ಯಾಸ ಮಾಡುವುದರಿಂದ ಆಮ್ಲಜನಕದ ಪ್ರಮಾಣ ಹೆಚ್ಚುತ್ತದೆ.

ಪ್ರೋನಿಂಗ್‌ ಅನ್ನು ದಿಂಬಿನ ಸಹಾಯದಿಂದ ಕೂಡ ಮಾಡಬಹುದು. ಒಂದು ದಿಂಬನ್ನು ಕತ್ತಿನ ಕೆಳಭಾಗದಲ್ಲಿ ಇರಿಸಬೇಕು. ಒಂದು ಅಥವಾ ಎರಡು ದಿಂಬುಗಳನ್ನು ಎದೆಯಿಂದ ಕೆಳಭಾಗದಲ್ಲಿ, ತೊಡೆಯಿಂದ ಮೇಲ್ಭಾಗದಲ್ಲಿ ಇರಿಸುವುದು.

ಸ್ವಯಂ ಪ್ರೋನಿಂಗ್
ನಾಲ್ಕರಿಂದ ಐದು ದಿಂಬುಗಳನ್ನು ಬಳಸಿಕೊಳ್ಳಿ. ಮಲಗುವ ವಿಧಾನವನ್ನು ಆಗಾಗ ಬದಲಾಯಿಸುತ್ತಾ ಇರಿ. ಪ್ರತಿಯೊಂದು ಭಂಗಿಯಲ್ಲಿ ಸುಮಾರು ಮೂವತ್ತು ನಿಮಿಷ ಮಲಗಿ.

ಮುನ್ನೆಚ್ಚರಿಕೆಗಳು

ಊಟವಾದ ಒಂದು ಗಂಟೆಯವರೆಗೆ ಪ್ರೋನಿಂಗ್‌ ಮಾಡಬೇಡಿ. ಸಹಜವಾಗಿ ನಿಮಗೆ ಎಷ್ಟು ಹೊತ್ತು ಹಾಗೆ ಮಲಗಲು ಸಾಧ್ಯವಿದೆಯೋ ಅಷ್ಟೇ ಹೊತ್ತು ಮಾಡಿ; ಬಲವಂತವಾಗಿ ಹೆಚ್ಚು ಹೊತ್ತು ಮಾಡಬಾರದು. ಗಾಯಗಳು, ಹುಣ್ಣುಗಳು ಮತ್ತು ಎಲುಬಿನ ಮೇಲೆ ಗಮನವಿರಲಿ.

ಯಾರೆಲ್ಲ ಮಾಡಬಾರದು?

ಗರ್ಭಿಣಿಯರು, ರಕ್ತಹೆಪ್ಪುಗಟ್ಟುವಿಕೆಯಂಥ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆದವರು, ಹೃದಯದ ಸಮಸ್ಯೆ ಇರುವವರು, ಬೆನ್ನುಮೂಳೆಯ ಸಮಸ್ಯೆ ಇರುವವರು, ಮೂಳೆಮುರಿತ, ಬಿರುಕು ಸಮಸ್ಯೆಗೆ ಒಳಗಾಗಿರುವವರು ಇದನ್ನು ಮಾಡಬಾರದು.

ತಜ್ಞರ ಸಲಹೆಯನ್ನು ಪಡೆಯುವುದು ಒಳಿತು.

ನಿರೂಪಣೆ: ಅವಿನಾಶ ಎಸ್. ಬೋರಂಚಿ
(ಲೇಖಕ ಯೋಗಶಿಕ್ಷಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT